“ಪ್ರತಿದಿನ ಗಂಡಂದಿರು ತಂದುಕೊಡುವ ಚಹಾದ ಕಪ್ ಹಿಡಿದು ಹೀರುವವರು ನಿಜಕ್ಕೂ ಅದೃಷ್ಟಶಾಲಿಗಳು. ಚಹಾ ಬಿಡಿ, ಒಂದು ಗ್ಲಾಸ್ ನೀರು ಕೂಡ ಇವರ ಕೈಯಿಂದ ಸಿಗುವುದಿಲ್ಲ,” ಇದು ಶಾಲಿನಿ ತನ್ನ ಪತಿ ವಿವೇಕ್ ಬಗ್ಗೆ ಹೇಳುವ ಮಾತು. ಅದೊಂದು ದಿನ ವಿವೇಕ್ ಬೇಗನೇ ಎದ್ದು 2 ಕಪ್ ಚಹಾ ತಯಾರಿಸಿದ. ಬಾಯಲ್ಲಿ ಸಿಹಿ ಮುತ್ತುಗಳನ್ನು ಉದುರಿಸುತ್ತ ಹೇಳಿದ, “ಗುಡ್ ಮಾರ್ನಿಂಗ್ ಡಿಯರ್, ನಿನಗಾಗಿ ಬಿಸಿಬಿಸಿ ಚಹಾ ಮಾಡಿ ತಂದಿರುವೆ.”
ಅವನ ಮಾತು ಕೇಳಿ ಶಾಲಿನಿಗೆ ಆಶ್ಚರ್ಯವೋ ಆಶ್ಚರ್ಯ! ಅವಳು ಮುಗುಳ್ನಗುತ್ತಲೇ ಅವನ ಕೈಯಿಂದ ಕಪ್ ಕೈಗೆತ್ತಿಗೊಂಡಳು. ಒಂದು ಗುಟುಕು ಹೀರಿದ ಬಳಿಕ ಮುಖ ಸಿಂಡರಿಸುತ್ತ ಹೇಳಿದಳು, “ಇದೆಂಥ ಚಹಾ? ಸಕ್ಕರೆ ಟೀಪುಡಿ ಎರ್ರಾಬಿರ್ರಿ ಹಾಕಿಬಿಟ್ಟಿದ್ದೀರಾ? ಹಾಲಂತೂ ಇಲ್ಲವೇ ಇಲ್ಲ. ಬೆಳ್ಳಂಬೆಳಗ್ಗೆ ನನ್ನ ಮೂಡ್ ಹಾಳ್ ಮಾಡಿಬಿಟ್ರಿ…ವಿವೇಕ್ಗೂ ಸಿಟ್ಟು ಬಂತು. `ಅತ್ತ ದರಿ, ಇತ್ತ ಪುಲಿ’ ಎಂಬಂತಹ ಸ್ಥಿತಿ ನನ್ನದು ಮಾಡದೇ ಇದ್ದರೆ ಒಂದು. ಮಾಡಿದ್ರೆ ಈ ರೀತಿ ಕೊಂಕು ಮಾತು.”
ರಮೇಶ್ ಆಫೀಸ್ನಿಂದ ಮನೆಗೆ ಬರುತ್ತಿದ್ದಂತೆ ತನ್ನ ಸಾಮಾಜಿಕ ಜಾಲತಾಣ ಹಾಗೂ ಮೇಲ್ ಚೆಕ್ ಮಾಡಲು ಕುಳಿತ. ಆಗ ಹೆಂಡತಿ ಸೀಮಾ ಕೇಳಿದಳು, “ಊಟಕ್ಕೆ ಏನು ಮಾಡಲಿ?”
“ನಿನಗೇನು ಇಷ್ಟವೋ ಅದನ್ನು ಮಾಡು,” ಎಂದು ಹೇಳುತ್ತ ಲ್ಯಾಪ್ಟಾಪ್ನಲ್ಲಿ ಮಗ್ನನಾಗಿ ಬಿಟ್ಟ. ಆ ಮಾತಿಗೆ ಸೀಮಾ ಹೇಳಿದಳು, “ಊಟ ನಾನೊಬ್ಬಳೇ ಮಾಡ್ತೀನಾ, ನೀವು ಮಾಡ್ತೀರಿ ತಾನೇ ನಿಮಗೆ ಏನೂ ಇಷ್ಟವಿಲ್ಲವೇ? ಕೇಳಿದ್ರೆ ಹೀಗೆ, ಕೇಳದೇ ಇದ್ರೆ ಹಾಗೆ,” ಎಂದು ಒಟಗುಟ್ಟತ್ತ ಒಳಗೆ ಹೋದಳು.
