ನೀಳ್ಗಥೆ – ರಾಧಿಕಾ ಮನೋಹರ್
ಭಾಗ ಒಂದು
10 ವರ್ಷ ಎನ್ನುವುದು ಯಾರನ್ನಾದರೂ ಮರೆಯಲು ಬೇಕಾಗುವ ಅವಧಿಗೆ ಕಡಿಮೆಯದೇನಲ್ಲ. ಆದರೆ ನೆನಪಿನಾಳದಲ್ಲಿ ವಿಷ ತುಂಬಿರುವಾಗ ಮರೆಯುವುದು ಸುಲಭದ ಮಾತಲ್ಲ.
ಡಾ. ಅಶ್ವಿನ್ 10 ವರ್ಷಗಳ ಕಾಲ ಈ ಕಹಿ ವಿಷವನ್ನು ನಿಧಾನವಾಗಿ ನುಂಗಿದ್ದರು. ಈಗ ಅದರ ಕಹಿ ಕೊಂಚ ಕಡಿಮೆಯಾಗುತ್ತಿರುವಾಗ ಇದ್ದಕ್ಕಿದ್ದಂತೆ ಅದರ ಪ್ರಮಾಣ ಇಮ್ಮಡಿಯಾಗಿಬಿಟ್ಟಿತು. ಅವರು ಸ್ವತಃ ವೈದ್ಯರಾದರೂ ಈ ವಿಷಕ್ಕೆ ಅವರ ಬಳಿ ಔಷಧವಿರಲಿಲ್ಲ.
ಮಧ್ಯಾಹ್ನ ಒಂದೂವರೆ ಗಂಟೆಯಾಗಿತ್ತು. ಅದು ಕ್ಲಿನಿಕ್ ಮುಚ್ಚುವ ಸಮಯ. ಇನ್ನೊಂದು ಪೇಶೆಂಟ್‌ನ್ನು ನೋಡುವುದು ಬಾಕಿ ಇತ್ತು. ಡಾ. ಅಶ್ವಿನ್ ತಮ್ಮ ಅಟೆಂಡರ್‌ಗೆ ರೋಗಿಯನ್ನು ಒಳಗೆ ಕಳುಹಿಸಲು ಹೇಳಿ ಮೇಜಿನ ಮೇಲಿದ್ದ ಫೈಲ್ ನೋಡುವುದರಲ್ಲಿ ಮಗ್ನರಾಗಿದ್ದರು. ಬಂದವರು ಎದುರಿನ ಸ್ಟೂಲ್ ಮೇಲೆ ಕುಳಿತಾಗ ಅಶ್ವಿನ್ ಕತ್ತೆತ್ತಿ ಅವರತ್ತ ನೋಡಿದರು.
ನೋಡುತ್ತಲೇ ಅಶ್ವಿನ್‌ಗೆ ಮೈಯಲ್ಲಿ ಬಿಸಿಯೇರಿ ನಡುಗಿದಂತಾಯಿತು. ಕಣ್ಣು ಕತ್ತಲಾಗಿ ಭಾವಶೂನ್ಯವಾಗಿ ಕುಳಿತುಬಿಟ್ಟರು. ಒಂದೆರಡು ನಿಮಿಷಗಳ ನಂತರ ಕೊಂಚ ಸಾವರಿಸಿಕೊಂಡು…..
“ನೀನು…… ಅಲ್ಲ ನೀವು…..? ’’
“ಹೌದು ನಾನೇ…..” ಎದುರಿಗೆ ಕುಳಿತಿದ್ದ ಮಹಿಳೆ ದೃಢವಾದ ಸ್ವರದಲ್ಲಿ ಹೇಳಿ ಡಾಕ್ಟರ್‌ಮುಖವನ್ನು ನೋಡಿದರು. ಅಶ್ವಿನ್ ಸಹ ಅವಳ ಮುಖವನ್ನು ದಿಟ್ಟಿಸಿದರು. ಇವಳೇ ಅಲ್ಲವೇ 10 ವರ್ಷಗಳ ಕಾಲ ತಮ್ಮ ಜೀವನದ ಪಾತ್ರೆಯಲ್ಲಿ ವಿಷವನ್ನು ತುಂಬಿಸಿದವಳು ಮತ್ತು ತಾವು ಆ ವಿಷವನ್ನು ನಿಧಾನವಾಗಿ ಗುಟುಕರಿಸುತ್ತಾ ಬಂದಿದ್ದರು…….
ಅಶ್ವಿನ್‌ಗೆ ಮುಂದೇನು ಮಾತನಾಡಬೇಕೆಂದು ತಿಳಿಯಲಿಲ್ಲ. ಅನಪೇಕ್ಷಿತ ವಿಚಾರಗಳನ್ನು ಮನಸ್ಸಿನಿಂದ ಹೊರಹಾಕಿ ಒಬ್ಬ ಪ್ರೊಫೆಶನ್ ಡಾಕ್ಟರ್‌ತರಹ, “ಹೇಳಿ…. ನಿಮ್ಮ ತೊಂದರೆ ಏನು?” ಕೇಳಿದರು.
ಡಾಕ್ಟರ್ ಮಾತಿನಿಂದ ಸಂಕೋಚಗೊಂಡು ಆ ಮಹಿಳೆ, “ನನಗೇನೂ ಕಾಯಿಲೆ ಇಲ್ಲ. ನಿಮ್ಮ ಜೊತೆ ಮಾತನಾಡುವುದಕ್ಕೋಸ್ಕರ ಬಂದಿದ್ದೇನೆ. ನೇರವಾಗಿ ಬಂದರೆ ನೀವು ಭೇಟಿಗೆ ಒಪ್ಪುವಿರೋ ಇಲ್ಲವೋ ಎಂದುಕೊಂಡು ಪೇಶೆಂಟ್ ರೀತಿಯಲ್ಲಿ ಬಂದೆ. ನನ್ನ ಮಾತನ್ನು ಕೇಳುವುದಕ್ಕೆ ನಿಮಗೆ ಸಮಯ ಇದೆ ಅಲ್ಲವೇ?” ಎಂದು ಮೆಲ್ಲನೆ ಹೇಳಿದಳು.
