ಗೃಹಸಾಲದ ದರಗಳು ಶೇ.9ಕ್ಕಿಂತ ಕಡಿಮೆಯಾಗಿವೆ. ಪ್ರಾಪರ್ಟಿಯ ಬೆಲೆಗಳು ಸಹ ಕೆಲವು ತಿಂಗಳುಗಳ ಹಿಂದೆ ಶೇ.30ರಷ್ಟು ಕುಸಿದವು. ಯಾರು ತಮ್ಮದೇ ಆದ ಸ್ವಂತ ಸೂರಿನ ಕನಸು ಕಾಣುತ್ತಿದ್ದಾರೊ, ಅವರು ಮನೆ ಹೊಂದಲು ಇದು ಸಕಾಲ. ಅಂದಹಾಗೆ ನಮ್ಮ ದೇಶದಲ್ಲಿ ಸಾಲ ಪಡೆಯುವುದನ್ನು ಒಳ್ಳೆಯ ಸಂಗತಿ ಎಂದು ತಿಳಿಯಲಾಗುವುದಿಲ್ಲ. ಆದರೆ ಪೋರ್ಟ್‌ಪೋಲಿಯೋದಲ್ಲಿ ಹೋಮ್ ಲೋನ್‌ ಸೇರ್ಪಡೆಗೊಂಡಿದ್ದರೆ, ಅದು ಒಳ್ಳೆಯ ಸಂಕೇತವೇ ಹೌದು. ಅಂದಹಾಗೆ ಹೋಮ್ ಲೋನ್‌  ಇತರೆ ಸಾಲಗಳಿಗಿಂತ ವಿಭಿನ್ನವಾಗಿರುತ್ತದೆ. ಏಕೆಂದರೆ, ಗೃಹ ಸಾಲ ಪಡೆಯುವುದರ ಮೂಲಕ ನೀವು ಸಾಲಗಾರರಾಗುತ್ತಿಲ್ಲ. ಬದಲಾಗಿ ನಿಮ್ಮ ಬಳಿ ಒಂದು ಸಂಪತ್ತು ಸೃಷ್ಟಿಯಾಗುತ್ತಿದೆ. ಅದರ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ.

ಫೈನಾನ್ಶಿಯಲ್ ಪ್ಲಾನರ್‌ ಅವಿನಾಶ್‌ ಪ್ರಕಾರ, ಕಾರ್‌ ಲೋನ್‌ ಅಥವಾ ಪರ್ಸನಲ್ ಲೋನ್‌ಗಳು ನಿಮ್ಮ ಖರ್ಚಿನ ಮಿತಿಯನ್ನು ಹೆಚ್ಚಿಸುತ್ತವೆ. ಆದರೆ ಹೋಮ್ ಲೋನ್‌  ತೆಗೆದುಕೊಳ್ಳುವುದರಿಂದ ನೀವು ಒಂದು ನಿರ್ದಿಷ್ಟ ಆಸ್ತಿಯ ಮಾಲೀಕರಾಗುತ್ತೀರಿ. ಕೆಲವು ಅವಧಿಯವರೆಗೆ ನೀವು ಇಎಂಐ ತುಂಬೇಕಾಗುತ್ತದೆ. ಆದರೆ ಮನೆ ಬಾಡಿಗೆ ಕಟ್ಟುವುದರಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಹೋಮ್ ಲೋನ್‌  ತೆಗೆದುಕೊಳ್ಳುವ ಮುಂಚೆ ನೀವು ಕೆಲವೊಂದು ಸಂಗತಿಗಳ ಬಗ್ಗೆ ಗಮನಕೊಟ್ಟರೆ ನಿಮಗೆ ಹೋಮ್ ಲೋನ್‌  ಎನ್ನುವುದು ಒಂದು ವರದಾನವಾಗಿಯೇ ಪರಿಣಮಿಸುತ್ತದೆ.

