ಕಥೆ – ಕೆ. ಚಂದ್ರಿಕಾ ಕುಲಕರ್ಣಿ
ಸೀಮಾ, ಹ್ಯಾವನೋರ್ ಬಿಸ್‌ನೆಸ್ ಸ್ಕೂಲ್‌ನಲ್ಲಿ ಉತ್ತಮ ಗ್ರೇಡ್‌ನೊಂದಿಗೆ ಎಂಬಿಎ ಮುಗಿಸಿದಾಗ, ಗೂಗಲ್ ಅವಳಿಗೆ ಒಳ್ಳೆಯ ಪ್ಯಾಕೇಜ್‌ನೊಂದಿಗೆ ನೌಕರಿ ನೀಡಿತು ಮತ್ತು ಅವಳ ವೀಸಾವನ್ನು ಎಕ್ಸ್ ಚೇಂಜ್ ಮಾಡಿಕೊಟ್ಟಿತು. ಇಷ್ಟೆಲ್ಲ ಸಾಧಿಸಿದ್ದರೂ ಸೀಮಾಳ ಮುಖದಲ್ಲಿ ಸಂತೋಷವಿರಲಿಲ್ಲ. ಬದಲಿಗೆ ಅಲ್ಲಿ ದುಗುಡದ ಕಾರ್ಮೋಡ ಮುಸುಕಿತ್ತು. ಕಣ್ಣೀರಿನ ಮಳೆಯೂ ಸುರಿಯಲು ತವಕಿಸುತ್ತಿತ್ತು. ಇದೇನು ಆಕಸ್ಮಿಕವೋ ಎಂಬಂತೆ ಸರಿಯಾಗಿ 2 ವರ್ಷಗಳ ಹಿಂದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧುಬಾಂಧವರಿಂದ ದೂರವಾಗುವೆನೆಂಬ ದುಃಖದಲ್ಲಿ ಸೀಮಾ ಹೆಜ್ಜೆಯನ್ನು ಮುಂದಿಡಲಾರದೆ ಇದ್ದಂತೆ, ಇಂದೂ ಸಹ ಬಾಸ್ಟನ್ ವಿಮಾನ ನಿಲ್ದಾಣದೆಡೆಗೆ ಹೆಜ್ಜೆ ಇಡಲಾಗದೆ ಪರಿತಪಿಸುತ್ತಿದ್ದಾಳೆ.
ಸ್ಯಾಮ್ ನ ಬಾಹುಬಂಧನದಲ್ಲಿ ಒರಗಿ ಕುಳಿತ ಸೀಮಾ, ಅತಿಯಾದ ದುಃಖದಿಂದ ನೊಂದಿದ್ದಾಳೆ. ಅವಳ ಮನಸ್ಸಿನ ವಿರಹ ವೇದನೆಯನ್ನು ಶಾಂತಗೊಳಿಸಲು ಸ್ಯಾಮ್ ಹಾರ್ವರ್ಡ್ ಯೂನಿವರ್ಸಿಟಿಯಿಂದ ಸ್ಟಾನ್‌ಫೋರ್ಡ್‌ನ ಬೀದಿ ಬೀದಿಗಳಲ್ಲಿ ಅವಳನ್ನು ಸುತ್ತಿಸುತ್ತಿದ್ದಾನೆ.
ಸೀಮಾಳ ಕುಂದಿದ ಮುಖವನ್ನು ತನ್ನ ಕೈಲಿ ಹಿಡಿದು ಗದ್ಗದ ಕಂಠದಲ್ಲಿ ಸ್ಯಾಮ್, “ನನ್ನನ್ನು ಬಿಟ್ಟು ಹೋಗಬೇಡ ಸೀಮಾ, ನೀನಿಲ್ಲದೆ ನನ್ನ ಹೃದಯ ಕನ್ನಡಿಯ ಗಾಜಿನಂತೆ ಛಿದ್ರವಾಗುತ್ತದೆ. ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ನನ್ನನ್ನು ಬಿಟ್ಟು ಯಾರೋ ಪರಿಚಯವಿಲ್ಲದವನೊಡನೆ ಒಂದಾಗಲು ಹೊರಟಿದ್ದೀಯಾ?” ಹೇಳಿದ.
ಸ್ಯಾಮ್ ಹೀಗೆ ಹೇಳುತ್ತಿದ್ದಂತೆ ಸೀಮಾ ಬಳ್ಳಿಯಂತೆ ಅವನನ್ನು ಬಳಸಿದಳು. ಅವಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸ್ಯಾಮ್ ಕಾರಿನ ಹಿಂದಿನ ಸೀಟ್‌ನಲ್ಲಿ ಕುಳ್ಳಿರಿಸಿದ. ಅವಳನ್ನು ಬಲವಾಗಿ ಆಲಿಂಗಿಸಿ, ಅವಳ ಅಶ್ರು ತುಂಬಿದ ಮುಖದ ಮೇಲೆಲ್ಲ ಚುಂಬನದ ಮಳೆಗರೆದ. ಸೀಮಾ ಈ ಆನಂದದ ಹೊಳೆಯಲ್ಲಿ ಮೀಯುತ್ತಾ ಪುಳಕಿತಳಾದಳು.
ಅಗಲಿಕೆಯ ಸಮಯ ಸಮೀಪಿಸುತ್ತಿರುವ ಭಯದಲ್ಲಿ ಇಬ್ಬರೂ ಪ್ರೇಮ ಕಾಮದ ಸೀವೋಲ್ಲಂಘನ ಮಾಡಿಬಿಟ್ಟರು. ಆದರೆ ಅದಕ್ಕಾಗಿ ಅವರಿಗೇನೂ ಪಶ್ಚಾತ್ತಾಪವಾಗಲಿಲ್ಲ. ಬದಲಿಗೆ ಪೂರ್ಣತೆಯ ಅನುಭವದಿಂದ ತೃಪ್ತರಾದರು.
