ಟೋಫು ವೆಜ್‌ ಸ್ಟಿರ್‌ ಫ್ರೈ

ಸಾಮಗ್ರಿ : 18-20 ಗೋಡಂಬಿ, 2-3 ಚಮಚ ನೈಲಾನ್‌ ಎಳ್ಳು, 250 ಗ್ರಾಂ ಟೋಫು (ರೆಡಿಮೇಡ್‌ ಲಭ್ಯ, ಸಣ್ಣ ಕ್ಯೂಬ್ಸ್ ಆಗಿ ಕತ್ತರಿಸಿ), 1 ಚಮಚ ಕಾರ್ನ್‌ಫ್ಲೋರ್‌, ತುಸು ಎಳ್ಳೆಣ್ಣೆ, ಜೇನುತುಪ್ಪ, ಹೆಚ್ಚಿದ ಬ್ರೋಕ್ಲಿ, ಶುಂಠಿ, ಈರುಳ್ಳಿ, ಕೆಂಪು ಹಸಿ ಮೆಣಸಿನಕಾಯಿ, ಕ್ಯಾರೆಟ್‌, ಬೇಬಿಕಾರ್ನ್‌, ಕೊ.ಸೊಪ್ಪು, ಈರುಳ್ಳಿ ತೆನೆ, ರುಚಿಗೆ ತಕ್ಕಷ್ಟು, ಉಪ್ಪು, ಖಾರ, ನಿಂಬೆರಸ, ಸೋಯಾ ಸಾಸ್‌, ಪುಡಿಮೆಣಸು, ಟೊಮೇಟೊ ಸಾಸ್‌.

ವಿಧಾನ : ಬಾಣಲೆಯಲ್ಲಿ ಮೊದಲು ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಎಳ್ಳು, ಗೋಡಂಬಿ ಹಾಕಿ ಹುರಿದು ಬೇರೆಯಾಗಿ ತೆಗೆದಿಡಿ. ಇದಕ್ಕೆ ಎಣ್ಣೆ ಬಿಟ್ಟು, ಟೋಫು ಹಾಕಿ ಕರಿಯಿರಿ. ಕರಿದ ಟೋಫುವಿಗೆ ಉಪ್ಪು, ಪುಡಿಮೆಣಸು ಉದುರಿಸಿ ಜೇನುತುಪ್ಪ ಬೆರೆಸಿ ಮ್ಯಾರಿನೇಟ್‌ ಆಗಲು ಬಿಡಿ. ನಂತರ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ, ಈರುಳ್ಳಿ, ಈರುಳ್ಳಿ ತೆನೆ, ಕೆಂಪು ಮೆಣಸು ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಉಳಿದ ತರಕಾರಿ ಹಾಕಿ ಬಾಡಿಸಿ. 5 ನಿಮಿಷ ಮಂದ ಉರಿಯಲ್ಲಿ ಹೀಗೆ ಸ್ಟಿರ್‌ ಫ್ರೈ ಮಾಡಿ. ಕೆಳಗಿಳಿಸಿ ಟೋಫು ಮಿಶ್ರಣ ಬೆರೆಸಿ, ಸೋಯಾ ಸಾಸ್‌, ಟೊಮೇಟೊ ಸಾಸ್‌, ನಿಂಬೆರಸ ಬೆರೆಸಿಕೊಳ್ಳಿ. ಚಿತ್ರದಲ್ಲಿರುಂತೆ ಅಲಂಕರಿಸಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.

ರಾಹ್ರಾ ಪನೀರ್‌ ಲಸಾನಿಯಾ

ಮೂಲ ಸಾಮಗ್ರಿ : 2 ಚಮಚ ಆಲಿವ್‌ ಆಯಿಲ್‌, 2 ಹೆಚ್ಚಿದ ಟೊಮೇಟೊ, 1 ಸಣ್ಣ ಚಮಚ ಜೀರಿಗೆ, ಹೆಚ್ಚಿದ 1 ದೊಡ್ಡ ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ.