ಒಂದೇ ಸಲ ಅರ್ಜಿ ಹಾಕಿ

ಒಂದುವೇಳೆ ನೀವು ಹಲವು ಸ್ನೇಹಿತರೊಂದಿಗೆ ಸೇರಿ ಅರ್ಜಿ ಹಾಕುತ್ತಿದ್ದರೆ, ನಿಮಗೆ ಗೃಹ ಸಾಲ ಸಾಕಷ್ಟು ಅಗ್ಗದ ದರದಲ್ಲಿ ಲಭಿಸುತ್ತದೆ. ಇದರರ್ಥ ಇಷ್ಟೆ, ಎಲ್ಲರೂ ಸೇರಿ ಗೃಹ ಸಾಲ ತೆಗೆದುಕೊಂಡರೆ ಹಣಕಾಸು ಸಂಸ್ಥೆ ನಿರ್ವಹಣಾ ವೆಚ್ಚ ಹಾಗೂ ಕಾನೂನು ಕಾರ್ಯಾಚರಣೆಗೆ ಕಡಿಮೆ ಖರ್ಚು ಬರುತ್ತದೆ. ನಿಶ್ಚಿತವಾಗಿಯೂ ಅದರ ಲಾಭವನ್ನು ಬ್ಯಾಂಕ್‌ ತನ್ನ ಗ್ರಾಹಕರಿಗೆ ವರ್ಗಾಯಿಸುತ್ತದೆ. ಹೀಗಾಗಿ ನಿಮ್ಮ ಸಾಲದ ಪ್ರೊಸೆಸಿಂಗ್‌ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಬ್ಯಾಂಕ್‌ ಮನ್ನಾ ಮಾಡುತ್ತದೆ.

ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸಿ

ಸಾಲ ಕೊಡಲು ಬ್ಯಾಂಕುಗಳಿಗೆ ಪ್ರತಿ ತಿಂಗಳೂ ತನ್ನದೇ ಆದ ಒಂದು ನಿಶ್ಚಿತ ಗುರಿಯಿರುತ್ತದೆ. ಒಂದು ವೇಳೆ ನೀವು ತಿಂಗಳ 24ನೇ ತಾರೀಖಿನ ಬಳಿಕ ಅರ್ಜಿ ಸಲ್ಲಿಸುತ್ತಿರುವಿರಾದರೆ, ನಿಮಗೆ ಒಂದಿಷ್ಟು ರಿಯಾಯಿತಿ ಸಿಗುವ ಸಾಧ್ಯತೆ ಇರುತ್ತದೆ. ಆಯಾ ತಿಂಗಳ ಗುರಿಯನ್ನು ತಲುಪಬೇಕೆನ್ನುವುದು ಪ್ರತಿಯೊಂದು ಬ್ಯಾಂಕಿನ ಪ್ರಯತ್ನವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ತಿಂಗಳ ಕೊನೆಯಲ್ಲಿ ಅರ್ಜಿ ಹಾಕಿದರೆ ಬ್ಯಾಂಕ್‌ ಅವರಿಗೆ ಸ್ವಲ್ಪ ಮಟ್ಟಿನ ರಿಯಾಯಿತಿ ದೊರಕಿಸಿಕೊಡುವ ಸಾಧ್ಯತೆ ಇರುತ್ತದೆ.

ಒಳ್ಳೆಯ ಕ್ರೆಡಿಟ್‌ ರೇಟಿಂಗ್‌ ಅವಶ್ಯ

ಬ್ಯಾಂಕ್‌ ತನ್ನ ಹಳೆಯ ಹಾಗೂ ವಿಶ್ವಾಸಾರ್ಹ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಗೃಹ ಸಾಲ ಕೊಡಲು ಪ್ರಯತ್ನ ಮಾಡುತ್ತದೆ. ನೀವು ಕೂಡ ಬ್ಯಾಂಕಿನ ಹಳೆಯ, ವಿಶ್ವಾಸಾರ್ಹ ಗ್ರಾಹಕರಾಗಿದ್ದರೆ, ನಿಮ್ಮ ರೀಪೇಮೆಂಟ್‌ ರೆಕಾರ್ಡ್‌ ಚೆನ್ನಾಗಿದ್ದರೆ, ಬೇರೆ ಗ್ರಾಹಕರಿಗಿಂತ ನಿಮಗೆ ಒಳ್ಳೆಯ ದರದಲ್ಲಿ ಸಾಲ ದೊರೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಿಲ್ ಹಾಗೂ ಇತರೆ ಪೇಮೆಂಟ್‌ಗಳನ್ನು ಸಕಾಲಕ್ಕೆ ಪಾವತಿಸಿ. ಇದರಿಂದ ನಿಮ್ಮ ಕ್ರೆಡಿಟ್‌ ರೇಟಿಂಗ್‌ ಅಪ್‌ಡೇಟ್‌ ಆಗಿರುತ್ತದೆ ಮತ್ತು ನಿಮಗೆ ಬೇಕಾದಾಗ ಸೂಕ್ತ ಸಾಲ ಲಭಿಸುತ್ತದೆ.