ಪರಸ್ಪರ ಸಮರ್ಪಣೆಯ ನಂತರ ಅವರ ಮನಸ್ಸು ನಿಶ್ಚಲ ಕೊಳದಂತೆ ಶಾಂತವಾಯಿತು. ಪರಮ ಸಂತೃಪ್ತಿಯನ್ನು ಅನುಭವಿಸಿದ ಅವರು ಅಂದೇ ವಿವಾಹವಾದ ನೂತನ ಜೋಡಿಯಂತೆ ಸುತ್ತತೊಡಗಿದರು. ರೆಕ್ಕೆ ಕಟ್ಟಿಕೊಂಡು ಬಾನೆತ್ತರಕ್ಕೆ ಹಾರಲು ಬಯಸಿದರು.
ಇಬ್ಬರೂ ಪರಸ್ಪರ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಅವರ ಕಾರು ನಾಲ್ಕೂ ಕಡೆ ಸುತ್ತಿ ಹೈವೇಗೆ ಬಂದು ನಿಲ್ಲುತ್ತಿತ್ತು. ಇದು ಬಾಸ್ಟನ್ ನಗರದ ಒಂದು ವೈಶಿಷ್ಟ್ಯ.
ಸ್ಯಾಮ್ ನ ಕುತ್ತಿಗೆಗೆ ತನ್ನ ತೋಳಿನ ಹಾರ ಹಾಕುತ್ತಾ, “ಸ್ಯಾಮ್, ನಾವು ಜೀವನವಿಡೀ ಇದೇ ರೀತಿ ಸುತ್ತು ಸುತ್ತು ಹಾಕುತ್ತಾ ಇರಲಾಗುವುದಿಲ್ಲವೇ?” ಎಂದು ಕೇಳಿದಳು ಸೀಮಾ.
ಇದಕ್ಕೆ ಉತ್ತರವಾಗಿ ಸ್ಯಾಮ್ ಅವಳನ್ನು ತಬ್ಬಿ ಮುದ್ದಿಸಿದ.
ಒಂದಷ್ಟು ಸಮಯದ ನಂತರ ಇಬ್ಬರೂ ಪ್ರಯತ್ನಪಟ್ಟು ಮನಸ್ಸನ್ನು ಹತೋಟಿಗೆ ತಂದುಕೊಂಡರು. ಭಾರವಾದ ಮನಸ್ಸಿನಿಂದ ಸ್ಯಾಮ್ ಗಾಡಿಯನ್ನು ವಿಮಾನ ನಿಲ್ದಾಣದತ್ತ ನಡೆಸಿದ.
3 ಗಂಟೆಗಳ ರಿಪೋರ್ಟಿಂಗ್‌ಗೆ ಟೈಮ್ ಕಳೆದುಹೋಗಿತ್ತು. ಪ್ಲೇನ್ ಹೊರಡುವ ಸಮಯ ಸಮೀಪಿಸಿತು. ಸೀಮಾ ಬೇಗನೆ ಚೆಕ್ ಇನ್ ಆಗಿ, ಸ್ಯಾಮ್ ನನ್ನು ಆಲಿಂಗಿಸಿ ಲಗೇಜ್ ಟ್ರಾಲಿಯೊಂದಿಗೆ ಸರಸರನೆ ಹೊರಟಳು. ಆದರೆ ಪುನಃ ಅದೇ ವೇಗದಿಂದ ಹಿಂದಿರುಗಿ ಬಂದು ಸ್ಯಾಮ್ ನ ಕೊರಳಿಗೆ ಜೋತುಬಿದ್ದಳು. ಕಂಬನಿ ತುಂಬಿಕೊಂಡು ಸ್ಯಾಮ್ ಗೆ ಬೈ ಹೇಳುತ್ತಾ ಬೀಳ್ಕೊಂಡಳು. ಅವಳು ಕಣ್ಣಿಗೆ ಕಾಣುವವರೆಗೂ ಸ್ಯಾಮ್ ಕೈ ಆಡಿಸುತ್ತಾ ಅವಳನ್ನು ನೋಡುತ್ತಿದ್ದ.
ವಿಮಾನ ಹಕ್ಕಿಯಂತೆ ಆಕಾಶದಲ್ಲಿ ಹಾರುತ್ತಾ ಸಾಗುತ್ತಿದ್ದರೆ, ಸೀಮಾಳ ಮನಸ್ಸು ಮಾತ್ರ ಗೂಡು ಸೇರಿದ ಹಕ್ಕಿಯಂತೆ ಮುದುಡಿ ಮಲಗಿತ್ತು. `ಸ್ಯಾಮ್ ಗೆ ನನ್ನ ಮೇಲೆ ಬಹಳ ಬೇಸರ ಉಂಟಾಗಿರುತ್ತದೆ. ಅವನೀಗ ಹ್ಯಾವನೋರ್‌ಗೆ ಹಿಂದಿರುಗುತ್ತಿರಬಹುದು,’ ಸೀಮಾಳ ಯೋಚನಾ ಲಹರಿಯು ಸ್ಯಾಮ್ ನ ಸುತ್ತ ಹರಿದಾಡುತ್ತಿತ್ತು ಮತ್ತು ಅದರಿಂದ ಹೊರಬರಲು ಸಾಧ್ಯವೇ ಇರಲಿಲ್ಲ.
`ಇದೆಂತಹ ಸುಯೋಗ? ಯಾವುದೋ ಬೇರೊಂದು ದೇಶದ ಹುಡುಗ ತನ್ನ ಕನಸಿನ, ಅಲ್ಲ ಅಲ್ಲ, ತನ್ನ ಜೀವನದ ರಾಜಕುಮಾರನಾಗಿಬಿಟ್ಟಿದ್ದ,’ ಯೋಚಿಸುತ್ತಾ ಸೀಮಾ ಪುಳಕಗೊಂಡಳು. ಈ ಪ್ರಯಾಣದಲ್ಲಿ ಅವನೂ ಜೊತೆಗಿದ್ದಿದ್ದರೆ ಅದೆಷ್ಟು ಸೊಗಸಾಗಿರುತ್ತಿತ್ತು ಎಂದು ಕಲ್ಪನಾ ಲೋಕಕ್ಕೆ ಜಾರಿದಳು.