ಆಗ ರಮೇಶ್ಗೆ ತಾನು ಗೊತ್ತಿದ್ದೊ ಗೊತ್ತಿಲ್ಲದೆಯೋ ಗೃಹಕಲಹ ಶುರು ಮಾಡಿದ್ದೇನೆ ಎಂದೆನಿಸಿತು. ವಾದವಿವಾದವನ್ನು ಮುಂದುವರಿಸಿ, ಮನೆಯ ವಾತಾವರಣ ಇನ್ನಷ್ಟು ಕದಡಲು ಇಷ್ಟಪಡುತ್ತಿರಲಿಲ್ಲ. ಹೀಗಾಗಿ ಶಸ್ತ್ರಾಸ್ತ್ರ ಕೆಳಗಿಡುತ್ತ ಹೇಳಿದ, “ನೀನು ನಿನ್ನ ಆಪ್ಶನ್ ಹೇಳು.”
“ಚಪಾತಿ ಆಲೂಗಡ್ಡೆ ಪಲ್ಯ, ಅಕ್ಕಿ ರೊಟ್ಟಿ, ಕುಂಬಳಕಾಯಿ ಪಲ್ಯ, ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ. ನಿಮಗೆ ಯಾವುದು ಇಷ್ಟ ಹೇಳಿ?”
“ಇಂದು ನೀನು ನನಗೆ ಆಲೂಗಡ್ಡೆ ಪಲ್ಯ ತಿನ್ನಿಸಿಯೇ ಇರುತ್ತೀಯಾ. ಇರಲಿ, ನನಗೆ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಮಾಡು,” ಎಂದು ಅವಳನ್ನು ಸಮಾಧಾನಪಡಿಸುತ್ತ ಹೇಳಿದಾಗ ಆಕೆ ಮುಗುಳ್ನಕ್ಕಳು. ಬಳಿಕ ರಮೇಶ್ ಪುನಃ ಲ್ಯಾಪ್ಟಾಪ್ನಲ್ಲಿ ಮುಳುಗಿದ.
ಒಂದು ಗಂಟೆ ಬಳಿಕ ಅವನಿಗೆ ಊಟಕ್ಕೆ ಬುಲಾವ್ ಬಂತು. ಅವನು ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ತಿನ್ನುವ ಅಪೇಕ್ಷೆಯಿಂದ ಟೇಬಲ್ ಹತ್ತಿರ ಬಂದಾಗ ಅವನು ಸೌತೇಕಾಯಿ ರೊಟ್ಟಿ ನೋಡಿ ದಂಗಾಗಿ ಹೋದ. ಅವನು ಅಷ್ಟಿಷ್ಟು ಕೋಪದಿಂದಲೇ ಕೇಳಿದ, “ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಎಲ್ಲಿ?“
“ಇಲ್ಲ ಮಾಡಲಿಲ್ಲ. ಫ್ರಿಜ್ ತೆರೆದಾಗ ನನಗೆ ಸೌತೇಕಾಯಿ ಮಿಕ್ಸ್ ಮಾಡಿದ ಹಿಟ್ಟು ಕಾಣಿಸಿತು. ಅದು ಬೇಗ ಕೆಟ್ಟು ಹೋಗುತ್ತದೆ. ಹಾಗಾಗಿ ಇವತ್ತು ಅದನ್ನೇ ಮಾಡಬೇಕಾಯಿತು.” ಅವಳು ತನ್ನ ತಿಳಿವಳಿಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತ ರಮೇಶ್ನತ್ತ ನೋಡಿದಳು. ಆದರೆ ಅವನ ಮೂಡ್ ಕೆಟ್ಟು ಹೋಯಿತು. ಅವನು ಕೇಳಿದ, “ನೀನು ಇದನ್ನೇ ಮಾಡಬೇಕೆಂದಿದ್ದರೆ, ನನ್ನನ್ನೇಕೆ ಕೇಳಬೇಕಿತ್ತು?”
