ಕಥೆ – ಸಿ. ಶಕುಂತಲಾ

ಮದುವೆ ಆಗಿ 6 ತಿಂಗಳ ನಂತರ ದೀಪಾ ಮೊದಲ ಸಲ ಮೈಸೂರಿನ ಸಣ್ಣ ಹೋಬಳಿಯಾದ ತನ್ನ ತವರಿಗೆ ಬಂದಿದ್ದಳು. ಅಲ್ಲಿನ ಅನೇಕ ಮೊಹಲ್ಲಾಗಳಲ್ಲಿ ಇವರದೂ ಒಂದು. ಅಲ್ಲಿನ ಮನೆಗಳು ಅಕ್ಕಪಕ್ಕದಲ್ಲಿ ಬಹಳ ಅಂಟಿಕೊಂಡಂತೆ ಇದ್ದವು. ದೀಪಾಳ ಪತಿ ಸಂತೋಷ್‌ ಇವಳನ್ನು  ತವರಲ್ಲಿ ಬಿಟ್ಟು, ತನ್ನ ಪ್ರಾಜೆಕ್ಟ್ ಕೆಲಸಕ್ಕಾಗಿ ಮುಂದಿನ ವಾರ ಲಂಡನ್ನಿಗೆ ಹೊರಡಲಿದ್ದ. ಕೆಲಸದ ಸಲುವಾಗಿ 5-6 ತಿಂಗಳಿಗೊಮ್ಮೆ ಆತ ಹೀಗೆ ವಿದೇಶ ಪ್ರವಾಸ ಹೊರಡುತ್ತಿದ್ದುದು ಅಪರೂಪವಲ್ಲ. ಒಮ್ಮೆ ಹೋದರೆ ಮರಳಿ ಬರಲು 3-4 ವಾರಗಳೇ ಆಗುತ್ತಿತ್ತು.

ಹೀಗಾಗಿಯೇ ದೀಪಾ ಮದುವೆಯ ನಂತರ ಮೊದಲ ಬಾರಿ ತವರಿಗೆ ಬಂದಿದ್ದಳು. ನಿವೃತ್ತರಾದ ಅವಳ ತಂದೆ ಯಾರೋ ಪರಿಚಿತರನ್ನು ಭೇಟಿಯಾಗಲು ಬೆಳಗ್ಗೆಯೇ ಹೊರಟಿದ್ದರು. ಏನೋ ಹರಟುತ್ತಾ ಇವಳು ತಾಯಿಯ ಜೊತೆ ಮಹಡಿಯಲ್ಲಿ ನಿಂತಿದ್ದಳು. ಆಗ ತಾನೇ ಸಂಜೆ 6 ಗಂಟೆ ಆಗಲಿತ್ತು. ಇವರ ನೆರೆಮನೆಯಂತೂ ತೀರಾ ಇವರ ಗೋಡೆಗೆ ಅಂಟಿತ್ತು. ಹಿಂದೆ ಅಲ್ಲಿ ಒಬ್ಬ ಹುಡುಗ ಅವಿನಾಶ್‌ವಾಸಿಸುತ್ತಿದ್ದ. ಇವಳಿಗಿಂತ 2-3 ವರ್ಷ ದೊಡ್ಡವನು. ಇವರಿಬ್ಬರೂ ಒಟ್ಟಿಗೆ ಹೈಸ್ಕೂಲು ಕಲಿತವರು. ಇವಳು 10ನೇ ಕ್ಲಾಸಿಗೆ ಬರುವಷ್ಟರಲ್ಲಿ ಅವನು ಡಿಗ್ರಿ ಮೊದಲ ವರ್ಷ ಸೇರಿದ್ದ. ದೀಪಾವಳಿಗೆ ಇದ್ದಕ್ಕಿದ್ದಂತೆ ಅವನ ನೆನಪಾಯಿತು. ತಕ್ಷಣ ಅವಳು ರೇವತಿಯನ್ನು ಕೇಳಿದಳು, “ಅಮ್ಮಾ…. ಅವಿನಾಶ್‌ ಎಲ್ಲಿ….. ಕಾಣಿಸ್ತಾ ಇಲ್ಲ….?”

“ಓ….. ಅವನಾ…. ಈಗೆಲ್ಲಿದ್ದಾನೋ ಏನೋ, ಒಂದೂ ಗೊತ್ತಿಲ್ಲ. ಒಳ್ಳೆ ಹುಡುಗ ಕಣೆ. ನಿನ್ನ ಮದುವೆ ಫಿಕ್ಸ್ ಆಯ್ತು, ಅದಕ್ಕೆ 1 ವಾರ ಮೊದಲೇ ಈ ಬಾಡಿಗೆ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಅಂತ ಹೇಳ್ತಾರಪ್ಪ….. ಅದಕ್ಕಿಂತ ಹೆಚ್ಚಿಗೇನೂ ಗೊತ್ತಿಲ್ಲ ಬಿಡು.”

ದೀಪಾ ಕೆಳಗಿಳಿದು ಅಡುಗೆಮನೆಗೆ ಹೋಗಿ ಟೀ ಮಾಡೋಣವೆಂದು ಬಿಸಿ ನೀರು ಕಾಯಿಸಿದಳು. ಅವಳಿಗೆ ತನ್ನ ಹಳೆಯ ದಿನಗಳೆಲ್ಲ ನೆನಪಿಗೆ ಬಂದವು. ಅವಳ ಮನಸ್ಸು ಅರಿಯದ ನೋವಿನಿಂದ ತುಡಿಯಿತು. ಈಗೇಕೋ ತಕ್ಷಣ ಯಾವುದರಲ್ಲೂ ಆಸಕ್ತಿ ಇಲ್ಲ ಎನಿಸತೊಡಗಿತು. ಅವಳು ಒಂದು ಟ್ರೇನಲ್ಲಿ ಎರಡು ಕಪ್‌ ಇರಿಸಿ ಟೀ ತುಂಬಿಸಿ, 4 ಬಿಸ್ಕತ್ತಿನ ಸಮೇತ ಮೆಟ್ಟಿಲೇರಿ ಮೇಲೆ ಬಂದಳು. ಅವಳ ಮನಸ್ಸು ಮಾತ್ರ ಎಲ್ಲೋ ತೂಗುಯ್ಯಾಲೆ ಆಡುತ್ತಿತ್ತು.

