ಕಥೆ – ಶಮೀಮ್ ಖಾನ್
ಅಪ್ಪಾಜಿಗೆ ಖಾಸಗಿ ನೌಕರಿ ಇತ್ತು. ಹೀಗಾಗಿ ರೇಶ್ಮಾಳ ಅಣ್ಣ ಮತ್ತು ಅಕ್ಕಂದಿರಿಬ್ಬರೂ ಪ್ರೈಮರಿ ಶಾಲೆಯವರೆಗೆ ಮಾತ್ರ ಕಲಿತು ಬಿಟ್ಟುಬಿಟ್ಟರು. ಆದರೆ ಮೊದಲಿನಿಂದಲೂ ರೇಶ್ಮಾ ಉನ್ನತ ಶಿಕ್ಷಣ ಕಲಿಯಲೇಬೇಕು ಎಂದು ಹಠ ಹೂಡಿದ್ದಳು. ಇದು ಅವಳ ಬಾಲ್ಯದ ಹೊಂಗನಸಾಗಿತ್ತು.
ಅವಳು ಹೈಸ್ಕೂಲು ಸೇರಬೇಕಾದ ಸಂದರ್ಭದಲ್ಲಿ ಅಪ್ಪಾಜಿ ಮಗಳಿಗೆ ಹೇಳಿದ್ದರು, “ಮಗು ರೇಶ್ಮಾ, ನೀನು ಶಾಲೆ ಕಲಿತಿದ್ದು ಸಾಕು. ನಮ್ಮ ಜನರಲ್ಲಿ ನಿನಗಿಂತ ಹೆಚ್ಚಿಗೆ ಕಲಿತ ಗಂಡು ಹುಡುಗನ್ನ ನಾನು ಎಲ್ಲಿಂದ ಹುಡುಕಿ ತರಲಿ? ಅದರ ಬದಲು ಕಸೂತಿ, ಹೊಲಿಗೆ ಅಂತ ನಿನಗೆ ಯಾವುದು ಇಷ್ಟವೋ ಅದನ್ನೇ ಕಲಿ.”
“ಇಲ್ಲ ಅಪ್ಪಾಜಿ…. ನಿಮಗೆ ಶ್ರಮ ಆಗದಂತೆ ನನ್ನ ಫೀಸ್, ಬುಕ್ಸ್ ಇತ್ಯಾದಿ ನಾನೇ ವ್ಯವಸ್ಥೆ ಮಾಡಿಕೊಳ್ತೀನಿ. ಸಣ್ಣ ಮಕ್ಕಳಿಗೆ ಪಾಠ ಹೇಳಿ ಕೊಡ್ತೀನಿ. ನೀವೇನೂ ಯೋಚನೆ ಮಾಡಬೇಡಿ,” ಎಂದು ಅವಳು ನಾನಾ ಮಾತುಗಳಲ್ಲಿ ತಂದೆಯನ್ನು ಒಪ್ಪಿಸಿದಳು.
ಒಲ್ಲದ ಮನದಿಂದಲೇ ಅವಳ ತಾಯಿ ಸಹ ರೇಶ್ಮಾಳ ಮಾತಿಗೆ ಹ್ಞೂಂ ಎಂದರು.
ಹೀಗೇ ರೇಶ್ಮಾ ತಾನೇ ಸಣ್ಣದಾಗಿ ಸಂಪಾದಿಸುತ್ತಾ ತನ್ನ ಹೆಚ್ಚಿನ ಓದಿಗೆ ಬೇಕಾದ ಆದಾಯ ಗಳಿಸತೊಡಗಿದಳು. ಇವಳಿಂದ ಪ್ರೇರಿತಳಾಗಿ ತಂಗಿ ಮುಮ್ತಾಜ್ ಸಹ ತಾನೂ ಹೆಚ್ಚಿಗೆ ಓದುತ್ತೇನೆ ಎಂದು ಅಕ್ಕನ ಎಲ್ಲಾ ಕೆಲಸಗಳಿಗೂ ಬಲಗೈ ಆಗಿ ನಿಂತಳು. ಈ ರೀತಿ ಅಕ್ಕಾತಂಗಿ ತಮಗೆ ಬಂದ ಟ್ಯೂಷನ್ ಫೀಸ್ ಹಣದಿಂದಲೇ ತಮ್ಮ ವಿದ್ಯಾಭ್ಯಾಸದ ಸಮಸ್ತ ಖರ್ಚು ನಿಭಾಯಿಸಿಕೊಂಡರು.
