ಮಕ್ಕಳಲ್ಲಿ ಅಪರಾಧ ಪ್ರವೃತ್ತಿ ಬೆಳೆಯದಂತೆ ನೋಡಿಕೊಳ್ಳಲು ತಂದೆತಾಯಿಗಳು ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಬೇಕು.
ಮಕ್ಕಳೇಕೆ ಅಪರಾಧಿಗಳಾಗುತ್ತಾರೆ? ಬಾಲಾಪರಾಧ ಏಕೆ ಹುಟ್ಟಿಕೊಳ್ಳುತ್ತದೆ? ಮನುಷ್ಯನಲ್ಲಿ ಹಿಂಸೆ ಹಾಗೂ ಅಪರಾಧೀಭಾವ ಏಕೆ ಜನ್ಮ ತಳೆಯುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ 2 ಕಾರಣಗಳಿವೆ ಸ್ವಭಾವಗತ ಮತ್ತು ಸನ್ನಿವೇಶಗತ. ಈ ಎರಡು ಕಾರಣಗಳಿಗೆ ಹಲವು ಉಪಕಾರಣಗಳೂ ಕೂಡ ಇರಬಹುದು. ಒಂದು ವೇಳೆ ನಾವು ಮೇಲ್ಕಂಡ ಎರಡೂ ಕಾರಣಗಳನ್ನು ಸಮಗ್ರವಾಗಿ ಅರಿತಾಗ ಉಪಕಾರಣಗಳು ತಂತಾನೇ ಸ್ಪಷ್ಟವಾಗುತ್ತವೆ.
ಮೊದಲನೆಯದು : ಸ್ವಭಾವಗತ ಕಾರಣದ ಮುಖ್ಯ ಲಕ್ಷಣಗಳೆಂದರೆ, ಹುಡುಗನ ಉಗ್ರ ಹಾಗೂ ಕ್ರೋಧದ ಸ್ವಭಾವ, ಹಠಮಾರಿತನ, ಚಿಕ್ಕಪುಟ್ಟ ಮಾತುಗಳಿಗೆ ಜೋರಾಗಿ ಕೂಗಾಡುವುದು, ಹಿಂಸೆಗೆ ಇಳಿಯುವುದು, ಇವೆಲ್ಲ ಲಕ್ಷಣಗಳು ಜಾಸ್ತಿ ಆಗಿಬಿಟ್ಟರೆ ಅವು ಅಪರಾಧದ ರೂಪ ಪಡೆದುಕೊಳ್ಳುತ್ತವೆ.
ಎರಡನೆಯದು : ಸನ್ನಿವೇಶಗತ ಕಾರಣಗಳು ಅತ್ಯಂತ ಸ್ಪಷ್ಟವಾಗಿರುತ್ತದೆ. ಬಡತನ, ಅನಕ್ಷರತೆ, ನಿರುದ್ಯೋಗ, ಕೆಟ್ಟ ಸಹವಾಸ, ಆಲಸ್ಯತನ, ದುರಾಸೆ, ಅತಿ ಮಹತ್ವಾಕಾಂಕ್ಷೆ, ಮೈಗಳ್ಳತನ, ಏನೂ ಕೆಲಸ ಮಾಡದೆಯೇ ಬಹಳಷ್ಟನ್ನು ದೊರಕಿಸಿಕೊಳ್ಳಬೇಕೆನ್ನುವ ಅಪೇಕ್ಷೆ.
