ಮಗುವೊಂದು ಬೆಳೆಯಬೇಕೆಂದರೆ ಅದರೊಟ್ಟಿಗೆ ಸಂಸ್ಕಾರ, ವಾತಾವರಣ, ಪರಿಸರ ಬಹಳ ಮುಖ್ಯವಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ಮನೆಯಲ್ಲಿನ ಹಿರಿಯರ ಪಾತ್ರ ಬಹಳವೇ ಪ್ರಾಮುಖ್ಯತೆ ವಹಿಸುತ್ತದೆ. ಅಂತಹ ಒಂದು ಸ್ಛೂರ್ತಿದಾಯಕ ಪರಿಸರದಲ್ಲಿ ಬಾಲ್ಯ ಜೀವನವನ್ನು ಅನುಭವಿಸಿ ಇಂದು ದೇಶಾದ್ಯಂತ ಹೆಸರು ಮಾಡಿರುವ ಬಹುಮುಖ ಪ್ರತಿಭೆಯೇ ಈ ಡಾ. ಕೆ.ಎಸ್. ಚೈತ್ರಾ! ಸಮಾಜದಲ್ಲಿ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಖ್ಯಾತಿ ಪಡೆದಿರುವ ಈ ಹೆಣ್ಣುಮಗಳು ಹುಟ್ಟಿದ ಮನೆಯಲ್ಲೂ ಮೆಟ್ಟಿದ ಮನೆಯಲ್ಲೂ ಒಳ್ಳೆಯ ಹೆಸರನ್ನು ಪಡೆದು, ಎಷ್ಟೆಲ್ಲ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಸಹ ಅತ್ತೆಮಾವಂದಿರ ಜೊತೆ ಸಂಸಾರವನ್ನು ಅಚ್ಚುಕಟ್ಟಾಗಿ ನೋಡಿ ಕೊಂಡು ಹೋಗುತ್ತಿರುವ ಗೃಹಿಣಿಯೂ ಹೌದು! ಇಂತಹ ಹೆಣ್ಣುಮಕ್ಕಳು ಬಹಳ ವಿರಳ ಅಲ್ಲವೇ?
ತಂದೆ-ತಾಯಿಯರ ಪ್ರೀತಿಯ ಮಡಿಲಲ್ಲಿ ಬೆಳೆದ ಇವರು ತನ್ನನ್ನು ತಾನು ಹತ್ತು ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲದರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿರುವುದು ವಿಶೇಷದ ಸಂಗತಿ. ತಂದೆ ಶಿವಮೊಗ್ಗೆಯ ಖ್ಯಾತ ಮನೋವೈದ್ಯರಾದ ಡಾ. ಕೆ.ಆರ್. ಶ್ರೀಧರ್. ಎರಡು ಪದವಿಗಳನ್ನು ಗಳಿಸಿ, ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿರುವ ಜೊತೆಗೆ ಸಾಹಿತಿಯೂ ಆಗಿರುವ ತಾಯಿ ವಿಜಯಾ ಶ್ರೀಧರ್. ಮಕ್ಕಳ ಲಾಲನೆ ಪಾಲನೆಗಳ ವಿಷಯದಲ್ಲಿ ಇವರ ರೀತಿ ಕೊಂಚ ಭಿನ್ನವಾಗಿತ್ತು. ಶ್ರೀಧರ್ ದಂಪತಿಗಳಿಬ್ಬರೂ ಆಗಾಗ ಆಕಾಶವಾಣಿಗೆ ಹೋಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆಗೆಲ್ಲ ಅವರು ತಮ್ಮ ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.
