ಎ.ಆರ್. ಸುಧಾಮಣಿ ಹುಣಸೂರು ತಾಲ್ಲೂಕು, ಹನಗೋಡು ನಿವಾಸಿ. ಇವರ ಪತಿ ಬಸವರಾಜು, ಮಗ ಮಧು ಮತ್ತು ಮಗಳು ಅಂಜುಪ್ರಿಯ. ಮೈಸೂರಿನ ಮಹಾರಾಣಿ ಜ್ಯೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿರುವ ಇವರು ಮದುವೆಗೂ ಮುಂಚಿನಿಂದಲೇ ಕೃಷ್ಣರಾಜನಗರ ತಾಲ್ಲೂಕಿನ ಅರ್ಜುನಹಳ್ಳಿಯಲ್ಲಿರುವ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಮದುವೆಯ ನಂತರ ಪತಿಯ ಊರು ಹನಗೋಡಿನಲ್ಲಿ ಮನೆಯವರ ಬೆಂಬಲದಿಂದ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡರು.
1993ರಲ್ಲಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ತ.ಮ. ವಿಜಯಭಾಸ್ಕರ್‌ರವರ ಪ್ರೋತ್ಸಾಹದಿಂದ ಹನಗೋಡಿನಲ್ಲಿ ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡು, ಆಗಲೇ ಅಕ್ಷರ ಆರೋಗ್ಯ ಪತ್ರಿಕೆಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದರು. 1994ರಲ್ಲಿ ಹನಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯ್ತಿ ಎಂಬ ಕೀರ್ತಿ ತಂದರು. ಮಹಿಳೆಯರ ಸಬಲೀಕರಣಕ್ಕಾಗಿ ಸ್ಛೂರ್ತಿ ಸಂಸ್ಥೆ ಸ್ಥಾಪಿಸಿ ಉಚಿತವಾಗಿ ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಕೌಶಲ್ಯಾಧಾರಿತ ತರಬೇತಿಗಳನ್ನು ಕೊಡಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ 41 ಬೃಹತ್‌ಬೆಟ್ಟಗಳ ವಿಸ್ತಾರವನ್ನು ಹೊಂದಿದ್ದು, ಅದರ ಪಕ್ಕದಲ್ಲೇ ಅತೀ ದಟ್ಟವಾದ ಕಾಡು ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹರಡಿರುವ ಅರಣ್ಯ 50 ವರ್ಷಗಳ ಹಿಂದೆ ಕಾಣಬಹುದಾಗಿತ್ತು.
ಇತ್ತೀಚೆಗೆ ಅತಿ ಮುಖ್ಯವಾಗಿ ಜನಸಂಖ್ಯಾ ಸ್ಛೋಟದಿಂದ ಕೃಷಿ ಭೂಮಿ ವಿಸ್ತರಣೆ, ಅರಣ್ಯ ಉತ್ಪನ್ನಗಳ ಅಭಿವೃದ್ಧಿಪಡಿಸುವ ಉದ್ಯಮಗಳು, ರಸ್ತೆ ಅಭಿವೃದ್ಧಿ, ವಿದ್ಯುತ್ ಉತ್ಪಾದನೆ, ಅಣೆಕಟ್ಟೆಯ ನಿರ್ಮಾಣ, ಸಾರಿಗೆ ಸಂಪರ್ಕಗಳು ಹೆಚ್ಚಿರುವುದು, ಹೊಗೆಸೊಪ್ಪು ಸಂಸ್ಕರಣೆಗೆ ಹಾಗೂ ಟೀ ಸಂರಕ್ಷಣೆಗೆ ಪ್ರತಿ ವರ್ಷ 1 ಲಕ್ಷ ಲಾರಿ ಲೋಡುಗಳ ಸೌದೆ ಉಪಯೋಗ, ಗಣಿಗಾರಿಕೆ ಹಾಗೂ ಸುಮಾರು 67 ಸಾವಿರ ವಸತಿ ಗೃಹಗಳ ನಿರ್ಮಾಣ ಇತ್ಯಾದಿಗಳಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದನ್ನು ಕಾಣಬಹುದು.
