ನಮ್ಮ ದೇಶ ಬಿಟ್ಟು ಅಮೆರಿಕಾದಂಥ ವಿದೇಶಕ್ಕೆ ಕೆಲಸದ ಸಲುವಾಗಿ ಅಥವಾ ಯಾವುದೇ ಕಾರಣಕ್ಕೆ ಹೋಗಲು ಅವಕಾಶ ಸಿಕ್ಕಿಬಿಟ್ಟರೆ, ನಮ್ಮ ದೇಶದವರಿಗಂತೂ ಸ್ವರ್ಗಕ್ಕೆ ಮೂರೇ ಗೇಣು! ಆದರೆ ಅಲ್ಲಿಗೆ ಹೋಗಿ ಆ ಬದುಕನ್ನು ವಾಸ್ತವವಾಗಿ ಎದುರಿಸಿದಾಗ ತಾನೇ `ನಮ್ಮೂರೇ ಅಂದ ನಮ್ಮೂರೇ ಚೆಂದ’ ಎಂದು ತಿಳಿಯುವುದು? ಬನ್ನಿ, ವಿವರವಾಗಿ ಈ ಕುರಿತು ತಿಳಿದುಕೊಳ್ಳೋಣ.
ಮುಂಜಾನೆ ಆರು ಘಂಟೆಗೆಲ್ಲಾ ಶಿಲ್ಪಾಳ ದಿನಚರಿ ಆರಂಭವಾಗಿಬಿಡುತ್ತದೆ. ಮುಖ ತೊಳೆದುಕೊಂಡು ಅಡುಗೆಮನೆಗೆ ಹೋದರೆ ಮಧ್ಯಾಹ್ನಕ್ಕೆ ಡಬ್ಬಿಗಾಗಿ ಒಂದು ತಿಂಡಿ ಅಥವಾ ಯಾವುದಾದರೂ ಅನ್ನವನ್ನು ಕಲಸುತ್ತಾಳೆ. ನಂತರ ಗಂಡನಿಗೆ ತಿನ್ನಲು ಬ್ರೆಡ್ ಟೋಸ್ಟ್ ಅಥವಾ ಸೆರೆಲ್ಸ್ ಅಂತೂ ಏನೋ ಒಂದು ಸಿದ್ಧವಾಗುತ್ತದೆ. ತನಗೂ ಸಹ ರಾಗಿ ಗಂಜಿ ಮಾಡಿಕೊಂಡು ರೆಡಿಯಾಗುತ್ತಾಳೆ. ಇವೆಲ್ಲಾ ಮಾಡಿಕೊಂಡು ಸ್ನಾನ ಮಾಡಿ ತಾನೂ ಆಫೀಸಿಗೆ ಹೊರಡುತ್ತಾಳೆ. ಹೊರಡುವ ಮುನ್ನ ಸ್ವಲ್ಪ ಸಮಯವಿದ್ದರೆ ಪಾತ್ರೆಗಳನ್ನೂ ತೊಳೆದುಬಿಡುತ್ತಾಳೆ ಅಥವಾ ಎಲ್ಲವನ್ನೂ ಪೇರಿಸಿ ಸಂಜೆ ಡಿಶ್ ವಾಷರ್ಗೆ ಹಾಕುತ್ತಾಳೆ. ಆಫೀಸಿನಿಂದ ಬಂದ ನಂತರ ವಾಕ್ ಹೋಗುತ್ತಾಳೆ. ಮತ್ತೆ ರಾತ್ರಿ ಚಪಾತಿ ಮತ್ತು ನೆಂಚಿಕೊಳ್ಳಲು ಅದಕ್ಕೊಂಡು ಸೈಡ್ ಡಿಶ್, ಇವುಗಳ ಮಧ್ಯೆ ಹಾಲು ಮುಗಿದು ಹೋಗಿದ್ದರೆ ಅಥವಾ ಏನಾದರೂ ತರಕಾರಿ ಬೇಕೆಂದರೆ ಆಫೀಸಿನಿಂದ ಬಂದ ನಂತರ ಅಂಗಡಿಗೆ ಹೋಗುವಾಟ, ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರ ದಿನಚರಿಯ ನೋಟ.
