2004ರ ನಂತರ ಶೀತಲ್ ಸ್ಕೈ ಡೈವಿಂಗ್ನಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದರು. ಶೀತಲ್ ಇಂದಿನವರೆಗೂ 705 ಪ್ಯಾರಾಶೂಟ್ ಜಂಪ್ಗಳನ್ನು ಮಾಡಿದ್ದಾರೆ. ಇವೆಲ್ಲ ಜಂಪ್ಗಳನ್ನೂ ಆಕೆ 13,500 ಅಡಿ ಎತ್ತರಿದಿಂದ ಮಾಡಿದ್ದಾರೆ. ಕೆಲವನ್ನಂತೂ ಆಕೆ 18,000 ಅಡಿ ಎತ್ತರದಿಂದ (ಆಕ್ಸಿಜನ್ ಸಿಲಿಂಡರ್ ಸಮೇತ) ಹಾಗೂ ಮತ್ತೊಮ್ಮೆ 30,500 ಅಡಿ ಎತ್ತರದಿಂದ ಆಕ್ಸಿಜನ್ ಮಾಸ್ಕ್ ಸಮೇತ ದುಮುಕಿದ್ದಾರೆ.
ಇಷ್ಟು ಮಾತ್ರವಲ್ಲದೆ, ಶೀತಲ್ 8 ವಿಭಿನ್ನ ಬಗೆಯ ಏರ್ಕ್ರಾಫ್ಟ್ ಗಳಿಂದ ಬೇರೆ ಬೇರೆ ಸ್ಥಾನಗಳಿಂದ ಅಂದ್ರೆ ಉತ್ತರ ಧ್ರುವ (ಆರ್ಕ್ಟಿಕ್) ಹಾಗೂ ದಕ್ಷಿಣ ಧ್ರುವ (ಅಂಟಾರ್ಕ್ಟಿಕ್), ಆಸ್ಟ್ರೇಲಿಯಾ, ಅಮೆರಿಕಾ, ಏಷ್ಯಾ, ಆಫ್ರಿಕಾ, ಯೂರೋಪ್ಗಳಲ್ಲಿ ಅಮೋಘ ಡೈವಿಂಗ್ಸ್ ಮಾಡಿದ್ದಾರೆ. ಆ ಮೂಲಕ ಆಕೆ ಈಗಾಗಲೇ ಹಲವಾರು ಸಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿದ್ದಾರೆ.
ಶೀತಲ್ ಇದನ್ನೇ ಹವ್ಯಾಸವಾಗಿ ಇರಿಸಿಕೊಂಡು, ಫಿನ್ಲೆಂಡ್ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ವೈಭವ್ ರಾಣೆ ಜೊತೆ 2008ರಲ್ಲಿ ನೆಲದಿಂದ 600 ಅಡಿ ಎತ್ತರದಲ್ಲಿ ಹಾಟ್ ಏರ್ಬೆಲೂನ್ನಲ್ಲಿ ಮದುವೆ ಆದರು. ಇದು `ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ. ಈಗ ಈಕೆ ಅವಳಿ ಮಕ್ಕಳ ತಾಯಿ. 2011ರಲ್ಲಿ ಈಕೆಗೆ ‘ಪದ್ಮಶ್ರೀ’ ಪ್ರಶಸ್ತಿಯೂ ಲಭಿಸಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಶೀತಲ್ ಥೈಲೆಂಡ್ನ ಪಟಾಯಾದಲ್ಲಿ, ಮಹಾರಾಷ್ಟ್ರದ ರಂಗುರಂಗಿನ ನೌವಾರಿ ಸೀರೆ ಧರಿಸಿ, 13,000 ಅಡಿ ಎತ್ತರದಿಂದ ದುಮುಕಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಭಾರತೀಯ ನಾರಿ, ಕೇವಲ ದೈನಂದಿನ ಕೆಲಸಗಳಿಗೆ ಮಾತ್ರ ಸೀರೆ ಉಡುವುದಲ್ಲ, ಸ್ಕೈ ಡೈವಿಂಗ್ನಂಥ ರೋಮಾಂಚಾರಿ ಸಾಹಸ ಕ್ರೀಡೆಗಳಲ್ಲೂ ಸೈ ಎನಿಸಬಲ್ಲಳು ಎಂಬುದನ್ನು ವಿಶ್ವಕ್ಕೆ ತೋರಿಸಿ ನಿರೂಪಿಸಿದ್ದಾರೆ. 18 ಮೊಳದೆ ಸೀರೆಯುಟ್ಟು ಅತ್ಯಂತ ಕ್ಯಾಶ್ಯುಯೆಲ್ ಆಗಿ ಗಗನದಿಂದ ಭೂಮಿಗೆ ದುಮುಕಿದಾಗ, ವಿದೇಶೀಯರೆಲ್ಲ ಬೆರಗಾಗಿ, ಭಾರತೀಯ ಸೀರೆ, ಅದನ್ನು ಉಡುವ ಪರಿಯನ್ನೂ ಶ್ಲಾಘಿಸಿದರಂತೆ!
