ಸಾಮಾನ್ಯವಾಗಿ ಸಿನಿಮಾ ಹಾಡುಗಳಲ್ಲಿ ನಾಯಕ ನಾಯಕಿಯನ್ನು ಹೊಗಳುತ್ತಾ ಅವಳ ಸೌಂದರ್ಯದ ಗುಣಗಾನ ಮಾಡುತ್ತಾನೆ, ಅವಳು ಬೆಳ್ಳಗಿರುವುದರಿಂದಲೇ ಗೌರವರ್ಣ ಹೊಂದಿರುವುದರಿಂದಲೇ ಅಪ್ಸರೆಯಂಥ ಸೌಂದರ್ಯ ದೇವತೆಯಾಗಿದ್ದಾಳೆ ಇತ್ಯಾದಿ ವರ್ಣನೆ ಇದ್ದೇ ಇರುತ್ತದೆ. ಒಟ್ಟಾರೆ ಇದರ ತಾತ್ಪರ್ಯ ಹುಡುಗಿ ತೆಳ್ಳಗೆ ಬೆಳ್ಳಗೆ ಚೆನ್ನಾಗಿದ್ದರೆ ಮಾತ್ರ ಸೌಂದರ್ಯ, ಇಲ್ಲದಿದ್ದರೆ ಇಲ್ಲ ಎಂಬಂತೆಯೇ ಬಿಂಬಿಸಲಾಗುತ್ತದೆ. ಅದೇ ತರಹ ವೈವಾಹಿಕ ಅಂಕಣದಲ್ಲಿ `ವಧು ಬೇಕಾಗಿದೆ’ ಎಂಬಲ್ಲಿ `ಗೌರವರ್ಣ ಹೊಂದಿರುವ, ಸ್ಲಿಮ್ ಆದ, ಸುಂದರ ವಧು ಬೇಕು’ ಎಂಬುದೇ ಮುಖ್ಯವಾಗಿದ್ದು ಮಿಕ್ಕ ವಿವರಗಳು ನಂತರ.

ವರ ಕಪ್ಪಾಗಿದ್ದರೂ ಸರಿ, ವಧು ಮಾತ್ರ ಬೆಳ್ಳಗೇ ಇರಬೇಕೆಂಬ ಆದ್ಯತೆ ನೀಡಲಾಗುತ್ತದೆ. ಸಿನಿಮಾ ನಟಿ, ಮಾಡೆಲ್‌, ಟಿವಿ ಸೀರಿಯಲ್ ಆರ್ಟಿಸ್ಟ್, ಸೆಲೆಬ್ರಿಟೀಸ್‌ ಮುಂತಾದ ಕೆಲವರನ್ನು ಬಿಟ್ಟರೆ ಉಳಿದ ಸಾಮಾನ್ಯರೆಲ್ಲರೂ ಗೌರವರ್ಣ ಹೊಂದಿರಲೇಬೇಕು ಇಲ್ಲದಿದ್ದರೆ ಕುರೂಪಿಗಳು ಎಂದೇ ಪರಿಗಣಿಸುತ್ತಾರೆ. ಇದರಿಂದಾಗಿ ಸಹಜವಾಗಿಯೇ ತುಸು ಮಾಸಲು ಬಣ್ಣದ, ಕಪ್ಪಾದ ಹುಡುಗಿಯರು ಹೀನಭಾವನೆಯಿಂದ (ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್) ತಾವು ಅಂದವಿಲ್ಲ ಎಂದು ಕುಗ್ಗಿಹೋಗುತ್ತಾರೆ. ಅದರಲ್ಲೂ ವಧು ಪರೀಕ್ಷೆ ಎುರಿಸಬೇಕಾದ ಈ  ಹುಡುಗಿಯರು ಹಲವು ಕಠಿಣಕರ ಹಂತಗಳನ್ನು ದಾಟಬೇಕಾಗುತ್ತದೆ.

ಈ ಶ್ಯಾಮಲ ಸೌಂದರ್ಯದ ಕಾರಣ ಹುಡುಗಿಯರು ಮಾತ್ರ ಅಲ್ಲದೆ, ಹುಡುಗರೂ ಸಹ ಹಲವು ಸಲ ತೊಂದರೆಗಳನ್ನು ಎದುರಿಸುತ್ತಾರೆ. ಅವರಲ್ಲೂ ಈ ಹೀನಭಾವನೆ ಕಾಡುತ್ತಿರುತ್ತದೆ.

