ಕಥೆ – ಸಿ.ಕೆ. ಸುಲಕ್ಷಣಾ 

ನಳಿನಾ ಮತ್ತು ರಾಜು ಯಾವುದೋ ಗಂಭೀರವಾದ ವಿಷಯದ ಬಗ್ಗೆ ಆಲೋಚಿಸುತ್ತಾ, ಮಾತನಾಡುತ್ತಾ ಕುಳಿತಿದ್ದರು. ಅವರು ಅದರಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ, ಅವಳ ದೊಡ್ಡಪ್ಪನ ಮಗ ದೇವರಾಜ್‌ ಅಲ್ಲಿಗೆ ಬಂದದ್ದು ಅವರ ಗಮನಕ್ಕೆ ಬರಲಿಲ್ಲ.

“ಏನು, ಇಬ್ಬರೂ ಬಹಳ ಸೀರಿಯಸ್‌ ಆಗಿ ಕುಳಿತುಬಿಟ್ಟಿದ್ದೀರಿ?”

ಅವರಿಬ್ಬರೂ ಕತ್ತೆತ್ತಿ ನೋಡಿದರು. ಅವರ ಕಣ್ಣುಗಳು ಭಾವರಹಿತವಾಗಿದ್ದವು.

“ಎಲ್ಲರೂ ಕ್ಷೇಮ ತಾನೇ?” ಯಾರೂ ಮಾತನಾಡದಿರಲು ದೇವರಾಜ್‌ ಮತ್ತೆ ಕೇಳಿದರು.

“ಹೌದು ಸರ್‌, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ,” ರಾಜು ಹೇಳಿದ.

“ಹಾಗಾದರೆ ತೊಂದರೆ ಆಗಿರುವುದು ಎಲ್ಲಿ?”

“ಸೌಮ್ಯಾಳ ಜೀವನದಲ್ಲಿ ಅಣ್ಣ,” ನಳಿನಾ ಹೇಳಿದಳು, “ಅವಳಿಗೆ ಹೇಗೆ ಸಹಾಯ ಮಾಡುವುದು ಅನ್ನುವುದೇ ತಿಳಿಯುತ್ತಿಲ್ಲ.”

ಸೌಮ್ಯಾ ಮತ್ತು ನಳಿನಾ ಆಪ್ತ ಗೆಳತಿಯರು. ಸೌಮ್ಯಾಳ ಅಣ್ಣ ರಾಜುವಿಗೆ ನಳಿನಾಳ ಬಗ್ಗೆ ಆಕರ್ಷಣೆ ಇರುವುದನ್ನು ದೇವರಾಜ್‌ ಈಗಾಗಲೇ ಗಮನಿಸಿದ್ದರು.

“ವಿಷಯ ಬಿಡಿಸಿ ಹೇಳು,” ದೇವರಾಜ್‌ ಸೋಫಾದಲ್ಲಿ ಒರಗಿ ಕುಳಿತುಕೊಳ್ಳುತ್ತಾ ಹೇಳಿದರು, “ನಾನೇನಾದರೂ ಸಹಾಯ ಮಾಡಬಹುದಾ ನೋಡೋಣ.”

ರಾಜು ಕೂಡಲೇ, “ನಳಿನಾ, ಮೊದಲು ಎಲ್ಲ ಸರಿಯಾಗಿತ್ತು ತಾನೇ, ಅಶೋಕನ ತಾತನ ಹತ್ಯೆ ಆದ ಮೇಲೆಯೇ ಕಾವ್ಯಾ ಬೇಡ ಅನ್ನುವುದಕ್ಕೆ ಪ್ರಾರಂಭ ಮಾಡಿದ್ದು… ದೇವರಾಜ್‌ ಸರ್‌ ತಜ್ಞ ಪತ್ತೇದಾರರು. ಅವರು ಈ ಸಮಸ್ಯೆಯನ್ನು ಖಂಡಿತ ಬಿಡಿಸುತ್ತಾರೆ.”

“ಪಾಪ, ಸೌಮ್ಯಾಳಿಗೂ ಕೊಲೆಗೂ ಏನು ಸಂಬಂಧ? ಆದರೆ ಅಣ್ಣಾ, ನೀವು ಸೌಮ್ಯಾಳಿಗೆ ಏನಾದರೂ ಸಲಹೆ ಕೊಡಬಹುದು,” ನಳಿನಾ ಹೇಳಿದಳು.

“ಅವಳು ಐಐಎಂನ ಪ್ರವೇಶ ಪರೀಕ್ಷೆ ಬರೆದಿದ್ದಾಳೆ. ಒಳ್ಳೆ ಅಂಕಗಳು ಬರುತ್ತವೆ ಅನ್ನುವ ಭರವಸೆ ಅವಳಿಗಿದೆ. ಆದರೆ ಮನೆಯವರು, `ಮೊದಲು ಮದುವೆ ಮಾಡಿಕೋ. ಆಮೇಲೆ ಅತ್ತೆ ಮನೆಯವರು ಒಪ್ಪಿದರೆ ಓದು,’ ಎನ್ನುತ್ತಾರೆ.

“ಮದುವೆಯಾದ ಮೇಲೂ ತಾವೇ ಹಣ ಕೊಟ್ಟು ಓದಿಸುವುದಕ್ಕೆ ಅವರು ಸಿದ್ಧರಿದ್ದಾರೆ.”

“ಮದುವೆ ಯಾರ ಜೊತೆ?”

“ಅವಳಿಗೆ ಯಾರ ಮೇಲಾದರೂ ಮನಸ್ಸಿದ್ದರೆ ಸರಿ. ಇಲ್ಲವಾದರೆ ಗಂಡು ಹುಡುಕಿ ಮಾಡುತ್ತಾರೆ.”

“ಅಂದರೆ, ಹೇಗಾದರೂ ಸರಿ. ಅವಳ ಮದುವೆ ಮಾಡಬೇಕು ಅನ್ನುತ್ತಾರೆ,” ದೇವರಾಜ್‌ ಕೇಳಿದರು, “ಆದರೆ ಹಾಗೇಕೆ?”

ನಳಿನಾ ಒಂದು ಕ್ಷಣ ಮೌನವಾಗಿದ್ದಳು.

“ಅದು ಏಕೆಂದರೆ ಅವಳ ಅಕ್ಕ ಕಾವ್ಯಾಳ ವಿಚಿತ್ರ ನಡವಳಿಕೆಯಿಂದ. ಕಾವ್ಯಾಳಿಗೆ ಅವರ ಪಕ್ಕದ ಮನೆಯ ಅಶೋಕನೊಡನೆ ಬಾಲ್ಯದಿಂದಲೂ ಸ್ನೇಹವಿತ್ತು. ಅವರಿಬ್ಬರ ಮದುವೆಯ ಮಾತುಕತೆಯೂ ನಡೆದಿತ್ತು. ಆದರೆ ಅವಳು ಇದ್ದಕ್ಕಿದ್ದಂತೆ ಮದುವೆಯನ್ನು ಮುಂದೂಡುತ್ತಾ ಬಂದಳು. ಈಗ 2 ವರ್ಷಗಳೇ ಕಳೆದಿದ್ದರೂ ಮದುವೆಗೆ ಒಪ್ಪುತ್ತಿಲ್ಲ. ಮನೆಯವರಿಗೆ ಚಿಂತೆಯಾಗಿದೆ. ಕಾವ್ಯಾಳಿಗೆ ಉದ್ಯೋಗಕ್ಕೆ ಅವಕಾಶ ಕೊಟ್ಟಿದ್ದೇ ಇದಕ್ಕೆ ಕಾರಣ ಎಂದು ಅವರ ಭಾವನೆ.  ಆದ್ದರಿಂದ ಸೌಮ್ಯಾಳ ವಿಷಯದಲ್ಲಿ ಅದೇ ತಪ್ಪನ್ನು ಮಾಡಲು ಒಪ್ಪುತ್ತಿಲ್ಲ.”

“ಕಾವ್ಯಾ ಹಾಗೆ ಮಾಡಲು ಏನು ಕಾರಣ?” ದೇವರಾಜ್‌ ಕೇಳಿದರು.

“ಅದೇ ತಿಳಿಯುತ್ತಿಲ್ಲ. ಕಾರಣ ಗೊತ್ತಿದ್ದರೆ, ವಿದ್ಯಾಭ್ಯಾಸ ಮುಗಿದ ಕೂಡಲೇ ಮದುವೆಯಾಗುತ್ತೇನೆ ಎಂದು ಹೇಳಿ, ಮನೆಯವರನ್ನು ಒಪ್ಪಿಸಬಹುದಿತ್ತು. ಮದುವೆಯಾದ ಮೇಲೆ ಐಐಎಂನಲ್ಲಿ ವಿದ್ಯಾಭ್ಯಾಸ ಮಾಡುವುದು ಸಾಧ್ಯ ಅಲ್ಲ, ಸೂಕ್ತ ಅಲ್ಲ.”

“ಅದೇನೋ ಸರಿ….. ರಾಜು ನೀನು ಹತ್ಯೆ ಬಗ್ಗೆ ಹೇಳಿದೆಯಲ್ಲ, ಏನದು?”

“ಕಾವ್ಯಾ ಮತ್ತು ಅಶೋಕರ ನಿಶ್ಚಿತಾರ್ಥಕ್ಕೆ ಕೆಲವು ದಿನಗಳ ಮೊದಲು ಅಶೋಕನ ತಾತನ ಕೊಲೆಯಾಯಿತು. ಅದು ಏಕೆ ಮತ್ತು ಯಾರಿಂದ ಆಯಿತು ಅನ್ನುವುದು ಇದುವರೆಗೂ ಗೊತ್ತಾಗಲಿಲ್ಲ.”

“ಆದರೆ ಇದಕ್ಕೂ ಕಾವ್ಯಾಳ ಅಸಮ್ಮತಿಗೂ ಏನು ಸಂಬಂಧ?” ನಳಿನಾ ಮಧ್ಯೆ ಮಾತನಾಡಿದಳು.

