ವಕೀಲ ವೆಂಕಯ್ಯನ ಮನೆಗೆ 7-8 ಮಂದಿ ನೆಂಟರು ಬಂದಿಳಿದರು.
ಒಳಗಡೆಯಿಂದ ಬುಲಾವ್ ಬಂತು. “ಸಕ್ಕರೇನೇ ಇಲ್ಲ….. ಏನ್ರಿ ಸುಡುಗಾಡು ಟೀ ಮಾಡಲಿ?”
ವೆಂಕಯ್ಯ ಹೇಳಿದರು, “ನೀನು ಇರುವುದನ್ನೇ ಹಾಕಿ ಟೀ ಮಾಡು. ಸಪ್ಪೆ ಆದರೂ ಸರಿ, ಉಳಿದದ್ದನ್ನು ನಾನು ನೋಡಿಕೊಳ್ತೀನಿ.”
ಅಮ್ಮಾವರೇ ಎಲ್ಲರಿಗೂ ಶುಗರ್‌ಲೆಸ್ ಟೀ ಸರ್ವ್ ಮಾಡಿ ಗಂಡನತ್ತ ಕೆಂಗಣ್ಣು ಬೀರುತ್ತಾ ಹೊರಟರು.
ಅತಿಥಿಗಳು ಇನ್ನೇನು ಟೀ ಕುಡಿಯಬೇಕು, ಆಗ ವೆಂಕಯ್ಯ ಹೇಳಿದರು, “ನೋಡಿ, ಯಾರಿಗೋ ಒಬ್ಬರಿಗೆ ಶುಗರ್‌ಲೆಸ್ ಟೀ ಬಂದುಬಿಟ್ಟಿದೆಯಂತೆ. ಅವರು ಯಾರು ಅಂತ ಹೇಳಿದರೆ, ನಾವು ಉಳಿದವರೆಲ್ಲ ನಾಳೆ ಸಂಜೆ ಅವರ ಮನೆಗೆ ಟೀಗೆ ಹೋಗಬಹುದು.”
ಯಾರಾದರೂ ತುಟಿ ಪಿಟಕ್ ಅಂದಿದ್ದರೆ ಕೇಳಿ! ಕೊಟ್ಟಿದ್ದನ್ನು ತೆಪ್ಪಗೆ ಕುಡಿದು ಎದ್ದರು. ಒಬ್ಬರಂತೂ ಚಪ್ಪಲಿ ಮೆಟ್ಟುವಾಗ, “ನನಗಂತೂ ಜಾಸ್ತಿ ಸಕ್ಕರೆ ಹಾಕಿರುವ ಟೀ ಬಂದಿತ್ತಪ್ಪ…. ಸಧ್ಯ! ಡಯಾಬಿಟೀಸ್ ಬರದಿದ್ರೆ ಸಾಕು,” ಎನ್ನುವುದೇ?
ಪುಟ್ನಂಜಿ ಬಲು ಮಧುರ ಕಂಠದಿಂದ ಬಾತ್‌ರೂಮಿನಿಂದ ಕೂಗಿದಳು, “ಏನ್ರಿ, ಇಲ್ಲಿ ಸ್ವಲ್ಪ ಬರ್ತೀರಾ? ನಾನು ಪೂರ್ತಿ ಸೋಪು ಹಾಕಿದ್ದೇನೆ. ಸ್ವಲ್ಪ ಬ್ರಶ್ ಮಾಡ್ತೀರಾ…..?”
ಕಾಫಿ ಹೀರುತ್ತಾ ಪೇಪರ್ ಓದುತ್ತಿದ್ದ ಗುಂಡ ಒಂದೇ ಓಟಕ್ಕೆ ಒಳಗೋಡಿ ಬಂದ. “ಎಸ್ ಡಾರ್ಲಿಂಗ್…. ವಾಟ್ ಕ್ಯಾನ್ ಐ ಡೂ ಫಾರ್ ಯೂ?”