ಕಾಳಿದಾಸನು ತನ್ನ ಕಾವ್ಯಗಳಲ್ಲಿ ನಾಯಕಿಯರ ಶ್ಯಾಮಲ ಸೌಂದರ್ಯಕ್ಕೆ ಮಹತ್ವ ನೀಡಿದ್ದಾನೆ. ತಮಿಳರ ಕಂಬ ರಾಮಾಯಣದಲ್ಲಿ ಸೀತೆ ಗೌರವರ್ಣಕ್ಕೆ ಬದಲಾಗಿ ಶ್ಯಾಮಲ ಸುಂದರಿಯಾಗಿದ್ದಾಳೆ. ಕೃಷ್ಣನ ಬಣ್ಣ ಸಹ ಕಪ್ಪು. ಜಯದೇವ ಕವಿಯ `ಗೀತ ಗೋವಿಂದ’ ಕಾವ್ಯದಲ್ಲಿ ರಾಧೆಯೂ ಕಪ್ಪಾಗಿದ್ದಾಳೆ. ಪುರಾಣ ಕಾಲದಿಂದಲೂ ಮಹಿಳೆಯರು ಸೌಂದರ್ಯ ಸಂವರ್ಧನೆಗಾಗಿ ಹಾಲು, ಕೆನೆ ಪದರ, ಚಂದನ, ಅರಿಶಿನ ಇತ್ಯಾದಿ ಬಳಸುತ್ತಿದ್ದರು. ಇವು ಗೌರವರ್ಣ ತಂದುಕೊಡುವ ಬದಲು ಅವರ ಚರ್ಮಕ್ಕೆ ಹೆಚ್ಚಿನ ಕಾಂತಿ ನೀಡುತ್ತಿದ್ದವು. ಇಂಥ ಗೌರವರ್ಣದ ಹುಚ್ಚು ನಮ್ಮ ಜನಕ್ಕೆ ಯಾವಾಗಿನಿಂದ ಬಂದಿತು?

ಭಾರತೀಯ ಇತಿಹಾಸ ಗಮನಿಸಿದರೆ ಆರ್ಯರು ಬಂದ ನಂತರ ಗೌರವರ್ಣವನ್ನು ಸೌಂದರ್ಯದೊಂದಿಗೆ ಬೆರೆಸಿ ನೋಡಲಾಗುತ್ತಿತ್ತು. ಆ ನಂತರ ಮಂಗೋಲ್, ಪರ್ಶಿಯನ್‌, ಬ್ರಿಟಿಷ್‌ ಮುಂತಾದ ಆಡಳಿತ ನಡೆಸಿದವರೆಲ್ಲ ಗೌರವರ್ಣದವರೇ ಆಗಿದ್ದರು. ಅಲ್ಲಿಂದ ಮುಂದೆ ಭಾರತೀಯರ ಮನದಲ್ಲಿ ಗೌರವರ್ಣವೇ ಹಿರಿದು ಎಂಬ ಭಾವ ಅಚ್ಚೊತ್ತಿಬಿಟ್ಟಿದೆ.

ಹೆಣ್ಣುಮಕ್ಕಳ ಜೀವನದಲ್ಲಿ ಮದುವೆ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಹೀಗಾಗಿ ತಾನು ಸೌಂದರ್ಯವತಿಯಾಗಿ, ಸುಂದರವಾಗಿ ಕಂಗೊಳಿಸಬೇಕೆಂಬ ಧಾವಂತದಲ್ಲಿ ಅವರು ಬಗೆಬಗೆಯ ಪೌಡರ್‌, ಫೌಂಡೇಶನ್‌, ಫೇರ್‌ನೆಸ್‌ ಕ್ರೀಂ ಇತ್ಯಾದಿ ಬಳಸುತ್ತಾರೆ. ಸಿನಿಮಾ, ಟಿವಿ, ಜಾಹೀರಾತುಗಳಲ್ಲಿ ಗೌರವರ್ಣದ ಹುಡುಗಿಯರಿಗೆ ಮಾತ್ರ ಆದ್ಯತೆ. ಸಮಾಜದಲ್ಲಿ ಗೌರವರ್ಣಕ್ಕಿರುವ ಮಹತ್ವ ಹಾಗೂ ಸಾಮಾನ್ಯರಲ್ಲಿ ಈ ಕುರಿತು ಉಳಿದುಕೊಂಡಿರುವ ದೌರ್ಬಲ್ಯ ಗಮನಿಸಿಕೊಂಡೇ ಫೇರ್‌ನೆಸ್‌ ಕ್ರೀಂ ಕಂಪನಿಯವರು ತರತರಹದ ಕ್ರೀಂ ಒದಗಿಸುತ್ತಾ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ. ಈಗಂತೂ ಹುಡುಗಿಯರಿಗೆ ಮಾತ್ರವಲ್ಲದೆ, ಹುಡುಗರಿಗೂ ಸಹ ಪ್ರತ್ಯೇಕ ಫೇರ್‌ನೆಸ್‌ ಕ್ರೀಂ ಬಂದಿದೆ. ಇಂಥ ಕ್ರೀಂ ಮತ್ತು ಕಾಸ್ಮೆಟಿಕ್ಸ್ ಕಂಪನಿಯ ಮಾರುಕಟ್ಟೆ ಸರಿಸುಮಾರು 3 ಸಾವಿರ ಕೋಟಿ ರೂ.ಗಳ ವಾರ್ಷಿಕ ವಹಿವಾಟಿದ್ದು, ಒಂದು ಅಂದಾಜಿನ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಇದು 5 ಸಾವಿರ ಕೋಟಿ ದಾಟಲಿದೆ!

