ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರ ಅಂತಹ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲೆಂದು ಮಂಗಳೂರಿನ ಪ್ರಮೀಳಾ ರಾವ್ ನೇತೃತ್ವದ `ಕಲ್ಪ ಟ್ರಸ್ಟ್’ ಪ್ರಯತ್ನಶೀಲವಾಗಿದೆ.

ಪ್ರಮೀಳಾ ರಾವ್ ‌ತಮ್ಮದೇ ಆದ ಪುಟ್ಟ ಘಟಕದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿ ಸ್ಲಮ್ ಗಳಲ್ಲಿ, ಕಾಲೋನಿಗಳಲ್ಲಿ, ವಸತಿ ನಿಲಯಗಳಲ್ಲಿ ವಾಸಿಸುವ ಹುಡುಗಿಯರಿಗೆ, ಮಹಿಳೆಯರಿಗೆ ವಿತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಒಂದರ್ಥದಲ್ಲಿ ಅವರು `ಕರ್ನಾಟಕದ ಪ್ಯಾಡ್‌ ವುಮನ್‌’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಮೀಳಾ ರಾವ್ ಮಂಗಳೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕಿ. ಪ್ರತಿ ತಿಂಗಳೂ ಪ್ಯಾಡ್‌ ತಯಾರಿಕಾ ಚಟುವಟಿಕೆಗಾಗಿ ತಮ್ಮ ಸಂಬಳದ ಬಹುಪಾಲು ಮೊತ್ತ ಅಂದರೆ 25-30 ಸಾವಿರ ರೂ. ಮೊತ್ತವನ್ನು ವಿನಿಯೋಗಿಸುತ್ತ ಮಹಿಳೆಯರ ನೋವಿನ ದಿನಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

ಕಲ್ಪ ಟ್ರಸ್ಟ್ ಉದಯ

ಪ್ರಮೀಳಾ ರಾವ್‌ರ ಪತಿ ಹರ್ಷ ಪತ್ರಿಕೋದ್ಯಮಿ. ಅವರು ಗುಡ್ಡಗಾಡು ಜನರು, ಗ್ರಾಮೀಣ ಜನರ ಬದುಕಿನ ಬಗ್ಗೆ ಸಚಿತ್ರ ಲೇಖನಗಳನ್ನು ಬರೆದು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಾರೆ. ಪ್ರಮೀಳಾ ರಾವ್ ಪತಿಯ ಪತ್ರಿಕೋದ್ಯಮ ಚಟುವಟಿಕೆಗೆ ಸ್ಪಂದಿಸುತ್ತ ವರದಿಯ ನಂತರದ ಬೆಳವಣಿಗೆಗಳ ಬಗ್ಗೆ `ಕಲ್ಪ ಟ್ರಸ್ಟ್’ ಮೂಲಕ ಸಮೀಕ್ಷೆ ನಡೆಸುತ್ತಿದ್ದರು. ಕಾಲೇಜು ಉಪನ್ಯಾಸಕಿಯಾದುದರಿಂದ ಅವರ ವಿದ್ಯಾರ್ಥಿ ಸಮೂಹವೇ ಅವರ ಸಮೀಕ್ಷೆಯ ಸಮಸ್ತ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿತ್ತು. `ಶಿಕ್ಷಣ, ಆರೋಗ್ಯ ಹಾಗೂ ಅಧ್ಯಯನ’ ಇವೇ ಕಲ್ಪ ಟ್ರಸ್ಟ್ ನ ಮೂಲತತ್ವವಾಗಿದ್ದವು.

