ಮುಟ್ಟಿನ ದಿನಗಳು ಶುರುವಾಗಿವೆ. ಈಗ ನೀನು ಅಡುಗೆಮನೆಗೆ ಹೋಗಬಾರದು, ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಮಾಡಬಾರದು, ಆ ದಿನಗಳಲ್ಲಿ ಬಿಳಿ ಬಟ್ಟೆ ಧರಿಸಬಾರದು, ಆಟ ಆಡುವುದು, ಸೈಕಲ್ ಹೊಡೆಯುವುದು ಎಲ್ಲಾ ಬಂದ್. ಅಂದಹಾಗೆ ಈ ಎಲ್ಲ ನಿರ್ಬಂಧಗಳು ಮಹಿಳೆಯರ ದಿನಚರಿಯನ್ನು ಅಸ್ತವ್ಯಸ್ತಗೊಳಿಸುವಂತಾಗಿವೆ. ಅದರಲ್ಲೂ ವಿಶೇಷವಾಗಿ ಹದಿ ವಯಸ್ಸಿನ ಹುಡುಗಿಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವಂಥವಾಗಿವೆ. ಇವಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಮುಟ್ಟಿಗೆ ಸಂಬಂಧಪಟ್ಟ ಅದೆಷ್ಟೋ ತಪ್ಪು ಕಲ್ಪನೆಗಳಿವೆ. ಅವು ದೇಶದಲ್ಲೆಡೆ ವ್ಯಾಪಿಸಿವೆ. ನೀವು ಯಾವುದೇ ನಗರದಲ್ಲಿರಿ, ಪ್ರತಿಯೊಂದು ಕುಟುಂಬದಲ್ಲಿ ಇದಕ್ಕೆ ಸಂಬಂಧಪಟ್ಟ ತಪ್ಪುಕಲ್ಪನೆ ನಿಮ್ಮನ್ನು ಚಕಿತಗೊಳಿಸುತ್ತದೆ. ಆದರೆ ಮುಟ್ಟಿಗೆ ಸಂಬಂಧಪಟ್ಟ ಕಟ್ಟುನಿಟ್ಟು ಆಚರಣೆ ಮಾಡುವ ಕಾಲ ಮಾತ್ರ ಇದಲ್ಲ ಎನ್ನುವುದಂತೂ ಸತ್ಯ. ಈ ಎಲ್ಲ ನಿರರ್ಥಕ ಮಾತುಗಳು ನಿಮ್ಮನ್ನು ಗೊಂದಲಕ್ಕೆ ಕೆಡಹುವುದರ ಹೊರತು ಬೇರೇನೂ ಅಲ್ಲ.
ಪ್ರತಿಬಂಧ ಮತ್ತು ನಿಯಂತ್ರಣ
ಸಾಕಷ್ಟು ಓದಿರುವ ಹಾಗೂ ಮುಕ್ತ ವಿಚಾರವುಳ್ಳ ಮಹಿಳೆ ಸಾಧನಾ ಹೀಗೆ ಹೇಳುತ್ತಾರೆ, ಕೆಲವು ಪ್ರತಿಬಂಧಗಳು ಹಾಗೂ ನಿಯಂತ್ರಣಗಳು ನಮ್ಮ ಮನೆಯಲ್ಲೂ ಕೂಡ ಇವೆ. ಆದರೆ ಅವು ಅಷ್ಟೊಂದು ಕಠೋರ ಹಾಗೂ ಯಾವುದೇ ತೊಂದರೆ ಕೊಡುವಂಥದು ಅಲ್ಲ. ಆದರೆ ಕೆಲವು ಕಡೆ ಎಷ್ಟೊಂದು ಕಷ್ಟಕರ ನಿಯಮಗಳಿವೆಯೆಂದರೆ, ಜೀವಿಸುವುದೇ ಕಷ್ಟ ಎನಿಸುತ್ತದೆ. ನಾನು ಬೇರೊಂದು ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋದಾಗ ನನಗೆ ಅದರ ಪ್ರತ್ಯಕ್ಷ ಅನುಭವವಾಯಿತು. ಆಗ ನಾನು ಮುಟ್ಟಾಗಿದ್ದೆ.