ರಮ್ಯಾ ಬೆಳಗ್ಗೆ ಆರು ಗಂಟೆಗೇ ಏಳುತ್ತಾಳೆ. ಅಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ರಿಂಗಣಿಸುತ್ತದೆ. ಕೆಲಸದವಳು ಒಳಗೆ ಬರುತ್ತಾಳೆ. ಅವಳು ಮೊದಲು ಬೆಳಗಿನ ತಿಂಡಿಗೆ ತರಕಾರಿ ಕತ್ತರಿಸಿಕೊಡುತ್ತಾಳೆ. ನಂತರ ಮಧ್ಯಾಹ್ನದ ಅಡುಗೆಗೆ ತಯಾರಿ. ಎಲ್ಲ ಕೆಲಸ ಆವಳದೇ, ಒಲೆಯ ಮೇಲಿನ ಕೆಲಸ ಮಾತ್ರಾ ರಮ್ಯಾಳದು. ನಂತರದ ಪಾತ್ರೆಗಳನ್ನೆಲ್ಲಾ ಅವಳು ಹೊರಗೆ ಕೊಂಡೊಯ್ದು ತೊಳೆದಿಡುತ್ತಾಳೆ. ಹಿಂದಿನ ದಿನ ತೊಳೆದ ಪಾತ್ರೆಗಳನ್ನು ಜೋಡಿಸಿಡುತ್ತಾಳೆ. ಬಟ್ಟೆಗಳನ್ನು ಮಿಷನ್ಗೆ ಹಾಕುತ್ತಾಳೆ. ಹಿಂದಿನ ದಿನ ಒಣಗಿ ಹಾಕಿದ ಬಟ್ಟೆಗಳನ್ನು ಮಡಚಿಡುತ್ತಾಳೆ. ಮನೆ ಗುಡಿಸಿ, ಸಾರಿಸಿ, ಧೂಳು ಒರೆಸಿ, ಸಮಸ್ತವನ್ನೂ ಮಾಡಿ ಆರಕ್ಕೆ ಬಂದ ಕೆಲಸದವಳು ಹತ್ತು ಗಂಟೆಗೆ ಮನೆಯಿಂದ ಹೊರಗೆ ಹೊರಡುತ್ತಾಳೆ. ನಮ್ಮ ಭಾರತದಲ್ಲಿ ಮನೆಯ ಕೆಲಸ ಅಷ್ಟು ಸುಲಭ.
ನಾವು ಅಮೆರಿಕಾಗೆ ಹೋದಾಗ ನನ್ನ ಮಗನ ಗೆಳೆಯನ ಮಗುವಿನ ನಾಮಕರಣಕ್ಕೆ ಹೋಗಿದ್ದೆವು. ಸುಮಾರು ಮೂವತ್ತೈದು ಜನರನ್ನು ಕರೆದಿದ್ದರು. ಸ್ವೀಟ್ ಮತ್ತು ಐಸ್ಕ್ರೀಂನ್ನು ಹೊರಗಿನಿಂದ ತರಿಸಿದ್ದರು. ಮಿಕ್ಕಿದ್ದನ್ನೆಲ್ಲಾ ಅವರ ಸೊಸೆ, ಅತ್ತೆ ಮತ್ತು ಹೆಣ್ಣುಮಗಳು ಸೇರಿ ಮಾಡಿದ್ದರು. ಪಲ್ಯ, ಕೋಸಂಬರಿ, ಕಡಲೆಕಾಳು ಗುಗ್ಗರಿ, ಶ್ಯಾವಿಗೆ, ಕೇಸರಿಭಾತ್ ಎಲ್ಲವನ್ನೂ ಮಾಡಿ ಮಾಡಿ ಪೂರಿಗಳನ್ನು ಎಣ್ಣೆಗೆ ಹಾಕಲು ಆರಂಭಿಸಿದರು.