ಆ ಸುಂದರ ಆಲೋಚನಾ ಅಲೆಯನ್ನು ಆಸ್ವಾದಿಸುತ್ತಾ ಸೀಮಾ ಹಾಗೆಯೇ ಕಣ್ಣು ಮುಚ್ಚಿದಳು. ಅವಳ ಕಣ್ಣು ತುಂಬೆಲ್ಲ, ಮನದ ತುಂಬೆಲ್ಲ ಸ್ಯಾಮ್ ಆವರಿಸಿಬಿಟ್ಟಿದ್ದ…. 2 ವರ್ಷಗಳ ಹಿಂದಿನ ಘಟನೆಯೆಲ್ಲ ಒಂದೊಂದಾಗಿ ತೆರೆದುಕೊಳ್ಳತೊಡಗಿದವು…….
ಡೈನಿಂಗ್ ಹಾಲ್‌ನ ಟೇಬಲ್ ಮೇಲೆ ಕೇವಲ ನಾನ್‌ವೆಜ್ ಡಿಶೆಸ್ ಕಂಡು ಸೀಮಾ ಕಂಗಾಲಾಗಿದ್ದಳು. ಎಲ್ಲರೂ ಆನಂದದಿಂದ ಊಟವನ್ನು ಸವಿಯುತ್ತಿದ್ದರೆ, ಸೀಮಾ ಪೆಚ್ಚು ಮುಖ ಹೊತ್ತು ದೂರದಲ್ಲಿ ನಿಂತಿದ್ದಳು. ಆಗ ಅಲ್ಲಿಗೆ ಬಂದ ಸ್ಯಾಮ್ ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವಳನ್ನು ಡೈನಿಂಗ್ ಟೇಬಲ್ ಬಳಿಗೆ ಕರೆತಂದ.
ಬ್ರೆಡ್ ಅಂಡ್ ಬಟರ್, ಮೊಸರು ಮತ್ತು ಫ್ರೂಟ್ ಸಲಾಡ್‌ನ್ನು ಪ್ಲೇಟ್‌ಗೆ ಹಾಕಿ ಅವಳ ಕೈಗಿತ್ತ. ಉಪವಾಸ ಇರಬೇಕಾಗುತ್ತದೆ ಎಂದು ಹೆದರಿದ್ದ ಸೀಮಾ ಸಂತೋಷ, ಸಮಾಧಾನದಿಂದ ಸ್ಯಾಮ್ ಗೆ ಥ್ಯಾಂಕ್ಸ್ ಹೇಳಿದಳು.
ಸ್ಯಾಮ್ ಮತ್ತು ಸೀಮಾ ಹ್ಯಾವನೋರ್ ಬಿಸ್‌ನೆಸ್ ಸ್ಕೂಲ್‌ನ ಎಂಬಿಎ ವಿದ್ಯಾರ್ಥಿಗಳು. ಇಬ್ಬರ ವಿಷಯಗಳು ಬೇರೆ ಬೇರೆಯಾಗಿದ್ದು, ತರಗತಿಗಳು ಬೇರೆ ಬೇರೆ ಬಿಲ್ಡಿಂಗ್‌ನಲ್ಲಿ ನಡೆಯುತ್ತಿದ್ದವು. ಆದರೂ ಸ್ಯಾಮ್, ಆ ದಿನದಿಂದ ಸೀಮಾಳ ಅಗತ್ಯಗಳನ್ನು ಅರಿತು ಸಹಾಯ ಮಾಡುತ್ತಿದ್ದ ಮತ್ತು ಅವಳ ಸಮಸ್ಯೆಗಳಿಗೆ ಸಮಾಧಾನ ನೀಡುತ್ತಿದ್ದ.
1 ವರ್ಷದ ಹಾಸ್ಟೆಲ್ ವಾಸದ ನಂತರ, ಎಲ್ಲ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಕಾಟೇಜ್‌ನಲ್ಲಿ ವಾಸಿಸಬೇಕಾಗಿತ್ತು. ಆಗ ಸ್ವತಃ ಸ್ಯಾಮ್ ಮುಂದೆ ನಿಂತು, 3 ಹುಡುಗಿಯರೊಂದಿಗೆ ಸೀಮಾ ವಾಸಿಸುವಂತೆ ವ್ಯವಸ್ಥೆ ಮಾಡಿದ. ಸೀಮಾಳಿಗೆ ಹಣದ ಕೊರತೆಯಾಗದಿರುವಂತೆ ಸ್ಯಾಮ್ ಸದಾ ಕಾಳಜಿ ವಹಿಸುತ್ತಿದ್ದ.
ಅದೊಂದು ಭಯಾನಕ ರಾತ್ರಿಯನ್ನು ಸೀಮಾ ಮರೆಯಲು ಸಾಧ್ಯವೇ ಇಲ್ಲ. ಅಂದು ಹಿಮದ ಬಿರುಗಾಳಿ ಭಯಂಕರವಾಗಿ ಬೀಸಿತ್ತು. ಇಡೀ ಹ್ಯಾವನೋರ್ ಅಂಟಾರ್ಟಿಕಾದಂತೆ ಪರಿವರ್ತಿತವಾಗಿತ್ತು. ರಸ್ತೆಗಳೆಲ್ಲ ಹಿಮಪಾತದಿಂದ ಮುಚ್ಚಿಹೋಗಿದ್ದವು. ವಿದ್ಯುಚ್ಛಕ್ತಿ ಇಲ್ಲದೆ ಜೀವನವೇ ಸ್ಥಗಿತಗೊಂಡಂತಾಗಿತ್ತು. ಕೊರೆಯುವ ಚಳಿ ಮತ್ತು ಹಿಮವನ್ನು ಲೆಕ್ಕಿಸದೆ ಸ್ಯಾಮ್ ಆಹಾರ ಪಾನೀಯಗಳೊಂದಿಗೆ ಸೀಮಾಳ ಕಾಟೇಜ್‌ಗೆ ಬಂದಿದ್ದ. ಆ ಬಿರುಗಾಳಿಯ ರಾತ್ರಿಯಲ್ಲಿ ಸ್ಯಾಮ್ ಹಿಂದಿರುಗಿ ಹೋಗದಂತೆ ಸೀಮಾ ತಡೆದಳು. ಕರಾಳ ಕತ್ತಲಿನ ರಾತ್ರಿಯನ್ನು ಇಬ್ಬರೂ ಟಾರ್ಚ್ ಬೆಳಕಿನಲ್ಲಿ ಕಳೆದರು.