“ಅಶೋಕನಿಗೆ ಒಪ್ಪಿಗೆ ಇರುವಾಗ ಕಾವ್ಯಾ ಹಿಂದೇಟು ಹಾಕಲು ಏನೋ ಬಲವಾದ ಕಾರಣವಿರಲೇಬೇಕು,” ದೇವರಾಜ್‌ ಹೇಳಿದರು.

“ಅಶೋಕನಿಗೆ ಒಪ್ಪಿಗೆ ಇದೆ ಎಂದು ನಿಮಗೆ ಹೇಗೆ ಗೊತ್ತು ಅಣ್ಣಾ?” ನಳಿನಾ ಕೇಳಿದಳು.

“ಇವರಿಬ್ಬರೂ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದರು. ನನಗಿಂತ 2 ವರ್ಷ ಜೂನಿಯರ್ಸ್‌. ಕಾಲೇಜಿನಲ್ಲಿ ನನ್ನ ನಿರ್ದೇಶನದ ನಾಟಕದಲ್ಲಿ ಇಬ್ಬರೂ ಪಾತ್ರ ಮಾಡಿದ್ದರು. ನಮ್ಮ `ಗಾಯ’ ಎಂಬ ಒಂದು ನಾಟಕ ಅಖಿಲ ಭಾರತ ನಾಟಕ ಸ್ಪರ್ಧೆಗೆ ಆಯ್ಕೆಯಾಗಿತ್ತು. ಅದಕ್ಕಾಗಿ ನಾವೆಲ್ಲರೂ ದೆಹಲಿಗೂ ಹೋಗಿದ್ದೆವು. ನಮ್ಮಲ್ಲಿ ಒಳ್ಳೆಯ ಸ್ನೇಹ ಬೆಳೆದಿತ್ತು. ಆಗ ನಾನೊಮ್ಮೆ ಅಶೋಕನನ್ನು `ಕಾವ್ಯಾಳ ಜೊತೆ ಮದುವೆಯಾಗುವ ಮನಸ್ಸಿದೆಯೇ’ ಎಂದು ಕೇಳಿದಾಗ, ಅವನು ಉತ್ಸಾಹದಿಂದ ಹೌದೆಂದು ಹೇಳಿದ್ದ.”

“ಈಗ ಮದುವೆಗೆ ಒಪ್ಪದೇ ಇರುವುದು ಕಾವ್ಯಾ. ಆದರೆ ಅಶೋಕ್‌ ಸಹ ವ್ಯವಹಾರದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾನೆ. 2-3 ವರ್ಷಗಳ ಹಿಂದೆ ಅವನು ಐಐಎಂನ ಏಜೆನ್ಸಿ ಪಡೆದುಕೊಂಡು ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರುವ ಜಂಜಾಟದಲ್ಲಿದ್ದ. ಈಗ  ಅವನ ಬಿಸ್‌ನೆಸ್‌ ಚೆನ್ನಾಗಿ ನಡೆಯುತ್ತಿದೆ. ಮದುವೆ ಮಾಡಿಕೊಳ್ಳುವುದಕ್ಕೆ ಏನೂ ತೊಂದರೆ ಇಲ್ಲ. ಅಣ್ಣಾ, ನೀವು ಒಂದು ಸಲ ಅಶೋಕನ ಜೊತೆ ಮಾತನಾಡಿ ಕಾವ್ಯಾ ಒಪ್ಪದಿರಲು ಏನು ಕಾರಣ ಎಂದು ತಿಳಿದುಕೊಳ್ಳುತ್ತೀರಾ?” ನಳಿನಾ ಕೇಳಿದಳು.

“ಮದುವೆಗೆ ಒಪ್ಪದೇ ಇರುವವಳು ಕಾವ್ಯಾ ತಾನೇ? ಹಾಗಿರುವಾಗ ಅವಳ ಜೊತೆಗೇ ಮಾತನಾಡುತ್ತೇನೆ. ಅವಳನ್ನು ಒಂದು ಸಲ ಭೇಟಿ ಮಾಡಿಸುವುದಕ್ಕೆ ಆಗುತ್ತದೆಯೇ?”

“ಓಹೋ… ಯಾವಾಗ ಬೇಕಾದರೂ ಭೇಟಿ ಮಾಡಿಸುತ್ತೇನೆ. ಒಂದು ಕೆಲಸ ಮಾಡೋಣ… ನಾಳೆ ಸಾಯಂಕಾಲ ನಾನು ಸೌಮ್ಯಾಳ ಮನೆಯಲ್ಲಿರುತ್ತೇನೆ. ನೀವು ನನ್ನನ್ನು ಕರೆದೊಯ್ಯಲು ಅಲ್ಲಿಗೆ ಬನ್ನಿ.”

“ಸರಿ, ಹಾಗಿದ್ದರೆ ಕಾವ್ಯಾ ಮನೆಯಲ್ಲಿರುವುದನ್ನು ನೋಡಿಕೊಂಡು ನೀನು ಫೋನ್‌ ಮಾಡು. ಆಗ ಅವಳನ್ನು ಭೇಟಿ ಮಾಡಬಹುದು.”

ಮರುದಿನ ಸಾಯಂಕಾಲ ನಳಿನಾ ಫೋನ್‌ ಮಾಡಿದ ಮೇಲೆ ದೇವರಾಜ್‌, ಸೌಮ್ಯಾಳ ಮನೆಗೆ ಹೋದರು. ಕಾವ್ಯಾ, ಸೌಮ್ಯಾ ಮತ್ತು ನಳಿನಾ ಡ್ರಾಯಿಂಗ್‌ ರೂಮಿನಲ್ಲಿ ಕುಳಿತಿದ್ದರು. ದೇವರಾಜ್‌ ಬಂದುದನ್ನು ನೋಡಿ ಕಾವ್ಯಾ ಚಕಿತಳಾದಳು.

“ಸರ್‌ ನೀ….?”

“ನೀವು….. ಇಲ್ಲಿ ಹೇಗೆ ಡಾಕ್ಟರ್‌ ಅಮ್ಮ?” ದೇವರಾಜ್‌ ಸಹ ಅದೇ ಧಾಟಿಯಲ್ಲಿ ಕೇಳಿದರು.

ಮತ್ತೆ ಸೌಮ್ಯಾ ಮತ್ತು ನಳಿನಾರತ್ತ ತಿರುಗಿ, “ಕಾಲೇಜಿನಲ್ಲಿದ್ದಾಗ ನಾನು ಆಡಿಸುತ್ತಿದ್ದ ಒಂದು ನಾಟಕದಲ್ಲಿ ಕಾವ್ಯಾ ಡಾಕ್ಟರ್‌ ಪಾತ್ರ ಮಾಡಿದ್ದಳು. ಆಗಿನಿಂದ ನಾನು ಅವಳನ್ನು ಡಾಕ್ಟರ್‌ ಅಮ್ಮ ಅಂತಲೇ ಕರೆಯುತ್ತೇನೆ. ಅದು ಇರಲಿ ಸೌಮ್ಯಾ…. ನಿನ್ನ ಅಕ್ಕ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ  ಬಹುಮಾನ ಗಳಿಸಿದ್ದಾಳೆ ಅಂತ ನೀನು ಯಾವತ್ತೂ ಹೇಳಲೇ ಇಲ್ಲವಲ್ಲ…..” ಕಾವ್ಯಾ ಹೇಳಿದಳು.

“ನಳಿನಾ ಸಹ ಒಂದು ದಿನ ನಿಮ್ಮ ಬಗ್ಗೆ ಹೇಳಲಿಲ್ಲ. ಈ ಹುಡುಗಿಯರಿಗೆ ತಮ್ಮ ಮಾತೇ ಮುಗಿಯುವುದಿಲ್ಲ. ಬೇರೆಯವರ ವಿಷಯ ಮಾತನಾಡುವುದಕ್ಕೆ ಸಮಯ ಎಲ್ಲಿರುತ್ತದೆ?” ಕಾಫಿ ಕೊಡುತ್ತಾ ಕಾವ್ಯಾ ಕೇಳಿದಳು, “ನನಗೆ ನಿಮ್ಮಿಂದ ಕೊಂಚ ಸಲಹೆ ಪಡೆಯಬೇಕಾಗಿದೆ. ನನಗೋಸ್ಕರ ಒಂದು ದಿನ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಆಗುತ್ತದೆಯೇ?”

“ಯಾವತ್ತೋ ಒಂದು ದಿನ ಏಕೆ? ಇವತ್ತೇ ಬಿಡುವಾಗಿದ್ದೇನೆ?”

“ಓ…. ಹೇಗೂ ನಮ್ಮ ತಂದೆ ತಾಯಿ ಮನೆಯಲ್ಲಿಲ್ಲ. ರೋಟರಿ ಕ್ಲಬ್‌ ಮೀಟಿಂಗ್‌ಗೆ ಹೋಗಿದ್ದಾರೆ. ಬನ್ನಿ, ನನ್ನ ರೂಮಿನಲ್ಲೇ ಕುಳಿತುಕೊಂಡು ಮಾತನಾಡಬಹುದು.”

ರೂಮ್ ನಲ್ಲಿ ಕುಳಿತುಕೊಳ್ಳುತ್ತಾ ದೇವರಾಜ್‌ ಕೇಳಿದರು, “ಹೇಳಿ ಡಾಕ್ಟರ್‌ ಅಮ್ಮ, ಈಗ ನಿಮ್ಮ ಎಂಜಿನಿಯರ್‌ ಸಾಹೇಬರು, ಅಂದರೆ ಅಶೋಕ್‌ ಎಲ್ಲಿದ್ದಾರೆ?”

“ಇಲ್ಲೇ ಪಕ್ಕದ ಮನೆಯಲ್ಲೇ ಇದ್ದಾರೆ. ಆದರೆ ಭೇಟಿ ಕಡಿಮೆಯಾಗಿದೆ,” ಕಾವ್ಯಾ ನಿಧಾನವಾಗಿ ಹೇಳಿದಳು.

“ಏಕೆ, ನಿಮ್ಮಿಬ್ಬರಿಗೂ ಸಮಯ ಸಿಗುತ್ತಿಲ್ಲವೇ ಅಥವಾ ಏನಾದರೂ ಮನಸ್ತಾಪ ಆಗಿದೆಯೋ?”