ಈ ಸಂಗತಿಗಳ ಬಗ್ಗೆ ಗಮನವಿರಲಿ

ಹೊಸ ಅಥವಾ ಹಣಕಾಸು ಸಂಸ್ಥೆಯ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ಇಲ್ಲಿವೆ. ಅಂಥ ಸಂಸ್ಥೆಯಿಂದ ಸಾಲ ಪಡೆಯಲು ಹೋಗಬೇಡಿ.

ಸಾಲ ತೆಗೆದುಕೊಳ್ಳುವ ಮುನ್ನ ಕನಿಷ್ಠ 4-5 ಗ್ರಾಹಕರ ಬಡ್ಡಿದರ, ತಗುಲಿದ ಖರ್ಚು, ಸಾಲ ಮರು ಪಾವತಿಯ ಮಾಹಿತಿ ಹಾಗೂ ಹಳೆಯ ಸಾಲಗಾರರ ಅನುಭವದ ಬಗ್ಗೆ ತಿಳಿದುಕೊಳ್ಳಿ.

ಬಡ್ಡಿ ದರ ಹಾಗೂ ಇತರೆ ಶುಲ್ಕಗಳ ಹೋಲಿಕೆಗಾಗಿ ನೀವು ಆನ್‌ಲೈನ್‌ ಪೋರ್ಟ್‌ಗಳ ಸಹಾಯ ಪಡೆಯಬಹುದು.

ಸಾಲದಾತ ಸಂಸ್ಥೆಯ ರೇಟ್‌ ರೀಸೆಟ್‌, ಫಾರ್‌ ಕ್ಲೋಸರ್‌ನ ಷರತ್ತುಗಳ ಅಧ್ಯಯನ ಅವಶ್ಯ.

ಯಾರ ಪ್ರೀಪೇಮೆಂಟ್‌ನ ನಿಯಮಗಳು, ಷರತ್ತುಗಳು ಸರಳವಾಗಿವೆಯೊ ಅಂಥ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳಿ.

ಸಾಲದ ಪ್ರಮಾಣ

ಯಾವುದೇ ಒಬ್ಬ ವ್ಯಕ್ತಿಗೆ ಎಷ್ಟು ಪ್ರಮಾಣದಲ್ಲಿ ಸಾಲ ಸಿಗಬಹುದೆಂದು ನಿರ್ಧರಿಸಲು ಆ ವ್ಯಕ್ತಿ ಎಷ್ಟು ನಿವ್ವಳ ಸಂಬಳ ಪಡೆಯುತ್ತಿದ್ದಾನೆ ಎಂಬುದನ್ನು ಗಮನಿಸಲಾಗುತ್ತದೆ. ವೇತನ ಪಡೆಯುವವರಿಗೆ ಅವರ ಆದಾಯದ ನಾಲ್ಕು ಪಟ್ಟು ಮೊತ್ತವನ್ನು ಗೃಹ ಸಾಲವಾಗಿ ಕೊಡಲಾಗುತ್ತದೆ. ಅದರ ಹೊರತಾಗಿ ಚಾರ್ಟರ್ಡ್‌ ಅಕೌಂಟೆಂಟ್‌, ಡಾಕ್ಟರ್‌ರಂತಹ ವೃತ್ತಿಯಲ್ಲಿರುವವರಿಗೆ 7 ಪಟ್ಟು ಸಾಲ ಕೊಡುತ್ತದೆ. ಅದರ ಜೊತೆಗೆ ಬ್ಯಾಂಕು ಒಂದು ಸಂಗತಿಯನ್ನು ಗಮನಿಸುತ್ತದೆ. ಅದೇನೆಂದರೆ ವ್ಯಕ್ತಿಯೊಬ್ಬರ ಟೇಕ್‌ ಹೋಮ್ ಸ್ಯಾಲರಿ ಅಥವಾ ನೆಟ್‌ ಸ್ಯಾಲರಿಯು, ಗ್ರಾಸ್‌ ಸ್ಯಾಲರಿಯ ಶೇ.40ಕ್ಕಿಂತ ಕಡಿಮೆ ಇರಬಾರದು. ಇದರ ಹೊರತಾಗಿ ಗೃಹ ಸಾಲ ಪಡೆಯಲು ಅರ್ಜಿ ಹಾಕುವ ವ್ಯಕ್ತಿಯ ಕ್ರೆಡಿಟ್‌ ರಿಪೋರ್ಟ್‌ನ್ನು ಕೂಡ ಗಮನಿಸಲಾಗುತ್ತದೆ. ಒಂದು ವೇಳೆ ಸಾಲ ತೀರಿಸುವ ನಿಮ್ಮ ಹಳೆಯ ರೆಕಾರ್ಡ್‌ ಚೆನ್ನಾಗಿರದಿದ್ದರೆ, ನಿಮಗೆ ಸಾಲ ಸಿಗದೇ ಹೋಗಬಹುದು ಅಥವಾ ಸಿಕ್ಕರೂ ಸಾಕಷ್ಟು ಹೆಚ್ಚಿನ ಬಡ್ಡಿದರ ತೆರಬೇಕಾಗುತ್ತದೆ.