ಆ ಹುಡುಗಿಯ ಗೆಳತಿಯರೆಲ್ಲಾ ಸೇರಿಕೊಂಡು ನೂರಾರು ಪೂರಿಗಳನ್ನು ತಯಾರಿಸಿಯೇಬಿಟ್ಟರು! ನಾನು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಂಡೆ! ನಮ್ಮಲ್ಲಾದರೆ ಎಲ್ಲವನ್ನೂ ಕೇಟರಿಂಗ್ ಹೇಳಿದ್ದರೂ ಬಂದವರನ್ನು ವಿಚಾರಿಸಿಕೊಳ್ಳುವುದಕ್ಕೇ ಸುಸ್ತು. ಇವರೆಲ್ಲಾ ಹೇಗಪ್ಪಾ ಇಷ್ಟೊಂದು ಕೆಲಸ ಮಾಡುತ್ತಾರೆ ಎಂದೆನಿಸಿತು. ಅಲ್ಲದೆ, ಎಲ್ಲಾ ಮುಗಿದ ನಂತರ ಪಾತ್ರೆಗಳನ್ನು ತೊಳೆಯುವಾಟ. ಅಷ್ಟು ಜನ, ಅವರ ಮಕ್ಕಳು ಮನೆಗೆ ಬಂದು ಹೋದ ಮೇಲೆ ಮನೆಯನ್ನು ಕ್ಲೀನ್ ಮಾಡುವುದು ಬೇಡವೇ? ನಿಜಕ್ಕೂ ಎಷ್ಟು ಕಷ್ಟಪಡುತ್ತಾರೆ ಎನಿಸಿತು.
ಅಲ್ಲಿದ್ದಾಗ ದಿನಂಪ್ರತಿ ಮಗ ಸೊಸೆ ಆಫೀಸಿಗೆ ಹೋದ ನಂತರ ಸ್ವಲ್ಪ ಬಿಸಿಲು ಹತ್ತಿದ ಮೇಲೆ ಹತ್ತಿರದಲ್ಲಿರುವ ಪಾರ್ಕಿಗೆ ನಮ್ಮ ಸವಾರಿ. ಹಿಂದಿನ ದಿನ ಲಾಫ್ಟರ್ ಕ್ಲಬ್ನಲ್ಲಿ ಸಿಕ್ಕ ಮಹಿಳೆ ಅಲ್ಲೇ ಕುಳಿತಿದ್ದರು. ಅವರನ್ನು ಮಾತನಾಡಿಸುತ್ತಾ ಕುಳಿತಾಗ ಅಲ್ಲಿಗೆ ಸುಮಾರು ಇಪ್ಪತ್ತೈದು ವರ್ಷದ ಒಬ್ಬ ಹೆಣ್ಣು ಮಗಳು ಒಂದು ಮಗುವನ್ನು ಕರೆದುಕೊಂಡು ಅಲ್ಲಿಗೆ ಬಂದಳು. ಆಗ ನನ್ನ ಜೊತೆಯಲ್ಲಿದ್ದ ಮಹಿಳೆ ಹೇಳಿದ್ದು, “ಆ ಹುಡುಗಿ ಆಂಧ್ರದವಳು. ಎಂ.ಎಸ್. ಮಾಡಲು ಭಾರತದಿಂದ ಬಂದಿದ್ದಾಳೆ. ಅವಳ ಓದು ಮುಗಿಯಿತು. ಅವಳಿಗೆ ಯಾವ ಕೆಲಸ ದೊರಕಿಲ್ಲ. ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳುವ ನ್ಯಾನಿ (ಆಯಾ) ಕೆಲಸ ಮಾಡುತ್ತಿದ್ದಾಳೆ. ಗಂಟೆಗೆ 10 ಡಾಲರ್. ತಿಂಗಳಿಗೆ ಕನಿಷ್ಠ ಒಂದೂರೆ ಸಾವಿರ ಡಾಲರ್ ದುಡಿಯುತ್ತಾಳೆ.”
ಪಾಪ, ಎಂ.ಎಸ್ ಓದಿ ಅವಳು ಮಾಡುತ್ತಿರುವ ಕೆಲಸದ ಬಗ್ಗೆ ಯೋಚಿಸಿದಾಗ ಬೇಸರವಾಯಿತು. ಮನೆಗೆ ಬಂದು ಮಗನಿಗೆ ಹೇಳಿದರೆ ಸಾಮಾನ್ಯವಾಗಿ ಓದುವಾಗ ಎಲ್ಲರೂ ಕ್ಯಾಂಪಸ್ನಲ್ಲಿ ದುಡಿಯುತ್ತಾರೆ. ಲೈಬ್ರೆರಿ, ಬುಕ್ಸ್ಟೋರ್ಗಳಲ್ಲಿ ಕೆಲಸ ಮಾಡುತ್ತಾರೆ. ಕೋರ್ಸ್ ಮುಗಿದ ಮೇಲೆ ಉದ್ಯೋಗ ಸಿಕ್ಕದಿದ್ದರೆ ಯಾವುದಾದರೂ ಕೆಲಸ ಮಾಡಲೇಬೇಕಲ್ಲವೇ ಎಂದ. ಆದರೂ ಆ ಹುಡುಗಿಯನ್ನು ನೋಡಿದಾಗ ನನ್ನಲ್ಲಿ ಒಂದು ರೀತಿಯ ವಿಷಾದ ಭಾವವಂತೂ ಉಳಿಯಿತು.