“ಸಮಯದ ತೊಂದರೆ ಆಗಲಿ, ಮನಸ್ತಾಪವಾಗಲಿ ಇಲ್ಲ. ಆದರೆ ನನಗೇ ಏನೋ ತಪ್ಪು ತಿಳಿವಳಿಕೆ ಉಂಟಾಗಿರಬಹುದು,” ಕಾವ್ಯಾ ಸಂಕೋಚಪಡುತ್ತಾ ಹೇಳಿದಳು, “ಈ ವಿಷಯವಾಗಿ ನಿಮ್ಮ ಜೊತೆ ಮಾತನಾಡಬೇಕು ಅಂತ ಎಷ್ಟೋ ಸಲ ಅಂದುಕೊಂಡೆ. ಆದರೆ ಹೇಗೆ ಭೇಟಿ ಮಾಡುವುದು ಅಂತ ಗೊತ್ತಾಗಲಿಲ್ಲ.”

“ವಿಷಯ ಏನು ಅಂತ ಬಿಡಿಸಿ ಹೇಳು.”

“ಅಶೋಕ್‌ ಅವನ ತಾತನ ಹತ್ಯೆ ಮಾಡಿದ್ದಾನೆ ಅಂತ ನನಗೆ ಅನ್ನಿಸುತ್ತಿದೆ.”

ಇದನ್ನು ಕೇಳಿ ದೇವರಾಜ್‌ ಬೆಚ್ಚಿದರು. ಕ್ಷಣ ಮಾತ್ರದಲ್ಲಿ ಅವರ ಪತ್ತೇದಾರಿ ಗುಣ ಕಾರ್ಯಪ್ರವೃತ್ತವಾಯಿತು, “ಅನುಮಾನಕ್ಕೆ ಏನು ಕಾರಣ?” ಎಂದು ಕೇಳಿದರು.

“ಅವನ ತಾತನ ಕೊಲೆ ಆದ ಆ ರಾತ್ರಿ ಅಶೋಕ್‌ ತಾರಸಿ ಮೇಲಿನಿಂದ ಧುಮುಕಿ ಓಡಿಹೋದದ್ದನ್ನು ನಾನು ನೋಡಿದೆ. ಆದರೆ ಆ ದಿನ, ಹಿಂದಿನ ರಸ್ತೆಯಲ್ಲಿ ಅವನ ಸ್ನೇಹಿತನ ವಿವಾಹ ಕಾರ್ಯಕ್ರಮದಲ್ಲಿ ತಾನು ಇದ್ದುದಾಗಿ ಅಶೋಕ್‌ ಹೇಳುತ್ತಾನೆ. ಕೊಲೆ ನಡೆದ ವಿಷಯ ಅವನಿಗೆ ಅಲ್ಲಿಯೇ ತಿಳಿದದ್ದು ಎನ್ನುತ್ತಾನೆ.”

“ಓಡಿಹೋದವನು ಅಶೋಕ್‌ ಅಂತಲೇ ನಿನಗನ್ನಿಸುತ್ತದೆಯೇ? ಆ ಕೊಲೆಯಿಂದ ಯಾರಿಗೆ ವೈಯಕ್ತಿಕ ಲಾಭವಿದೆ?”

“ಹೌದು, ಮೇಲಿನಿಂದ ಮರ ಹಿಡಿದು ಧುಮುಕಿ ಹೋದನು ಅಶೋಕ್‌ ಎಂದು ನನ್ನ ಭಾವನೆ. ಅಲ್ಲಿ ಯಾವುದೇ ವಸ್ತು ಕಳುವಾಗಿರಲಿಲ್ಲ ಮತ್ತು ತಾತನಿಗೆ ಯಾರೊಂದಿಗೂ ವೈರತ್ವವಿರಲಿಲ್ಲ. ಅವರು ತಮ್ಮದೆಲ್ಲವನ್ನೂ ಅಶೋಕನ ಹೆಸರಿಗೇ ಮಾಡಿಟ್ಟಿದ್ದರು.”

“ಹಾಗಿದ್ದ ಮೇಲೆ ಅಶೋಕ್‌ ಹತ್ಯೆ ಮಾಡಿದ್ದಾನೆ ಎಂದು ಏಕೆ ಭಾವಿಸುತ್ತೀಯಾ? ಎಲ್ಲ ವಿಷಯವನ್ನೂ ವಿವರವಾಗಿ ಹೇಳು ಕಾವ್ಯಾ. ನನ್ನ ಕೈಲಾದಷ್ಟು ನಿನಗೆ ಸಹಾಯ ಮಾಡುತ್ತೇನೆ.”

“ಸರ್‌, ತಾತನದು ಒಂದು ಫ್ರಿಜ್‌ ಮತ್ತು ಟಿ.ವಿ ಶೋರೂಮ್ ಇತ್ತು. ಅದನ್ನು ಅಶೋಕನ ಹೆಸರಿಗೆ ವರ್ಗಾಯಿಸಿದ್ದರೂ ಕೂಡ ಅವರೇ ಅದನ್ನು ನೋಡಿಕೊಳ್ಳುತ್ತಿದ್ದರು. ಗ್ರಾಹಕರ ಮುಂದೆ ಸ್ವತಃ ಅವರೇ ಕುಳಿತು ಯಾವ ಬ್ರಾಂಡ್‌, ಯಾವ ಮಾಡೆಲ್‌ ಸೂಕ್ತ ಎಂದು ವಿವರಿಸುತ್ತಿದ್ದರು. ಗ್ರಾಹಕರಿಗೆ ನೀಡುವ ರಿಯಾಯಿತಿಯ ಬಗ್ಗೆ ಅಥವಾ ಕಂತುಗಳ ಬಗ್ಗೆ ಸ್ವತಃ ತೀರ್ಮಾನ ತೆಗೆದುಕೊಳ್ಳುತ್ತಿದ್ದರು.

“ಅಶೋಕನಿಗೆ ಫ್ರಿಜ್‌, ಟಿ.ವಿಗಳನ್ನು ಮಾರಾಟ ಮಾಡಿಕೊಂಡು ಕುಳಿತಿರುವ ಆಸಕ್ತಿ ಇರಲಿಲ್ಲ. ಅವನಿಗೆ ಐಬಿಎಎಂನ ಏಜೆನ್ಸಿ ಪಡೆಯುವ ಆಸೆ. ಆದ್ದರಿಂದ ತಾತನ ಶೋರೂಮ್ ನೋಡಿಕೊಳ್ಳಲು ಒಪ್ಪಿಕೊಂಡಿದ್ದ. ಮುಂದೆ ಅಲ್ಲಿ ಕಂಪ್ಯೂಟರ್‌ ಶೋರೂಮ್ ಮಾಡುವ ಕನಸು ಅವನದು.

“ಆದರೆ ಅವನ ಯೋಜನೆಯನ್ನು ತಾತ ಸುತರಾಂ ಒಪ್ಪಲಿಲ್ಲ. ಟಿ.ವಿ., ಫ್ರಿಜ್‌ಗಳಂತೆ ಕಂಪ್ಯೂಟರ್‌ ಬಿಕರಿಯಾಗಲಾರದು ಎಂದು ಅವರ ಎಣಿಕೆ. ಅಲ್ಲದೆ,  ಕಂಪ್ಯೂಟರ್‌ ಏಜೆನ್ಸಿ ಪಡೆದು ಹೊಸ ಪೀಳಿಗೆಯ ಜನರು ಬರತೊಡಗಿದಾಗ ತಮ್ಮ ಇರುವಿಕೆಗೆ ಬೆಲೆ ಇಲ್ಲದಂತಾಗುವುದೆಂದು ಅವರ ಭಾವನೆ. ಹೀಗಾಗಿ ಅವರು, ತಾವು ಇದುವರೆಗೆ ಯಾವ ಬಿಸ್‌ನೆಸ್‌ ಮಾಡುತ್ತಿದ್ದರೋ ಅದನ್ನೇ ಬದುಕಿರುವವರೆಗೆ ಮುಂದುರಿಸುವುದಾಗಿ ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು.

“ಈ ವಿಷಯವನ್ನೆಲ್ಲ ನನಗೆ ತಿಳಿಸಿ ಅಶೋಕ್‌ ಹೀಗೆ ಹೇಳಿದ್ದ. `ತಾತನ ಈ ಹಠದ ನಡವಳಿಕೆಯಿಂದ ನನ್ನ ಕಂಪ್ಯೂಟರ್‌ ಬಿಸ್‌ನೆಸ್‌ ಪ್ರಾರಂಭ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ತಂದೆ ಮತ್ತು ಅಣ್ಣನಂತೆ ನಾನು ಟಿ.ವಿ., ಫ್ರಿಜ್‌ ಮಾರುತ್ತಾ,  ಅಕೌಂಟ್ಸ್ ನೋಡಿಕೊಳ್ಳುತ್ತಾ ಕುಳಿತಿರಬೇಕಾಗಿದೆ. ಆದರೆ ನಾನು ನನ್ನ ಕೆರಿಯರ್‌ ರೂಪಿಸಿಕೊಳ್ಳುವವರೆಗೆ ಮದುವೆಯಾಗುವುದಿಲ್ಲ,’ ಎನ್ನುತ್ತಿದ್ದ.

“ಅವನ ಮಾತು ನನಗೂ ಸರಿಯೆನ್ನಿಸಿತು. ಏಕೆಂದರೆ ಐಬಿಎಂ ಏಜೆನ್ಸಿಗಾಗಿ ಅವನು ಬಹಳ ಶ್ರಮಪಡುತ್ತಿದ್ದನು. ಆ ಬಗ್ಗೆ ಕಾನೂನು ಸಲಹೆ ಪಡೆಯಲು ನನ್ನ ತಂದೆಯ ಹತ್ತಿರ ಬಂದು ಚರ್ಚಿಸುತ್ತಿದ್ದ. ನಾನು ಅವನಿಗೆ ಮದುವೆಯನ್ನು ಹೇಗಾದರೂ ಮುಂದೂಡಲು ಕಾರಣ ಹುಡುಕುವುದಾಗಿ ಆಶ್ವಾಸನೆ ಇತ್ತೆ.