ಒಂದೊಂದೇ ಹೆಜ್ಜೆ ಎತ್ತಿಡುತ್ತಾ ನಿಧಾನವಾಗಿ ಅಮ್ಮನಿದ್ದ ಕಡೆ ನಡೆದು ಬಂದಳು. ಅಲ್ಲಿ ರೇವತಿ ಪಕ್ಕದ ಮನೆ ಪಂಕಜಾರ ಬಳಿ ಹರಟುತ್ತಿದ್ದರು. ದೀಪಾಳಿಗಿದ್ದ ಮನಸ್ಥಿತಿಯಲ್ಲಿ ಪಂಕಜಾರ ಮಾತುಗಳಿಗೆ ಉತ್ತರಿಸಲು ಆಗಲಿಲ್ಲ.  ಹೀಗಾಗಿ ಅವರಿಬ್ಬರಿಗೂ ಟೀ ಕೊಟ್ಟು ತಾನು ಬೇರೆ ಬೆರೆಸಿಕೊಳ್ಳುತ್ತೇನೆ ಎಂದು ಕೆಳಗೆ ಹೊರಟುಹೋದಳು. ಅದೇಕೋ ಟೀ ಬೇಡವೆನಿಸಿ ಕೆಳಗೆ ಬಂದು ಹಿತ್ತಲಿನ ಗಿಡಗಳ ಬಳಿ ನಿಂತಳು. ಒಗೆಯೋ ಕಲ್ಲು ಬಂಡೆ ಬಳಿ ಕುಳಿತಾಗ ಹಿಂದಿನ ನೆನಪಿನ ಸುರುಳಿ ಬಿಚ್ಚಿಕೊಂಡಿತು. ಇದ್ದಕ್ಕಿದ್ದಂತೆ ಕರೆಂಟ್‌ ಹೋಯಿತು.

ಅಂದೂ ಹಾಗೇ ಆಗಿತ್ತು. 10ನೇ ತರಗತಿಯ ಅರ್ಧ ವಾರ್ಷಿಕ  ಪರೀಕ್ಷೆ ನಡೆಯುತ್ತಿತ್ತು. ಕರೆಂಟ್‌ ಹೋಯಿತೆಂದು ಗಾಳಿ ಸಿಗಲಿ ಎಂದು ಮಹಡಿಗೆ ಬಂದಿದ್ದಳು. ಅವಿನಾಶ್‌ ಆಸಕ್ತಿಯಿಂದ ಕೈ ಬೀಸಿ ಮುಗುಳ್ನಕ್ಕ. ಒಳಗೆ ಭಯವಿದ್ದರೂ ಮುಖ ಮಂದಹಾಸ ಬೀರಿತು. ಅವಳು ನಿಂತಿದ್ದ ಮಹಡಿ ಕಾಂಪೌಂಡ್‌ ಗೋಡೆ ಬಳಿ ಬಂದವನೆ, ತನ್ನ ಕಾಲೇಜಿನ ಅದೂ ಇದೂ ವಿಷಯ ಮಾತನಾಡುತ್ತಾ, ಇವಳ ಪರೀಕ್ಷೆ ಬಗ್ಗೆ ವಿಚಾರಿಸುತ್ತಾ, ಒಂದು ಸಣ್ಣ ಕಾದಂಬರಿ ಮಧ್ಯೆ, ಒಂದು ಪತ್ರವನ್ನಿರಿಸಿ ಇವಳ ಕೈಗೆ ಕೊಟ್ಟವನೇ ನಸುನಗುತ್ತಾ ಅಲ್ಲಿಂದ ಕಣ್ಮರೆಯಾದ.

ದೀಪಾ ಹೀಗೆ ಅವಿನಾಶ್‌ನನ್ನು ಮಹಡಿಯಲ್ಲಿ ಭೇಟಿ ಆಗುತ್ತಿದ್ದುದು ಇದೇ ಮೊದಲೇನಲ್ಲ. ಅವಳು ಎಷ್ಟೋ ಸಲ ಮೇಲೆ ಹಬ್ಬಿಸಿದ್ದ ಮಲ್ಲಿಗೆ ಬಳ್ಳಿಯಿಂದ ಹೂ ಕೀಳಲು, ಒಗೆದ ಬಟ್ಟೆ ಒಣಗಿಸಲು ಮಹಡಿಗೆ ಬರುತ್ತಿದ್ದಳು. ಕೈಲ್ಲೊಂದು ಪುಸ್ತಕ, ಮೊಬೈಲ್‌ಹಿಡಿದು  ಅಲ್ಲೇ ಠಳಾಯಿಸುತ್ತಿದ್ದ. ಇವಳನ್ನು ಕಂಡಾಗೆಲ್ಲ ಮುಗುಳ್ನಗು ಬೀರುತ್ತಾ, ಒಮ್ಮೊಮ್ಮೆ  ಕೈ ಬೀಸುತ್ತಿದ್ದ. ಹೆಚ್ಚು ಮಾತುಕಥೆ ಇಲ್ಲ. ಕಾಫಿ ಆಯ್ತಾ, ಊಟ ಆಯ್ತಾ, ಶಾಲೆ ಬಗ್ಗೆ 2 ಮಾತು…. ಹೀಗೇ ನಡೆಯುತ್ತಿತ್ತು. ಒಟ್ಟಾರೆ ಇಬ್ಬರಿಗೂ ಮುಗುಳ್ನಗೆ ವಿನಿಮಯ ಮಾಡಿಕೊಳ್ಳದೆ ಇರಲು ಆಗುತ್ತಿರಲಿಲ್ಲ. ಆ ಸಲಿಗೆಯಲ್ಲೇ ಇಂದು ಅವನು ಅವಳ ಕೈಗೆ ಪ್ರೇಮಪತ್ರ ರವಾನಿಸಿದ್ದ. ಇಂಥದ್ದೇನಾದರೂ ನಡೆಯಬಹುದೆಂದು ಗೆಳತಿಯರ ಅನುಭವದಿಂದ ಬಲ್ಲವಳಾದ ದೀಪಾ, ಢವಢವ ಹೊಡೆದುಕೊಳ್ಳುತ್ತಿದ್ದ ಎದೆಯೊಂದಿಗೆ ಪುಸ್ತಕದ ಸಮೇತ, ವೇಗವಾಗಿ 2-2 ಮೆಟ್ಟಿಲಿಳಿಯುತ್ತಾ, ಓಡಿಬಂದು ತನ್ನ ಕೋಣೆ ಸೇರಿಕೊಂಡಳು. ಬಾಲ್ಯದಿಂದ ಯೌವನಕ್ಕೆ ತಿರುಗಲಿದ್ದ ಆ ಘಟ್ಟ ಹೆಣ್ಣುಮಕ್ಕಳನ್ನು ಬಲು ಗಲಿಬಿಲಿಗೊಳಿಸುತ್ತದೆ. ಒಮ್ಮೆ ಮನಸ್ಸು ಎಲ್ಲವನ್ನೂ ಸಾಧಿಸಬಲ್ಲೆ, ಏನು ಬೇಕಾಗದರೂ ಗೆದ್ದು ಬರಬಲ್ಲೆ ಎದ್ದು ಗರಿಬಿಚ್ಚಿ ಕುಣಿದಾಡಿದರೆ, ಮತ್ತೊಮ್ಮೆ ಹೆದರಿಕೆಯಿಂದ ಕೈಕಾಲೇ ಆಡುತ್ತಿರಲಿಲ್ಲ. ಒಮ್ಮೆ ಮೆಚ್ಚಿದವನನ್ನು ಬಾಹುಗಳಲ್ಲಿ ಸೆಳೆದುಕೊಳ್ಳಲು ಮನಸ್ಸಾದರೆ, ಮತ್ತೊಮ್ಮೆ ತಾನೇ ಅವನ ಬಾಹುಗಳಲ್ಲಿ ಅಡಗಿಹೋಗಲು ಮನ ಕಾತರಿಸುತ್ತಿತ್ತು.