ರೇಶ್ಮಾಳ ಅಕ್ಕಂದಿರು ಈ ತಂಟೆಗೆ ಬರದ ಕಾರಣ ಅಲ್ಪ ಆದಾಯ ಇರುವ ಗಂಡುಗಳನ್ನು ಹುಡುಕಿ ಅವರ ಮದುವೆ ಮಾಡಿ ಕಳುಹಿಸಿದರು. ಅಣ್ಣನೂ ಸಹ ದೊಡ್ಡ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ. ನೋಡ ನೋಡುತ್ತಿದ್ದಂತೆ ರೇಶ್ಮಾ ಬಿ.ಎ. ನಂತರ ಎಂ.ಎ ಮುಗಿಸಿ, ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಳು. ಅದೇ ತರಹ ಅವಳ ತಂಗಿ ಮುಮ್ತಾಜ್ ಕೂಡ ಬಿ.ಕಾಂ. ಪದವೀಧರೆಯಾಗಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕ್ಯಾಶಿಯರ್ ಆದಳು.
ಅದಾದ ಮೇಲೆ ದಾಣಗೆರೆಯಲ್ಲಿದ್ದ ರೇಶ್ಮಾ ಕಾಲೇಜ್ ಲೆಕ್ಚರರ್ ಆಗಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದಳು. ಮನೆಯಿಂದ ದೂರ ಹೋಗಿ ಕೆಲಸ ಮಾಡಬೇಕು ಎಂದಾಗ, ಮನೆ ಮಂದಿ ವಿರೋಧಿಸಿದರು. ಆದರೂ ಅವಳು ಪಟ್ಟು ಬಿಡದೆ ಕೆಲಸಕ್ಕೆ ಸೇರಿದಳು. ಹೀಗಾಗಿ ರಂಜಾನ್, ಬಕ್ರೀದ್ ಹಬ್ಬಗಳಿಗೆ ಅವಳು ಊರಿಗೆ ಹೋಗಿಬರತೊಡಗಿದಳು. ಉಳಿದಂತೆ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಬೆಂಗಳೂರಿನಲ್ಲೇ ಕೊಳ್ಳುತ್ತಿದ್ದಳು, ಹೀಗಾಗಿ ಊರಿನ ಸಂಪರ್ಕ ಕಡಿಮೆ ಆಯ್ತು. ಊರಿಗೆ ಹೋದಾಗೆಲ್ಲ ಅಮ್ಮ ಅಪ್ಪಾಜಿಯರದು ಒಂದೇ ವರಾತ.
“ಇಷ್ಟೆಲ್ಲ ಡಿಗ್ರಿ ಓದಿ, ಬೆಂಗಳೂರಿನಂಥ ದೊಡ್ಡ ಊರಲ್ಲಿ ಕೆಲಸಕ್ಕೆ ಸೇರಿದ್ದಿ. ನಿನಗೆಲ್ಲಿಂದ ವರನನ್ನು ಹುಡುಕುವುದು? ನಿನ್ನ ಮದುವೆ ಯಾವಾಗ ನೋಡುವುದು…..?”
“ಅಪ್ಪಾಜಿ, ಈಗ ನಮ್ಮ ಜನರಿಗೆ ವಿದ್ಯಾಭ್ಯಾಸದ ಮಹತ್ವ ತಿಳಿಯುತ್ತಿದೆ. ನೋಡ್ತಾ ಇರಿ, ನಮ್ಮಿಬ್ಬರಿಗೂ ಸಂಬಂಧಗಳು ತಾನಾಗಿ ಹುಡುಕಿಕೊಂಡು ನಿಮ್ಮ ಬಳಿ ಬರುತ್ತದೆ. ಆಗ ನಿಮಗೆ ಈ ಕಲಿತ ಹೆಣ್ಣುಮಕ್ಕಳ ಬಗ್ಗೆ ಎಷ್ಟು ಹೆಮ್ಮೆ ಎನಿಸುತ್ತದೆ ನೋಡಿ,” ಎಂದಳು.