ಆ ಮನೆಯ ಹಿರಿಯ ಸೊಸೆ ನನಗೆ ಆ ಅವಧಿಯಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಬಗ್ಗೆ ಒಂದು ಪಟ್ಟಿಯನ್ನು ಮುಂದಿಟ್ಟರು. ಅವು ಅವರ ಮನೆಯ ಕಾಯ್ದೆ ಕಾನೂನುಗಳು. ನಾನು ಅವನ್ನು ಪಾಲಿಸಲಾಗದು ಎಂದು ಸ್ಪಷ್ಟವಾಗಿ ನಿರಾಕರಿಸಿಬಿಟ್ಟೆ. ನೀವು ನನ್ನ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಿದರೆ ನಾನು ಇಲ್ಲಿಂದ ಹೊರಟೇ ಹೋಗುವುದಾಗಿ ಹೇಳಿದೆ. ಅಂತೂ ನನ್ನ ಬೆದರಿಕೆ ಕೆಲಸಕ್ಕೆ ಬಂತು.
ಮನೆಯ ಗಂಡಸರಿಗೆ ಈ ವಿಷಯ ಗೊತ್ತಾಗಲೇಬಾರದು ಎಂದೆಲ್ಲ ಹೇಳಲಾಗುತ್ತದೆ. ಆದರೆ ಇಷ್ಟೆಲ್ಲ ನಿಯಮಗಳನ್ನು ಹೇರಿದರೆ, ಮನೆಯ ಗಂಡಸರಿಗೆ ಅಷ್ಟೇ ಏಕೆ, ಅಕ್ಕಪಕ್ಕದವರಿಗೂ ಕೂಡ ಸುಲಭವಾಗಿ ಗೊತ್ತಾಗುತ್ತದೆ.
ತುರ್ತು ಕೆಲಸ ಕೂಡ ಅಗತ್ಯವಲ್ಲ
ದಾರಿ ಮಧ್ಯದಲ್ಲಿ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ನೋಡಿಬಿಟ್ಟರೇನು ಗತಿ ಎಂಬ ಅಸಹಜತೆ ದೇಶದ ಅರ್ಧದಷ್ಟು ಮಹಿಳೆಯರನ್ನು ಕಾಡುತ್ತದೆ. ಆ ಕಾರಣದಿಂದ ಕಾಲೇಜಿಗೆ, ಕೆಲಸಕ್ಕೆ ರಜೆ ಹಾಕಬೇಕಾಗಿ ಬರುತ್ತದೆ. ಅಷ್ಟೇ ಏಕೆ ಮಹತ್ವದ ಕೆಲಸಗಳನ್ನೂ ಮುಂದೂಡಬೇಕಾಗಿ ಬರುತ್ತದೆ.
28 ವರ್ಷದ ಅನುರಾಧಾ ಹೀಗೆ ಹೇಳುತ್ತಾರೆ, “ಮುಟ್ಟಾದಾಗ ಹುಡುಗಿ ಅಥವಾ ಮಹಿಳೆ ಉಪ್ಪಿನಕಾಯಿ ಡಬ್ಬವನ್ನು ಮುಟ್ಟಿದ ಮಾತ್ರಕ್ಕೆ ಅದು ಹೇಗೆ ಕೆಟ್ಟು ಹೋಗುತ್ತದೆ? ಇದನ್ನು ಯಾರಾದರೂ ಪ್ರೂವ್ ಮಾಡಿ ತೋರಿಸಬೇಕು. ಅಜ್ಜಿ ಇದ್ದಾಗ ಎಷ್ಟೆಲ್ಲ ನಿಯಮಗಳನ್ನು ಹೇರಲಾಗುತ್ತಿತ್ತು. ಅಜ್ಜಿ ಹೋದ ಬಳಿಕ ಅಮ್ಮ ಅಷ್ಟಿಷ್ಟು ನಿಯಮ ಸಡಿಲ ಮಾಡಿದರು.”
40 ವರ್ಷದ ವಂದನಾ ಹೀಗೆ ಹೇಳುತ್ತಾರೆ, “ನಾನು ಈಗಲೂ ಕೂಡ ಪರಿಪೂರ್ಣ ಸ್ವತಂತ್ರಳಲ್ಲ. ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಆದರೆ ಅಜ್ಜಿ ಹಾಗೂ ಅಮ್ಮ ಹೇಳುತ್ತಿದ್ದಷ್ಟು ಮಾತ್ರ ಈಗಿಲ್ಲ.”
