ಓದು ಮುಗಿಸಿದ ಮೀನಾಕ್ಷಿ ನೌಕರಿ ಸೇರಿ 7-8 ತಿಂಗಳಷ್ಟೇ ಆಗಿತ್ತು. ಅಕ್ಕಪಕ್ಕದವರು ಹಾಗೂ ಸಂಬಂಧಿಕರು ಆಕೆಯ ನೆಮ್ಮದಿಯನ್ನೇ ಕಸಿದುಕೊಂಡು ಬಿಟ್ಟಿದ್ದರು. ಮನೆ ಆಸುಪಾಸು ಅಥವಾ ಸಂಬಂಧಿಕರ ಯಾವುದೇ ಮದುವೆ ಸಮಾರಂಭ, ನಾಮಕರಣ, ಪಾರ್ಟಿಗಳಿಗೆ ಹೋದರೆ ಸಾಕು ಅವಳು ಹತ್ತು ಹಲವು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿತ್ತು.
“ಮೀನಾಕ್ಷಿ, ನಿನ್ನ ಡಿಗ್ರಿ ಮುಗೀತಾ, ಈಗೆಲ್ಲಿ ಜಾಬ್ ಮಾಡ್ತಿದೀಯಾ? ಎಷ್ಟು ಪ್ಯಾಕೇಜ್ ಸಿಕ್ಕಿದೆ? ಮತ್ತೇನು ಸಮಾಚಾರ…..” ಈ ಮುಂದಿನ ಪ್ರಶ್ನೆ ಕೇಳಿ ಅವಳು ಬಹಳ ಗಾಬರಿಗೊಳಗಾಗುತ್ತಿದ್ದಳು. ಏಕೆಂದರೆ ಮುಂದೇನು ಪ್ರಶ್ನೆ ಬರಬಹುದೆಂದು ಅವಳಿಗೆ ಗೊತ್ತಾಗುತ್ತಿತ್ತು.
“ಮದುವೆ ಯಾವಾಗ ಮಾಡಿಕೊಳ್ತೀಯಾ? ಯಾರಾದ್ರೂ ಹುಡುಗ ಮನಸ್ಸಿನಲ್ಲಿದ್ದಾನೆಯೇ? ಹಾಗೇನಾದ್ರೂ ಇದ್ರೆ ನಮಗೆ ಹೇಳು.”
ಆ ಮಾತುಗಳನ್ನು ಕೇಳಿದಾಗ ಅವಳಿಗೆ ರೋಸಿ ಹೋಗುತ್ತಿತ್ತು. ಆ ಕಾರಣದಿಂದಾಗಿ ಅವಳು ಕ್ರಮೇಣ ಅಂತಹ ಸಮಾರಂಭಗಳಿಂದ ದೂರ ಉಳಿಯಲಾರಂಭಿಸಿದಳು.
“ಮದುವೆ, ರಿಸೆಪ್ಶನ್, ನಾಮಕರಣ ಸಮಾರಂಭಗಳಿಗೆ ಬಂದಿದ್ದೀರಾ. ಆ ಬಗ್ಗೆ ಏನಾದರೂ ಮಾತನಾಡಿ, ಹೊಟ್ಟೆ ತುಂಬಾ ತಿನ್ಕೊಂಡು ಹೋಗಿ. ಅದನ್ನು ಬಿಟ್ಟು ನನ್ನ ಕಲ್ಯಾಣದ ಬಗ್ಗೆ ಏಕೆ ಮಾತಾಡ್ತಿದೀರಾ?” ಎಂದು ಅವಳು ಪ್ರತಿಯಾಗಿ ಹೇಳುತ್ತಿದ್ದಳು. ಅವಳ ಅಮ್ಮನ ಸ್ಥಿತಿ ಕೂಡ ಅದೇ ಆಗಿತ್ತು. ಅವಳ ಫ್ಲ್ಯಾಟ್‌ನಲ್ಲಿ ಮಹಿಳಾ ಮಂಡಳಿ ಒಗ್ಗೂಡಿದಾಗ ಎಲ್ಲರ ಪ್ರಶ್ನೆ ಒಂದೇ ಆಗಿರುತ್ತಿತ್ತು. ಅವರೆಲ್ಲ ಮ್ಯಾರೇಜ್ ಬ್ಯೂರೊ ತೆರೆದವರಂತೆ ಮಾತನಾಡುತ್ತಿದ್ದರು.
