ಸುಂದರ ತ್ವಚೆಯ ರಹಸ್ಯ ಅದರ ಸೂಕ್ತ ಆರೈಕೆಯಲ್ಲಿ ಅಡಗಿದೆ. ಹವಾಮಾನದ ಬದಲಾವಣೆಯ ಪ್ರಭಾವ ಚರ್ಮದ ಮೇಲೆಯೇ ಆಗುತ್ತದೆ. ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದಾಗಿ ಚರ್ಮ ಶುಷ್ಕ ಮತ್ತು ನಿರ್ಜೀವವಾಗಿ ತೋರುತ್ತದೆ. ಇದಕ್ಕಾಗಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಚರ್ಮದ ವಿಶೇಷ ಆರೈಕೆಯ ಜೊತೆಗೆ ನಿಮ್ಮ ದಿನಚರಿಯನ್ನೂ ಬದಲಿಸಬೇಕಾಗುತ್ತದೆ.
ವಿಂಟರ್ ಸ್ಕಿನ್‌ಕೇರ್
ನಿಮ್ಮದು ಶುಷ್ಕ ಚರ್ಮವಾದರೆ, ಮುಖವನ್ನು ಸೋಪು ಅಥವಾ ನೀರಿನಿಂದ ತೊಳೆಯಬೇಡಿ. ಬದಲಾಗಿ ಆ್ಯಲೋವೆರಾಯುಕ್ತ ಕ್ಲೆನ್ಸಿಂಗ್ ಜೆಲ್ ಬಳಸಿ. ಇದನ್ನು ಚರ್ಮಕ್ಕೆ ಹಚ್ಚಿ ನಂತರ ಹತ್ತಿಯಿಂದ ಸ್ವಚ್ಛಗೊಳಿಸಿ. ಇದು ತೇವಾಂಶವನ್ನು ಸರಿದೂಗಿಸಿ ಚರ್ಮವನ್ನು ಸ್ವಚ್ಛವಾಗಿರಿಸಬಲ್ಲದು.
ಆಯ್ಲಿ ಸ್ಕಿನ್ ಆದರೆ ತುಳಸಿ ಅಥವಾ ಚಂದನ ಕ್ಲೆನ್ಸಿಂಗ್ ಲೋಶನ್‌ಯುಕ್ತ ಫೇಸ್‌ವಾಶ್ ಬಳಸಿ. ಕ್ಲೆನ್ಸಿಂಗ್ ನಂತರ ಟೋನಿಂಗ್‌ಗಾಗಿ ರೋಸ್‌ವಾಟರ್ ಉಪಯೋಗಿಸಿ. ಹತ್ತಿಯನ್ನು ಇದರಲ್ಲಿ ಅದ್ದಿ ಅದರಿಂದ ಚರ್ಮವನ್ನು ಸ್ವಚ್ಛಗೊಳಿಸಿ.
ರೋಸ್‌ವಾಟರ್ ಒಂದು ಒಳ್ಳೆಯ ನೈಸರ್ಗಿಕ ಸ್ಕಿನ್ ಟೋನರ್ ಆಗಿದ್ದು, ಎಲ್ಲಾ ಪ್ರಕಾರಗಳ ತ್ವಚೆಗೂ ಸೂಕ್ತವಾಗಿರುತ್ತದೆ. ಶುಷ್ಕ ಚರ್ಮದ ಪೋಷಣೆಗೂ ರಾತ್ರಿ ಸಮಯದಲ್ಲಿ ಕ್ಲೆನ್ಸಿಂಗ್ ಮಾಡಿ. ಇದರಿಂದ ಚರ್ಮದಲ್ಲಿ ತೇವಾಂಶ ಉಳಿಯುವಂತಾಗುತ್ತದೆ. ಮುಖಕ್ಕೆ ಕ್ರೀಮ್ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ. ನಂತರ ಒದ್ದೆ ಹತ್ತಿಯಿಂದ ಸ್ವಚ್ಛಗೊಳಿಸಿ.
ಮಾಯಿಶ್ಚರೈಸರ್‌ನಿಂದ ಚರ್ಮವನ್ನು ಸುರಕ್ಷಿತವಾಗಿರಿಸಬಹುದು. ನೀವು ಹಗಲಿನಲ್ಲಿ ಹೊರಗೆ ಹೋಗಬೇಕಾಗಿದ್ದರೆ ಸನ್‌ಸ್ಕ್ರೀನ್ ಹಚ್ಚಿ. ಸೂರ್ಯನ ಕಿರಣಗಳು ಚರ್ಮದ ತೇವಾಂಶವನ್ನು ಹೀರಿಬಿಡುತ್ತವೆ. ನಿಮ್ಮದು ತೈಲೀಯ ತ್ವಚೆ ಎಂದರೆ, ಸನ್‌ಸ್ಕ್ರೀನ್, ಜೆಲ್ ಬಳಸಿ, ಕ್ರೀಮ್ ಬಳಕೆಯನ್ನು ಕಡಿಮೆಗೊಳಿಸಿ. ಏಕೆಂದರೆ ಕ್ರೀಮಿನಿಂದ ಚರ್ಮರಂಧ್ರಗಳು ಮುಚ್ಚಿಕೊಂಡು ಮೊಡವೆ ಏಳಲು ಕಾರಣವಾಗುತ್ತದೆ.
