ದೀಪಾವಳಿಯ ಹಬ್ಬದ ರಾತ್ರಿ ನಾವೆಲ್ಲ ಹೊರಗಡೆ ಕುಳಿತು ಅಕ್ಕಪಕ್ಕದವರು ಹೊಡೆಯುವ ಪಟಾಕಿಯ ವೈಭವ ಕಣ್ತುಂಬಿಸಿಕೊಳ್ಳಲು ಕಾತುರದಿಂದಿದ್ದೆವು. ಅಷ್ಟರಲ್ಲಿಯೇ ನಮಗೆ, “ಅಮ್ಮ,….. ಅಮ್ಮ…..” ಎಂಬ ಶಬ್ದ ಕೇಳಿಬಂತು. ನಾನು ಸುತ್ತಲೂ ಗಮನಹರಿಸಿದೆ. ನನ್ನ ಪುಟ್ಟ ತಮ್ಮ ಕಾಣಿಸಲಿಲ್ಲ. ಅವನು ಯಾವಾಗ ಪಟಾಕಿ ಹಚ್ಚುವವರ ಮಧ್ಯೆ ಸೇರಿಕೊಂಡಿದ್ದನೊ ಗೊತ್ತೇ ಆಗಲಿಲ್ಲ. ಅವನು ಸ್ವತಃ ಪಟಾಕಿ ಸಿಡಿಸುತ್ತಿರಲಿಲ್ಲ. “ಆದರೆ ಉರಿಯುತ್ತಿದ್ದ ಪಟಾಕಿಯ ಒಂದು ಕಿಡಿ ಅವನ ಜೇಬಿನಲ್ಲಿದ್ದ ಲಕ್ಷ್ಮಿ ಪಟಾಕಿಗೆ ತಗುಲಿತೊ ಏನೋ, ಭಾರಿ ಸದ್ದಿನ ಜೊತೆಗೆ ಬೆಂಕಿಯ ಜ್ವಾಲೆ ಕಾಣಿಸಿತ್ತು ಆ ಪುಟ್ಟ ಹುಡುಗ ಒಂದು ಕಾಲನ್ನು ಈ ಕಡೆ ಎತ್ತುತ್ತಾನೆ, ಇನ್ನೊಂದು ಕಾಲನ್ನು ಆ ಕಡೆ ಎತ್ತುತ್ತಾನೆ. ನೋವಿನಿಂದ ಜೋರಾಗಿ ಚೀರುತ್ತಾನೆ.

“ತಕ್ಷಣವೇ ಅವನ ಮೇಲೆ ನೀರು ಎರಚೋಣ ಅಂದರೆ ಅಲ್ಲಿ ನೀರಿನ ಬಕೆಟ್‌ ಸಹ ಇರಲಿಲ್ಲ. ಹೊದಿಸೋಣ ಅಂದರೆ ಕಂಬಳಿಯೂ ಇರಲಿಲ್ಲ. ಅವನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದೆವಾದರೂ ಅಲ್ಲಿಯವರೆಗೆ ಅವನ ದೇಹ ಶೇ.10ರಷ್ಟು  ಬೆಂದು ಹೋಗಿತ್ತು.”

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಜೀವನದಲ್ಲೂ ಸುಖಸಮೃದ್ಧಿ ತರುವ ಹಬ್ಬವಾಗಿದೆ. ಪಟಾಕಿಯಿಂದಾಗಿ ಮಾಲಿನ್ಯವಾಗುತ್ತದೆ. ಪ್ರಾಣಿಪಕ್ಷಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಪಟಾಕಿ ಹೊಡೆಯಬೇಡಿ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ. ಆದರೆ ಪಟಾಕಿ ಹೊಡೆಯದೆ ದೀಪಾವಳಿ ಹಬ್ಬ ಸಪ್ಪೆಯಾಗುತ್ತದೆ ಎಂದು ವಾದಿಸುವವರ ಸಂಖ್ಯೆ ಕಡಿಮೆಯೇನಿಲ್ಲ.