ಡಾಕ್ಟರ್ ಅಶ್ವಿನ್ ಮೃದು ಸ್ವಭಾವದ ವ್ಯಕ್ತಿ. ಕೋಪ ಬಹಳ ಕಡಿಮೆ, ತಪ್ಪು ಕಂಡಾಗ ಸಿಟ್ಟು ಬಂದರೂ ಅದನ್ನು ಹಾಗೆ ನುಂಗಿಕೊಳ್ಳುವಂಥವರು. ಇಂದು ಆ ಮಹಿಳೆಯನ್ನು ಕಂಡಾಗ ವಿಚಲಿತರಾಗಿದ್ದರು. ಹಳೆಯ ನೆನಪುಗಳು ಮನಸ್ಸನ್ನು ಮುತ್ತಿದವು. ಆದರೂ ಆ ಮಹಿಳೆಯ ಮೇಲೆ ಅವರಿಗೆ ಕೋಪ ಬರಲಿಲ್ಲ.
ಈಗ ಅವಳು ಇದ್ದಕ್ಕಿದ್ದಂತೆ ತಮ್ಮ ಮುಂದೆ ಬಂದು ಕುಳಿತಿದ್ದಾಳೆ. ಅವಳ ಉದ್ದೇಶ ಏನಿರಬಹುದು, ತಮ್ಮ ಜೀವನವನ್ನು ಮತ್ತೊಮ್ಮೆ ಅಲ್ಲೋಲ ಕಲ್ಲೋಲಗೊಳಿಸಲೆಂದೇ? ಈಗ ತಮಗೂ ಅವಳಿಗೂ ಯಾವುದೇ ಸಂಬಂಧ ಉಳಿದಿಲ್ಲದಿರುವಾಗ ಅವಳು ಹಿಂದಿರುಗಿ ಬಂದಿರುವುದೇತಕ್ಕೆ? ಅಶ್ವಿನ್‌ಗೆ ಅವಳನ್ನು ಹೊರಗೆ ಕಳುಹಿಸಿಬಿಡುವ ಮನಸ್ಸಾಯಿತು. ಆದರೆ ಮಾತನಾಡದಿದ್ದರೆ ಅವಳ ಉದ್ದೇಶವನ್ನು ತಿಳಿಯುವುದಾದರೂ ಹೇಗೆ….? ಎಂದು ಯೋಚಿಸಿದರು.
ಅಶ್ವಿನ್ ತಮ್ಮ ಮನಸ್ಸನ್ನು ಶಾಂತಗೊಳಿಸಿಕೊಂಡು, “ಈಗ ನಾನು ಮನೆಗೆ ಹೋಗುವ ಸಮಯವಾಗಿದೆ. ನೀವು ಸಾಯಂಕಾಲ ಬರುತ್ತೀರಾ?” ಕೇಳಿದರು.
ಮಹಿಳೆ ಉತ್ಸಾಹದಿಂದ, “ಎಷ್ಟು ಗಂಟೆಗೆ ಬರಲಿ…..?” ಎಂದಳು.
“ನೀವು 6-7 ಗಂಟೆಗೆ ಬರಬಹುದು.”
“ಆಗಲಿ. 6 ಗಂಟೆಗೆ ಬರುತ್ತೇನೆ……” ಅವಳ ಮುಖದಲ್ಲಿ ಸಮಾಧಾನದ ಮುಗುಳ್ನಗೆ ಕಾಣಿಸಿತು. ಆ ಮಹಿಳೆ ಹೋದ ನಂತರ ಡಾಕ್ಟರ್ ಪುನಃ ಹಳೆಯ ನೆನಪಿನಾಳದಲ್ಲಿ ಮುಳುಗಿದರು. ಮನೆಗೆ ಹೋಗಬೇಕೆಂಬುದು ಅವರಿಗೆ ಮರೆತೇಹೋಯಿತು. ಅಟೆಂಡರ್ ಬಂದು “ಬಾಗಿಲು ಮುಚ್ಲಾ ಸಾರ್….” ಎಂದು ಕೇಳಿದಾಗಲೇ ಅವರು ವಾಸ್ತವಕ್ಕೆ ಬಂದುದ್ದು,
“ಸರಿ,” ಎನ್ನುತ್ತಾ ಮನೆಗೆ ಹೊರಟರು.
ಮನೆಯಲ್ಲಿ ಪತ್ನಿ ಅವರಿಗಾಗಿ ಕಾಯುತ್ತಿದ್ದಳು, “ಇಷ್ಟು ತಡ ಆಯಿತಲ್ಲ…..” ಎಂದು ಪ್ರಶ್ನಿಸಿದಳು.
“ನಾನು ಡಾಕ್ಟರ್. ಕೆಲಸವೇ ಹೀಗೆ….. ಇದ್ದಕ್ಕಿದ್ದ ಹಾಗೆ ರೋಗಿಗಳು ಬಂದರೆ ನೋಡಲೇಬೇಕಾಗುತ್ತಲ್ಲವೇ…..?”
ಪತ್ನಿಯೊಡನೆ ಸಹಜವಾಗಿ ಮಾತನಾಡಿದರೂ ಡಾಕ್ಟರ್ ಮನಸ್ಸು ಸಹಜವಾಗಿರಲಿಲ್ಲ. ತಳಮಳದಿಂದ ಕೂಡಿತ್ತು. ಶಾಂತವಾಗಿದ್ದ ಸರೋವರಕ್ಕೆ ಕಲ್ಲನ್ನು ಒಗೆದಂತಹ ಸ್ಥಿತಿ. ಅದು ಚಿಕ್ಕಪುಟ್ಟ ಕಲ್ಲಲ್ಲ…. ನೀರಿನ ತಳಭಾಗದಿಂದ ಬಂಡೆಯನ್ನು ಅಲುಗಾಡಿಸಿದಂತೆ ಭಾಸವಾಗುತಿತ್ತು.