“ನನ್ನ ಮಗ ಮೀನಾಕ್ಷಿಗಿಂತ 3 ವರ್ಷ ಚಿಕ್ಕವನು. ಅಂದರೆ ಅವಳಿಗೀಗ ಅಷ್ಟು ವರ್ಷನಾ?” ಒಬ್ಬಳು ಹೇಳುತ್ತಿದ್ದಳು.
“ಅವಳ ವಯಸ್ಸಿನಲ್ಲಿ ನನಗೆ ಎರಡು ಮಕ್ಕಳು ಆಗಿದ್ದವು,” ಇನ್ನೊಬ್ಬಳು ಹೆಮ್ಮೆಯಿಂದ ಹೇಳಿಕೊಂಡಳು.
“ಅವಳು ಯಾರನ್ನಾದರೂ ಪ್ರೀತಿಸುತ್ತಿರಬಹುದಾ? ಅವನು ಯಾವ ಜಾತಿ/ಧರ್ಮದವನಿದ್ದಾನೋ? ಈಗಿನ ಹುಡುಗಿಯರು ಸಾಮಾನ್ಯರಲ್ಲ. ಅವರು ಮೊದಲೇ ಯಾರನ್ನಾದರೂ ಪಟಾಯಿಸಿಕೊಂಡು ಬಿಡ್ತಾರೆ,” ಮೂರನೆಯವಳು ಕೂಡ ಧ್ವನಿಗೂಡಿಸಿದಳು.
“ಹಾಗಾದರೆ ನಿನಗೆ ವರದಕ್ಷಿಣೆ ಕೊಡಬೇಕಾದ ಅಗತ್ಯ ಇರೋಲ್ಲ ಬಿಡು,” ಎರಡು ಮಕ್ಕಳ ತಾಯಿ ಅನಿತಾ ಸ್ವಲ್ಪ ಅತೃಪ್ತಿಯ ಸ್ವರದಲ್ಲಿ ಹೇಳಿದಳು. ಅವಳು ಹೇಳಿದ ರೀತಿ ಹೇಗಿತ್ತಿದೆಂದರೆ, ತನ್ನ ಮಗನನ್ನೇ ಅವಳು ಪ್ರೀತಿಸುತ್ತಿದ್ದಾಳೊ ಎಂಬಂತ್ತಿತ್ತು.
“ಮೀನಾಕ್ಷಿ ನೌಕರಿ ಮಾಡ್ತಾ ಮಾಡ್ತಾ ದೊಡ್ಡ ದೊಡ್ಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಾಳೆ. ಅವಳಿಗೆ ಕೆಎಎಸ್ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ,” ಅವಳ ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು.
“ಮೊದಲು ಅವಳ ಮದುವೆ ಮಾಡಿಬಿಡು. ಆಮೇಲೆ ಕೂಡ ಪರೀಕ್ಷೆ ಬರೆಯಬಹುದು,” ಎಂದು ಒಬ್ಬಳು ಹೇಳಿದಳು. “ಸಮಯಕ್ಕೆ ಸರಿಯಾಗಿ ಮದುವೆ ಆಗಬೇಕು, ಇಲ್ಲದಿದ್ದರೆ ನೀನು ಹುಡುಕುತ್ತಲೇ ಇರಬೇಕಾಗುತ್ತದೆ,” ಇನ್ನೊಬ್ಬಳು ಹೆದರಿಸುವ ಧ್ವನಿಯಲ್ಲಿ ಹೇಳಿದಳು.
“ನನಗೇನಾದರೂ ಮಗಳಿದ್ದಿದ್ರೆ ಈ ವಯಸ್ಸಿನಲ್ಲಿ ಮದುವೆ ಮಾಡಿ ಮುಗಿಸಿರುತ್ತಿದ್ದೆ. ನನ್ನ ಮಗನ ಮದುವೆಯನ್ನೇ ನಾನು 25ಕ್ಕೆ ಮುಗಿಸಿಬಿಡ್ತೀನಿ. ಈಗಿನ ಕಾಲದ ಹುಡುಗಿಯರನ್ನು ನಂಬೋಕೆ ಆಗುವುದಿಲ್ಲ. ಯಾರು ಯಾರನ್ನು ಯಾವಾಗ ತಮ್ಮ ಬಲೆಗೆ ಬೀಳಿಸಿಕೊಳ್ತಾರೊ ಹೇಳೋಕೆ ಆಗುವುದಿಲ್ಲ,” ಇಬ್ಬರು ಪುತ್ರರ ತಾಯಿ ಶಶಿರೇಖಾ ತನ್ನ ಹೇಳಿಕೆ ಮಂಡಿಸಿದಳು.
