ಈಗಲೂ ಅನೇಕ ಕುಟುಂಬಗಳು ಸೊಸೆಯನ್ನು ತಮ್ಮ ಸಂಪತ್ತು, ಆಸ್ತಿ ಎಂಬಂತೆ ಪರಿಗಣಿಸುತ್ತವೆ. ಗಳಿಸುವ ಹುಡುಗಿಯನ್ನು ತಮ್ಮ ಹುಡುಗನಿಗೆ ತಂದುಕೊಳ್ಳುವ ಉದ್ದೇಶ ಅವಳ `ಸ್ಯಾಲರಿ ಪ್ಯಾಕೇಜ್’ ಆಗಿರುತ್ತದೆ. ಮದುವೆಯ ಬಳಿಕ ಅವಳ ಆಯವ್ಯಯವನ್ನು ಗಮನಿಸಿ ಅವಳ ಬ್ಯಾಂಕ್ ಅಕೌಂಟ್ ಮೇಲೆ ತಮ್ಮದೇ ಹಕ್ಕು ಸಾಧಿಸುತ್ತಾರೆ. ಕೆಲವು ಹುಡುಗಿಯರಂತೂ ಅತ್ತೆಮನೆಯವರ ಒತ್ತಡಕ್ಕೆ ಜೀವನವಿಡೀ ದುಃಖಿತರಾಗಿರುತ್ತಾರೆ. ಆದರೆ ಹೆಚ್ಚಿನ ಹುಡುಗಿಯರು ಈ ತೆರನಾದ ಅನವಶ್ಯಕ ಒತ್ತಡಗಳನ್ನು ಬಿಲ್‌ಕುಲ್ ಒಪ್ಪುವುದಿಲ್ಲ.
ಈ ವಿಷಯದ ಬಗ್ಗೆ ಬೆಂಗಳೂರಿನ ಫೋಟೋಗ್ರಾಫರ್ ರಾಜೇಶ್ವರಿ ಹೀಗೆ ಹೇಳುತ್ತಾರೆ, “ಸೊಸೆಯನ್ನು ಅತ್ತೆ ಮನೆಯವರು ಆಸ್ತಿಯೆಂದು ಏಕೆ ಭಾವಿಸಬೇಕು? ಅವಳೇನು ನಿರ್ಜೀವ ವಸ್ತುವೇ? ಅವಳಿಗೆ ತನ್ನದೇ ಆದ ಒಂದು ಅಸ್ತಿತ್ವವಿದೆ. ಅವಳಿಗೆ ತನ್ನ ಅತ್ತೆ ಮನೆಯ ಬಗ್ಗೆ ಎಷ್ಟು ಜವಾಬ್ದಾರಿಗಳಿರುತ್ತವೋ, ಅಷ್ಟೇ ಜವಾಬ್ದಾರಿಗಳು ತವರಿನ ಕುರಿತಾಗಿಯೂ ಇರುತ್ತವೆ.
“ನಾವಿಬ್ಬರು ಅಂದರೆ ನನ್ನ ಹಾಗೂ ಗಂಡನ ನಡುವೆ ಸಾಕಷ್ಟು ಒಳ್ಳೆಯ ಹೊಂದಾಣಿಕೆ ಇದೆ. ನಾನು ಅವರ ಕುಟುಂಬವನ್ನು ಒಪ್ಪಿಕೊಂಡಿರುವಂತೆ, ಅವರೂ ನನ್ನ ತಂದೆತಾಯಿಯ ಕುಟುಂಬವನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಮ್ಮ ನಡುವೆ ವಾದವಿವಾದವಾಗಲಿ, ಜಗಳವಾಗಲಿ ಇಲ್ಲ.”
ಹುಬ್ಬಳ್ಳಿಯ ಸಂಗೀತಾ ಇಂಟರ್ ನ್ಯಾಷನಲ್ ಸ್ಕೂಲ್ ಒಂದರಲ್ಲಿ ಶಿಕ್ಷಕಿ. ಅವರು ಹೇಳುತ್ತಾರೆ, “ಸೊಸೆಯನ್ನು ಅತ್ತೆಮನೆಯ ಆಸ್ತಿ ಎಂದು ಕರೆಯುವುದು ಸೂಕ್ತವಲ್ಲ. ಆದರೆ ಮದುವೆಯ ಬಳಿಕ ಅತ್ತೆಮನೆಯ ಕುರಿತಾದ ಆಕೆಯ ಜವಾಬ್ದಾರಿಗಳು ದ್ವಿಗುಣಗೊಳ್ಳುತ್ತವೆ. ಮುಂಚೆ ಅವಳು ಯಾವ ಕುಟುಂಬದಲ್ಲಿ ವಾಸಿಸುತ್ತಿದ್ದಳೊ, ಆ ಕುಟುಂಬದಲ್ಲೂ ಅವಳ ಜವಾಬ್ದಾರಿಗಳು ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತವೆ.”