ಜಲಾಶಯಕ್ಕೆ 35,840 ಹೆಕ್ಟೇರ್ ಪ್ರದೇಶ ಗಣಿಗೆ 42,676 ಹೆಕ್ಟೇರ್ ಪ್ರದೇಶ ನಾಶವಾಗಿದ್ದು, ಇತ್ತೀಚೆಗೆ ಇನ್ನೂ ಹೆಚ್ಚಿನ ಅರಣ್ಯ ನಾಶವನ್ನು ಕಾಣಬಹುದಾಗಿದೆ. 2002ರಲ್ಲಿ ರಾಜ್ಯದಲ್ಲಿ 9,94,881 ಹೆಕ್ಟೇರ್ ಪ್ರದೇಶ ಡೀಮ್ಡ್ ಪ್ರದೇಶವಿದ್ದು, 2014-15ರಲ್ಲಿ 5,17,485 ಹೆಕ್ಟೇರ್ ಪ್ರದೇಶ ಹಾಗೂ 2017ರಲ್ಲಿ 4,98,000 ಹೆಕ್ಟೇರ್ ಪ್ರದೇಶಕ್ಕೆ ಇಳಿಮುಖವಾಗಿರುತ್ತದೆ. ಇದೇ ಮಾದರಿಯಲ್ಲಿ ಕೇರಳದ 14 ಬೆಟ್ಟಗಳು ಕ್ಷೀಣಿಸುತ್ತಿರುವುದು ಕಾವೇರಿ ನದಿಗೆ ತೊಂದರೆಯಾಗಿದೆ.ಎಚ್.ಕೆ. ಪಾಟೀಲ್‌ರವರು ನೀರಾವರಿ ಮಂತ್ರಿಯಾಗಿದ್ದ ಅವಧಿಯಲ್ಲಿ ನೀರು ಬಳಕೆದಾರರ ಸಂಘ ಅಸ್ತಿತ್ವಕ್ಕೆ ಬಂದು, ಹನಗೋಡು ಸಂಘಕ್ಕೆ ಇವರು ಅಧ್ಯಕ್ಷೆಯಾದರು. 2005ರಲ್ಲಿ ಹಾರಂಗಿ ನೀರು ಬಳಕೆದಾರರ ಮಹಾಮಂಡಳದ ಪ್ರಥಮ ಅಧ್ಯಕ್ಷೆಯಾಗಿ 5 ತಾಲ್ಲೂಕುಗಳ 420 ಹಳ್ಳಿಗಳಲ್ಲಿ 96 ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಿ ಮುಖ್ಯ ನಾಲೆ ಹಾಗೂ ಉಪನಾಲೆಯ ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿಯುವಂತೆ ಮಾಡಿದರು. ಜೊತೆಗೆ ಕಾಲುವೆ ಬದಿಯಲ್ಲಿ ಗಿಡ ನೆಡಲು ರೈತರನ್ನು ಪ್ರೇರೇಪಿಸಿ ಅದರಲ್ಲೂ ಯಶಸ್ಸು ಕಂಡರು.
ಈ ಸಂದರ್ಭದಲ್ಲಿ ಇವರಿಗೆ ಮೇಧಾಪಾಟ್ಕರ್, ರಾಜೇಂದ್ರಸಿಂಗ್, ಅಣ್ಣಾ ಹಜಾರೆಯವರ ಒಡನಾಟ ಬೆಳೆಯಿತು. ನೀರು ಬಳಕೆದಾರರ ಸಂಘದ ಅಧ್ಯಕ್ಷೆಯಾಗಿದ್ದ ಸುಧಾಮಣಿಯವರ ಕಾರ್ಯವೈಖರಿಯನ್ನು ಮೆಚ್ಚಿ ನೆದರ್‌ಲ್ಯಾಂಡಿನ ನೀರಾವರಿ ತಜ್ಞ ಡಾ. ಪೀಟರ್ ಮೆಲಿಂಗೋ ಮತ್ತು ಪ್ರೊ. ರೆಮೆಂಟ್ ಪೀಟರ್‌ತಾವು ಬರೆದ `ಸೌತ್ ಇಂಡಿಯನ್ ಇರಿಗೇಷನ್ ಮ್ಯಾನೇಜ್‌ಮೆಂಟ್’ ಪುಸ್ತಕದಲ್ಲಿ, ಸುಧಾಮಣಿ ರಾತ್ರಿ ಸಮಯದಲ್ಲಿ ಕಾಲುವೆಗಳ ಬಳಿ ನೀರಾವರಿ ನಿರ್ವಹಣೆಯ ಜವಾಬ್ದಾರಿಯ ಸಾಧನೆಯನ್ನು ದಾಖಲಿಸಿರುವುದು ಇವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ!