ಊಟವಾದ ನಂತರ ಪತ್ನಿಗೆ, “ನನಗೆ ಸ್ವಲ್ಪ ಆಯಾಸವಾಗಿದೆ. ಮಲಗಿರುತ್ತೇನೆ. ಡಿಸ್ಟರ್ಬ್ ಮಾಡಬೇಡ….” ಎಂದರು.
ಪತ್ನಿ ಅವರ ಮುಖವನ್ನು ನೋಡುತ್ತಾ, “ಯಾಕೆ ಮೈ ಸರಿಯಿಲ್ಲವೇ…..? ತಲೆನೋವಿನ ಬಾಮ್ ಹಚ್ಚಲೇನು…?” ಅಕ್ಕರೆಯಿಂದ ಕೇಳಿದಳು.
“ಹಾಗೇನಿಲ್ಲ…. ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇನೆ,” ಎನ್ನುತ್ತಾ ಅವರು ಹಾಸಿಗೆಯ ಮೇಲೆ ಅಡ್ಡವಾದರು.
ಪತ್ನಿ ಕೋಣೆಯ ಬಾಗಿಲು ಮುಂದೆ ಮಾಡಿ ತಮ್ಮ ಕೆಲಸದಲ್ಲಿ ತೊಡಗಿಕೊಂಡಳು. ಅವಳಿಗೆ ಇನ್ನೂ ಬಹಳಷ್ಟು ಕೆಲಸಗಳಿದ್ದವು. ಮಧ್ಯಾಹ್ನ ಅವಳಿಗೆ ವಿಶ್ರಾಂತಿಗೆ ಸಮಯ ಸಿಗುತ್ತಿರಲಿಲ್ಲ. ಮಗ ಶಾಲೆಯಿಂದ ಬರುತ್ತಾನೆ. ಅವನಿಗೆ ತಿಂಡಿ ಕೊಟ್ಟು ಆಮೇಲೆ ಹೋಂವರ್ಕ್ ಮಾಡಿಸುತ್ತಾಳೆ. ಅವನು ಬರೆದು ಮುಗಿಸಿ ಆಟಕ್ಕೆ ಓಡಿದ ನಂತರ ಡಾಕ್ಟರು ಕ್ಲಿನಿಕ್‌ಗೆ ಹೊರಡಲು ಸಿದ್ಧರಾಗುತ್ತಾರೆ. ಆ ನಂತರವೇ ಅವಳಿಗೆ ಕೊಂಚ ವಿಶ್ರಾಂತಿ.
ಅಶ್ವಿನ್ ಕಣ್ಣು ಮುಚ್ಚಿ ಮಲಗಿದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಹಳೆಯ ನೆನಪುಗಳೆಲ್ಲ ನಿದ್ರೆಯನ್ನು ಕೊಡವಿ ಮಗ್ಗುಲು ಬದಲಿಸುತ್ತಾ ಹಿಂಸೆ ಮಾಡುತ್ತಿದ್ದವು. ಆ ನೆನಪುಗಳು ಮರುಕಳಿಸುವುದು ಅವರಿಗೆ ಇಷ್ಟವಿಲ್ಲದಿದ್ದರೂ ಅವು ಬಂದು ಮುತ್ತುತ್ತಿದ್ದವು.
ಅಶ್ವಿನ್‌ಪ್ರಾರಂಭದಿಂದಲೂ ಬುದ್ಧಿವಂತ ಮತ್ತು ಗಂಭೀರ ಸ್ವಭಾವದ ಹುಡುಗ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಮುಗಿಸಿ ನಂತರ ಎಂಡಿ ಡಿಗ್ರಿಯನ್ನು ಪಡೆದುಕೊಂಡರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರಿಗೆ ಕೆಲಸ ಸಿಕ್ಕಿತು. ಅವರ ತಂದೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಒಬ್ಬನೇ ಮಗನ ಮದುವೆ ಮಾಡಲು ಕಾತರರಾಗಿದ್ದರು. ಕೆಲಸಕ್ಕೆ ಸೇರುವಷ್ಟರಲ್ಲೇ ಮದುವೆಗೆ ಸಂಬಂಧಗಳು ಬರತೊಡಗಿದವು. ಹುಡುಗಿಯ ಬಗ್ಗೆ ಮಗನ ಅಪೇಕ್ಷೆ ಏನಿದೆ ಎಂದು ತಾಯಿ ತಂದೆ ವಿಚಾರಿಸಿದರು.
ಅಶ್ವಿನ್ ಸದೃಢವಾದ ಸುಂದರ ರೂಪಿನ ವ್ಯಕ್ತಿ ಕಾಲೇಜಿನಲ್ಲಿರುವಾಗಲೇ ಅನೇಕ ಹುಡುಗಿಯರು ಅವನೆಡೆಗೆ ಆಕರ್ಷಿತರಾಗಿದ್ದರು. ಆದರೆ ತನ್ನ ವಿದ್ಯೆಯ ಗುರಿ ಮುಖ್ಯವಾಗಿದ್ದುರಿಂದ ಅಶ್ವಿನ್ ಯಾರ ಪ್ರೀತಿ, ಆಕರ್ಷಣೆಗೆ ಮನಸೋಲಲಿಲ್ಲ. ಪ್ರೀತಿ, ಪ್ರೇಮಗಳು ಅವರ ಜೀವನದಲ್ಲಿ ತುಂತುರು ಮಳೆಯಂತೆ ಜಿನುಗಿ ಅವರ ಮನಸ್ಸನ್ನು ನೆನೆಸಿ ಮರೆಯಾದವು. ಸಹಪಾಠಿಗಳೆಲ್ಲರೂ ಕೋರ್ಸ್‌ಮುಗಿದ ನಂತರ ತಮ್ಮ ತಮ್ಮ ದಾರಿ ಹಿಡಿದು ಹೊರಟುಹೋದರು.