ಹಳೆಯ ಬಟ್ಟೆ ಬ್ಯಾಂಕ್

ಸ್ಲಮ್, ಕಾಲೋನಿ, ಕುಗ್ರಾಮಗಳಲ್ಲಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು, ಮಕ್ಕಳು ಬಟ್ಟೆಗಳಿಗೆ ಪರದಾಡುವುದನ್ನು ಕಾರ್ಯಕರ್ತರು ಕಂಡುಕೊಂಡರು. ಅವರಿಗಾಗಿ ನಾವು ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ, ವಿತರಿಸುವ ಕೆಲಸವನ್ನೇಕೆ ಮಾಡಬಾರದು ಎಂದು ಕಾರ್ಯಕರ್ತರು ಪ್ರಮೀಳಾ ರಾವ್‌ರ ಮುಂದೆ ಹೇಳಿದರು. ಕಾರ್ಯಕರ್ತರ ಈ ವಿಚಾರ ಅವರಿಗೆ ಬಹಳ ಒಳ್ಳೆಯದೆನಿಸಿತು. ಅದರ ಫಲಶ್ರುತಿ ಎಂಬಂತೆ `ಓಲ್ಡ್ ಕ್ಲಾಥ್‌ ಬ್ಯಾಂಕ್‌’ ಅನುಷ್ಠಾನಕ್ಕೆ ಬಂತು. ಸಂಗ್ರಹವಾದ ಹಳೆಯ ಬಟ್ಟೆಗಳನ್ನು ಶುಭ್ರಗೊಳಿಸಿ, ವರ್ಗೀಕರಣ ಮಾಡಿ ಕೊಳಚೆ ಪ್ರದೇಶ. ಕಾಲೋನಿ, ಅನಾಥಾಶ್ರಮದ ಮಹಿಳೆಯರು ಮಕ್ಕಳಿಗೆ ವಿತರಿಸುವ ಕೆಲಸ ಶುರು ಮಾಡಿದರು. ಬಟ್ಟೆ ವಿತರಣೆಯ ಜೊತೆಗೆ ಸಮೀಕ್ಷೆ, ಜಾಗೃತಿಯ ಕೆಲಸ ಮುಂದುವರಿದಿತ್ತು. ಸ್ಲಮ್, ಗ್ರಾಮೀಣ ಭಾಗಗಳಲ್ಲಿ ಹುಡುಗಿಯರು, ಮಹಿಳೆಯರು ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು, ಅನೇಕ ಸೋಂಕುಗಳಿಗೆ ತುತ್ತಾಗುತ್ತಿರುವ ಆಘಾತಕಾರಿ ಸಂಗತಿ ಕಾರ್ಯಕರ್ತರ ಮುಖಾಂತರ ಪ್ರಮೀಳಾ ರಾವ್‌ರ ಕಿವಿಗೂ ತಲುಪಿತು. ಅಂತಹ ಮಹಿಳೆಯರಿಗೆ ಆ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡಬೇಕು ಎಂಬ ಕಲ್ಪನೆ ಮೊಳಕೆಯೊಡೆಯಿತು. ಆಗ ಅವರ ನೆನಪಿಗೆ ಬಂದದ್ದು ದೆಹಲಿಯ `ಗೂಂಜ್‌’ ಸಂಸ್ಥೆ.

ಹುಡುಗರಿಗೆ ಪ್ಯಾಡ್‌ ತಯಾರಿಕೆಯ ತರಬೇತಿ!

ಹಳೆಯ ಬಟ್ಟೆಗಳಿಂದ ಹತ್ತಿಯ ಮೃದು ಬಟ್ಟೆಗಳನ್ನು ಬೇರ್ಪಡಿಸಿಕೊಂಡು, ಬೇರೆ ಬೇರೆ ಪ್ರಕ್ರಿಯೆಗೊಳಪಡಿಸಿ ಸ್ಯಾನಿಟರಿ ಪ್ಯಾಡ್‌

ಗಳನ್ನು ತಯಾರಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಚಟುವಟಿಕೆಯಲ್ಲಿ ಗೂಂಜ್‌ ಸಂಸ್ಥೆ ನಿರತವಾಗಿದೆ. ಅದರ ಸಂಸ್ಥಾಪಕಿ ಅಂಶು ಗುಪ್ತಾರ ಸಾಧನೆಗೆ ಮ್ಯಾಗ್ಸೆಸೆ ಪ್ರಶಸ್ತಿ ಕೂಡ ಬಂದಿದೆ. ಆ ಸಂಸ್ಥೆಯ ಬಗ್ಗೆ ಪ್ರಮೀಳಾ ರಾವ್ ‌ಗೂಗಲ್‌ನಲ್ಲಿ ಗಮನಿಸಿ, ಅವರನ್ನು ಸಂಪರ್ಕಿಸಿ ತಮ್ಮ ವಿಚಾರನ್ನು ತಿಳಿಸಿದರು. “ನಿಮ್ಮ ಜೊತೆ ಒಂದಿಷ್ಟು ಹುಡುಗಿಯರನ್ನು ಕರೆದುಕೊಂಡು ಬನ್ನಿ. ಅವರಿಗೆ ತರಬೇತಿ ಕೊಡ್ತೀವಿ,” ಎಂದು ಹೇಳಿದರು.