ರಾಜ್ಯ ಮಟ್ಟದ ನೀರಾವರಿ ಮಹಾಮಂಡಳವನ್ನು ರಚನೆ ಮಾಡಲು ಮುಖ್ಯ ಪ್ರವರ್ತಕರಾಗಿ ಇರುವ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಿದ್ದು, ಇದು ಸುಧಾಮಣಿಯವರ ವಿಭಿನ್ನ ಸಾಧನೆಯಾಗಿದೆ. 2003-04ರಲ್ಲಿ ಕಾವೇರಿ ಮತ್ತು ತಮಿಳುನಾಡು ಸಮಸ್ಯೆಗೆ ಎರಡೂ ರಾಜ್ಯದ ರೈತರನ್ನು ಒಳಗೊಂಡ ಕಾವೇರಿ ಕುಟುಂಬ ಹಾಗೂ ಜಲಸ್ಪಂದನ ಸಂಸ್ಥೆ, ಪ್ರಗತಿ ಸಂಸ್ಥೆ ಇವುಗಳಲ್ಲಿ ಸೇವೆ ಸಲ್ಲಿಸಿ ನೀರಾವರಿ ಸಮಸ್ಯೆಗಳ ರೈತರು ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ ಎಂದು ಸಾಬೀತುಪಡಿಸಿದರು.
ಇದೇ ಸಮಯದಲ್ಲಿ ಪರಿಸರ ಸ್ನೇಹಿಯಾದ ಯಲ್ಲಪ್ಪರೆಡ್ಡಿ ಮುಖಾಂತರ ನವ ಸಂವರ್ಧನಾ ಟ್ರಸ್ಟ್ ನಲ್ಲಿ ಸದಸ್ಯರಾಗಿ ಅನೇಕ ಗ್ರಾಮಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅರಣ್ಯ ಇಲಾಖೆ ಪ್ರಾರಂಭಿಸಿರುವ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಸಮರ್ಪಕವಾಗಿ ಹುಣಸೂರು ತಾಲ್ಲೂಕಿನಲ್ಲಿ ಪ್ರಾರಂಭಿಸಿ ಸ್ವಂತ ಜಮೀನಿನಲ್ಲೇ 20 ಎಕರೆಗಳಲ್ಲಿ ಗಿಡಗಳನ್ನು ನೆಟ್ಟು ಇದುವರೆವಿಗೂ ಸುಮಾರು 50 ಲಕ್ಷ ಗಿಡಗಳನ್ನು ಕೆ.ಆರ್. ನಗರ ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಸಸಿಗಳನ್ನು ನೆಡಿಸಿ ಪ್ರೋತ್ಸಾಹ ಹಣವನ್ನು ತಾವು ಒಂದು ಗಿಡಕ್ಕೆ ಮೂರು ವರ್ಷಗಳಿಗೆ 100/ಗಳಂತೆ ರೈತರಿಗೆ ದೊರೆಯುವಂತೆ ಮಾಡಿದ್ದಾರೆ.
ಸಸಿಗಳ ಸಂಪೂರ್ಣ ವಿವರಗಳೊಂದಿಗೆ, ರೈತರ ಜಮೀನಿಗೆ ಜಿ.ಪಿ.ಎಸ್ ಹಾಗೂ ಭಾವಚಿತ್ರಗಳೊಂದಿಗೆ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಂಪೂರ್ಣ ವಿವರಗಳೊಂದಿಗೆ ಲಗತ್ತಿಸುವುದು. ಇದರಿಂದಾಗಿ ಪಾರದರ್ಶಕತೆಯನ್ನು ಕಾಣಬಹುದು. ಅಲ್ಲದೆ ಬಿದಿರು, ಹಲಸು, ಹುಣಸೆ, ಶ್ರೀಗಂಧ, ಹೆಬ್ಬೇವು, ಬೇಲ ಇವುಗಳು ವಿದೇಶಿ ಮಾರುಕಟ್ಟೆ ಹೊಂದಿರುವುದರಿಂದ ಇವುಗಳನ್ನು ರೈತರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ತಮಿಳುನಾಡಿನ ಕಾವೇರಿ ಸಮಸ್ಯೆಗೆ ಜಲಾನಯನ ಪ್ರದೇಶದಲ್ಲಿ ಮರಗಿಡಗಳನ್ನು ಬೆಳೆಸುವುದರಿಂದ ಮಾತ್ರ ಪರಿಹಾರ ಕಾಣಬಹುದಾಗಿದೆ. ಇದಕ್ಕೆ ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳು ಪ್ರೋತ್ಸಾಹಿಸಿದರೆ ಒಳ್ಳೆಯ ಕೆಲಸವಾಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ರೈತರ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಶ್ರೀಗಂಧದ ಗಿಡಗಳನ್ನು ಬೆಳೆಸುವುದು, ಇದರಿಂದ ರೈತರ ಆದಾಯನ್ನು ಹೆಚ್ಚಿಸಬಹುದು.
