ಪ್ರೀತಿ ಒಂದು ಸುಂದರ ಅನುಭವ. ಅದನ್ನು ಶಬ್ದಗಳಲ್ಲಿ ಪ್ರಸ್ತುತಪಡಿಸುವುದು ಅಸಾಧ್ಯ. ಆದರೆ ಯುವಜನರಲ್ಲಿ ಏರಿದ ಪ್ರೀತಿಯ ಅಮಲು ಮದುವೆಯ ಬಳಿಕ ಇಳಿಯತೊಡಗುತ್ತದೆ. ಕೈಯಲ್ಲಿ ಕೈ ಹಾಕಿಕೊಂಡು ಪ್ರೀತಿಯೇ ನನ್ನ ಉಸಿರು ಎನ್ನುತ್ತಾರೆ. ಅಷ್ಟೇ ಬೇಗನೇ ಉಸಿರು ನಿಲ್ಲಿಸುವ ಬಗ್ಗೆ ಮಾತನ್ನಾಡುತ್ತಾರೆ.
ಮದುವೆಯ ಬಳಿಕ ಸಂಬಂಧಕ್ಕೆ ಕಾನೂನು ಮಾನ್ಯತೆ ದೊರೆಯುತ್ತದೆ. ಸಾಮಾಜಿಕ ಮಾನ್ಯತೆ ದೊರೆತ ಬಳಿಕ ನವಜೋಡಿಗೆ ಪರಸ್ಪರರ ಬಗ್ಗೆ ಆಸಕ್ತಿ ಹಾಗೂ ಅಭಿಲಾಷೆಗಳು ಹೆಚ್ಚುತ್ತವೆ. ಈಗ ಅವರು ಪರಸ್ಪರರಲ್ಲಿ ತಮ್ಮದೇ ಆದ ರೀತಿಯಲ್ಲಿ ಬದಲಾವಣೆಯನ್ನು ಬಯಸುತ್ತಾರೆ.
ಬ್ರಿಟಿಷ್ ರಿಚರ್ಸ್ ಏಜೆನ್ಸಿ `ಜಿಂಜರ್’ ವಿವಾಹಿತ ದಂಪತಿಗಳ ಬಗ್ಗೆ ಒಂದು ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ ಹಲವು ರೋಚಕ ಆದರೆ ಅಚ್ಚರಿ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬಂದವು.
ರಿಲೇಶನ್‌ಶಿಪ್ ಎಕ್ಸ್ ಪರ್ಟ್ ಮತ್ತು ಸೈಕಾಲಜಿಸ್ಟ್ ಡೋನಾ ಡಾಬರ್‌ಸನ್ ಹೀಗೆ ಹೇಳುತ್ತಾರೆ, “ಈ ಸಮೀಕ್ಷೆಯಲ್ಲಿ ಕಂಡುಬಂದ ಪ್ರಕಾರ, ನವಜೋಡಿಗೆ ಪರಸ್ಪರರ ಪ್ರೀತಿಯ ಅವಶ್ಯಕತೆ ಎಷ್ಟೊಂದು ಇದೆ ಎಂದು ಅರಿವಾಗುತ್ತದೆ. ಸ್ತ್ರೀಯರಿಗೆ ಹೋಲಿಸಿದಲ್ಲಿ ಪುರುಷರಲ್ಲಿ ತಮ್ಮ ಸಂಗಾತಿಯಿಂದ ಪ್ರೀತಿಯ ಅಧಿಕ ಅಪೇಕ್ಷೆ ಇರುತ್ತದೆ. ಅದೇ ರೀತಿ ಹೆಂಡತಿಯ ಅಪೇಕ್ಷೆ ತನ್ನ ಗಂಡ ಮೊದಲಿನ ದುಶ್ಚಟಗಳನ್ನೆಲ್ಲ ಬಿಡಬೇಕು ಎಂಬುದಾಗಿರುತ್ತದೆ. ಮಾತುಕತೆಯಲ್ಲಿ ತನ್ನ ಮನಸ್ಸು ನೋಯಿಸಬಾರದು ಹಾಗೂ ತನ್ನ ಮಾತುಗಳನ್ನು ಗಮನವಿಟ್ಟು ಆಲಿಸಬೇಕು, ತನ್ನನ್ನು ಹೊಗಳುತ್ತಿರಬೇಕು ಎಂಬುದು ಕೂಡ ಅವಳ ಅಪೇಕ್ಷೆಗಳಾಗಿರುತ್ತವೆ.”