“ಈಗ ನೀವೇನು ಹೇಳಲು ಹೊರಟಿರುವಿರಿ? ಎಂಬುದನ್ನು ನನ್ನ ಮುಂದೆ ಹೇಳಿ ನಾನು ಕೇವಲ ನನಗೆ ಬೇಕಾದ್ದನ್ನೇ ಮಾಡ್ತೀನಾ? ಎಲ್ಲವನ್ನು ಕೇಳಿ ಕೇಳಿ ಮಾಡಿದಾಗ ನಾನು ಇದನ್ನೇ ಕೇಳಬೇಕಾಗಿ ಬರುತ್ತದೆ,” ಎಂದು ಹೇಳುತ್ತಾ ಆಕೆ ಕಣ್ಣೀರು ತೆಗೆದಾಗ ಮನೆಯ ವಾತಾವರಣ ಕ್ಲೇಷಮಯವಾಯಿತು.
ಇದೇ ದೃಶ್ಯ ಹರೀಶ್ ಮನೆಯಲ್ಲೂ ನೋಡಲು ಸಿಕ್ಕಿತು. ಹೆಂಡತಿ ಅವನಿಗೆ ವಿನಂತಿಸುತ್ತಾ, “ಈ ತರಕಾರಿ ಸ್ವಲ್ಪ ಹೆಚ್ಚಿ ಕೊಡ್ತೀರಾ? ಇವತ್ತು ಬಹಳ ತಡವಾಗಿ ಹೋಗಿದೆ,” ಎಂದಳು.
ಹೆಂಡತಿಗೆ ನೆರವು ನೀಡುವ ಉದ್ದೇಶದಿಂದ ಅವನು ತರಕಾರಿಯನ್ನು ಬೇಗ ಬೇಗ ಕತ್ತರಿಸತೊಡಗಿದ. ಆಲೂಗಡ್ಡೆಯನ್ನು ದಪ್ಪ ದಪ್ಪ ಹೋಳುಗಳನ್ನಾಗಿ, ಹೂಕೋಸನ್ನು ಚಿಕ್ಕಚಿಕ್ಕ ತುಂಡುಗಳಾಗಿ ಕತ್ತರಿಸತೊಡಗಿದ. ಕತ್ತರಿಸಿದ ತರಕಾರಿ ನೋಡಿ ಅವಳು ಕೋಪದಿಂದ, “ಆಲೂಗಡ್ಡೆ ಕುದಿಯುವತನಕ ಹೂಕೋಸು ಬೆಂದು ಕರಗಿ ಹೋಗುತ್ತದೆ. ತರಕಾರಿ ಹೀಗೆ ಕತ್ತರಿಸೋದಾ? ನಿಮಗೆ ಕೆಲಸ ಮಾಡು ಅಂತ ಹೇಳಿದ್ದೇ ತಪ್ಪಾಗಿ ಹೋಯ್ತು,” ನಾನು ಯಾಕಾದ್ರೂ ತರಕಾರಿ ಕತ್ತರಿಸಿದೆನೋ ಎಂದು ಹೇಳಿಕೊಳ್ಳುತ್ತಾ ಹರೀಶ್ ಅಲ್ಲಿಂದ ಹೊರಟುಹೋದ.
ಮನೆ ಮನೆಯ ಕಥೆ
ಇದು ಒಂದೆರಡು ಮನೆಯ ಕಥೆಯಲ್ಲ. ಪ್ರತಿ ಮನೆ ಮನೆಯ ಕಥೆ. ಪ್ರತಿ ಮನೆಯಲ್ಲೂ ಈ ದೃಶ್ಯ ನೋಡಬಹುದು. ಪತಿ ಕೆಲಸ ಮಾಡದೇ ಇದ್ದರೆ ಮೈಗಳ್ಳ, ಸಲಹೆ ಕೊಟ್ಟರೆ ತಪ್ಪು ಸಲಹೆ ನೀಡಿದ ಆಪಾದನೆ.