ಮೀನಾಕ್ಷಿಯ ಅಮ್ಮನಿಗೆ ಕೇಳಿಸಿಕೊಳ್ಳಲು ಆಗಲಿಲ್ಲ. ಅಲ್ಲಿಂದ ಹೊರಗೆ ಹೋಗದೆ ವಿಧಿ ಇರಲಿಲ್ಲ. ಆದರೆ ಸಂದೇಹದ ಬೀಜ ಮೊಳಕೆಯೊಡೆಯುತ್ತ ಹೋಗುತ್ತದೆ. ವಾಸ್ತವದಲ್ಲಿ ಮಗಳಿಗೆ ಹೆಚ್ಚು ಓದಿಸುವುದು ತಪ್ಪಾ ಅಥವಾ 30ರ ಬಳಿಕ ಅವರಿಗೆ ಮದುವೆ ಮಾಡಲು ಅಷ್ಟೊಂದು ಕಷ್ಟ ಎದುರಿಸಬೇಕಾಗುತ್ತಾ?
ಕಾಲೆಳೆಯುವಲ್ಲಿ ಮುಂದೆ
ಅದೋ ಆ 4 ಜನರ ಭಯದಿಂದ ಅಥವಾ ಅವರನ್ನು ಖುಷಿಪಡಿಸಲು ಅದೆಷ್ಟು ನಿರ್ಧಾರಗಳು ಕೈಗೊಳ್ಳಲ್ಪಡುತ್ತವೋ ಏನೊ? ಆ ನಾಲ್ಕು ಜನರ ಮಾತುಗಳನ್ನು ನಂಬಿ ಯಾವುದೊ ಹುಡುಗಿಯ ಮದುವೆ ಅವಧಿಗೆ ಮುಂಚೆ ಮಾಡಲಾಗುತ್ತದೆ ಅಥವಾ ಅವಳನ್ನು ನೌಕರಿ ಬಿಡಿಸಿ ಮನೆಯಲ್ಲಿ ಕೂರುವಂತೆ ಮಾಡಲಾಗುತ್ತದೆ. ರಾತ್ರಿ ತಡವಾಗಿ ಬರುವ ಹುಡುಗಿಗೆ ಅವಳ ಅಮ್ಮ ಅಥವಾ ಅಜ್ಜಿ ಬಾಯಿಗೆ ಬಂದಂತೆ ಮಾತನಾಡುವುದು ಕೆಲವು ಜನರ ಮಾತು ಕೇಳಿಯೇ ತನಿಗಿಷ್ಟವಾದ ಡ್ರೆಸ್‌ನ್ನು ಧರಿಸಲು ಹುಡುಗಿಗೆ ನಿರಾಕರಿಸುವುದು ಕೂಡ ಜನ ಏನನ್ನುತ್ತಾರೆ ಎಂಬ ಭೀತಿಯಿಂದ.