ಗುಡುಗು ಸಿಡಿಲಿನ ಆರ್ಭಟವಾದಾಗ ಸೀಮಾ ಹೆದರಿ ಸ್ಯಾಮ್ ನ ಕೈಗಳನ್ನು ಹಿಡಿದುಕೊಳ್ಳುತ್ತಿದ್ದಳು. ಸೆಕ್ಸ್ ನ್ನು ಸಾಮಾನ್ಯ ಶರೀರದ ಒಂದು ಅವಶ್ಯಕತೆಯೆಂದು ಭಾವಿಸುವ ಆ ದೂರದ ದೇಶದಲ್ಲಿ, ಅಲ್ಲಿಯವನೇ ಆದ ಒಬ್ಬ ಸಂಭಾವಿತ ಯುವಕ ಅವಳನ್ನು ತೆಕ್ಕೆಯಲ್ಲಿರಿಸಿಕೊಂಡು ಇಡೀ ರಾತ್ರಿ ಕಳೆದಿದ್ದ….. ಆದರೆ ಸಂಯಮ ಮೀರಿ ನಡೆಯಲಿಲ್ಲ…. ಮರ್ಯಾದೆಯ ಎಲ್ಲೆಯನ್ನೂ ದಾಟಲಿಲ್ಲ. 2 ವಾರಗಳ ಹಿಂದೆ ಸ್ಯಾಮ್ ನ್ಯೂಜೆರ್ಸಿಯ ತನ್ನ ಮನೆಗೆ ಸೀಮಾಳನ್ನು ಕರೆದೊಯ್ದಿದ್ದ. `ಫಾರ್ಮರ್ಸ್ ಸನ್ ಆಫ್ ಗಾರ್ಡನ್ ಸಿಟಿ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಸ್ಯಾಮ್ ನ ಅದ್ಧೂರಿ ಕಟ್ಟಡವನ್ನು ಕಂಡು ಸೀಮಾ ದಂಗಾದಳು. ಮನೆ ಬಾಗಿಲಿನಲ್ಲಿ ಮತ್ತು ಗ್ಯಾರೇಜ್‌ನಲ್ಲಿ ನಿಂತಿದ್ದ ಹೊಳೆಯುವ 3-3 ಕಾರುಗಳು, ಎಲ್ಲ ಸೌಕರ್ಯಗಳಿಂದ ಕೂಡಿದ್ದ ಆಧುನಿಕ ಮನೆ, ಟ್ರಾಕ್ಟರ್ ಮತ್ತು ವ್ಯವಸಾಯಕ್ಕೆ ಅಗತ್ಯವಾದ ಎಲ್ಲ ಸಲಕರಣೆಗಳು, ಸ್ಟೇಬಲ್‌ನಲ್ಲಿ ಕಟ್ಟಿರಿಸಿದ್ದ ಬಿಳಿ ಮತ್ತು ಕಂದು ಬಣ್ಣದ ಕುದುರೆಗಳು, ಪೌಲ್ಟ್ರಿಫಾರ್ಮ್, ಇವೆಲ್ಲವನ್ನೂ ನೋಡಿದ ಸೀಮಾಳಿಗೆ ತನ್ನ ದೇಶದ ಬಡರೈತರು ಮತ್ತು ಅವರ ಕೃಶಕಾಯರಾದ ಮಕ್ಕಳ ಚಿತ್ರ ಮನಸ್ಸಿನಲ್ಲಿ ಮೂಡಿಬಂದಿತು.
ಸ್ಯಾಮ್ ನ, ಮಮ್ಮಿ ಡ್ಯಾಡಿ ಸೀಮಾಳನ್ನು ಪ್ರೀತಿಯಿಂದ ಸ್ವಾಗತಿಸಿದರು. ಮೂರು ದಿನಗಳ ಕಾಲ ಅಲ್ಲಿದ್ದ ಸೀಮಾಳಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಿದರು. ಡಿನ್ನರ್ ಆದ ಮೇಲೆ ಲಿವಿಂಗ್ ರೂಮ್ ನಲ್ಲಿ ಕುಳಿತು ಎಲ್ಲರೊಡನೆ ಗುಡ್‌ನೈಟ್ ಹೇಳಿ ಮಲಗಲು ತಮ್ಮ ಕೋಣೆಗೆ ಹೋಗುತ್ತಿದ್ದರು. ಯಾವುದೇ ರೀತಿಯ ಸಂಶಯವಾಗಲಿ, ಇಣುಕಿ ನೋಡುವ ಪ್ರಕ್ರಿಯೆಯಾಗಲಿ ಇಲ್ಲವೇ ಇಲ್ಲ.
ರಾಬರ್ಟ್ ವುಡ್ ಹಾಸ್ಪಿಟಲ್‌ನಲ್ಲಿ ಮೆಡಿಸನ್ ವಿದ್ಯಾಭ್ಯಾಸ ಮಾಡುತ್ತಿದ್ದ ಸ್ಯಾಮ್ ನ ತಂಗಿ ಎಲಿಸಾ ರಜೆಗಾಗಿ ಮನೆಗೆ ಬಂದಿದ್ದಳು. ಸ್ಯಾಮ್ ಮತ್ತು ಸೀಮಾರನ್ನು ನೋಡಿ ನಗುತ್ತಾ ಪರ್ಫೆಕ್ಟ್ ಪೇರ್ ಎಂದಳು. ಅವಳು ಸೀಮಾಳಿಗೆ ನೇಲ್‌ಪಾಲಿಶ್, ಲಿಪ್‌ಸ್ಟಿಕ್ ಮತ್ತು ಪರ್ಫ್ಯೂಮ್ ಗಳನ್ನು ಕೊಟ್ಟಳು. ಸ್ಯಾಮ್ ನ ತಾಯಿ ಅವಳಿಗೆ ಒಂದು ಡ್ರೆಸ್ ಮತ್ತು ಪರ್ಲ್ ಸೆಟ್ ಕೊಟ್ಟು, “ಸ್ಯಾಮ್, ನಿನ್ನನ್ನು ಬಹಳ ಇಷ್ಟಪಡುತ್ತಾನೆ…. ಸದಾ ಸಂತೋಷವಾಗಿರು,” ಎಂದು ಹೇಳಿದರು.
