ವಕೀಲ ವೆಂಕಯ್ಯನ ಮನೆಗೆ 7-8 ಮಂದಿ ನೆಂಟರು ಬಂದಿಳಿದರು.
ಒಳಗಡೆಯಿಂದ ಬುಲಾವ್ ಬಂತು. ``ಸಕ್ಕರೇನೇ ಇಲ್ಲ..... ಏನ್ರಿ ಸುಡುಗಾಡು ಟೀ ಮಾಡಲಿ?''
ವೆಂಕಯ್ಯ ಹೇಳಿದರು, ``ನೀನು ಇರುವುದನ್ನೇ ಹಾಕಿ ಟೀ ಮಾಡು. ಸಪ್ಪೆ ಆದರೂ ಸರಿ, ಉಳಿದದ್ದನ್ನು ನಾನು ನೋಡಿಕೊಳ್ತೀನಿ.''
ಅಮ್ಮಾವರೇ ಎಲ್ಲರಿಗೂ ಶುಗರ್‌ಲೆಸ್ ಟೀ ಸರ್ವ್ ಮಾಡಿ ಗಂಡನತ್ತ ಕೆಂಗಣ್ಣು ಬೀರುತ್ತಾ ಹೊರಟರು.
ಅತಿಥಿಗಳು ಇನ್ನೇನು ಟೀ ಕುಡಿಯಬೇಕು, ಆಗ ವೆಂಕಯ್ಯ ಹೇಳಿದರು, ``ನೋಡಿ, ಯಾರಿಗೋ ಒಬ್ಬರಿಗೆ ಶುಗರ್‌ಲೆಸ್ ಟೀ ಬಂದುಬಿಟ್ಟಿದೆಯಂತೆ. ಅವರು ಯಾರು ಅಂತ ಹೇಳಿದರೆ, ನಾವು ಉಳಿದವರೆಲ್ಲ ನಾಳೆ ಸಂಜೆ ಅವರ ಮನೆಗೆ ಟೀಗೆ ಹೋಗಬಹುದು.''
ಯಾರಾದರೂ ತುಟಿ ಪಿಟಕ್ ಅಂದಿದ್ದರೆ ಕೇಳಿ! ಕೊಟ್ಟಿದ್ದನ್ನು ತೆಪ್ಪಗೆ ಕುಡಿದು ಎದ್ದರು. ಒಬ್ಬರಂತೂ ಚಪ್ಪಲಿ ಮೆಟ್ಟುವಾಗ, ``ನನಗಂತೂ ಜಾಸ್ತಿ ಸಕ್ಕರೆ ಹಾಕಿರುವ ಟೀ ಬಂದಿತ್ತಪ್ಪ.... ಸಧ್ಯ! ಡಯಾಬಿಟೀಸ್ ಬರದಿದ್ರೆ ಸಾಕು,'' ಎನ್ನುವುದೇ?
ಪುಟ್ನಂಜಿ ಬಲು ಮಧುರ ಕಂಠದಿಂದ ಬಾತ್‌ರೂಮಿನಿಂದ ಕೂಗಿದಳು, ``ಏನ್ರಿ, ಇಲ್ಲಿ ಸ್ವಲ್ಪ ಬರ್ತೀರಾ? ನಾನು ಪೂರ್ತಿ ಸೋಪು ಹಾಕಿದ್ದೇನೆ. ಸ್ವಲ್ಪ ಬ್ರಶ್ ಮಾಡ್ತೀರಾ.....?''
ಕಾಫಿ ಹೀರುತ್ತಾ ಪೇಪರ್ ಓದುತ್ತಿದ್ದ ಗುಂಡ ಒಂದೇ ಓಟಕ್ಕೆ ಒಳಗೋಡಿ ಬಂದ. ``ಎಸ್ ಡಾರ್ಲಿಂಗ್.... ವಾಟ್ ಕ್ಯಾನ್ ಐ ಡೂ ಫಾರ್ ಯೂ?''
ಪುಟ್ನಂಜಿ ಒಗೆಯಬೇಕಾದ ಬಟ್ಟೆ ರಾಶಿ ಕಡೆ ಕೈ ತೋರಿಸಿ, ``ನಾನು ಇದಕ್ಕೆಲ್ಲ ಸೋಪ್ ಹಚ್ಚಿದ್ದಾಗಿದೆ. ಸ್ವಲ್ಪ ಬ್ರಶ್ ಮಾಡಿ ಒಗೆದುಬಿಡಿ ಅಂದೆ.... ಕರೆಂಟ್ ಹೋಗಿದೆ, ಒರಳಲ್ಲಿ ರುಬ್ಬಿ ಅಡುಗೆ ಮಾಡಬೇಕು. ನೀರು ಬೇಕಾದ್ರೆ ಸಂಪ್‌ಗೆ ಹಗ್ಗದಿಂದ ಬಿಂದಿಗೆ ಹಾಕಿ ಎಳಕೊಳ್ಳಿ!'' ಎಂದಾಗ ಗುಂಡನ ಮುಖ ನೋಡಬೇಕಿತ್ತು......
