ಕಥೆ  –  ವಾರಿಜಾ ವಿನೋದ್

ಡ್ರಾಯಿಂಗ್‌ ರೂಮಿನಲ್ಲಿ ಕುಳಿತಿದ್ದ ನವವಿವಾಹಿತೆ ಶೀಲಾ ತನ್ನ ಪತಿ ರಾಜೇಶನ ನೆನಪಿನಲ್ಲಿ ಮುಳುಗಿದ್ದಳು. ಅವಳು ನಸುಕಿನಲ್ಲಿಯೇ ಎದ್ದು ಸ್ನಾನ ಮಾಡಿ ಸಿದ್ಧಳಾಗಿ ಕುಳಿತಿದ್ದಳು. ಉದಯಿಸುವ ಸೂರ್ಯನಂತೆ ಅವಳ ರೂಪ ಮನೋಹರವಾಗಿ ಕಂಗೊಳಿಸುತ್ತಿತ್ತು. ಜರಿ ಅಂಚುಳ್ಳ ರೇಷ್ಮೆ ಸೀರೆ, ಕೈ ತುಂಬ ಕೆಂಪು ಬಳೆಗಳು ಮತ್ತು ಬಂಗಾರದ ಬಳೆಗಳು, ಹಣೆಯಲ್ಲಿ ಕೆಂಪು ಬೊಟ್ಟು ಇವೆಲ್ಲ ಅವಳ ಸೌಂದರ್ಯಕ್ಕೆ ಮೆರುಗು ನೀಡಿದ್ದವು. ಮನೆಯಲ್ಲಿ ಎಲ್ಲರೂ ಇನ್ನೂ ನಿದ್ದೆ ಮಾಡುತ್ತಿದ್ದರು. ಆದರೆ ಶೀಲಾಳಿಗೆ ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಮದುವೆಯಾದ ಮೇಲೆ ಮೊದಲ ಸಲ ತವರಿಗೆ ಬಂದಿದ್ದಳು. ಈ ದಿನ ರಾಜೇಶ್‌ಅವಳನ್ನು ಕರೆದೊಯ್ಯಲು ಬರುವವನಿದ್ದ. ಅವಳು ಬಹಳ ಸಂತೋಷದಿಂದಿದ್ದಳು.

ಶೀಲಾ ಒಮ್ಮೆ ಡ್ರಾಯಿಂಗ್‌ ರೂಮಿನ ಉದ್ದಕ್ಕೂ ಕಣ್ಣು ಹಾಯಿಸಿದಳು. ಅವಳಿಗೆ ಬಹಳ ಹಿಂದಿನ ದಿನಗಳು ನೆನಪಾದವು. ಆಗಿನ್ನೂ ಅವಳು ಪುಟ್ಟ ಹುಡುಗಿ, ತನ್ನ ತಾಯಿಯ ಸೆರಗನ್ನು ಹಿಡಿದು ಮರೆಯಲ್ಲಿ ನಿಂತಿದ್ದಳು. ಅವಳ ಅಜ್ಜ ಆರಾಮ ಕುರ್ಚಿಯ ಮೇಲೆ ಕುಳಿತು ತಮ್ಮ ಗಂಡು ಮಕ್ಕಳು ಮತ್ತು ಸೊಸೆಯಂದಿರಿಗೆ ಜೋರು ಧ್ವನಿಯಲ್ಲಿ ಆದೇಶ ನೀಡುತ್ತಿದ್ದರು, “ಇನ್ನು ಮಾಲತಿ ಮತ್ತು ಅವಳ ಪುಟ್ಟ ಮಗಳು ನಮ್ಮ ಜೊತೆ ಇಲ್ಲೇ ಇರುತ್ತಾರೆ. ಈ ಮನೆ ನಿಮಗೆ ಸೇರಿರುವ ಹಾಗೆ ಅವಳಿಗೂ ಸೇರಿದೆ. ಇದ್ದಕ್ಕಿದ್ದಂತೆ ಗಂಡನನ್ನು ಕಳೆದುಕೊಂಡು ಅವಳೀಗ ನೆಲೆ ಇಲ್ಲದವಳಾಗಿದ್ದಾಳೆ. ಅವಳ ಅತ್ತೆ ಮನೆಯವರು ಅವಳಿಗೆ ಅನ್ಯಾಯ ಮಾಡಿಬಿಟ್ಟಿದ್ದಾರೆ.