ಕೆಲವು ವರ್ಷಗಳ ಹಿಂದಿನಿಂದಲೇ `ಡಾರ್ಕ್‌ ಈಸ್‌ ಬ್ಯೂಟಿಫುಲ್’ ಎಂಬ ಆಂದೋಲನ ಶುರುವಾಗಿತ್ತು. ಖುಷಿಯ ವಿಚಾರವೆಂದರೆ, ಕೆಲವು ವರ್ಷಗಳಿಂದ ಸಮಾಜದ ದೃಷ್ಟಿ ಈ ಡಾರ್ಕ್‌ ಕಲರ್‌, ಶ್ಯಾಮಲ ವರ್ಣದವರ ಕಡೆ ಬದಲಾಗಿದೆ ಎನ್ನಬಹುದು. ಓದುಬರಹ ಕಲಿತ ವ್ಯಕ್ತಿ ಕೇವಲ ಚರ್ಮದ ಬಣ್ಣವನ್ನಷ್ಟೇ ಸಂಪೂರ್ಣ ವ್ಯಕ್ತಿತ್ವದ ಮಾನದಂಡ ಎಂದು ಭಾವಿಸುವುದಿಲ್ಲ. ಕೆಲವು ಸುಪ್ರಸಿದ್ಧ ಕಲಾವಿದರೂ ಸಹ `ಡಾರ್ಕ್‌ ಈಸ್‌ ಬ್ಯೂಟಿಫುಲ್’ ಆಂದೋಲನದೊಂದಿಗೆ ಕೈ ಜೋಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಕೆಲವು ಪ್ರಸಿದ್ಧ ಕಲಾವಿದರು ಫೇರ್‌ನೆಸ್‌ ಕ್ರೀಂ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಈಗಲೂ ಸಹ ಬಹುತೇಕ ಹುಡುಗಿಯರು ಈ ಫೇರ್‌ನೆಸ್‌ ಮಾಯಾಜಾಲದಿಂದ ಹೊರಬರಲು ಆಗಿಲ್ಲ.

ಈಗ ನಿಧಾನವಾಗಿ ಸತ್ಯ ಎಂಬುದು ಎದುರಿಗೆ ಬರುತ್ತಿದೆ, ಅಂದ್ರೆ ಯಾವುದೇ ಫೇರ್‌ನೆಸ್‌ ಕ್ರೀಂ ಸೌಂದರ್ಯಕ್ಕೆ ಪರ್ಯಾಯವಲ್ಲ ಎಂಬುದು.

ಡಾರ್ಕ್‌ ಕಲರ್‌ನಿಂದ ಗಾಬರಿಗೊಳ್ಳಲು ಏನೂ ಇಲ್ಲ. ಇದು ನಿಮ್ಮ ಚರ್ಮದ ನೈಸರ್ಗಿಕ ಬಣ್ಣವಾಗಿದ್ದರೆ, ಅದು ಶಾಶ್ವತವಾಗಿ ನಿಮ್ಮೊಂದಿಗೆ ಇದ್ದೇ ಇರುತ್ತದೆ. ನೀವು ಆಂತರಿಕವಾಗಿ ಸಶಕ್ತರಾಗಿದ್ದರೆ ಯಾರೂ ನಿಮ್ಮನ್ನು ಕೀಳಾಗಿ ಕಾಣಲಾಗದು. ನಿಮ್ಮ ಯೋಗ್ಯತೆ ನಿಮಗೆ ಇದ್ದೇ ಇರುತ್ತದೆ. ನೀವು ನಿಮ್ಮ ಗಮನವನ್ನು ಇತರ ಪ್ರೊಡಕ್ಟಿವ್‌ & ಕನ್‌ಸ್ಟ್ರಕ್ಟಿವ್ ಕೆಲಸಗಳತ್ತ ಇರಿಸಿಕೊಳ್ಳಿ. ಈ ಕೆಲವು ವಿಷಯಗಳತ್ತ ಗಮನ ನೀಡಿ, ನಿಮಗೆ ಆತ್ಮವಿಶ್ವಾಸ ತಾನಾಗಿ ಹೆಚ್ಚುತ್ತದೆ :