ಅವಸರದಲ್ಲಿ ಆ ಪತ್ರ ತೆಗೆದು ಓದಿದಳು. “ದೀಪಾ….. ನೀನು ಮುಗುಳ್ನಕ್ಕಾಗ ಬಹಳ ಸುಂದರವಾಗಿ ಕಾಣುತ್ತಿ. ನಿನ್ನ ಮುಗ್ಧ ಮನೋಹರ ರೂಪವನ್ನು ನೋಡುತ್ತಲೇ ಇರೋಣ ಅನಿಸುತ್ತೆ….. ನನಗಂತೂ ಆ ನಿನ್ನ ಕಣ್ಣೋಟ ಬಹಳ ಖುಷಿ ಕೊಡುತ್ತದೆ. ನನ್ನೆಲ್ಲ ಕೆಲಸಗಳಿಗೂ ನೀನೇ ಸ್ಛೂರ್ತಿ!”

ಆ ಸಾಲುಗಳನ್ನು ಅವಳು ಅದೆಷ್ಟು ಸಲ ಓದಿಕೊಂಡಳೋ ಏನೋ! ಅದೇನೂ ಮಹಾ ಪ್ರೇಮ ನಿವೇದನೆಯಲ್ಲ. ಆದರೂ ಆ ಸಾಲುಗಳಲ್ಲಿದ್ದ ಸೆಳೆತ ಅವಳನ್ನು ಮತ್ತೆ ಮತ್ತೆ ಓದುವಂತೆ ಮಾಡಿತು. ಹೀಗೇ ದಿನಗಳು ಕಳೆದವು. ದೂರದಿಂದ ಕಂಡಾಗ ಮುಗ್ಧ ನಗೆಯ ವಿನಿಮಯ, ಮಹಡಿಗೆ ಬಂದಾಗೆಲ್ಲ ಕೈ ಬೀಸಿ ಪರಿಚಯದ, ಸ್ನೇಹ ನಗು…. ಒಟ್ಟಾರೆ ಇಬ್ಬರಿಗೂ ಏನೋ ಪುಳಕ! ಹೆಚ್ಚಿಗೆ ಮಾತಿಲ್ಲ, ಪರಸ್ಪರ ಬಿಟ್ಟಿರಲಾಗದೆ ನೆಪ ಹುಡುಕಿ ಮಹಡಿಗೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ದೀಪಾಳ ಅಕ್ಕಾ ಮಾಲತಿಯ ಮದುವೆ ಫಿಕ್ಸ್ ಆಯಿತು. ಹುಡುಗ ದೂರದ ಮಂಗಳೂರಿನಲ್ಲಿ ಮೆರೈನ್‌ ಎಂಜಿನಿಯರ್‌. ಮೈಸೂರನ್ನು ತೊರೆದು ದೂರ ಹೊರಡಲಿರುವ ಅಕ್ಕನನ್ನು ಬಿಟ್ಟಿರುವುದು ಅವಳಿಗೆ ಕಷ್ಟವಾಯಿತು. ಮದುವೆ ಸಲುವಾಗಿ ವಧು ಜೊತೆ ಅವಳೂ ಕೈ ತುಂಬಾ ಮೆಹಂದಿ ಹಾಕಿಸಿಕೊಂಡಳು.