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಅಶ್ವಿನ್ ಯಾವುದೇ ರೂಪುರೇಷೆ ಇರಿಸಿಕೊಂಡಿರಲಿಲ್ಲ. ಹೀಗಾಗಿ ಹುಡುಗಿಯ ಆಯ್ಕೆಯನ್ನು ತಾಯಿ ತಂದೆಯರಿಗೇ ಬಿಟ್ಟಿದ್ದರು. ಹುಡುಗಿಯೂ ಡಾಕ್ಟರ್ ಆಗಿದ್ದರೆ ಜೋಡಿ ಸರಿ ಹೋಗುವುದೆಂದು ತಾಯಿ ತಂದೆ ಯೋಚಿಸಿದರು. ಅದಕ್ಕೂ ಅಶ್ವಿನ್‌ನಿಂದ ಪ್ರತಿಕ್ರಿಯೆ ಇರಲಿಲ್ಲ.
ಕಡೆಗೆ ಎಂಬಿಎ ಮಾಡಿದ್ದ ಒಬ್ಬಳು ಹುಡುಗಿ ಎಲ್ಲರಿಗೂ ಒಪ್ಪಿಗೆಯಾಯಿತು. ಅವಳು ಬೆಂಗಳೂರಿನಲ್ಲಿ ಒಂದು ದೊಡ್ಡ ಕಂಪನಿಯ ಎಚ್.ಆರ್ ಡಿಪಾರ್ಟ್‌ಮೆಂಟ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು.
ಹುಡುಗ ಹುಡುಗಿ ಪರಸ್ಪರ ನೋಡುವ, ಮಾತನಾಡುವ ಶಾಸ್ತ್ರಗಳೆಲ್ಲ ಮುಗಿದು ಅಶ್ವಿನ್ ಮತ್ತು ನಂದಿತಾ ಪತಿಪತ್ನಿಯರಾದರು. ಮದುವೆಯಾದ ಕೆಲವು ದಿನಗಳ ನಂತರ ನಂದಿತಾಳ ಪ್ರೀತಿಯಲ್ಲಿ ಉತ್ಸಾಹವಿಲ್ಲ. ದಾಂಪತ್ಯ ಜೀವನದಲ್ಲಿ ಅವಳಿಗೆ ಆಸಕ್ತಿಯಿಲ್ಲ ಎಂದು ಅಶ್ವಿನ್‌ಗೆ ಭಾಸವಾಗತೊಡಗಿತು. ಹಾಸಿಗೆಯಲ್ಲಿ ಅವಳು ಯಾವುದೇ ಸ್ಪಂದನೆ…. ಬಿಸುಪು ಇಲ್ಲದೆ ಒಂದು ಮಂಜಿನ ತುಂಡಿನಂತೆ ಬಿದ್ದಿರುತ್ತಿದ್ದಳು.
ಅಶ್ವಿನ್ ಸ್ವತಃ ವೈದ್ಯರಾಗಿದ್ದುದರಿಂದ ದೈಹಿಕ ರಚನೆ ಮತ್ತು ಪ್ರತಿಕ್ರಿಯಗಳ ಬಗ್ಗೆ ಚೆನ್ನಾಗಿ ಅರಿವುಳ್ಳವರಾಗಿದ್ದರು. ಆದರೆ ನಂದಿತಾಳ ಮನಸ್ಸಿನ ಬೇಸರ ಅಥವಾ ನಿರಾಶೆಯ ಕಾರಣವನ್ನು ಅರ್ಥ ಮಾಡಿಕೊಳ್ಳಲು ಅವರೇನೂ ಮನೋವಿಜ್ಞಾನಿಯಾಗಿರಲಿಲ್ಲ. ಅವಳು ತಾನಾಗಿಯೇ ತನ್ನ ಮನಸ್ಸಿನ ಪರದೆಯನ್ನು ಸರಿಸುವವರೆಗೆ ಅವಳ ಉದಾಸೀನ ಭಾವನೆಯ ಕಾರಣ ತಿಳಿಯುವ ಹಾಗಿರಲಿಲ್ಲ.
ಮನೆಯಲ್ಲಿ ಅಶ್ವಿನ್ ಮತ್ತು ನಂದಿತಾ ಇಬ್ಬರೇ ಇದ್ದರು. ಮನೆಯ ಕೆಲಸ ಹೆಚ್ಚೇನೂ ಇರುತ್ತಿರಲಿಲ್ಲ. ಆದರೂ ಯಾವ ಕೆಲಸದಲ್ಲೂ ನಂದಿತಾಳಿಗೆ ಆಸಕ್ತಿ ಇರಲಿಲ್ಲ. ಮನೆ ಕೆಲಸದಾಕೆಯೇ ಹೆಚ್ಚಿನ ಕೆಲಸವನ್ನೆಲ್ಲ ಮಾಡಿಕೊಡುತ್ತಿದ್ದಳು. ಪತಿ ಪತ್ನಿಯರು ಮನಬಿಚ್ಚಿ ಮಾತನಾಡಲು, ಪರಸ್ಪರ ಅರಿತುಕೊಳ್ಳಲು ಸಾಕಷ್ಟು ಸಮಯವಿರುತ್ತಿತ್ತು. ಆದರೆ ಜೊತೆಯಲ್ಲೇ ಇದ್ದರೂ ನಂದಿತಾಳಿಗೆ ಮಾತನಾಡುವುದರಲ್ಲಿಯೂ ಆಸಕ್ತಿ ಇರಲಿಲ್ಲ. ಬಹಳ ಕಡಿಮೆ ಮಾತನಾಡುತ್ತಿದ್ದಳು ಮತ್ತು ಒಂಟಿಯಾಗಿರುತ್ತಿದ್ದಳು.