“ಮದುವೆಗೂ ಮುನ್ನವೇ ಮುಟ್ಟಾಗವುದನ್ನು ಒಳ್ಳೆಯದೆಂದು ಭಾವಿಸಲಾಗುತ್ತಿರಲಿಲ್ಲ. ಹಾಗಾಗಿಯೇ ಮುಟ್ಟಾಗುವ ಮುನ್ನವೇ ಹುಡುಗಿಗೆ ಮದುವೆ ಮಾಡಿಬಿಡಲಾಗುತ್ತಿತ್ತು. ಆ ಕಾಲದಲ್ಲಿ ನನ್ನ ಮದುವೆ 10ನೇ ವರ್ಷದಲ್ಲಿ ಆಗಿತ್ತು,” ಇದು 70 ವರ್ಷದ ಲಲಿತಾದೇವಿ ಹೇಳಿಕೆ. ಅವರು ಮುಂದುವರಿದು, “ಕಾಲೇಜಿನಲ್ಲಿ ಓದು ನನ್ನ ಮೊಮ್ಮಗಳಿಗೆ ನಾನು ಯಾವುದೇ ನಿರ್ಬಂಧ ಹೇರಿಲ್ಲ. ನನ್ನ ಕಾಲದಲ್ಲಿ ಪಕ್ಕದ 4 ಮನೆಗಳಲ್ಲಿ ಹಪ್ಪಳ, ಸಂಡಿಗೆ ಮಾಡುತ್ತಿದ್ದರೆ ಆಗ ನಮಗೆ ಮಹಡಿ ಹತ್ತಲು ಸಹ ಅನುಮತಿ ಇರುತ್ತಿರಲಿಲ್ಲ. ಈಗ ನಾನು ಆ ನಿರ್ಬಂಧ ಹೇರಲು ಆಗುತ್ತದೆಯೇ?” ಎನ್ನುತ್ತಾರೆ.
ಆಶ್ಚರ್ಯಕರ ಸತ್ಯ
ಶೇ.70ರಷ್ಟು ಮಹಿಳೆಯರು ಈಗಲೂ ಕೂಡ ಬಹಿರಂಗವಾಗಿ ಸ್ಯಾನಿಟರಿ ಪ್ಯಾಡ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂಗಡಿಯವರು ಕೂಡ ಸ್ಯಾನಿಟರಿ ಪ್ಯಾಡ್‌ನ್ನು ಪೇಪರ್‌ನಲ್ಲಿ ಸುತ್ತಿಕೊಡುತ್ತಾರೆ. ಶೇ.40ರಷ್ಟು ಮಹಿಳೆಯರು ಮುಟ್ಟಿನ ದಿನಗಳಲ್ಲಿ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಅದರಲ್ಲಿ ಶೇ.65ರಷ್ಟು ಮಹಿಳೆಯರು ತಮ್ಮ ತಲೆಗೂದಲು ತೊಳೆದುಕೊಳ್ಳಲು ಕೂಡ ಹಿಂದೇಟು ಹಾಕುತ್ತಾರೆ.
ಮುಟ್ಟಿನ ದಿನಗಳಲ್ಲಿ ಉಪ್ಪಿನಕಾಯಿ, ಹಪ್ಪಳ ಮಾಡುವುದನ್ನು ನೋಡಲೇಬಾರದು. ನೋಡಿದರೆ ಕೆಟ್ಟು ಹೋಗುತ್ತವೆ, ಪೂಜೆಯ ಕೋಣೆಗೆ ಹೋದರೆ ದೇವಿ/ದೇವರು ಮುನಿಸಿಕೊಳ್ಳುತ್ತಾರೆ ಎಂದೆಲ್ಲ ಮೂಢನಂಬಿಕೆಗಳಿವೆ. ಅಷ್ಟೇ ಅಲ್ಲ, ಪತಿ ಮಲಗುವ ಕೋಣೆಯಲ್ಲಿ ಅವಳಿಗೆ ಮಲಗಲು ಕೂಡ ಅವಕಾಶ ಕೊಡುವುದಿಲ್ಲ. ಇಂದಿನ ಆಧುನಿಕ ದಿನಗಳಲ್ಲಿಯೂ ಇವೆಲ್ಲ ಮೂಢನಂಬಿಕೆಗಳಿರುವುದು ನಿಜಕ್ಕೂ ಅಚ್ಚರಿದಾಯಕವೇ ಹೌದು.
ಅಮ್ಮನ ಜವಾಬ್ದಾರಿ
ರಕ್ತ ನೋಡಿದರೆ ಯಾರಾದರೂ ವಿಚಲಿತರಾಗುವುದು ಸಹಜ. ಪೆಟ್ಟು ತಗುಲಿದಾಗ ಮಾತ್ರ ರಕ್ತ ಬರುತ್ತದೆ ಎಂಬ ನಿಯಮದ ಪ್ರಕಾರ, ಯಾವುದೇ ಹುಡುಗಿ ಮುಟ್ಟಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಇರುವ ಕಾರಣದಿಂದ ಅವಳ ಮೊದಲ ಅನುಭವ ಭಯಾನಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವಳಿಗೆ ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವ ಸಾಮಾನ್ಯ ಸಂಗತಿ ಎನ್ನುವುದನ್ನು ತಿಳಿಸಿಕೊಡಬೇಕು.