ನಿಮ್ಮ ಶಕ್ತಿ ಗುರುತಿಸಿ : ನಿಮ್ಮ ಬಣ್ಣ ನಿಮ್ಮ ಸಂಪೂರ್ಣ ವ್ಯಕ್ತಿತ್ವಕ್ಕೆ ವ್ಯಾಖ್ಯಾನ ಒದಗಿಸಲಾರದು. ಖಂಡಿತವಾಗಿಯೂ ನಿಮ್ಮಲ್ಲಿ ಇನ್ನೂ ಹಲವು ಉತ್ತಮ ಗುಣ, ವೈಶಿಷ್ಟ್ಯಗಳು ತುಂಬಿದ್ದು, ಅದರ ಮುಂದೆ ಈ ಮಾಸಲು ಅಥವಾ ಶ್ಯಾಮಲ ಸೌಂದರ್ಯ ಗೌಣವಾಗುತ್ತದೆ. ನಿಮ್ಮಲ್ಲಿ ಅಡಗಿರುವ ಇಂಥ ಶಕ್ತಿಯನ್ನು ಗುರುತಿಸಿ. ಅದು ಹೊರಹೊಮ್ಮುವಂತೆ ಮಾಡಿ. ಅಂದ್ರೆ ಅದು ನಿಮ್ಮ ಕಲಾಪ್ರತಿಭೆ, ಆಟೋಟ, ಸಂಗೀತ ಇತ್ಯಾದಿ ಯಾವುದೇ ಆಗಿರಬಹುದು. ಈ ರೀತಿ ನೀವು ನಿಮ್ಮಲ್ಲಿ ಸಕಾರಾತ್ಮಕ ವಿಚಾರಗಳನ್ನು ರೂಢಿಸಿಕೊಳ್ಳಿ.

ನಿಮ್ಮ ಚರ್ಮದ ಬಣ್ಣವನ್ನು ಪ್ರೀತಿಸಿ : ಇದು ಹೇಳಿದಷ್ಟು ಸುಲಭ ಅಲ್ಲವಾದರೂ ಪ್ರಯತ್ನಿಸಿ ರೂಢಿಸಿಕೊಳ್ಳಬೇಕಷ್ಟೆ. ಇತರರಿಗೆ ಹೋಲಿಸಿದಾಗ ನಿಮ್ಮ ಶ್ಯಾಮಲ ವರ್ಣದವರ ಮೇಲೆ ಚಿನ್ನದ ಆಭರಣಗಳು ಹೇಗೆ ಫಳಫಳ ಹೊಳೆಯುತ್ತವೆ ಎಂದು ಆನಂದಿಸಿ. ಅದೇ ರೀತಿ ಅನ್ಯರ ಚರ್ಮದ ಮೇಲೆ ಕಾಣಿಸಿಕೊಳ್ಳುವ ಚರ್ಮದ ಮೈನಸ್‌ ಪಾಯಿಂಟ್ಸ್ ನಿಮ್ಮಲ್ಲಿ ಕಂಡುಬರದು. ಹಾಗೆಯೇ ಮೆಲನಿನ್‌ ಕಾರಣ ನಿಮ್ಮ ಮೈ ಚರ್ಮ ಕಪ್ಪಾಗಿರುವುದರಿಂದ (ಇದು ಜನ್ಮತಃ ಬಂದದ್ದು, ನಿಮ್ಮ ದೋಷದಿಂದಲ್ಲ) ಅದು ಸಹಜವಾಗಿಯೇ ಹೆಚ್ಚು ಆರೋಗ್ಯಕರವಾಗಿರುತ್ತದೆ. ಬೆಳ್ಳಗಿನ ಚರ್ಮ ಎಂದ ಮಾತ್ರಕ್ಕೆ ಸೌಂದರ್ಯ ಸುರಿದು ಹೋಗದು.