ಈ ಫೀಲ್ಡ್ ಗೆ ಬರಲು ನಿಮಗೆ ಪ್ರೇರಣೆ…..?
ನನಗೆ ಬಾಲ್ಯದಿಂದಲೇ ಏನಾದರೂ ಅಸಾಧ್ಯವಾದ ಸಾಹಸಕಾರ್ಯ ಕೈಗೊಳ್ಳಬೇಕೆಂಬ ಹಂಬಲವಿತ್ತು. ನಾನು ಮಿಲಿಟರಿ ಸೇರುವ ಪ್ರಯತ್ನ ಸಹ ಮಾಡಿದೆ. 12ನೇ ತರಗತಿ ಓದುವಾಗ, ನಮ್ಮ ದೇಶದಲ್ಲಿ ಪಿಯು ಮುಗಿಸಿದಾಗ ಮಾತ್ರ ಹೆಂಗಸರು ಮಿಲಿಟರಿ ಸೇರಲು ಸಾಧ್ಯ ಎಂದು ತಿಳಿಯಿತು. ಹಾಗೆಯೇ ನಾನು ಸ್ನಾತಕ ಪದವಿ ಪಡೆದ ನಂತರವೇ ಈ ಫೀಲ್ಡ್ ಗೆ ಬರಲು ಯತ್ನಿಸಿದೆ. ಇದಕ್ಕೆ ಮೊದಲು ನನಗೆ ಕಲಾವಿದೆ ಆಗುವ ಆಸೆಯಿತ್ತು. ನಾನು ಉತ್ತಮ ಪೇಂಟಿಂಗ್ಸ್ ಸಹ ಮಾಡಿದ್ದೇನೆ. ಲತಾಜಿ, ಸಚಿನ್ ನನಗೆ ಮೂಲ ಪ್ರೇರಣೆ ನೀಡಿದರು ಎನ್ನಬಹುದು. ಅವರಂತೆ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಮೂಡಿತು.
ನನ್ನ ಗೆಳತಿಯ ಅಣ್ಣ ವಿದೇಶಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಮ್ ಪೇರ್ಸೆಸ್ ಟ್ರೇನಿಂಗ್ ನೀಡುತ್ತಾರೆ. ಅವರು ಅಲ್ಲಿ ಸ್ಕೈ ಡೈವಿಂಗ್ನಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಅದನ್ನು ನೋಡಿ ನಾನು ಈ ಫೀಲ್ಡ್ ಗೆ ಬಂದೆ. 21ರ ಹರೆಯದಲ್ಲಿ ನಾನು ಉತ್ತರ ಧ್ರುವದಿಂದ ತರಬೇತಿ ಇಲ್ಲದೆಯೇ ಜಂಪ್ ಮಾಡಿ ಯಶಸ್ವಿಯಾದೆ. ಹೀಗಾಗಿ ಈ ದಿಶೆಯಲ್ಲಿ ಮುಂದುವರಿಯಲು ಸಾಧ್ಯವಾಯಿತು.
ಇಲ್ಲಿಯವರೆಗೂ ತಲುಪಲು ಏನೆಲ್ಲ ಸಂಘರ್ಷಗಳನ್ನು ಎದುರಿಸಿದಿರಿ?
ಈ ಸ್ಪೋರ್ಟ್ಸ್ ನಲ್ಲಿ ಮುಖ್ಯ ಸಮಸ್ಯೆ ಇರುವುದೇ ಹಣದ ಹೂಡಿಕೆಯಲ್ಲಿ. ಸ್ಪಾನ್ಸರ್ ಶಿಪ್ ಆಧಾರದಿಂದ ಈ ಆಟ ನಡೆಯುತ್ತದೆ. ಭಾರತ ಸರಕಾರ ಇದಕ್ಕೆ ಮಾನ್ಯತೆ ನೀಡದು. `ಪದ್ಮಶ್ರೀ’ ಪ್ರಶಸ್ತಿ ಲಭಿಸಿದ್ದರೂ ಸರ್ಕಾರದಿಂದ ಯಾವ ನೆರವನ್ನೂ ಬಯಸುವಂತಿಲ್ಲ. ಇದಕ್ಕಾಗಿ ನಾನು ನನ್ನ ಪತಿ, ತಂದೆ, ಅಣ್ಣಂದಿರ ಬಳಿ ಆರ್ಥಿಕ ಸಹಾಯ ಪಡೆಯುತ್ತೇನೆ.