ಪುಟ್ನಂಜಿ ಒಗೆಯಬೇಕಾದ ಬಟ್ಟೆ ರಾಶಿ ಕಡೆ ಕೈ ತೋರಿಸಿ, “ನಾನು ಇದಕ್ಕೆಲ್ಲ ಸೋಪ್ ಹಚ್ಚಿದ್ದಾಗಿದೆ. ಸ್ವಲ್ಪ ಬ್ರಶ್ ಮಾಡಿ ಒಗೆದುಬಿಡಿ ಅಂದೆ…. ಕರೆಂಟ್ ಹೋಗಿದೆ, ಒರಳಲ್ಲಿ ರುಬ್ಬಿ ಅಡುಗೆ ಮಾಡಬೇಕು. ನೀರು ಬೇಕಾದ್ರೆ ಸಂಪ್‌ಗೆ ಹಗ್ಗದಿಂದ ಬಿಂದಿಗೆ ಹಾಕಿ ಎಳಕೊಳ್ಳಿ!” ಎಂದಾಗ ಗುಂಡನ ಮುಖ ನೋಡಬೇಕಿತ್ತು……
ಗುಂಡ ಒಮ್ಮೆ ನಡು ಮಧ್ಯಾಹ್ನ ಗೆಳೆಯನ ಮನೆ ಹುಡುಕಿಕೊಂಡು ಹೋಗಿ ಬಾಗಿಲು ಬಡಿದ. ಆಗ ಅವನ ಗೆಳೆಯ ಮನೆಯಲ್ಲಿ ಇರಲಿಲ್ಲ. 5 ವರ್ಷದ ಗೆಳೆಯನ ಮಗಳು ಬಂದು ಬಾಗಿಲು ತೆರೆದಳು. ಅಷ್ಟರಲ್ಲಿ ಮಗುವಿನ ತಾಯಿ ಅಡುಗೆಮನೆಯಿಂದ ಗುಟುರು ಹಾಕಿದಳು, “ಯಾರಮ್ಮ ಅದು ಬಂದಿರೋದು?”
ಮಗು : ಅದೇ ಅಂಕಲ್ ಕಣಮ್ಮ.
ತಾಯಿ : ಅದ್ಯಾವ ಅಂಕಲ್?
ಗುಂಡ ಈ ಮಗು ತನ್ನನ್ನು ಹೇಗೆ ಪರಿಚಯಿಸುತ್ತದೋ ನೋಡೋಣ ಎಂದು ಕುತೂಹಲದಿಂದ ಕೇಳಿಸಿಕೊಳ್ಳತೊಡಗಿದ.
ಮಗು : ಅದೇ ಅಂಕಲ್ ಕಣಮ್ಮ, ನೀನು ಅಪ್ಪಂಗೆ ಹೇಳ್ತಾ ಇರ್ತೀಯಲ್ಲ, ನಮ್ಮ ಮನೇಲಿ ತಿಂಡಿ ಊಟಕ್ಕೆ ತಟ್ಟೆ ಹಾಕೋದಿಕ್ಕಿಲ್ಲ, ನಿಮ್ಮ ಫ್ರೆಂಡ್ ಬಂದು ಕುಕ್ಕರ್ ಬಡಿಯುತ್ತೆ ಅಂತ… ಹೋಗ್ಲಿ ಅಂದ್ರೆ ಮಗು ಕೈಗೆ ಒಂದು ದಿನಾನೂ ಚಾಕಲೇಟ್ ಕೂಡ ಕೊಡಲ್ಲ, ಅಂತಿದ್ಯಲ್ಲ…. ಅದೇ ಅಂಕಲ್!
ತರಕಾರಿ ಸಿದ್ದಪ್ಪ ಪಾಪದ ಸೀದಾಸಾದಾ ಮನುಷ್ಯ. ಎಂದಿನಂತೆ ಗಾಡಿ ತಳ್ಳಿಕೊಂಡು ಬಂದು ವಠಾರದವರಿಗೆಲ್ಲ ತರಕಾರಿ ಮಾರುತ್ತಿದ್ದ. ಅದರಲ್ಲಿ ಎಷ್ಟೋ ಹೆಂಗಸರು ನಗದು ಕೊಡುತ್ತಿರಲಿಲ್ಲ. ಎಲ್ಲರೂ `ಲೆಕ್ಕ ಬರ್ಕೋ, 1ನೇ ತಾರೀಕು ಕೊಡ್ತೀನಿ,’ ಎನ್ನುವ ಗಿರಾಕಿಗಳೇ.