ಬಹುಶಃ, ಇಂತಹ ಬೆಳವಣಿಗೆಗಳೇ ನಿರೂಪಣೆಯ ಕ್ಷೇತ್ರದಲ್ಲಿ ಚೈತ್ರಾ ಅವರಲ್ಲಿ ಆಸಕ್ತಿ ಮೂಡಲು ಕಾರಣವಾಗಿರಬೇಕು. ಮನೆಯಲ್ಲಿಯೂ ಸಹ ಆರೋಗ್ಯಕರ ಚರ್ಚೆಗಳು, ವಿಷಯ ವಿನಿಮಯಗಳು ಸದಾ ನಡೆಯುತ್ತಿದ್ದವು. ಇದೆಲ್ಲದರ ಪರಿಣಾಮವೇ ಇವರು ಇಂದು ಒಬ್ಬ ನೃತ್ಯಗಾರ್ತಿ, ನಿರೂಪಕಿ, ಸಾಹಿತಿ, ದಂತವೈದ್ಯೆ, ಉತ್ತಮ ವಾಗ್ಮಿಯಾಗಿ ಅಪರೂಪದ ವ್ಯಕ್ತಿಯಾಗಲು ಕಾರಣ. ಶ್ರೀಧರ್ ವಿಜಯಾರವರ ಮೂವರು ಪುತ್ರಿಯರ ಪೈಕಿ ಇವರು ಮೊದಲನೆಯವರು. ತಂಗಿಯರಾದ ಡಾ. ಕೆ.ಎಸ್. ಪವಿತ್ರಾ ಹಾಗೂ ಡಾ. ಕೆ.ಎಸ್. ಶುಭ್ರತಾ ಸಹ ವೈದ್ಯ ವೃತ್ತಿಯನ್ನು ಮಾಡುತ್ತಾ ಸಾಹಿತ್ಯದಲ್ಲೂ ನಿರತರಾಗಿರುವರು. ಒಟ್ಟಿನಲ್ಲಿ ಇದೊಂದು ಹಲವಾರು ಶ್ರೀಮಂತ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುವ ವಿದ್ಯಾವಂತ ಕುಟುಂಬ!
ಕಥೆ, ಮಕ್ಕಳ ಕಥೆ, ಕವನ, ವೈದ್ಯಕೀಯ, ಪ್ರವಾಸ ಕಥನ, ಲಲಿತ ಪ್ರಬಂಧ ಮುಂತಾದ ಅನೇಕ ಪ್ರಕಾರಗಳಲ್ಲಿ ಕಳೆದ 25 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಸುಪ್ರಸಿದ್ಧ ಅಂಕಣಗಾರ್ತಿಯೂ ಹೌದು. ಇದುವರೆವಿಗೂ ಇವರ 13 ಕೃತಿಗಳು ಪ್ರಕಟವಾಗಿವೆ. `ಹಲ್ಲುಗಳ ರಕ್ಷಣೆ ಹೇಗೆ? ಆಸೆ ಅಗತ್ಯಗಳು, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ, ಕುಶಲವೇ ಕ್ಷೇಮವೇ? ಆರೋಗ್ಯದ ನಗುವಿಗಾಗಿ' ಮುಂತಾದ ವೈದ್ಯಕೀಯ ಲೇಖನಗಳಲ್ಲಿ ದಂತದ ಸ್ವಾಸ್ಥ್ಯ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಥಾಸಂಕಲನಗಳಾದ `ಕೋತಪ್ಪನಾಯಕನ ಯಜಮಾನಿಕೆ, ಗರಾಜ್ ಸೇಲ್,' ಅಂಕಣ ಬರಹಗಳಾದ `ಹೊಳೆ ಬಳೆಗಳ ಹಿಂದೆ, ಬಳೆಗಳ ಭಾರ ಹೊತ್ತು, ಮನದೊಳಗಿನ ಮಾತುಮಥನ'ಗಳ ಜೊತೆಗೆ ಒಂದು ವೈಜ್ಞಾನಿಕ ಕೃತಿಯೂ ಪ್ರಕಟವಾಗಿದೆ. ದಾವಣಗೆರೆ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಿಗೆ ಇವರ `ಗರಾಜ್ ಸೇಲ್' ಕಥೆ ಪಠ್ಯವಾಗಿ ಆಯ್ಕೆಯಾಗಿರುವುದು ಇವರ ಪ್ರಬುದ್ಧ ಬರವಣಿಗೆಗೆ ಸಾಕ್ಷಿಯಾಗಿದೆ.