ಚರ್ಮದ ಬಣ್ಣದ ಹೊರತಾಗಿ ಮುಖದಲ್ಲಿ ಕಳೆ ಇರಬೇಕಾದುದು ಬಲು ಮುಖ್ಯ. ಹಾಗೆಯೇ ಇಡೀ ದೇಹದ ಮೈಕಟ್ಟು, ಕೂದಲು ಇತ್ಯಾದಿ ಸಹ ತಮ್ಮದೇ ಆದ ಪ್ರಾಮುಖ್ಯತೆ ಹೊಂದಿವೆ. ಈ ವಿಷಯದಲ್ಲಿ ಶ್ಯಾಮಲ ಸೌಂದರ್ಯ ಉಳ್ಳವರು ಎಚ್ಚರಿಕೆಯಿಂದಿರಬೇಕು.

ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವಂಥ ಮೇಕಪ್‌ ಮಾಡಿ : ನೀವು ಬೇರೆ ಬೇರೆ ಸಮಯ ಸಂದರ್ಭಕ್ಕಾಗಿ ಬೇರೆ ಬೇರೆ ರೀತಿಯ ಮೇಕಪ್‌ನಲ್ಲಿ ನಿಮ್ಮ ಫೋಟೋ ಗಮನಿಸಿ. ಆಗ ನಿಮಗೆ ಯಾವ ಸಂದರ್ಭದ ಮೇಕಪ್‌ ಎಲ್ಲಕ್ಕಿಂತ ಬೆಸ್ಟ್ ಎಂಬುದು ನಿಮಗೇ ಗೊತ್ತಾಗುತ್ತದೆ. ಯಾವ ತರಹದ ಫೌಂಡೇಶನ್‌ ಕ್ರೀಂ, ಕಾಸ್ಮೆಟಿಕ್ಸ್ ನಿಮಗೆ ಹೊಂದುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕಾಗಿ ಅಂಗಡಿಯ ಸೇಲ್ಸ್ ಗರ್ಲ್ಸ್ ಸಹಾಯ ಖಂಡಿತಾ ಕೇಳಬೇಡಿ. ತನ್ನ ವ್ಯಾಪಾರ ಸುಧಾರಿಸಲು ಅವಳು ನಿಮಗೆ ಬಣ್ಣದ ಮಾತುಗಳನ್ನೇ ಹೇಳುತ್ತಾಳೆ. ಈ ಮಾತು ನಿಮ್ಮ ಡ್ರೆಸ್‌ಗೂ ಅನ್ವಯಿಸುತ್ತದೆ. ಯಾವ ತರಹದ ಡ್ರೆಸ್‌ ನಿಮಗೆ ಪಾರ್ಟಿ, ಸಮಾರಂಭಗಳಲ್ಲಿ ಚೆನ್ನಾಗಿ ಒಪ್ಪುತ್ತದೆ ಎಂದು ಗೊತ್ತಾಗುತ್ತದೋ ಅಂಥವನ್ನೇ ಕೊಳ್ಳಿರಿ.

ಬೇರೆಯವರೊಂದಿಗೆ ಹೋಲಿಸದಿರಿ : ಯಾರಿಗೆ ಆತ್ಮವಿಶ್ವಾಸ ಮತ್ತು ಮನೋಬಲ ಕಡಿಮೆ ಇರುತ್ತದೋ, ಅಂಥವರು ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಇನ್ನಷ್ಟು ಕುಗ್ಗುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನೀವು ಗಮನಿಸಿದಂತೆ, ಯಾರು ಸ್ವಾಭಿಮಾನದಿಂದ ಬಂದ ಕಷ್ಟಗಳನ್ನು ಎದುರಿಸಿ ತಮ್ಮ ಜೀವನದಲ್ಲಿ ಯಶಸ್ವಿ ಎನಿಸಿರುತ್ತಾರೋ ಅವರೆಂದೂ ಇಂಥ ಕೃತಕ ಮೇಕಪ್‌ನ ಮೊರೆ ಹೋಗಿರಲಿಲ್ಲ. ಪ್ರತಿಯೊಬ್ಬರ ಸಮಸ್ಯೆ ಹಾಗೂ ದೃಷ್ಟಿಕೋನ ಬೇರೆ ಬೇರೆ ಆಗಿರುತ್ತದೆ. ಇತ್ತೀಚೆಗಂತೂ ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಶ್ಯಾಮಲ ಹುಡುಗಿಯರು ಯಶಸ್ವೀ ಆಗಿರುವುದನ್ನು ಗಮನಿಸಬಹುದು.  ವಿಶ್ವ ಸುಂದರಿ ಅಥವಾ ಒಲಂಪಿಕ್‌ ಸ್ಪರ್ಧೆಗಳಲ್ಲಿ ಡಾರ್ಕ್‌ ಕಲರ್‌ ಹುಡುಗಿಯರು ಯಶಸ್ವಿ ಎನಿಸುತ್ತಿದ್ದಾರೆ. ಅಂಥವರಿಂದ ಪ್ರೇರಣೆ ಪಡೆಯಿರಿ.

