ಹುಟ್ಟೂರು ಚೆನ್ನೈ, ಬಾಲ್ಯ, ಓದು ಅಲ್ಲಿಯೇ. ಅಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಚಿಕ್ಕಂದಿನಿಂದಲೂ ಭರತನಾಟ್ಯದಲ್ಲಿ ಆಸಕ್ತಿ, ಒಳ್ಳೆಯ ನಾಟ್ಯ ಕಲಾವಿದೆ, ಸಾಕಷ್ಟು ಕಾರ್ಯಕ್ರಮಗಳನ್ನೂ ಸೃಷ್ಟಿಸಿಕೊಟ್ಟಿದ್ದಾರೆ. ಕಲಾವಂತಿಕೆಯ ಜೊತೆಗೆ ಸೇವಾ ಮನೋಭಾವ ಕೂಡಾ, ಬಾಲ್ಯದಿಂದಲೂ ಅನೇಕ ಸೇವಾ ಸಂಸ್ಥೆಯ ನೆಂಟಸ್ತಿಕೆ ಹೊಂದಿದ್ದರು. ಮದುವೆಯ ನಂತರ ಬೆಂಗಳೂರಿಗೆ ಆಗಮನ. ಮೊದಲಿನಿಂದಲೂ ಇದ್ದ ಆಸೆ, ಈಗ ಮೊಳಕೆ ಒಡೆಯಿತು.
ಯುವಜನತೆಯನ್ನು ಕಂಡಾಗೆಲ್ಲಾ ರೇಖಾರಲ್ಲಿ ಮೂಡುತ್ತಿದ್ದ ಭಾವ, `ಅವರೊಂದಿಗೆ ಬೆರೆಯಬೇಕು. ಯೌವನವೆಂದರೆ ಬರಿಯ ಮಜಾ ಅಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಜೀವನದಲ್ಲಿ ಒಮ್ಮೆಯಾದರೂ ತಮ್ಮ ದೇಶ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ಅಪಾರ ಶಕ್ತಿಯ ಅರಿವನ್ನು ಮೂಡಿಸಬೇಕು.’
ಯುವ ಜನತೆಯಲ್ಲಿ ಮೌಲ್ಯಗಳು
ಅವರಲ್ಲಿ ಮೌಲ್ಯಗಳನ್ನು ತುಂಬಿ ಅದನ್ನು ಬೀಜದ ರೂಪದಲ್ಲಿ ಹುಟ್ಟುಹಾಕಿದಾಗ ಅದು ಎಲ್ಲರಿಗೂ ನೆರಳು ನೀಡುವ ಮರವಾಗಬಹುದೆನ್ನುವುದು ರೇಖಾರವರ ಆಸೆ. ಇದೊಂದು ರೀತಿಯ ವ್ಯಕ್ತಿತ್ವ ವಿಕಸನ ಎನ್ನಬಹುದು. ಯುವ ಜನಾಂಗ ತಮ್ಮಲ್ಲಿರುವ ಸಕಾರಾತ್ಮಕ ಭಾವನೆಗಳನ್ನು ಅರಿತು ವೃದ್ಧಿಪಡಿಸಿಕೊಳ್ಳಬೇಕು. ಹುಟ್ಟಿದ ದೇಶದ ಮಣ್ಣಿನ ಗುಣ ಎಲ್ಲರಲ್ಲೂ ಇರುತ್ತದೆ. ಅವರಲ್ಲಿ ದೇಶದ ಬೇರುಗಳ ಬಗ್ಗೆ ಅರಿವು ಮೂಡಿದಾಗ ಭವಿಷ್ಯವನ್ನು ಕಟ್ಟುವಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಆಗಲೇ ಅವರು ತಮ್ಮ ವ್ಯಕ್ತಿತ್ವವನ್ನು ಬಲಪಡಿಸಿಕೊಳ್ಳುವುದರ ಜೊತೆಗೆ ದೇಶದ ಬಗ್ಗೆಯೂ ಒಲವು ಮತ್ತು ಅಭಿಮಾನವನ್ನು ಬೆಳೆಸಿಕೊಳ್ಳಲು ಸಾಧ್ಯ. ರೇಖಾರಲ್ಲಿ ಈ ಭಾವನೆಗಳ ಒತ್ತಡ ಮೊಳಕೆಯೊಡೆದು `ದಿಶಾ’ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬಹಳ ಹತ್ತಿರದಿಂದ ನೋಡಿರುವ ರೇಖಾ, ಈ ಇಬ್ಬರ ಬೇಕುಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತು ತಮ್ಮ ಕನಸಿನ ಕೂಸು ದಿಶಾ ಮೂಲಕ ಅದನ್ನು ಪೂರೈಸುವ ಆಶಯ ಅವರದು.
