ಇತ್ತೀಚೆಗೆ ಬೆಂಗಳೂರಿನ ಬಾಣಸವಾಡಿ ಬಳಿಯ ಕಲ್ಯಾಣನಗರದ `ಸ್ನೇಹ ಸೌರಭ’ ಮಹಿಳಾ ಮಂಡಳಿಗೆ ಗೃಹಶೋಭಾ ತಂಡ ಭೇಟಿ ನೀಡಿ, ಅವರ ಫೆಸ್ಟಿವಲ್‌ ಮೂಡ್‌ಗೆ ಒಪ್ಪುವ ಗೆಟ್‌ ಟು ಗೆದರ್‌ ಪಾರ್ಟಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿತು. ಮಹಿಳಾ ಮಂಡಳಿಗಳಲ್ಲಿ ನಿಜಕ್ಕೂ `ಸ್ನೇಹ ಸೌರಭ’ ಆದರ್ಶಪ್ರಾಯ ಎಂದರೆ ಉತ್ಪ್ರೇಕ್ಷೆಯಲ್ಲ. ಸುಮಾರು 100ಕ್ಕೂ ಹೆಚ್ಚಿನ ಲಲನಾಮಣಿಗಳ ಸದಸ್ಯರಿವರು.

`ಸ್ನೇಹ ಸೌರಭ’ದಲ್ಲಿ ಗೃಹಿಣಿಯರೇ ಹೆಚ್ಚು. ತಮ್ಮ ಬಿಡುವಿನ ವೇಳೆಯನ್ನು ವೃಥಾ ಕಾಡುಹರಟೆಯಲ್ಲಿ ಕಳೆಯದೆ ಒಂದು ಕಡೆ ಅಚ್ಚುಕಟ್ಟಾಗಿ ಮಹಿಳಾ ಸಂಘ ನಡೆಸುವ ಮೂಲಕ ಸಮಯದ ಸದುಪಯೋಗ ಪಡೆಯುವ ಇವರುಗಳು ನಾಡಿನ ಇತರ ಮಹಿಳೆಯರಿಗೆ ಆದರ್ಶಪ್ರಾಯರಾಗಿ ಇದ್ದಾರೆ.

ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಈ ಸಂಸ್ಥೆ, ಹೆಂಗಸರಿಗೆ ಉಪಯುಕ್ತವಾಗುವಂಥ ಅನೇಕ ಪ್ರತಿಭಾಪೂರ್ಣ ಕಲೆ ಬೆಳಕಿಗೆ ಬರಲು ಸಹಕರಿಸಿದೆ. ಹೊಲಿಗೆ, ಹೆಣಿಗೆ, ಕಸೂತಿ, ಬೇಸಿಕ್‌ ಕುಕಿಂಗ್‌ನಿಂದ ಬೇಕರಿ ಕ್ಲಾಸ್‌ವರೆಗೂ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ. ಡ್ರಾಯಿಂಗ್‌, ಕ್ರಾಫ್ಟ್ ನಲ್ಲಿ ವಿಶೇಷ ಪ್ರತಿಭೆ ಹೊಂದಿದ ಹೆಂಗಳೆಯರಿಗೆ ತಮ್ಮ ಅಭಿರುಚಿ ವ್ಯಕ್ತಪಡಿಸಿ ಸಮಾಜಕ್ಕೆ ಕೊಡುಗೆ ನೀಡಲು ಉತ್ತಮ ವೇದಿಕೆಯಾಗಿದೆ.

ವಾರದಲ್ಲಿ 2-3 ದಿನ ಒಟ್ಟಾಗಿ ಸೇರುವ ಇಲ್ಲಿನ ಸದಸ್ಯರು, ಹಿರಿಯ ನುರಿತವರಿಂದ ಈ ವಿಭಿನ್ನ ಬಗೆಯ ಕಲಿಕೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಪ್ರತಿ ಮಂಗಳವಾರ ವಿಶೇಷವಾದ ಮನರಂಜನಾ ಕಾರ್ಯಕ್ರಮಗಳಿದ್ದು ಹೌಸಿ, ತಂಬೋಲಾ, ಭಾವಗೀತೆ, ಜಾನಪದ, ಚಿತ್ರಗೀತೆಗಳು, ಅಂತ್ಯಾಕ್ಷರಿ ಕಾರ್ಯಕ್ರಮ ಇರುತ್ತದೆ. ಚಿತ್ರಕಲೆ, ರಂಗೋಲಿ ಸ್ಪರ್ಧೆಗಳಿಗೆ ವಿಶೇಷ ಆದ್ಯತೆ.

ಕಳೆದ ತಿಂಗಳ ಇಂಥದೇ ವಿಶೇಷ ದಿನದಂದು ಸ್ನೇಹ ಸೌರಭ ಸದಸ್ಯರನ್ನು ಭೇಟಿ ಮಾಡಿದ ಗೃಹಶೋಭಾ ತಂಡ, ಪತ್ರಿಕಾ ಪರಿಚಯದೊಂದಿಗೆ ಸದಸ್ಯರ ಜೊತೆ ಸಮಕಾಲೀನ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು. ಅಂದು ಎಂದಿನ ಮನರಂಜನೆ ಜೊತೆ ಗೇಮ್ಸ್ ಏರ್ಪಡಿಸಲಾಗಿತ್ತು. ನಿರ್ದಿಷ್ಟ ದೂರದಿಂದ ಬಕೆಟ್‌ಗೆ ಬಾಲ್ ಎಸೆಯುವ ಸ್ಪರ್ಧೆ, 26 ಆಂಗ್ಲ ಅಕ್ಷರಗಳ ಪೇಪರ್‌ ಕಪ್ಸ್ ನ್ನು ಕ್ರಮವಾಗಿ 2 ನಿಮಿಷಗಳ ಒಳಗೆ ಜೋಡಿಸುವ ಚಾಕಚಕ್ಯತೆಯ ಸ್ಪರ್ಧೆಗಳಲ್ಲಿ ವಯೋಮಾನ ಭೇದವಿಲ್ಲದೆ ಎಲ್ಲಾ ಮಹಿಳೆಯರೂ ಅತಿ ಉತ್ಸಾಹದಿಂದ ಪಾಲ್ಗೊಂಡರು. ಭೋಜನದ ನಂತರ ಸ್ನೇಹ ಸೌರಭದ ಅಧ್ಯಕ್ಷರು, ಉಪಾಧ್ಯಕ್ಷರ ವತಿಯಿಂದ ಗೃಹಶೋಭಾ ತಂಡದ ಸಮಕ್ಷಮದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ನಂತರ ಎಲ್ಲಾ ಸದಸ್ಯರಿಗೂ ಗೃಹಶೋಭಾ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಯಿತು. ಇಂಥದೇ ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಂಡು ಮಹಿಳಾ ಸದಸ್ಯರಲ್ಲಿ ಇನ್ನಷ್ಟು ಹೆಚ್ಚಿನ ಉತ್ಸಾಹ ಹುಮ್ಮಸ್ಸು, ಹುರುಪು ತುಂಬಿದ ಮಂಡಳಿಯ ಹಿರಿಯ ಸದಸ್ಯರು ಸಮಾರೋಪ ಭಾಷಣದೊಂದಿಗೆ, ವಂದನಾರ್ಪಣೆ ನಡೆಸಿಕೊಟ್ಟರು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