“ಆ ದಿನ ಮುಂದೆ ಯಾವಾಗ ಬರುತ್ತದೋ…. ಬರುವುದೋ ಇಲ್ಲವೋ ಗೊತ್ತಿಲ್ಲ,” ಅಮ್ಮ ನಿಟ್ಟುಸಿರು ಬಿಟ್ಟು ಹೇಳಿದರು.
“ಅಕ್ಕಪಕ್ಕದಲ್ಲಿ, ಪರಿಚಿತರ ಮನೆಯವರೆಲ್ಲಿ ನಿಮ್ಮಿಬ್ಬರಿಗಿಂತ ಚಿಕ್ಕ ವಯಸ್ಸಿನ ಹುಡುಗಿಯರಿಗೆ ಮದುವೆಯಾಗಿ ಮಕ್ಕಳಾಗಿವೆ. ಇನ್ನೂ ಮಗಳ ಮದುವೆ ಮಾಡಿಸಲ್ವಾ ಫಾತಿಮಾ? ಎಂದು ಎಲ್ಲರೂ ವ್ಯಂಗ್ಯವಾಗಿ ನಮ್ಮನ್ನು ಆಡಿಕೊಳ್ಳುವವರೇ….” ಎಂದು ಅಮ್ಮ ಕಣ್ಣಿಗೆ ಸೆರಗು ಹಚ್ಚುತ್ತಿದ್ದರು. ಹಾಗೆ ನೋಡಿದರೆ ಈ ಹುಡುಗಿಯರಿಬ್ಬರಿಗೂ ದೂರದ ಊರುಗಳಿಂದ ಕಲಿತ ಹುಡುಗರ ಸಂಬಂಧ ಬರುತ್ತಿತ್ತು. ಸೌದಿಗೆ ಮಗಳನ್ನು ಕಳುಹಿಸುವ ಇಷ್ಟವಿಲ್ಲದೆ ಇವರ ತಾಯಿ ತಂದೆ ಬೇಡ ಎನ್ನುತ್ತಿದ್ದರು.
ಶಿಕ್ಷಣ ಎಂಬುದು ನಮ್ಮ ದೇಶದಲ್ಲಿ ಎಲ್ಲರಿಗೂ ಅತಿ ಮಹತ್ವಪೂರ್ಣವಾದುದು. ಆದರೆ ಈ ಸಮುದಾಯದಲ್ಲಿ ಕಡಿಮೆ ಆದಾಯದ ಕಾರಣ, ಬಲು ಬೇಗ ಹರೆಯಕ್ಕೆ ಬಂದ ಗಂಡುಮಕ್ಕಳನ್ನು ಕೆಲಸಕ್ಕೆ ಹಾಕುವರು. ಹೀಗಾಗಿ ಪೀಳಿಗೆಗಳೇ ಕಳೆದುಹೋದರೂ ಈ ಬಡತನದ ಚಕ್ರದಿಂದ ಹೊರಬರಲು ಆಗುತ್ತಿರಲಿಲ್ಲ. ಇದನ್ನು ಮೆಟ್ಟಿ ನಿಲ್ಲಲೆಂದೇ ರೇಶ್ಮಾ ಮತ್ತು ಮುಮ್ತಾಜ್ ಉನ್ನತ ಶಿಕ್ಷಣ ಪಡೆದು ಕೆಲಸಕ್ಕೆ ಸೇರಿದ್ದರು.
ಆ ದಿನ ಅಪ್ಪಾಜಿ ರೇಶ್ಮಾಳಿಗೆ ಫೋನ್ ಮಾಡಿ ಹೇಳುತ್ತಿದ್ದರು, “ನಿನ್ನ ಕಿರಿ ಚಿಕ್ಕಪ್ಪ ಒಂದು ಒಳ್ಳೆ ಸಂಬಂಧ ತಂದಿದ್ದಾನೆ…. ಹುಡುಗ ಕೂಡ ಸ್ನಾತಕೋತ್ತರ ಪದವೀಧರ…. ಖಾಸಗಿ ಪ್ರೌಢ ಶಾಲೆಯಲ್ಲಿ ಗಣಿತದ ಮಾಸ್ಟರ್, ಸಂಬಳ ಸಹ ಪರವಾಗಿಲ್ಲ, ಇಲ್ಲೇ ಮಂಗಳೂರಿನವನು. ಅವರ ಮನೆ ಕಡೆ ಸಹ ಎಲ್ಲಾ ಅನುಕೂಲವಾಗಿದ್ದಾರೆ. ಫೋಟೋ, ವಿವರ ಕೊರಿಯರ್‌ನಲ್ಲಿ ಬರುತ್ತದೆ.”