ಶಿವಮೊಗ್ಗದ 60 ವರ್ಷದ ಗೃಹಿಣಿ ಸುಮಿತ್ರಾದೇವಿ ಇಬ್ಬರು ಸೊಸೆಯಂದಿರ ಅತ್ತೆ. ಅವರು ಹೀಗೆ ಹೇಳುತ್ತಾರೆ, “ಇಂದಿನ ಸೊಸೆಯಂದಿರ ಕೈಯಿಂದ ನೀವು ಒತ್ತಾಯ ಪೂರ್ವಕವಾಗಿ ಅಥವಾ ಅಧಿಕಾರ ಬಲದಿಂದ ಯಾವುದೇ ಒಂದು ಕೆಲಸವನ್ನು ಮಾಡಿಸಲಿಕ್ಕೂ ಸಾಧ್ಯವಿಲ್ಲ. ನೀವು ಆಕೆಗೆ ಪ್ರೀತಿ, ಸ್ನೇಹ ಮತ್ತು ಗೌರವ ಕೊಡಬೇಕಾಗುತ್ತದೆ. ಆಗ ಆಕೆ ನಿಮ್ಮ ಇಚ್ಛೆಗನುಗುಣವಾಗಿ ಯಾವುದಾದರೂ ಕೆಲಸ ಮಾಡಬಹುದಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಅವಳ ಗಂಡ ಅವಳ ಸಮಂಜಸ ಅಸಮಂಜಸ ನಿರ್ಧಾರಗಳಲ್ಲಿ ಅವಳ ಜೊತೆಗೇ ಇರುತ್ತಾನೆ. ಇಂದಿನ ಸೊಸೆ ಸುಶಿಕ್ಷಿತೆ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಹೀಗಾಗಿ ಅವಳ ಇಚ್ಛೆಗನುಗುಣ ನಮ್ಮನ್ನು ನಾವು ಬದಲಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.
“ನಮ್ಮ ಕಾಲದಲ್ಲಿ ಗಂಡನಾದವನು ತನ್ನ ಅಮ್ಮನ ಸಲಹೆ ಸೂಚನೆಯ ಮೇರೆಗೆ ನಡೆಯುತ್ತಿದ್ದ. ಆದರೆ ಈಗ ಪರಿಸ್ಥಿತಿ ತುಂಬಾ ಬದಲಾಗಿದೆ. ಅದು ಹುಡುಗಿಯರಿಗೆ ಸಕಾರಾತ್ಮಕ ರೂಪದಲ್ಲಿದೆ.”
ಇದೇ ಕಾರಣವೆಂಬಂತೆ ಇಂದು ಹಲವು ಹುಡುಗಿಯರು ತಮ್ಮ ತವರುಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇಂದು ಹಲವು ಹುಡುಗಿಯರು ತಮ್ಮ ತಂದೆತಾಯಿಯ ಅಂತ್ಯ ಸಂಸ್ಕಾರವನ್ನು ನಿಭಾಯಿಸಿದ ಹಾಗೂ ಅವರ ನಂತರದ ಜವಾಬ್ದಾರಿಗಳನ್ನೂ ವಹಿಸಿಕೊಂಡ ಹಲವು ಸುದ್ದಿಗಳನ್ನು ನಾವು ಪತ್ರಿಕೆಯಲ್ಲಿ ಓದಿದ್ದೇವೆ.
