ಭಾರತೀಯ ಮಹಿಳಾ ಕುಸ್ತಿ ರಂಗಕ್ಕೆ ಇತ್ತೀಚಿನ ಕೆಲವು ವರ್ಷಗಳು ಬಹಳ ಆಶಾದಾಯಕವಾಗಿದ್ದವು. ಸಾಕ್ಷಿ ಮಲಿಕ್‌, ವಿನೇಶ್‌ ಪೆಗಟ್‌, ದಿವ್ಯಾ ಕಾಕರಾನ್‌, ಪೂಜಾ ಢಾಂಡಾ ಮುಂತಾದವರು ಈ ಕ್ರೀಡೆಯನ್ನು ಹೊಸದೊಂದು ಎತ್ತರಕ್ಕೆ ಕೊಂಡೊಯ್ದರು. ಪೂಜಾ ಬಗ್ಗೆ ಹೇಳಬೇಕೆಂದರೆ, ಇತ್ತೀಚೆಗಷ್ಟೇ ಸ್ಪೇನ್‌ನ ರಾಜಧಾನಿ ಮ್ಯಾಂಡ್ರಿಡ್‌ನಲ್ಲಿ ನಡೆದ ಗ್ರ್ಯಾಂಡ್‌ ಪ್ರಿ ಇಂಟರ್‌ ನ್ಯಾಷನಲ್ ಕುಸ್ತಿ ಟೂರ್ನಮೆಂಟ್‌ನಲ್ಲಿ 57 ಕಿಲೋ ವರ್ಗದಲ್ಲಿ ಬೆಳ್ಳಿಪದಕ ಗೆದ್ದು ದೇಶದ ಹೆಸರು ರಾರಾಜಿಸುವಂತೆ ಮಾಡಿದರು.

ಅದಕ್ಕೂ ಮುಂಚೆ 2018ರ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಬುಡಾಪೆಸ್ಟ್ ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು. ಈ ಪದಕ ಪಡೆದ 4ನೇ ಆಟಗಾರ್ತಿ ಎನಿಸಿಕೊಂಡರು. ಅದಕ್ಕೂ ಮುಂಚೆ ಅಲಕಾ ತೋಮರ್‌, ಗೀತಾ ಪೋಗಟ್‌ ಹಾಗೂ ಬಬಿತಾ ಪೋಗಟ್‌ ಈ ಸಾಧನೆಗೈದಿದ್ದರು.

ಇದೇ ಕಾರಣದಿಂದ ಪೂಜಾ ಮ್ಯಾಟ್‌ ಮೇಲೆ ಸೆಣಸಾಟಕ್ಕೆ ಇಳಿದುಬಿಟ್ಟರೆ ಪ್ರೇಕ್ಷಕರ ಕುತೂಹಲ ದುಪ್ಪಟ್ಟಾಗುತ್ತದೆ. ಅವರು ಈ ಹಂತಕ್ಕೆ ತಲುಪಲು ಪೈಲ್ವಾನ್‌ ಹುಡುಗರ ಜೊತೆ ಪ್ರ್ಯಾಕ್ಟೀಸ್‌ ಮಾಡಲು ಕೂಡ ಹಿಂದೇಟು ಹಾಕಲಿಲ್ಲ. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ನನಗೆ ಹುಡುಗರ ಜೊತೆ ಪ್ರ್ಯಾಕ್ಟೀಸ್‌ ಮಾಡಲು ಬಹಳ ಇಷ್ಟವಾಗುತ್ತದೆ. ಏಕೆಂದರೆ ಅವರಲ್ಲಿ ಶಕ್ತಿ ಚಾತುರ್ಯ ಹಾಗೂ ವೇಗ ಇರುತ್ತದೆ. ಅದು ನನ್ನ ಆಟವನ್ನು ಸುಧಾರಿಸಲು ನೆರವಾಗುತ್ತದೆ.”