“ಅವಳ ಗಂಡನ ಇನ್ಶೂರೆನ್ಸ್ ಹಣವನ್ನೆಲ್ಲ ಅವರೇ ಲಪಟಾಯಿಸಿಬಿಟ್ಟರು. ನನ್ನ ಮಗಳನ್ನು ಕೆಲಸದವಳ ಹಾಗೆ ನೋಡಿ ಹಗಲೂ ರಾತ್ರಿ ಅವಳಿಂದ ಚಾಕರಿ ಮಾಡಿಸಿದರು. ಪ್ರಪಂಚದಲ್ಲಿ ಜನರು ಇಷ್ಟು ಸ್ವಾರ್ಥಿಗಳಾಗಿ ಇರುತ್ತಾರೆ ಅಂತ ನಾನು ತಿಳಿದಿರಲಿಲ್ಲ. ತಮ್ಮ ಮಗನ ಕೊನೆಯ ಗುರುತನ್ನೂ ನಿರ್ಲಕ್ಷಿಸಿ ಮುಖ ತಿರುಗಿಸುವುದನ್ನು ನನಗೆ ನೋಡುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ನಾನು ಗುರೂಜೀ ಜೊತೆಯಲ್ಲೂ ಮಾತನಾಡಿದೆ. ಅವರೂ ಸಹ ಮಾಲತಿಯನ್ನು ಆ ದುರಾಸೆಯ ಜನರ ಹಿಡಿತದಿಂದ ಬಿಡಿಸಿ ಕರೆದುಕೊಂಡು ಬರಬೇಕು ಅಂತಲೇ ಅಭಿಪ್ರಾಯಪಟ್ಟರು.”

ಅವರು ಸ್ವಲ್ಪ ಹೊತ್ತು  ಮಾತು ನಿಲ್ಲಿಸಿ ತಮ್ಮ ಗಂಡು ಮಕ್ಕಳತ್ತ ನೋಡಿ, ಮತ್ತೆ ಮುಂದುವರಿಸಿದರು, “ನನ್ನ ಮಗಳು ಮತ್ತು ಅವಳ ಈ ಮುದ್ದು ಮಗುವನ್ನು ಸಾಕುವ ಸಾಮರ್ಥ್ಯ ನನಗಿದೆ…. ನೀವಿಬ್ಬರೂ ಕೂಡ ಅಣ್ಣಂದಿರಾಗಿರುವ ಕರ್ತವ್ಯವನ್ನು ನೆರವೇರಿಸುತ್ತೀರಿ ಅಂತ ಆಶಿಸುತ್ತೇನೆ,” ಎಂದು ಹೇಳಿ ಅಜ್ಜ ಮಗುವನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡರು. ಆಗ ಶೀಲಾಳಿಗೆ ತಾನೊಬ್ಬ ರಾಜಕುಮಾರಿ ಎಂಬಂತೆ ಹೆಮ್ಮೆಯಾಗಿತ್ತು.

ಅಜ್ಜನ ಮಾತಿಗೆ ಎಲ್ಲರೂ ತಲೆಬಾಗಿದರು. ಅವಳ ತಾಯಿಯೂ ತನ್ನ ದುಃಖವನ್ನೂ ಅದುಮಿಟ್ಟು ಎಲ್ಲರೊಡನೆ ಸಹಜವಾಗಿರಲು ಪ್ರಯತ್ನಿಸಿದಳು. ತಾಯಿ ಶಾಲೆಯೊಂದರಲ್ಲಿ ಟೀಚರ್‌ ಕೆಲಸಕ್ಕೆ ಸೇರಿದಳು. ಹೀಗೆ ತಾವು ಯಾರಿಗೂ ಹೊರೆಯಾಗದಂತೆ ಏರ್ಪಾಟು ಮಾಡಿಕೊಂಡಳು.

ಅಜ್ಜ ಮತ್ತು ಅಜ್ಜಿಯ ಕುಟುಂಬದವರಿಗೆಲ್ಲ ತಮ್ಮ ಗುರೂಜೀಯ ಬಗ್ಗೆ ಅಪಾರ ಗೌರವವಿತ್ತು. ಎಲ್ಲರ ಕೊರಳಿನಲ್ಲಿಯೂ ಗುರೂಜೀಯ ಚಿತ್ರವಿರುವ ಲಾಕೆಟ್‌ ತೂಗುತ್ತಿತ್ತು. ಯಾವುದೇ ಮುಖ್ಯ ವಿಚಾರದ ಬಗ್ಗೆ ನಿರ್ಧಾರ ಮಾಡುವ ಮೊದಲು ಗುರೂಜೀಯ ಅಪ್ಪಣೆ ಪಡೆಯುವುದು ಸಂಪ್ರದಾಯವಾಗಿತ್ತು. ಶೀಲಾ ಬಾಲ್ಯದಿಂದಲೂ ಇದನ್ನು ಕಂಡಿದ್ದಳು. ಹೀಗಾಗಿ ಅವಳೂ ಗುರೂಜೀಯನ್ನು ಗೌರವಿಸುತ್ತಿದ್ದಳು. ಬಿಡುವಿಲ್ಲದ ಕೆಲಸದ ನಡುವೆಯೂ ಅವಳ ತಾಯಿ ಸಮಯ ಮಾಡಿಕೊಂಡು ಗುರೂಜೀ ಫೋಟೋ ಮುಂದೆ ಕುಳಿತು ಧ್ಯಾನ ಮಾಡುತ್ತಿದ್ದಳು. ಶೀಲಾ ಸಹ ಕೆಲವೊಮ್ಮೆ ತಾಯಿಯ ಜೊತೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದಳು. ಅವಳು ಪ್ರಾರ್ಥಿಸುತ್ತಿದ್ದುದು ಒಂದೇ, “ಗುರೂಜೀ ದೊಡ್ಡ ಆಫೀಸರ್‌ ಆಗುವ ಹಾಗೆ ಮಾಡಿ. ಆಗ ನಾನು ನನ್ನ ತಾಯಿಗೆ ಎಲ್ಲ ಸುಖ, ನೆಮ್ಮದಿ ಸಿಗುವಂತೆ ಮಾಡುತ್ತೇನೆ,” ಎಂದು.