“ಈ ಮಧ್ಯೆ ನಮ್ಮ ಸಹಪಾಠಿ ರವಿಯ ಮದುವೆ ಕಾರ್ಯಕ್ರಮವಿತ್ತು. ಅಲ್ಲಿ ನಾವೆಲ್ಲರೂ ಸಂಗೀತ, ನೃತ್ಯದಲ್ಲಿ ತೊಡಗಿಸಿಕೊಂಡೆವು, ನಮ್ಮ ಮನೆಯ ಹಿಂದಿನ ಬೀದಿಯಲ್ಲಿಯೇ ಕಾರ್ಯಕ್ರಮ ನಡೆಯುತ್ತಿತ್ತು. ರಾತ್ರಿ ತಡವಾಯಿತೆಂದು ನಾನು ಮನೆಗೆ ಹಿಂದಿರುಗಿದೆ. ಗಂಡು ಹುಡುಗರೆಲ್ಲ ಇನ್ನೂ ಅಲ್ಲೇ ಇದ್ದರು.

“ಅಶೋಕನ ಮನೆಯಲ್ಲಿ ಒಂದು ನೇರಳೆ ಹಣ್ಣಿನ ಮರವಿದೆ. ಅದರ ಕೊಂಬೆಗಳು ನಮ್ಮ ತಾರಸಿಯವರೆಗೂ ಹಬ್ಬಿವೆ. ನಾನು ಆಗ ತಾರಸಿ ಮೇಲಿನ ರೂಮಿನಲ್ಲಿ ಇರುತ್ತಿದ್ದೆ. ಅಶೋಕ್‌ ಮತ್ತು ಅವನ ತಾತನ ಕೊಠಡಿಗಳೂ ಅವರ ತಾರಸಿಯಲ್ಲಿವೆ. ತಾತ ಮಲಗಿದ ಮೇಲೆ ಅಶೋಕ್‌ ಆ ಮರದ ಕೊಂಬೆಯ ಮೂಲಕ ನನ್ನ ಕೊಠಡಿಗೆ ಬರುತ್ತಿದ್ದುದುಂಟು.”

“ಬರುತ್ತಿದ್ದನು ಅಂದರೆ ಈಗ ಬರುತ್ತಿಲ್ಲ ಎಂದು ಅರ್ಥವೇನು?” ದೇವರಾಜ್‌ ಮಧ್ಯೆ ಮಾತನಾಡಿದರು.

“ಹೌದು. ತಾತನ ಹತ್ಯೆ ಆದ ಮೇಲೆ ನಮ್ಮ ತಂದೆ ನಾನೊಬ್ಬಳೇ ಆ ರೂಮಿನಲ್ಲಿ ಇರುವುದು ಬೇಡವೆಂದರು. ಹ್ಞಾಂ, ನಾನು ಏನು ಹೇಳುತ್ತಿದ್ದೆ ಎಂದರೆ, ಆ ರಾತ್ರಿ ನನಗೆ ಎಲೆಗಳ ಸರಸರ ಶಬ್ದ ಕೇಳಿಸಿತು. ಅಶೋಕ್‌ ಬರುತ್ತಿದ್ದ ಎಂದುಕೊಂಡು ನಾನು ರೂಮ್ನಿಂದ ಹೊರಗೆ ಬಂದೆ. ಕೊಂಬೆ ಮತ್ತು ಎಲೆಗಳು ಅಲುಗಾಡುತ್ತಿದ್ದವು. ಆದರೆ ತಾರಸಿಯ ಮೇಲೆ ಯಾರೂ ಇರಲಿಲ್ಲ. ನಾನು ಕೆಳಗೆ ಬಗ್ಗಿ ನೋಡಿದೆ ಯಾರೋ ಮರದಿಂದ ಇಳಿದು ಓಡಿಹೋಗುತ್ತಿದ್ದುದು ಕಾಣಿಸಿತು. ಅದೇ ಸಮಯಕ್ಕೆ ತಾತನ ಕೋಣೆಯಿಂದ ಅವರ ಆಳು ರಾಮು, `ಅಯ್ಯೋ, ತಾತನಿಗೆ ಏನಾಗಿದೆ ನೋಡಿ?’ ಎಂದು ಕಿರುಚುತ್ತಿದ್ದ  ಧ್ವನಿ ಕೇಳಿಸಿತು. ನಾನು ಓಡುತ್ತಾ ಕೆಳಗೆ ಹೋಗಿ ಮನೆಯವರಿಗೆ ವಿಷಯ ತಿಳಿಸಿದೆ. ನಾವೆಲ್ಲ ಅಶೋಕನ ಮನೆಗೆ ಹೋದೆವು. ಯಾರೋ ತಾತನ ಮುಖದ ಮೇಲೆ ದಿಂಬನ್ನು ಒತ್ತಿ ಹಿಡಿದು, ಉಸಿರು ಕಟ್ಟಿಸಿ ಅವರ ಕೊಲೆ ಮಾಡಿದ್ದರು.

“ರಾಮು ತಾತನಿಗೆಂದು ಹಾಲಿನ ಲೋಟವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಲೋಟದ ಮುಚ್ಚಳ `ಟನ್‌ಟನ್‌’ ಶಬ್ದದೊಂದಿಗೆ ಮೆಟ್ಟಿಲ ಮೇಲೆ ಬಿದ್ದಿತಂತೆ. ಆ ಶಬ್ದ ಕೇಳಿ ಕೊಲೆಗಾರ ಓಡಿಹೋಗಿದ್ದ. ಆ ಕೊಲೆಗಾರ ಮರದಿಂದಿಳಿದು ಕಾಂಪೌಂಡ್‌ ಹಾರಿ ಓಡಿ ಹೋದುದನ್ನು ನಾನು ನೋಡಿದೆ ಎಂದು ಯಾರಿಗೂ ಹೇಳಲಿಲ್ಲ. ಏಕೆಂದರೆ ನಾನು ಅವನ ಮುಖವನ್ನು ನೋಡಿರಲಿಲ್ಲ. ಕೇವಲ ಅವನ ಡ್ರೆಸ್‌ ನೋಡಿದ್ದೆ.

“ಅಲ್ಲಿ ಓಡಿ ಹೋದವನ ಡ್ರೆಸ್‌ ಅಶೋಕ್‌ ಮದುವೆ ಮನೆಯಲ್ಲಿ ಧರಿಸಿದ್ದ ರೇಷ್ಮೆ ಕುರ್ತಾ ಪೈಜಾಮದಂತೆಯೇ ಇತ್ತು. ನಮ್ಮ ತಂದೆ ನನ್ನ ತಮ್ಮ ಬಂಟಿಯನ್ನು ಫಂಕ್ಷನ್‌ ಹಾಲ್‌ನಿಂದ ಅಶೋಕನನ್ನು ಕರೆತರಲು ಕಳುಹಿಸಿದರು. ಅಶೋಕ್‌ ಅಲ್ಲಿ ಇರುವುದಿಲ್ಲವೆಂದು ನನ್ನ ಭಾವನೆಯಾಗಿತ್ತು. ಆದರೆ ಬಂಟಿಯ ಜೊತೆ ಅಶೋಕ್‌ ಧಾವಿಸಿ ಬಂದ. ಅವನ ಬಟ್ಟೆಯ ಮೇಲೆ ಮರ ಹತ್ತಿ ಇಳಿದಿದ್ದ ಯಾವುದೇ ಗುರುತೂ ಇರಲಿಲ್ಲ. ಮನೆಯ ಇತರೆ ಸದಸ್ಯರಂತೆ ಅವನೂ ಸಹ ಗಾಬರಿಗೊಂಡಿದ್ದ.”

“ಹಾಗಾದರೆ ಅಶೋಕ್‌ ಕೊಲೆ ಮಾಡಿರುವನೆಂದು ನೀನೇಕೆ ಅನುಮಾನ ಪಡುತ್ತಿದ್ದೀಯಾ?”

“ಏಕೆಂದರೆ ಮರುದಿನ ಪೊಲೀಸರು ಬಂದು ಪತ್ತೆಕಾರ್ಯದಲ್ಲಿ ತೊಡಗಿದಾಗ ಮರದ ಹತ್ತಿರ ಸಿಕ್ಕಿದ ಪಾದರಕ್ಷೆಯ ಗುರುತು ಅಶೋಕನು ಪಾರ್ಟಿಗೆ ಧರಿಸಿದ್ದ ಜೋಧ್‌ಪುರಿ ಚಪ್ಪಲಿಯದಂತೆ ತೋರುತ್ತಿತ್ತು. ಪೊಲೀಸರು ಅವನನ್ನು ಸಂದೇಹಿಸಿ ಪ್ರಶ್ನಿಸಿದ್ದರು. ಆದರೆ ಅವನು ಹಿಂದಿನ ದಿನದ ಕಾರ್ಯಕ್ರಮದ ಫೋಟೋಗಳನ್ನು ತೋರಿಸಿ ಬಂಟಿ ಬಂದು ಕರೆಯುವವರೆಗೂ ತಾನು ರವಿಯ ಜೊತೆಯಲ್ಲೇ ಇದ್ದುದಾಗಿ ಹೇಳಿದ. ಪೊಲೀಸರು ಅವನನ್ನು ಬಿಟ್ಟುಬಿಟ್ಟರು. ಆದರೆ ನನಗೇನೋ ಅದು ಅಶೋಕ್‌ ಅಂತಲೇ ಅನ್ನಿಸುತ್ತದೆ. ಮರ ಹತ್ತಿ ಇಳಿದು ಹೋಗುವ ದಾರಿ ಅವನಿಗೇ ಗೊತ್ತಿದ್ದುದು. ಜೊತೆಗೆ ತಾತನ ಸಾವಿನಿಂದ ಲಾಭವಾದದ್ದೂ ಅವನಿಗೇ.

“ಊಟದ ಸಮಯದಲ್ಲಿ ಫೋಟೊ ತೆಗೆದಿಲ್ಲ. ಫೋಟೊಗ್ರಾಫರ್‌ ಸಹ ಊಟ ಮಾಡುತ್ತಿದ್ದಿರಬಹುದು. ಫಂಕ್ಷನ್‌ ಹಾಲ್‌ ಮನೆಯ ಹಿಂದೆಯೇ ಇತ್ತು. ಗೋಡೆ ಹಾರಿ ಬಂದು ಒಬ್ಬ ವಯಸ್ಸಾದವರನ್ನು ಉಸಿರು ಕಟ್ಟಿ ಸಾಯಿಸಲು ಎಷ್ಟು ಹೊತ್ತು ಹಿಡಿಯುತ್ತದೆ ಸರ್?”