ಪಾಪ ಸಿದ್ದಪ್ಪ, ಒಂದು ಸಣ್ಣ ಪುಸ್ತಕ ಯಾರದು ಎಷ್ಟು ಹಣ ಎಂದು ಬರೆದುಕೊಂಡು, ತಿಂಗಳು ಕಳೆದ ನಂತರ ಸರಿಯಾಗಿ ವಸೂಲಿ ಮಾಡಿಕೊಳ್ಳುತ್ತಿದ್ದ. ಇದರಲ್ಲಿ ವಿಡಂಬನೆ ಎಂದರೆ ಅವನಿಗೆ ಆ ವಠಾರದ ಯಾವ ಹೆಂಗಸಿನ ಹೆಸರೂ ಗೊತ್ತಿರಲಿಲ್ಲ. ಆದರೂ ಲೇವಾದೇವಿ ಸರಿಯಾಗಿ ನಡೆಯುತ್ತಿತ್ತು.
ಕಿಲಾಡಿ ಕಮಲಿ ಇದನ್ನು ಹೇಗೋ ಗುರುತಿಸಿ, ಸಿದ್ದಪ್ಪನಿಗೆ ಗೊತ್ತಾಗದಂತೆ ಅವನ ಪುಟ್ಟ ಪಾಕೆಟ್ ಡೈರಿ ಎಗರಿಸಿಬಿಟ್ಟಳು. ಮನೆಗೆ ಹೋಗಿ ನೋಡುತ್ತಾಳೆ, ಒಬ್ಬೊಬ್ಬರಿಗೂ ಒಂದೊಂದು ಅಡ್ಡಹೆಸರು!
ಡುಮ್ಮಕ್ಕ 375, ಸಣ್ಣಮ್ಮ 276, ಲಂಬೂ ಲಟಕ್ 305, ಸೋಡಾಬುಡ್ಡಿ 410, ಕುಂಟ್ಲಪ್ಪಿ 330, ಒಂಡ್ರಗಣ್ಣಿ 215, ಹಲ್ಮುರ್ಕಿ 305, ಮಿಟಕಲಾಡಿ 510……..!
ತನ್ನನ್ನು ಅದರಲ್ಲಿ ಗುರುತಿಸಲಾಗದ ಕಿಲಾಡಿ ಕಮಲಿ ಮಾರನೇ ದಿನ ಅವನು ವ್ಯಾಪಾರಕ್ಕೆ ಬಂದಾಗ ಜೋಪಾನವಾಗಿ ಗಪ್‌ಚುಪ್ ಎಂದು ತೆಗೆದ ಜಾಗದಲ್ಲೇ ಆ ಪಾಕೆಟ್ ಡೈರಿ ಇರಿಸಿಬಿಟ್ಟಳು.
ರೇವತಿ : ನೋಡೆ ಲತಾ, ಕಳೆದ 3 ತಿಂಗಳಿನಿಂದ ನನ್ನ ಮಗ ಸರಿಯಾಗಿ ಸ್ಕೂಲಿಗೆ ಹೋಗಲು ಆಗುತ್ತಿಲ್ಲ. ಅದಕ್ಕೆ ಈ ವಾಟ್ಸ್ಆ್ಯಪ್ ಕಾಟವೇ ಕಾರಣ.
ಲತಾ : ಅದು ಹೇಗೆ?
ರೇವತಿ : ಅಯ್ಯೋ ಏನು ಹೇಳಲಿ, 3 ತಿಂಗಳ ಹಿಂದೆ ಆಟವಾಡಲು ಹೋಗಿದ್ದ ನನ್ನ ಮಗ ಕಾಣೆಯಾಗಿದ್ದು ನಿಜ. ಹೀಗ್ಹೀಗೆ ಅಂತ ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಹಾಕಿದ್ದೇ ಬಂತು, ಯಾವುದೋ ಗ್ರೂಪ್‌ನವರು ಅಂತೂ ಆ ರಾತ್ರಿ ಮಗುವನ್ನು ಮನೆಗೆ ಕರೆತಂದಿದ್ದರು.
ಲತಾ : ಮತ್ತೇನು ತೊಂದರೆ?