2017ರಲ್ಲಿ ರಾಜೀವ್ ಗಾಂಧಿ ಸೇವಾ ಪ್ರತಿಷ್ಠಾನ ಸದ್ಭಾವನಾ ಪ್ರಶಸ್ತಿಯನ್ನು ಸುಧಾಮಣಿ ಪಡೆದಿದ್ದಾರೆ. 2012ರಲ್ಲಿ ಮಹಿಳಾ ವಿಶ್ವವಿದ್ಯಾನಿಲಯ (ಶ್ರೀ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ) ಪ್ರಥಮವಾಗಿ ಮಹಿಳಾ ಸಾಧಕಿ ಪ್ರಶಸ್ತಿಯನ್ನು ನೀಡಿದರು. 2015ರಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಸಚಿವರು ಅತ್ಯುತ್ತಮ ಅರಣ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕಾವೇರಿ ಸಮಸ್ಯೆ ಬಂದಾಗ 2009ರಲ್ಲಿ ಮಾಜಿ ನೀರಾವರಿ ಸಚಿವರಾದ ಎಚ್.ಕೆ. ಪಾಟೀಲ್‌ರವರು `ಕಾವೇರಿ ಲೋಪಾಮುದ್ರೆ’ ನಾಮಾಂಕಿತ ಪುಸ್ತಕವನ್ನು ಸಂಪೂರ್ಣ ವಿವರಗಳೊಂದಿಗೆ ಸುಧಾಮಣಿ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಮೈಸೂರು ಜಿಲ್ಲೆಯ ಮುಖ್ಯ ವರದಿಗಾರರಾದ ಅಂಶಿ ಪ್ರಸನ್ನಕುಮಾರ್ ಬರೆದ `ತಂಬಾಕು ಬಿಟ್ಟೇವು ಹೆಬ್ಬೇವು ಬೆಳೆದೇವು’ ಎಂಬ ಪುಸ್ತಕವನ್ನು ಸುಧಾಮಣಿ ಹೆಸರಿನಲ್ಲಿ ಮುದ್ರಿಸಿ ಬಿಡುಗಡೆ ಮಾಡಿದ್ದಾರೆ.
ಇವರ ಪತಿ ಬಸವರಾಜುರ ಬೆಂಬಲದೊಂದಿಗೆ ಕೆಲಸ ಮಾಡುತ್ತಿರುವ ಇವರ ಸಾಧನೆ ಪರಿಗಣಿಸಿ 2008ರಲ್ಲಿ ರಾಜ್ಯ ಸರ್ಕಾರದಿಂದ `ವರ್ಷದ ಮಹಿಳೆ’ ಪ್ರಶಸ್ತಿ ಮತ್ತು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಸಚಿವರಾಗಿದ್ದ ರಮಾನಾಥರೈರಿಂದ `ಅತ್ಯುತ್ತಮ ಅರಣ್ಯ ಪ್ರಶಸ್ತಿ’ ಪ್ರದಾನವಾಗಿದೆ. ಜೆ.ಎಸ್.ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರು, ಸಲಹಾ ಸಮಿತಿ ಸದಸ್ಯರಾಗಿ ರೈತರಿಗೆ ಅನುಕೂಲ ಮಾಡಿರುತ್ತಾರೆ.
– ಬಿ. ಬಸರಾಜು