ಪ್ರಮೀಳಾ ರಾವ್ ತಮ್ಮೊಂದಿಗೆ 21 ಜನ ಹುಡುಗರನ್ನು ಕರೆದುಕೊಂಡು ಹೋದರು. `ಇದೇ ಪ್ರಥಮ ಬಾರಿಗೆ ನೀವೊಬ್ಬರೇ ಸ್ಯಾನಿಟರಿ ಪ್ಯಾಡ್‌ ತಯಾರಿಕೆಯ ಬಗ್ಗೆ ತರಬೇತಿ ಪಡೆದು ಕೊಳ್ಳಲು ಹುಡುಗರನ್ನು ಕರೆದುಕೊಂಡು ಬಂದದ್ದು,’ ಎಂದು ಅಂಶು ಗುಪ್ತಾ ಹುಬ್ಬೇರಿಸಿದರು. ಅದು 10 ದಿನದ ತರಬೇತಿಯಾಗಿತ್ತು. ಆ ಅವಧಿಯಲ್ಲಿ ಹುಡುಗರು ಪ್ಯಾಡ್‌ ತಯಾರಿಸುವ ಸಂಪೂರ್ಣ ಪ್ರಕ್ರಿಯೆಗಳನ್ನು ತಿಳಿದುಕೊಂಡರು.

`ಸ್ವಾಸ್ಥ್ಯ’ ಬಂತು ನೆಮ್ಮದಿ ತಂತು!

ದೆಹಲಿಯಲ್ಲಿ ತರಬೇತಿ ಪಡೆದುಕೊಂಡು ಬಂದ ಬಳಿಕ ಪ್ರಮೀಳಾ ರಾವ್ ‌ಸ್ಯಾನಿಟರಿ ಪ್ಯಾಡ್‌ ತಯಾರಿಕೆಯ ಪ್ರಾಥಮಿಕ ಹಂತದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡರು. ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ದಿನ ಒಂದಿಷ್ಟು ಜನರ ಶ್ರದ್ಧೆ ನಿಷ್ಠೆಯ ಸೇವೆಯಿಂದ ಮಾತ್ರ ಪ್ಯಾಡ್‌ಗಳು ತಯಾರಾಗುತ್ತವೆ ಎಂಬ ಸತ್ಯ ಅವರಿಗೂ ಗೊತ್ತಿತ್ತು. ವಿದ್ಯಾರ್ಥಿ ವೃಂದ ಅವರ ಜೊತೆಗಿತ್ತು. ಹೀಗಾಗಿ ಅವರಿಗೆ ಈ ಕೆಲಸ ಕ್ಲಿಷ್ಟಕರ ಅನಿಸಲಿಲ್ಲ. ವಿದ್ಯಾರ್ಥಿಗಳ ತಾಯಂದಿರು ಕೂಡ ತಮ್ಮ ಮಕ್ಕಳು ಮಾಡುತ್ತಿದ್ದ ಈ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು. ಅಷ್ಟೇ ಅಲ್ಲ, ಪ್ಯಾಡ್‌ ತಯಾರಿಕೆ ಸಮಯದಲ್ಲಿ ಊಟತಿಂಡಿಯ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಪೋಷಕರೇ ಒದಗಿಸುತ್ತಿದ್ದರು. ಹೀಗಾಗಿ ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಪ್ಯಾಡ್‌ಗಳು ತಯಾರಾದವು.