ಸಂಜೆ ಬೇಗ ಆಗಬಾರದೇ, ಅವಿನಾಶ್‌ ಮಹಡಿಗೆ ಬಂದ ತಕ್ಷಣ ತನ್ನ ಮೆಹಂದಿ ಡಿಸೈನ್‌ ಅವನಿಗೆ ತೋರಿಸೋಣ ಎಂದು ಅವಳು  ಹಲವು ಸಲ ಅಂದುಕೊಂಡಳು. ಎಂದಿನಂತೆ ಅವಿನಾಶ್‌ ಕೈಯಲ್ಲೊಂದು ಕಾಫಿ ಗ್ಲಾಸ್‌ ಹಿಡಿದು ಮಹಡಿಗೆ ಬಂದಿದ್ದ. ಸುಳಿವು ದೊರೆತ ದೀಪಾ ಮೇಲೆ ಓಡಿದಳು. ಇವಳನ್ನು ಕಂಡದ್ದೇ ನಸನಗುತ್ತಾ ಅವನು ಕೈ ಬೀಸಿದ. ಅದಕ್ಕಾಗಿ ಕಾದಿದ್ದವಳಂತೆ ಮೆಹಂದಿ ಹಚ್ಚಿದ್ದ ತನ್ನೆರಡೂ ಕೈಗಳನ್ನೂ ಚಾಚಿ ಅವನಿಗೆ ಸ್ಪಷ್ಟ ಕಾಣುವಂತೆ ಗೋಡೆ ಬಳಿ ಬಂದು ನಿಂತಳು. ಅವನೂ ಉತ್ಸಾಹದಿಂದ ಗೋಡೆ ಬಳಿ ಬಂದು ನಿಂತು, ಇವಳ ಕೈಗಳನ್ನೇ ಗಮನಿಸಿದ. ಯಾವುದೋ ಅರಿಯದ ಆಕರ್ಷಣೆ ಇಬ್ಬರನ್ನೂ ಹತ್ತಿರ ಸೆಳೆದಿತ್ತು. ಅದೇನಾಯ್ತೋ…. ಅವಿನಾಶ್‌ ಅವಳ ಕೈ ತೆಗೆದುಕೊಂಡು ಹೂ ಮುತ್ತನ್ನಿಟ್ಟ. ಮೊಟ್ಟ ಮೊದಲ ಚುಂಬನದಿಂದ ಶಾಕ್‌ಗೆ ಒಳಗಾದ ದೀಪಾ, ಸರಕ್ಕನೆ ತನ್ನ ಕೈ ಹಿಂದಕ್ಕೆ ಎಳೆದುಕೊಂಡು ಸರಸರ ಇಳಿದು ಕೆಳಗೆ ಹೊರಟುಹೋದಳು. ಆ ರಾತ್ರಿ ನಿದ್ದೆ ಇಲ್ಲ. ಏನೋ ಭಯ…..  ಏನೋ ರೋಮಾಂಚನ……ಇವರ ಮನೆಯವರು ಕರೆದಿದ್ದರೆಂದು ಓನರ್‌ ಮನೆಯವರ ಜೊತೆ ಅವಿನಾಶ್‌ ಸಹ ಮಾಲತಿಯ ಮದುವೆ ಮುಹೂರ್ತ, ಆರತಕ್ಷತೆ ಎರಡಕ್ಕೂ ಬಂದಿದ್ದ. ಅಕ್ಕನ ಮದುವೆಯ ಗಡಿಬಿಡಿ ಓಡಾಟದ ಮಧ್ಯೆ ಕದ್ದುಮುಚ್ಚಿ ಅವನು ತನ್ನನ್ನೇ  ನೋಡುತ್ತಿದ್ದಾನೆ, ಬೇರೆಯವರನ್ನು ಗಮನಿಸುತ್ತಿಲ್ಲ ತಾನೇ ಎಂದು ಆಗಾಗ ಖಾತ್ರಿಪಡಿಸಿಕೊಳ್ಳುವಳು. ಪಾನಕ ಕೊಡುವುದಿರಲಿ, ಕೊಬ್ಬರಿ ಸಕ್ಕರೆ ಹಂಚುವುದಿರಲಿ, ಊಟಕ್ಕೆ ಎಲೆ ಹಾಕಿಸುವಾಗಲೂ ಅವನಿಗಾಗಿ ವಿಶೇಷ ಆದರೋಪಚಾರ ಇರುತ್ತಿತ್ತು. ಎಲ್ಲರೂ ಇದ್ದುದರಿಂದ ಕಣ್ಣಲ್ಲೇ ಮಾತುಕಥೆ ನಡೆಯುತ್ತಿತ್ತು. ಹೀಗೆ ಸಂಭ್ರಮದ ಕಣ್ಣಾಮುಚ್ಚಾಲೆ ಆಟದ ಮಧ್ಯೆ ಮದುವೆ ಮುಗಿದು ಅಕ್ಕನನ್ನು ಮಂಗಳೂರಿಗೆ ಕಳುಹಿಸಿದ್ದಾಯಿತು. ಅವಕಾಶ ಸಿಕ್ಕಿದಾಗೆಲ್ಲ ಅವಿನಾಶ್‌ ದೀಪಾಳಿಗೆ ಮಹಡಿಯಲ್ಲಿ ಪ್ರೇಮಪತ್ರ ತಲುಪಿಸುತ್ತಿದ್ದ. ಇಬ್ಬರ ಬಳಿ ಮೊಬೈಲ್‌ ಇದ್ದರೂ ಮೆಸೇಜ್‌ಗಳ ಬದಲು ಈ ರೀತಿ ಸಂದೇಶ ತಲುಪಿಸುವುದೇ ಹೆಚ್ಚು ರೋಮಾಂಚಕಾರಿ ಎನಿಸುತ್ತಿತ್ತು. ಎಲ್ಲೂ ಯಾರಿಗೂ ಯಾವ ಸುಳಿವು ಸಿಗದಿರಲು ಆ ವಿಧಾನವೇ ಸುರಕ್ಷಿತವೇನೋ……

`ಹೀಗೆ  ಸದಾ ನಸುನಗುತ್ತಾ ಇರು…. ‘ ಎಂದು ಆ ಪತ್ರಗಳಲ್ಲಿ ಬರೆದಿರುತ್ತಿದ್ದ. ದೀಪಾಳಿಗೆ ಆ ಸಂದೇಶ ಬಹಳ ಇಷ್ಟವಾಗುತ್ತಿತ್ತು. ಆದರೆ ಎಂದೂ ಜವಾಬು ಕೊಡಲು ಹೋಗುತ್ತಿರಲಿಲ್ಲ.

ಹೀಗೆ ಅವಳು ಪಿ.ಯು.ಸಿ ಮುಗಿಸಿ ಡಿಗ್ರಿ ಕಾಲೇಜಿಗೆ ಸೇರಿಯಾಗಿತ್ತು. ಅವಿನಾಶ್‌ಕೆಲಸ ಹುಡುಕುತ್ತಿದ್ದ. ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾರ್ಟ್‌ಟೈಂ ಕೆಲಸಗಳಲ್ಲಿ ಕಾಲ ಕಳೆಯುತ್ತಿದ್ದ. ಖಾಯಂ ಆದ ಉತ್ತಮ ನೌಕರಿ ಇರಲಿಲ್ಲ.

ದೀಪಾ ಆಗ ತಾನೇ ಪದವಿಯ ಎರಡನೇ ವರ್ಷಕ್ಕೆ ಕಾಲಿಟ್ಟಳು. ಅಷ್ಟರಲ್ಲಿ ಅಕ್ಕನ ಕಡೆಯಿಂದ ಸಮಾಚಾರ ಬಂತು. ದೀಪಾಳ ತಾಯಿ ತಂದೆಯರಿಗೆ ಸಂತಸ ನೀಡುವ ಸುದ್ದಿ. ಬೆಂಗಳೂರಿನಲ್ಲಿ ದೊಡ್ಡ ಖಾಸಗಿ ಎಂಎನ್‌ಸಿ ಕಂಪನಿಯ ಉನ್ನತ ಹುದ್ದೆಯಲ್ಲಿದ್ದ ಸಾಫ್ಟ್ ವೇರ್‌ ಎಂಜಿನಿಯರ್‌ ಹುಡುಗನ ಕಡೆಯವರು ದೀಪಾಳನ್ನು ಕೇಳಿರುವ ವಿಚಾರವದು.