ಧಡ್‌ ಎನ್ನುವ ಶಬ್ದದಿಂದಾಗಿ ಶೀಲಾಳ ಭಾವಸಮಾಧಿಗೆ ಭಂಗವಾಯಿತು. ತಿರುಗಿ ನೋಡಿದಳು ಗಾಳಿಯ ಹೊಡೆತದಿಂದ ಕಿಟಕಿ ಬಡಿಯುತ್ತಿತ್ತು. ಅವಳು ಎದ್ದು ಕಿಟಕಿಯ ಚಿಲಕ ಹಾಕಿದಳು. ಮನೆ ನಿಶ್ಶಬ್ದವಾಗಿತ್ತು. ಗಡಿಯಾರ 6 ಗಂಟೆ ತೋರಿಸುತ್ತಿತ್ತು. ಇನ್ನೇನು ಬೆಳಗಾಯಿತು ಎಂದುಕೊಂಡು ಅವಳು ಸೋಫಾಗೆ ಒರಗಿದಳು. ಅವಳ ಮನಸ್ಸು ಮತ್ತೆ ಅತೀತದೆಡೆಗೆ ಸರಿಯಿತು…..

ಅಜ್ಜನ ಪ್ರೀತಿಯ ನೆರಳಿನಲ್ಲಿ ಶೀಲಾ ರಾಜಕುಮಾರಿಯಂತೆ ಮತ್ತು ಅವಳ ತಾಯಿ ರಾಣಿಯಂತೆ ಆರಾಮವಾಗಿದ್ದರು. ಆದರೆ ಅವರ ಪಾಲಿಗೆ ಈ ಸುಖ ಹೆಚ್ಚು ದಿನ ಉಳಿಯಲಿಲ್ಲ. 1 ವರ್ಷ ಕಳೆದ ಮೇಲೆ ಒಂದು ದಿನ ಅಜ್ಜ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಅಸುನೀಗಿದರು. ಈ ಅನಿರೀಕ್ಷಿತ ಪೆಟ್ಟನ್ನು ಸಹಿಸಲಾರದ ಅಜ್ಜಿ ಮಾನಸಿಕವಾಗಿ ಕುಸಿದರು. ತಮ್ಮನ್ನು ತಾವು ನೋಡಿಕೊಳ್ಳಲು ಆಗದಂತಹ ಸ್ಥಿತಿ ಅವರದಾಯಿತು. ಇನ್ನು ಮಗಳು, ಮೊಮ್ಮಗಳಿಗೆ ಅವರು ಏನೇ ತಾನೇ ಮಾಡಬಲ್ಲರು? ಪರಿಸ್ಥಿತಿ ಶೀಲಾ ಮತ್ತು ಅವಳ ತಾಯಿಯನ್ನು ಮತ್ತೊಮ್ಮೆ ಕೊನೆಯಿಲ್ಲದ ದುಃಖದ ಮಡುವಿಗೆ ದೂಡಿತು.

ಮನೆಯ ಯಜಮಾನಿಕೆ ಸೋದರ ಮಾವನ ಕೈ ಸೇರಿತು. ಮನೆಯಲ್ಲಿ ಯಾವುದೇ ವಿಷಯ ಮಾಮ ಅತ್ತೆಯ ಇಷ್ಟದಂತೆ ನಡೆಯತೊಡಗಿತು. ಪ್ರಾರಂಭದ ದಿನಗಳಲ್ಲಿ ವಿಷಯವನ್ನು ಅಜ್ಜಿಗೆ ತಿಳಿಸಿ ನಂತರ ಕಾರ್ಯಪ್ರವೃತ್ತರಾಗುತ್ತಿದ್ದರು. ಕ್ರಮೇಣ ಆ ಪರಿಪಾಠ ನಿಂತುಹೋಯಿತು. ಚಿಕ್ಕ ಸೋದರ ಮಾವ ಉದ್ಯೋಗದ ನೆಪದಿಂದ ತಮ್ಮ ಪಾಲು ತೆಗೆದುಕೊಂಡು ಬೇರೆ ಊರಿಗೆ ಹೊರಟುಹೋದರು. ನಂತರ ದೊಡ್ಡ ಮಾವನದೇ ಎಲ್ಲ ಪಾರುಪತ್ಯ.