ಸೊಸೆಯನ್ನು ಅತ್ತೆಮನೆಯ ಆಸ್ತಿ ಎಂದು ಕರೆಯುವುದು ಸೂಕ್ತವಲ್ಲ. ಅವಳು ಆ ಮನೆಯ ಸದಸ್ಯಳಂತೆ ಆ ಮನೆಯ ಪ್ರತಿಯೊಂದು ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಇಂದು ಆಕೆ ಸುಶಿಕ್ಷಿತೆ ಹಾಗೂ ಸ್ವಾವಲಂಬಿಯಾಗಿರುವ ಕಾರಣದಿಂದ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಮರ್ಥಳಾಗಿದ್ದಾಳೆ. ಹೀಗಾಗಿ ಅವಳನ್ನು ಯಾರಾದರೂ ತನ್ನನ್ನು ಸಂಪತ್ತು ಎಂದು ಭಾವಿಸಿದರೆ, ಅದು ಆ ವ್ಯಕ್ತಿಯ ಮೂರ್ಖತನವಂದೇ ಭಾವಿಸಬೇಕಾಗುತ್ತದೆ.
ನಮ್ಮ ಸಮಾಜದಲ್ಲಿ ಹುಡುಗಿಗೆ ಆಕೆಯ ಮನೆಯ ಹೆಗ್ಗುರುತಿನ ಸಂಕಟವನ್ನು ಜೀವನವಿಡೀ ಅನುಭವಿಸಬೇಕಾಗುತ್ತದೆ. ಮಗಳು ಬೇರೆಯವರ ಮನೆಗೆ ಹೋಗಬೇಕಾಗುತ್ತದೆ ಎಂಬುದನ್ನು ಕೇಳಿಕೊಂಡೇ ಅವಳು ಬೆಳೆದಿರುತ್ತಾಳೆ. ಅವಳು ಅತ್ತೆಮನೆಗೆ ಹೋದಾಗ ನಿನ್ನ ತವರುಮನೆಯಿಂದ ಇದನ್ನೇ ಕಲಿತುಕೊಂಡು ಬಂದದ್ದಾ? ಎಂಬ ಮಾತನ್ನು ಆಗಾಗ ಕೇಳಿಸಿಕೊಳ್ಳುತ್ತಿರಬೇಕಾಗುತ್ತದೆ.
ತಿಳಿವಳಿಕೆಯಿಂದ ಬದಲಿಸಿ
ಹುಡುಗಿಯೊಬ್ಬಳಿಗೆ ಹೊಸ ಕುಟುಂಬ, ಹೊಸ ಜನರು, ರೀತಿನೀತಿ, ಅಲ್ಲಿನ ಊಟ ತಿಂಡಿಗಳ ಜೊತೆ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂಕಷ್ಟ ಇರುತ್ತದೆ. ಅಲ್ಲಿ ಆಕೆ ಅನೇಕ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಹುಡುಗಿ ತನ್ನ ಮೂಲಸ್ವಭಾವ ಹಾಗೂ ಸ್ವಂತಿಕೆಯನ್ನು ಬಿಡಬಾರದು. ತನ್ನ ಭವಿಷ್ಯ ಹಾಗೂ ವ್ಯಕ್ತಿತ್ವಕ್ಕೆ ಅನುಸಾರ ಅವಳು ಮುಕ್ತವಾಗಿ ಜೀವಿಸಲು ಇಚ್ಛಿಸುತ್ತಾಳೆ. ಅವಳು ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳಲು ಇಚ್ಛೆಸುತ್ತಾಳೆ. ಈ ಕಾರಣದಿಂದ ಅವಳಿಗೆ ಖಿನ್ನತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಅವಶ್ಯಕತೆ ಉಂಟಾಗದು. ಆಕೆ ಈಗ ಪುರುಷರಿಗಿಂತ ಕಮ್ಮಿ ಏನಲ್ಲ, ಹೀಗಾಗಿ ಬೇರೆಯವರು ತನ್ನ ಬಗ್ಗೆ ಏನು ಹೇಳಬಹುದು ಎಂದು ಚಿಂತಿಸಬೇಕಾದ ಅಗತ್ಯ ಇಲ್ಲ.
ಆಕೆ ಯಾವ ಪುರುಷನ ಜೊತೆ ವಾಸಿಸಲು ಇಚ್ಛಿಸುತ್ತಿದ್ದಾಳೊ, ಆ ಮನೆಯೊಳಗೆ ತನ್ನದೇ ಆದ ಪುಟ್ಟ ಮನೆಯನ್ನು ಮಾಡುವುದು ತಪ್ಪಲ್ಲ, ಅದು ಆಕೆಯ ಹಕ್ಕು ಕೂಡ.