ತಂದೆಯಿಂದ ಪ್ರೇರಣೆ

ಜನವರಿ 1, 1994ರಂದು ಹರಿಯಾಣಾದ ಹಿಸ್ಸಾರ್‌ ಜಿಲ್ಲೆಯಲ್ಲಿ ಹುಟ್ಟಿದ ಪೂಜಾ ತಮ್ಮ ಅಥ್ಲೀಟ್‌ ತಂದೆ ಅಜ್ಮೇರ್‌ ಸಿಂಗ್‌ರವರ ಆಟದ ಚಾತುರ್ಯ ನೋಡಿ ಕ್ರೀಡೆಗೆ ದಾಪುಗಾಲು ಇಟ್ಟರು. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ಅಪ್ಪ ಪ್ರ್ಯಾಕ್ಟೀಸ್‌ಗೆಂದು ದಿನ ಮುಂಜಾನೆ ಓಡಲು ಹೋಗುತ್ತಿದ್ದರು. ಆಗ ನಾನು ತುಂಬ ಚಿಕ್ಕವಳು. ನಾನೂ ಅವರೊಂದಿಗೆ ಓಡುತ್ತಿದ್ದೆ. ಹೀಗಾಗಿ ಅನೇಕ ಕ್ರೀಡೆಗಳನ್ನು ಕಲಿತೆ. ದೊಡ್ಡವಳಾದ ಬಳಿಕ ನಾನು ಕುಸ್ತಿಯನ್ನು ಆಯ್ಕೆ ಮಾಡಿಕೊಂಡೆ. ಆದರೆ ನಮ್ಮ ಹಳ್ಳಿಯವರು ಹುಡುಗಿಯಾಗಿ ಈ ಆಟ ಆಡೋದು ಸರಿಯಲ್ಲ. ಒಂದು ವೇಳೆ ಇವಳಿಗೆ ಗಾಯಗಳಾದರೆ ಇವಳನ್ನು ಯಾರು ಮದುವೆಯಾಗುತ್ತಾರೆ ಎಂದು ನನ್ನ ತಂದೆಯ ಮುಂದೆಯೇ ಕೇಳುತ್ತಿದ್ದರಂತೆ!

“ಆದರೆ ಪರಿಸ್ಥಿತಿ ಈಗಲೂ ಬದಲಾಗಿಲ್ಲ. ಹುಡುಗಿಯರು ನಿರ್ಧಾರ ಕೈಗೊಳ್ಳಲು ಅವರಿಗೆ ಪರಿಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಯಾವುದಾದರೂ ಹುಡುಗಿ ಹೊಸದಾಗಿ ಏನನ್ನಾದರೂ ಮಾಡಲು ಯೋಚಿಸಿದರೆ ಅವಳಿಗೆ ಜನರ ಸಹಕಾರ ದೊರಕಬೇಕು. ಆದರೆ ಅದು ಸಿಗ್ತಾ ಇಲ್ಲ. ಕ್ರೀಡಾಪಟುಗಳು ತಮ್ಮ ಪ್ರದರ್ಶನದ ಮುಖಾಂತರ ಜನರ ನಕಾರಾತ್ಮಕ ಯೋಚನೆಯನ್ನು ಸಕಾರತ್ಮಕ ಯೋಚನೆಯಾಗಿ ಬದಲಿಸಬೇಕು.

“ನಾನು ಮತ್ತೊಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಯಾರಾದರೂ ಆಟಗಾರ ದೇಶದ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದರೆ, ಅದೇ ಜನರು `ನಮಗೆ ಮೊದಲೇ ಗೊತ್ತಿತ್ತು. ಈ ಹುಡುಗಿ ಬಹಳ ಪರಿಶ್ರಮ ಪಟ್ಟಿದ್ದಾಳೆ,’ ಎಂದು ಹೇಳಲು ಹಿಂದೇಟು ಹಾಕುವುದಿಲ್ಲ!

“ನನ್ನ ಕುಟುಂಬದವರು ನನಗೆ ಸಂಪೂರ್ಣ ಸಹಕಾರ ನೀಡಿದರು. ಹಾಗೆಂದೇ ನಾನು ಈ ಹಂತಕ್ಕೆ ತಲುಪುವುದು ಸಾಧ್ಯವಾಯಿತು. ಜಗತ್ತಿನ ವಿರೋಧ ಲೆಕ್ಕಿಸದೆ ನಮ್ಮ ಹುಡುಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾಳೆಂದರೆ, ನಾವು ಅವಳಿಗೆ ಸಂಪೂರ್ಣ ಬೆಂಬಲ ನೀಡ್ತೀವಿ ಎಂದು ಹೇಳಿದರು.

“ಅವರು ನನ್ನ ಡಯೆಟ್‌ ಅಥವಾ ಬೇರಾವುದೇ ಅಗತ್ಯಗಳನ್ನು ಪೂರೈಸಲು ನೆರವಾದರು. ಅಷ್ಟೇ ಅಲ್ಲ, ನಾನು ಆಟ ಆಡಲು ಎಲ್ಲಿಯೇ ಹೋಗಬೇಕೆಂದರೂ ಅದಕ್ಕೆ ನಿರಾಕರಿಸಲಿಲ್ಲ. ನನ್ನ ಅಮ್ಮ ಕಮಲೇಶ್‌ ಹೆಚ್ಚು ಓದಿದವರಲ್ಲ, ಆದರೂ ಅವರು ಮುಕ್ತ ವಿಚಾರದ ಮಹಿಳೆ. ಅವರ ಪ್ರೇರಣೆಯಿಂದಲೇ ನಾನು ಕುಸ್ತಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು. ಅದು ನನ್ನ ಈವರೆಗಿನ ಅತ್ಯುಚ್ಚ ಸಾಧನೆ.