ಆಗ ಅಣ್ಣ ಕೂಡ ಹೇಳಿದ, “ನೋಡಮ್ಮ, ವರದಕ್ಷಿಣೆ ಕೇಳುವವರನ್ನು ನೀನು ಬೇಡ ಅಂತೀಯಾ ಅಂತ ಗೊತ್ತು. ಇವರು ಅಂಥ ಆಸೆಬುರುಕರಲ್ಲ. ವಿದ್ಯಾವಂತ ಸೊಸೆ ಬೇಕಂತೆ ಅವರಿಗೆ…..”
ಈ ವಿರಗಳನ್ನು ಹೇಳುವಾಗ ಅವರಿಬ್ಬರಿಗೂ ಸಂಬಂಧ ಒಪ್ಪಿಗೆ ಎಂಬುದು ಸ್ಪಷ್ಟವಾಗಿತ್ತು.
ಅದಾದ ಮೇಲೆ ರೇಶ್ಮಾ ಹುಡುಗನ ಫೋಟೋ ನೋಡಿದಳು. ಬಯೊಡೇಟಾ ನೋಡಿದಾಗ ತನಗಿಂತ ಎಲ್ಲಾ ವಿಧದಲ್ಲೂ ಕಡಿಮೆ ಅಂತಸ್ತು ಎನಿಸಿತು. ಆದರೆ ಎಷ್ಟು ವರಗಳನ್ನು ನಿರಾಕರಿಸುವುದು? ಅಮ್ಮ ಅಪ್ಪನ ಆತಂಕ, ಮುಂದೆ ತಂಗಿ ಮದುವೆಗೆ ತಡ….. ಇದೀಗ ಅವಳಿಗೂ 30+ ಆಗಿತ್ತು. ಈ ಎಲ್ಲಾ ಕಾರಣಗಳನ್ನೂ ಮುಂದಿಟ್ಟುಕೊಂಡು ಅಪ್ಪಾಜಿ ಹುಡುಗನ ಕಡೆಯವರಿಗೆ ಈಗಾಗಲೇ ಸಂಬಂಧ ಗಟ್ಟಿ ಮಾಡಿಕೊಂಡು ಬಂದಿದ್ದರು.
ಅಂತೂ ಮನೆಯವರೆಲ್ಲರ ಒತ್ತಡಕ್ಕೆ ಮಣಿದು ರೇಶ್ಮಾ ಮದುವೆ ನಿಶ್ಚಯ ಮುಗಿಸಿಕೊಂಡೇ ಬಂದಳು. ಎಂಗೇಜ್‌ಮೆಂಟ್‌ಗೆ ತನಗೆ ತೀರಾ ಆಪ್ತರಾದ ಕೆಲವೇ ಸಹೋದ್ಯೋಗಿಗಳನ್ನು ಮಾತ್ರ ಆಹ್ವಾನಿಸಿದ್ದಳು. ಅದಾದ ಮೇಲೆ ಅವಳು ಬೆಂಗಳೂರಿನ ತನ್ನ ಕೆಲಸಕ್ಕೆ ಮರಳಿದ್ದಳು, ತಲೆಯ ತುಂಬಾ ಭಾವೀ ಗಂಡನ ಕುರಿತೇ ಕಳವಳ. ಆತನ ಸ್ವಭಾವ ಹೇಗೋ ಏನೋ…. ಆತನ ವರ್ತನೆ, ನಡವಳಿಕೆ ಮುಂದೆ ತನಗೆ ಹೊಂದುತ್ತದೋ ಇಲ್ಲವೋ…. ಹೆಂಡತಿ ಮೇಲೆ ಕೈ ಎತ್ತುವ ಗಂಡಸರಿಗೇನೂ ಕಡಿಮೆ ಇಲ್ಲ. ಅಕ್ಕಪಕ್ಕದ ಎಲ್ಲಾ ಕಡೆ ಬಹಳ ವಿಚಾರಿಸಿದ್ದಾಳೆ. ಆತ ತನ್ನ ಮನದಾಳದ ಭಾವನೆಗಳನ್ನು ಗುರುತಿಸುತ್ತಾನೆಯೇ…? 