ಮದುವೆ ಆಗಲಿರುವ, ಜಸ್ಟ್ ಮ್ಯಾರೀಡ್ ಹುಡುಗಿಯರಿಗೆ ಅದರಲ್ಲೂ ಎಲ್ಲ ಪತ್ನಿಯರಿಗೂ ಸಾಮಾನ್ಯವಾಗಿ ತಮ್ಮ ಮನಸ್ಸಿನ ಮಾತನ್ನು ಏಕೆ ಹೇಳಬೇಕಾಗಿದೆ ಎಂದರೆ, ಮೊದಲು ನಾನು ನೀನು ಎನ್ನುತ್ತಿದ್ದವರು ಬಳಿಕ ಕೈಕೈ ಮಿಲಾಯಿಸುವ, ಮಾತಿನ ಬಾಣಗಳ ಸುರಿಮಳೆ ಒಂದೆರಡು ವರ್ಷಗಳ ಬಳಿಕ ನೋಡಲು ಸಿಗುತ್ತಿತ್ತು. ಆದರೆ ಈಗ ಹಾಗಲ್ಲ, 4-5 ತಿಂಗಳಿನಲ್ಲಿಯೇ ನೋಡಲು ಸಿಗುತ್ತಿದೆ. ಇದು ಅಡ್ವಾನ್ಸ್ಡ್ ಜಮಾನಾ, ಎಲ್ಲ ಈಗ ಫಾಸ್ಟ್!
ಗಂಡಂದಿರಿಂದ ನಮಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಅವರಿಂದ ಮಾತುಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಒಂದು ಸಲ ನಾವೇಕೆ ನಮ್ಮ ಮನಸ್ಸಿನ ಮಾತು ಹೇಳಿಕೊಳ್ಳಬಾರದು?
ಮದುವೆಯಾಗಿದೆ ಸರಿ, ಎಲ್ಲರದ್ದೂ ಆಗಿಯೇ ಆಗುತ್ತದೆ. ಹಾಗೆಂದು ನಿಮ್ಮನ್ನು ನೀವು ಪೃಥ್ವಿಯೆಂದು ಭಾವಿಸಿ, ಗಂಡನನ್ನು ಸೂರ್ಯ ಎಂದು ತಿಳಿದು ಅವನ ಸುತ್ತ ಸುತ್ತುತ್ತಿರಬೇಡಿ. ಅವನ ಸೌರಮಂಡಲದಲ್ಲಿ ಮತ್ತಾವುದೋ ಗ್ರಹ ಚಂದ್ರನಂತಹ ಉಪಗ್ರಹ ಸುತ್ತುತ್ತಿದೆಯೆಂದು ಸಂದೇಹ ತಾಳಲು ಹೋಗಬೇಡಿ. ಯಾವಾಗಲೂ ಅವನ ಆಸುಪಾಸು ಇರುವುದು, ಅವನಿಗೆ ಅಸಹನೀಯ ಎನಿಸುವಷ್ಟರ ಮಟ್ಟಿಗೆ ತೊಂದರೆ ಮಾಡಬೇಡಿ. `ಗಿವ್ ಹಿಮ್ ಎ ಬ್ರೇಕ್’ ನಿಮಗೂ ಒಂದು ಕಡೆ ಜಾಗ ರಿಸರ್ವ್ ಮಾಡಿಕೊಳ್ಳಿ.
ಸಂಬಂಧಿಕರನ್ನು ಹಳೆಯ ಗೆಳತಿಯರನ್ನು ಬಿಟ್ಟು ಬರುವ ದುಃಖ ನಿಮಗಿಂತ ಬೇರಾರಿಗೆ ಅದರ ಅರಿವು ಆಗಲು ಸಾಧ್ಯ? ಅದೇ ರೀತಿ ನಿಮ್ಮ ಪತಿಯ ಹಳೆಯ ಗೆಳೆಯರ ಹಾಗೂ ಈಗಿನ ಸ್ನೇಹಿತರ ಸಂಪರ್ಕ ಕಟ್ ಮಾಡಿಕೊ ಎಂದು ಹೇಳುವುದೂ ತಪ್ಪಾಗುತ್ತದೆ. ನೀವು ಮನೆ ಬಿಟ್ಟು ಬಂದಿರುವ ಪ್ರತೀಕಾರ ತೆಗೆದುಕೊಳ್ಳುದು ಏಕೆ? `ನೀವು ನನಗೆ ಸಮಯವನ್ನೇ ಕೊಡುವುದಿಲ್ಲ’ ಎನ್ನುವುದರ ಅರ್ಥ `ನೀವು ನನಗಷ್ಟೇ ಟೈಮ್ ಕೊಡಿ,’ ಎಂದಲ್ಲ. ಇಲ್ಲದಿದ್ದರೆ ಸದಾ ನಿರಾಶೆ ಅನುಭವಿಸುತ್ತಿರಬೇಕಾಗುತ್ತದೆ.