ಸೀಮಾಳ ಕಂಗಳು ತುಂಬಿಬಂದವು. ತನ್ನ ನಾಡಿನ ಪದ್ಧತಿಯಂತೆ ಅವಳು ಅವರ ಕಾಲು ಮುಟ್ಟಿ ನಮಸ್ಕರಿಸಿದಳು.
ಸೀಮಾಳಿಗೆ ನ್ಯೂಯಾರ್ಕ್ ಸಿಟಿ ತೋರಿಸಲು ಸ್ಯಾಮ್ ಕರೆದೊಯ್ದ. ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಅವರು ಹಡ್ಸನ್ ನದಿ ತೀರಕ್ಕೆ ಬಂದರು. ಆ ದಿನ ಅಲ್ಲಿ ದೊಡ್ಡ ದೊಡ್ಡ ಹಡಗುಗಳು ಬಂದಿದ್ದವು. ಅವುಗಳ ಮೇಲೆ ವಿಮಾನಗಳು ಬಂದು ಇಳಿಯುತ್ತಾ ಮತ್ತು ಅಲ್ಲಿಂದ ಮೇಲಕ್ಕೆ ಹಾರುತ್ತಾ ಇದ್ದವು. ಆ ಅಪರೂಪದ ದೃಶ್ಯವನ್ನು ನೋಡಿ ಸೀಮಾ ಮಗುವಿನಂತೆ ಕುಣಿದಾಡಿದಳು.
ಎಲ್ಲ ಕಡೆ ಸುತ್ತಾಡಿ ದಣಿದಿದ್ದ ಅವರು ಟೈಮ್ ಸ್ಕ್ವೇರ್‌ನ ಮೂಲೆಯಲ್ಲಿದ್ದ ಗ್ಯಾಲರಿಯಲ್ಲಿದ್ದ ದೃಶ್ಯಾವಳಿಗಳನ್ನು ವೀಕ್ಷಿಸಿದರು. ನಂತರ ಹತ್ತಿರದಲ್ಲಿದ್ದ ಒಂದು ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮುಗಿಸಿ ರಾಕ್‌ಫೆಲ್ಲರ್ ಸೆಂಟರ್‌ನಲ್ಲಿ ಬೆಂಚ್ ಮೇಲೆ ಕುಳಿತರು.
ರಾತ್ರಿ ಚಳಿಯಿಂದಾಗಿ ಸೀಮಾ ನಡುಗಿದಾಗ ಸ್ಯಾಮ್ ಅವಳನ್ನು ತನ್ನ ಜಾಕೆಟ್‌ನೊಳಗೆ ಸೇರಿಸಿಕೊಂಡ. ಇಬ್ಬರೂ ಹಾಗೇ ಕಣ್ಣುಮುಚ್ಚಿ ಕುಳಿತು ಪರಸ್ಪರರ ಹೃದಯ ಬಡಿತವನ್ನು ಆಲಿಸಿದರು. ಸ್ಯಾಮ್ ನ ಬೆರಳುಗಳು ಸೀಮಾಳ ಶರೀರದ ಮೇಲೆ ಆಡಿದಾಗ, ವಿದ್ಯುತ್ ಕರೆಂಟ್ ಪ್ರವಹಿಸಿದಂತಾಗಿ ಅವಳು ಜಾಕೆಟ್‌ನಿಂದ ಹೊರಬಂದಳು. ಬಹಳ ಕಷ್ಟದಿಂದ ತನ್ನ ಕಾತರಗೊಂಡ ಮನಸ್ಸನ್ನು ಸ್ಥಿಮಿತದಲ್ಲಿರಿಸಿದಳು.
“ಯೂ ಇಂಡಿಯನ್ ಬೇಬಿ,” ಎಂದು ನಗುತ್ತಾ ಸ್ಯಾಮ್ ಅವಳನ್ನು ಹತ್ತಿರ ಎಳೆದುಕೊಂಡ.
ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಕಾರ್‌ನಲ್ಲಿ ಇಬ್ಬರೂ ರಾತ್ರಿಯನ್ನು ಕಳೆದರು. ದಾರಿ ತಪ್ಪಿದ ಮನಸ್ಸನ್ನು ಹತೋಟಿಯಲ್ಲಿರಿಸುವುದು ಅದೆಷ್ಟು ಕಷ್ಟವಾಗಿತ್ತು!
ನಂತರ ಸ್ಯಾಮ್ ನಗರದ ಪ್ರತಿಷ್ಠಿತ ಮಾಲ್‌ಗೆ ಕರೆದೊಯ್ದು ಸೀಮಾಳಿಗೆ ಅಗತ್ಯವಾದ ಅನೇಕ ವಸ್ತುಗಳನ್ನು ಕೊಡಿಸಿದ. ಸೀಮಾ ಎಷ್ಟು ಅಡ್ಡಿಪಡಿಸಿದರೂ ಕೇಳದೆ ಅವಳ ತಂದೆ ತಾಯಿ ಮತ್ತು ತಂಗಿಯರಿಗೆ ಉಡುಗೊರೆಯಾಗಿ ಡ್ರೆಸ್‌ಗಳನ್ನು ಖರೀದಿಸಿದ.
ಅಂದು ಇದ್ದಕ್ಕಿದ್ದಂತೆ ಎಲ್ಲ ನಡೆದುಹೋಗಿತ್ತು. ಆದರೂ ಮನಸ್ಸಿಗೆ ಏನೋ ಒಂದು ಬಗೆಯ ಸಮಾಧಾನ. ಮನ ಮೆಚ್ಚಿದವನಿಗೆ ಸಮರ್ಪಣೆ ಮಾಡಿಯೂ ಆಯಿತು. ಅವಳ ತಂದೆ ತಾಯಿಯರ ಸಾಂಪ್ರದಾಯಿಕ ಆಲೋಚನೆ ಮತ್ತು ಕುಟುಂಬದ ಮರ್ಯಾದೆಗಾಗಿ ಸ್ಯಾಮ್ ನನ್ನು ಬಾಳ ಸಂಗಾತಿಯನ್ನಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವಳು ತುಟಿ ಬಿಚ್ಚದೆ ಅವರ ಮಾತಿಗೆ ತಲೆಬಾಗಿ ರಾಜೇಂದ್ರನನ್ನು ಮದುವೆಯಾಗಲು ಹೋಗುತ್ತಿದ್ದಾಳೆ.