ಪುರುಷ ಕೋಚ್‌ ಜೊತೆ ಹೊಂದಾಣಿಕೆ

ಮಹಿಳಾ ಕುಸ್ತಿಯಲ್ಲಿ ಬಹಳಷ್ಟು ಸಲ ಕೇಳಿ ಬರುವ ಸಂಗತಿಯೆಂದರೆ, ಮಹಿಳಾ ಕುಸ್ತಿಪಟುಗಳಿಗೆ ಪುರುಷ ತರಬೇತುದಾರರು ಇರುತ್ತಾರೆ. ಈ ಪ್ರಶ್ನೆಗೆ ಪೂಜಾ ಹೀಗೆ ವಿವರಿಸುತ್ತಾರೆ, “ನಮಗೆ ಯಾರಾದರೂ ಪುರುಷ ಕೋಚ್‌ಗಳು ಸಿಕ್ಕರೆ, ಅವರು ಭಾರಿ ಟ್ಯಾಲೆಂಟೆಡ್‌ ಆಗಿದ್ದರೆ ಅವರ ಮೇಲೆ ಭರವಸೆ ಇಡಬಹುದಾಗಿದೆ. ನಮ್ಮ ಭಾರತ ತಂಡದ ಎಷ್ಟು ಪುರುಷ ಕೋಚ್‌ಗಳಿದ್ದಾರೋ ಅವರೆಲ್ಲರೂ ಬಹಳ ಟ್ಯಾಲೆಂಟೆಡ್‌ ಆಗಿದ್ದಾರೆ. ನಮ್ಮ ಪರ್ಫಾರ್ಮೆನ್ಸ್ ಹೆಚ್ಚಲು ಅವರು ಸಹಾಯಕವಾಗಿದ್ದಾರೆ. ಅಂದಹಾಗೆ ಕೆಲವೊಮ್ಮೆ ಕೆಲವು ಕೋಚ್‌ಗಳು ತಮ್ಮ ಆಟಗಾರರ ಜೊತೆ ಅಸಭ್ಯತನದಿಂದ ವರ್ತಿಸಿದರು ಎಂಬ ಸುದ್ದಿಗಳು ಬರುತ್ತವೆ. ಆಗ ತೊಂದರೆ ಆಗಬಹುದು.

“ಅಂದಹಾಗೆ, ಪ್ರತಿಯೊಬ್ಬ ಮಹಿಳಾ ಕ್ರೀಡಾಪಟುವಿನ ಪುರುಷ ಕೋಚ್‌ನ ಪಾತ್ರ ಹೇಗಿದೆ ಎಂಬುದು ಗೊತ್ತಿರಬೇಕು. ಕುಟುಂಬದವರು ಕೂಡ ಕೋಚ್‌ ಹಾಗೂ ತಮ್ಮ ಹುಡುಗಿಯ ಕ್ರೀಡಾ ರಿಲೇಶನ್‌ಶಿಪ್‌ ಬಗ್ಗೆ ದೃಷ್ಟಿ ಇಡಬೇಕು. ಏಕೆಂದರೆ ಫೋಕಸ್‌ ಕೇವಲ ಆಟದ ಮೇಲಷ್ಟೇ ಇರಬೇಕು.”

ಧೈರ್ಯ ಕಳೆದುಕೊಳ್ಳಬೇಡಿ

ಪೂಜಾ ಹೊಸ ಪೀಳಿಗೆಯವರಿಗೆ ಸಂದೇಶ ನೀಡುತ್ತಾ ಹೇಳುತ್ತಾರೆ, “ಯಾರಾದರೂ ಹುಡುಗಿ ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಯತ್ನಿಸಿದರೆ ಅವರೆಂದೂ ಧೈರ್ಯ ಕಳೆದುಕೊಳ್ಳಬಾರದು. ಜನರ ನಕಾರಾತ್ಮಕ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಬಾರದು. ನಿಮ್ಮ ಕುಟುಂಬದಲ್ಲಿ ಯಾರಾದರೂ ನಿಮಗೆ ವಿರೋಧಿಸುತ್ತಿದ್ದರೆ, ಅವರಿಗೆ ಕ್ರೀಡೆಯ ಮಹತ್ವ ತಿಳಿಸಿ ಹೇಳಿ. ಕ್ರೀಡೆಯಿಂದ ನೀವು ಹೆಸರನ್ನಷ್ಟೇ ಗಳಿಸುವುದಿಲ್ಲ, ದೈಹಿಕವಾಗಿಯೂ ಫಿಟ್‌ ಆಗುವಿರಿ. ಮಹಿಳೆಯರನ್ನು ಫಿಟ್‌ ಆಗಿಡಲು ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಅದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.”

– ಸುನೀತಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