ಬದಲಾವಣೆ ಅತ್ಯಗತ್ಯ
ಯುವಜನತೆ ತಮ್ಮ ಜೀವನದ ಪ್ರಮುಖ ಹಂತದಲ್ಲಿ ಬದಲಾವಣೆಯ ಪರ್ವವನ್ನು ಎದುರಿಸಬೇಕಾಗುತ್ತದೆ. ಒಮ್ಮೆಲೇ ಬದಲಾವಣೆಗಳನ್ನು ಅವಳಡಿಸಿಕೊಳ್ಳಬೇಕೆಂದಾಗ ನಿರ್ಣಯಗಳನ್ನು ತೆಗೆದುಕೊಳ್ಳಲು ಕಷ್ಟವೆನಿಸುತ್ತದೆ. ಓದುವಾಗ ಪಡೆಯುವ ಶಿಕ್ಷಣ ಹೇಳುವುದೇ ಒಂದು, ಆದರೆ ಜೀವನದ ವಾಸ್ತವಿಕತೆಯೇ ಬೇರೆ. ಇಂತಹ ಕ್ಲಿಷ್ಟ ಸಂದರ್ಭಗಳಲ್ಲಿ ಮಾನಸಿಕ ಸ್ಥೈರ್ಯ ಅತ್ಯಗತ್ಯ.
ಗಾಂಧೀಜಿಯಿಂದ ಹಿಡಿದು ವಿವೇಕಾನಂದರವರೆಗೆ ಎಲ್ಲರ ಮಾತೂ ಒಂದೇ…. `ಏಳು, ಎದ್ದೇಳು, ಗುರಿ ಮುಟ್ಟುವವರೆಗೂ ಮುನ್ನುಗ್ಗುತ್ತಿರು! ಅಂದರೆ ಗುರಿ ಸಾಧಿಸುವ ಶಕ್ತಿ ಯುವಜನತೆಯ ಅಗತ್ಯ ಹೌದು. ವಿದ್ಯಾರ್ಥಿಗಳಿಗೆ ಪಾಠವೊಂದೇ ಮುಖ್ಯವಲ್ಲ. ಪಾಠದ ಜೊತೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಮೂಡಿಸುವ, ಜೊತೆಗೆ ದೇಶ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆಯೂ ಅರಿವನ್ನು ಮೂಡಿಸುವ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸಬೇಕಿದೆ.
ಯುವಶಕ್ತಿಯ ಸಬಲೀಕರಣ
ಯುವಶಕ್ತಿಯ ಸಬಲೀಕರಣಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಗಳ ಅಳವಡಿಕೆಯ ಅಗತ್ಯವಿದೆ. ಮನೆಯ ವಾತಾವರಣದ ಜೊತೆಗೆ ಶಾಲಾ ಕಾಲೇಜುಗಳಲ್ಲೂ ಪೂರಕವಾದ ಕಾರ್ಯಕ್ರಮಗಳು ನಡೆದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವದ ನಿರ್ಮಾಣದಲ್ಲಿ ಪರಿಣಾಮ ಬೀರುವುದು ಸಾಧ್ಯವಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ದೇಶದ ಜನಸಂಖ್ಯೆಯ ಶೇ.60ರಷ್ಟು ಭಾಗವಾಗಿರುವ ಯುವ ಜನಾಂಗ ದೇಶದ ಬಲ ಹೌದು. ಯುವ ಜನಾಂಗ ದೇಶ, ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಒಲವನ್ನು ಮೂಡಿಸಿಕೊಳ್ಳುವುದರ ಜೊತೆಗೆ ನಮ್ಮ ಬೇರುಗಳನ್ನೂ ಮುರಿಯಬಾರದೆನ್ನುವ ತತ್ವವನ್ನು ಅರಿತುಕೊಂಡಾಗಲೇ ಸ್ವಯಂ ಉದ್ಧಾರದ ಜೊತೆ ದೇಶದ ಪ್ರಗತಿಯೂ ಸಾಧ್ಯ.
ದಿಶಾ ಸಂಸ್ಥೆಯ ಬೆಳವಣಿಗೆ
ಈ ನಿಟ್ಟಿನಲ್ಲಿ ದಿಶಾ ಸಂಸ್ಥೆಯು ಕಳೆದ ಹದಿನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿನ ಮೌಲ್ಯಗಳನ್ನು ಜಾಗೃತಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕಾಲೇಜುಗಳಲ್ಲಿ ದೈಹಿಕ, ಬೌದ್ಧಿಕ ಮತ್ತು ಭಾವನಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ತರಬೇತಿ ಕಾರ್ಯಕ್ರಮ ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಹುರುಪನ್ನು ಮೂಡಿಸುವುದಂತೂ ನಿಜ. ಕೇವಲ ಉಪನ್ಯಾಸಗಳನ್ನು ಒಳಗೊಂಡಿರುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ವಿದ್ಯಾರ್ಥಿಗಳಿಗೆ ದೇಹವನ್ನು ಹಗುರಗೊಳಿಸಿಕೊಳ್ಳಲು ಸರಳವಾದ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡ, ಯೋಗಾಭ್ಯಾಸ ಕಲಿಸಲಾಗುತ್ತದೆ.
ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ, ಆಪ್ತ ಸಮಾಲೋಚಕರ ಸಮ್ಮುಖದಲ್ಲಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡು, ಮನಸ್ಸನ್ನು ಹಗುರಗೊಳಿಸಿಕೊಳ್ಳಲು ಅವರು ಮಾಡುವ ಆಪ್ತ ಸಮಾಲೋಚನೆ, ನಮ್ಮ ಇತಿಹಾಸದ ಗತವೈಭವಗಳು, ನಮ್ಮ ದೇಶದ ಆವಿಷ್ಕಾರಗಳು, ಗತಕಾಲದ ವಿಶ್ವವಿದ್ಯಾಲಯಗಳು, ನಮ್ಮ ಬೇರುಗಳನ್ನು ನೆನಪಿಸುವ ರಸ ಪ್ರಶ್ನೆ, ದೃಶ್ಯ ಮತ್ತು ಶ್ರವ್ಯ ವಿಭಾಗವನ್ನು ಒಳಗೊಂಡ ತರಬೇತಿ ಶಿಬಿರಗಳನ್ನು ಕಳೆದ ಹತ್ತು ವರ್ಷಗಳಿಂದ ನಗರದ ವಿವಿಧ ಕಾಲೇಜುಗಳಲ್ಲಿ ದಿಶಾ ಸಂಸ್ಥೆ ನಡೆಸುತ್ತಿದೆ.
ಸಂಚಾಲಕಿಯ ಮಾತುಗಳು
ಈ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಖ್ಯ ಸಂಚಾಲಕಿ ರೇಖಾ ರಾಮಚಂದ್ರನ್, “ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪರಸ್ಪರ ಮಾತುಕತೆಯಿಂದ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಪರಿಹರಿಸಿಕೊಳ್ಳಬಹುದೆನ್ನುವ ಆಶಾಭಾವ ಅವರಲ್ಲಿ ಕಂಡುಬರುತ್ತದೆ. ಕಾರ್ಯಕ್ರಮದ ಅಂತಿಮಘಟ್ಟಕ್ಕೆ ಬರುವ ಹೊತ್ತಿಗೆ ಅವರಲ್ಲಿ ನಮ್ಮ ದೇಶದ ಬಗೆಗಿನ ಒಲವು ಜಾಗೃತಗೊಳ್ಳುವುದಂತೂ ನಿಚ್ಚಳವಾಗಿ ಕಾಣಬರುತ್ತದೆ. ಕಾರ್ಯಕ್ರಮ ನಿರ್ವಹಿಸಿದ ನಮ್ಮಲ್ಲೂ ಸಾರ್ಥಕ ಭಾವನೆ ಮೂಡುತ್ತದೆ,” ಎನ್ನುತ್ತಾರೆ.
ಪ್ರತಿಯೊಬ್ಬ ಮನುಷ್ಯನೂ ಮೃಗೀಯ, ಮಾನವೀಯ ಮತ್ತು ದೈವತ್ವದ ಪ್ರವೃತ್ತಿಯನ್ನು ಹೊಂದಿರುತ್ತಾನೆ. ಶಿಕ್ಷಣ, ಅವನಲ್ಲಿನ ಮೃಗೀಯ ಪ್ರವೃತ್ತಿಯಿಂದ ಮಾನವೀಯ ನಂತರ ದೈವತ್ವದ ಪ್ರವೃತ್ತಿಯನ್ನು ಹೊಂದಲು ಸಹಕಾರಿಯಾಗುವಂತಹ, ನಮ್ಮ ಯುವ ಜನಾಂಗವನ್ನು ಇಡೀ ಪ್ರಪಂಚಕ್ಕೆ ಬೆಳಕನ್ನು ನೀಡುವ ದೀವಿಗೆಗಳನ್ನಾಗಿ ಮಾಡುವಂತಹ ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ ಹೌದು.
ದಿಶಾ ಸಂಸ್ಥೆ ಕರ್ನಾಟಕದ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಒಂದು ದಿನದ ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿದೆ. ಅಂತೆಯೇ ಬೆಂಗಳೂರಿನಲ್ಲೂ ಬಹಳಷ್ಟು ಕಾಲೇಜುಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. `ದಿಶಾ ಸಂಸ್ಥೆ’ ಕೇವಲ ನನ್ನದಲ್ಲ. ಇದೊಂದು ಟೀಮ್ ವರ್ಕ್, ಗುಂಪಿನ ಸಾಧನೆ, ಯುವ ಜನತೆಯನ್ನು ಚೇತನಗೊಳಿಸುವ ಈ ಕಾಯಕದಲ್ಲಿ ಅನೇಕರ ಪ್ರೇರಣೆ ಮತ್ತು ಪ್ರೋತ್ಸಾಹವಿದೆ, ಎನ್ನುವುದು ರೇಖಾ ರಾಮಚಂದ್ರನ್ ಅವರ ವಿನಯದ ನುಡಿ.
– ಮಂಜುಳಾ ರಾಜ