ದೀಪಾಳಿಗೆ ವಿಚಾರ ಕೇಳಿ ಗಂಟಲಲ್ಲಿ ಚೆಂಡು ಸಿಕ್ಕಿಕೊಂಡಿತು. “ಅಯ್ಯೋ….. ಇನ್ನೂ ಡಿಗ್ರಿನೇ ಮುಗೀಲಿಲ್ಲ,” ದೀಪಾಳ ಮಾತು ಪೂರೈಸುವಷ್ಟರಲ್ಲಿ ಕಂಗಳು ತುಂಬಿದ್ದವು.

“ಇರಲಿ ಸುಮ್ಮನಿರಮ್ಮ….. ಇಂಥ ಒಳ್ಳೆ ಹುಡುಗ ಹುಡುಕಿಕೊಂಡು ಬಂದಿರುವಾಗ ಈ ಸಂಬಂಧ ತಪ್ಪಿಸಬಾರದು. ಹುಡುಗನನ್ನು ಒಪ್ಪಿಸಿ ನೀನು ಬಾಕಿ ಡಿಗ್ರಿ ಅಲ್ಲೇ ಮುಗಿಸು,” ಎಂದು ಇವಳ ಮಾತನ್ನು ತಳ್ಳಿಹಾಕಿದರು.

ಅನುಕೂಲಸ್ಥ ಮನೆತನ, ಒಬ್ಬನೇ ಮಗ. ಶಿವಮೊಗ್ಗಾದಲ್ಲಿ ಅತ್ತೆ, ಮಾವ, ಮದುವೆಯಾದ ನಾದಿನಿಯ ಪರಿವಾರ. ಯಾವ ವಿಧದಲ್ಲೂ ಹುಡುಗ ತೆಗೆದುಹಾಕುವ ಹಾಗಿರಲಿಲ್ಲ. ಯಾವ ಕಾರಣ ಕೊಟ್ಟು ಈ ಹುಡುಗನನ್ನು ಬೇಡ ಎನ್ನಲಿ….? ದೀಪಾಳಿಗೆ ಏನೇನೂ ಹೊಳೆಯಲಿಲ್ಲ.

ಮಾರನೇ ದಿನ ಭಾನುವಾರ ಬೆಳಗ್ಗೆ ಬಟ್ಟೆ ಒಣಹಾಕಲು ದೀಪಾ ಮಹಡಿ ಏರಿದಳು. ಹಸನ್ಮುಖನಾಗಿ ಅವಿನಾಶ್‌, ಮೊಬೈಲ್‌ನಲ್ಲಿ ಇವಳ 1-2 ಫೋಟೋ ಸೆರೆಹಿಡಿದ. ಮಾತನಾಡಿಸಲೆಂದು ಗೋಡೆ ಬಳಿ ಬಂದು ನೋಡುತ್ತಾನೆ…… ದೀಪಾಳ ಕಂಗಳಲ್ಲಿ ಕಂಬನಿಯ ಧಾರೆ……

“ಮನೇಲಿ ನನ್ನ ಮದುವೆ ಫಿಕ್ಸ್ ಮಾಡಿದ್ದಾರೆ….. ಆ ಹುಡುಗನ್ನ ಬೇಡ ಅನ್ನಲು ಕಾರಣಗಳೇ ಇಲ್ಲ….”

ಶಾಕ್‌ ತಗುಲಿದ ಅವಿನಾಶ್‌ಏನೂ ಮಾತನಾಡಲಿಲ್ಲ. ಇಬ್ಬರೂ ಪರಸ್ಪರ ದಿಟ್ಟಿಸುತ್ತಾ 2 ನಿಮಿಷ ಹಾಗೇ ನಿಂತುಬಿಟ್ಟರು. “ದೀಪಾ…..” ಅಮ್ಮ ಏನೋ ಕೆಲಸಕ್ಕಾಗಿ ಕೆಳಗಿನಿಂದ ಕರೆದಾಗ, ದಡಬಡಿಸಿ ದೀಪಾ ಕೆಳಗೆ ಓಡಿದಳು. ಅವಿನಾಶ್‌ ಕೈಲಿಂದ ಮೊಬೈಲ್‌ ಜಾರಿ ಕೆಳಗೆ ಬಿದ್ದಿತ್ತು.

ಮತ್ತೆ 2-3 ದಿನ ಅವರು ಭೇಟಿ ಆಗಲು ಸಾಧ್ಯವಾಗಲಿಲ್ಲ. ಅದರ ಮುಂದಿನ ಭಾನುವಾರ ದೀಪಾ ಮಲ್ಲಿಗೆ ಕೀಳಲು ಮೇಲೆ ಬಂದಳು. ಅವಿನಾಶ್‌ ಮಹಡಿಯ ಗೋಡೆ ಬಳಿ ನಿಂತಿದ್ದ. ವಾರದ ಗಡ್ಡ….. ಸೋತ ಮುಖ…. ಕಳೆಯೇ ಇರಲಿಲ್ಲ. ಅವನನ್ನು ಕ್ಷಣ ಮಾತ್ರ ದಿಟ್ಟಿಸಿ ದೀಪಾ ಬೇಗ ಬೇಗ ಹೂ ಕೀಳತೊಡಗಿದಳು.

“ಇನ್ನೂ ಯಾವ ಗಟ್ಟಿ ಕೆಲಸ ಕನ್‌ಫರ್ಮ್ ಆಗಿಲ್ಲ. ನಾನು ಯಾವ ಧೈರ್ಯದಲ್ಲಿ ನಿನ್ನನ್ನು ಮನೆ ಬಿಟ್ಟು ಬಾ ಎನ್ನಲಿ…..” ಅಸಹಾಯಕತೆ ಧ್ವನಿಯಲ್ಲಿ ಮಡುಗಟ್ಟಿತ್ತು. ದೀಪಾಳ ಕಂಗಳು ತುಂಬಿಬಂದವು. ಏನೊಂದು ಉತ್ತರಿಸಲಾರದೆ ಅವಳು ಸರಸರನೆ ಕೆಳಗೆ ಹೊರಟುಹೋದಳು.