ಪ್ರೀತಿಯ ಹಾದಿ ಅದೆಷ್ಟು ಕಿರಿದು. ಪ್ರೀತಿಸಿದ ಎರಡು ಹೃದಯಗಳು ಕಷ್ಟಪಟ್ಟು ಒಂದಾಗುವಾಗ ಮೂರನೆಯದು ಅಲ್ಲಿ ಸೇರಲು ಆಸ್ಪದವೇ ಇರದು. ಅವಳ ಶರೀರದ ಮೇಲೆ ರಾಜೇಂದ್ರನಿಗೆ ಅಧಿಕಾರ ಸಿಗಬಹುದಾದರೂ ಮನಸ್ಸೆಲ್ಲ ಸ್ಯಾಮ್ ಗೇ ಅರ್ಪಿತ.
ವಿಮಾನದ ಪ್ರಯಾಣದುದ್ದಕ್ಕೂ ಸೀಮಾಳ ಕಣ್ಣ ಪರದೆಯ ಮೇಲೆ ಹಿಂದೆ ನಡೆದ ಘಟನೆಗಳೆಲ್ಲ ತೇಲುತ್ತಾ ಜಾರಿದವು. ಒಂದೊಂದು ನೆನಪೂ ಅವಳಿಗೆ ಆನಂದದ ಔತಣವನ್ನು ಉಣಬಡಿಸಿತು. ಉಸಿರಾಡುವುದನ್ನೂ ಮರೆತು ಅವಳು ಅದನ್ನೆಲ್ಲ ಮನಃಪೂರ್ತಿಯಾಗಿ ಅನುಭವಿಸಿದಳು. ಸ್ಯಾಮ್ ಅವಳ ಜೊತೆಯಲ್ಲಿಲ್ಲದಿದ್ದರೂ ಅವನ ಪರಿಮಳವನ್ನು ಜೊತೆಗೆ ತಂದಿದ್ದಳು. ಅದು ಅವಳ ಮೈಮನಗಳನ್ನು ಆವರಿಸಿ ಕಣಕಣವನ್ನು ಪುಳಕಿತಗೊಳ್ಳುವಂತೆ ಮಾಡಿತ್ತು.
ವಿಮಾನದ ಲ್ಯಾಂಡಿಂಗ್‌ನ ಘೋಷಣೆಯಾಯಿತು. ಸೀಮಾ ವಿಮಾನ ನಿಲ್ದಾಣದೊಳಗೆ ಬರುತ್ತಿದ್ದಂತೆ ಅವಳ ತಂಗಿಯರಾದ ದೀಪಾ ಮತ್ತು ದಿವ್ಯಾ ಓಡಿ ಬಂದು ಅವಳನ್ನು ಆಲಿಂಗಿಸಿದರು. ಸೀಮಾ ಮುಂದೆ ಬಂದು ತಂದೆ ತಾಯಿಯರಿಗೆ ನಮಸ್ಕರಿಸಿದಳು.
“ಅಮ್ಮಾ, ಅಕ್ಕ ಹೇಗೆ ಪಿಂಕ್ ಪಿಂಕ್ ಆಗಿದ್ದಾಳೆ. ಇವಳನ್ನು ನೋಡಿ ಭಾವ ಕ್ಲೀನ್ ಬೋಲ್ಡ್ ಆಗುವುದು ಗ್ಯಾರಂಟಿ,” ದಿವ್ಯಾ ಹೇಳಿದಳು.
“ಅಕ್ಕನ ಕ್ವಾಲಿಫಿಕೇಶನ್ ನೋಡಿ ಭಾವ ಖಂಡಿತ ಬೆರಗಾಗುತ್ತಾರೆ,” ಎಂದು ದೀಪಾ ತನ್ನ ಮಾತು ಸೇರಿಸಿದಳು.
ಮಾರನೆಯ ದಿನವೇ ರಾಜೇಂದ್ರ ತನ್ನ ತಂದೆ ತಾಯಿಯರ ಜೊತೆಯಲ್ಲಿ ಸೀಮಾಳ ಮನೆಗೆ ಬಂದ. ಸೀಮಾ ಅವನನ್ನು ನಿರ್ಭಾವದಿಂದ ಸ್ವಾಗತಿಸಿದಳು. ಅವರಾರಿಗೂ ಅವಳ ಉನ್ನತ ವಿದ್ಯಾಭ್ಯಾಸದ ಬಗೆಗೆ ಆಸಕ್ತಿ ಇರಲಿಲ್ಲ. ಅವಳಿಗೆ ಅಭಿನಂದನೆಯನ್ನೂ ಹೇಳಲಿಲ್ಲ.
ರಾಜೇಂದ್ರ ಏಕಾಂತ ದೊರೆತೊಡನೆ ಸೀಮಾಳೊಡನೆ ತನ್ನ ಮನಸ್ಸಿನಲ್ಲಿ ಇದ್ದುದನ್ನು ಹೊರಹಾಕಿದ, “ಅಮೆರಿಕಾದಲ್ಲಿ ಜನರು ಯಾರೊಂದಿಗೆ ಬೇಕಾದರೂ ನಿರ್ಭಯವಾಗಿ ಸೆಕ್ಸ್ ಎಂಜಾಯ್ ಮಾಡುವರೆಂದು ಕೇಳಿದ್ದೇನೆ…… ಇಷ್ಟು ದೀರ್ಘಕಾಲದಲ್ಲಿ ನೀನೂ ಸಹ ಈ ಆನಂದ ಪಡೆದಿರಬಹುದು ಅಲ್ಲವೇ? ಇಲ್ಲವಾದರೆ ನೀನು ಶತಮೂರ್ಖಳು ಎನ್ನಬಹುದು.