ಗೃಹ ಸಾಲದ ಮಿತಿ ಹೆಚ್ಚಿಸಿಕೊಳ್ಳಿ

ನಿಮ್ಮ ಸಾಲದ ಅವಧಿ ಎಷ್ಟು ದೀರ್ಘವಾಗಿರುತ್ತದೋ ನಿಮಗೆ ಅಷ್ಟೇ ಹೆಚ್ಚಿನ ಪ್ರಮಾಣದಲ್ಲಿ ಸಾಲ ದೊರಕಬಹುದು. ಪ್ರತಿ 1 ಲಕ್ಷ ರೂ.ಗೆ ಮಾಸಿಕ ಕಂತು ದೀರ್ಘಾವಧಿ ಸಾಲಕ್ಕಾಗಿ ಸಾಕಷ್ಟು ಕಡಿಮೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಬ್ಯಾಂಕ್‌ ನಿಮ್ಮ ಆದಾಯವನ್ನು ಅನುಸರಿಸಿ ಸಾಲದ ಪ್ರಮಾಣವನ್ನು ನಿರ್ಧರಿಸುತ್ತದೆ. ನಿಮ್ಮ ಸಾಲದ ಪ್ರಮಾಣವನ್ನು ಹೆಚ್ಚಿಸುವ ಮತ್ತೊಂದು ಉಪಾಯವೆಂದರೆ, ನೀವು ಹಾಗೂ ನಿಮ್ಮ ಸಂಬಂಧಿಕರ ಆದಾಯವನ್ನು ಸೇರಿಸಿ `ಜಾಯಿಂಟ್‌ ಲೋನ್‌’ ತೆಗೆದುಕೊಳ್ಳಬಹುದು. ಇದರಲ್ಲಿ ನಿಮ್ಮ ಸಂಗಾತಿ, ಮಕ್ಕಳು, ತಂದೆತಾಯಿ, ಅಣ್ಣತಂಗಿ ಯಾರಾದರೂ ಸೇರಿಕೊಳ್ಳಬಹುದು. ವಿವಾಹಿತ ಮಹಿಳೆ ತನ್ನ ಅತ್ತೆಮಾವ ಅಥವಾ ತನ್ನ ಪತಿಯ ಆದಾಯ ಸೇರಿಸಿ ಜಾಯಿಂಟ್‌ ಲೋನ್‌ ತೆಗೆದುಕೊಳ್ಳಬಹುದು. ಆದರೆ ಆಕೆ ತನ್ನ ತಂದೆತಾಯಿ, ಅಣ್ಣತಂಗಿ ಇವರ ಆದಾಯ ಸೇರ್ಪಡೆಗೊಳಿಸಿ ಜಾಯಿಂಟ್‌ ಲೋನ್‌ ತೆಗೆದುಕೊಳ್ಳುವ ಹಾಗಿಲ್ಲ. ನಿಮ್ಮ ಬಳಿ ಡೌನ್‌ ಪೇಮೆಂಟ್‌ ತುಂಬಲು ಸಾಕಷ್ಟು ಮೊತ್ತ ಇದ್ದರೆ, ನೀವು ಭಾರಿ ಮೊತ್ತದ ಸಾಲ ಪಡೆಯುವ ಅಗತ್ಯವಿಲ್ಲ.

ಇದರಿಂದ ನಿಮಗೆ ಸಾಲದ ಹೊರೆ ಹೆಚ್ಚುವುದಿಲ್ಲ. ಸಾಲ ಕೊಡುವಾಗ ಬ್ಯಾಂಕು ನಿಮ್ಮಿಂದ ಹಳೆಯ ರೀಪೇಮೆಂಟ್‌ನ ಮಾಹಿತಿ ಕೂಡ ಕೇಳಬಹುದು. ಅದಕ್ಕಾಗಿ ನೀವು ಯಾವುದಾದರೂ ಹಳೆಯ ಸಾಲದ  (ಕಾರು ಸಾಲ ಅಥವಾ ಇತರೆ ಸಾಲ) ಪುರಾವೆ ನೀಡಬಹುದು.