“13ನೇ ದಿನದ ಕಾರ್ಯಗಳೆಲ್ಲ ಮುಗಿದ ಕೂಡಲೇ ಅಶೋಕ್‌ ಏಜೆನ್ಸಿ ಪಡೆಯುವ ಬಗ್ಗೆ ಉತ್ಸುಕತೆಯಿಂದ ಕೆಲಸದಲ್ಲಿ ತೊಡಗಿದನು. ತಾತನ ಕಾಲಾನಂತರ ಅವನಿಗೆ ಯಾವ ತೊಡಕೂ ಇರಲಿಲ್ಲ.”

“ನೀನು ಈ ಬಗ್ಗೆ ಅಶೋಕನೊಡನೆ ಮಾತನಾಡಿದೆ ಏನು?”

“ಇಲ್ಲ ಸರ್‌. ಇಂದೇ ಮೊದಲ ಬಾರಿಗೆ ನಿಮ್ಮ ಹತ್ತಿರ ಬಾಯಿಬಿಡುತ್ತಿದ್ದೇನೆ.”

“ನೀನು ಮದುವೆಯನ್ನು ಮುಂದೂಡಿದ್ದು ಹೇಗೆ?”

“ತಾತನ ಸಾವಿನ ನಂತರ ಹಲವಾರು ತಿಂಗಳು ಮದುವೆಯ ಬಗ್ಗೆ ಮಾತನಾಡಲು ಯಾರಿಗೂ ಮನಸ್ಸಿರಲಿಲ್ಲ. ಆಗೆಲ್ಲ ಅಶೋಕ್‌ ತನ್ನ ಹೊಸ ಉದ್ದಿಮೆಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದ. ನನ್ನ ತಂದೆಯ ಬಳಿ ಕೆಲವು ವಿಷಯಗಳ ಸಲಹೆಗಾಗಿ ನಮ್ಮ ಮನೆಗೆ ಬರುತ್ತಿದ್ದ. ಆದರೆ ಮದುವೆಯ ಬಗ್ಗೆ ನಾವು ಮಾತನಾಡಲಿಲ್ಲ. ಅವನನ್ನು ಏಕಾಂತದಲ್ಲಿ ಮಾತನಾಡಿಸಲು ನಾನೂ ಪ್ರಯತ್ನಿಸಲಿಲ್ಲ. ವರ್ಷ ಕಳೆದ ಮೇಲೆ ಅಮ್ಮ ಮದುವೆಯ ವಿಷಯ ತೆಗೆದಾಗ ನನಗೆ ಈಗಲೇ ಮದುವೆ ಬೇಡವೆಂದು ಹೇಳಿದೆ. ಅಶೋಕ್‌ ಸದಾ ಕೆಲಸದಲ್ಲಿ ಮಗ್ನವಾಗಿದ್ದುದರಿಂದ ಅವನ ಮನೆಯವರು ಮದುವೆ ಮಾಡುವ ಆತುರದಲ್ಲಿರಲಿಲ್ಲ. ಅದಕ್ಕೆ ನಮ್ಮ ಮನೆಯವರೂ ಒಪ್ಪಬೇಕಾಯಿತು.”

“ಮತ್ತೆ, ಅಶೋಕನೊಡನೆ ಭೇಟಿಯನ್ನು ಹೇಗೆ ಕಡಿಮೆ ಮಾಡಿದೆ?”

ಕಾವ್ಯಾ ಸಣ್ಣ ನಗೆ ಬೀರಿದಳು, “ನಾವು ಹೆಚ್ಚು ಭೇಟಿ ಮಾಡುತ್ತಿದ್ದರೆ ಬೇಗನೆ ಮದುವೆ ನಡೆಸಲು ಅಮ್ಮ ಒತ್ತಾಯ ಮಾಡುತ್ತಾರೆ ಎಂದು ಅಶೋಕನಿಗೆ ಹೇಳಿದೆ. ಅವನೂ ಬಿಸ್‌ನೆಸ್‌ ನೆಲೆಗೊಳಿಸಿದ ಬಳಿಕವೇ ಮದುವೆಯಾಗಲು ಬಯಸುತ್ತಿದ್ದುದರಿಂದ ನನ್ನ ಮಾತಿಗೆ ಒಪ್ಪಿಕೊಂಡ. ಅಲ್ಲದೆ, ಅವನಿಗೆ ಪುರುಸತ್ತೂ ಇರುತ್ತಿರಲಿಲ್ಲ. ಈಚೆಗೆ ಕೊಂಚ ಸಮಯ ದೊರಕಿದಾಗ, ಮನೆಗೆ ಬರುತ್ತಾನೆ. ಆಗ ಅಮ್ಮನ ಮದುವೆಯ ರಾಗ ಪ್ರಾರಂಭವಾಗುತ್ತದೆ ಸರ್‌, ಈಗ ನೀವೇ ಹೇಳಿ. ಕೊಲೆಯ ಅನುಮಾನವಿರುವ ಮನುಷ್ಯನನ್ನು ನಾನು ಹೇಗೆ ಮದುವೆಯಾಗಲಿ?”

“ಖಂಡಿತ ಆಗುವುದಿಲ್ಲ. ನಾನು ನಾಳೆ ಈ ಕೇಸ್‌ನ ಫೈಲ್‌ ತೆಗೆಸಿ ನೋಡುತ್ತೇನೆ. ಕೊಲೆ ನಡೆದ ತಾರೀಖು ಮತ್ತು ತಾತನ ಹೆಸರು ಹೇಳು,” ದೇವರಾಜ್‌ ಕೇಳಿದರು.

“ಇಂದಿನಿಂದ ನೀನು ಮದುವೆ ಮುಂದೂಡುವ ಯತ್ನ ನಿಲ್ಲಿಸಿಬಿಡು. ಮದುವೆಯ ಸಿದ್ಧತೆಗೆ ಸಮಯ ಹಿಡಿಯುತ್ತದೆ. ಅಷ್ಟರಲ್ಲಿ ನಾನು ಕೊಲೆಗಾರರನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ಅದು ಅವರೊಡನೇ ಎಂದಾದರೆ ಮದುವೆಯ ಪ್ರಶ್ನೆಯೇ ಇರುವುದಿಲ್ಲ. ಕೊಲೆಗಾರ ಬೇರೆಯವನಾದರೆ ನೀನು ಮದುವೆಯನ್ನು ಮುಂದೂಡುವುದು, ಮನೆಯವರು ಬೇಸರಿಸಿಕೊಳ್ಳುವುದು ಇವೆಲ್ಲ ಏಕೆ?”

“ಸರಿ ಸರ್‌….”

ನಳಿನಾಳೊಡನೆ ಮನೆಗೆ ಹಿಂದಿರುಗುವಾಗ ದೇವರಾಜ್‌ ಹೇಳಿದಳು, “ನಾನು ಕಾವ್ಯಾಳಿಗೆ ತಿಳಿಹೇಳಿದ್ದೇನೆ. ಅವಳು ಮದುವೆ ಬೇಡವೆನ್ನುವುದಿಲ್ಲ. ಸೌಮ್ಯಾಳ ವಿದ್ಯಾಭ್ಯಾಸಕ್ಕೆ ಇನ್ನೇನೂ ತೊಂದರೆಯಾಗುವುದಿಲ್ಲ.”

ಮಾರನೆಯ ದಿನ ದೇವರಾಜ್‌ ಕಮೀಷನರೊಂದಿಗೆ ಚರ್ಚಿಸಿ ಕೇಸ್‌ ಫೈಲ್‌ನ್ನು ಹೊರತೆಗೆಸಿದರು. ಸರಿಯಾದ ಸಾಕ್ಷಿ ಇಲ್ಲದಿರುವುದರಿಂದ ಕೊಲೆಗಾರ ಕೈಗೆ ಸಿಗಲಾರ ಎಂದು ಪೊಲೀಸರು ಕೇಸ್‌ನ್ನು ಕೈಬಿಟ್ಟಿದ್ದರು. ಕಮೀಷನರನ್ನು ಒಪ್ಪಿಸಿ ದೇವರಾಜ್‌ ಕೇಸ್‌ನ್ನು ತಾವು ವಹಿಸಿಕೊಂಡರು.

ಕೊಲೆಯು ಪತ್ತೇದಾರಿ ಕೆಲಸ ಮತ್ತೆ ಪ್ರಾರಂಭವಾದುದನ್ನು ಕಂಡು ಅಶೋಕನ ಮನೆಯವರಿಗೆ ಅಚ್ಚರಿಯಾಯಿತು. ಜೊತೆಗೆ ಸಂತೋಷ ಆಯಿತು. ಎಲ್ಲರಿಗಿಂತ ಅಶೋಕನಿಗೇ ಹೆಚ್ಚು ಸಂತೋಷವಾದಂತೆ ಕಂಡುಬಂದಿತು.

“ನಾನು ಬೇಕೆಂದೇ ಕೆಲಸದಲ್ಲಿ ಹೆಚ್ಚು ತೊಡಗಿಕೊಂಡಿರುತ್ತೇನೆ ಸರ್‌, ಏಕೆಂದರೆ ಸ್ವಲ್ಪ ವಿರಾಮ ದೊರೆತರೂ ನಾನು ತಾತನ ಕೊಲೆ ಯಾರು ಮಾಡಿರಬಹುದು ಎಂದು ಯೋಚಿಸುವಂತಾಗುತ್ತದೆ,” ಎಂದು ಅಶೋಕ್‌ ಹೇಳಿದ.

“ಮತ್ತು ಏಕೆ ಕೊಲೆ ಮಾಡಿರಬಹುದು ಎಂದೂ ಯೋಚನೆ ಬರುತ್ತದಲ್ಲವೇ?”