`ಓಲ್ಡ್ ಕಾಥ್‌ ಬ್ಯಾಂಕ್‌’ಗೆ ಬಂದ ಹಳೆಯ ಬಟ್ಟೆಗಳಲ್ಲಿರುವ ಹತ್ತಿಯ ಮೃದು ಬಟ್ಟೆಗಳನ್ನು ಆಯ್ದು, ಅವನ್ನು ಕತ್ತರಿಸಿ, ಶುಭ್ರಗೊಳಿಸಿ ಪ್ಯಾಡ್‌ ತಯಾರಿಕೆ ಪ್ರಕ್ರಿಯೆಗೆ ಬಳಸಿಕೊಂಡರು. ಅದಕ್ಕೆ `ಸ್ವಾಸ್ಥ್ಯ’ ಎಂದು ನಾಮಕರಣ ಮಾಡಿದರು. `ಕಂಫರ್ಟ್‌ ಈಸ್ ಹ್ಯಾಪಿನೆಸ್‌’ ಎಂಬ ಟ್ಯಾಗ್‌ ಲೈನ್‌ ಕೊಟ್ಟರು.`ಸ್ವಾಸ್ಥ್ಯ’ ಸ್ಯಾನಿಟರಿ ಪ್ಯಾಡ್‌ಗಳನ್ನು ಸ್ಲಂ, ಕಾಲೋನಿ, ಹಾಸ್ಟೆಲ್‌‌ಗಳಲ್ಲಿ ವಾಸಿಸುವ ಹುಡುಗಿಯರಿಗೆ, ಮಹಿಳೆಯರಿಗೆ ವಿತರಿಸಿದರು. ಪ್ರಮೀಳಾ ರಾವ್ ‌ಪ್ಯಾಡ್‌ಗಳನ್ನಷ್ಟೇ ವಿತರಿಸಲಿಲ್ಲ, ಸ್ತ್ರೀ ರೋಗ ತಜ್ಞರಿಂದ ಮಹಿಳೆಯರಿಗೆ ನೈರ್ಮಲ್ಯ ಕಾಪಾಡದಿದ್ದರೆ ಏನೇನು ಅನಾಹುತಗಳಾಗುತ್ತವೆ ಎಂಬ ತಿಳಿವಳಿಕೆ ಕೊಟ್ಟು, ಹುಡುಗ ಹುಡುಗಿಯರಿಂದ ಬೀದಿ ನಾಟಕ ಮಾಡಿಸಿ ಅರಿವು ಮೂಡಿಸಿದರು. ಈ ರೀತಿಯಾಗಿ ಮಹಿಳೆ ಮತ್ತು ಯುವತಿಯರು ನೈರ್ಮಲ್ಯದ ಬಗ್ಗೆ ಗಮನಹರಿಸುವಂತಾಯಿತು.

ಪ್ಯಾಡ್‌ ಮ್ಯಾನ್‌ ಸಿನಿಮಾದ ನಂತರ ಪ್ಯಾಡ್‌ ತಯಾರಿಕೆ ಹಾಗೂ ವಿತರಣೆ ಪ್ರಕ್ರಿಯೆಯಲ್ಲಿ 4 ವರ್ಷ ಕಳೆದರೂ ಮಾಧ್ಯಮಗಳು ಅವರ ಬಗ್ಗೆ ಗಮನಹರಿಸಿರಲಿಲ್ಲ. ಅಕ್ಷಯ್‌ ಕುಮಾರ್‌ ಅಭಿನಯದ  `ಪ್ಯಾಡ್‌ ಮ್ಯಾನ್‌’ ಎಂಬ ಸಿನಿಮಾ ತೆರೆಗೆ ಬಂದ ಬಳಿಕ ಮಂಗಳೂರಿನಲ್ಲೂ ಅಂತಹ ಮಹಿಳೆಯೊಬ್ಬರಿದ್ದಾರೆ ಎಂದು ಪ್ರಮೀಳಾ ರಾವ್‌ರ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ.

ಪ್ರಮೀಳಾ ರಾವ್ ಪ್ಯಾಡ್‌ ತಯಾರಿಕಾ ಪ್ರಕ್ರಿಯೆಯಲ್ಲಿ ಹುಡುಗಿಯರ ಜೊತೆ ಹುಡುಗರನ್ನೂ ತೊಡಗಿಸಿಕೊಂಡದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. `ಪ್ಯಾಡ್‌ ಮ್ಯಾನ್‌’ ಸಿನಿಮಾ ತೆರೆ ಕಂಡ ಬಳಿಕ ಜನ ತಮ್ಮ ಸಂಸ್ಥೆಯ ಬಗ್ಗೆ ಚರ್ಚಿಸುವಂತಾಯಿತು. ಅದಕ್ಕಾಗಿ ತಾವು ಸಿನಿಮಾದ ನಾಯಕ ಅಕ್ಷಯ್‌ ಕುಮಾರ್‌ಗೆ ಕೃತಜ್ಞರಾಗಿರುವುದಾಗಿ ಪ್ರಮೀಳಾ ರಾವ್ ಹೇಳುತ್ತಾರೆ.