“ಏನಿಲ್ಲವೆಂದರೂ ಲಿಪ್ ಕಿಸ್ ಅಂತೂ ಯಾರಾದರೂ ಕೊಟ್ಟಿರಬಹುದು. ಹಗ್ ಮಾಡುವಾಗ ತುಟಿಯ ಮೇಲೆ ಮುದ್ರೆಯೊತ್ತುವುದು ಸಹಜವಲ್ಲವೇ? ನೀನು ಇದನ್ನಂತೂ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಾರದು. ನಾನು ಹೇಳಿದ್ದು ಸರಿ ತಾನೇ? ಇರಲಿ ಬಿಡು, ನಾನು ಅಲ್ಲಿಗೆ ಹೋದಾಗ ಅದನ್ನು ಬಡ್ಡಿ ಸಹಿತ ವಸೂಲಿ ಮಾಡುತ್ತೇನೆ,” ಎನ್ನುತ್ತಾ ರಾಜೇಂದ್ರ ಅವಳ ಬೆರಳುಗಳನ್ನು ಜೋರಾಗಿ ಅದುಮಿದ. ನೋವಿನಿಂದ ಸೀಮಾ `ಹ್ಞಾಂ….’ ಎಂದಳು.
ರಾಜೇಂದ್ರನ ಕ್ಷುದ್ರ ಮಾನಸಿಕತೆಯನ್ನು, ನೀಚ ಆಲೋಚನಾ ಧಾಟಿಯನ್ನು ಕಂಡು ಅಸಹ್ಯದಿಂದ ಸೀಮಾ ಅವನಿಂದ ಕೈ ಬಿಡಿಸಿಕೊಂಡು ಹೊರಗೆ ಓಡಿದಳು. ಸ್ಯಾಮ್ ಮತ್ತು ರಾಜೇಂದ್ರ ಇವರಿಬ್ಬರ ಸ್ಪರ್ಶದಲ್ಲಿ ಅದೆಂತಹ ವ್ಯತ್ಯಾಸ….. ಒಬ್ಬನ ಹಗುರ ಸ್ಪರ್ಶ ಎಲ್ಲ ಕಾಲವನ್ನೂ ವಸಂತ ಋತುವನ್ನಾಗಿಸಿ ಮೈ ನವಿರೇಳಿಸುತ್ತದೆ. ಇನ್ನೊಬ್ಬನ ಸ್ಪರ್ಶ ಮೈಮೇಲೆಲ್ಲ ನೂರಾರು ಹುಳುಗಳನ್ನು ಹರಿಬಿಟ್ಟಂತಾಗಿಸುತ್ತದೆ…… ಇಂತಹ ವ್ಯಕ್ತಿಯೊಡನೆ ಜೀವನ ಕಳೆಯುವುದು ಹೇಗೆ……
ರಾಜೇಂದ್ರ ಮತ್ತು ಅವನ ಮನೆಯವರು ಮದುವೆಯ ಮಾತುಕತೆಗೆ ಕುಳಿತರು. ಮದುವೆಯ ತಾರೀಖು ಮತ್ತು ಶಾಸ್ತ್ರ ಸಂಪ್ರದಾಯಗಳ ಬಗ್ಗೆ ತಾಕೀತು ಮಾಡಿದರು. ಎಂಗೇಜ್‌ಮೆಂಟ್‌ನಿಂದ ಹಿಡಿದು ಮದುವೆಯ ಕಾರ್ಯ ಕಲಾಪಗಳೆಲ್ಲ ಪಂಚತಾರಾ ಹೋಟೆಲ್‌ನಲ್ಲಿಯೇ ನಡೆಯಬೇಕೆಂದು ತಿಳಿಸಿ ಹೇಳಿ ಹೊರಟರು.
ಇವೆಲ್ಲ ಸೀಮಾಳ ಮನಸ್ಸನ್ನು ಘಾಸಿಗೊಳಿಸಿದವು. ಸ್ಯಾಮ್ ನೊಂದಿಗೆ ಚ್ಯಾಟ್ ಮಾಡಿ ತನ್ನ ಮನಸ್ಸಿನ ದುಗುಡವನ್ನು ಹಂಚಿಕೊಂಡಳು. ಎಂಗೇಜ್‌ಮೆಂಟ್‌ನ ದಿನ ಬರುತ್ತಿದ್ದಂತೆ ರಾಜೇಂದ್ರನ ಮನೆಯವರ ಡಿಮ್ಯಾಂಡ್ ಲಿಸ್ಟ್ ಉದ್ದವಾಗುತ್ತಾ ಹೋಯಿತು. ಸೀಮಾಳ ತಂದೆ ತಾಯಿಯರು ಚಿಂತೆಗೊಳಗಾದರು.
ಕಡೆಗೊಮ್ಮೆ ಹುಡುಗನ ಕಡೆಯವರು ಕಾರ್ ಸಹ ಬೇಕೆಂದು ಕೇಳಿದಾಗ ಸೀಮಾಳ ತಂದೆ ಕುಪಿತರಾದರು, `ಇಂತಹ ಆಸೆಬುರುಕರಿಗೆ ನಮ್ಮ ಮಗಳನ್ನು ಕೊಡುವುದೇ ಬೇಡ. ಸೀಮಾಳ ಪ್ರತಿಭೆಗೆ ರಾಜೇಂದ್ರ ಸರಿತೂಗೂವವನೇ ಅಲ್ಲ….. ಅವನೊಬ್ಬ ಸಾಮಾನ್ಯ ಎಂಜಿನಿಯರ್ ಅಷ್ಟೇ. ಅವಳ ಮೂಲಕ ಅಮೆರಿಕಾಗೆ ಹೋಗುತ್ತಾನೆ. ಆಮೇಲೆ ಅವಳ ನೆರವಿನಿಂದ ಎಚ್ 4 ವೀಸಾದಲ್ಲಿ ಉದ್ಯೋಗ ಮಾಡುತ್ತಾನೆ.”
“ಸರಿಯಾಗಿ ಹೇಳಿದಿರಿ ಅಪ್ಪಾ,” ಎಂದು ಸೀಮಾ ಅವರ ಮಾತನ್ನು ಒಪ್ಪುತ್ತಾ ಸಂತಸ ವ್ಯಕ್ತಪಡಿಸಿದಳು.