ಆಫೀಸಿನಿಂದ ಬಂದ ನಂತರ, ನೂರಾರು ಮೈಲಿ ಪ್ರಯಾಣ ಮಾಡಿ ಬಂದವಳಂತೆ ಹಾಸಿಗೆಯ ಮೇಲೆ ಬಿದ್ದುಕೊಳ್ಳುತ್ತಿದ್ದಳು. ಮುದುಡಿದ ಮುಖ, ಕಳೆಗುಂದಿದ ಕಣ್ಣುಗಳು, ಸೋತ ಕೈಕಾಲುಗಳು, ರಾತ್ರಿ ಅವಳೊಂದಿಗೆ ಕೂಡಿದಾಗ ಅಶ್ವಿನ್‌ಗೆ ಎಂತಹ ತಣ್ಣನೆಯ ಅನುಭವವಾಗುತ್ತಿತೆಂದರೆ….. ತಾವೊಂದು ಶವದೊಂದಿಗೆ ಸಂಭೋಗ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು.
ಡಾಕ್ಟರ್ ಅಶ್ವಿನ್‌ಗೆ ಮನುಷ್ಯನ ಪ್ರತಿಯೊಂದು ಅಂಗದ ಬಗ್ಗೆಯೂ ತಿಳಿವಳಿಕೆ ಇತ್ತು. ನಂದಿತಾ ಕೇವಲ ತನ್ನವಳಾಗಿಲ್ಲ ಎಂಬುದು ಅವರಿಗೆ ಅರ್ಥವಾಗಿತ್ತು. ಅವಳು ಮದುವೆಗೆ ಮೊದಲೂ ಬೇರೆಯವರ ಸಂಪರ್ಕ ಹೊಂದಿದ್ದಳು ಮತ್ತು ಮದುವೆಯ ನಂತರ ಬೇರೆಯವರ ಶಾರೀರಿಕ ಸಂಬಂಧ ಇದೆ. ಅವಳು ಹಗಲನ್ನು ಬೇರೆಯವರ ಸಂಗದಲ್ಲಿ ಕಳೆದು ಬರುತ್ತಾಳೆಂಬ ವಿಷಯವನ್ನು ಅಶ್ವಿನ್‌ರಿಂದ ಮರೆಮಾಚಲು ಸಾಧ್ಯವಿರಲಿಲ್ಲ.
ನಂದಿತಾಳ ಮೌನ ಮತ್ತು ಉದಾಸೀನತೆಗೆ ಕಾರಣವೇನು ಎಂದು ಅಶ್ವಿನ್‌ಗೆ ಅರ್ಥವಾಗಿತ್ತು. ಆದರೆ ಅವಳು ತಮ್ಮಿಂದ ಏಕೆ ದೂರವಾಗಿರುತ್ತಾಳೆ, ತಮ್ಮಿಬ್ಬರ ಸಂಬಂಧವನ್ನು ಮಧುರಗೊಳಿಸಲು ಏಕೆ ಪ್ರಯತ್ನಿಸುವುದಿಲ್ಲ ಎಂಬುದು ಅವರ ತಿಳಿವಳಿಕೆಗೆ ಎಟುಕದ ವಿಷಯವಾಗಿತ್ತು. ತಮ್ಮನ್ನು ವಿವಾಹವಾಗಲು ಇಷ್ಟವಿಲ್ಲದಿದ್ದರೆ, ಅವಳು ಅದಕ್ಕೆ ಒಪ್ಪಿಗೆ ನೀಡಿದ್ದಾದರೂ ಏಕೆ? ಮನೆಯವರ ಒತ್ತಾಯಕ್ಕಾಗಿ ಮದುವೆಯಾದಳೇ?
ಅವಳು ಮೊದಲಿನಿಂದಲೇ ಯಾರೊಡನೆಯಾದರೂ ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ ಮದುವೆಗೆ ಮುಂದಾದುದೇಕೆ? ಅವನು ವಿವಾಹಿತನೇ? ಹಾಗಿದ್ದರೆ ಆ ಸಂಬಂಧದಿಂದ ಹೊರಬರಬೇಕಿತ್ತಲ್ಲವೇ? ಅವಳಂತೂ ಈಗ ವಿವಾಹಿತೆ. ತನ್ನ ದಾಂಪತ್ಯ ಜೀವನದ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು.
`ನಂದಿತಾ ತಾನಾಗಿ ಏನನ್ನೂ ಹೇಳುವವಳಲ್ಲ…. ಆದ್ದರಿಂದ ತಾನೇ ಮುಂದಾಗಿ ವಿಚಾರಿಸಬೇಕು. ಇನ್ನೂ ತಡ ಮಾಡುವುದು ಸರಿಯಲ್ಲ. ಆ ಬೆಂಕಿಯ ಬೇಗೆಗೆ ತಾನೇಕೆ ಬಲಿಯಾಗಬೇಕು? ಅದನ್ನು ಹತ್ತಿಸುವಲ್ಲಿ ತನ್ನ ಕೈವಾಡವೇನೂ ಇಲ್ಲವಲ್ಲ,’ ಎಂದು ಹಲವಾರು ಅಂಶಗಳ ಬಗ್ಗೆ ಅಶ್ವಿನ್ ಯೋಚಿಸುತ್ತಿದ್ದರು.