ಹಿರಿಯ ನಾಗರಿಕರಿಗೂ ಲಾಭ

ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ದೀರ್ಘಾವಧಿಯ ಸಾಲ ನೀಡಲಾಗುವುದಿಲ್ಲ. ಉದಾಹರಣೆಗಾಗಿ ಒಬ್ಬ ವ್ಯಕ್ತಿ 60 ವರ್ಷದವರಾಗಿದ್ದರೆ, ಬ್ಯಾಂಕ್‌ ಅವರಿಗೆ ಹೆಚ್ಚೆಂದರೆ 5 ವರ್ಷ ಅವಧಿಯ ಸಾಲ ನೀಡಬಹುದು. ಈ ಸಮಸ್ಯೆ ಕೂಡ ಜಾಯಿಂಟ್‌ ಹೋಮ್ ಲೋನ್‌ ತೆಗೆದುಕೊಳ್ಳುವುದರಿಂದ ದೂರವಾಗುತ್ತದೆ. ಯಾರಾದರೂ ಹಿರಿಯ ನಾಗರಿಕರು ಕಡಿಮೆ ವಯಸ್ಸಿನ ವ್ಯಕ್ತಿಯ ಜೊತೆ ಹೋಮ್ ಲೋನ್‌ಗಾಗಿ ಅರ್ಜಿ ಹಾಕಿದರೆ, ಅವರಿಗೆ ದೀರ್ಘಾವಧಿ ಸಾಲ ದೊರಕಬಹುದು.

ಸಾಲಕ್ಕೆ ಅರ್ಜಿ ಹಾಕುವ ಮುನ್ನ

ಕ್ರೆಡಿಟ್‌ ಇನ್‌ಫರ್ಮೇಶನ್‌ ಬ್ಯೂರೋ ಆಫ್‌ ಇಂಡಿಯಾ ಲಿಮಿಟೆಡ್‌ ಅಂದರೆ `ಸಿಬಿಲ್’ ನಿಂದ ವರದಿ ತರಿಸಿಕೊಂಡು ನಿಮ್ಮ ರೆಕಾರ್ಡ್‌ ಮತ್ತು ಸ್ಕೋರ್‌ ಎಷ್ಟು ಎಂದು ಖಚಿತಪಡಿಸಿಕೊಳ್ಳಬಹುದು. ವರ್ಷದಲ್ಲಿ ಒಂದು ಸಲ 450 ರೂ. ಖರ್ಚು ಮಾಡಿ ಸಿಬಿಲ್‌ನಿಂದ ಕ್ರೆಡಿಟ್‌ ಸ್ಕೋರ್‌ ಪಡೆದುಕೊಂಡ ಬಳಿಕ ನಿಮ್ಮ ಸಾಲದಾತ ನಿಮ್ಮ ಅರ್ಜಿಯನ್ನು ಹೇಗೆ ನೋಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಆ ವರದಿಯಲ್ಲಿ ಏನಾದರೂ ಲೋಪಗಳು ಕಂಡುಬಂದರೆ, ಅಂದರೆ ನೀವು ಈ ಮುಂಚೆಯೇ ಎಲ್ಲ ಹಣವನ್ನು ಪಾವತಿ ಮಾಡಿದ್ದೀರಿ. ಆದರೆ ಆ ವರದಿಯಲ್ಲಿ ಅದನ್ನು ನಮೂದಿಸಲಾಗಿರದಿದ್ದರೆ, ಈ ಕಾರಣದಿಂದ ನಿಮ್ಮ ಕ್ರೆಡಿಟ್‌ ರಿಪೋರ್ಟ್‌ ಮೇಲೆ ಪರಿಣಾಮ ಬೀರಿದ್ದರೆ, ನೀವು ಪಾವತಿ ಮಾಡಿದ ಬಿಲ್‌ಗಳ ಪುರಾವೆಯೊಂದಿಗೆ ಸಂಬಂಧಪಟ್ಟ ಬ್ಯಾಂಕ್‌ ಜೊತೆ ಮಾತುಕತೆ ನಡೆಸಬಹುದು. ಅಂತಹ ಪುರಾವೆಗಳ ಜೊತೆಗೆ ನೀವು ನೇರವಾಗಿ `ಸಿಬಿಲ್‌’ನವರನ್ನು ಸಂಪರ್ಕಿಸಿ ನಿಮ್ಮ ವರದಿಯನ್ನು ಸರಿಪಡಿಸಬಹುದಾಗಿದೆ.

– ಎಸ್‌. ಮಮತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