“ತಾತನ ಕತ್ತಿನಲ್ಲಿ ದಪ್ಪನೆಯ ಬಂಗಾರದ ಸರ, ಬೆರಳಿನಲ್ಲಿ ವಜ್ರದುಂಗುರ, ಕೈನಲ್ಲಿ ಚಿನ್ನದ ಸರಪಳಿಯ ಗಡಿಯಾರ ಮತ್ತು ಚಿನ್ನದ ಬಟನ್‌ ಉಳ್ಳ ಕುರ್ತಾ ಇದೆಲ್ಲ ಇದ್ದವು. ಅವರ ಪರ್ಸ್‌ನಲ್ಲಿ ಯಾವಾಗಲೂ ಸಾವಿರಾರು ರೂಪಾಯಿ ಇರುತ್ತಿದ್ದವು. ಕೋಣೆಯಲ್ಲಿ ನನ್ನ ಲ್ಯಾಪ್‌ಟಾಪ್‌ ಮತ್ತು ಐ ಪ್ಯಾಡ್‌ ಸಹ ಇದ್ದವು. ಆದರೆ ಕಳ್ಳ ಇವುಗಳನ್ನೆಲ್ಲ ತೆಗೆಯುವ ಮುನ್ನವೇ ರಾಮುವಿನ ಕೈಯಿಂದ ಲೋಟದ ಮುಚ್ಚಳ ಜಾರಿ ಮೆಟ್ಟಿಲ ಮೇಲೆ ಬಿದ್ದು ಸದ್ದಾದುದರಿಂದ, ಅವನು ಹೆದರಿ ಓಡಿಹೋಗಿದ್ದಾನೆ.”

“ಮರಕ್ಕೆ ಹತ್ತಿ ಇಳಿಯುವ ದಾರಿ ಹೊಸಬರಿಗೆ ತಿಳಿದಿರುವುದಿಲ್ಲ ಅಲ್ಲವೇ?”

“ಇದೇ ನಮಗೆ ಚಿಂತೆಯಾಗಿದೆ ಸರ್‌. ಯಾರೋ ಪರಿಚಯದವರೇ ಕೊಲೆ ಮಾಡಿದ್ದಾರೆ. ಪೊಲೀಸರು ಮೊದಲು ನನ್ನ ಮೇಲೂ ಅನುಮಾನ ಪಟ್ಟಿದ್ದರು. ಆದರೆ ಆ ದಿನ ನನ್ನ ಒಬ್ಬ ಸ್ನೇಹಿತನ ಮದುವೆ ಇತ್ತು. ಅಲ್ಲಿ ಪ್ರತಿಯೊಂದು ಫೋಟೋ ಮತ್ತು ವೀಡಿಯೋದಲ್ಲಿ ಇದ್ದುದರಿಂದ ನಾನು ಉಳಿದುಕೊಂಡೆ.”

“ನಾನು ಆ ಆಲ್ಬಮ್ ಮತ್ತು ವೀಡಿಯೋವನ್ನು ನೋಡಬೇಕಲ್ಲ.”

“ಖಂಡಿತ. ರವಿಯ ಮನೆಯಿಂದ ಅವುಗಳನ್ನು ತಂದು ತೋರಿಸುತ್ತೇನೆ.”

ಸ್ವಲ್ಪ ಹೊತ್ತಿನ ನಂತರ ಅಶೋಕ್‌ ಫೋನ್‌ ಮಾಡಿ ಆಲ್ಬಮ್ ಮತ್ತು ವೀಡಿಯೋ ಕ್ಯಾಸೆಟ್‌ ತಂದಿರುವುದಾಗಿ ದೇವರಾಜ್‌ಗೆ ತಿಳಿಸಿದ.

“ಒಳ್ಳೆಯದಾಯಿತು. ಅವನ್ನು ನನ್ನ ಆಫೀಸ್‌ಗೆ ಕಳುಹಿಸಿ ಕೊಡುವುದಕ್ಕೆ ಆಗುತ್ತದೇನು?”

“ಈಗಲೇ ಕಳುಹಿಸುತ್ತೇನೆ ಸರ್‌. ಮತ್ತೆ, ನನ್ನ ಅಗತ್ಯ ಇದ್ದರೆ ಫೋನ್‌ ಮಾಡಿ ಸರ್‌. ತಕ್ಷಣ ಹಾಜರಾಗುತ್ತೇನೆ.”

ದೇವರಾಜ್‌ ಆಲ್ಬಮ್ ನ್ನು ನೋಡಿದ ನಂತರ ಕಾವ್ಯಾಳಿಗೆ ಫೋನ್‌ ಮಾಡಿದರು.

“ಕಾವ್ಯಾ, ಆ ದಿನ ನೀನು ಓಡಿ ಹೋಗುತ್ತಿದ್ದವನ ಬಟ್ಟೆಯ ಬಣ್ಣವನ್ನೂ ನೋಡಿದೆಯಾ?”

“ಇಲ್ಲ ಸರ್‌, ಅಲ್ಲಿ ಹೆಚ್ಚು ಬೆಳಕಿರಲಿಲ್ಲ. ಕುರ್ತಾದ ಉದ್ದ ಮತ್ತು ಹೊಳಪು ಮಾತ್ರ ಕಾಣಿಸಿತು.”

“ಮದುವೆ ಮನೆಯಲ್ಲಿ ಅಶೋಕ್‌ ಧರಿಸಿದ್ದಂತಹ ಉಡುಪನ್ನೇ ಇನ್ನೂ ಅನೇಕರು ಧರಿಸಿದ್ದರು ಅಲ್ಲವೇ?”

“ಹೌದು ಸರ್‌. ಆಗ ಅಂತಹ ಡ್ರೆಸ್‌ ಹೆಚ್ಚು ಫ್ಯಾಷನ್‌ನಲ್ಲಿತ್ತು.”

“ಹಾಗಿದ್ದರೆ ಓಡಿಹೋದವನು ಅಶೋಕ್‌ ಅಂತ ಹೇಗೆ ಹೇಳುವುದು, ಬೇರೆಯವರೂ ಹೋಗಿರಬಹುದು ಅಲ್ಲವೇ?”

“ಅಶೋಕ್‌ ಅಂತ ಏಕೆ ಹೇಳುತ್ತೇನೆಂದರೆ ಓಡಿ ಹೋಗುವ ದಾರಿ ಕೇವಲ ಅಶೋಕ್‌ಗೆ ಮಾತ್ರ ಗೊತ್ತಿತ್ತು. ಅಲ್ಲದೆ, ತಾತ ಇಲ್ಲದಿರುವುದರಿಂದ ಅನುಕೂಲವಾದದ್ದು ಅವನಿಗೆ ತಾನೇ…..”

ಕಾವ್ಯಾ ಹೇಳಿದುದೇನೋ ತರ್ಕಬದ್ಧವಾಗಿತ್ತು. ಆದರೆ ಸದ್ಯದಲ್ಲಿ ದೇವರಾಜ್‌ ಇದನ್ನು ಒಪ್ಪಲು ಸಿದ್ಧರಿರಲಿಲ್ಲ. ಅವರು ಫೋಟೊ ಮತ್ತು ಕ್ಯಾಸೆಟ್‌ನ್ನು ಮತ್ತೆ ನೋಡಿದರು. ಆಮೇಲೆ ಅಶೋಕನಿಗೆ ಫೋನ್‌ ಮಾಡಿ ಬರುವಂತೆ ಹೇಳಿದರು.

“ಮದುವೆ ಗಂಡು ರವಿ ನಿನಗೆ ಹೇಗೆ ಸ್ನೇಹಿತ?”

“ನಾವು ಕಾಲೇಜಿನಲ್ಲಿ ಜೊತೆಯಲ್ಲಿ ಓದುತ್ತಿದ್ದೆವು.”

“ಹಾಗಾದರೆ ಫೋಟೋಗಳಲ್ಲಿ ಇರುವವರೆಲ್ಲ ನಿಮ್ಮ ಕಾಲೇಜಿನ ಗೆಳೆಯರು ಎಂದಾಯಿತು.”

“ಹೌದು,” ಅಶೋಕ್‌ ಫೋಟೋವನ್ನು ತೋರಿಸುತ್ತಾ ಹೇಳಿದ, “ಆದರೆ ಇಲ್ಲಿ ನನ್ನ ಪಕ್ಕದಲ್ಲೇ ಇದ್ದಾನಲ್ಲ, ಅವನು ನನ್ನ ಬಿಸ್‌ನೆಸ್‌ ಪಾರ್ಟ್‌ನರ್‌ ನವೀನ್‌. ಅವನು ಅಮೆರಿಕಾದಲ್ಲಿ ಕಂಪ್ಯೂಟರ್‌ ಡಿಗ್ರಿ ಮಾಡಿಕೊಂಡು ಬಂದಿದ್ದಾನೆ. ನಿಮಗೇ ಗೊತ್ತಲ್ಲ ಸರ್‌,  ಐಬಿಎಂನ ಏಜೆನ್ಸಿ ಪಡೆಯಬೇಕಾದರೆ ಕಂಪ್ಯೂಟರ್‌ ಸ್ಪೆಷಲಿಸ್ಟ್ ಆಗಿರಬೇಕು. ಜೊತೆಗೇ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ಗಳ ಮಾರಾಟದ ಅನುಭವ ಹೊಂದಿರಬೇಕು ಮತ್ತು ಒಂದು ದೊಡ್ಡ ಏರ್‌ಕಂಡೀಶನ್‌ ಶೋರೂಮ್ ನ ಮಾಲೀಕರಾಗಿರಬೇಕು. ನವೀನ್‌ ಮತ್ತು ನಾನು ಸೇರಿ ಈ ಎಲ್ಲ ಷರತ್ತುಗಳನ್ನು ಪೂರೈಸಿ ಕಂಪನಿಯ ಜೋನ್‌ ಡಿಸ್ಟ್ರಿಬ್ಯೂಟರ್‌ಶಿಪ್‌ ಪಡೆದಿದ್ದೇವೆ.”

“ನವೀನ್‌ ನಿನಗೆ ಯಾವಾಗಿನಿಂದ ಪರಿಚಯ?”