ಪತ್ನಿ ತನ್ನನ್ನು ಹೆಚ್ಚೆಚ್ಚು ಪ್ರೀತಿಸಬೇಕು. ಬೇರೆಯವರಿಗಿಂತ ತನ್ನ ಹೆಂಡತಿ ಹೆಚ್ಚು ಗ್ಲಾಮರಸ್ ಆಗಿ ಕಾಣಬೇಕು ಎಂಬ ಅಪೇಕ್ಷೆ ಕೂಡ ಗಂಡನಿಗಿರುತ್ತದೆ. ತನ್ನ ಹೆಂಡತಿ ದಣಿದು ಸುಸ್ತಾದವಳಂತೆ ಕಂಡುಬರಬಾರದು. ಸದಾ, ಸ್ಮಾರ್ಟ್ ಆಗಿ ಕಂಡುಬರಬೇಕು ಎಂದು ಪತಿ ಅಪೇಕ್ಷಿಸುತ್ತಾನೆ. ಮದುವೆಯ ಬಳಿಕ ಗಂಡಹೆಂಡತಿ ಬಹಳಷ್ಟು ಬದಲಾವಣೆ ಬಯಸುತ್ತಾರೆ. ಈ ಬದಲಾವಣೆ ಏನಾದರೂ ಕಂಡುಬರದೇ ಇದ್ದರೆ ಅವರಲ್ಲಿ ನಿರಾಶೆ ಆವರಿಸುತ್ತದೆ. ಅದೇ ಮುಂದೆ ಅವರಲ್ಲಿ ಅತೃಪ್ತಿಯನ್ನು ಉಂಟುಮಾಡುತ್ತದೆ.
ಬದಲಾವಣೆಯ ದೂರು
ಒಂದೆಡೆ ಹೊಸದಾಗಿ ಮದುವೆಯಾದ ಬಳಿಕ ಗಂಡ ಹೆಂಡತಿ ಪರಸ್ಪರರಲ್ಲಿ ಬದಲಾವಣೆ ಕಾಣಲು ಬಯಸುತ್ತಾರೆ. ಮತ್ತೊಂದೆಡೆ, ಮದುವೆಯಾದ ಬಳಿಕ ಗಂಡ ಹೆಂಡತಿ ಹೀಗೂ ಹೇಳುತ್ತಾರೆ, “ನೀನು ಮೊದಲು ಹೀಗಿರಲಿಲ್ಲ, ಮದುವೆಯ ಬಳಿಕ ಬಹಳ ಬದಲಾಗಿಬಿಟ್ಟೆ.”
ಮದುವೆಯ ಬಳಿಕ ಗಂಡಹೆಂಡತಿ ಸದಾ ಜೊತೆಗೆ ಇರುವುದರಿಂದ, ಅವರು ಬಹಳಷ್ಟು ಪರಸ್ಪರರ ಬಗ್ಗೆ ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಾರೆ. ಮದುವೆಗೂ ಮುನ್ನ ಈ ಸಂಗತಿಗಳು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಉದಾಹರಣೆಗೆ ಸಂಗಾತಿ ಹೆಚ್ಚು ಸಮಯದ ತನಕ ಮಲಗಿಕೊಂಡಿರುವುದು, ಕೆಲಸ ಮುಂದೂಡುವುದು, ಹೆಚ್ಚು ಹೊತ್ತಿನ ತನಕ ಸ್ನಾನದ ಮನೆಯಲ್ಲಿ ಇರುವುದು, ತನ್ನ ಕೋಣೆಯಲ್ಲಿ ಯಾವುದೇ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಹರವಿಕೊಂಡಿರುವುದು ಮುಂತಾದವು.