2- 3 ದಿನಗಳ ನಂತರ ವುಡ್‌ಬೀ ಕಾಲ್ ಬಂದಿತ್ತು. ಮೊದಲ ಸಲದ ಮಾತುಕಥೆ…. ಅದರಲ್ಲಿ ನಯ ನಾಜೂಕು, ಶಿಷ್ಟಾಚಾರ ಏನೂ ಇರಲಿಲ್ಲ. ಅದಾದ ಮುಂದಿನ ವಾರಗಳಲ್ಲಿ ಪ್ರತಿ ದಿನ ಕರೆ ಬರುತ್ತಿತ್ತು. ಕಾಲೇಜಿನ ಕೆಲಸ ಮುಗಿಸಿ ಇವಳು ಸುಸ್ತಾಗಿ ಹಾಸ್ಟೆಲ್ ಕೋಣೆ ಸೇರುವಷ್ಟರಲ್ಲಿ ಮತ್ತೆ ಮತ್ತೆ ಕಾಲ್….. ಅರ್ಧ, ಮುಕ್ಕಾಲು ಘಂಟೆ ಕಳೆದರೂ ಮಾತು ಮುಗಿಯುತ್ತಿರಲಿಲ್ಲ. ತನ್ನ ಆತ್ಮಸ್ತುತಿ, ತಾನೆಷ್ಟು ಮಹಾನ್ ಎಂದು ಕೊಚ್ಚಿಕೊಳ್ಳುತ್ತಿದ್ದ. ಮೊದಲೇ ಮಿತಭಾಷಿ ರೇಶ್ಮಾ `ಹ್ಞೂಂ….ಹ್ಞೂಂ…..’ ಎನ್ನುವುದರಲ್ಲೇ ಮಾತು ಮುಗಿಸುತ್ತಿದ್ದಳು. ಅವನು ಉತ್ತರ ನಿರೀಕ್ಷಿಸದೆ ತನ್ನದೇ ಪುರಾಣ ಮುಂದುವರಿಸುತ್ತಿದ್ದ.
ಅದಾದ 2-3 ವಾರಗಳ ನಂತರ ಅವನು ಹೆಚ್ಚು ಹೆಚ್ಚಾಗಿ ಮಾತನಾಡುತ್ತಾ ಹುಚ್ಚು ವಿಚಾರ ತಿಳಿಸುತ್ತಿದ್ದ. ರೇಶ್ಮಾಳ ಸಹೋದ್ಯೋಗಿಗಳು ಯಾರು, ಅವರಲ್ಲಿ ಗಂಡಸರಿದ್ದಾರಾ? ಅವರ ಜೊತೆ ಇವಳ ಸಂಬಂಧ ಹೇಗಿದೆ? ಇದೆಲ್ಲ ಆದ ಮೇಲೆ ತನ್ನ ತಾಯಿ, ತನ್ನ ಮನೆಯವರೆಲ್ಲ ಹಳೆಯ ಕಂದಾಚಾರದ ವಿಷಯಗಳಲ್ಲಿ ಎಷ್ಟು ನಂಬಿಕೆ ಇರಿಸಿಕೊಂಡಿದ್ದೇವೆ, ಅದನ್ನು ಹೇಗೆ ಕಟ್ಟುನಿಟ್ಟಾಗಿ ಪರಿಪಾಲಿಸುತ್ತೇವೆ ಎಂದು ಕೊಚ್ಚಿಕೊಂಡ. ರೇಶ್ಮಾಳಂಥ ಆಧುನಿಕ, ಪ್ರಗತಿಪರ ವಿಚಾರಧಾರೆಯ ವಿದ್ಯಾವಂತ ಹೆಣ್ಣಿಗೆ ಇದನ್ನೆಲ್ಲ ಅರಗಿಸಿಕೊಳ್ಳುವುದು ಬಹಳ ಕಷ್ಟವೇ ಆಯಿತು.