ಮತ್ತೆ ಸೂರ್ಯನ ಆಗಮನದೊಂದಿಗೆ ಪಾರ್ಕಿಗೆ ನಮ್ಮ ಓಟ. ನಾವು ಹೊರಗೆ ಹೋಗುತ್ತಿರುವಂತೆಯೇ ನಮ್ಮ ಪಕ್ಕದ ಮನೆಯವರು ಮಗುವನ್ನು ಕರೆದುಕೊಂಡು ಹೊರಟಿದ್ದರು. ಹಿಂದಿನ ದಿನ ಪಾರ್ಕ್ನಲ್ಲಿ ಅವರ ಪರಿಚಯವಾಗಿತ್ತು. ಮುಗುಳ್ನಗೆ ವಿನಿಮಯವಾಯಿತು. ಅವರು ತಮ್ಮ ಮೊಮ್ಮಗುವನ್ನು ಕ್ರಶ್ಗೆ ಬಿಡಲು ಹೊರಟಿದ್ದರು. ನಾವು ಅವರ ಜೊತೆ ಹೊರೆಟೆವು. ಅಲ್ಲಿ ಒಬ್ಬ ಸಿಂಧಿಯವಳು ತನ್ನ ಮನೆಯಲ್ಲೇ ಕ್ರಶ್ ನಡೆಸುತ್ತಾಳೆ. ಸುಮಾರು 8 ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಒಂದು ಮಗುವಿಗೆ ತಿಂಗಳಿಗೆ 900 ಡಾಲರ್ಗಳು. ಅಂದರೆ ಸುಮಾರು 60 ಸಾವಿರ ರೂಪಾಯಿಗಳು!
8 ಮಕ್ಕಳೆಂದಾಗ 5 ಲಕ್ಷಗಳ ಹತ್ತಿರ ಹತ್ತಿರ! ಅದು ಅವಳ ಸ್ವಂತ ಮನೆ. ಬಾಡಿಗೆ ಕೊಡಬೇಕಾಗಿಲ್ಲ. ಪರವಾಗಿಲ್ಲ ಒಳ್ಳೆಯ ಸಂಪಾದನೆ ಭೇಷ್ ಎನಿಸಿತು. ಮನೆಗೆ ಬಂದು ಸೊಸೆಗೆ ಹೇಳಿದರೆ, ಇಲ್ಲಿ ಎಲ್ಲರ ಮನೆಯಲ್ಲಿ ಒಂದು ಗ್ಯಾರೇಜ್ ಇರುತ್ತದೆ. ಅಲ್ಲಿಯೇ ಬಗೆ ಬಗೆಯ ಕ್ಲಾಸುಗಳನ್ನು ನಡೆಸುತ್ತಾರೆ. ಡ್ರಾಯಿಂಗ್, ಸಂಗೀತ, ಬಾಲಿವುಡ್ ಡ್ಯಾನ್ಸ್ ಎಂದಳು. ನಮ್ಮ ಬೆಂಗಳೂರಿನಲ್ಲೂ ಅಷ್ಟೇ ಅಲ್ಲವೇ, ಸ್ವಲ್ಪ ಸ್ಥಳವಿದ್ದರೂ ಯಾವುದೋ ಕ್ಲಾಸನ್ನು ಪ್ರಾರಂಭಿಸಿಯೇ ಬಿಡುತ್ತಾರೆ. ಅಲ್ಲೂ ನಮ್ಮ ಮನೆಯ ಸುತ್ತ ಸಾಕಷ್ಟು ಕ್ರಶ್ಗಳಿವೆ ಮತ್ತು ಫ್ರೀ ಸ್ಕೂಲ್ ಮಾಂಟೆಸ್ಸರಿ ಶಾಲೆಗಳಿವೆ.