ಆದರೆ ವಾಸ್ತವದಲ್ಲಿ ಆ ನಾಲ್ಕು ಜನರು ಎಂದಾದರೂ ಖುಷಿಯಿಂದ ಇರಲು ಸಾಧ್ಯವೇ ಇಲ್ಲ ಎಂದೂ ಇಲ್ಲ, ಅವರು ಇತರರ ಕಾಲೆಳೆಯುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅಂಥವರ ಬಾಯಿಂದ ಹೊಗಳಿಕೆಯ ಮಾತುಗಳು ಬರುವುದು ಕಡಿಮೆಯೇ. ನಾವಿಲ್ಲಿ ಹೇಳ್ತಿರುವ ಮೀನಾಕ್ಷಿ ಅಕ್ಕಪಕ್ಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಳು. ವಯಸ್ಸು ಹೆಚ್ಚುತ್ತ ಹೋದಂತೆ ಹುಡುಗಿಯ ಮದುವೆ ಆಗಲಿಲ್ಲ ಅಥವಾ ಅವಳೇನಾದರೂ ತಪ್ಪು ಹೆಜ್ಜೆ ಇಟ್ಟರೆ ಏನು ಗತಿ? ಖಿನ್ನತೆಗೆ ತುತ್ತಾದ ಮೀನಾಕ್ಷಿಯ ಅಮ್ಮ ಅವಳಿಗಾಗಿ ವರ ಹುಡುಕಲು ಶುರು ಮಾಡಿದಳು. ಕೆಲವೇ ತಿಂಗಳಲ್ಲಿ ಮೀನಾಕ್ಷಿಯ ಮದುವೆ ಮುಗಿದೇ ಹೋಯಿತು. ಅದೊಂದು ದಿನ ಅವಳು ತನ್ನ ಸ್ನೇಹಿತೆಯರ ಜೊತೆ ಕುಳಿತು ಹರಟುತ್ತಿದ್ದಳು.
“ಮೀನಾಕ್ಷಿಯ ಮದುವೆಯಲ್ಲಿ ಅದೇನು ಕೆಟ್ಟ ವ್ಯವಸ್ಥೆ ಅಂತೀಯಾ? ನನಗೆ ಸ್ವಿಟ್ ಡಿಶ್ ಸಿಗಲೇ ಇಲ್ಲ. ವ್ಯವಸ್ಥೆ ಮಾಡಲು ಆಗದೇ ಇದ್ದರೆ ಅಷ್ಟೊಂದು ಜನರನ್ನು ಏಕೆ ಕರೆಯಬೇಕಿತ್ತು?” ಹಿಂದಿನಿಂದ ಯಾರೋ ಒಬ್ಬರು ಪಿಸುಮಾತಿನಲ್ಲಿ ಹೇಳುತ್ತಿದ್ದುದು ಕೇಳಿಸಿತು.
“ಹುಡುಗನನ್ನು ನೋಡಿದಾಗ ಅವನಿಗೆ ಬಹಳ ವಯಸ್ಸಾಗಿರುವುದು ಕಂಡುಬಂತು.”
ಮೀನಾಕ್ಷಿಯ ಅಮ್ಮ ಯೋಚಿಸುತ್ತಿದ್ದಳು, `ತಾನು ಇವರ ಸಲಹೆಯ ಮೇರೆಗೆ ಮಗಳ ಮದುವೆ ಮಾಡಿದೆ, ಎಲ್ಲರೂ ನನ್ನನ್ನು ಹೊಗಳಬಹುದು ಅಂದುಕೊಂಡಿದ್ದೆ. ಆದರೆ ಇಲ್ಲಿ ನೋಡಿದರೆ ಬೇರೆಯದೇ ರೆಕಾರ್ಡ್ ಕಿವಿಗೆ ಕೇಳಿಸುತ್ತಿತ್ತು. ಕೋಪ ಉಕ್ಕಿ ಬರುತ್ತಿತ್ತು. ಆದರೂ ಮುಖದಲ್ಲಿ ನಗು ತಂದುಕೊಂಡು ಹಿಂದೆ ಹೋದಳು. ಅಲ್ಲಿ ಮಹಿಳೆಯೊಬ್ಬಳನ್ನು ಉದ್ದೇಶಿಸಿ, “ಶಕುಂತಲಾ ಅವರೆ, ನಿಮ್ಮ ಮಗನ ಬಗ್ಗೆ ಗೊತ್ತಾ? ನಾನು ನಿನ್ನೆ ಮಾರ್ಕೆಟ್‌ಗೆ ಹೋದಾಗ ಅಲ್ಲಿ ಅವನನ್ನು ನೋಡಿದೆ. ಯಾರೋ ಹುಡುಗಿ ಅವನ ಮೋಟರ್ ಸೈಕಲ್ ಹಿಂದಿನ ಸೀಟಿನಲ್ಲಿ ಕೂತಿದ್ದಳು.”