ಶಾಲೆಯ ಕೆಲಸದ ಜೊತೆಗೆ ಮನೆಯ ಕೆಲಸ ತಾಯಿಯ ಪಾಲಿಗೇ ಬಂದಿತು. ಬೆಳಗಿನ ತಿಂಡಿ ಕಾಫಿಯ ಕೆಲಸ ಮುಗಿಸಿ ತನ್ನ ಮತ್ತು ಮಗಳ ಲಂಚ್‌ ಬಾಕ್ಸ್ ಸಿದ್ಧಪಡಿಸಿ ಓಡುತ್ತಾ ಓಡುತ್ತಾ ಶಾಲೆಯನ್ನು ತಲುಪುತ್ತಿದ್ದಳು. ತಡವಾಗಿ ಬಂದುದಕ್ಕೆ ಎಷ್ಟೋ ದಿನಗಳು ಮಾತು ಕೇಳಿದ್ದೂ ಉಂಟು.

ಸಾಯಂಕಾಲ ಅಮ್ಮ ಶಾಲೆ ಮುಗಿಸಿ ಬರುವುದನ್ನೇ ಎಲ್ಲರೂ ಕಾಯುತ್ತಿರುತ್ತಿದ್ದರು. ಬಂದ ಕೂಡಲೇ ಎಲ್ಲರಿಗೂ ಕಾಫಿ ಸರಬರಾಜು. ತಡ ರಾತ್ರಿಯವರೆಗೂ ಅಡುಗೆ ಮನೆಯಿಂದ ಹೊರಬರಲು ಆಗುತ್ತಲೇ ಇರಲಿಲ್ಲ. ಹೋಂವರ್ಕ್‌ಮಾಡಲು ಅಮ್ಮನಿಗಾಗಿ ಕಾಯುತ್ತಾ ಶೀಲಾ ನಿದ್ದೆ ಮಾಡಿಬಿಡುತ್ತಿದ್ದಳು. ಅಮ್ಮ ಕೆಲಸ ಮುಗಿಸಿ ಬಂದು ಪುಸ್ತಕಗಳನ್ನು ತೆಗೆದಿರಿಸಿ. ಪ್ರೀತಿಯಿಂದ ಅವಳನ್ನು ಎಬ್ಬಿಸಿ ಊಟ ಮಾಡಿಸುತ್ತಿದ್ದಳು. ಜೊತೆಗೆ ಹಾಡು ಹೇಳಿ ಮಲಗಿಸುತ್ತಿದ್ದಳು. ಮರುದಿನ ಬೇಗನೆ ಎಬ್ಬಿಸಿ ಹೋಂವರ್ಕ್‌ ಮಾಡಿಸುತ್ತಿದ್ದಳು.

ಶೀಲಾ ತನ್ನ ಪುಸ್ತಕದ ಯಾವುದಾದರೂ ಪ್ರಶ್ನೆ ಅಥವಾ ಲೆಕ್ಕದ ಬಗ್ಗೆ ಮಾಮ ಅಥವಾ ಅತ್ತೆಯನ್ನು ಸಹಾಯ ಕೇಳಿದರೆ, ಅವರು ತಮಾಷೆ ಮಾಡುತ್ತಿದ್ದರು.

“ಅಯ್ಯೋ ಪುಟ್ಟಿ, ಇದೆಲ್ಲ ಕಲಿತು ಏನು ಮಾಡಬೇಕು. ನೀನೇನು ಆಫೀಸರ್‌ ಆಗಬೇಕಾಗಿದೆಯಾ? ನಡಿ, ಅಮ್ಮನಿಗೆ ಸಹಾಯ ಮಾಡುವ ಕೆಲಸ ಕಲಿತುಕೊ.”

ಶೀಲಾ ಸಪ್ಪೆ ಮುಖದಿಂದ ಹಿಂದಿರುಗುತ್ತಿದ್ದಳು. ಅವರು ಹಾಸ್ಯ ಮಾಡುವರೆಂದು ಅವಳು ಎದೆಗುಂದಲಿಲ್ಲ, ಮನಸ್ಸಿನಲ್ಲಿ ನಿರಾಶೆಗೆ ಎಡೆಗೊಡಲಿಲ್ಲ. ಬದಲಾಗಿ ಇನ್ನೂ ದೃಢವಾದ ಇಚ್ಛೆಯಿಂದ ವಿದ್ಯಾಭ್ಯಾಸದಲ್ಲಿ ಮನಸ್ಸನ್ನು ತೊಡಗಿಸಿದಳು.