ಅಪರಾಧ ಯಾವುದೇ ಆಗಿರಬಹುದು ಅದರ ಅಪರಾಧಿಕ ಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ. ಕುಟುಂಬ ಹಾಗೂ ಸಮಾಜ ಅವನ್ನು ಸಕಾಲಕ್ಕೆ ಗುರುತಿಸುವುದಿಲ್ಲ ಅಥವಾ ಗುರುತಿಸಿದರೂ ಗೊತ್ತಿಲ್ಲದವರಂತೆ ಉಳಿದುಬಿಡುತ್ತಾರೆ. ತಂದೆತಾಯಿಗಳು ಅತಿಯಾದ ಪ್ರೀತಿಯಿಂದ ತಮ್ಮ ಮಗನ ದುರ್ವರ್ತನೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮುಂದೆ ಅವೇ ದುರ್ವರ್ತನೆಗಳು ಅವರನ್ನು ದೊಡ್ಡ ಅಪರಾಧಗಳತ್ತ ಕೊಂಡೊಯ್ಯುತ್ತವೆ. ಪೋಷಕರಿಗೆ ಅರಿವಾಗುವಷ್ಟರಲ್ಲಿ ನೀರು ಕುತ್ತಿಗೆಯ ಮಟ್ಟ ಮೀರಿರುತ್ತದೆ.
ಸ್ಮಾರ್ಟ್ ಫೋನ್‌ಗಳು, ಇಂಟರ್‌ನೆಟ್ ಸೌಲಭ್ಯದಿಂದಾಗಿ ಹುಡುಗರು ಸೆಕ್ಸ್ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬಲಾತ್ಕಾರದ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಕಡಿಮೆ ವಯಸ್ಸಿನವರಾಗಿರುತ್ತಾರೆ.
ಸೆಕ್ಸ್ ಬಗ್ಗೆ ಆಕರ್ಷಣೆ
ಬಾಲಮನಸ್ಸಿನಲ್ಲಿ ಜಿಜ್ಞಾಸೆಗಳು ಹೆಚ್ಚಾಗಿರುತ್ತವೆ. ಹಿಂದೆ ವೈಜ್ಞಾನಿಕ ಉಪಕರಣಗಳು ಇರದೇ ಇದ್ದುದರಿಂದ ಹದಿವಯಸ್ಸಿನವರು ತಮ್ಮ ಜಿಜ್ಞಾಸೆಯನ್ನು ಹಾಗೆಯೇ ಹತ್ತಿಕ್ಕುತ್ತಿದ್ದರು. ಜಿಜ್ಞಾಸೆಗಳು ಅತಿಯಾದರೂ ಕೌಟುಂಬಿಕ ಹಾಗೂ ಸಾಮಾಜಿಕ ಶಿಸ್ತಿನಿಂದಾಗಿ ಅವರು ಅಪರಾಧದತ್ತ ಆಕರ್ಷಿತರಾಗುತ್ತಿರಲಿಲ್ಲ. ಆದರೆ ಈಗ ಚಿತ್ರಣ ಬದಲಾಗಿದೆ.
ಚಲನಚಿತ್ರಗಳಲ್ಲಿ ನಾಯಕ ನಾಯಕಿಯರ ಮುಕ್ತ ಅಭಿನಯ ಮಕ್ಕಳಲ್ಲಿ ಸೆಕ್ಸ್ ಭಾವನೆಗಳನ್ನು ಕೆರಳಿಸುತ್ತವೆ. ಇಂಟರ್‌ನೆಟ್‌ನಲ್ಲಿ ಅದರ ಮಾಹಿತಿ ಯಥೇಚ್ಛವಾಗಿ ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಬಾಲಮನಸ್ಸಿಗೆ ಅದು ಬಹಳ ಆಕರ್ಷಿಸುತ್ತಿದೆ.
ಮಕ್ಕಳಲ್ಲಿ ಸೆಕ್ಸ್ ಬಗೆಗೆ ಆಕರ್ಷಣೆ ಪ್ರೀತಿ ಹಾಗೂ ಸೆಕ್ಸ್ ಗಾಗಿ ಹುಡುಗಿಯರತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ತಮ್ಮ ಆಸೆ ಸುಲಭವಾಗಿ ಈಡೇರದಿದ್ದರೆ. ಅವರು ಅಪಹರಣ, ಅತ್ಯಾಚಾರದಂತಹ ಕುಕೃತ್ಯಗಳಲ್ಲಿ ತೊಡಗುತ್ತಾರೆ. ಸಿಕ್ಕಿಬೀಳುವ ಭಯದಿಂದ ಒಮ್ಮೊಮ್ಮೆ ಹುಡುಗಿಯರನ್ನು ಸಾಯಿಸಿಯೂಬಿಡುತ್ತಾರೆ.