ಗುಂಡ ಒಮ್ಮೆ ನಡು ಮಧ್ಯಾಹ್ನ ಗೆಳೆಯನ ಮನೆ ಹುಡುಕಿಕೊಂಡು ಹೋಗಿ ಬಾಗಿಲು ಬಡಿದ. ಆಗ ಅವನ ಗೆಳೆಯ ಮನೆಯಲ್ಲಿ ಇರಲಿಲ್ಲ. 5 ವರ್ಷದ ಗೆಳೆಯನ ಮಗಳು ಬಂದು ಬಾಗಿಲು ತೆರೆದಳು. ಅಷ್ಟರಲ್ಲಿ ಮಗುವಿನ ತಾಯಿ ಅಡುಗೆಮನೆಯಿಂದ ಗುಟುರು ಹಾಕಿದಳು, ``ಯಾರಮ್ಮ ಅದು ಬಂದಿರೋದು?''
ಮಗು : ಅದೇ ಅಂಕಲ್ ಕಣಮ್ಮ.
ತಾಯಿ : ಅದ್ಯಾವ ಅಂಕಲ್?
ಗುಂಡ ಈ ಮಗು ತನ್ನನ್ನು ಹೇಗೆ ಪರಿಚಯಿಸುತ್ತದೋ ನೋಡೋಣ ಎಂದು ಕುತೂಹಲದಿಂದ ಕೇಳಿಸಿಕೊಳ್ಳತೊಡಗಿದ.
ಮಗು : ಅದೇ ಅಂಕಲ್ ಕಣಮ್ಮ, ನೀನು ಅಪ್ಪಂಗೆ ಹೇಳ್ತಾ ಇರ್ತೀಯಲ್ಲ, ನಮ್ಮ ಮನೇಲಿ ತಿಂಡಿ ಊಟಕ್ಕೆ ತಟ್ಟೆ ಹಾಕೋದಿಕ್ಕಿಲ್ಲ, ನಿಮ್ಮ ಫ್ರೆಂಡ್ ಬಂದು ಕುಕ್ಕರ್ ಬಡಿಯುತ್ತೆ ಅಂತ... ಹೋಗ್ಲಿ ಅಂದ್ರೆ ಮಗು ಕೈಗೆ ಒಂದು ದಿನಾನೂ ಚಾಕಲೇಟ್ ಕೂಡ ಕೊಡಲ್ಲ, ಅಂತಿದ್ಯಲ್ಲ.... ಅದೇ ಅಂಕಲ್!
ತರಕಾರಿ ಸಿದ್ದಪ್ಪ ಪಾಪದ ಸೀದಾಸಾದಾ ಮನುಷ್ಯ. ಎಂದಿನಂತೆ ಗಾಡಿ ತಳ್ಳಿಕೊಂಡು ಬಂದು ವಠಾರದವರಿಗೆಲ್ಲ ತರಕಾರಿ ಮಾರುತ್ತಿದ್ದ. ಅದರಲ್ಲಿ ಎಷ್ಟೋ ಹೆಂಗಸರು ನಗದು ಕೊಡುತ್ತಿರಲಿಲ್ಲ. ಎಲ್ಲರೂ `ಲೆಕ್ಕ ಬರ್ಕೋ, 1ನೇ ತಾರೀಕು ಕೊಡ್ತೀನಿ,' ಎನ್ನುವ ಗಿರಾಕಿಗಳೇ.
ಪಾಪ ಸಿದ್ದಪ್ಪ, ಒಂದು ಸಣ್ಣ ಪುಸ್ತಕ ಯಾರದು ಎಷ್ಟು ಹಣ ಎಂದು ಬರೆದುಕೊಂಡು, ತಿಂಗಳು ಕಳೆದ ನಂತರ ಸರಿಯಾಗಿ ವಸೂಲಿ ಮಾಡಿಕೊಳ್ಳುತ್ತಿದ್ದ. ಇದರಲ್ಲಿ ವಿಡಂಬನೆ ಎಂದರೆ ಅವನಿಗೆ ಆ ವಠಾರದ ಯಾವ ಹೆಂಗಸಿನ ಹೆಸರೂ ಗೊತ್ತಿರಲಿಲ್ಲ. ಆದರೂ ಲೇವಾದೇವಿ ಸರಿಯಾಗಿ ನಡೆಯುತ್ತಿತ್ತು.