ಎಚ್ಚರದಿಂದಿರಿ

ನೀವು ಹೀಗೆಯೇ ಯೋಚಿಸುವವರಾಗಿದ್ದರೆ, ಈ ಎಚ್ಚರಿಕೆಗಳನ್ನು ಗಮನಿಸಿ. ಏಕೆಂದರೆ ಒಂದು ಸಣ್ಣ ತಪ್ಪು ನಿಮ್ಮ ಹಾಗೂ ನಿಮ್ಮ ಕುಟುಂಬದವರು ಮತ್ತು ಅಕ್ಕಪಕ್ಕದವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಪಟಾಕಿಗಳನ್ನು ಅಧಿಕೃತ ಪರವಾನಗಿ ಪಡೆದ ಅಂಗಡಿಯಿಂದಲೇ ಖರೀದಿಸಿ, ಮಕ್ಕಳನ್ನಷ್ಟೇ ಪಟಾಕಿ ತರಲು ಕಳಿಸಬೇಡಿ.

ಮಕ್ಕಳು ತುಂಟಾಟಕ್ಕೆಂದು ಪಟಾಕಿಯನ್ನು ಬಾಟಲಿಯಲ್ಲಿ, ಪ್ಲಾಸ್ಟಿಕ್‌ ಡಬ್ಬದಲ್ಲಿ ಇಟ್ಟು ಸುಡುತ್ತಾರೆ. ಇದರಿಂದ ಎಷ್ಟೋ ಸಲ ಬಾಟಲ್ ಅಥವಾ ಮಣ್ಣಿನ ಪಾತ್ರೆ ಒಡೆದು ಮಕ್ಕಳು ಗಾಯಗೊಳ್ಳುವ ಸಾಧ್ಯತೆ ಇರುತ್ತದೆ.

ಉಣ್ಣೆ, ರೇಷ್ಮೆ ಹಾಗೂ ಪಾಲಿಯೆಸ್ಟರ್‌ ಬಟ್ಟೆಗಳಿಗೆ ಕಿಡಿ ತಗುಲಿದರೆ ಬಹುಬೇಗನೇ ದಹಿಸುತ್ತದೆ. ಹೀಗಾಗಿ ಪಟಾಕಿ ಹಚ್ಚುವ ಸಂದರ್ಭದಲ್ಲಿ ಹತ್ತಿಯ ಫುಲ್ ತೋಳಿನ ಬಟ್ಟೆ ಧರಿಸಲು ಸೂಚಿಸಿ.

ಪಟಾಕಿಗಳು ಸಾಮಾನ್ಯವಾಗಿ 140 ಡೆಸಿಬಲ್‌ನಷ್ಟು ಧ್ವನಿ ಹೊರಹೊಮ್ಮಿಸುತ್ತವೆ. 85 ಡೆಸಿಬಲ್ ತನಕದ ಧ್ವನಿ ಕೇಳಿಸಿಕೊಂಡರೇನೇ ನಮ್ಮ ಆಲಿಸುವ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಪಟಾಕಿ ಹೊಡೆಯುವಾಗ ಕಿವಿಯಲ್ಲಿ ಹತ್ತಿ ತುಂಡು ಇರಿಸಿಕೊಳ್ಳಿ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಿದ್ಧವಾಗಿಟ್ಟುಕೊಳ್ಳಿ. ಜೊತೆಗೆ ಮಂಜುಗಡ್ಡೆ ಕೂಡ ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳಿ.