ಗಾಬರಿಗೊಳಿಸುವ ಘಟನೆಗಳು
ಇಲ್ಲಿ ಎರಡು ಘಟನೆಗಳ ಉಲ್ಲೇಖ ಸೂಕ್ತ ಎನಿಸುತ್ತದೆ. ದೆಹಲಿಯ 4 ಹದಿವಯಸ್ಸಿನ ಹುಡುಗರು ಹಾಗೂ ಒಬ್ಬ ವಯಸ್ಕ ವ್ಯಕ್ತಿ ಹುಟ್ಟುಹಬ್ಬದ ಆಚರಣೆಗೆಂದು ಪಕ್ಕದ ಮನೆಯ 23 ವರ್ಷದ ಯುವತಿಯನ್ನು ಆಮಂತ್ರಿಸುತ್ತಾರೆ. ರಾತ್ರಿ ಆ ಯುವತಿಯನ್ನು ಬಂಧಿಯಾಗಿಸಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಅದರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗ ಮಾತ್ರ ಅವಳಿಗೆ ಪರಿಚಿತನಾಗಿದ್ದ. ಅವನೇ ಹೋಗಿ ಅವಳನ್ನು ಕರೆದಿದ್ದ. ಅವರೆಲ್ಲ ಸೇರಿ ಸಂಚು ಮಾಡಿ ಈ ಘಟನೆ ನಡೆಯಲು ಕಾರಣರಾಗಿದ್ದರು.
ಎರಡನೇ ಘಟನೆ ಗಾಂಧಿನಗರ ಗುಜರಾತ್‌ನದ್ದು. 17 ವರ್ಷದ ಹುಡುಗ ತನ್ನ ಮಾವನ ಜೊತೆ ಸೇರಿ ಶಾಲಾ ಮಕ್ಕಳನ್ನು ಕರೆತಂದುಬಿಡುವ ಕೆಲಸ ಮಾಡುತ್ತಿದ್ದ. ಅದರಲ್ಲಿ ಒಬ್ಬಳು ಮೂರೂವರೆ ವರ್ಷದ ಪುಟ್ಟ ಹುಡುಗಿ ಕೂಡ ಇದ್ದಳು. ಆ ಹುಡುಗಿಯನ್ನು ಅವನು ಅಪಹರಣ ಮಾಡಿದ್ದ. 15 ದಿನಗಳ ಬಳಿಕ ಆ ಹುಡುಗಿಯನ್ನು ರಕ್ಷಿಸಿ, ಬಂಧಿಯಾಗಿಟ್ಟ ಆರೋಪಿಯನ್ನು ಜೈಲಿಗೆ ತಳ್ಳಲಾಯಿತು.
ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯನ್ನು ಅಪಹರಣ ಮಾಡುವ ಅವನ ಉದ್ದೇಶವಾದರೂ ಏನು?
ಅವನ ಬಗ್ಗೆ ಮಾಹಿತಿ ಕ್ರೋಢೀಕರಿಸಿದಾಗ ಬಡ ಕುಟುಂಬದ ಆ ಹುಡುಗ ಶಾಲೆಯಲ್ಲಿ ಫೇಲ್ ಆಗಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ. ಅವನಿಂದ ಬೇಸತ್ತು ಹೋದ ತಂದೆ ಅವನನ್ನು ಅವನ ಮಾಮನ ಹತ್ತಿರ ಬಿಟ್ಟುಹೋದರು. ಈ ರೀತಿಯಿಂದಾದರೂ ತನ್ನ ದುರ್ಗುಣ ಬಿಡುತ್ತಾನೆಂದು ಅವರು ಭಾವಿಸಿದ್ದರು. ಅವನ ವೈಯಕ್ತಿಕ ಹಿನ್ನೆಲೆ ಅವನ ಮನಸ್ಥಿತಿ ಬಗ್ಗೆ ಅರಿಯಲು ಅವನ ಗೆಳೆಯರನ್ನು ಮಾತನಾಡಿಸಲಾಯಿತು. ಆಗ ಹೊರಬಂದ ಅಂಶಗಳಿವು :
ಅವನಿಗೆ ಯಾರೂ ಗರ್ಲ್ ಫ್ರೆಂಡ್‌ಗಳಿರಲಿಲ್ಲ.