ಹೆಚ್ಚುತ್ತಿರುವ ವಯಸ್ಸಿನ ಕಾರಣ ಆಗುವ ಮದುವೆಗಳು, ಗಂಡುಹೆಣ್ಣು ಒಂದು ಸೂರಿನಡಿ ವಾಸಿಸಲು ಸಾಮಾಜಿಕ ಮನ್ನಣೆ ನೀಡಿ ವಂಶ ಬೆಳೆಸಲು ಅನುಕೂಲ ಎಂಬುದು ನಿಜವಾದರೂ, ಆ ಹೆಣ್ಣಿನ ಮನದ ಕೋಮಲಭಾವ ಸದಾ ಗಂಡನನ್ನು ಉತ್ತಮ ಸಂಗಾತಿ, ಗೆಳೆಯ, ಪ್ರಿಯತಮನ ರೂಪದಲ್ಲಿ ಕಾಣಲು ಬಯಸುತ್ತದೆ. ಇಂಥ ಒಣ ಹರಟೆ ಹೊಡೆಯುವ ನಜೀರ್‌ನಂಥ ವ್ಯಕ್ತಿಯಿಂದ ರೇಶ್ಮಾ ಇದನ್ನೆಲ್ಲ ಬಯಸಲು ಸಾಧ್ಯವೇ?
ಮತ್ತೊಂದು ಸಲ ನಜೀರ್ ಫೋನ್ ಮಾಡಿದಾಗ, ತಾನು ಪೋಸ್ಟ್ ಗ್ರಾಜುಯೇಷನ್‌ನ ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯಲು ರಜೆ ಪಡೆಯುತ್ತಿರುವುದಾಗಿ ಹೇಳಿದ…. ಆದರೆ ಇವಳಿಗೆ ಅವನು ಪಿ.ಜಿ. ಎಂದೇ ಹೇಳಿದ್ದರು. ಇವಳು ಅಕಸ್ಮಾತಾಗಿ ಅವನ ಸರ್ಟಿಫಿಕೇಟ್ ಜೆರಾಕ್ಸ್ ಗಮನಿಸಿದಾಗ, ಅವನು ಕೊನೆ ಸೆಮಿಸ್ಟರ್ ಫೇಲ್ ಎಂದು ನಮೂದಾಗಿತ್ತು…. ಎಂಥ ಮೋಸ! ಬೇಕೆಂದು ಇವಳಿಗೆ ಸುಳ್ಳು ಹೇಳಿ ಅವಳನ್ನು ಒಪ್ಪಿಸಲಾಗಿತ್ತು. ಅವನ ಸದಾ ಬಡಬಡಿಕೆಯ ಮಾತುಗಳಿಂದಲೇ ಅವನು ಹೆಚ್ಚಾಗಿ ಸುಳ್ಳು ಹೇಳುವವನು, ಬರೀ ಆಶ್ವಾಸನೆಗಳ ಸರದಾರ ಎಂಬುದು ಗೊತ್ತಾಗಿತ್ತು.
ಇನ್ನೊಂದು ಸಲ ಮಾತನಾಡುತ್ತಾ ತಾನು ಖಾಸಗಿ ನೌಕರಿಯ ಶೋಷಣೆಗಳಿಂದ ಜರ್ಝರಿತನಾಗಿರುವೆ ಎಂದು ನೊಂದುಕೊಂಡ. ಈಗ ಆ ಕೆಲಸ ರಿಸೈನ್ ಮಾಡಿ ಮನೆಯಲ್ಲೇ ಕುಳಿತು ಅರ್ಥಶಾಸ್ತ್ರದ ಕುರಿತಾಗಿ ದೊಡ್ಡ ಪುಸ್ತಕ ಬರೆಯುತ್ತೇನೆ ಎಂದ.