ಸ್ಕೈ ಡೈವಿಂಗ್ ಎಷ್ಟು ಚಾಲೆಂಜಿಂಗ್ ಅಂತೀರಿ?
ಸ್ಕೈ ಡೈವಿಂಗ್ ನಿಜಕ್ಕೂ ಬಲು ಚಾಲೆಂಜಿಂಗ್ ಕೆರಿಯರ್. ಅಕಸ್ಮಾತ್ ಒಂದು ಪ್ಯಾರಾಶೂಟ್ ಓಪನ್ ಆಗದಿದ್ದರೆ ಎರಡನೆಯದನ್ನು ಓಪನ್ ಮಾಡಲೇ ಬೇಕಾಗುತ್ತದೆ. ಸಾಮಾನ್ಯವಾಗಿ ಸ್ಕೈ ಡೈವಿಂಗ್ಸ್ ನಲ್ಲಿ ಒಂದು ಪ್ಯಾರಾಶೂಟ್ನಲ್ಲೇ 2 ಪ್ಯಾರಾಶೂಟ್ಗಳಿರುತ್ತವೆ. ನಾವು ಸಾಧಾರಣವಾಗಿ ತೆರೆಯುವ ಮೊದಲ ಪ್ಯಾರಾಶೂಟ್ನ್ನು ಸಲೀಸಾಗಿ ಬಳಸುತ್ತೇವೆ. ಅಕಸ್ಮಾತ್ ಅದರಲ್ಲಿ ಸಮಸ್ಯೆ ಕಾಣಿಸಿದಾಗ ಎಮರ್ಜೆನ್ಸಿಯಲ್ಲಿ ನಾವು ಎರಡನೆಯದನ್ನು ತೆರೆದು ಸೇಫ್ ಲ್ಯಾಂಡಿಂಗ್ ಮಾಡುತ್ತೇವೆ. ನೀವು ಏನೋ ಒಂದು ಕಾರಣಕ್ಕಾಗಿ ಈ ಎಮರ್ಜೆನ್ಸಿ ಪ್ಯಾರಾಶೂಟ್ನ್ನು ತೆರೆಯಲು ಆಗದಿದ್ದರೆ, ಒಂದು ಆಟೋಮ್ಯಾಟಿಕ್ ಓಪನ್ ಡಿವೈಸ್ಇರುತ್ತದೆ, ಅದನ್ನು 1,500 ಅಡಿಗಳ ಎತ್ತರದಿಂದಲೂ ಓಪನ್ ಮಾಡಿ ಕ್ಷೇಮವಾಗಿ ಕೆಳಗಿಳಿಯಬಹುದು. ಈ ರೀತಿ ಇದು ಸೇಫ್ಸ್ಪೋರ್ಟ್ಸ್ ಎನಿಸಿದವು. ಆದರೆ ಭಯ ಅನ್ನೋದು ಇದ್ದೇ ಇರುತ್ತೆ ಬಿಡಿ.
ಈ ರೀತಿ ಸ್ಕೈ ಡೈವಿಂಗ್ ಮಾಡುವಾಗ ನಿಮಗೆ ಎಂದಿಗೂ ಭಯ ಆಗಲಿಲ್ಲವೇ?
ಇಲ್ಲ, ನನಗೆ ಅಂಥ ಭಯವೇನೂ ಆಗಲಿಲ್ಲ. ಮಹಿಳೆಯಾದರೂ ನಾನು ಈ ಸಾಹಸಭರಿತ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದೇನೆ ಎಂದು ನನಗೆ ಈ ಇಡೀ ವಿಶ್ವದೆದುರು ಪ್ರೂವ್ ಮಾಡಲೇಬೇಕಿತ್ತು. ನಾನು ಮೊದಲ ಸಲ ನಾರ್ಥ್ ಪೋಲ್ನಿಂದ ಜಂಪ್ಮಾಡುತ್ತಿದ್ದಾಗ, ನನ್ನ ಮೊಟ್ಟ ಮೊದಲ ಜಂಪ್ನ ಪ್ಯಾರಾಶೂಟ್ ಹರಿದಿತ್ತು. ಆಗ ನನಗೆ ತುಸು ಭಯವಾಯಿತು. ಆದರೆ ಪ್ಯಾರಾಶೂಟ್ ತೆರೆದುಕೊಂಡ ಮೇಲೆ ನನಗೆ ಗೊತ್ತಾಯಿತು, ಅದು ಹರಿದಿರುವುದಲ್ಲ….. ಅದರ ಡಿಸೈನ್ ಇರುವುದೇ ಹಾಗೆ ಅಂತ. ಅದಾದ ಮೇಲೆ ನಾನೆಂದೂ ಭಯಪಡಲೇ ಇಲ್ಲ!