ಮ್ಯಾಟ್‌, ಹಾಸಿಗೆ ತಯಾರಿ

ಕಲ್ಪ ಟ್ರಸ್ಟ್ ಸಂಗ್ರಹ ಮಾಡುವ ಹಳೆಯ ಬಟ್ಟೆಗಳಲ್ಲಿ ಒಂದೇ ಒಂದು ತುಂಡು ಬಟ್ಟೆಯನ್ನು ಕೂಡ ವ್ಯರ್ಥ ಮಾಡುವುದಿಲ್ಲ. ಪ್ಯಾಡ್‌ ತಯಾರಿಕೆಗೆ ಬಳಸಿ ಉಳಿದ ಬಟ್ಟೆಗಳ ತುಂಡುಗಳಿಂದ ಮ್ಯಾಟ್‌ ತಯಾರಿಸಿ ಅನಾಥಾಶ್ರಮಗಳಿಗೆ ಕೊಡುತ್ತಾರೆ. ಸೀರೆಗಳಿಂದ ಪುಟ್ಟ ಪುಟ್ಟ ಹಾಸಿಗೆ ತಯಾರಿಸಿ ಅನಾಥಾಶ್ರಮದ ಮಕ್ಕಳಿಗೆ ವಿತರಿಸುತ್ತಾರೆ.

ಫುಡ್‌ ಬ್ಯಾಂಕ್‌

ಪ್ರಮೀಳಾರ ಕಲ್ಪ ಟ್ರಸ್ಟ್ ಇತ್ತೀಚೆಗೆ ಫುಡ್‌ ಬ್ಯಾಂಕ್‌ ಕೂಡ ಆರಂಭಿಸಿದೆ. ಮದುವೆ, ಮುಂಜಿ, ನಾಮಕರಣ ಮುಂತಾದ ಸಮಾರಂಭಗಳಲ್ಲಿ ಮಿಕ್ಕುಳಿದ ಅಡುಗೆಯನ್ನು ಅನಾಥಾಶ್ರಮಗಳಿಗೆ ವಿತರಿಸುವ ವಿಶಿಷ್ಟ ಕಾರ್ಯದಲ್ಲಿ ತೊಡಗಿದೆ.

ಟ್ಯೂಶನ್‌ ಸೇವೆ

ಕಲ್ಪ ಟ್ರಸ್ಟ್ ಗೆ ಬರುವ ಕಾರ್ಯಕರ್ತರ ತಾಯಂದಿರು ತಮ್ಮನ್ನು ಸೇವಾ ಮನೋಭಾವದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾರ್ಯಕರ್ತರೊಬ್ಬರ ತಾಯಿ ಉಚಿತ ಟ್ಯೂಶನ್‌ ಹೇಳಿಕೊಡುವ ಮೂಲಕ ಬಡ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸುವ ಪ್ರಯತ್ನ ನಡೆಸಿದ್ದಾರೆ.

ಮುಂಬರುವ ದಿನಗಳಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳು, ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್‌ ಆರಂಭಿಸುವುದರ ಮೂಲಕ ಅವರನ್ನು ಉನ್ನತ ಹುದ್ದೆಗಳಿಗೆ ನೇಮಕ ಆಗುವಂತೆ ಮಾಡಲಾಗುವುದೆಂದು ಪ್ರಮೀಳಾ ರಾವ್ ‌ಹೇಳುತ್ತಾರೆ.

ಮಿಲಿಟರಿ ನೇಮಕಾತಿಗೆ ಪ್ರೇರಣೆ

ಪ್ರಮೀಳಾ ರಾವ್ ‌ಉಪನ್ಯಾಸಕಿ. ಸದಾ ವಿದ್ಯಾರ್ಥಿ ಸಮುದಾಯದ ಮಧ್ಯೆಯೇ ಇರುತ್ತಾರೆ. ವಿದ್ಯಾರ್ಥಿಗಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಮಿಲಿಟರಿ ಸೇವೆಗೆ ಸೇರಲು ಪ್ರೇರಣೆ ನೀಡಲಾಗುತ್ತದೆ. ಅವರ ಟ್ರಸ್ಟ್ ಮೂಲಕ ಈವರೆಗೆ ಮಿಲಿಟರಿ ಸೇವೆಗೆ ಸೇರಿದ ಯುವಕರ ಸಂಖ್ಯೆ ಹನ್ನೆರಡು.