“ಪುಸ್ತಕ ಬರೆಯುವುದಕ್ಕಾಗಿ ಇರುವ ಕೆಲಸ ಬಿಟ್ಟು ಮನೆಯಲ್ಲೇ ಕೂರಬೇಕು ಎನ್ನುವ ಅನಿವಾರ್ಯತೆ ಏನೂ ಇಲ್ಲ. ನಾನೂ ಕೆಲಸ ಮಾಡುತ್ತಲೇ ಇದೇ ವಿಷಯವಾಗಿ 2 ಪುಸ್ತಕ ಬರೆದಿದ್ದೇನೆ,” ಎಂದು ಅವಳು ಉತ್ತರಿಸಿದಳು.
ಅವಳ ಮಾತಿಗೆ ಉತ್ತರಿಸುವ ಗೋಜಿಗೆ ಹೋಗದೆ ಅವನು ವಿಷಯಾಂತರ ಮಾಡಿದ್ದ. ಅನುಭವ, ಪರಿಸ್ಥಿತಿಗಳು ಅವಳನ್ನು ವಯಸ್ಸಿನೊಂದಿಗೆ ಹೆಚ್ಚು ಘನ, ಗಂಭೀರ, ಗಟ್ಟಿಗೊಳಿಸಿದ್ದರೆ ಅವನು ಅದೇನೂ ಇಲ್ಲದೆ ಹರಿಹರೆಯದವರಂತೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದ. ಅವನ ಈ ಮೂರ್ಖ ನಿರ್ಧಾರ ನಜೀರ್ ಎಂಥ ಚಂಚಲ, ಅಪರಿಪಕ್ವ ಉಡಾಫೆ ಸ್ವಭಾದವನು ಎಂದು ನಿರೂಪಿಸಿತ್ತು.
ಹೀಗೆ ಒಂದು ಸಲ ಅವಳು ಕಾಲೇಜಿನ ಪರೀಕ್ಷೆ ಪೇಪರ್ಸ್ ತಿದ್ದುತ್ತಿದ್ದಾಗ, ಇದ್ದಕ್ಕಿದ್ದಂತೆ ಅವನ ಕಾಲ್ ಬಂತು. ಎಂದಿನಂತೆ ಕಾಮಾ, ಫುಲ್‌ಸ್ಟಾಪ್ ಇಲ್ಲದೆ ಬಾಯಿಗೆ ಬಂದಂತೆ ಬಡಾಯಿಕೊಚ್ಚಿದ.
“ಒಂದಂತೂ ನಿಜ, ನೀನು ನನ್ನನ್ನು ಒಪ್ಪಿ ಮದುವೆ ಆಗುತ್ತಿರುವುದು, ಇದು ಬಹಳ ಒಳ್ಳೆಯದೇ ಆಯಿತು. ನಮ್ಮಮ್ಮನ ಚಿಂತೆ ಶಾಶ್ವತ ಪರಿಹಾರ ಆಯ್ತು.”
“ಅದು ಹೇಗೆ?”
“ಏಕೆಂದರೆ ನನ್ನ ಎಲ್ಲಾ ಬೇಸಿಕ್ ನೀಡ್ಸ್ ನಿನ್ನಿಂದಲೇ ಪೂರೈಕೆ ಆಗಿಹೋಗುತ್ತದೆ.”
ಅದನ್ನು ಕೇಳಿ ಅವಳಿಗೆ ಭಾರಿ ಶಾಕ್ ತಗುಲಿತು. “ಬೇಸಿಕ್ ನೀಡ್ಸ್ ಅಂದ್ರೆ….. ಬಿಡಿಸಿ ಹೇಳಿ.”
ಅವನು ಅಟ್ಟಹಾಸದಿಂದ ನಗುತ್ತಾ, “ಊಟ, ವಸತಿ, ಮನೆ….”