ಸಾಮಾನ್ಯವಾಗಿ ಗೃಹಿಣಿ ಇಡೀ ದಿನ ಮನೆಯಲ್ಲೇ ಇರುತ್ತಾಳೆ. ಹೀಗಾಗಿ ಸಂಜೆ ಪತಿಯ ಜೊತೆ ಮಾತಾಡಲು ಆಕೆಯ ಬಳಿ ಸಾಕಷ್ಟು ವಿಷಯಗಳಿರುತ್ತವೆ. ಜೊತೆಗೆ ಪತಿಯ ಬಗೆಗಿನ ತನ್ನ ಪ್ರೀತಿ ತೋರ್ಪಡಿಸಿಕೊಳ್ಳಲು ಆಕೆ ಅವನ ಮೆಚ್ಚಿನ ಊಟ ತಿಂಡಿ ಮಾಡಬೇಕೆಂದು ಅವನ ಇಷ್ಟ ಏನೆಂದು ಕೇಳುತ್ತಾಳೆ. ಆದರೆ ಮಿತವ್ಯಯದಿಂದ ಮನೆ ನಡೆಸುವುದು ಕೂಡ ಅವಳ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಯಾವ ವಸ್ತು ಕೆಟ್ಟು ಹೋಗುವ ಸಾಧ್ಯತೆ ಇರುತ್ತೋ, ಆ ವಸ್ತುವನ್ನು ಮೊದಲು ಬಳಕೆ ಮಾಡಬೇಕೆನ್ನುತ್ತಾಳೆ. ಆಗ ಅವಳು ಗಂಡನ ಇಷ್ಟವನ್ನು ಬದಿಗೊತ್ತಿ ತನ್ನದೇ ಆದ ರೀತಿಯಲ್ಲಿ ಅಡುಗೆ ಮಾಡುತ್ತಾಳೆ. ಇನ್ನೊಂದೆಡೆ, ಉದ್ಯೋಗಸ್ಥ ಮಹಿಳೆ, ಯೋಚನೆಗೆ ಹೆಚ್ಚು ಸಮಯ ವ್ಯರ್ಥ ಮಾಡದೆ, ಗಂಡನಿಗೆ ಕೇಳಿ ಯೋಚಿಸುವ ಜವಾಬ್ದಾರಿಯನ್ನು ಅವನ ಹೆಗಲಿಗೆ ಹಾಕುತ್ತಾಳೆ. ಬಳಿಕ ಅಡುಗೆಮನೆಯಲ್ಲಿನ ಸಾಧ್ಯತೆಗಳತ್ತ ಗಮನಹರಿಸುತ್ತಾಳೆ. ಒಂದು ವೇಳೆ ಗಂಡನ ಇಷ್ಟ ಅದರೊಂದಿಗೆ ಹೊಂದಾಣಿಕೆಯಾದರೆ ಅದನ್ನೇ ಮಾಡುತ್ತಾಳೆ. ಇಲ್ಲವಾದರೆ, ಅವಳು ಗಂಡನ ಉತ್ತರಕ್ಕೂ ಕಾಯದೆ ಅಡುಗೆ ಮಾಡಿ ಮುಗಿಸುತ್ತಾಳೆ.
ಆಶ್ಚರ್ಯದ ಸಂಗತಿಯೆಂದರೆ, ಮಹಿಳೆಯರಿಗೆ ಏನು ಮಾಡಬೇಕೆಂದು ತೋಚದಿದ್ದಾಗ ಅದನ್ನು ಗಂಡನ ಅಭಿಪ್ರಾಯಕ್ಕೆ ಬಿಟ್ಟುಬಿಡುತ್ತಾರೆ. ನಾನು ನಿಮಗೆ ಇಷ್ಟು ಚಿಕ್ಕ ಕೆಲಸ ಹೇಳಿದ್ದೆ. ಅದನ್ನು ನೀವು ಸರಿಯಾಗಿ ಮಾಡಲಿಲ್ಲ ಎಂದು ಗೂಬೆ ಕೂರಿಸುತ್ತಾರೆ.
ಏನು ಉಪಾಯ?
ತನ್ನ ಗಂಡನಿಂದ ಒಂದಿಷ್ಟು ನೆರವು ಕೇಳುವುದು ಹೆಂಡತಿಯ ತಪ್ಪೇ? ಅಥವಾ ಹೆಂಡತಿ ಹೇಳಿದ್ದನ್ನು ಕೇಳಿಸಿಕೊಂಡು ಪತಿ ಹಾಗೆಯೇ ಸುಮ್ಮನೇ ಇರಬೇಕಾ? ಇಲ್ಲ. ಇವೆರಡು ಸಂಗತಿಗಳು ಸುಖಿ ದಾಂಪತ್ಯಕ್ಕೆ ಸರಿಯಾದ ಸಂಗತಿಗಳಲ್ಲ. ಗಂಡನಾದವನು ಹೆಂಡತಿಯ ಜೊತೆ ಮನೆಗೆಲಸದಲ್ಲಿ ನೆರವಾದರೆ ಅವನ ಗೌರವ ಮತ್ತಷ್ಟು ಹೆಚ್ಚುತ್ತದೆ. ಒಂದು ವೇಳೆ ಗಂಡ ಮೌನವಾಗಿ ಅವಮಾನ ಸಹಿಸಿಕೊಂಡರೆ ಅವನ ಆತ್ಮಗೌರವಕ್ಕೆ ಚ್ಯುತಿ ಬರುತ್ತದೆ. ಅವನಿಗೆ ತನ್ನ ಮೇಲಿನ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ. ಇದರ ನಡುವಿನ ದಾರಿ ಏನು?