ಪ್ರಶಸ್ತಿಗಳಿಂದ ದೂರ

ಕಲ್ಪ ಟ್ರಸ್ಟ್ ಮೂಲಕ ಕಳೆದ 12 ವರ್ಷಗಳಿಂದ ಸಮಾಜದಲ್ಲಿ ವಿಶಿಷ್ಟ ಗೌರವಕ್ಕೆ ಪಾತ್ರರಾಗಿರುವ ಪ್ರಮೀಳಾ ರಾವ್ ಪ್ರಚಾರದಿಂದ, ಪ್ರಶಸ್ತಿಗಳಿಂದ ಬಹುದೂರ ಇದ್ದಾರೆ. ಅವರು ಪ್ರಶಸ್ತಿಗಳಿಗೆ ಎಂದೂ ದುಂಬಾಲು ಬಿದ್ದವರಲ್ಲ, ಅರ್ಜಿ ಸಲ್ಲಿಸಲು ಹೋದವರಲ್ಲ. ಅವರು ಈವರೆಗೆ ಮಾಡಿದ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳು ಬರಬಹುದಾಗಿತ್ತು. ಆದರೆ ಈವರೆಗೆ ಅವರಿಗೆ ಯಾವುದೇ ಪ್ರಶಸ್ತಿಗಳು ಬಂದಿಲ್ಲ. “ಜನರಿಂದ ದೊರಕುವ ಪ್ರತಿಕ್ರಿಯೆ, ಅವರ ಖುಷಿಯೇ ನನಗೆ ದೊಡ್ಡ ಪ್ರಶಸ್ತಿಯಂತಿದೆ,” ಎಂದು ಪ್ರಮೀಳಾ ರಾವ್ ‌ಹೇಳುತ್ತಾರೆ.

ಕಾರ್ಯಕರ್ತರೇ ನನ್ನ ಮಕ್ಕಳು

ಪ್ರಮೀಳಾರಿಗೆ ಮಕ್ಕಳಿಲ್ಲ. ಆದರೆ ಟ್ರಸ್ಟ್ ನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳೇ ನನ್ನ ಮಕ್ಕಳಂತಿದ್ದಾರೆ ಎಂದು ಅವರು ಹೇಳುತ್ತಾರೆ.

ಹಕ್ಕು ಕರ್ತವ್ಯ

ಶಾಲಾ ಕಾಲೇಜು, ಸಂಘಸಂಸ್ಥೆಗಳಲ್ಲಿ ವಿದ್ಯಾರ್ಥಿನಿ, ಮಹಿಳೆಯರನ್ನು ಉದ್ದೇಶಿಸಿ, “ನಾವು ಹಕ್ಕಿನ ಬಗೆಗಷ್ಟೇ ಮಾತನಾಡಬಾರದು. ಅದರೊಂದಿಗಿರುವ ಕರ್ತವ್ಯ ಪಾಲನೆಯ ಬಗೆಗೂ ಗಮನ ಕೊಡಬೇಕು. ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಕಲಿತುಕೊಳ್ಳಬೇಕು. ಅವಕಾಶಗಳು ದೊರೆತಾಗ ಅವನ್ನು ತಿರಸ್ಕರಿಸಬಾರದು,” ಎಂದು ಪ್ರಮೀಳಾ ರಾವ್ ಹೇಳುತ್ತಾರೆ.

“ಸಂಬಂಧಗಳು ಮಲಿನ ಆಗದ ಹಾಗೆ ನಾವು ಗಮನಹರಿಸಬೇಕು. ಕುಟುಂಬದ  ವಾತಾವರಣ ಚೆನ್ನಾಗಿದ್ದರೆ ಮಾತ್ರ ನಮಗೆ ಸಮಾಜ ಹಿತಕರವಾಗಿ ಗೋಚರಿಸುತ್ತದೆ. ಕುಟುಂಬದ ಕೊಂಡಿಯನ್ನು ಭದ್ರಪಡಿಸುವ ಕೆಲಸ ಮಾಡುವವರು ಹೆಣ್ಣುಮಕ್ಕಳು . ಆ ಕೆಲಸ ಇನ್ನಷ್ಟು ಅಚ್ಚುಕಟ್ಟಾಗಿ ಆಗಬೇಕು,” ಎಂದು ಅವರು ಸಂಬಂಧಗಳ ಬಗೆಗೆ ಮಾರ್ಮಿಕವಾಗಿ ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