ಅದಾದ ಮೇಲೆ  ದೀಪಾಳ ಮದುವೆಯ ತಯಾರಿ ಭರದಿಂದ ನಡೆಯಿತು. ಲಗ್ನಪತ್ರಿಕೆ ಆದ ತಿಂಗಳಿಗೆ ಮದುವೆ ಮುಹೂರ್ತ. ಎಂದಿನಂತೆ ದೀಪಾಳ ತಾಯಿತಂದೆ ಅವಿನಾಶ್‌ನ ಓನರ್‌ ಮನೆಯವರೊಂದಿಗೆ ಅವನನ್ನೂ ಮದುವೆಗೆ ಕರೆದರು.

“ಬಹಳ ಬೇಗ ಎರಡನೇ ಮಗಳ ಮದುವೆ ದಾಟಿಸಿಬಿಟ್ಟಿರಿ…..” ಅವರು ಹೇಳಿದಾಗ ಹೆಮ್ಮೆಯಿಂದ ರೇವತಿ ಉತ್ತರಿಸಿದರು. “ಎಲ್ಲಾ ನಮ್ಮ ಹಿರೀ ಮಗಳು, ಅಳಿಯಂದೇ ಓಡಾಟ…..”

ಅವಿನಾಶ್‌ ಮಾರನೇ ದಿನವೇ ಮನೆ ಖಾಲಿ ಮಾಡಿದ್ದ. ತನ್ನ ಮದುವೆಗಾಗಿ ದೀಪಾ ಕೈ ತುಂಬ ಮೆಹಂದಿ ಹಾಕಿಸಿಕೊಂಡಾಗ, ಅಕ್ಕನ ಮದುವೆಯ ಸಂದರ್ಭ ನೆನಪಾಗಿ ಮನಸ್ಸು ಭಾರವಾಯಿತು.

ಹೊರಡುವ ಮುನ್ನ ಅವಿನಾಶ್‌ ಚಿಕ್ಕ ಹುಡುಗನ ಮೂಲಕ ಕೊನೆಯ ಸಂದೇಶ ಕಳುಹಿಸಿದ್ದ, `ಮದುವೆಯ ಶುಭಾಶಯಗಳು! ನಿನ್ನ ಬಾಳು ಎಂದೆಂದೂ ಹಸನಾಗಿರಲಿ….. ಅತ್ತೆಮನೆಯಲ್ಲೂ ಸದಾ ನಸುನಗುತ್ತಾ ಇರು….. ನಿನ್ನ ಮದರಂಗಿ ಹಚ್ಚಿದ ಕೈಗಳನ್ನು  ನೋಡುವ ಭಾಗ್ಯ ನನಗಿಲ್ಲ….. ಕೆಲಸ ಹುಡುಕಿ ಬೇರೆ ಕಡೆ ಹೊರಟಿದ್ದೇನೆ….. ಆಲ್ ದಿ ಬೆಸ್ಟ್!’

ಮದುವೆ ಮುಗಿದು ದೀಪಾ ಬೆಂಗಳೂರಿಗೆ ಗಂಡನ ಮನೆಗೆ ಬಂದಾಯ್ತು. ಸಂತೋಷ್‌ ಅವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪತಿ. ಮೈಸೂರಿನ ಕಾಲೇಜಿನಿಂದ  ಟಿ.ಸಿ. ತರಿಸಿ, ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಸೇರಿಸಿ ಅವಳು ಪದವಿಯ ದ್ವಿತೀಯ ವರ್ಷ ಮುಂದುವರಿಸಲು ಸಹಕರಿಸಿದ. 3-4 ತಿಂಗಳಿಗೊಮ್ಮೆ ಅನಿವಾರ್ಯ ಫಾರಿನ್‌  ಟೂರ್‌ ಹೊರಡಬೇಕಿತ್ತು. ಯಾವ ಕುಂದುಕೊರತೆ ಇಲ್ಲದೆ ದೀಪಾಳ ವೈವಾಹಿಕ ಜೀವನ ಮುಂದುವರಿಯಿತು. ಸಂತೋಷ್‌ಗೆ  ಕ್ರಿಕೆಟ್‌ದೊಂದು ಹುಚ್ಚು. ಬಿಡುವು ಸಿಕ್ಕಾಗೆಲ್ಲ ಗೆಳೆಯರ ತಂಡ ಕಟ್ಟಿಕೊಂಡು ಬ್ಯಾಟ್‌ಹಿಡಿದು ಹೊರಟು ಬಿಡುತ್ತಿದ್ದ. ಇವಳಿಗೆ ಕಾಲೇಜಿನ ವ್ಯಾಸಂಗದ ಕಡೆಯೂ ಗಮನ ಹರಿಸಬೇಕಿತ್ತು. ಹೀಗಾಗಿ ತಕರಾರಿಲ್ಲದೆ ಅವಳ ಬಾಳು ಸಾಗಿತು.

ಹೀಗೆ ಆಲೋಚಿಸುತ್ತಿದ್ದ ದೀಪಾಳನ್ನು ತಾಯಿ ರೇವತಿಯ ಧ್ವನಿ ಎಚ್ಚರಿಸಿತು, “ದೀಪಾ, ಈ ಕಪ್‌ ತಗೊಂಡು ಹೋಗಮ್ಮ….” ದೀಪಾ ಮತ್ತೆ ಮೇಲೆ ಬಂದು ಔಪಚಾರಿಕವಾಗಿ ಪಕ್ಕದಮನೆ ಪಂಕಜಮ್ಮನವರನ್ನು ಮಾತನಾಡಿಸಿ ಕೆಳಗಿಳಿದಳು. ಮಾರನೇ ದಿನ ಅಮ್ಮ ಹೇಳುತ್ತಿದ್ದರು, “ದೀಪಾ, ಸಂಜೆ ಮುಂದಿನ ಬೀದಿ ಮೋಹಿನಿಯ ಲಗ್ನಪತ್ರಿಕೆ ಇದೆ. ನಿನಗಿಂತ 1 ವರ್ಷ ಜೂನಿಯರ್‌ಅಂತೆ. ಮೊನ್ನೆ ಅವರ ಮನೆಯವರು ಫೋನ್‌ ಮಾಡಿ ಕರೆದಿದ್ದಾರೆ. ಸರಳವಾಗಿ ಮನೆ ಮುಂದೆ ಪೆಂಡಾಲ್ ಹಾಕಿ ಇಲ್ಲೇ ಮಾಡ್ತಾರಂತೆ. ಮೋಹಿನಿ ನಿನ್ನ ತಪ್ಪದೆ ಕರೆತರಲು ಹೇಳಿದ್ದಾಳೆ,” ಎಂದಾಗ ಸಂಜೆಯ ಕಾರ್ಯ ಕ್ರಮಕ್ಕೆ ಮೌನವಾಗಿ ಸಿದ್ಧಳಾಗತೊಡಗಿದಳು.