ಯಾವ ಕೆಲಸವನ್ನು ಮನೆಗೆಲಸದವರು ಹಾಗೂ ಇತರೆ ಸದಸ್ಯರು ಮಾಡುತ್ತಿದ್ದಾರೊ, ಅದೇ ಕೆಲಸವನ್ನು ಒತ್ತಾಯ ಪೂರ್ಕವಾಗಿ ಅವರಿಂದ ಕಿತ್ತುಕೊಂಡು ನಾನು ಚೆನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಹೇಳುವುದು ಜಾಣತನದ ನಿರ್ಧಾರವಲ್ಲ. ಅತ್ತೆಯನ್ನು ಒಲಿಸಿಕೊಳ್ಳುವ ಯಾವುದೇ ಯೋಜನೆ ನಿಮಗಿರದಿದ್ದರೆ, ಈ ಕೆಳಕಂಡ ಉಪಾಯಗಳನ್ನು ಅನುಸರಿಸಿ. ಏಕೆಂದರೆ ಪುರುಷರು ಸಾಮಾನ್ಯವಾಗಿ ಈ ರೀತಿಯ ಸಂದರ್ಭದಲ್ಲಿ ಮೌನ ಆಗಿರುತ್ತಾರೆ. ನೀವು ನಿರೀಕ್ಷಿಸಿದ ರೀತಿಯಲ್ಲಿ ಅವರು ಪ್ರಶಂಸೆ ವ್ಯಕ್ತಪಡಿಸದೇ ಹೋದರೆ ನಿಮಗೆ ಸ್ವಲ್ಪ ಬೇಜಾರಾಗುವುದು ಸಹಜ. ಯಾವುದೇ ಕೆಲಸವಿಲ್ಲದೆಯೇ ದಣಿವು ಹಾಗೂ ಕೆಲಸದ ಒತ್ತಡ ಎನಿಸುತ್ತದೆ.
ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಎಷ್ಟು ಕಡಿಮೆ ಅಪೇಕ್ಷೆಯೊ ಅಷ್ಟು ಸುಖಿ ಜೀವನ. ನಿರೀಕ್ಷೆಯಿಲ್ಲದೆ ಏನಾದರೂ ದೊರೆತರೆ ಅದನ್ನು ಬೋನಸ್ ಎಂದು ಭಾವಿಸಿ.
ನಿಮ್ಮನ್ನು ಸದಾ ಖುಷಿಯಿಂದಿಡಬೇಕೆನ್ನುವ ಗುತ್ತಿಗೆಯನ್ನು ಗಂಡನಿಗೆ ಕೊಡಬೇಡಿ. ಅದೇ ರೀತಿ ನೀವು ದುಃಖಿಯಾಗಿರಲು ಗಂಡನೇ ಕಾರಣ ಎಂಬ ಆಪಾದನೆಯನ್ನು ಅವನ ಮೇಲೆ ಹೊರಿಸಬೇಡಿ. ನಿಮ್ಮ ಖುಷಿಯನ್ನು ನೀವೇ ಹುಡುಕಿ. ನಿಮ್ಮ ಹವ್ಯಾಸಗಳನ್ನು ಬಲಿ ಕೊಡಬೇಡಿ. ನಿಮ್ಮ ಪ್ರತಿಭೆಗೆ ತುಕ್ಕು ಹಿಡಿಯಲು ಅವಕಾಶ ಕೊಡಬೇಡಿ. ಸದಾ ಬಿಜಿಯಾಗಿದ್ದರೆ, ಖುಷಿಯಿಂದಿದ್ದರೆ, ಅವನೂ ಕೂಡ ಖುಷಿಯಿಂದಿರುತ್ತಾನೆ. ನೀವು ಖುಷಿಯಿಂದಿದ್ದರೆ, ಅವನು ತಾನೂ ಖುಷಿಯೆಂದು ಭಾವಿಸುತ್ತಾನೆ. ನಾನು ಹೇಗೆ ಕಾಣುತ್ತಿದ್ದೇನೆ, ನಾನು ಹೇಗೆ ಅಡುಗೆ ಮಾಡುತ್ತಿದ್ದೇನೆ, ಪತಿಗೆ ನನ್ನ ಬಗೆಗೆ ಆಸಕ್ತಿ ಕಡಿಮೆ ಆಗುತ್ತಿಲ್ಲ ತಾನೆ, ಹೀಗೆ ಬಹಳಷ್ಟು ಮಹಿಳೆಯರು ಯೋಚಿಸುತ್ತಿರುತ್ತಾರೆ. ಪುರುಷರಿಗೆ ಇನ್ನೂ ಅದೆಷ್ಟೋ ಬಗೆಯ ದುಃಖಗಳು ಇರುತ್ತವೆ.