ಮಾಮ ಮತ್ತು ಅತ್ತೆ ಆಗಾಗ ತಮ್ಮ ಮಕ್ಕಳನ್ನು ಕರೆದುಕೊಂಡು ಪಾರ್ಕ್‌, ಸಿನಿಮಾ ಎಂದು ಹೊರಗೆ ಹೋಗಿ ಸುತ್ತಾಡಿಸಿ, ತಿಂಡಿ ತಿಂದು ಬರುತ್ತಿದ್ದರು. ಆದರೆ ಎಂದೂ ಶೀಲಾಳನ್ನಾಗಲೀ ಅಥವಾ ಅವಳ ತಾಯಿಯನ್ನಾಗಲೀ ಕರೆದೊಯ್ಯುತ್ತಿರಲಿಲ್ಲ.

ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ ಅತ್ತೆ ತಮ್ಮ ಮಕ್ಕಳನ್ನು ಮೊದಲು ಕೂರಿಸಿ ಬಡಿಸುತ್ತಿದ್ದರು. ಶೀಲಾ ತನ್ನ ತಟ್ಟೆಯನ್ನು ಕೈಲಿ ಹಿಡಿದು ತನ್ನ ಸರತಿಗಾಗಿ ಕಾಯುತ್ತಿದ್ದಳು. ಕಡೆಯಲ್ಲಿ ಅವಳನ್ನು ನೋಡಿದಂತೆ ನಟಿಸಿ ಅತ್ತೆ ಕೃತಕವಾದ ಪ್ರೀತಿಯ ದನಿಯಲ್ಲಿ, “ಅಯ್ಯೋ ಶೀಲಾ ಪುಟ್ಟಿ, ಅಲ್ಲೇ ನಿಂತಿದ್ದೀಯಲ್ಲ…. ಬಾ ಬಾ….,” ಎಂದು ಅಳಿದುಳಿದುದನ್ನು ತಟ್ಟೆಗೆ ಹಾಕುತ್ತಿದ್ದರು. ಶೀಲಾಳಿಗೆ ಮನಸ್ಸು ಮುದುಡುತ್ತಿತ್ತು.

`ಓಹ್‌! ನನಗೂ ಅಪ್ಪ ಇದ್ದಿದ್ದರೆ ಎಷ್ಟು ಪ್ರೀತಿಸುತ್ತಿದ್ದರು, ಪ್ರೀತಿಯಿಂದ ತಿನ್ನಿಸುತ್ತಿದ್ದರು. ಆಗ ಯಾರಿಗೂ ನನ್ನನ್ನು ಹಾಸ್ಯ ಮಾಡೋದಕ್ಕೆ ಧೈರ್ಯ ಇರುತ್ತಿರಲಿಲ್ಲ,’ ಅವಳು ದಿಂಬಿನಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆದರೆ ಅಮ್ಮ ನೋಡಿದರೆ ನೊಂದುಕೊಳ್ಳುತ್ತಾರೆ. ತಾವು ಜೊತೆಗೆ ಅಳುತ್ತಾರೆ ಎಂದು ತಿಳಿದಿದ್ದ ಅವಳು ತಾಯಿ ಬರುವ ಮೊದಲೇ ಕಣ್ಣೊರೆಸಿಕೊಂಡು ನಗುವ ನಾಟಕ ಆಡುತ್ತಿದ್ದಳು.

ಒಮ್ಮೆ ಶೀಲಾ ಗುರೂಜಿಯೊಂದಿಗೆ ಮನೆಯವರು ಕೊಡುತ್ತಿರುವ ಕಷ್ಟಗಳ ವಿಷಯವನ್ನು ತೋಡಿಕೊಂಡಳು. ಆದರೆ ಅವರು ಏನೋ ಒಂದು ಹೇಳಿ ಸುಮ್ಮನಿರಿಸಿದ್ದರು. ಆಗ ಅವಳಿಗೆ ಎಲ್ಲರಂತೆ ಗುರೂಜೀ ಸಹ ಹಣವಂತರ ಬೆಂಬಲಕ್ಕಿರುವವರು ಎಂದು ಅರ್ಥವಾಯಿತು.

ಅವಳು ಬೆಳೆಯುತ್ತಾ ಬಂದಂತೆ, ಅವಳಿಗೆ ಪ್ರಪಂಚದ ರೀತಿ ನೀತಿಯ ಅರಿವಾಗತೊಡಗಿತು. ತನ್ನ ಕಾಲ ಮೇಲೆ ತಾನು ನಿಲ್ಲುವವರೆಗೆ ಈ ಜಂಜಾಟ ತಪ್ಪದು ಎಂಬ ತಿಳಿವು ಮೂಡಿ ತನ್ನ ಗುರಿಯೆಡೆಗೆ ಲಕ್ಷ್ಯವನ್ನು ಕೇಂದ್ರೀಕರಿಸಿದಳು. ಅವಳ ಸತತ ಪರಿಶ್ರಮ ಫಲ ನೀಡಿತು. ಕಡೆಗೊಂದು ದಿನ ಅವಳು ಬಾಲ್ಯದ ಕನಸಿನಂತೆ ದೊಡ್ಡ ಆಫೀಸರ್‌ ಆಗುವಲ್ಲಿ ಸಫಲಳಾದಳು.