ಎಷ್ಟೋ ಜನರು ಮದುವೆಗೂ ಮುಂಚೆ ಸಂಗಾತಿಯನ್ನು ಮೆಚ್ಚಿಸಲು ಕೆಲಸ ಮಾಡುತ್ತಿರುವುದನ್ನು ತೋರಿಸುತ್ತಾರೆ. ಆದರೆ ಅದು ಅವರ ಅಭ್ಯಾಸದಲ್ಲಿ ಸೇರ್ಪಡೆ ಆಗಿರುವುದಿಲ್ಲ. ಮದುವೆಯ ಬಳಿಕ ಅವರ ವಾಸ್ತವ ದರ್ಶನ ಆದಾಗ ಸಂಗಾತಿ ಬದಲಾಗಿರುವಂತೆ ಕಂಡುಬರುತ್ತದೆ.
ಮೊದಲು ಹೀಗಿರಲಿಲ್ಲ……
ಸಂದೀಪ್‌ನ ಪ್ರೇಮಿ ವಿಭಾಗೆ ಮದುವೆ ಆಗುತ್ತಿದ್ದಂತೆ, ಆಕೆಗೆ ಸಂದೀಪನ ಹೊಸ ಹೊಸ ಅಭ್ಯಾಸಗಳ ಬಗ್ಗೆ ತಿಳಿಯಿತು. ಆ ಬಗ್ಗೆ ಅವಳಿಗೆ ಎಳ್ಳಷ್ಟೂ ಹಿತ ಎನಿಸಲಿಲ್ಲ. ಮದುವೆಗೂ ಮುಂಚೆ ಸಂದೀಪ್ ಬಹಳ ಟಿಪ್‌ಟಾಪ್ ಇರುವುದನ್ನು ಕಂಡಿದ್ದಳು. ಅವನು ಇಷ್ಟೊಂದು ಟಿಪ್‌ಟಾಪ್ ಆಗಿರಬೇಕೆಂದರೆ, ಮನೆಯಲ್ಲೂ ಕೂಡ ಅವನು ಅದನ್ನೇ ಅನುಸರಿಸುತ್ತಿರಬೇಕೆಂದು ಅವಳು ಅಂದುಕೊಂಡಿದ್ದಳು. ಆದರೆ ಸಂದೀಪ್ ವಾಸ್ತವದಲ್ಲಿ ಹಾಗಿರಲೇ ಇಲ್ಲ. ಅವನು ವಿಭಾಳನ್ನು ಇಂಪ್ರೆಸ್ ಮಾಡಲು ಸ್ಮಾರ್ಟ್ ಆಗಿರುವಂತೆ ತೋರಿಸಿಕೊಂಡಿದ್ದ.
ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಸಂದೀಪ್ ಹಲವು ದಿನಗಳ ಕಾಲ ಸ್ನಾನ ಮಾಡುತ್ತಿರಲಿಲ್ಲ. ಬಾಥ್‌ರೂಮ್ ಬಳಸಿದ ಬಳಿಕ ಫ್ಲಶ್ ಕೂಡ ಮಾಡುತ್ತಿರಲಿಲ್ಲ. ತಮ್ಮ ವಾರ್ಡ್‌ರೋಬ್ ಮತ್ತು ಕೋಣೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಿರಲಿಲ್ಲ. ಅವನ ಈ ದುರಭ್ಯಾಸವನ್ನು ಗಮನಿಸಿ ವಿಭಾ ಹೇಳುತ್ತಿದ್ದುದು ಇಷ್ಟೇ, “ನೀವೆಷ್ಟು ಬದಲಾಗಿಬಿಟ್ಟಿರಿ? ಮೊದಲು ನೀವು ಹಾಗಿರಲಿಲ್ಲ…..” ಆ ಮಾತುಗಳಿಂದ ಅವರಿಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು.