“ಹೌದೌದು, ಅವರ ಆಫೀಸಿನ ಹುಡುಗಿ ಅವನ ಬೆನ್ನು ಬಿದ್ದಿದ್ದಾಳಂತೆ,” ಎಂದು ಏನೋ ಸಬೂಬು ಹೇಳಲು ನೋಡಿದಳು. ಆದರೆ ಅವಳ ಮುಖದ ಬಣ್ಣ ಈ ಸುದ್ದಿ ಕೇಳಿ ಬದಲಾಗುತ್ತಾ ಹೋಯಿತು. ನಾಲ್ಕು ಜನರ ಎದುರಿಗೆ ಅವಳಿಗೆ ಮುಖಭಂಗವಾಗಿತ್ತು. ಈಗ ಚರ್ಚೆ ಮೀನಾಕ್ಷಿಯ ಮದುವೆಯಿಂದ ಬೇರೆ ಕಡೆಗೆ ವರ್ಗಾವಣೆಗೊಂಡಿತ್ತು.
ಖೇದದ ಸಂಗತಿ
ಎಲ್ಲಿ 4 ಜನರು ಒಟ್ಟಿಗೆ ಸೇರುತ್ತಾರೊ, ಅಲ್ಲಿ 4 ಮಾತುಗಳು ಕೇಳಿಬರುವುದು ಸಹಜವೇ! ರಾಜಕೀಯದ ಚರ್ಚೆಯಿಂದ ಶುರುವಾಗುವ ಮಾತುಕತೆ ನಮ್ಮ ಆಸುಪಾಸಿನ ವಿಷಯಕ್ಕೆ ಬಂದು ನಿಲ್ಲುತ್ತದೆ. ಅದೂ ಕೂಡ ಬೇರೆಯರ ವಿಷಯದ ಬಗ್ಗೆ ಚರ್ಚೆ ಮಾಡುವುದು ಅವರಿಗೆ ಹೆಚ್ಚು ರುಚಿಸುತ್ತದೆ. ಇದರಲ್ಲಿ ಮಹಿಳೆಯರಷ್ಟೇ ಮುಂಚೂಣಿಯಲ್ಲಿರುವುದಿಲ್ಲ, ಪುರುಷರು ಕೂಡ ಇತರರ ಬಗ್ಗೆ ಮಾತನಾಡಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ.
ಮೀನಾಕ್ಷಿಯ ಮದುವೆ ಆಯಿತು. ಅವಳ ಮುಂದಿನ ಓದನ್ನು ನಿಲ್ಲಿಸಲಾಯಿತು. ಇದರಿಂದ ನಾಲ್ಕು ಜನರಿಗೆ ಖುಷಿಯಾಗುತ್ತದೆಂದು ತಾಯಿ ಭಾವಿಸಿದ್ದಳು. ಆದರೆ ಹೀಗೇನೂ ಆಗಲಿಲ್ಲ. ಒಂದು ಒಂದೂವರೆ ವರ್ಷ ಆಗುತ್ತಿದ್ದಂತೆ ಅದೇ ಜನರು ಅವಳನ್ನು ಪ್ರಶ್ನೆಗಳ ಕಟಕಟೆಯಲ್ಲಿ ನಿಲ್ಲಿಸಿದರು.
“ಮೀನಾಕ್ಷಿ ಮದುವೆ ಬಳಿಕ ಹೇಗಿದ್ದಾಳೆ?” ಒಬ್ಬಳು ಪ್ರಶ್ನಿಸಿದಳು.
“ಮದುವೆಯಾಗಿ ಒಂದು ವರ್ಷವಾಯಿತು.? ಏನಾದರೂ ಸಿಹಿ ಸುದ್ದಿ ಕೊಟ್ಟಿದ್ದಾಳಾ?” ಎರಡನೆಯವಳ ಉತ್ಸುಕತೆಗೆ ಅಂತ್ಯವೇ ಇರಲಿಲ್ಲ.
“ಈಗಷ್ಟೇ ಹೊಸದಾಗಿ ನೌಕರಿಗೆ ಸೇರಿದ್ದಾಳೆ. ಒಂದಷ್ಟು ವರ್ಷ ಆಗಲಿ, ಮಗು ಆಗಿಯೇ ಆಗುತ್ತದೆ,” ಮೀನಾಕ್ಷಿಯ ಅಮ್ಮ ಸಮಜಾಯಿಷಿ ಕೊಡಲು ನೋಡಿದಳು.