ಆ ದಿನ ತಾಯಿ ಮಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಬಹಳವಾಗಿ ಅತ್ತುಬಿಟ್ಟರು. ಶೀಲಾಳಿಗೆ ಸರ್ಕಾರದ ವತಿಯಿಂದ ಬಂಗಲೆ, ಕಾರು, ನೌಕರರು ಎಲ್ಲ ದೊರೆತವು. ಅಜ್ಜಿಗೂ ಬಹಳ ಸಂತೋಷವಾಯಿತು. ನೆಂಟರು, ನೆರೆಹೊರೆಯವರಿಗೆಲ್ಲ ಸುದ್ದಿ ಮುಟ್ಟಿತು. `ಅತ್ತೆ ಮನೆಯಲ್ಲಿ ಇರಲಾರದೆ ಬಂದಳು,’ `ತವರಿಗೆ ಬಂದು ಕುಳಿತಿರುವವಳು’ ಎಂದು ಹೀಗಳೆಯುತ್ತಿದ್ದವರು ಮಾಲತಿಯನ್ನು ಅವಳ ಮಗಳನ್ನೂ ಹೊಗಳಿ ಹೊಗಳಿ ಹೋದರು. ಶೀಲಾಳ ಸೋದರ ಮಾವ ಮತ್ತು ಅತ್ತೆಯಂತೂ ಅವಳು ಆಫೀಸರ್‌ ಆಗಿದ್ದರ ಕ್ರೆಡಿಟ್‌ ಪೂರಾ ತಮ್ಮದೆಂಬಂತೆ ಗರ್ವದಿಂದ ತಿರುಗಾಡಿದರು.

ಕಾಲಚಕ್ರ ತಿರುಗಿತ್ತು. ಈಗ ಮಾಲತಿ ಮತ್ತು ಶೀಲಾರ ಬಗ್ಗೆ ಮಾಮ ಮತ್ತು ಅತ್ತೆಯ ಧೋರಣೆಯೇ ಬದಲಾಗಿತ್ತು. ಅತ್ತೆಯಂತೂ, “ಬಿಡು ಮಾಲತಿ, ಸ್ವಲ್ಪ ರೆಸ್ಟ್ ತಗೊ. ಏನು ಮಾಡಬೇಕು ಅಂತ ಹೇಳು,” ಎನ್ನುತ್ತಿದ್ದರು. ಅತ್ತೆಯ ಈ ವರ್ತನೆ ಶೀಲಾಳಿಗೆ ಬಹಳ ಸಂತೋಷ ನೀಡುತ್ತಿತ್ತು. ಇಂತಹದೊಂದು ದಿನಕ್ಕಾಗಿ ಅವಳೆಷ್ಟು ಕಾತರದಿಂದ ಕಾದಿದ್ದಳು.

ಸರ್ಕಾರಿ ಬಂಗಲೆ ಸಿದ್ಧವಾಗಿದೆ ಎಂದು ತಿಳಿದ ಕೂಡಲೇ ಮಾಮ ಮತ್ತು ಅತ್ತೆ ಸಾಮಾನು ಕಟ್ಟಲು ಪ್ರಾರಂಭಿಸಿದರು. ಆದರೆ ಅಜ್ಜಿ ಮನೆ ಬದಲಾಯಿಸಲು ಒಪ್ಪಲಿಲ್ಲ,

“ನಿಮ್ಮ ಅಪ್ಪ ಬಾಳಿದ ಮನೆ ಇದು. ಇದನ್ನು ಬಿಟ್ಟು ನಾನೆಲ್ಲಿಗೂ ಬರಲಾರೆ. ಬೇಕಾದವರು ಹೋಗಿ,” ಎಂದುಬಿಟ್ಟರು. ಮಾಲತಿಗೆ ತನ್ನ ತಾಯಿಯ ಮನಸ್ಥಿತಿ ತಿಳಿದಿತ್ತು. ಹೀಗಾಗಿ ಅವಳೂ ಹೋಗುವುದು ಬೇಡ ಎಂದುಬಿಟ್ಟಳು.

ಈ ಮಧ್ಯೆ ಟ್ರೇನಿಂಗ್‌ ಸಮಯದಲ್ಲಿ  ಶೀಲಾಳ ಬ್ಯಾಚ್‌ಮೇಟ್‌ ಆಗಿದ್ದ ರಾಜೇಶ್‌ನಿಂದ ಮದುವೆಯ ಪ್ರಸ್ತಾಪ ಬಂದಿತು. ಆಕರ್ಷಕ ವ್ಯಕ್ತಿತ್ವದ, ಸುಸ್ಕೃಂತನಾದ ರಾಜೇಶ್‌ನನ್ನು ಶೀಲಾ ಮೆಚ್ಚಿಕೊಂಡಳು.