ಮನಸ್ಸಿದ್ದರೆ ಮಾರ್ಗ
ಮನುಷ್ಯನಿಗೆ ದುಡಿಯಬೇಕೆಂದರೆ ಹಲವಾರು ದಾರಿಗಳಿವೆ. ನಾವು ಪ್ರತಿ ದಿನ ಪಾರ್ಕಿಗೆ ವಾಕಿಂಗ್ ಹೋಗುವುದನ್ನಂತೂ ತಪ್ಪಿಸುತ್ತಿರಲಿಲ್ಲ. ಅಲ್ಲಿ ಒಬ್ಬರಲ್ಲ ಮತ್ತೊಬ್ಬರು ಸಿಕ್ಕುತ್ತಲೇ ಇದ್ದರು. ಗಂಡಸರು ತುಂಬಾ ಇರುತ್ತಿದ್ದರು. ಹೆಂಗಸರು ಕಡಿಮೆ. ಏಕೆಂದರೆ ಅವರಿಗೆ ಮನೆಯಲ್ಲಿ ಅಡುಗೆ ಮಾಡುವುದು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುವ ಕೆಲಸವಿರುತ್ತಿತ್ತು. ಆದರೂ ಪ್ರತಿ ದಿನ ಹೊಸಬರೊಬ್ಬರ ಪರಿಚಯವಾಗುತ್ತಿತ್ತು. ಒಂದು ದಿನ ನಾವು ವಾಕ್ ಮುಗಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ನೋಡುತ್ತಾ ಕುಳಿತಿದ್ದೆವು. ನಮ್ಮವರಿಗಂತೂ ಭಾರತೀಯರನ್ನು ಕಂಡೊಡನೆಯೇ ಮಾತನಾಡಿಸುವ ಚಪಲ. ಆ ದಿನ ಐವತ್ತರ ಆಸುಪಾಸಿನ ಒಬ್ಬ ಹೆಂಗಸು ಒಂದು ಮಗುವನ್ನು ಕರೆದುಕೊಂಡು ಬಂದಳು. ಅವಳನ್ನು ಮಾತನಾಡಿಸಿದಾಗ ತಿಳಿದದ್ದು. ಆ ಹೆಂಗಸು ಮಗುವನ್ನು ನೋಡಿಕೊಳ್ಳುವವಳು. ಅವಳಿಗೆ ಸಂಪಾದಿಸುವ ಮಗ ಇದ್ದಾನೆ. ಆದರೆ ಅವಳು ಹೇಳಿದ್ದು, ಇಲ್ಲಿ ಮಕ್ಕಳು ದೊಡ್ಡವರಾದ ನಂತರ ತಂದೆ ತಾಯಂದಿರ ಜೊತೆ ಇರುವುದಿಲ್ಲ. ನನ್ನ ಗಂಡ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಾನೆ. ನಾನು ಈ ಮಗುವನ್ನು ನೋಡಿಕೊಳ್ಳುತ್ತೇನೆ. ಅವರ ಮನೆಯನ್ನೂ ನೋಡಿಕೊಳ್ಳುತ್ತೇನೆ. ನನಗೆ ತಿಂಗಳಿಗೆ 1500 ಡಾಲರ್ ಸಂಬಳ ಸಿಗುತ್ತದೆ, ಎಂದಳು. ಇಲ್ಲಿ ಯಾವ ರೀತಿಯ ಕೆಲಸ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ಮೇಲು ಕೀಳು ಎಲ್ಲಾ ನಮ್ಮ ದೇಶದಲ್ಲೇ….. ಏಕೋ ಏನೋ ಅಥವಾ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸಿನ ಭಾವವಷ್ಟೇ.