ಬದಲಾವಣೆಯ ಮೂಲದಲ್ಲಿ ಪರಿಸ್ಥಿತಿ
ವಾಸ್ತವದಲ್ಲಿ ಮದುವೆಯಾದ ಹೊಸತರಲ್ಲಿ ಏನೂ ಬದಲಾವಣೆ ಆಗುವುದಿಲ್ಲ. ಅವರ ಯೋಚನೆಯಲ್ಲಾಗಲಿ, ಅವರ ವರ್ತನೆ ಅಥವಾ ಧೋರಣೆಯಲ್ಲಾಗಲಿ ಬದಲಾವಣೆ ಆಗುವುದಿಲ್ಲ. ಹಾಗೊಂದು ವೇಳೆ ಅವರಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ಆ ಬದಲಾವಣೆಗಳು ಅನಾಯಾಸವಾಗಿ ನಮ್ಮ ಜೀವನದ ಜೊತೆಗೆ ಇರುತ್ತವೆ, ಅವು ಬದಲಾಗುತ್ತಿರುವ ಪರಿಸ್ಥಿತಿಗಳ ಜೊತೆಗೆ ಸ್ವಾಭಾವಿಕ ರೀತಿಯಲ್ಲಿ ನಮ್ಮ ಸ್ವಭಾವದಲ್ಲಿ ಶಾಮೀಲಾಗುತ್ತಾ ಹೋಗುತ್ತವೆ.
ಮೊದಲು ಯಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿ ಇತ್ತೋ, ಸ್ವಚ್ಛಂದ ಜೀವನ ನಡೆಸುವುದು ಅಭ್ಯಾಸವೇ ಆಗಿಹೋಗಿತ್ತೋ ಅಂಥವರು ಕೂಡ ಮದುವೆಯ ಬಳಿಕ ಒಂದಾಗಿ ಜೀವನ ನಡೆಸುವರು. ಒಮ್ಮೊಮ್ಮೆ ಸಮಯ ಮತ್ತು ಸೂಕ್ತ ನಿರ್ವಹಣೆಯ ಕೊರತೆ ಕೂಡ ಅವರಿಗೆ ತಮ್ಮ ಸಂಗಾತಿಗೆ ಬದಲಾವಣೆ ಆಗಲು ಅವಕಾಶವನ್ನೇ ಕೊಡುವುದಿಲ್ಲ. ಇದರಿಂದ ಸಂಗಾತಿ ತನ್ನನ್ನು ತಾನು ಉಪೇಕ್ಷಿತ ವ್ಯಕ್ತಿ ಎಂದು ಭಾವಿಸುತ್ತಾರೆ ಮತ್ತು ದೂರು ಹೇಳಲಾರಂಭಿಸುತ್ತಾರೆ.
ಒಂದಿಷ್ಟು ಹೊಂದಾಣಿಕೆ
ಒಂದಿಷ್ಟು ಹೊಂದಾಣಿಕೆ ಸಂಬಂಧದ ಈ ಹೊಸ ಸಸಿಗೆ ನವಜೀವನ ಕೊಡುತ್ತದೆ. ಯಾವ ಯಾವ ಸಂಗತಿಗಳು ನವದಂಪತಿಗಳನ್ನು ಒಗ್ಗೂಡಿಸಲು ಸಹಾಯ ಮಾಡುತ್ತವೆ ಎಂಬುದನ್ನು ಗಮನಿಸಿ.