ಮನೆಯ ಹಿರಿಯರಿಗೆ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ. ಅವರು ತಮ್ಮ ಕನಸಿನ ಮನೆಯ ನಿರ್ಮಾಣ ಮಾಡಿದ್ದಾರೆ. ಆ ಮನೆಯಲ್ಲಿ ಅವರಿಗೆ ಸೊಸೆಯ ಆಗಮನ ಆಕ್ರಮಣ ಅಥವಾ ಹಸ್ತಕ್ಷೇಪ ಅನಿಸಬಹುದು. ಅಂತಹ ಮನೆಯಲ್ಲಿ ಸೊಸೆ ತನ್ನದೇ ಆದ ರೀತಿಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.
ಅತ್ತೆಮನೆಯವರು ಫ್ಲೆಕ್ಸಿಬಲ್ ರೀತಿಯ ಧೋರಣೆ ಅನುಸರಿಸಬೇಕು. ಬರಲಿರುವ ಸೊಸೆ ಈ ಮನೆಯನ್ನು ತನ್ನದೇ ಮನೆ ಎಂಬಂತೆ ಭಾವಿಸಬೇಕು.
ಸೊಸೆಯಾದವಳು ತನ್ನ ಅತ್ತೆ ಮಾವನ ಜೊತೆಗೇ ಇರಬೇಕೆಂಬ ಕಡ್ಡಾಯವೇನಿಲ್ಲ. ಅವಳು ಅದೇ ಮನೆಯಲ್ಲಿ ತನ್ನದೇ ಆದ ರೀತಿಯಲ್ಲಿ ವಾಸಿಸುವ ಸ್ವಾತಂತ್ರ್ಯ ಹೊಂದಿದ್ದಾಳೆ. ಜೊತೆ ಜೊತೆಗೇ ಇರಲು ತೊಂದರೆಯಾಗುತ್ತಿದ್ದರೆ, ಇಬ್ಬರಲ್ಲೂ ಪರಸ್ಪರ ವೈಚಾರಿಕ ಮತಭೇದವಿದ್ದರೆ ಬೇರೆ ಬೇರೆ ಮನೆಗಳಲ್ಲಿ ವಾಸಿಸುವುದೇ ಸೂಕ್ತ. ಏಕೆಂದರೆ ಇಬ್ಬರ ನಡುವಿನ ಸಂಬಂಧ ಮಧುರವಾಗಿರಬೇಕು.
ನಿಮ್ಮ ಜೀವನಶೈಲಿ ಅಥವಾ ದಿನಚರಿಯ ಬಗ್ಗೆ ಅತ್ತೆಮಾವಂದಿರಿಗೆ ದೂರು ಇದ್ದರೆ, ಅವರಿಗೆ ಬೇಸರ ಉಂಟಾಗುತ್ತಿದ್ದಲ್ಲಿ ನೀವು ಅವರ ಜೊತೆಗೆ ವಾಸಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಉದಾಹರಣೆಗಾಗಿ ನೀವು ಸ್ನಾನ ಮಾಡಿಯೇ ಅಡುಗೆಮನೆ ಪ್ರವೇಶಿಸಬೇಕೆಂದು ಅತ್ತೆ ಮಾವ ಇಚ್ಛಿಸುತ್ತಾರೆ. ಆದರೆ ಅದು ನಿಮಗೆ ಇಷ್ಟ ಇಲ್ಲ. ಇಂತಹ ಸ್ಥಿತಿಯಲ್ಲಿ ನೀವು ಅವರನ್ನು ದುಃಖಿತರನ್ನಾಗಿಸಬೇಡಿ, ನೀವು ದುಃಖಿತರಾಗಬೇಡಿ. ಅವರ ಜೀವನದಲ್ಲಿ ಅನವಶ್ಯಕವಾಗಿ ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸಬೇಡಿ. ನಿಮ್ಮದೇ ಆದ ಮನೆಯೊಂದನ್ನು ಮಾಡಿಕೊಳ್ಳುವುದರ ಮೂಲಕ ನೆಮ್ಮದಿಯಿಂದಿರಿ. ಆದರೆ ನಿಮ್ಮ ಜವಾಬ್ದಾರಿಗಳಿಂದ ಎಂದೂ ನುಣುಚಿಕೊಳ್ಳಲು ಪ್ರಯತ್ನಿಸಬೇಡಿ. ಅವಶ್ಯಕತೆ ಉಂಟಾದಾಗ ಯಾವುದೇ ಸಂಕೋಚವಿಲ್ಲದೆ ಅವರ ಸಹಾಯಕ್ಕೆ ಮುಂದಾಗಿ, ಅವರಿಗೆ ಸಂಪೂರ್ಣ ಗೌರವ ಕೊಡಿ.