ರಾಜೇಶ್‌ ತನ್ನ ತಾಯಿಯನ್ನು ಭೇಟಿ ಮಾಡಿಸಲೆಂದು ಶೀಲಾಳನ್ನು ಮನೆಗೆ ಕರೆದೊಯ್ದ. ತನ್ನ ತಂದೆಯ ಮರಣದ ನಂತರ ತಾಯಿ ಹೇಗೆ ಇತರರ ಮನೆಗೆಲಸ ಮಾಡಿ, ಜೀತ ಮಾಡಿ ತನ್ನನ್ನು ಒಬ್ಬ ಆಫೀಸರ್‌ ಆಗಿ ಮಾಡಲು ಜೀವ ತೇಯ್ದಳು ಎಂದು ರಾಜೇಶ್ ವಿವರಿಸಿ, “ನನ್ನ ತಾಯಿಗೆ ನಾನು, ನನಗೆ ನನ್ನ ತಾಯಿ. ಇದಿಷ್ಟೇ ನಮ್ಮ ಪ್ರಪಂಚ. ಇನ್ನು ಮುಂದೆ ನೀನು ನಮಗೆ ಬೆಂಗಾವಲಾಗಿ ನಿಲ್ಲಬೇಕು,” ಎಂದು ಹೇಳಿದ.

ರಾಜೇಶ್‌ ಹೇಳಿದುದನ್ನು ಕೇಳಿ ಶೀಲಾಳಿಗೆ ಈ ಪ್ರಪಂಚ ಎಷ್ಟು ಚಿಕ್ಕದು ಎನಿಸಿತು. ಅದುವರೆಗೆ ತನ್ನ ಕಷ್ಟವೇ ದೊಡ್ಡದೆಂದು ಭಾವಿಸಿದ್ದ ಅವಳಿಗೆ, ರಾಜೇಶ್‌ ಸಹ ಮುಳ್ಳಿನ ಹಾದಿಯಲ್ಲಿ ನಡೆದು ತನ್ನವರೆಗೆ ತಲುಪಿದ್ದಾನೆ. ಇನ್ನೂ ತಾವಿಬ್ಬರು ಸಂಗಾತಿಗಳಾಗುವುದರಿಂದ ಇಬ್ಬರ ದಾರಿಯೂ ಒಂದೇ ಮತ್ತು ಗುರಿಯೂ ಒಂದೇ ಎಂದು ಭಾಸವಾಯಿತು.

ರಾಜೇಶನ ತಾಯಿಗೆ ವಿದ್ಯಾವಂತೆ ಮತ್ತು ವಿನಯಮೂರ್ತಿಯಾದ ಶೀಲಾಳನ್ನು ಕಂಡು ಬಹಳ ಸಂತೋಷವಾಯಿತು. ಅವರು ತಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಶೀಲಾಳಿಗೆ ತೊಡಿಸುತ್ತಾ, “ಬೇಗ ನಮ್ಮಲ್ಲಿಗೆ ಬಾ ಮಗು. ಈ ಬರಿದಾದ ಮನೆಯನ್ನು ಬೆಳಗು,” ಎಂದು ಸ್ನೇಹಪೂರ್ವಕವಾಗಿ ಹೇಳಿದರು.

ಶೀಲಾಳ ಮನೆಯವರಿಗೆ ವಿಷಯ ತಿಳಿದಾಗ ರಾದ್ಧಾಂತವಾಯಿತು. ಅನ್ಯ ಜಾತಿಯವನಾದ ಮತ್ತು ಮಾಂಸಾಹಾರಿಯಾದ ರಾಜೇಶನನ್ನು ಸಂಪ್ರದಾಯಸ್ಥ ಕುಟುಂಬದವರಾದ ಶೀಲಾಳ ಮಾವ ಅತ್ತೆ ಒಪ್ಪಲು ಸಾಧ್ಯವಿರಲಿಲ್ಲ. ಮನೆಯವರ ವಿರುದ್ಧವಾಗಿ ಹೋಗಲು ಅವಳ ತಾಯಿಯೂ ಇಷ್ಟಪಡದಿದ್ದಾಗ ಶೀಲಾ ಸಿಟ್ಟಾದಳು, “ಅಮ್ಮಾ, ಹಳೆ ಕಥೆ ಪುನರಾವರ್ತನೆ ಆಗಬೇಕು ಅನ್ನುತ್ತೀಯಾ? ಜಾತಿ ಧರ್ಮದ ಹೆಸರಿನಲ್ಲಿ ಇನ್ನೊಂದು ಜೀವ ನರಳಬೇಕೇ……?” ಎನ್ನುತ್ತಾ ಅವಳು ಅಳತೊಡಗಿದಳು.

ಮಗಳ ಮನಸ್ಸನ್ನು ನೋಯಿಸಲು ಮಾಲತಿಗೆ ಸಾಧ್ಯವಾಗಲಿಲ್ಲ. ಹತ್ತಿರ ಬಂದು ಅವಳ ತಲೆ ನೇವರಿಸಿ, “ನಿನ್ನ ಸಂತೋಷಕ್ಕಾಗಿ ನಾನು ಯಾವುದಕ್ಕೂ ಸಿದ್ಧಳಾಗಿದ್ದೇನೆ….. ನಾವು ಈ ಮನೆಯನ್ನು ಬಿಟ್ಟು ಹೊರಗೆ ಹೋಗೋಣ,”  ಎಂದಳು.