ನನ್ನ ಸೋದರತ್ತೆಯ ಮಗಳು, ಅಲ್ಲಿಯ ಸಿಟಿಜನ್. ಅವರು ಐದು ಕೋಣೆಯ ಒಳ್ಳೆಯ ಸ್ವಂತ ಮನೆಯನ್ನೇ ಹೊಂದಿದ್ದಾರೆ. ಮಕ್ಕಳು ಚಿಕ್ಕವರಿದ್ದಾಗ ಅವಳು ಕೆಲಸ ಮಾಡಲಿಲ್ಲ. ಜೊತೆಗೆ ಅವಳ ಓದಿಗೆ ಕೆಲಸ ಸಿಗುವುದು ಅಷ್ಟು ಸುಲಭವಿರಲೂ ಇಲ್ಲ. ಎಂಜಿನಿಯರಿಂಗ್ ಅಥವಾ ನಾಲ್ಕು ವರ್ಷದ ಪದವಿ ಮುಗಿಸಿದ್ದರೆ ಮಾತ್ರ ಮಿಕ್ಕ ಯಾವುದಾದರೂ ಕೋರ್ಸ್ ಮಾಡಲು ಸಾಧ್ಯ ಅಥವಾ ಕೆಲಸಕ್ಕೂ ಅಷ್ಟೇ. ಕನಿಷ್ಠ ಅಷ್ಟು ಓದಿರಬೇಕೆಂದು ಕೇಳುತ್ತಾರೆ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಸುಮ್ಮನೆ ಕುಳಿತುಕೊಳ್ಳಲು ಬೇಸರ. ಸ್ವಲ್ಪ ಸಂಪಾದನೆಯನ್ನೂ ಮಾಡುವ ಆಸೆ.
ಒಂದು ವಿಶೇಷ ಮಕ್ಕಳ ಶಾಲೆಗೆ ಹೋಗಿ ದಿನಕ್ಕೆ ನಾಲ್ಕು ಗಂಟೆ ಕೆಲಸ ಮಾಡುತ್ತಾಳೆ. ಗಂಟೆಗೆ ಹತ್ತು ಡಾಲರ್ ಮತ್ತು ವಾರದ ಕೊನೆಯಲ್ಲಿ ತನ್ನ ಗೆಳತಿಯ ಜೊತೆ ಸೇರಿ ಅಲ್ಲಿಗೆ ಹೋಗಿ ಇಡ್ಲಿ ಮತ್ತು ದೋಸೆಯ ಆರ್ಡರ್ ತೆಗೆದುಕೊಂಡು ಕೇಟರಿಂಗ್ ಮಾಡುತ್ತಾಳೆ. ದೋಸೆಯಾದರೆ ಅವರಿಬ್ಬರಲ್ಲಿ ಒಬ್ಬರು ಹುಯ್ದು ಕೊಡುತ್ತಾರಂತೆ. ಒಳ್ಳೆಯ ಸಂಪಾದನೆ ಮಾಡುತ್ತಾರೆ. ಅಲ್ಲಿ ಇಡ್ಲಿ, ದೋಸೆ ಮಾಡಿ ಸಂಪಾದಿಸಿದ ಹಣದಲ್ಲಿ ಅವಳು ಭಾರತಕ್ಕೆ ಬಂದಾಗ ತನ್ನ ಬಳಗದ ಹತ್ತು ಜನರನ್ನು ತಾನೇ ಖರ್ಚು ಹಾಕಿಕೊಂಡು ಅವರಿಗೆ ಸಿಂಗಪೂರಿನ ಪ್ರವಾಸ ಮಾಡಿಸಿದಳು!
ನಾವಿದ್ದ ಅಪಾರ್ಟ್ಮೆಂಟ್ನಲ್ಲೂ ಅಷ್ಟೆ. ರೊಟ್ಟಿ, ಚಪಾತಿಗಳನ್ನು ಡಾಲರ್ಗೆ ಮೂರರಂತೆ ಮಾಡಿಕೊಡುತ್ತಿದ್ದರು. ಅಂತೂ ನಮ್ಮ ದೇಶದಲ್ಲಿರುವವರಿಗೆ ಅಮೆರಿಕಾದಲ್ಲಿ ಇರುವವರೆಲ್ಲಾ ಬಹಳ ಸುಖವಾಗಿದ್ದಾರೆ. ನಮ್ಮದು ಬಹಳ ಕಷ್ಟ ಎನ್ನುವ ಅಭಿಪ್ರಾಯ. ಆದರೆ ಅವರು ನಮಗಿಂತಾ ಹೆಚ್ಚು ಕಷ್ಟಪಡುತ್ತಾರೆ. ಜೊತೆಗೆ ಹಣದ ಸಂಪಾದನೆಯನ್ನೂ ಮಾಡುತ್ತಾರೆ. ವಾರದ ಕೊನೆಯ ದಿನಗಳಲ್ಲಿ ಚೆನ್ನಾಗಿ ಪ್ರವಾಸ ಹೋಗುತ್ತಾರೆ. ಮಕ್ಕಳನ್ನು ಒಳ್ಳೆಯ ಶಾಲೆಗಳಿಗೂ ಕಳುಹಿಸುತ್ತಾರೆ.