ಅಂದು ಸಂಜೆ ಅಶ್ವಿನ್ ಶಾಂತ ಮತ್ತು ಗಂಭೀರ ಸ್ವರದಲ್ಲಿ ಪತ್ನಿಗೆ, “ನಂದಿತಾ, ನಿನ್ನ ಹಿಂದಿನ ಜೀವನದ ಬಗ್ಗೆಯಾಗಲಿ ಅಥವಾ ಇಂದಿನ ವಿಷಯವನ್ನಾಗಲಿ ನಾನು ಕೇಳುವುದಿಲ್ಲ. ಆದರೆ ನೀನು ಬೇಯುತ್ತಿರುವ ಬೆಂಕಿಯಲ್ಲಿ ನನ್ನನ್ನೂ ಸುಡುವ ಕೆಲಸ ಮಾಡಬೇಡ. ನಿನ್ನ ಕಷ್ಟಕ್ಕೆ ನಾನು ಹೊಣೆಯಲ್ಲ. ನನ್ನದೊಂದೇ ತಪ್ಪು ಅಂದರೆ ನಿನ್ನನ್ನು ಮದುವೆಯಾದದ್ದು. ಆ ತಪ್ಪಿಗೆ ನಾನು ಜೀವನ ಪೂರ್ತಿ ಬೇಯುವುದಕ್ಕೆ ಆಗುವುದಿಲ್ಲ. ನಿನಗೇನು ಬೇಕು ಅನ್ನುವುದನ್ನು ಸ್ಪಷ್ಟವಾಗಿ ಹೇಳಿಬಿಡು,” ಎಂದರು.
ನಂದಿತಾ ಭಾವರಹಿತ ಕಣ್ಣುಗಳಿಂದ ಪತಿಯನ್ನೇ ನೋಡಿದಳು. ಅವಳ ಕಣ್ಣುಗಳು ಒದ್ದೆಯಾದವು. ಅದನ್ನು ತೋರಗೊಡದಂತೆ ಅವಳು ಮುಖ ಬಾಗಿಸಿ ಮೆಲು ದನಿಯಲ್ಲಿ, “ಒಂದು ದಿನ ನಿಮ್ಮಿಂದ ಈ ಮಾತು ಬರುವುದೆಂದು ನನಗೆ ಗೊತ್ತಿತ್ತು. ನಿಮ್ಮ ಬಾಳನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಆದರೆ ಸಮಾಜ ಮತ್ತು ಕುಟುಂಬದ ಸಂಪ್ರದಾಯಗಳಿಗೆ ತಲೆಬಾಗಿ ನಾವು ನಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುತ್ತದೆ. ಸಮಾಜ ಮತ್ತು ಕುಟುಂಬಕ್ಕಾಗಿ ನಾವು ನಮ್ಮದಲ್ಲದ ಜೀವನವನ್ನು ನಡೆಸುತ್ತೇವೆ…..” ಎಂದಳು.
“ನಿನ್ನ ಅನಿವಾರ್ಯತೆ ಏನು ಅನ್ನುವುದು ನನಗೆ ಗೊತ್ತಿಲ್ಲ. ಹೇಳಿದರೆ ಏನಾದರೂ ಪರಿಹಾರ ಹುಡುಕಬಹುದು….”
“ಇಲ್ಲ. ನನ್ನ ಸಮಸ್ಯೆಗೆ ಏನೂ ಪರಿಹಾರವಿಲ್ಲ. ನಾನು ಬೇಕಂತಲೇ ನಿಮ್ಮನ್ನು ಉಪೇಕ್ಷೆ ಮಾಡುತ್ತಿದ್ದೇನೆ ಅಂತ ಅಂದುಕೊಳ್ಳಬೇಡಿ. ನನ್ನ ಅಪರಾಧೀ ಪ್ರಜ್ಞೆಯಿಂದಾಗಿ ನಿಮ್ಮ ಜೊತೆ ಮುಖ ಕೊಟ್ಟು ಮಾತನಾಡುವುದಕ್ಕೂ ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಅಪರಾಧ ನನ್ನನ್ನು ಒಳಗೊಳಗೇ ತಿನ್ನುತ್ತಿದೆ.”
“ನೀನು ತಪ್ಪು ಮಾಡಿದ್ದರೆ ಅದನ್ನು ತಿದ್ದಿಕೊಂಡು ಪ್ರಾಯಶ್ಚಿತ್ತ ಮಾಡಿಕೊ.”
`’ಅದೇ ಕಷ್ಟ ಆಗಿರೋದು. ನನ್ನ ತಪ್ಪು ನನ್ನ ಬೆನ್ನು ಹತ್ತಿ ನಿಂತಿದೆ….”
ಅಶ್ವಿನ್‌ಗೆ ಅದೇನೂ ಅರ್ಥವಾಗಲಿಲ್ಲ. ಅವಳೇ ಮಾತು ಮುಂದುವರಿಸಲಿ ಎಂದು ಅವರು ಮೌನವಾಗಿ ಅವಳತ್ತ ನೋಡಿದರು.
“ನಿಮ್ಮಿಂದ ವಿಷಯ ಮುಚ್ಚಿಡಬೇಕಾಗಿಲ್ಲ. ಎಲ್ಲವನ್ನೂ ಹೇಳಿಬಿಡುತ್ತೇನೆ. ಆಗಲಾದರೂ ನನ್ನ ಅಪರಾಧೀಪ್ರಜ್ಞೆ ಸ್ವಲ್ಪ ಕಡಿಮೆ ಆಗಬಹುದು. ಆದರೆ ನಾನು ಮಾಡುತ್ತಿರುವ ತಪ್ಪು ಅಕ್ಷಮ್ಯ ಅಂತ ನನಗೆ ಗೊತ್ತು. ಬೇಡ ಅಂದರೂ ನನಗೆ ಅದನ್ನು ಬಿಡುವುದಕ್ಕೆ ಆಗುತ್ತಿಲ್ಲ. ಅದೂ ಸಹ ನನ್ನ ಬೆನ್ನು ಬಿಡುತ್ತಿಲ್ಲ,…” ಎಂದಳು ನಂದಿತಾ.