ಒಲ್ಲದ ಮದುವೆ ತಪ್ಪಿದ್ದು ಅವಳಿಗೊಂದು ಭಾರ ಇಳಿದಂತಾಯಿತು. ಖುಷಿಯಾದ ಹಾಡೊಂದರ ಸಾಲನ್ನು ಗುನುಗುನಿಸುತ್ತಾ ಓಡಾಡಿದಳು.
“ಉಳಿದರೆ ಪ್ರಿಯತಮನ ಒಲವಿನಲಿ….. ಅಳಿದರೆ ಪ್ರಿಯತಮನ ನೆನಪಿನಲಿ…..”
ಸಂತಸ ತುಂಬಿದ ಹಗುರವಾದ ಮನಸ್ಸಿನಿಂದ ಅವಳು ರಾತ್ರಿಯಿಡೀ ಸ್ಯಾಮ್ ನೊಂದಿಗೆ ಮಾತನಾಡಿದಳು.
ಸ್ಯಾಮ್ ನಿಂದ ಆಶ್ವಾಸನೆ ಪಡೆದ ಸೀಮಾ ಮರುದಿನ ಬೆಳಗ್ಗೆ ಸ್ಯಾಮ್ ನ ಔದಾರ್ಯದ ಬಗ್ಗೆ ಮನೆಯವರಲ್ಲಿ ತಿಳಿಸಿದಳು. ಅವಳ ತಂದೆ ತಾಯಿಯರು ಈಗ ಅವನ ವಿಷಯವಾಗಿ ಕುತೂಹಲ ತಾಳಿದರು. ವೀಡಿಯೋ ಕಾಲ್ ಮೂಲಕ ಸ್ಯಾಮ್ ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡಿದ. ಅವನ ಆಕರ್ಷಕ ವ್ಯಕ್ತಿತ್ವ ಮತ್ತು ಸೌಜನ್ಯಯುತ ನಡವಳಿಕೆಗೆ ಮನೆಯವರೆಲ್ಲ ಮಾರುಹೋದರು.
ಮಗಳು ಮೆಚ್ಚಿರುವ ವರನ ಸೌಶೀಲ್ಯವನ್ನು ನೆನೆದು ತಂದೆ ತಾಯಿಯರ ಕಣ್ಣು ತುಂಬಿ ಬಂದಿತು. ಡಿಗ್ರಿ ಮುಗಿಸಿದ್ದ ದೀಪಾ ಮತ್ತು ದಿವ್ಯಾರಿಗೆ ಅಮೆರಿಕೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸ್ಯಾಮ್ ಸಲಹೆ ನೀಡಿದ. ಮನೆಯವರೆಲ್ಲ ಸುಂದರ ಭವಿಷ್ಯದ ಕನಸು ಕಾಣತೊಡಗಿದರು.
ಸೀಮಾಳಿಗಂತೂ ಸಂತೋಷದ ಭಂಡಾರವೇ ಧರೆಗಿಳಿದಂತಾಗಿತ್ತು. ಕಳೆದುಹೋಗಲಿದ್ದ ಪ್ರೀತಿ ಸೀಮಾಳ ಅಚಲ ವಿಶ್ವಾಸದಿಂದ ಪ್ರಾಪ್ತವಾಯಿತು. ರಾಧೆಯಂತೆ ಸ್ಯಾಮ್ ನ ಪ್ರಿಯಳಾಗಿ ಸದಾ ಇರುವುದಲ್ಲದೆ, ರುಕ್ಮಿಣಿಯಂತೆ ಜೀವನದ ಜೊತೆಗಾತಿಯಾಗಿಯೂ ಬಾಳುವಳು.
ಮುಂದಿನ 3 ವಾರಗಳಲ್ಲಿ ಸ್ಯಾಮ್ ತನ್ನ ಕುಟುಂಬದವರೊಡಗೂಡಿ ಭಾರತಕ್ಕೆ ಬಂದನು. ಮೊದಲು ರಿಜಿಸ್ಟರ್ಡ್ ಮದುವೆಯಾಗಿ ನಂತರ ಎರಡೂ ಕಡೆಯವರ ಒಪ್ಪಿಗೆಯ ಮೇರೆಗೆ ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ವಿಜೃಂಭಣೆಯಿಂದ ವಿವಾಹ ಕಾರ್ಯಗಳು ನೆರವೇರಿದವು.
ಭಾರತೀಯ ಸಂಸ್ಕೃತಿಯ ಬಗ್ಗೆ ಮೊದಲಿನಿಂದಲೂ ಒಲವು ತಳೆದಿದ್ದ ಸ್ಯಾಮ್ ಮತ್ತು ಅವನ ಮನೆಯವರ ಸಂತೋಷ ಹೇಳತೀರದು. ಎರಡೂ ಕುಟುಂಬದವರು ಪರಸ್ಪರ ಹೊಂದಿಕೊಂಡು ನಡೆದರು. ಅಲ್ಲಿ ಜಾತಿ, ಧರ್ಮ, ದೇಶಗಳ ಆಡಂಬರವಿರಲಿಲ್ಲ. ಪರಸ್ಪರರ ರೀತಿ ರಿವಾಜುಗಳಿಗೆ ಗೌರವ ನೀಡುತ್ತಾ ಆನಂದಪಟ್ಟರು.
ಶ್ಯಾಮ್ ಮತ್ತು ಸೀಮಾರ ಮನೆಯವರು ಒಂದುಗೂಡಿ ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು. ರಜೆಯ ದಿನಗಳು ರೆಕ್ಕೆ ಕಟ್ಟಿಕೊಂಡು ಹಾರಿ ಕಳೆದುಹೋದವು. ಇನ್ನೊಂದು ವಾರದಲ್ಲಿ ಸ್ಯಾಮ್ ಮತ್ತು ಸೀಮಾ ಕೆಲಸಕ್ಕೆ ಹಾಜರಾಗಬೇಕಿತ್ತು. ಸಾವಿರಾರು ಸುಂದರ ಕನಸುಗಳನ್ನು ತುಂಬಿಕೊಂಡು ಸೀಮಾ, ಹೊಸ ಸೂರ್ಯೋದಯ ಜೀವನಕ್ಕೆ ಅಡಿಯಿರಿಸಿದಳು.