ಇದು ವಾಟ್ಸ್ಆ್ಯಪ್ ಯುಗ. ಹೀಗೆಯೇ ಫಾರ್ವರ್ಡ್ ಮಾಡಿದ ಸಂದೇಶ. ಒಬ್ಬ ಆಂಧ್ರದ ಹುಡುಗಿಯ ಮನದಾಳದ ಮಾತು. `ದಯವಿಟ್ಟು ಫಾರಿನ್ ಎನ್ನುವ ಮೋಹಕ್ಕೆ ಬೀಳಬೇಡಿ. ಇಲ್ಲಿ ಬಹಳ ಸುಖವೇನಿಲ್ಲ. ಕೆಲಸ ಸಿಗುವುದು ಸುಲಭವಲ್ಲ. ನಾವು ಬಹಳ ಸಂತೋಷವಾಗಿರುವಂತೆ ತೋರ್ಪಡಿಸಿಕೊಳ್ಳುತ್ತೇವೆ. ನಮ್ಮ ದೇಶದಲ್ಲೇ ಇಲ್ಲಿಗಿಂತ ಸುಖವಾಗಿರಬಹುದು. ಇಲ್ಲಿನ ಜೀವನ ಹೂವಿನ ಹಾಸಿಗೆಯಂತೂ ಅಲ್ಲ. ಇಲ್ಲಿಗೆ ಬರುವ ಮುನ್ನ ಯೋಚಿಸಿ,’ ಎನ್ನುವ ಕಳಕಳಿಯ ಮಾತುಗಳು.
ನನ್ನ ದೊಡ್ಡಮ್ಮನ ಮಗಳಿಗೆ, ನೀವೇನು ಅಮೆರಿಕಾದಲ್ಲಿ ಮಜಾ ಮಾಡ್ತೀರಾ, ಎಂದದಕ್ಕೆ ಅವಳು, ನಮ್ಮದೇನು ಸುಖ? ಇಲ್ಲಿ ಎಲ್ಲಾ ಕೆಲಸಗಳನ್ನೂ ನಾವೇ ಮಾಡಿಕೊಳ್ಳಬೇಕು. ನಿಮ್ಮ ಹಾಗೆ ಕಾಸಿಗೊಂದು ಕೊಸರಿಗೊಂದು ಆಳುಗಳು ನಮಗಿರುವುದಿಲ್ಲ ಎಂದಳು. ಆದರೂ ವಿದೇಶಕ್ಕೆ ಹೋಗುವವರ ದೌಡು ಹೆಚ್ಚಾಗುತ್ತಲೇ ಇದೆ. ಎಚ್.ಒನ್. ಬಿ ವೀಸಾ ಸಿಕ್ಕಿಬಿಟ್ಟರೆ ಏನೋ ನಿಧಿ ಸಿಕ್ಕ ಭಾವವಂತೂ ಕಡಿಮೆಯಾಗಿಲ್ಲ. ವಿಮಾನ ಹತ್ತಿ ಹಾರುವ ಆಸೆ ನಮ್ಮೆಲ್ಲರದೂ! ಹಗಲುಗನಸಿನ ಕುದುರೆಯ ಬೆನ್ನೇರಿ ಸಾಗುವ ಭರದಲ್ಲಿ ನಾವು ವಾಸ್ತವಿಕತೆಯನ್ನೇ ಮರೆತುಬಿಡುತ್ತಿದ್ದೇವೆ.