“ಸೂಕ್ತ ಸಮಯದಲ್ಲಿ ಮಗು ಆಗಬೇಕು. ಇಲ್ಲದಿದ್ದರೆ ಜೀವನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಈ ಹುಡುಗಿಯರು ಅದೇನೇನೊ ಮಾತ್ರೆ ನುಂಗ್ತಾರೇ….. ಆಮೇಲೆ ಗರ್ಭ ಧರಿಸುವುದೇ ಕಷ್ಟವಾಗುತ್ತದೆ,
” ನಾಲ್ಕು ಮಕ್ಕಳ ತಾಯಿ ಉಚಿತವಾಗಿಯೇ ತನ್ನ ಸಲಹೆ ವಿನಿಮಯ ಮಾಡಿಕೊಂಡಳು. ಆನಂತರ ಬಗೆಬಗೆಯ ಉದಾಹರಣೆಗಳನ್ನು ಕೊಟ್ಟು ಹುಡುಗಿಯರಿಗೆ ಮಗು ಆಗದೇ ಇರುವ ಕಾರಣಗಳ ಬಗ್ಗೆ ಚರ್ಚಿಸಲಾಯಿತು. ಎಷ್ಟೇ ಸಮಜಾಯಿಷಿ ಕೊಟ್ಟರೂ ಅದಕ್ಕೆ ಅಂತ್ಯವೇ ಇಲ್ಲ ಎನ್ನುವುದು ಮೀನಾಕ್ಷಿಯ ಅಮ್ಮನಿಗೆ ತಿಳಿದುಹೋಯಿತು. ಈಗ ಅವಳೂ ಜಾಣೆಯಾಗಿದ್ದಳು. ಅವಳು ಮಾತಿನ ದಿಸೆಯನ್ನೇ ಬದಲಿಸಿಬಿಟ್ಟಳು. ಆ ನಾಲ್ಕು ಜನರ ಚರ್ಚೆ ಈಗ ಆ ವಿಷಯದ ಕಡೆ ತಿರುಗಿತು.
ಅವಳೂ ಈಗ ಆ ನಾಲ್ಕು ಜನರ ಜೊತೆ ಕುಳಿತು ಜ್ಞಾನದ ಮಾತುಗಳನ್ನು ಹೇಳತೊಡಗಿದಳು. ಅವಳಿಗೂ ಅದರಲ್ಲಿ ಖುಷಿಯ ಅನುಭವ ಸಿಗತೊಡಗಿತು. ನಾಲ್ಕು ಜನರ ಜೊತೆ ಕುಳಿತು ಯಾರೋ ಐದನೆಯವರ ಕಾಲೆಳೆಯುವುದು, ಅವರನ್ನು ನಾಚಿ ನೀರಾಗಿಸುವಂತೆ ಮಾಡುವುದು ಅವಳಿಗೆ ಅದೇನೋ ಸ್ವರ್ಗ ಸುಖದಂತೆ ಭಾಸವಾಗತೊಡಗಿತು.
ಮೀನಾಕ್ಷಿಯ ಅಮ್ಮ ಕೂಡ ಯಾರಿಗಾದರೂ ನಿನ್ನ ಮಗ ಅಥವಾ ಮಗಳ ಮದುವೆ ಇನ್ನೂ ಏಕೆ ಆಗಿಲ್ಲ ಎಂದು ಕೇಳಲು ಯಾವುದೇ ಹಿಂಜರಿಕೆ ಎನಿಸುವುದಿಲ್ಲ. ತಾನಾಡುವ ಮಾತು ಯಾರ ಮೇಲೆ, ಏನು ಪರಿಣಾಮ ಬೀರುತ್ತದೆ ಎಂದೂ ಅವಳಿಗೆ ಏನೂ ಅನಿಸುವುದಿಲ್ಲ. ಅಕ್ಕಪಕ್ಕದವರ ಚಿಕ್ಕಪುಟ್ಟ ಸಂಗತಿಗಳನ್ನು ಕೇಳಿಸಿಕೊಳ್ಳುವುದು, ಅದಕ್ಕೆ ಉಪ್ಪು ಖಾರ ಸವರಿ ಇತರರ ಜೊತೆ ಚರ್ಚಿಸುವುದು ಅವಳಿಗೆ ಯಾವುದೇ ಸಂಕೋಚ ಎನಿಸುವುದಿಲ್ಲ.
ಎನ್. ನರ್ಮದಾ