ಸಂದೇಹಕ್ಕೆ ಯಾರ ಬಳಿಯೂ ಚಿಕಿತ್ಸೆಯಿಲ್ಲ. ನಿಮ್ಮ ಮೆದುಳಿನಲ್ಲಿ ಸಂದೇಹವನ್ನು ಹುಟ್ಟುಹಾಕುವ ಭಾಗವನ್ನು ಕಿತ್ತೆಸೆಯಿರಿ. ಓವರ್ ಪೊಸೆಸಿವ್ ಹಾಗೂ ಅಸುರಕ್ಷಿತ ಭಾವದಿಂದ ಹೊರಗೆ ಬನ್ನಿ.
ಒಂದಿಷ್ಟು ಕೋಪದ ಮಾತುಗಳು, ಜಗಳ, ಸಿಡಿಮಿಡಿ ಇವು ವೈವಾಹಿಕ ಜೀವನದ ಸಾಮಾನ್ಯ ಸಂಗತಿಗಳು. ಅವನ್ನು ಬಗೆಹರಿಸಿಕೊಂಡು ವಾಸ್ತವಕ್ಕೆ ಬರುವುದು ಕೂಡ ಅಷ್ಟೇ ಸಾಮಾನ್ಯ. ಅಕಸ್ಮಾತ್ ಮುಂದಿನ ಬಾರಿ ಯುದ್ಧವೇನಾದರೂ ಸಂಭವಿಸಿದರೆ ಹಿಂದಿನ ಬಾರಿ ಉಪಯೋಗಿಸಿದ ಅಸ್ತ್ರಗಳನ್ನು ಬಳಸಬೇಡಿ. ನೀವು ಹಿಂದಿನ ಸಲ ಮಾಡಿದ್ದು ಕೂಡ ಅದನ್ನೇ, ಸಂಬಂಧವನ್ನು ಕಲಕುವುದಕ್ಕೆ ನೀವು ಮುಂದಾಗದಿರಿ. ಹಿಂದೆ ಆಗಿದ್ದು ಆಗಿಹೋಯಿತು.