“ಚಿಕ್ಕ ವಯಸ್ಸಿನಿಂದಲೂ ಪರಿಚಯ ಸರ್‌. ನಮ್ಮ ಮನೆಯಲ್ಲಿ ಒಂದು ನೇರಳೆ ಮರವಿದೆ. ನಾವಿಬ್ಬರೂ ಅದನ್ನು ಹತ್ತಿ ಕುಳಿತು, ಮುಂದೆ ದೊಡ್ಡದಾಗಿ ಏನಾದರೂ ಮಾಡಬೇಕೆಂದು ಯೋಜನೆ ಹಾಕುತ್ತಿದ್ದೆವು. ನವೀನ್‌ ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಅಮೆರಿಕಾಗೆ ಹೋದ. ಆದರೆ ನಾನು ನನ್ನ ತಾತ ಮತ್ತು ಕಾವ್ಯಾ ಇವರಿಬ್ಬರ ಮೇಲಿನ ಪ್ರೀತಿ, ಮೋಹಗಳಿಂದಾಗಿ ಎಲ್ಲಿಗೂ ಹೋಗಲಿಲ್ಲ. ನವೀನ್‌ ನಮ್ಮ ಬಾಲ್ಯದ ಸ್ನೇಹ ಮತ್ತು ಕನಸುಗಳನ್ನು ಮರೆತಿರಲಿಲ್ಲ. ಅವನು ಅಮೆರಿಕಾದಿಂದ ಹಿಂದಿರುಗಿ ಬಂದು ನನ್ನ ಜೊತೆಗೂಡಿ ಈ ದೊಡ್ಡ ಏಜೆನ್ಸಿ ದೊರೆಯುವಂತೆ ಮಾಡಿದ್ದಾನೆ.”

“ಅಶೋಕ್‌, ಈ ಕೇಸ್‌ನ್ನು ಪತ್ತೆ ಮಾಡಲು ಈ ಫೋಟೋದಲ್ಲಿರುವ ನಿನ್ನ ಎಲ್ಲ ಸ್ನೇಹಿತರನ್ನೂ ಪ್ರಶ್ನಿಸಬೇಕಾಗಬಹುದು.”

“ನೀವು ಯಾವಾಗ ಹೇಳಿದರೆ ಆಗ ನಾನು ಅವರನ್ನೆಲ್ಲ ಕರೆದುಕೊಂಡು ಬರುತ್ತೇನೆ ಸರ್‌. ಆದರೆ ಅದಕ್ಕೆ ಮೊದಲು ನೀವು ಕಾವ್ಯಾಳನ್ನು ವಿಚಾರಿಸಿದರೆ ಏನಾದರೂ ವಿಷಯ ತಿಳಿಯಬಹುದು.”

“ಅದು ಹೇಗೆ?”

“ಗೊತ್ತಿಲ್ಲ ಸರ್‌… ಆದರೆ ಅವಳಿಗೆ ಏನಾದರೂ ಗೊತ್ತಿರಬಹುದು ಅಂತ ನನಗೆ ಅನ್ನಿಸುತ್ತದೆ. ಏಕೆಂದರೆ ತಾತನ ಕೊಲೆ ನಡೆದ ಮೇಲೆ ಅವಳು ಮೊದಲಿನ ಕಾವ್ಯಾ ಆಗಿ ಉಳಿದಿಲ್ಲ. ಬಹಳ ಮೌನವಾಗಿಬಿಟ್ಟಿದ್ದಾಳೆ.”

“ತಾತನ ಕೊಲೆ ವಿಷಯ ತಿಳಿದಾಗ, ನಿನ್ನ ಜೊತೆ ಯಾವ ಸ್ನೇಹಿತರು ಬಂದರು?”

“ಯಾರೂ ಇಲ್ಲ ಸರ್‌. ಬಂಟಿ ಬಂದು ವಿಷಯ ತಿಳಿಸಿದ ಕೂಡಲೇ ನಾನು ಯಾರಿಗೂ ಹೇಳದೆ ಅವನ ಸ್ಕೂಟರ್‌ ಹಿಂದೆ ಕುಳಿತು ಬಂದುಬಿಟ್ಟೆ.”

“ನಿನ್ನನ್ನು ಹುಡುಕಿಕೊಂಡು ಯಾರೂ ನಿನ್ನ ಹಿಂದೆ ಬರಲಿಲ್ಲವೇ?”

“ಇಲ್ಲ ಸರ್‌,” ಅಶೋಕ್‌ ಇಲ್ಲವೆಂದು ತಲೆ ಅಲ್ಲಾಡಿಸಿದ.

“ಆ ರಾತ್ರಿ ನಮ್ಮ ಮನೆಯವರು ಮತ್ತು ಕಾವ್ಯಾಳ ಮನೆಯವರು ಮಾತ್ರ ಅಲ್ಲಿದ್ದುದು. ಬೇರೆಯವರಿಗೆಲ್ಲ ತಿಳಿದದ್ದು ಬೆಳಗಾದ ಮೇಲೆಯೇ.”

ಮರುದಿನ ಮಧ್ಯಾಹ್ನ ಕಾವ್ಯಾಳ ಜೊತೆಯಲ್ಲಿ ಇನ್‌ಸ್ಪೆಕ್ಟರ್‌ ದೇವರಾಜ್‌ ತನ್ನ ಶೋರೂಮಿಗೆ ಬಂದುದನ್ನು ಕಂಡು ಅಶೋಕ್‌ ಚಕಿತನಾದ, “ಸರ್‌, ನೀವಿಲ್ಲಿ?”

“ಕಾವ್ಯಾಳನ್ನು ವಿಚಾರಿಸಿ ಅಂತ ಹೇಳಿದೆಯಲ್ಲ. ಅದಕ್ಕೇ ಅವಳನ್ನು ಕರೆದುಕೊಂಡು ಬಂದಿದ್ದೇನೆ. ನಿನ್ನ ಬಿಸ್‌ನೆಸ್‌ ಪಾರ್ಟ್‌ನರ್‌ ಎಲ್ಲಿ?”

“ಕ್ಯಾಬಿನ್‌ನಲ್ಲಿ ಇದ್ದಾನೆ ಸರ್‌.”

“ನಡಿ, ಅಲ್ಲೇ ಕುಳಿತು ಮಾತನಾಡೋಣ,” ದೇವರಾಜ್‌ ಹೇಳಿದರು.

ಅಶೋಕ್‌ ಇಬ್ಬರನ್ನೂ ನವೀನ್‌ನ ಕ್ಯಾಬಿನ್‌ಗೆ ಕರೆದೊಯ್ದು ಪರಸ್ಪರ ಪರಿಚಯ ಮಾಡಿಸಿದ.

“ಏನು ತರಿಸಲಿ, ಹಾಟ್‌ ಆರ್‌ ಕೋಲ್ಡ್?” ನವೀನ್‌ ಔಪಚಾರಿಕವಾಗಿ ಕೇಳಿದ.

“ಅದೆಲ್ಲ ಆಮೇಲೆ. ಈಗ ಅಶೋಕನ ತಾತನ ಹತ್ಯೆಯ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಿ,” ಎಂದರು ದೇವರಾಜ್‌.

ನವೀನ್‌ ಗಾಬರಿಗೊಂಡು ಕೇಳಿದ, “ಅದರ ಬಗ್ಗೆ ನಾನು ಏನು ಹೇಳಲಿ? ನನಗೆ ಆ ವಿಷಯ ತಿಳಿದದ್ದೇ ಮಾರನೇ ದಿನ, ಅದೂ ಕಾವ್ಯಾ ಹೇಳಿದಾಗ.”

“ನವೀನ್‌, ಈ ವಿಷಯವನ್ನೇ ನಾನು ಕೇಳಬೇಕು ಅಂತಿರುವುದು. ನೀವು ಸಾಯಂಕಾಲದಿಂದಲೂ ಅಶೋಕನ ಜೊತೆಗೇ ಇದ್ದವರು ಅವನು ಬಂಟಿಯ ಜೊತೆ ಹೋದಾಗ ಹೇಗೆ ನೋಡಲಿಲ್ಲ?”

ನವೀನ್‌ ತಬ್ಬಿಬ್ಬಾದ. ಕೂಡಲೇ ಕೊಂಚ ಸಾವರಿಸಿಕೊಂಡು ಹೇಳಿದ, “ಆಗ ನಾವೆಲ್ಲ, ರವಿಯ ಸುತ್ತ ಕುಳಿತು ಅವನನ್ನು  ರೇಗಿಸುತ್ತಿದ್ದೆವು. ಅಶೋಕ್‌ ಹೋದದ್ದನ್ನು ನಾವು ಗಮನಿಸಲಿಲ್ಲ.”

“ಆದರೆ ನೀವು ಆಗ ಅಲ್ಲಿರಲೇ ಇಲ್ಲವಲ್ಲ.”

“ಏನು ಹೇಳುತಿದ್ದೀರಿ ಇನ್‌ಸ್ಪೆಕ್ಟರ್‌ ಸಾಹೇಬರೇ…? ನಾನು ರವಿಯ ಪಕ್ಕದಲ್ಲೇ ಕುಳಿತಿದ್ದೆನಲ್ಲಾ,” ನವೀನ್‌ ಜೋರಾಗಿ ಹೇಳಿದ.

“ಹಾಗಿದ್ದರೆ ನೀವು ಆಲ್ಬಮ್ ನ ಈ ಫೋಟೋಗಳಲ್ಲಿ ಕಾಣಿಸುತ್ತಿಲ್ಲವಲ್ಲ….?”

“ನಾನಾಗ ಬಾತ್‌ರೂಮಿಗೆ ಹೋಗಿದ್ದೆ. ಮದುವೆ ಮನೆ ಊಟ, ತಿಂಡಿ ಮಾಡಿದ ಮೇಲೆ ಹೋಗಬೇಕಾಗುತ್ತದೆ ಅಲ್ಲವೇ?” ನವೀನ್‌ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಹೇಳಿದ.