ಮದುವೆ ನಂತರ ಸ್ಪೋರ್ಟ್ಸ್ ಮತ್ತು ಪರಿವಾರದ ನಡುವೆ ಹೇಗೆ ಸಾಮರಸ್ಯ ಕಾಪಾಡಿಕೊಳ್ಳುವಿರಿ?
ಮದುವೆ ನಂತರ ಅಡ್ಜಸ್ಟ್ ಮಾಡಿಕೊಳ್ಳಲು ಹೆಚ್ಚು ಸವಾಲುಗಳು ಎದುರಾದವು ಎಂದೇ ಹೇಳುತ್ತೇನೆ. ಮುಖ್ಯ ನನ್ನ ಪ್ರೆಗ್ನೆನ್ಸಿ ಸಮಯ, ಅದಾದ ಮೇಲೆ ಅವಳಿ ಮಕ್ಕಳ ತಾಯಿಯಾದ ಸಂದರ್ಭ…. ಅದರಲ್ಲೂ ಬಾಣಂತನ ಮುಗಿಸಿ ನಾನು ಜಂಪ್ಗೆ ಹೊರಡಬೇಕಿತ್ತು, ನನ್ನ ಅತ್ತೆಮನೆಯವರು ನಿಜಕ್ಕೂ ಹೆದರಿದ್ದರು, ಬೇಡ ಎಂದರು. ಈ ಆಟ, ಜಿಗಿತ ಬಿಟ್ಟುಬಿಡು ಎಂದೇ ಹೇಳಿದರು. ಆದರೆ ನಾನು ಅವರಿಗೆ, ಮದುವೆ ಬಿಟ್ಟೇನು ಈ ಆಟವನ್ನಲ್ಲ ಎಂದು ಮನವರಿಕೆ ಮಾಡಿಕೊಟ್ಟೆ. ಮದುವೆಗೆ ಮೊದಲೇ ನಾನು ಈ ಕ್ರೀಡಾಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಮದುವೆ ಆಯ್ತು ಎಂಬ ಒಂದೇ ಕಾರಣಕ್ಕೆ ಇದನ್ನು ಬಿಟ್ಟುಬಿಡುವುದು ಅಸಾಧ್ಯವಾದ ಮಾತಾಗಿತ್ತು. ಮದುವೆಗೆ ಮೊದಲೇ ನಾನು ನನ್ನ ಪತಿ, ಅತ್ತೆ ಮನೆಯವರೊಂದಿಗೆ ಈ ಬಗ್ಗೆ ಮಾತನಾಡಿದ್ದೆ. ಆದರೆ ಅವಳಿ ಮಕ್ಕಳಾಗುತ್ತವೆ ಎಂದು ಯಾರಿಗೆ ಗೊತ್ತು? ಅಂತೂ ಮಕ್ಕಳಿಗೆ 1 ವರ್ಷ ತುಂಬಿದ ಮೇಲೆ ನಾನು ಮತ್ತೆ ಇದೇ ರೀತಿ ಜಂಪ್ಮಾಡಿದಾಗ, ನನ್ನ ಪತಿ ನನಗೆ ಬಹಳ ಸಹಕಾರ ನೀಡಿದರು. ಸ್ವಲ್ಪ ಕಾಲದ ನಂತರ ನನ್ನ ಅತ್ತೆ ಮಾವ ಸಹ ಒಪ್ಪಿಗೆ ನೀಡಿದರು.
ನಿಮ್ಮ ಈ ಯಶಸ್ಸಿನ ಕ್ರೆಡಿಟ್ ಯಾರಿಗೆ ಸಲ್ಲುತ್ತದೆ?
ಅದು ಸಂಪೂರ್ಣವಾಗಿ ನನ್ನ ತಂದೆ ಕಮಲಾಕರ್ ಅವರಿಗೇ ಸಲ್ಲಬೇಕು. ಅವರು ಮೊದಲಿನಿಂದಲೂ ನಾನು ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕೆಂದು ಬಹಳ ಸಹಕರಿಸಿದ್ದಾರೆ, ಈಗಲೂ ಸಹ. ಹಾಗಾಗಿಯೇ ನಾನು ಈ ಮಟ್ಟ ತಲುಪಿರುವೆ. ನನ್ನ ಜೀವನದಲ್ಲಿ ಅವರೇ ನನ್ನ ಆದರ್ಶ ಗೈಡ್, ನನ್ನ ಯಶಸ್ಸಿನ ಕ್ರೆಡಿಟ್ ಅವರಿಗೇ ಸಲ್ಲಬೇಕು.
– ಜಿ. ಸುಮಾ