ಇದನ್ನು ಕೇಳಿ ಅವಳು ಸ್ತಂಭೀಭೂತಳಾದಳು. ಭಾರತೀಯ ಕೌಟುಂಬಿಕ ಹಿನ್ನೆಲೆಯಲ್ಲಿ ಗಂಡಸಾದವನು ಮನೆ ಮಂದಿಗೆ ಇದನ್ನು ಒದಗಿಸಿ ದೊಡ್ಡ ಆಶ್ರಯವಾಗಿ ನಿಲ್ಲಬೇಕು. ಆದರೆ ಇಲ್ಲಿ ಈ ಗಂಡಸು ಉಲ್ಟಾ ಹೊಡೆಯುತ್ತಿದ್ದಾನಲ್ಲ……? ಬಿಟ್ಟಿಯಾಗಿ ಹೆಂಡತಿ ದುಡಿದು ಹಾಕಲಿ, ಅದನ್ನು ತಾನು ಮಜಾ ಮಾಡಿಕೊಂಡಿರೋಣ ಎಂದಲ್ಲವೇ ಅವನ ಹುನ್ನಾರ? ಇದಕ್ಕೆ ಮೊದಲೂ ಸಹ ಅವನು ರೇಶ್ಮಾಳನ್ನು ಅವಳ ಸಂಬಳ ಎಷ್ಟು, ಬ್ಯಾಂಕ್ ಬ್ಯಾಲೆನ್ಸ್ ಎಷ್ಟು, ಉಳಿತಾಯವನ್ನು ಯಾವ ರೀತಿ ಬ್ಯಾಂಕ್‌ನಲ್ಲಿ ಎಫ್.ಡಿ. ಮಾಡಿದ್ದಾಳೆ….. ಇತ್ಯಾದಿ ವಿಚಾರಿಸಿದಾಗ, ಮುಂದಿನ ಜೀವನಕ್ಕೆ ವಿಶೇಷ ಯೋಜನೆ ರೂಪಿಸುತ್ತಿರಬೇಕು ಅವನು ಎಂದು ಇವಳು ಪ್ರಾಮಾಣಿಕವಾಗಿ ಉತ್ತರಿಸಿದ್ದಳು. ಇದೀಗ ಅವನ ಯೋಜನೆ ಏನು ಎಂಬುದು ಸ್ಪಷ್ಟ ಗೊತ್ತಾಯಿತು.
ತಾನು ನಿರುದ್ಯೋಗಿ, ಆದಾಯವಿಲ್ಲ, ಭವಿಷ್ಯ ಪೂರ್ತಿ ಕುಳಿತು ಉಣ್ಣಲು ವಿದ್ಯಾವಂತ, ನೌಕರಿಯಲ್ಲಿರುವ ಹೆಂಡತಿಯೇ ಸರಿ ಎಂದು ಈ ಧೂರ್ತ ಹೆಚ್ಚು ಕಲಿತ, ತುಸು ಪ್ರೌಢೆಯಾದ ಇವಳನ್ನು ಮದುವೆಯಾಗುವ ಉದಾರತನ ತೋರಿದ್ದ. ಇದೀಗ ಅವನ ಕುತಂತ್ರ ಸ್ಪಷ್ಟ ಅರ್ಥವಾಗಿತ್ತು. ಅಂದೇ ಅವಳು ತಂದೆ, ಅಣ್ಣನಿಗೆ ಫೋನ್ ಮಾಡಿ ತಾನು ಈ ಎಂಗೇಜ್‌ಮೆಂಟ್ ಮುರಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿ ಅವನ ಧೂರ್ತ ದುರಾಲೋಚನೆ ಬಗ್ಗೆ ವಿವರವಾಗಿ ತಿಳಿಸಿದಳು. ಇವಳ ಮನೆಯವರು ಗಂಟಲಲ್ಲಿ ಚೆಂಡು ಸಿಕ್ಕಿಕೊಂಡಂತೆ ಚಡಪಡಿಸಿದರು.
ಮಾರನೇ ದಿನವೇ ಅವಳು ನಿಶ್ಚಿತಾರ್ಥದಲ್ಲಿ ಗಂಡಿನ ಕಡೆಯವರು ಕೊಟ್ಟಿದ್ದ ರೇಶ್ಮೆ ಸೀರೆ, ಒಡವೆ ವಸ್ತ್ರ, ಎಲ್ಲವನ್ನೂ ವಾಪಸ್ ಕಳುಹಿಸಿದಳು. ಸ್ವಾರ್ಥಿ, ಕಪಟಿ, ಸೋಮಾರಿ ಗಂಡಸನ್ನು ತನ್ನ ಗಂಡ ಎಂದು ಹೇಳಿಕೊಳ್ಳುವ ಬದಲು ಜೀವನವಿಡೀ ಅವಿವಾಹಿತೆಯಾಗಿಯೇ ಉಳಿಯಲು ನಿರ್ಧರಿಸಿದಳು.