ಪೇಸ್ಟ್ ಗಾಗಿ ಸಾಮಗ್ರಿ : 1-1 ಚಮಚ ಶುಂಠಿ ಪೇಸ್ಟ್, 300 ಗ್ರಾಂ ತುಂಡರಿಸಿದ ಪನೀರ್‌, ಬೆಂದ 5-6 ಲಸಾನಿಯಾ ಶೀಟ್ಸ್ (ರೆಡಿಮೇಡ್‌ ಲಭ್ಯ), 1 ಕಪ್‌ ತುರಿದ ಪ್ರೊಸೆಸ್ಡ್ ಚೀಸ್‌, 1-2 ಹೆಚ್ಚಿದ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, ಗರಂಮಸಾಲ, ಟೊಮೇಟೊ ಸಾಸ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರಿಗೆ ಒಗ್ಗರಣೆ ಕೊಡಿ. ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಅದೇ ಸಮಯದಲ್ಲಿ ಮಿಕ್ಸಿಗೆ ಪೇಸ್ಟಿಗೆ ಬೇಕಾದ ಎಲ್ಲಾ ಸಾಮಗ್ರಿ ಹಾಕಿ ನುಣ್ಣಗೆ ಮಾಡಿಡಿ. ಇದನ್ನು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಪನೀರ್‌ ಸೇರಿಸಿ ಕೈಯಾಡಿಸಿ. 2 ನಿಮಿಷ ಬಿಟ್ಟು ಕೆಳಗಿಳಿಸಿ. ಲಸಾನಿಯಾ ಶೀಟ್‌ಗಳ ಮೇಲೆ ಈ ಪನೀರ್‌ ಮಿಕ್ಸ್ ಹರಡಿಕೊಳ್ಳಿ. ಇದರ ಮೇಲೆ ಚೀಸ್‌ ಹರಡಿ, ಟೊಮೇಟೊ ಸಾಸ್‌ ಹರಡಿಕೊಳ್ಳಿ, ಜೊತೆಗೆ ಟೊಮೇಟೊ ತುಂಡುಗಳೂ ಇರಲಿ. ಇದರ ಮೇಲೆ ಬೇರೊಂದು ಲರನಿಯಾ ಶೀಟ್‌ನಿಂದ ಕವರ್‌ ಮಾಡಿ, ಮೇಲೆ ಉಳಿದ ಚೀಸ್‌ ಉದುರಿಸಿ. ಇದನ್ನು ಬಿಸಿ ಮಾಡಿದ ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ ಚೀಸ್‌ ಕರಗುವವರೆಗೂ ಹದನಾಗಿ ಬೇಕ್‌ ಮಾಡಿ. ಚಿತ್ರದಲ್ಲಿರುವಂತೆ ಕೊ.ಸೊಪ್ಪಿನೊಂದಿಗೆ ಅಲಂಕರಿಸಿ ಸವಿಯಲು ಕೊಡಿ.

ಬೇಕ್ಡ್ ವೆಜಿಟೆಬಲ್ ಲಸಾನಿಯಾ

ಸಾಮಗ್ರಿ : 2 ಕಪ್‌ ಬೆಂದ ಮಿಶ್ರ ತರಕಾರಿ ಹೋಳು (ಕ್ಯಾರೆಟ್‌, ಬೀನ್ಸ್, ಆಲೂ, ಬಟಾಣಿ, ಹೂಕೋಸು, ಗೆಡ್ಡೆಕೋಸು), 2-3 ಈರುಳ್ಳಿ, 1-1 ಸಣ್ಣ ಚಮಚ ಬೆಳ್ಳುಳ್ಳಿ ಶುಂಠಿ ಪೇಸ್ಟ್, 1-1 ಹಸಿರು ಕೆಂಪು ಕ್ಯಾಪ್ಸಿಕಂ, 3-4 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಟೊಮೇಟೊ ಪ್ಯೂರಿ, ತುಸು ಹೆಚ್ಚಿದ ಕೊ.ಸೊಪ್ಪು, ಲೋಫ್ಯಾಟ್‌ ಪನೀರ್‌, ಆಲಿವ್ಸ್, 7-8  ಲಸಾನಿಯಾ ಶೀಟ್ಸ್.

ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಬೇಕು. ನಂತರ ಇದಕ್ಕೆ ಹೆಚ್ಚಿದ ಕ್ಯಾಪ್ಸಿಕಂ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಮಿಶ್ರ ತರಕಾರಿ ಹೋಳು ಹಾಕಿ ಬೆರೆತುಕೊಳ್ಳುವಂತೆ ಮಾಡಿ. ನಂತರ ಉಪ್ಪು, ಖಾರ, ಮಸಾಲೆ ಹಾಕಿ ಕೈಯಾಡಿಸಿ. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ. ನಂತರ ಜಿಡ್ಡು ಸವರಿದ ಓವನ್‌ ಪ್ರೂಫ್‌ ಟ್ರೇಗೆ ಲಸಾನಿಯಾ ಶೀಟ್ಸ್ ಹರಡಿ ಇದನ್ನು 2 ಪದರವಾಗಿ ಹರಡಿಕೊಳ್ಳಿ. ಇದರ ಮೇಲೆ ಪನೀರ್‌ ಪದರ ಬರಲಿ. ಇನ್ನೊಂದಷ್ಟು ಚೀಸ್‌ ಹರಡಿ, ಅದು ಚೆನ್ನಾಗಿ ಕರಗುವವರೆಗೂ ಓವನ್‌ನಲ್ಲಿ 200 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