ನಾವು ದುಃಖಿತರಾದಾಗ ಪರಸ್ಪರ ಅದನ್ನು ಹಂಚಿಕೊಂಡು ಹಗುರಾಗುತ್ತೇವೆ. ಆದರೆ ಪುರುಷರಿಗೆ ಪ್ರಶ್ನೆಗಳ ಸುರಿಮಳೆ ಇಷ್ಟವಾಗುವುದಿಲ್ಲ. ಅವನು ದುಃಖಿತನಾಗಿದ್ದು, ತೊಂದರೆಯಲ್ಲಿರುವುದು ಕಂಡುಬಂದರೆ ಅವನನ್ನು ಕೇಳಲು ಹೋದಾಗ ಅವನು ಹೇಳದೇ ಇದ್ದರೆ ನೀವು ಓವರ್ ಕೇರಿಂಗ್ ಮಮ್ಮಿ ಆಗಲು ಹೋಗಬೇಡಿ. “ಏನಾಯ್ತು ಅಂತ ನನಗೆ ಹೇಳಿ, ನಿಮ್ಮ ಈ ನೋವಿಗೆ ಏನು ಕಾರಣ? ನಾನು ನಿಮಗೆ ಹೆಲ್ತ್ ಮಾಡಬಹುದಾ?” ಪ್ರೀತಿ ತಿರಸ್ಕಾರವನ್ನು ಹೆಚ್ಚಿಸುವುದಿಲ್ಲ. ಅದಕ್ಕೂ ಮಿಗಿಲಾಗಿ ಅಂತಹ ಸಂದರ್ಭದಲ್ಲಿ 1 ಕಪ್ ಟೀ ಕೊಟ್ಟು, 1 ಗಂಟೆ ಅಲ್ಲಿಂದ ಮಾಯವಾಗಿ ಬಿಡಿ. ಫೋಕಸ್ ಮಾಡಿದರೆ ಅವನು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾನೆ. ಅವನಿಗೆ ಅನ್ನಿಸಿದರೆ ಅದಕ್ಕೆ ಕಾರಣವನ್ನು ಹೇಳಬಹುದು. ಆ ಬಳಿಕ ಇಬ್ಬರ ಮೂಡ್ ಸರಿಹೋಗುತ್ತದೆ.
ಜಗಳ ಎಂಥದೇ ಇರಲಿ, ದೈಹಿಕ ಹಿಂಸೆಯನ್ನು ಅತ್ಯಂತ ದೃಢ ಮನಸ್ಸಿನಿಂದ ವಿರೋಧಿಸಿ. ಒಂದು ಸಲ ಎತ್ತಿದ ಕೈ ಮತ್ತೆ ಮತ್ತೆ ಏಳುವ ಸಾಧ್ಯತೆ ಇರುತ್ತದೆ. ಮೊದಲ ಸಲವೇ ಪ್ರಬಲವಾಗಿ ವಿರೋಧಿಸಿ. ಎಲ್ಲರೆದುರು ಅವಮಾನಿಸುವುದು, ಏಕಾಂಗಿಯಾಗಿದ್ದಾಗ ಬಂದು ಕ್ಷಮಾಪಣೆ ಕೇಳುವುದು ಇವೆಲ್ಲ ಆಗಬಾರದು. ನಿಮ್ಮ ಆತ್ಮಗೌರವವನ್ನು ಎಂದೆಂದಿಗೂ ಕಾಪಾಡಿಕೊಳ್ಳಿ. ಜೊತೆಗೆ ಅಹಂ ಹಾಗೂ ಆತ್ಮಗೌರವದ ವ್ಯತ್ಯಾಸವನ್ನು ಗುರುತಿಸುವಂತೆ ಮಾಡಿ.
ಪುರುಷರು ಮಹಿಳೆಯರ ಹಾಗೆ ಮುಖದ ಭಾವನೆಗಳನ್ನು ಅಳೆಯುವಲ್ಲಿ ಎಕ್ಸ್ ಪರ್ಟ್ ಆಗಿರುವುದಿಲ್ಲ. ಹಾಗಾಗಿ ಮುಖ ಊದಿಸಿಕೊಂಡು, ಅನ್ನ ಸತ್ಯಾಗ್ರಹ ಮಾಡುವುದರ ಬದಲು ನಿಮ್ಮ ಸಮಸ್ಯೆ ಏನು ಎನ್ನುವುದನ್ನು ಮನವರಿಕೆ ಮಾಡಿಕೊಡಿ.
ನಿಮಗೆ ಪುರುಷನಿಂದ ಯಾವುದಾದರೂ ವಿಷಯದ ಬಗ್ಗೆ ಉತ್ತರ ನಿಖರವಾಗಿ ಬೇಕಿದ್ದರೆ, ನಿಮ್ಮ ಪ್ರಶ್ನೆ ಕೂಡ ಅಷ್ಟೇ ನೇರವಾಗಿರಬೇಕು. ಅದಕ್ಕೆ ಉತ್ತರ `ಹೌದು’ ಅಥವಾ `ಇಲ್ಲ’ ಎಂಬುದು ತಕ್ಷಣವೇ ಸಿಗಬೇಕು….. ಅಂತಹ ಉದಾಹರಣೆಗಳು ಇಲ್ಲಿವೆ?