ಸುಟ್ಟ ಗಾಯಕ್ಕೆ ಚಿಕಿತ್ಸೆ

ಡಾ. ಸುನಿಲ್‌ ಕುಮಾರ್‌ರವರ ಪ್ರಕಾರ ಸುಟ್ಟ ಭಾಗವನ್ನು ತಕ್ಷಣವೇ ನೀರಿನಿಂದ ಸ್ವಚ್ಛಗೊಳಿಸಿ ಹಾಗೂ ಅದರ ಮೇಲೆ ಮಂಜುಗಡ್ಡೆ ಇಟ್ಟುಕೊಳ್ಳಿ. ಒಂದು ವೇಳೆ ಸುಟ್ಟಗಾಯ ಸಾಧಾರಣವಾಗಿದ್ದರೆ, ಅದರ ಮೇಲೆ ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ ಅಥವಾ ಬೇವಿನೆಣ್ಣೆಯನ್ನು ಲೇಪಿಸಿ. ಸುಟ್ಟಗಾಯದ ಮೇಲೆ ಜೇನುತುಪ್ಪ ಕೂಡ ಸವರಬಹುದು.

ಗಾಯ ಗಂಭೀರವಾಗಿದ್ದಲ್ಲಿ ಆ ವ್ಯಕ್ತಿಯನ್ನು ಕಂಬಳಿ ಹೊದೆಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಸುಟ್ಟು ಗಾಯಗೊಂಡ ವ್ಯಕ್ತಿಯ ಬಟ್ಟೆಯನ್ನು ತೆಗೆಯಲು ಪ್ರಯತ್ನಿಸಬೇಡಿ. ಏಕೆಂದರೆ ಇದರಿಂದ  ಬೆಂದು ಹೋದ ತ್ವಚೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಸುಟ್ಟ ಭಾಗದಲ್ಲಿ ಬಾಳೆ ಎಲೆಯನ್ನು ಕಟ್ಟುವುದು ಕೂಡ ಉಪಯುಕ್ತ. ಇದರಿಂದ ತಂಪಿನ ಅನುಭವ ಹಾಗೂ ನಿರಾಳತೆ ಅನಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಹಿರಿಯ ನೇತ್ರತಜ್ಞ ಡಾ. ಚಂದ್ರಶೇಖರ್‌ ಹೀಗೆ ಹೇಳುತ್ತಾರೆ, “ಪಟಾಕಿಗಳಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಕಾರಣದಿಂದ ಅದರ ಹೊಗೆ ತ್ವಚೆಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಅದರಿಂದ ಪಾರಾಗಲು ದಿನಕ್ಕೆ 8-10 ಲೋಟ ನೀರನ್ನು ಅವಶ್ಯ ಕುಡಿಯಿರಿ. ಅದರ ಹೊರತಾಗಿ ಯಾವುದಾದರೂ ಒಳ್ಳೆಯ ಮಾಯಿಶ್ಚರೈಸರ್‌ನ್ನು ಬಳಸಿ. ದೇಹದ ಯಾವ ಭಾಗಗಳು ಮುಕ್ತವಾಗಿರುತ್ತವೆ ಅವನ್ನು ಒಳ್ಳೆಯ ರಾಸಾಯನಿಕಯುಕ್ತ ಕ್ಲೆನ್ಸರ್‌ನಿಂದ ಸ್ವಚ್ಛಗೊಳಿಸಿ.”

ಕಣ್ಣುಗಳ ಬಗ್ಗೆ ಇರಲಿ ಗಮನ

ನೇತ್ರತಜ್ಞೆ ಡಾ. ಸಂಧ್ಯಾ ಕಣ್ಣಿನ ಸುರಕ್ಷತೆಯ ಬಗ್ಗೆ ಹೀಗೆ ಹೇಳುತ್ತಾರೆ, ಪಟಾಕಿಯ ಕಿಡಿ ಕಣ್ಣಿಗೆ ಸಿಡಿದಿದ್ದರೆ ತಕ್ಷಣವೇ ಸ್ವಚ್ಛ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಬಳಿಕ ಆಸ್ಪತ್ರೆಗೆ ಹೋಗಿ. ನೀವು ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವವರಿದ್ದರೆ, ದೀಪಾವಳಿ ದಿನ ಹಾಕಲೇಬೇಡಿ. ಪಟಾಕಿಯ ಬೆಳಕನ್ನು ನೋಡಬೇಡಿ.

– ಕೆ. ರಂಜಿತಾ  

Tags:
COMMENT