ಅವನು ಯಾವಾಗಲೂ ಆ ಬಾಲಕಿಯ ಬಗೆಗೇ ಮಾತಾಡುತ್ತಿದ್ದ.
ಎಷ್ಟೋ ಸಲ ಅವನು ಹುಡುಗಿಯ ತಾಯಿಯ ಸೌಂದರ್ಯದ ಬಗೆಗೂ ಮಾತಾಡಿದ್ದ.
ಯಾರಾದರೂ ಹುಡುಗಿಯನ್ನು ಅಪಹರಿಸುವ ಬಗ್ಗೆ ಅವನು ಯಾವಾಗಲೂ ಮಾತನಾಡುತ್ತಿದ್ದ.
ವ್ಯಾನ್‌ನಲ್ಲಿ ಹೋಗುವ ಇಬ್ಬರೂ ಮೂವರು ದೊಡ್ಡ ಹುಡುಗಿಯರ ಜೊತೆ ಮಾತುಕತೆ ನಡೆಸಲಾಯಿತು. ಅವನು ಚಿಕ್ಕ ಹುಡುಗಿಯೊಬ್ಬಳನ್ನು ಯಾವಾಗಲೂ ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುತ್ತಿದ್ದ. ಅವಳ ಕೆನ್ನೆ ಸವರುತ್ತಿದ್ದ. ಒಮ್ಮೊಮ್ಮೆ ಅವಳಿಗೆ ಚುಂಬಿಸುತ್ತಿದ್ದ. ಬಸ್ ನಿಲ್ಲಿಸುತ್ತಿದ್ದ ಸ್ಥಳದಲ್ಲಿ ಹುಡುಗಿಯ ತಾಯಿ ಬರದೇ ಇದ್ದಾಗ ಅವನೇ ಮನೆ ಬಾಗಿಲಿನ ತನಕ ಹೋಗಿ ಅವಳನ್ನು ಬಿಟ್ಟುಬರುತ್ತಿದ್ದ. ಹುಡುಗಿ ದೊಡ್ಡವಳಾದ ಬಳಿಕ ತನ್ನ ತಾಯಿಯ ಹಾಗೆಯೇ ಸುಂದರಳಾಗಿ ಕಾಣುತ್ತಾಳೆ. ಅವಳನ್ನೇ ಮದುವೆಯಾಗುವುದಾಗಿ ಅವನು ಭಾವಿಸಿದ್ದ.
ಆರೋಪಿ ಸ್ವತಃ ಒಪ್ಪಿಕೊಂಡ ಪ್ರಕಾರ, ಅವನು ಆ ಹುಡುಗಿಯ ತಾಯಿಯ ಮೇಲೆ ಮೋಹಿತನಾಗಿದ್ದ. ಆದರೆ ಅವಳು ತನಗೆ ಸಿಗಲಾರಳು ಎಂದು ಗೊತ್ತಾದಾಗ ಆ ಚಿಕ್ಕ ಹುಡುಗಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಯೋಜಿಸಿದ್ದ.
ಕೆಲವು ಬಾಲಾಪರಾಧಿಗಳು ಅಪರಾಧ ಮಾಡಲು ನಿಖರವಾದ ಕಾರಣವೇ ಇರಬೇಕೆಂದೇನಿಲ್ಲ. ಯಾವುದೇ ಕೆಲಸ ಮಾಡಲು ಇಷ್ಟವಿರದಿದ್ದರೆ, ಯಾರದ್ದಾದರೂ ಮಾತು ಸರಿ ಎನಿಸದಿದ್ದರೆ, ಅವರು ಇಂತಹ ಕೃತ್ಯಕ್ಕೆ ಇಳಿಯುತ್ತಾರೆ.
ಹರಿಯಾಣಾದ ಗುರುಗ್ರಾಮದಲ್ಲಿ ಇಂತಹದೊಂದು ಘಟನೆ ನಡೆಯಿತು. ಅಲ್ಲಿನ ಖಾಸಗಿ ಶಾಲೆಯೊಂದರ ಟಾಯ್ಲೆಟ್‌ನಲ್ಲಿ ಒಬ್ಬ ಹುಡುಗ 7 ವರ್ಷದ ಪುಟ್ಟ ಬಾಲಕನನ್ನು ಹತ್ಯೈಗೈದ. ಇದರ ಹಿಂದಿನ ಕಾರಣ ಇಷ್ಟೇ, ಕೊಲೆಗೈದ ಬಾಲಕನಿಗೆ ಅವನ ತಾಯಿ ಓದಲು ಒತ್ತಡ ಹೇರುತ್ತಿದ್ದಳು. ಅವನಿಗೆ ಓದಲು ಇಷ್ಟವಿರಲಿಲ್ಲ. ಹೀಗಾಗಿ ತಾಯಿಯ ಗದರಿಕೆ ಹೊಡೆತ ತಿನ್ನಬೇಕಿತ್ತು. ಆ ಪರೀಕ್ಷೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂಬುದು ಅವನ ಹಠವಾಗಿತ್ತು. ಹೀಗಾಗಿ ಅವನು ಟಾಯ್ಲೆಟ್‌ನಲ್ಲಿ ಏಕಾಂಗಿಯಾಗಿ ಸಿಕ್ಕ ಪುಟ್ಟ ಮಗುವನ್ನು ಸಾಯಿಸಿದ್ದ.
ಕೊಲೆಗೈದ ಬಾಲಕನ ಮನಸ್ಥಿತಿಯನ್ನು ನಾವು ಅರಿಯಬೇಕು. ಅವನು ಶ್ರೀಮಂತ ಕುಟುಂಬದವ. ಅವನಿಗೆ ಸಕಲ ಸೌಲಭ್ಯಗಳು ಇದ್ದವು. ಆದರೆ ಪರೀಕ್ಷೆಯ ಭಯ ಅವನನ್ನು ಕಾಡುತ್ತಿತ್ತು. ಅಮ್ಮ ದಿನ ಪೀಡಿಸುವುದು ಅವನಿಗೆ ಹಿಂಸೆ ಎನಿಸುತ್ತಿತ್ತು. ಅದರ ಸೇಡನ್ನು ಅವನು ಈ ರೀತಿ ತೀರಿಸಿಕೊಂಡಿದ್ದು ಮಾತ್ರ ಆಶ್ಚರ್ಯ ಎನಿಸುತ್ತದೆ.