ಹೆಂಡತಿ ಏನು ಮಾಡಬೇಕು?
ಗಂಡ ತನಗೆ ನೆರವಾಗಬೇಕು ಎಂದು ಹೆಂಡತಿ ಬಯಸಿದರೆ, ಆತನ ಬಳಿ ಅಷ್ಟು ಸಮಯ ಇದೆಯೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.
ಗಂಡನ ಮೇಲೆ ದರ್ಪ ತೋರಿಸಿ ಕೆಲಸ ಮಾಡಿಸಿಕೊಳ್ಳದೆ, ವಿನಯಪೂರ್ವಕವಾಗಿ ಕೇಳಿ ಮಾಡಿಸಿಕೊಳ್ಳಿ.
ನೀವು ಯಾವ ರೀತಿಯ ನೆರವು ಬಯಸುತ್ತಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ಇಲ್ಲದಿದ್ದರೆ ನಿಮ್ಮ ಅಪೇಕ್ಷೆಗೆ ತಕ್ಕಂತೆ ಕೆಲಸ ಆಗದೆ ನಿಮಗೆ ಕಿರಿಕಿರಿ ಅನಿಸುವಂತಾಗಬಾರದು.
ಗಂಡ ಮನೆಗೆ ಬರುತ್ತಿದ್ದಂತೆ ಅವನ ಮುಂದೆ ಕೆಲಸಗಳ ಪಟ್ಟಿ ಇಡಬೇಡಿ. ಅವನು ರಿಲ್ಯಾಕ್ಸ್ ಆದ ಬಳಿಕವೇ ವಿಷಯ ಮುಂದಿಡಿ.
ನಿಮಗೆ ಇಷ್ಟವಾಗುವಂತೆ ಕೆಲಸ ಮಾಡಿದ್ದರೆ ಗಂಡನನ್ನು ಹೊಗಳಲು ಮರೆಯಬೇಡಿ. ಗೆಳತಿಯರು ಹಾಗೂ ಸಂಬಂಧಿಕರ ಮುಂದೆಯೂ ಈ ಬಗ್ಗೆ ಪ್ರಸ್ತಾಪಿಸಿದರೆ ಇನ್ನಷ್ಟು ಖುಷಿಪಡಬಹುದು.
ಗಂಡನಿಗೆ ಮನೆಗೆಲಸ ಇಷ್ಟ ಇಲ್ಲದಿದ್ದರೆ, ಅವನಿಗೆ ಮಕ್ಕಳ ಹೋಂವರ್ಕ್ ಮಾಡಿಸುವ ಕೆಲಸ ಒಪ್ಪಿಸಬಹುದು. ಇದು ಕೂಡ ನಿಮಗೆ ನೆರವಾಗುವ ಕೆಲಸವೇ ಹೌದು.
ನೀವು ಅಂದುಕೊಂಡಂತೆ ಅವರು ಕೆಲಸ ಮಾಡಿರದಿದ್ದರೆ ಕೋಪದಿಂದ ಮಾತನಾಡಲು ಹೋಗಬೇಡಿ. ಕೋಪ ಮಾಡಿಕೊಳ್ಳುವುದರಿಂದ ಯಾವುದೇ ಲಾಭವಿಲ್ಲ. ಕೋಪ ಮಾಡಿಕೊಳ್ಳುವುದರಿಂದ ಗಂಡ ಮನೆಗೆಲಸದಿಂದ ಹಿಂದೆ ಸರಿಯುವ ನಿರ್ಧಾರ ಮಾಡಬಹುದು.
ಗಂಡ ಏನು ಮಾಡಬೇಕು?