ಅತ್ತೆ ಮತ್ತು ಮಾವರಿಗೆ ಇವರಿಬ್ಬರ ನಿರ್ಧಾರ ಗಟ್ಟಿಯಾಗಿದೆ ಎಂದು ತಿಳಿದಾಗ ಗುರೂಜಿಯ ಮೊರೆ ಹೊಕ್ಕರು. ವಿಷಯ ತಿಳಿದ ಕೂಡಲೇ ಗುರೂಜೀ ಸಿಟ್ಟಾದರು. ಅವರು ಶೀಲಾಳಿಗೆ ಬುದ್ಧಿ ಹೇಳಲು ಪ್ರಾರಂಭಿಸುತ್ತಿದ್ದಂತೆಯೇ ಶೀಲಾ ತನ್ನ ಕೊರಳಿನಲ್ಲಿದ್ದ ಗುರೂಜೀಯ ಚಿತ್ರವಿದ್ದ ಲಾಕೆಟ್‌ನ್ನು ಬಿಚ್ಚಿ ಅವರ ಮುಂದೆ ಹಾಕಿದಳು.

ಗುರೂಜೀ ಆಶ್ಚರ್ಯ, ಕೋಪಗಳಿಂದ ಕೂಡಿ ಅವಳತ್ತ ನೋಡಿದರು. ಉಳಿದವರು ಬೆಚ್ಚಿ ಅವಳನ್ನು ಗದರಿಸಿದರು, “ಶೀಲಾ, ಇದೆಂಥ ಹುಚ್ಚುತನ ನಿನ್ನದು?”

ಶೀಲಾ ದೃಢವಾದ ಸ್ವರದಲ್ಲಿ ಹೇಳಿದಳು, “ನಿಮ್ಮ ಸೇವೆ ಮಾಡಿದ್ದೂ ಆಯಿತು. ನಿಮ್ಮ ಶಕ್ತಿ ನೋಡಿದ್ದೂ ಆಯಿತು. ಎಲ್ಲ ಬರೀ ಸ್ವಾರ್ಥ! ಇನ್ನು ನನ್ನ ಸರ್ವಸ್ವವೆಲ್ಲ ನನ್ನನ್ನು ವಿವಾಹವಾಗಲಿರುವ ರಾಜೇಶ್‌ ಮಾತ್ರ. ಅವರ ಮನೆಯೇ ನನ್ನ ದೇವಸ್ಥಾನ. ಅಲ್ಲಿ ಮಾಡುವ ಸೇವೆ ನಿಮ್ಮ ಬೂಟಾಟಿಕೆಯ ದೇವರು ಧರ್ಮಕ್ಕಿಂತ ದೊಡ್ಡದು,” ಎನ್ನುತ್ತಾ ವೇಗವಾಗಿ ಹೊರನಡೆದಳು.

ಶೀಲಾಳ ಈ ಆತ್ಮವಿಶ್ವಾಸದ ಮುಂದೆ ಎಲ್ಲರೂ ತಲೆಬಾಗಿದರು. ನಂತರ ರಾಜೇಶನೊಡನೆ ಅವಳ ವಿವಾಹ ಕಾರ್ಯವನ್ನು ನೆರವೇರಿಸಿದರು.

ಮನೆಯೊಳಗಿನಿಂದ ನೀರು ಸುರಿಯುವ ಶಬ್ದ, ಪಾತ್ರೆಯ ಠಣ್‌ ಠಣ್‌ ಶಬ್ದ ಕೇಳಿ ಶೀಲಾ ವಾಸ್ತವ ಪ್ರಪಂಚಕ್ಕೆ ಬಂದಳು. ಕಣ್ಣು ಉಜ್ಜಿಕೊಂಡು ಎದ್ದು ಕುಳಿತಳು. ಸೋಫಾಗೆ ಒರಗಿ ಕುಳಿತಿದ್ದಂತೆಯೇ ಅವಳಿಗೆ ಜೋಂಪು ಹತ್ತಿದಂತಾಗಿತ್ತು. ತನ್ನ ಜೀವನದ ಹಳೆಯ ಚಿತ್ರಗಳೆಲ್ಲ ಪುನರಾವರ್ತನೆಯಾಗಿದ್ದವು.

`ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ರಾಜೇಶ್‌ ಇನ್ನೇನು ಬಂದುಬಿಡುತ್ತಾರೆ,’ ಎಂಬ ಮಧುರವಾದ ಆಲೋಚನೆಯೊಂದಿಗೆ ಅವಳ ಮುಖದಲ್ಲಿ ಲಜ್ಜೆಯಿಂದ ಕೂಡಿದ ಮುಗುಳ್ನಗೆ ಮೂಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