ಲಗ್ನಪತ್ರಿಕೆಯ ವಿಶೇಷ ಎಂದರೆ, ಮೋಹಿನಿ ತನ್ನ ಗೆಳತಿಯರಿಗೆಲ್ಲ ಮೆಹಂದಿ ಹಾಕಿಸಿದಳು. ದೀಪಾಳ ಕೈ ತುಂಬಾ ಮೆಹಂದಿ ಮಿರಿಮಿರಿ ಮಿಂಚಿತು. ಮಾರನೇ ದಿನ ಅದನ್ನು ತೊಳೆದು, ಮಹಡಿಯ ಬಿಸಿಲಲ್ಲಿ ಒಣಗಿಸಲೆಂದು ಹೋದಳು. ಆಕಸ್ಮಿಕವಾಗಿ  ಅವಳಿಗೆ ಅವಿನಾಶ್‌ನ ನೆನಪಾಯಿತು. ಪಕ್ಕದ ಮನೆ ಪಂಕಜಮ್ಮ ತಮಗೆ ಮೆಹಂದಿ ತೋರಿಸಲೆಂದೇ ದೀಪಾ ಮಹಡಿಗೆ ಬಂದಿದ್ದಾಳೆ ಎಂದು ಆ ಬಗ್ಗೆ ವಿವರವಾಗಿ ಮಾತನಾಡಿಸಿದರು. ಅಂದು ಊಟವಾದ ಮೇಲೆ ದೀಪಾ ಲ್ಯಾಪ್‌ಟಾಪ್‌ ಆನ್‌ಮಾಡಿದಳು. ಫೇಸ್‌ಬುಕ್‌ ನೋಡಿದಾಗ ಅದರಲ್ಲಿ ಅವಿನಾಶ್‌ನ ಫ್ರೆಂಡ್‌ರಿಕ್ವೆಸ್ಟ್ ನೋಡಿ ಅವನಿಗೆ ವಿಶ್‌ಮಾಡಿದಳು. ಸ್ವಲ್ಪ ಹೊತ್ತಿಗೆ ಅವನ ಮೆಸೇಜ್‌ ಬಂತು. `ಹೇಗಿದ್ದಿ ದೀಪಾ? ನಿನ್ನ ಆ ಮುಗುಳ್ನಗು ಹಾಗೆ ಮುಂದುರಿದಿದೆ ತಾನೇ……? ಸಂತೋಷ್‌ಗಂತೂ ನಿನ್ನ ಬಗ್ಗೆ ಎಷ್ಟು ಹೊಗಳಿಕೊಂಡರೂ ಸಾಲದು…..’

`ಅರೆ, ಸಂತೋಷ್‌ ಬಗ್ಗೆ ಇವನಿಗೆ  ಹೇಗೆ ಗೊತ್ತು? ಮದುವೆಗೂ ಬಂದಿರಲಿಲ್ಲಲ್ಲ?’ ಎನಿಸಿ ದೀಪಾ ತಕ್ಷಣ ಕೇಳಿದಳು,

`ನಿನಗೆ ಇವರು ಹೇಗೆ ಗೊತ್ತು?’`ನಾನು ದುಬೈ ಸೆಂಟ್ರಲ್ ಸ್ಕೂಲ್‌ನಲ್ಲಿ ಟೀಚರ್‌. ಸಂತೋಷ್‌ ನಮ್ಮ ಶಾಲೆಗೆ ಕಂಪ್ಯೂಟರ್ಸ್‌, ವೈಫೈ ಅಳವಡಿಕೆಯ ಸಲುವಾಗಿ ಬಂದಿದ್ದರು. ಹೀಗೆ ಡೆಮೊ ತೋರಿಸುವಾಗ ಪರಿಚಯ ಸ್ನೇಹಕ್ಕೆ ತಿರುಗಿತು. ನಾನೂ ಈಗ ಬೆಂಗಳೂರಿನಲ್ಲೇ ಇದ್ದೇನೆ. ಹೀಗಾಗಿ ಆಗಾಗ ಭೇಟಿ ಆಗುತ್ತೇವೆ. ಆಗ ನಿನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.’

`ಓ ಹಾಗೋ…. ಅದಿರಲಿ, ನೀನು ಹೇಗಿದ್ದಿ? ಹೆಂಡತಿ, ಮಕ್ಕಳು ಹೇಗಿದ್ದಾರೆ?’

`ಹೆಂಡತಿ ಅಂತ ಇದ್ದರೆ ತಾನೇ ಮಕ್ಕಳ ಮಾತು… ನಾನು…. ಇನ್ನೂ ಹಾಗೇ ಇದ್ದೀನಿ…..’

`ಅಂದ್ರೆ…. ಇದುವರೆಗೂ ಮದುವೆ ಆಗಲೇ ಇಲ್ವೇ?’

`ಇಲ್ಲ….. ಆಗಬೇಕು ಅನ್ನಿಸಲಿಲ್ಲ…..’

`ಆದರೆ ಯಾಕೆ?’

`ಪ್ರತಿ ಪ್ರಶ್ನೆಗೂ ಉತ್ತರ ಹುಡುಕುವುದು ಕಷ್ಟ. ಮನಸ್ಸನ್ನು ಒಬ್ಬರಿಗೆ ಕೊಟ್ಟು, ಸಂಸಾರಕ್ಕೆ ಸಿಲುಕಿದ ತಪ್ಪಿಗೆ  ಹೆಂಡತಿ ಜೊತೆ ಮಕ್ಕಳು ಮಾಡಿಕೊಳ್ಳುವ ಈ ಲೋಕಾರೂಢಿ ನನಗಿಷ್ಟವಿಲ್ಲ….’

`ಏನು ಹೇಳಬೇಕೋ ತಿಳಿಯುತ್ತಿಲ್ಲ…..’