ಹೀಗೆ ತಡೆಯಿರಿ ಬಾಲಾಪರಾಧ
ಯಾವುದೇ ಒಂದು ಅಪರಾಧವನ್ನು ಸಮಾಜ ತಡೆಯಲು ಸಾಧ್ಯವಿಲ್ಲ. ಹಾಗೆಯೇ ಕಾನೂನಿನಿಂದ ಅದಕ್ಕೆ ಕಡಿವಾಣ ಹಾಕಲೂ ಸಾಧ್ಯವಿಲ್ಲ. ಪ್ರತಿಯೊಂದು ಅಪರಾಧದ ಹಿಂದೆ ಅಪರಾಧಿಯ ಮಾನಸಿಕತೆ, ಆತನ ಸ್ವಭಾವಗತ ವರ್ತನೆ ಮತ್ತು ಸನ್ನಿವೇಶದಂತಹ ಪರಿಸ್ಥಿತಿಗಳ ಕಾರಣದಿಂದಲೂ ಅಪರಾಧ ಜನ್ಮ ತಳೆಯಬಹುದು. ಇಂತಹ ಅಪರಾಧಗಳಿಗೆ ಅಪರಾಧಿ ಯಾವುದೇ ಯೋಜನೆ ರೂಪಿಸುವುದಿಲ್ಲ, ಯೋಚನೆ ಮಾಡುವುದಿಲ್ಲ. ಇದು ಒಂದು ರೀತಿಯ ಆವೇಶ, ಅವಿವೇಕತನದಿಂದ ಮಾಡಿದ ಕೃತ್ಯವಾಗಿರುತ್ತದೆ.
ಪ್ರತಿಯೊಂದು ಬಿರುಗಾಳಿಗೂ ಮುಂಚೆ ಒಂದು ರೀತಿ ಅವಿಶ್ವಸನೀಯ ಶಾಂತಿ ಇರುವಂತೆ, ಪ್ರತಿಯೊಂದು ಅಪರಾಧದ ಹಿಂದೆ ಒಂದು ಆಕ್ರಂದನ ಇರುತ್ತದೆ. ಅದನ್ನು ಕೇಳಿಸಿಕೊಂಡು ಅಥವಾ ಗುರುತಿಸಿಯೂ ಸುಮ್ಮನಾಗಿ ಬಿಡುತ್ತೇವೆ. ನಿಮ್ಮ ಮಗನಿಗೆ ಸೌಲಭ್ಯ ಕೊಡಿ. ಜೊತೆಗೆ ಅವನನ್ನು ಎಚ್ಚರಿಸಿ.
ನೀವು ಎಂತಹ ಸೌಲಭ್ಯಗಳನ್ನು ಕೊಡಲೇ ಬಾರದು ಎಂದರೆ, ಅದರಿಂದ ಅದು ಗೊತ್ತಿದ್ದೊ, ಗೊತ್ತಿಲ್ಲದೆಯೊ ಅಪರಾಧ ಲೋಕಕ್ಕೆ ಕಾಲಿಡುವಂತಾಗಬಾರದು.
ಕೆಲವು ಪೋಷಕರು ಅತಿ ಶ್ರೀಮಂತರಾಗಿರುತ್ತಾರೆ. ಅವರ ಮನೆಯಲ್ಲಿ ಬೇಕಾದಷ್ಟು ದುಬಾರಿ ಗಾಡಿಗಳಿರುತ್ತವೆ. ಚಿಕ್ಕ ಮಕ್ಕಳಿಗೆ ಅದರ ಬೀಗದ ಕೈ ಕೊಟ್ಟು ಓಡಿಸಲು ಹೇಳಿಬಿಡುತ್ತಾರೆ. ಅವರು ಏನಾದರೂ ಅಪಘಾತ ಮಾಡಿಬಿಟ್ಟರೆ ಅಪ್ರಾಪ್ತ ವಯಸ್ಸಿನವರ ಜೊತೆ ಅದರ ಪೋಷಕರನ್ನೂ ಹೊಣೆಗಾರರನ್ನಾಗಿಸಬೇಕು, ಅವರನ್ನು ಶಿಕ್ಷಿಸಬೇಕು.
ಒಂದು ಸಂಗತಿ ನೆನಪಿರಲಿ, ಪೋಷಕರ ಅಷ್ಟಿಷ್ಟು ಎಚ್ಚರಿಕೆ, ಮಗುವನ್ನು ಅಪರಾಧ ಲೋಕಕ್ಕೆ ಕಾಲಿಡುವುದನ್ನು ತಡೆಯಬಹುದಾಗಿದೆ.
– ರಾಗಿಣಿ ರಾವ್