ರೇವತಿ : ಈ ತರಹ ಮೆಸೇಜು ಊರಿನಲ್ಲಿರುವ ಗ್ರೂಪ್‌ಗಳಿಗೆಲ್ಲ ಹೋಯ್ತಾ… ಮಗು ಶಾಲೆಗೆ ನಡೆದುಕೊಂಡು ಹೋಗ್ತಿದ್ರೆ ನೋಡಿದವರು ಯಾರೋ ಒಬ್ಬರು ಅದನ್ನು ಎತ್ತಿಕೊಂಡು ಬಂದು ಮನೆಗೆ ಬಿಡ್ತಾರೆ. ಸುಮ್ನೆ ಹೋಗ್ತಾರಾ? 5 ಸಾವಿರ ಬಹುಮಾನ ಕೊಡಿ ಅಂತಾರೆ. ಹೀಗೆ 3 ತಿಂಗಳಿನಿಂದ ಅದಕ್ಕೆ ಶಾಲೆ ತಪ್ಪುತ್ತಿದೆ!
ತನ್ನ ಮದುವೆಯ ಹಿಂದಿನ ದಿನ ವರ ಗುಂಡನಿಗೆ ನವ ವಧುವಿನಿಂದ ಒಂದು ಮೆಸೇಜ್ ಬಂತು, `ಸಾರಿ, ಈ ಮದುವೆ ನಡೆಯಲ್ಲ ಬಿಡಿ. ನನ್ನ ಮದುವೆ ಬೇರೆ ಕಡೆ ಫಿಕ್ಸ್ ಆಗಿಹೋಗಿದೆ!’
ವರ ಗುಂಡನಿಗೆ ಎಲ್ಲಿಲ್ಲದ ಟೆನ್ಶನ್ ಶುರುವಾಯ್ತು. ಅದಾಗಿ 5 ನಿಮಿಷಗಳಲ್ಲಿ ಮತ್ತೊಂದು ಮೆಸೇಜ್ ಬಂತು.
`ಸಾರಿ….. ಬೈ ಮಿಸ್ಟೇಕ್ ಆ ಮೆಸೇಜ್ ನಿಮಗೆ ಸೆಂಡ್ ಆಗಿಹೋಯ್ತು.’
ವರ ಗುಂಡ ತಕ್ಷಣ ಮೂರ್ಛೆ ಹೋದ.
50ರ ಹರೆಯದ ಪತಿರಾಯ ಪತ್ನಿಯೊಂದಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಡಿನ್ನರ್ ಸೇವಿಸುತ್ತಿದ್ದ.
ಆಗ 20-22ರ ಹರೆಯದ ಚೆಲುವೆಯೊಬ್ಬಳು ಟೈಟ್ ಮಿನಿಸ್ಕರ್ಟ್, ಬಿಗಿಯಾದ ಸಣ್ಣ ಟಾಪ್ ಧರಿಸಿ, ಹೈ ಹೀಲ್ಸ್ ನಲ್ಲಿ ಲುಟುಲುಟು ನಡೆದು ಬಂದು ಠುಸ್‌ಪುಸ್ ಎಂದು ಆಂಗ್ಲದಲ್ಲಿ ಪಲುಕಿ, ಬಾಗಿ ಈ ಪತಿರಾಯನಿಗೆ ಕಿಸ್ ಮಾಡಿ ಕೈ ಬೀಸುತ್ತಾ ಹೊರಟೇಬಿಟ್ಟಳು!
ಪತ್ನಿಗಂತೂ ಕೆಂಡಾಮಂಡಲ ಸಿಟ್ಟು ಬಂದಿತ್ತು, “ಯಾರ್ರೀ, ಈ ಮಿಟಕಲಾಡಿ ಬಂದವಳು?” ಎಂದು ಗುಡುಗಿದಳು.
ಪತಿ ಹೇಳಿದ, “ಏ… ಅವಳು ನಮ್ಮ ಆಫೀಸ್‌ನ ಹೊಸ ಸೆಕ್ರೆಟರಿ…. ಅಷ್ಟೇ.”
ಪತ್ನಿ, “ಸೆಕ್ರೆಟರಿನೋ… ಸುಡುಗಾಡೋ! ಅದೆಲ್ಲ ನನಗೆ ಗೊತ್ತಿಲ್ಲ. ನನಗೆ ಈಗಲೇ ಡೈವೋರ್ಸ್ ಬೇಕು,” ಎಂದು ಗುಡುಗಿದಳು.