`ಇರಲಿ ಬಿಡು, ಮತ್ತೆ ನೀನು  ಹೇಗಿದ್ದಿ? ಕೈಗೆ  ಮೆಹಂದಿ ಹಾಕಿಕೊಂಡಿದ್ದೀಯಾ?’

`ಹ್ಞೂಂ….. ಹ್ಞೂಂ….. ನಿನ್ನೆ ನನ್ನ ಗೆಳತಿ ಮೋಹಿನಿ ಲಗ್ನಪತ್ರಿಕೆ ಅಂತ ಎಲ್ಲರಿಗೂ ಹಾಕಿಸಿದಳು.’

`ಓ ಹೌದಾ….. ಹಾಗಿದ್ದರೆ ವಿಡಿಯೋ ಆನ್‌ಮಾಡಿ ನಿನ್ನ ಕೈಗಳನ್ನು ತೋರಿಸಬಾರದೇ?’

`ಆಯ್ತು,’ ಎಂದವಳೇ ದೀಪಾ ವಿಡಿಯೋ ಆನ್‌ ಮಾಡಿ ತನ್ನ ಕೈಗಳನ್ನು ತೋರಿಸಿದಳು.

`ರಿಯಲಿ ಬ್ಯೂಟಿಫುಲ್! ಎಲ್ಲಿ…… ಆ ನಿನ್ನ ನಗುವನ್ನು ಚೆಲ್ಲಿ ಆಮೇಲೆ ಲೈನ್‌ ಕಟ್‌ ಮಾಡು.’

`ಅದೇನು ನಿನ್ನ ಮಾತು……. ಹಳೆ ತೇದುಹೋದ ರೆಕಾರ್ಡ್‌ತರಹ ನನ್ನ ನಗುವಿನ ಬಳಿ ನಿಂತುಬಿಡುತ್ತೆ…..’

`ಹೌದು…. ನನ್ನ ಮನಸ್ಸಿನಲ್ಲಿ…. ನನ್ನ ನೆನಪುಗಳಲ್ಲಿ ಸದಾ ತುಂಬಿರುವುದು ನಿನ್ನ ನಗು ಮುಖ ಮಾತ್ರ….. ನನ್ನ ಪಾಲಿಗೆ ಅಷ್ಟೇ ಸಾಕು. ನಗು ಕುರಿತು ನಿನಗೆ ಒಂದು ವಿಷಯ ಗೊತ್ತೆ?’

`ಅದೆಂಥ ವಿಷಯ?’

`ನಗು ಎಂದೆಂದೂ ಚೇತೋಹಾರಿ! ಇಡೀ ಪ್ರಪಂಚ ತನ್ನೆಲ್ಲ ನೋವು ಮರೆತು ಯಾರದಾದರೂ ನಗುಮುಖ ಸ್ಮರಿಸುತ್ತಾ ನೆಮ್ಮದಿಯಾಗಿ ಇರಬಹುದಲ್ವಾ?’

`ಇದೆಂಥ ಫಿಲಾಸಫಿ?’ ಅರಿಯದೆ ಅವಳ ಮುಖದಲ್ಲಿ ನಗು ತುಳುಕಿತು.

`ಆಯ್ತು ಬಿಡು….. ನಾನು ಕೇಳಿದ್ದು ಸಿಕ್ತು.’

ದೀಪಾಳಿಗೇಕೋ ಮನಸ್ಸು ಮಡುವುಗಟ್ಟಿದಂತೆ ಆಯ್ತು. ಅವಿನಾಶ್‌ ಬಗ್ಗೆ ತಿಳಿದುಕೊಳ್ಳಬೇಕು ಅಂತ ಇದ್ದದ್ದು, ನೇರವಾಗಿ ಅವನಿಂದಲೇ ವಿಷಯ ಗೊತ್ತಾಯಿತು. ತಡೆಯಲಾರದೆ ಹೇಳಿದಳು, `ನಿನ್ನ ಮದುವೆ ಫಿಕ್ಸ್ ಆದರೆ ಹೇಳು…. ಮರೀಬೇಡ!’
`ನಿನ್ನ ಕಾಂಟ್ಯಾಕ್ಟ್ ಸಿಕ್ತಲ್ಲ….  ಮದುವೆ ಅಂತ ಆದ ಕಾಲಕ್ಕೆ ಹೇಳಿದರಾಯ್ತು ಬಿಡು…… ಮುಂದಿನ ಸಲ ನೀನು ಮೆಹಂದಿ ಹಚ್ಚಿಕೊಂಡಾಗ ನಗುಮುಖ ಸಮೇತ ಅದನ್ನು ತೋರಿಸಲು ಮರೆಯಬೇಡ…..’

`ಸಾಕು ನಿನ್ನ ತಲೆಹರಟೆ. ಆದಷ್ಟು ಬೇಗ ಮದುವೆಯ ಕಾರ್ಡ್‌ ಕಳುಹಿಸು.’

`ಆಹಾ….. ಮದುವೆ ನಂತರ ತುಂಬಾ ಮಾತು ಕಲಿತುಬಿಟ್ಟೆ! ಪರವಾಗಿಲ್ವೇ…… ನಿನಗೆ ಮತಾನಾಡಲಿಕ್ಕೂ ಬರುತ್ತದೆ! ಹಿಂದೆಲ್ಲ ಮಾತಿಲ್ಲದ ಮೌನಗೌರಿ ಆಗಿರ್ತಿದ್ದೆ.’

`ಹೌದು, ಮಾತನಾಡದೆ ಆಡದೆ ಏನು ಕಳೆದುಕೊಂಡೆ ಅಂತ ನನಗೆ ಗೊತ್ತಾಯ್ತು….’

ಎರಡೂ ಬದಿ ಲ್ಯಾಪ್‌ಟಾಪ್‌ಆಫ್‌ ಆಗಿತ್ತು. ದೀಪಾ ತನ್ನ ಕೈಗಳನ್ನು ಕೆನ್ನೆಗೊತ್ತಿಕೊಂಡಾಗ ಹನಿ ಹನಿ ನೀರು ಜಿನುಗಿತು. ಮಾತಿಗೆ ಮೀರಿದ ಮೌನವೇ ಹಿತ ಎನಿಸಿತು. ಅವಿನಾಶ್‌ ತನ್ನ ಸ್ಕ್ರೀನ್‌ಸೇವರ್‌ಗೆ ಅವಳ ನಗುಮುಖ ಅಳವಡಿಸಿದ್ದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