“ಹಾಗಾದರೆ ನೀನು ನನ್ನ ಜೊತೆ ಬಿಟ್ಟು ಅವನನ್ನೇ ಮದುವೆಯಾಗು. ನಾನು ನಿನಗೆ ಬಿಡುಗಡೆ ಕೊಡುತ್ತೇನೆ.”
ಇದನ್ನು ಕೇಳಿ ನಂದಿತಾ ಕೊಂಚ ನಡುಗಿದಳು. ಅವಳ ಕಣ್ಣಿನಲ್ಲಿ ಭಯ ಕಾಣಿಸಿತು. ಅವಳು ಜೋರಾಗಿ, “ಇಲ್ಲ…. ಅವನಿಗೆ ಮೊದಲೇ ಮದುವೆಯಾಗಿದೆ. ನನ್ನನ್ನು ಮದುವೆಯಾಗುವುದಕ್ಕೆ ಆಗುವುದಿಲ್ಲ….” ಎಂದಳು.
ಅಶ್ವಿನ್ ಬುದ್ಧಿಗೆ ಗ್ರಹಣ ಹಿಡಿದಂತಾಯಿತು. ನಂದಿತಾ ಯಾವ ಆಟದಲ್ಲಿ ತೊಡಗಿದ್ದಾಳೆಂಬುದು ಅವರಿಗೆ ಅರ್ಥವಾಗಲಿಲ್ಲ. ಮದುವೆಯಾಗಿರುವ ಪತಿಯೊಡನೆ ದಾಂಪತ್ಯ ಜೀವನದ ಜವಾಬ್ದಾರಿ ನಿರ್ವಹಿಸಬೇಕೆಂಬ ಮನಸ್ಸಿಲ್ಲ. ಮದುವೆಯಾಗಿರುವವನ ಜೊತೆಗೆ ಅನೈತಿಕ ಸಂಬಂಧ ಬಿಡಲು ಇಷ್ಟವಿಲ್ಲ.
ಆ ವ್ಯಕ್ತಿ ತನ್ನ ದೇಹ ಸುಖಕ್ಕಾಗಿ ನಂದಿತಾಳ ಜೀವನದೊಂದಿಗೆ ಆಟವಾಡುತ್ತಿದ್ದಾನೆ. ತನ್ನ ಸಂಸಾರವನ್ನು ಉಳಿಸಿಕೊಂಡು ಅವಳ ಸಂಸಾರವನ್ನು ಹಾಳು ಮಾಡುತ್ತಿದ್ದಾನೆ. ಅವನಿಗಾಗಿ ನಂದಿತಾ ತನ್ನ ದಾಂಪತ್ಯ ಜೀವನಕ್ಕೆ ವಿಷ ಸೇರಿಸುತ್ತಿದ್ದಾಳೆ. ಅವಳು ವಿವೇಕದಿಂದ ನಡೆಯುತ್ತಿಲ್ಲ. ಮೋಹಕ್ಕೆ ಸಿಲುಕಿ ತಪ್ಪು ಹೆಜ್ಜೆ ಇಡುತ್ತಿದ್ದಾಳೆ. ತಾನು ನಡೆಯುತ್ತಿರುವ ದಾರಿಯು ತನ್ನ ಜೀವನಕ್ಕೆ ಮುಳ್ಳಾಗಬಹುದೆಂದು ಅವಳಿಗೆ ಅರ್ಥವಾಗುತ್ತಿಲ್ಲ.
ನಂದಿತಾಳಿಗೆ ಈಗೇನು ಬೇಕೆಂಬುದು ಡಾಕ್ಟರ್‌ಗೆ ತಿಳಿಯಲಿಲ್ಲ. ಅವರ ಮನಸ್ಸಿನಲ್ಲಿ ಪ್ರಶ್ನೆಗಳ ಸಮೂಹವೇ ತುಂಬಿತ್ತು. ಆದರೂ ಅವರು ಏನನ್ನೂ ಕೇಳಲಿಲ್ಲ.
ಸ್ವಲ್ಪ ಹೊತ್ತು ಸುಮ್ಮನಿದ್ದ ನಂದಿತಾ, “ಅವನು ನನ್ನ ಮೊದಲ ಪ್ರೀತಿ. ನಾನು ಮೋಹದಲ್ಲಿ ಭಾವುಕಳಾಗಿದ್ದೆ. ಅವನು ಮಾತಿನಲ್ಲಿ ಚಾಣಾಕ್ಷನಾಗಿದ್ದು, ನನ್ನ ಭಾವನೆಗಳೊಂದಿಗೆ ಆಟವಾಡಿದನು. ನಾನು ಮರುಳಾಗಿ ಅವನಿಗೆ ನನ್ನ ದೇಹವನ್ನೊಪ್ಪಿಸಿದೆ. ಅವನು ವಿವಾಹಿತನೆಂಬುದು ಆ ನಂತರ ತಿಳಿಯಿತು. ಆದರೂ ಅವನೊಡನೆ ಸಂಬಂಧ ದೂರ ಮಾಡಲು ನನಗೆ ಸಾಧ್ಯವಾಗಲಿಲ್ಲ. ಅವನ ಮಾತಿನಲ್ಲಿ ಎಂತಹ ಮಾಂತ್ರಿಕತೆ ಇದೆ ಎಂದರೆ, ಅವನೆಡೆಗೆ ಸೆಳೆಯಲ್ಪಡುತ್ತೇನೆ. ಅವನಿಗಾಗಿ ಪರಿತಪಿಸುತ್ತೇನೆ.