ಯಾವ ವ್ಯಕ್ತಿಯೂ ಸರ್ವಗುಣ ಸಂಪನ್ನನಲ್ಲ. ಹೀಗಾಗಿ ಸಂಗಾತಿಯನ್ನು ಅವರ ಕೊರತೆ ಸಹಿತವಾಗಿ ಸ್ವೀಕರಿಸಿ. ಕ್ರಮೇಣ ಅವರ ಕೊರತೆಗಳನ್ನು ದೂರಗೊಳಿಸಲು ಪ್ರಯತ್ನ ಮಾಡಿ.
ಒಂದು ವೇಳೆ ಸಂಗಾತಿಯಲ್ಲಿ ಯಾವುದಾದರೂ ಬದಲಾವಣೆಯನ್ನು ಕಾಣಬೇಕೆಂದರೆ ಅವರಿಗೆ ಪ್ರೀತಿಯ ಆಧಾರ ಕೊಡಿ. ಏಕೆಂದರೆ ಕ್ರೋಧ ಮತ್ತು ಒತ್ತಡ ಸಂಬಂಧಗಳ ಬೇರನ್ನು ಒಣಗಿಸುವ ಕೆಲಸ ಮಾಡುತ್ತವೆ.
ಸಂಗಾತಿಯ ಬಗ್ಗೆ ನಂಬಿಕೆ ಇಡಿ. ನಾನು ನಿಮ್ಮ ಕಾಳಜಿ ಹೊಂದಿದ್ದೇನೆ ಎನ್ನುವುದನ್ನು ಹೇಳಿ. ಅದಕ್ಕಾಗಿ ಚಿಕ್ಕಪುಟ್ಟ ಸಮಾರಂಭಗಳಿಗೂ, ಏನಾದರೊಂದು ಉಡುಗೊರೆ ಕೊಟ್ಟು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಏಕೆಂದರೆ ಸಂಗಾತಿಗೆ ನಿಮ್ಮ ಪ್ರಯತ್ನ ಮತ್ತು ಭಾವನೆಗಳು ಹೆಚ್ಚು ಮಹತ್ವ ಎನಿಸುತ್ತವೆ.
ಒಂದು ಸಂಗತಿ ನೆನಪಿನಲ್ಲಿಡಿ, ಯಾವುದೇ ಒಂದು ಸಂಗತಿಯನ್ನು ಬಚ್ಚಿಡುವುದು ಅಥವಾ ಸುಳ್ಳು ಹೇಳುವುದು ಸಂಬಂಧದ ಬಗ್ಗೆ ಪ್ರಶ್ನೆ ಚಿಹ್ನೆ ಉದ್ಭವಿಸುವಂತೆ ಮಾಡುತ್ತದೆ. ನಿಮ್ಮಿಂದ ಆದ ಯಾವುದೇ ತಪ್ಪನ್ನು ಬಚ್ಚಿಟ್ಟುಕೊಳ್ಳುವ ಬದಲು ಪ್ರಾಮಾಣಿಕತೆಯಿಂದ ನಿಮ್ಮ ಮನದಿಂಗಿತವನ್ನು ತಿಳಿಸಿ.
ಮನಸ್ತಾಪ ಮತ್ತು ಮನವೊಲಿಸುವಿಕೆ ಇವೆರಡೂ ಸಂಬಂಧಕ್ಕೆ ಸಂಜೀವಿನಿಯ ಹಾಗೆ ಕೆಲಸ ಮಾಡುತ್ತದೆ. ಸಂಗಾತಿ ಕೂಡ ಮುನಿಸಿಕೊಳ್ಳಬಹುದು. ಆದರೆ ಅಷ್ಟೇ ಬೇಗನೇ ಅವರನ್ನು ಪ್ರೀತಿಯಿಂದ ಮನವೊಲಿಸುವ ಪ್ರಯತ್ನ ಮಾಡಿ.