ಬೆಂಗಳೂರಿನಲ್ಲಿ ಒಂದು ಆರೋಗ್ಯಕರ ಉತ್ತಮ ಉದಾಹರಣೆಯೊಂದು ನೋಡಲು ಸಿಕ್ಕಿತು. ಅಲ್ಲಿ ತಂದೆ ತಾಯಿ ಮತ್ತು ಮಗ ಸೊಸೆ ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಾರೆ. ಮಕ್ಕಳು ಶಾಲೆಯಿಂದ ವಾಪಸ್ಸಾಗುತ್ತಿದ್ದಂತೆ ಅಜ್ಜಿ ತಾತನ ಜೊತೆ ಕುಳಿತು ತಿಂಡಿ ತಿನ್ನುತ್ತಾರೆ. ಬಳಿಕ ಅಲ್ಲಿಯೇ ಆಟ ಆಡುತ್ತಾರೆ. ರಾತ್ರಿಯ ಊಟವನ್ನು ಎಲ್ಲರೂ ಸೇರಿ ಮಗನ ಮನೆಯಲ್ಲಿ ಮಾಡುತ್ತಾರೆ. ಬಳಿಕ ತಮ್ಮ ತಮ್ಮ ಮನೆಗಳಲ್ಲಿ ಮಲಗುತ್ತಾರೆ.
ಇದೆಲ್ಲದಕ್ಕೂ ಆರೋಗ್ಯಕರ ಮನಸ್ಥಿತಿ ಅಗತ್ಯ. ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ಬದಲಿಸಿಕೊಳ್ಳಬೇಕು. ಇಂದಿನ ಸುಶಿಕ್ಷಿತ ಕಾರ್ಯವ್ಯಾಪ್ತಿ ಹೆಚ್ಚುತ್ತ ಹೊರಟಿದೆ. ಅವರು ಅದೆಷ್ಟೋ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರು ಮನೆಗೆ ಬಂದ ತಕ್ಷಣ ನೆಮ್ಮದಿಯ ನಿಟ್ಟುಸಿರು ಬಿಡಲು ಯೋಚಿಸುತ್ತಾರೆ. ಅತ್ತೆ ಮಾವನ ಯೋಚನೆಗನುಸಾರ ನಡೆಯಲು ಅವರಿಗೆ ಸಾಧ್ಯವಿಲ್ಲ.
ಬದಲಾಗುತ್ತಿರುವ ಪರಿಸ್ಥಿತಿ
ಈಗ ಸೊಸೆ ಸುಶಿಕ್ಷಿತೆಯಾಗಿದ್ದಾಳೆ. ಅತ್ತೆ ಮಾವ ಕೂಡ ಓದುಬಲ್ಲವರಾಗಿದ್ದಾರೆ. ಬದಲಾಗುತ್ತಿರುವ ಪರಿಸ್ಥಿತಿಯ ಅರಿವು ಅವರಿಗಿದೆ. ಹೀಗಾಗಿ ಮೊದಲಿನಂತೆ ದೂರುಗಳು ಕೇಳಿಬರುವುದಿಲ್ಲ. ಹೀಗಾಗಿ ಪರಸ್ಪರರ ಖಾಸಗಿತನದ ಬಗ್ಗೆ ಗೌರವ ಮತ್ತು ಪರಸ್ಪರರ ಸಂಬಂಧದಲ್ಲಿ ಮಾಧುರ್ಯ ಕಂಡುಬರುತ್ತದೆ.
ಹುಡುಗಿಯೊಬ್ಬಳು ಮದುವೆಯಾಗಿ ಬಂದನಂತರ ಕೇವಲ ಅವಳೊಬ್ಬಳೇ ಬದಲಾಗುವುದಿಲ್ಲ. ಅವಳು ಅತ್ತೆ ಮನೆಯ ರೀತಿನೀತಿಗಳನ್ನು ಕಲಿತುಕೊಳ್ಳುತ್ತಾಳೆ. ಅದರ ಜೊತೆಗೆ ತನ್ನೊಂದಿಗೆ ತಂದ ಸಂಸ್ಕಾರಗಳನ್ನು ಮನೆಯಲ್ಲಿ ಪಸರಿಸುತ್ತಾಳೆ. ಗಂಡನೊಂದಿಗೆ ಗೃಹಸ್ಥ ಜೀವನದಲ್ಲಿ ಕಾಲಿರಿಸುವುದರ ಮೂಲಕ ಅಲ್ಲಿ ಎರಡು ಕುಟುಂಬಗಳ ಸಂಸ್ಕಾರಗಳ ಸಮ್ಮಿಲನವಾಗುತ್ತದೆ. ಆ ಕುಟುಂಬದಲ್ಲಿ ಸೊಸೆಯ ಯೋಚನೆಗೂ ಮಹತ್ವ ಬರುತ್ತದೆ.
`ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂಬ ಮಾತು ಹಳೆಯದಾಯಿತು. ಇಂದಿನ ಆಧುನಿಕ ಯುಗಕ್ಕೆ ಇದನ್ನು ಅಕ್ಷರಶಃ ಅನ್ವಯಿಸುವಂತಿಲ್ಲ. ಹೆಣ್ಣನ್ನು ಒಂದು ವಸ್ತು ಅಥವಾ ಸಂಪತ್ತು ಎಂದುಕೊಳ್ಳುವ ಹಾಗಿಲ್ಲ. ಇಂದಿನ ದಿನಗಳಲ್ಲಿ ಅತ್ತೆಮನೆಯವರು ಸಹ ಮನೆಗೆ ಬಂದ ಸೊಸೆ ಮೇಲೆ ಹಿಂದಿನ ಕಾಲದಂತೆ ದರ್ಪ, ಅಧಿಕಾರ ಚಲಾಯಿಸಲಾಗದು ಎಂಬುದನ್ನು ಅರಿತಿದ್ದಾರೆ. ಸ್ವಾವಲಂಬಿ, ಉದ್ಯೋಗಸ್ಥೆ, ಆಧುನಿಕಳಾದ ಸೊಸೆ ಮೇಲೆ ಶಾಸನಬದ್ಧ ಅಧಿಕಾರ ನಡೆಸುವುದು ಸುಲಭವಲ್ಲ. ಈ ಅಂಶವನ್ನು ನೆನಪಿನಲ್ಲಿಟ್ಟುಕೊಂಡು ಹಿಂದೆಲ್ಲ ಸೊಸೆ ಎಂದರೆ `ಸರ್ವಗುಣ ಸಂಪನ್ನೆ’ ಎಂಬಂಥ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ನಡೆಸಬೇಕು, ಆಗ ಸೊಸೆಯೂ ಹಿರಿಯರನ್ನು ಆದರಿಸುತ್ತಾಳೆ.
ಹೀಗಾಗಿ ಅತ್ತೆಮನೆಯವರು ಮಗಳು ಸೊಸೆ ಎಂಬ ಭೇದ ತೋರದೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಇಬ್ಬರನ್ನೂ ಸಮಾನವಾಗಿ ಆದರಿಸಿದಾಗ ಮಾತ್ರ ಮನೆ ಮನೆಯಾಗಿ ಉಳಿಯುತ್ತದೆ. ಇಂದು ಹೆಚ್ಚಿನ ಆಧುನಿಕ ಕುಟುಂಬಗಳಲ್ಲಿ ಸೊಸೆಯ ಕೆರಿಯರ್‌ಗೆ ಸೂಕ್ತ ಅವಕಾಶ ಕಲ್ಪಿಸಿಕೊಟ್ಟು ಅವಳು ತನ್ನದೇ ಭವಿಷ್ಯ ರೂಪಿಸಿಕೊಳ್ಳಲು ಸಹಕರಿಸುತ್ತಿದ್ದಾರೆ.
ನಮ್ಮ ಸಮಾಜದಲ್ಲಿ ಈಗೀಗ ಜನರ ವಿಚಾರಧಾರೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದೊಂದು ಉತ್ತಮ ಸಂಕೇತವೆಂದೇ ಹೇಳಬೇಕು. ವಿದ್ಯವಂತರಾದ ನಾವೆಲ್ಲರೂ ಇದನ್ನು ತೆರೆದ ಮನದಿಂದ ಸ್ವಾಗತಿಸಿ ಒಪ್ಪಿಕೊಳ್ಳಬೇಕು. ಇಂದಿನ ಕಾಲದ ಬೇಡಿಕೆಯೂ ಇದೇ ಆಗಿದೆ.
– ಪದ್ಮಾ ಕುಲಕರ್ಣಿ