“ನೀವು ತೊಂದರೆ ತೆಗೆದುಕೊಂಡು ವಿವರಣೆ ಕೊಡುವುದು ಬೇಡ. ಆಗ ನೀವೆಲ್ಲಿದ್ದೀರಿ ಅಂತ ನಾನು ಹೇಳುತ್ತೇನೆ… ನೀವು ಆ ಸಮಯದಲ್ಲಿ ಅಶೋಕನ ತಾತನ ಕೋಣೆಯಲ್ಲಿದ್ದಿರಿ…”

ದೇವರಾಜ್‌ರ ಮಾತನ್ನು ಅರ್ಧಕ್ಕೆ ತಡೆಯುತ್ತಾ ನವೀನ್‌ ಹೇಳಿದ, “ಇನ್‌ಸ್ಪೆಕ್ಟರ್‌ ಸಾಹೇಬರೇ, ನೀವು ನನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದೀರಿ.”

ದೇವರಾಜ್‌ ಶಾಂತಸ್ವರದಲ್ಲಿ ಹೇಳಿದರು, “ನೀವು ಮದುವೆ ಮನೆಯಿಂದ ಎಷ್ಟು ಹೊತ್ತಿಗೆ ಹೋದಿರಿ ಎನ್ನುವುದು ವೀಡಿಯೋ ಕ್ಯಾಸೆಟ್‌ನಲ್ಲಿ ರೆಕಾರ್ಡ್‌ ಆಗಿದೆ. ತಾತನ ಕಥೆ ಮುಗಿಸಿ ಮತ್ತೆ ಮದುವೆ ಮನೆಗೆ ಬರಬೇಕೆಂಬುದು ನಿಮ್ಮ ಉದ್ದೇಶವಾಗಿದ್ದಿರಬಹುದು. ಆದರೆ ನೇರಳೇ ಮರದಿಂದ ಬೇಗನೆ ಇಳಿಯುವ ಆತುರದಲ್ಲಿ ನಿಮ್ಮ ಬಟ್ಟೆ ಕೊಳೆಯಾಗಿಬಿಟ್ಟಿತ್ತು. ಆದ್ದರಿಂದ ಮದುವೆ ಮನೆಗೆ ವಾಪಸ್‌ ಬರಲಾಗಲಿಲ್ಲ.”

“ಇದೇನು… ಮರ ಹತ್ತಿ ಇಳಿಯುವ ಕಥೆ ಕಟ್ಟುತ್ತಿದ್ದೀರಿ? ಇದಕ್ಕೇನಾದರೂ ನಿಮ್ಮಲ್ಲಿ ಸಾಕ್ಷಿ ಇದೆಯೇನು?” ನವೀನ್‌ ಸವಾಲು ಹಾಕಿದ.

“ಹೌದು, ನೀವು ಸ್ವಲ್ಪ ಆ ಕಡೆ ತಿರುಗಿ ನಿಂತುಕೊಳ್ಳಿ. ಅಶೋಕ್‌, ನೀನೂ ಸಹ ನಿನ್ನ ಸ್ನೇಹಿತನ ಪಕ್ಕ ಆ ಕಡೆ ತಿರುಗಿ ನಿಲ್ಲು,” ಎಂದು ಹೇಳಿ ದೇವರಾಜ್‌ ಕಾವ್ಯಾಳತ್ತ ತಿರುಗಿದರು, “ಕಾವ್ಯಾ… ಇವರಿಬ್ಬರನ್ನೂ ಗಮನಿಸಿ ನೋಡು, ಇಬ್ಬರದೂ ಒಂದೇ ಆಕಾರ. ಕತ್ತಲಲ್ಲಿ ಮರದಿಂದ ದುಮುಕಿ ಓಡಿದವನು ಅಶೋಕನೋ ಅಥವಾ ನವೀನನೋ ಎಂದು ಗುರುತಿಸಲು ಕಷ್ಟವಾಗಿರುತ್ತದೆ.”

“ನೀವು ಹೇಳುತ್ತಿರುವುದು ಸರಿಯಾಗಿದೆ ಸರ್‌,” ಕಾವ್ಯಾ ಉದ್ವೇಗಗೊಂಡು ಹೇಳಿದಳು, “ನವೀನ್‌ ಸಹ ಅಶೋಕ್‌ನಂತೆಯೇ ಡ್ರೆಸ್‌ ಮಾಡಿಕೊಂಡಿದ್ದನೆಂಬುದು ನನಗೆ ಹೊಳೆಯಲೇ ಇಲ್ಲ. ಅವನಿಗೂ ಮರ ಹತ್ತಿ ಇಳಿಯುವ ದಾರಿ ತಿಳಿದಿತ್ತು. ಅಲ್ಲದೆ, ಕೊಲೆ ಮಾಡಲು ಹೆಚ್ಚು ಕಾರಣ ಇದ್ದಿತು. ಅವನು ಐಬಿಎಂನ ಏಜೆನ್ಸಿ ಪಡೆಯಲು ಪಣ ತೊಟ್ಟಿದ್ದನು. ತನ್ನ ವಿದೇಶೀ ನೌಕರಿಯನ್ನು ಬಿಟ್ಟು, ಗ್ರೀನ್‌ ಕಾರ್ಡ್‌ ವಾಪಸ್‌ ಮಾಡಿ ಭಾರತಕ್ಕೆ ಮರಳಿ ಬಂದಿದ್ದನು…..”

ಕಾವ್ಯಾಳ ಭುಜ ಹಿಡಿದು ಅಲುಗಾಡಿಸುತ್ತಾ ಅಶೋಕ್‌ ಕೇಳಿದ, “ಇದೇನು ಹೇಳುತ್ತಿದ್ದೀಯಾ ಕಾವ್ಯಾ? ಯಾರೋ ಓಡಿ ಹೋದದ್ದನ್ನು ನೋಡಿದೆ ಎಂದು ನೀನು ಒಮ್ಮೆಯೂ ಹೇಳಲಿಲ್ಲವಲ್ಲ….?”

“ಹೇಗೆ ಹೇಳುತ್ತಾಳೆ?” ದೇವರಾಜ್‌ ಕಾವ್ಯಾಳ ಪರವಾಗಿ ಮಾತನಾಡುತ್ತಾ, “ಓಡಿ ಹೋದವನು ನೀನು ಎಂಬ ಅನುಮಾನವಿತ್ತು ಅವಳಿಗೆ. ಅದಕ್ಕಾಗಿಯೇ ಮದುವೆಯನ್ನು ಮುಂದೂಡುತ್ತಾ ಮೌನವಾಗಿರುತ್ತಿದ್ದಳು. ಹೇಗೋ ಈಗಲಾದರೂ ಸತ್ಯ ಹೊರಗೆ ಬಂದಿತು.

“ನವೀನ್‌, ತಪ್ಪಿಸಿಕೊಂಡು ಓಡಿಹೋಗುವ ಸಾಹಸ ಮಾಡಬೇಡ. ಪೊಲೀಸರು ಹೊರಗೆ ಸುತ್ತಲೂ ಕಾವಲಿದ್ದಾರೆ. ನಿನ್ನ ಸ್ಟಾಫ್‌ ಎದುರಿಗೆ ನಿನಗೆ ಬೇಡಿ ತೊಡಿಸಿ ಕರೆದೊಯ್ಯುವಂತೆ ಮಾಡದೆ ಸುಮ್ಮನೆ ನನ್ನ ಜೊತೆ ಬಾ. ಹೊರಡುವ ಮೊದಲು ನೀನೇಕೇ ಹೀಗೆ ಮಾಡಿದೆ ಎಂದು ನಿನ್ನ ಸ್ನೇಹಿತನಿಗೆ ತಿಳಿಸು,” ಎಂದರು.

“ಹೌದು ನವೀನ್‌, ತಾತನಿಗೆ ಹೆಚ್ಚಿನ ಲಾಭಾಂಶ ಕೊಟ್ಟು ಬೇರೆ ಶೋರೋಮ್ ನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದೆಲ್ಲ ಹೇಳಿದ್ದೆ. ಮತ್ತೆ ಹೀಗೇಕೆ ಮಾಡಿದೆ?” ಅಶೋಕ್‌ ದುಃಖದಿಂದ ಕೇಳಿದ.

“ನಾನೆಷ್ಟೇ ಪ್ರಯತ್ನಪಟ್ಟರೂ ನಿನ್ನ ತಾತಾ ಅವರ ಶೋರೂಮ್ ಶಿಫ್ಟ್ ಮಾಡಲು ಒಪ್ಪಲೇ ಇಲ್ಲ. ಈ ಶೋರೂಮ್ ನಿನ್ನ ಹೆಸರಿಗೆ ಆಗಿದೆ ಎಂದು ಹೇಳಿದ್ದರಿಂದಲೇ ನಾನು ಕೆಲಸ ಬಿಟ್ಟು, ನನ್ನ ಭವಿಷ್ಯವನ್ನು ಪಣಕ್ಕಿಟ್ಟು ಹಿಂದಿರುಗಿ ಬಂದಿದ್ದೆ. ಕಂಪ್ಯೂಟರ್‌ ಮಾರಾಟದಿಂದ ಒಳ್ಳೆಯ ಲಾಭ ಬರುತ್ತದೆ ಅಂತ ತಿಳಿಸಿ ಹೇಳಿದರೂ ನಿನ್ನ ತಾತ ಅವರ ವರ್ಚಸ್ಸಿನ ಮೋಹವನ್ನು ಬಿಡದೆ ಕುಳಿತಿದ್ದರು. ಅವರೂ ಹಠ ಮಾಡುತ್ತಿದ್ದರೆ, ನಾನು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಕ್ಕೆ ಆಗುತ್ತಿತ್ತೇನು?” ನವೀನ್‌ ಕಹಿಯಾಗಿ ಹೇಳಿದ.

“ಹೌದಪ್ಪ, ನೀನು ಜೈಲಿನಲ್ಲಿ ಒಂದು ದಿನವೂ ಕೈ ಕಟ್ಟಿ ಕುಳಿತಿರದ ಹಾಗೆ ನಾನು ನೋಡಿಕೊಳ್ಳುತ್ತೇನೆ ಬಿಡು,” ಎಂದು ದೇವರಾಜ್‌ ಹೇಳಿದಾಗ, ಅಂತಹ ಬಿಗು ವಾತಾವರಣದಲ್ಲಿಯೂ ಅಶೋಕ್‌ ಮತ್ತು ಕಾವ್ಯಾರಿಗೆ ನಗು ಬಂದಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