ನಿಯಮಿತವಾಗಿ ಫೇಶಿಯಲ್ ಮಾಸ್ಕ್ ಬಳಸುತ್ತಿರಿ. 2 ಚಮಚ ಗೋಧಿ ತೌಡು, 1-1 ಚಮಚ ಬಾದಾಮಿ ಎಣ್ಣೆ, ಜೇನುತುಪ್ಪ, ಮೊಸರು ಮತ್ತು ರೋಸ್ ವಾಟರ್‌ಗಳನ್ನು ಸೇರಿಸಿ ನೀವು ಮನೆಯಲ್ಲಿಯೇ ಮಾಸ್ಕ್ ಸಿದ್ಧಪಡಿಸಿಕೊಳ್ಳಬಹುದು. ಈ ಮಿಶ್ರಣವನ್ನು ವಾರದಲ್ಲಿ 2-3 ಸಲ ಚರ್ಮಕ್ಕೆ ಹಚ್ಚಿ. 20-30 ನಿಮಿಷಗಳ ನಂತರ ಮುಖ ತೊಳೆಯಿರಿ.
ಮುಖದ ಇತರೆ ಭಾಗಗಳ ಆರೈಕೆ
ನೀವು ಮುಖದ ಇತರೆ ಭಾಗಗಳ ಆರೈಕೆಯ ಕಡೆಗೂ ಗಮನಹರಿಸಬೇಕು. ತುಟಿಯ ಚರ್ಮ ತೆಳುವಾಗಿದ್ದು, ಅಲ್ಲಿ ತೈಲ ಗ್ರಂಥಿಗಳ ಕೊರತೆ ಇರುತ್ತದೆ. ಹೀಗಾಗಿ ತುಟಿಗಳು ಒಣಗಿರುತ್ತವೆ ಮತ್ತು ಚಳಿಗಾಲದಲ್ಲಿ ಬಿರುಕು ಬಿಡುತ್ತದೆ.
ಮುಖ ತೊಳೆದ ನಂತರ ನಿರ್ಜೀವ ಚರ್ಮವನ್ನು ನಿವಾರಿಸಲು ಒದ್ದೆ ಬಟ್ಟೆಯಿಂದ ತುಟಿಗಳನ್ನು ಮೃದುವಾಗಿ ಉಜ್ಜಿರಿ. ದಿನ ತುಟಿಗಳಿಗೆ ಕೆನೆ ಹಚ್ಚಿರಿ. 1 ಗಂಟೆಯ ನಂತರ ತೊಳೆಯಿರಿ. ತುಟಿ ಕಪ್ಪಗಿದ್ದರೆ ಕೆನೆಯ ಜೊತೆಗೆ ಕೊಂಚ ನಿಂಬೆರಸ ಸೇರಿಸಿ. ತುಟಿಗೆ ದಿನ ರಾತ್ರಿ ಬಾದಾಮಿ ಎಣ್ಣೆ ಅಥವಾ ಬಾದಾಮಿ ಕ್ರೀಮ್ ಲೇಪಿಸಿ. ಮ್ಯಾಟ್ ಲಿಪ್‌ಸ್ಟಿಕ್ ಬಳಸಬೇಡಿ.
ಕಾಲಿನ ಒಣ ಚರ್ಮ ಮತ್ತು ಒಡೆದ ಹಿಮ್ಮಡಿಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ರಾತ್ರಿ ಮಲಗುವ ಮೊದಲು ಸುಮಾರು 20 ನಿಮಿಷಗಳ ಕಾಲ ಕಾಲುಗಳನ್ನು ಉಪ್ಪು ಮತ್ತು ಶ್ಯಾಂಪೂ ಬೆರೆಸಿದ ಬಿಸಿನೀರಿನಲ್ಲಿರಿಸಿ. ಬಿಸಿ ನೀರು ಮೃತ ಜೀವಕೋಶಗಳನ್ನು ಮೃದುಗೊಳಿಸುತ್ತದೆ. ಹೀಲ್ ಸ್ಕ್ರಬರ್‌ನಿಂದ ಹಿಮ್ಮಡಿಯನ್ನು ಉಜ್ಜಿ ಮೃತ ಜೀವಕೋಶಗಳನ್ನು ನಿವಾರಿಸಿ.
ಕಾಲುಗಳನ್ನು ತೊಳೆದ ನಂತರ ಕ್ರೀಮ್ ನಿಂದ ಹಿಮ್ಮಡಿಗಳನ್ನು ಮಸಾಜ್ ಮಾಡಿ, ಮಾಯಿಶ್ಚರೈಸಿಂಗ್ ಕ್ರೀಮ್ ಅಥವಾ ವ್ಯಾಸಲಿನ್ ಹಚ್ಚಿ. ತೆಳುವಾದ ಬಟ್ಟೆಯನ್ನು ಸುತ್ತಿ ಹತ್ತಿಯ ಕಾಲುಚೀಲ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಕ್ರೀಮ್ ಹಿಮ್ಮಡಿಯಲ್ಲೇ ಉಳಿದಿರುತ್ತದೆ ಮತ್ತು ಹಾಸಿಗೆಗೆ ತಗಲುವುದಿಲ್ಲ. ರಾತ್ರಿ ಇಡೀ ಉಳಿದಿರುವುದರಿಂದ ಅದು ಚರ್ಮವನ್ನು ಮೃದುಗೊಳಿಸುತ್ತದೆ.
– ಜಿ. ಸುನಂದಾ