ಮೊದಲನೆಯದು ನಾವು ಸಂಜೆ ಸಿನಿಮಾಗೆ ಹೋಗಬಹುದಾ? “ಹ್ಞೂಂ….. ಕೆಲಸ ಜಾಸ್ತಿ ಇದೆ. ಆದರೂ ಬೇಗ ಬರಲು ಪ್ರಯತ್ನ ಮಾಡ್ತೀನಿ.”
ಎರಡನೆಯದು “ನಾವು ಸಂಜೆ ಸಿನಿಮಾಕ್ಕೆ ಹೋಗೋಣ್ವಾ? ಸಮಯಕ್ಕೆ ಸರಿಯಾಗಿ ಬರ್ತೀರಾ?”
“ಆಫೀಸಿನಲ್ಲಿ ಮೀಟಿಂಗ್ ಇದೆ. ನಾನು ತಡವಾಗಿ ಬಂದರೆ ನೀನು ಸಿನಿಮಾದ ಮೊದಲ ದೃಶ್ಯ ತೃಪ್ತಿಹೋಯ್ತು ಅಂತ ಬೇಜಾರು ಮಾಡಿ ಕೊಳ್ತೀಯಾ. ನಾಳೆ ಹೋಗೋಣ.”
ಪುರುಷರ ಮೆದುಳೇ ಒಂದು ರೀತಿ. ಅದು ಗೊಂದಲದ ಶಬ್ದ ಕೇಳಿ ಬಂದರೆ, ಅಲ್ಲಿಂದ ಹೊರಹೊಮ್ಮುವ ಉತ್ತರ ಕೂಡ ಗೊಂದಲದಿಂದ ಕೂಡಿರುತ್ತದೆ. ಮೊದಲ ಸ್ಥಿತಿಯಲ್ಲಿ ಸ್ವಲ್ಪ ಭರವಸೆ ಇತ್ತು. ತಯಾರಾಗಿ ಕುಳಿತುಕೊಳ್ಳುವ ಶ್ರಮ ಹಾಗೂ ಟೈಮ್ ವ್ಯರ್ಥ ಆಗುತ್ತಿತ್ತು. ಪತಿ ಬಂದ ನಂತರ ಜಟಾಪಟಿ ಬೇರೆ.
“ನೀನು ನನ್ನನ್ನು ಪ್ರೀತಿಸಬಹುದಾ? ಮದುವೆಯಾಗಬಹುದಾ?” ಈ ಡೈಲಾಗನ್ನು ಪುರುಷರ ಬಾಯಿಂದ ಎಂದಾದರೂ ಕೇಳಿದ್ದೀರಾ? ಅವರು ಯಾವಾಗಲೂ ನೇರಾನೇರ. “ಡೂ ಯೂ ಲವ್ ಮೀ? ನೀವು ನನ್ನನ್ನು ಮದುವೆಯಾಗುತ್ತೀರಾ?” ಎಂದು ಅದಕ್ಕೆ ಅವರು ನೇರ ಉತ್ತರವನ್ನು ಕೂಡ ಬಯಸುತ್ತಾರೆ. ಕೊನೆಯಲ್ಲಿ ಒಂದು ಮಾತು. ಅವನು ನಿಮ್ಮೊಂದಿಗೆ ಜೀವನದ ಪಯಣದಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿದ್ದಾನೆಂದರೆ ಅದು ಒಳ್ಳೆಯ ವಿಷಯವೇ. ಅವನು ವೃದ್ಧಾಪ್ಯದಲ್ಲಿ ಏಕಾಂಗಿಯಾಗಬಾರದೆಂದು ನೀವು ಅವನಿಗೆ ಜೊತೆ ಕೊಡುತ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಜೊತೆ ಕೊಡುತ್ತಿಲ್ಲ. ನೀವು ಅವನಿಗೆ ಜೊತೆ ಕೊಡಲು ಕಾರಣ ಏನೆಂದರೆ, ನೀವು ಅವನನ್ನು ಸಂಗಾತಿಯಾಗಿ ಸ್ವೀಕರಿಸಿರುವಿರಿ, ಕೊನೆಯತನಕ ಅದನ್ನು ನಿಭಾಯಿಸಲು…
– ಡಾ. ವಿಜಯಾ ಕುಲಕರ್ಣಿ