ಮಾಯಾಜಾಲಕ್ಕೆ ಸಿಲುಕಬೇಡಿ : ಮೀಡಿಯಾದಲ್ಲಿ ಫೇರ್‌ನೆಸ್‌ ಕ್ರೀಂ ಅಥವಾ ಇನ್ನಿತರ ಕಾಸ್ಮೆಟಿಕ್ಸ್ ಗಳ ಪ್ರಚಾರ ಬಲು ಜೋರಾಗಿರುತ್ತದೆ. ಅವರು ಬೇಕೆಂದೇ ಕಪ್ಪು ಬಣ್ಣದವರು ತಮ್ಮ ಮನದಲ್ಲಿ ಹೊಂದಿರುವ ಭಯ, ಹೀನಭಾವನೆಗಳನ್ನು ಎನ್‌ಕ್ಯಾಶ್‌ ಮಾಡಿಕೊಳ್ಳ ಬಯಸುತ್ತಾರೆ. ಅವರ ಕೆಲಸವೆಂದರೆ ವ್ಯಾಪಾರ ಒಂದೇ. ಅವರಿವರ ಜಾಹೀರಾತು ನಂಬಿ ನೀವು ನಿಮ್ಮತನ ಕಳೆದುಕೊಳ್ಳಬೇಡಿ. ಮುಂದೆ ಶ್ಯಾಮಲ ಸೌಂದರ್ಯವೇ ಹಿರಿದು ಎಂದಾದರೆ ಅದನ್ನು ಎತ್ತಿಹಿಡಿಯುವ ಕ್ರೀಂ ಬಂದರೂ ಆಶ್ಚರ್ಯವಿಲ್ಲ.

ಟೀಕೆ ಟಿಪ್ಪಣಿಗಳನ್ನು ಧೈರ್ಯವಾಗಿ ಎದುರಿಸಿ : ನಿಮ್ಮ ಚರ್ಮದ ಬಣ್ಣ ನೋಡಿ ಟೀಕೆ ಟಿಪ್ಪಣಿ ಮಾಡುವವರಿಗೆ, ವ್ಯಂಗ್ಯವಾಗಿ ಆಡಿಕೊಳ್ಳುವವರಿಗೆ ಎಂದೂ ಸೊಪ್ಪು ಹಾಕಬೇಡಿ. ಅವರಿಗೆ ಸಡ್ಡುಹೊಡೆದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಆಡಿಕೊಳ್ಳುವವರನ್ನು ಯಾರೂ ತಡೆಯಲಾಗದು. `ಅಹಂಕಾರಕ್ಕೆ ಉದಾಸೀನವೇ ಮದ್ದು’ ಎಂಬುದೊಂದೇ ಇದಕ್ಕೆ ರಾಮಬಾಣ. ಇದರಿಂದ ಎಂದೂ ವಿಚಲಿತರಾಗಬೇಡಿ. ನೆನಪಿಡತಕ್ಕ ಒಂದು ಮಾತು ಎಂದರೆ, ನಿಮ್ಮ ಆಂತರಿಕ ಶಕ್ತಿ, ಮುನ್ನುಗ್ಗುವ ಗುಣವೇ ಮುಖ್ಯ. ಆಕಳು ಕಪ್ಪಾದರೂ ಅದರ ಹಾಲು ಕಪ್ಪಲ್ಲ. `ಅಂದ ನೋಡಿದೆರೆ ಅರೆದು ಕುಡಿಯಬೇಕು, ಗುಣ ನೋಡಿದರೆ ಗುದ್ದಿಕೊಂಡು ಸಾಯಬೇಕು,’ ಎಂಬಂಥ ಗೌರವರ್ಣದವರಿಗಿಂತ ನೀವು ನೀವಾಗಿರಿ!

– ಟಿ. ಶಕುಂತಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