ಗಂಡ ತನ್ನ ತೊಂದರೆ ಗಮನಿಸಬೇಕೆಂದು ಪ್ರತಿಯೊಬ್ಬ ಪತ್ನಿ ಇಚ್ಛಿಸುತ್ತಾಳೆ. ಹೀಗಾಗಿ ಅವಕಾಶ ಸಿಕ್ಕಾಗ ಒಬ್ಬ ಸಹಾಯಕನ ರೀತಿಯಲ್ಲಿ ಹೆಂಡತಿಗೆ ನೆರವಾಗಿ. ಅದು ನಿಮಗೂ ಖುಷಿ ಕೊಡುತ್ತದೆ. ಹೆಂಡತಿಯ ಜೊತೆಗಿನ ಅನ್ಯೋನ್ಯತೆ ಹೆಚ್ಚಲು ಕೂಡ ನೆರವಾಗುತ್ತದೆ.
ನೀವು ತುಂಬಾ ಬಿಜಿ ಆಗಿದ್ದರೆ, ಇತರೆ ದಿನಗಳಲ್ಲಿ ಆಗದಿದ್ದರೂ, ರಜೆಯ ದಿನಗಳಲ್ಲಾದರೂ ನೆರವಾಗಿ.
ನೀವು ಯಾವ ಕೆಲಸದಲ್ಲಿ ಹೆಂಡತಿಗೆ ನೆರವಾಗಲು ಇಚ್ಛಿಸುತ್ತಿದ್ದೀರೊ, ಆ ಕೆಲಸದ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಿರಬೇಕು. ನಿಮಗೆ ಆ ಕೆಲಸವೇ ಗೊತ್ತಿಲ್ಲ ಅಂತಾ ಹೆಂಡತಿಗೆ ಅನಿಸಬಾರದು.
ಹೆಂಡತಿಗೆ ಎಷ್ಟೇ ನೆರವಾಗಿ, ಆದರೆ ಆಕೆ ಗೆಳತಿಯರ ಜೊತೆ ಇದ್ದಾಗ ಮಾತ್ರ “ಪಾಪ, ಇವಳೇ ಎಲ್ಲವನ್ನೂ ಮಾಡುತ್ತಿರುತ್ತಾಳೆ. ನಾನು ಇಷ್ಟಪಟ್ಟು ಕೂಡ ಅವಳಿಗೆ ನೆರವು ನೀಡೋಕೆ ಆಗ್ತಿಲ್ಲ,” ಎಂದು ಹೇಳಿ. ಆಗ ನೋಡಿ ಹೆಂಡತಿಯ ಕಣ್ಣಲ್ಲಿ ನೀವೇ ಹೀರೊ ಆಗ್ತೀರಾ!
ಸ್ವಚ್ಛಗೊಳಿಸಿದ ಪಾತ್ರೆಗಳನ್ನು ನಿಶ್ಚಿತವಾದ ಸ್ಥಳದಲ್ಲಿ ಇಡಲು ಕೂಡ ನೀವು ನೆರವಾಗಬಹುದು. ಆದರೆ ಯಾವುದೇ ಪಾತ್ರೆ ಬಿದ್ದು ಒಡೆಯಬಾರದು ಎಂಬುದನ್ನು ಗಮನಿಸಿ.
ಹಸಿರು ತರಕಾರಿಗಳನ್ನು ಸ್ವಚ್ಛಗೊಳಿಸಿ ಪತ್ನಿಗೆ ನೆರವಾಗಬಹುದು.ಎಲ್ಲಕ್ಕೂ ಮುಖ್ಯ ಸಂಗತಿಯೆಂದರೆ, ನೀವು ಹೆಂಡತಿಗೆ ನೆರವಾಗಿ ಇಲ್ಲವೇ ಬಿಡಿ, ಹೆಂಡತಿಯ ಜೊತೆ ಅಡುಗೆ ಮನೆಯಲ್ಲಿ ಹೋಗಿ ನಿಂತರೆ ಅದು ಖುಷಿಯ ಸಂಗತಿಯೇ ಹೌದು. ನೀವಿಬ್ಬರೂ ಜೊತೆ ಜೊತೆಗೆ ಸಮಯ ಕಳೆಯಲು ಹೆಚ್ಚುವರಿ ಸಮಯ ಸಿಗುತ್ತದೆ. ಆದರೆ ಹೆಂಡತಿಯ ಕೆಲಸದಲ್ಲಿ ತಪ್ಪೆಣಿಸುವ ಕೆಲಸ ಮಾತ್ರ ಮಾಡಬೇಡಿ. ತನ್ನ ಆಡಳಿತದಲ್ಲಿ ಹಸ್ತಕ್ಷೇಪವನ್ನು ಅವಳು ಖಂಡಿತ ಸಹಿಸಳು.
– ಆಶಾರಾಣಿ