ಭಾರತವಾದರೇನು ಅಮೆರಿಕಾ ಆದರೇನು? ಬದುಕನ್ನು ಚಂದವಾಗಿ ನಿರೂಪಿಸಿಕೊಳ್ಳುವುದು ನಮ್ಮ ಕೈನಲ್ಲಿ ನಮ್ಮ ಮನದಲ್ಲೇ ಇದೆ. ಅದರಲ್ಲೂ ಮನುಷ್ಯ ತನ್ನ ದೇಶದಿಂದ ತನ್ನವರಿಂದ ಹೊರಗಿರುವಾಗಲೇ ಜೀವನದ ಸರಿಯಾದ ಅರ್ಥ ತಿಳಿಯುವುದು. ಜೀವನ ತಾನಾಗಿ ಹೂವಿನ ಹಾಸಿಗೆ ಆಗುವುದಿಲ್ಲ. ಅದಕ್ಕೂ ಕಷ್ಟಪಡಲೇಬೇಕು. ಒಟ್ಟಾರೆ ಈ ಬಾರಿ ಅಮೆರಿಕಾದಲ್ಲಿ ನಾಲ್ಕು ತಿಂಗಳು ಇದ್ದುದಕ್ಕೂ ಬಹಳಷ್ಟು ಸತ್ಯಗಳು ಅರ್ಥವಾದಂತಾಯಿತು.
ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಎಲ್ಲಿಂದ ಎಲ್ಲಿಗೆ ಹೋಗುವಾಗಲೂ ಸುತ್ತಲಿನ ಬೆಟ್ಟ ಗುಡ್ಡಗಳನ್ನು ಹಾದು ಹೋಗಲೇಬೇಕು. ಒಂದೆಡೆ ಹಸಿರು ಮರಗಳು ಕಂಡರೆ ಮತ್ತೊಂದು ಪಕ್ಕದಲ್ಲಿ ನೀಲ ಸಮುದ್ರ. ಇದರ ಜೊತೆಗೆ ಗುಡ್ಡಬೆಟ್ಟಗಳು ಕಾಣಸಿಗುತ್ತವೆ. ದೂರದಿಂದ ಕಂಡಾಗ ಅವು ಬಂಗಾರದ ಬಣ್ಣದ ನುಣುಪಾದ ಮಕಮಲ್ ಬಟ್ಟೆಯನ್ನು ಹೊದ್ದುಕೊಂಡಂತೆ ಕಾಣಿಸುತ್ತದೆ. ಆದರೆ ಸ್ವಲ್ಪ ಹತ್ತಿರಕ್ಕೆ ಹೋದಾಗ ಅದು ಒಣಗಿರುವ ಹುಲ್ಲು ಹಾಸೆಂದು ತಿಳಿಯುತ್ತದೆ. ಮಳೆಗಾಲದಲ್ಲಿ ಹಸಿರನ್ನು ತನ್ನೊಡಲಲ್ಲಿ ತುಂಬಿಸಿಕೊಂಡಂತಿರುವ ಬೆಟ್ಟಗುಡ್ಡಗಳ ಮೇಲುಹಾಸಿನಂತಿರುವ ಈ ಹುಲ್ಲು ಬೇಸಿಗೆ ಬಂದಂತೆ ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಧ್ಯೆ ಮಧ್ಯೆ ಹಸಿರು ಮರಗಳು, ತೆಳು ಹಳದಿ, ತೆಳು ಕಂದು ಬಣ್ಣದ ಮಕಮಲ್ ಬಟ್ಟೆಯ ಜೊತೆಗೆ ಅಲ್ಲಲ್ಲಿ ಹಸಿರಿನ ಚಿತ್ತಾರದ ವಸ್ತ್ರವನ್ನು ಭೂಮಾತೆ ಧರಿಸಿದ್ದಾಳೋ ಎನ್ನಿಸಿದರೂ ಒಂದು ರೀತಿಯಲ್ಲಿ ಆ ದೇಶದ ನಿಜವಾದ ಪ್ರತಿಬಿಂಬವನ್ನು ಮೂಡಿಸಿದಂತೆ ಭಾಸವಾಗುತ್ತದೆ. ಪ್ರತಿ ಬಾರಿ ಸಾಗುವಾಗಲೂ ಈ ನೋಟ ಕಾಣ ಸಿಗುತ್ತದೆ. ಪ್ರತಿ ಬಾರಿಯೂ ಹೊಸತನವನ್ನು ಹೊಮ್ಮಿಸುವಂತೆ ಕಾಣುತ್ತದೆ.
– ಮಂಜುಳಾ ರಾಜ್