ಪತಿ ಹೇಳಿದ, “ನೋ ಪ್ರಾಬ್ಲಮ್! ನಿನಗೆ ಜೀವನಾಂಶವೇನೋ ಸಿಗುತ್ತದೆ, ಆದರೆ ಯೋಚಿಸಿ ನೋಡು. ವರ್ಷಕ್ಕೆ 2 ಸಲ ದುಬೈ ಮಾಲ್‌ನಲ್ಲಿ ಶಾಪಿಂಗ್, 2-3 ಸಲ ಸಿಂಗಾಪುರ್-ಮಲೇಷಿಯಾ ಟೂರಿಂಗ್, ಗ್ಯಾರೇಜ್‌ನಲ್ಲಿರುವ ಮರ್ಸಿಡಿಸ್, ದುಬಾರಿ ಹೋಟೆಲ್‌ಗಳ ಕಿಟಿ ಪಾರ್ಟಿ…. ಇತ್ಯಾದಿ ಯಾವುದೂ ಇರೋಲ್ಲ. ನೀನೇ ಡಿಸೈಡ್ ಮಾಡು!”
ಆಕೆ ಬಹಳ ಆಳವಾಗಿ ಯೋಚಿಸಿದಳು. ಅಷ್ಟರಲ್ಲಿ ಇವರ ಪರಿಚಿತರಾದ ಪಕ್ಕದ ಬಂಗಲೆಯ ವ್ಯಕ್ತಿ ಪಕ್ಕದ ಟೇಬಲ್‌ಗೆ ಬಂದು ಕುಳಿತ. ಅವನ ಜೊತೆ ತುಸು ವಯಸ್ಸಾದ ಮಹಿಳೆ ಇದ್ದಳು.
ಈಕೆ ತಕ್ಷಣ ಕೇಳಿದಳು, “ಅಯ್ಯೋ, ಅವರು ಪಕ್ಕದ್ಮನೆ ಪ್ರಕಾಶ್ ರಾವ್ ಅಲ್ವಾ… ಆಕೆ ಅವರ ಹೆಂಡತಿ ಹಾಗಿಲ್ಲ. ಯಾರಿರಬಹುದು ಅಂತೀರಿ?”
“ಯಾರೋ…. ಆ ಬಾಂಡ್ಲಿ ತಲೆ ಪ್ರಕಾಶನ ಗರ್ಲ್ ಫ್ರೆಂಡ್ ಇರಬೇಕು…..”
ಇದರ ಬಗ್ಗೆಯೇ ಇನ್ನಷ್ಟು ಆಳವಾಗಿ ಯೋಚಿಸಿದ ಆಕೆ, “ಇರಲಿ ಬಿಡಿ, ನಿಮ್ಮನ್ನು ಮಾತನಾಡಿಸಿದವಳು ಎಷ್ಟೋ ಯಂಗ್ ಆಗಿದ್ದಾಳೆ!” ಎನ್ನುವುದೇ?
ಒಂದು ಸಲ ಶಿಲ್ಪಾ ಪಿಜ್ಜಾ ಶಾಪ್‌ಗೆ ಫೋನ್ ಮಾಡಿದಳು.
ಶಿಲ್ಪಾ : ಹೋ! ನೀವು ಪಿಜ್ಜಾ ಶೆಫ್ ಮಾತನಾಡುತ್ತಿದ್ದೀರಾ?
ಶೆಫ್ : ಹೌದು ಮೇಡಂ ನಮಸ್ಕಾರ. ಹೇಳಿ, ನಾನು ನಿಮಗೆ ಹೇಗೆ ಸಹಾಯ ಮಾಡಬಲ್ಲೆ?
ಶಿಲ್ಪಾ : ನಿಜವಾಗ್ಲೂ ನೀವು ನನಗೆ ಸಹಾಯ ಮಾಡ್ತೀರಾ?
ಶೆಫ್ : ಖಂಡಿತಾ ಮೇಡಂ! ಗ್ರಾಹಕರೇ ನಮ್ಮ ದೇವರು. ನೀವು ಜಟ್ ಅಂತ ಹೇಳಿ…. ನಾವು ಥಟ್ ಅಂತ ಸಹಾಯ ಮಾಡ್ತೀವಿ.
ಶಿಲ್ಪಾ : ಹಾಗಿದ್ದರೆ…. ಮನೆಯಲ್ಲೇ ನಾನು ಹೇಗೆ ಪಿಜ್ಜಾ ತಯಾರಿಸೋದು ಅಂತ ಹೇಳಿ ಕೊಡ್ತೀರಾ?