“ವಿವಾಹವಾದ ನಂತರ ಅವನನ್ನು ಭೇಟಿ ಮಾಡಬಾರದೆಂದು ಬಹಳ ಪ್ರಯತ್ನಿಸಿದೆ. ಆದರೆ ಅವನು ಎದುರಿಗಿಲ್ಲದಿದ್ದರೆ ನನಗೆ ಸದಾ ಅವನದೇ ಯೋಚನೆ ಬರುತ್ತದೆ. ಅವನ ಭೇಟಿಗಾಗಿ ಕಾತರತೆ ಉಂಟಾಗುತ್ತದೆ. ಅವನನ್ನು ಬಿಟ್ಟು ಬೇರೇನನ್ನೂ ಯೋಚಿಸಲೂ ನನಗೆ ಆಗುವುದಿಲ್ಲ. ನಿಮ್ಮ ಯೋಚನೆಯೂ ಬರುವುದಿಲ್ಲ.
“ನಾನು ನಿಮ್ಮೊಂದಿಗೆ ಮಲಗಿರುವಾಗಲೂ ಮನಸ್ಸು ಅವನ ಬಳಿಯೇ ಇರುತ್ತದೆ. ದಾಂಪತ್ಯ ಜೀವನದಲ್ಲಿ ನಾನು ಪ್ರಾಮಾಣಿಕಳಾಗಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಏನು ಮಾಡಲಿ? ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿಲ್ಲ. ನಾನೊಬ್ಬಳು ದುರ್ಬಲ ಸ್ತ್ರೀ. ಇದು ತಪ್ಪು ಎಂದು ತಿಳಿದೂ ಮಾಡುತ್ತಿದ್ದೇನೆ…..” ಎಂದಳು.
“ನೋಡು, ಯಾರೂ ದುರ್ಬಲರಾಗಿರುವುದಿಲ್ಲ. ಕೇವಲ ಮೋಹ, ಪ್ರೀತಿಯ ಹೆಸರಿನಲ್ಲಿ ತಪ್ಪು ದಾರಿ ತುಳಿಯುತ್ತೇವೆ. ತಂದೆ ತಾಯಿ, ಬಂಧುಮಿತ್ರರನ್ನೆಲ್ಲ ಬಿಡಲು ನಮಗೆ ಸಾಧ್ಯವಿರುವಾಗ ಕೆಟ್ಟ ಕೆಲಸವನ್ನು ಏಕೆ ಬಿಡಲು ಆಗುವುದಿಲ್ಲ? ಕೆಟ್ಟದರ ಕಡೆಗೇ ಹೆಚ್ಚು ಆಕರ್ಷಣೆ ಇರುತ್ತದೇನು? ನಿನ್ನ ವಿಷಯದಲ್ಲಿ ಏನಾಯಿತು ಅಂತ ನನಗೆ ಗೊತ್ತಿಲ್ಲ,” ಎಂದರು ಅಶ್ವಿನ್ ಬೇಸರದಿಂದ.
“ನಾನು ಹೇಳಿದೆನಲ್ಲ….. ಮದುವೆ ಆದ ಮೇಲೆ ಅವನನ್ನು ದೂರ ಮಾಡುವುದಕ್ಕೆ ಬಹಳ ಪ್ರಯತ್ನ ಮಾಡಿದೆ. ಆದರೆ ಮನಸ್ಸು ಅವನ ಕಡೆಗೇ ಓಡುತ್ತದೆ. ಅವನು ನಮ್ಮ ಆಫೀಸ್‌ನಲ್ಲಿ ಕೆಲಸ ಮಾಡುವುದಿಲ್ಲ. ನನಗೆ ಹೆಚ್ಚಿಗೆ ಫೋನ್ ಸಹ ಮಾಡುವುದಿಲ್ಲ. ಆದರೆ ಅವನಿಂದ ಪೋನ್ ಬರದಿದ್ದರೆ ನನಗೆ ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ. ನಾನೇ ಫೋನ್ ಮಾಡಿ ಕರೆಯುತ್ತೇನೆ. ನಾನೇನು ಮಾಡಲಿ?” ಎಂದಳು.
ಈ ಪ್ರಶ್ನೆಗೆ ಅಶ್ವಿನ್ ಬಳಿ ಉತ್ತರವಿರಲಿಲ್ಲ. `ನಂದಿತಾ ದೃಢಚಿತ್ತದ ಹುಡುಗಿಯಲ್ಲ. ಅವಳು ಭಾವುಕತೆಗೆ ಬಲಿಯಾಗಿ ಬುದ್ಧಿಗೇಡಿಯಂತೆ ವರ್ತಿಸುತ್ತಾಳೆ. ತನ್ನ ವಿವೇಕವನ್ನು ಬಳಸಿಕೊಳ್ಳದೆ ಪರಿಸ್ಥಿತಿಗೆ ದಾಸಳಾಗಿದ್ದಾಳೆ. ಒಳ್ಳೆಯ, ಕೆಟ್ಟದರ ಅರಿವಿದ್ದರೂ ಕೆಟ್ಟದ್ದರಿಂದ ದೂರ ನಿಲ್ಲುತ್ತಿಲ್ಲ. ಅನೈತಿಕ ಮಾರ್ಗದಿಂದ ದೊರೆಯುತ್ತಿರುವ ಆನಂದದಲ್ಲೇ ಸುಖವನ್ನು ಬಯಸುತ್ತಾಳೆ,’ ಎಂಬುದು ಅವರಿಗೆ ಮನವರಿಕೆಯಾಯಿತು.
ಆ ವ್ಯಕ್ತಿ ತನ್ನ ದೇಹ ಸುಖಕ್ಕಾಗಿ ನಂದಿತಾಳ ಜೀವನದೊಂದಿಗೆ ಆಟವಾಡುತ್ತಿದ್ದಾನೆ ಎಂದು ಡಾಕ್ಟರ್ ಅಶ್ವಿನ್‌ಅರ್ಥ ಮಾಡಿಕೊಂಡರು. (ಸಶೇಷ)