ಡಾ. ಸಾವಿತ್ರಿ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮುಟ್ಟಿನ ಆರಂಭದಲ್ಲಿ ಕೆಲವು ಹುಡುಗಿಯರಿಗೆ ಬಹಳ ಟೆನ್ಶನ್ ಆಗುತ್ತದೆ. ಮುಟ್ಟು ಒಂದು ಸಾಮಾನ್ಯ ಸಂಗತಿ ಎನ್ನುವುದು ಅವರಿಗೆ ತಿಳಿದಿರಬೇಕು.“ಮುಟ್ಟಿನ ದಿನಗಳಲ್ಲಿ ಅವರಿಗೆ ಭಾವನ್ಮಾತಕ ಬೆಂಬಲದ ಅಗತ್ಯವಿರುತ್ತದೆ. ಅಮ್ಮನೇ ಅವಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಆರಂಭದಲ್ಲಿ ಮುಟ್ಟು ಸರಿಯಾಗಿ ಬರುವುದಿಲ್ಲ. ಒಮ್ಮೊಮ್ಮೆ ಎರಡೆರಡು ತಿಂಗಳ ಅಂತರದಲ್ಲಿ ಬರುತ್ತದೆ. ಆದರೆ ಅದು ಸಾಮಾನ್ಯ ಸಂಗತಿ ಎಂಬುದರ ಬಗ್ಗೆ ಅವರೊಂದಿಗೆ ಮುಕ್ತವಾಗಿ ಚರ್ಚಿಸಬೇಕು.”
ಮಾನಸಿಕ ಸಿದ್ಧತೆ
ಯಾವ ಹುಡುಗಿಯರು ಮುಟ್ಟಿಗೆ ಮೊದಲೇ ಸಿದ್ಧರಾಗಿರುತ್ತಾರೋ, ಅವರು ಇದನ್ನು ಸಮರ್ಥವಾಗಿ ಎದುರಿಸುತ್ತಾರೆ. ಅವರಿಗೆ ಇದರ ಬಗ್ಗೆ ಹೆಚ್ಚು ಗಾಬರಿ ಎನಿಸುವುದಿಲ್ಲ. ಆದರೆ ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೇನೆಂದರೆ ಹೆಚ್ಚಿನ ಹುಡುಗಿಯರು ಇದಕ್ಕೆ ಸನ್ನದ್ಧರಾಗಿರುವುದಿಲ್ಲ. ಪ್ರಥಮ ಮುಟ್ಟಿಗೆ ಸಂಬಂಧ ಪಟ್ಟಂತೆ 2-3 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೇನೆಂದರೆ, ಪ್ರಶ್ನೆ ಕೇಳಲ್ಪಟ್ಟ ಹುಡುಗಿಯರಲ್ಲಿ ಶೇ.33ರಷ್ಟು ಹುಡುಗಿಯರು ಮುಟ್ಟು ಶುರುವಾಗುವ ಮುನ್ನ ತಮಗೆ ಈ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ ಎಂದಿದ್ದಾರೆ. ಮಹಿಳಾ ಹಾಗೂ ಮಕ್ಕಳ ಕಲ್ಯಾಣಕ್ಕೆ ಸಂಬಂಧಪಟ್ಟ ಪಿಆರ್‌ಓ ಮಂಜುಳಾ ಹೀಗೆ ಹೇಳುತ್ತಾರೆ, “ಮುಟ್ಟಿಗೆ ಸಂಬಂಧಪಟ್ಟಂತೆ ಸಮಾಜದಲ್ಲಿ ಒಂದು ಬಗೆಯ ಮೈಂಡ್‌ಸೆಟ್ ನಿಮಾರ್ಣವಾಗಿದೆ. ಅದು ಯೌವನಾವಸ್ಥೆಯಲ್ಲಿ ಕಾಲಿಡುವ ಹುಡುಗಿಯರ ಹೆಜ್ಜೆಗೆ ಅಡೆತಡೆಯಂತಿದೆ. ಇಂತಹ ಭ್ರಮೆಗಳನ್ನು ತಪ್ಪು ಕಲ್ಪನೆಗಳನ್ನು ನಿವಾರಿಸುವ ಪ್ರಯತ್ನ ಮಾಡಬೇಕಿದೆ!”
– ಶರ್ಮಿಳಾ