ಮದುವೆಯ ಬಳಿಕ ನಿಮ್ಮ ಪ್ರೀತಿಗೆ ಒಂದು ಗುರಿ ಸಿಕ್ಕಿತು ಎಂದು ಭಾವಿಸಬೇಡಿ. ಈಗ ನಾನು ಏನೂ ಮಾಡಬೇಕಾದ ಅಗತ್ಯವಿಲ್ಲ ಎಂದೂ ತಿಳಿಯಬೇಡಿ. ಮದುವೆ ಒಂದು ಹಂತ ಅಷ್ಟೇ, ಇಡೀ ಜೀವನವನ್ನು ಸಂಗಾತಿಯೊಂದಿಗೆ ಕಳೆಯಬೇಕಿದೆ. ಸಂಗಾತಿಯನ್ನು ಖುಷಿಯಿಂದಿಡುವ ನಿಮ್ಮ ಪ್ರಯತ್ನ ಸದಾ ಜಾರಿಯಲ್ಲಿಡಿ.
ಪರಸ್ಪರರ ಸಂಬಂಧಿಕರಿಗೆ ಸಂಬಂಧಪಟ್ಟಂತೆ ವಿರಸದ ವಾತಾವರಣ ಸೃಷ್ಟಿಸಬೇಡಿ. ನಿಮ್ಮ ನಿಮ್ಮ ಕುಟುಂಬದವರಿಗೆ ನೀವೇ ಪ್ರಾಮಾಣಿಕರು ಎಂದು ಸಾಬೀತು ಮಾಡಲು ಹೋಗಬೇಡಿ.
ನಾನು ಬೇರೆಯವರಿಗಿಂತ ಶ್ರೇಷ್ಠ ಎಂದು ಸಾಬೀತು ಮಾಡುವ ಸ್ಪರ್ಧೆಯಲ್ಲಿ ತೊಡಗಬೇಡಿ. ಸಂಗಾತಿಯ ಭಾವನೆಗಳಿಗೆ ಗೌರವ ಕೊಡಿ. ಸಾರಿ, ಪ್ಲೀಸ್, ಥ್ಯಾಂಕ್ಯೂನಂತಹ ಶಬ್ದಗಳು ನಿಮ್ಮ ಸಂಬಂಧದ ಹಿರಿಮೆಯನ್ನು ಹೆಚ್ಚಿಸಬಲ್ಲವು.
ಚಿಕ್ಕಪುಟ್ಟ ಸಂಗತಿಗಳನ್ನು ನಿರ್ಲಕ್ಷಿಸಲು ಕಲಿಯಿರಿ. ಸಂಗಾತಿಯ ಬಗ್ಗೆ ಅನಗತ್ಯವಾಗಿ ಸಂದೇಹಪಡಬೇಡಿ. ಎರಡು ಹೃದಯಗಳ ಪವಿತ್ರ ಬಂಧನದ ಮಧ್ಯೆ ಅಹಂಗೆ ಅವಕಾಶ ಕೊಡಬೇಡಿ.
ಮದುವೆಯ ಬಳಿಕ ಆದ ಬದಲಾವಣೆಗಳನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸಲು ಹೋಗಬೇಡಿ. ಅದರ ಬದಲು ಪ್ರತಿಯೊಂದು ಬದಲಾವಣೆ ಅಥವಾ ಪರಿವರ್ತನೆಯನ್ನು ಅರಿತುಕೊಳ್ಳಿ ಮತ್ತು ಅದನ್ನು ಸ್ವೀಕರಿಸಿ ಸಮಯ ಮತ್ತು ಪರಿಸ್ಥಿತಿಗನುಗುಣವಾಗಿ ನಿಮ್ಮನ್ನು ನೀವು ಹೊಂದಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮಿಬ್ಬರ ಜೀವನಕ್ಕೆ ಇದು ಒಂದು ಉತ್ತಮ ತಿರುವು ಕೊಡಬಹುದು. ಪರಸ್ಪರರಿಂದ ಆದ ತಪ್ಪುಗಳನ್ನು ಕ್ಷಮಿಸುತ್ತ ಮುಗುಳ್ನಗುತ್ತ ಸಾಗಿ.
– ಪಿ. ಪೂರ್ಣಿಮಾ