ಗಂಗಪ್ಪ 6 ತಿಂಗಳಿನಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಬಹಳ ನರಳಾಡಿದ. ಅಂತ್ಯಕಾಲ ಬಂತೆಂದು ಡಾಕ್ಟರ್ ಹೇಳಲು ಮಡದಿ, ಮೂವರು ಮಕ್ಕಳನ್ನೂ ಬಳಿಗೆ ಕರೆಸಿಕೊಂಡು ಕ್ಷೀಣ ದನಿಯಲ್ಲಿ ಹೇಳತೊಡಗಿದ.
ಗಂಗಪ್ಪ : ನೋಡೋ ಸುರೇಶ, ನೀನು ನನ್ನ ಹಿರಿಯ ಮಗ ಅಂತ ಯಶಂತಪುರದ 40 ಮನೆಗಳನ್ನು ಕೊಡ್ತಾ ಇದೀನಿ.
ಸುರೇಶ : ಆಯ್ತಪ್ಪ… ನಾನು ನೋಡಿಕೊಳ್ತೀನಿ.
ಗಂಗಪ್ಪ : ಉಮೇಶ, ನೀನು ನನ್ನ ಎರಡನೇ ಮಗ ಅಂತ ಪೀಣ್ಯ ಕಡೆಯ 30 ಮನೆಗಳನ್ನು ಕೊಡ್ತಾ ಇದೀನಿ.
ಉಮೇಶ್: ಆಯ್ತಪ್ಪ… ನಾನು ನೋಡಿಕೊಳ್ತೀನಿ.
ಗಂಗಪ್ಪ : ನೋಡಮ್ಮ ಭವಾನಿ, ನೀನು ನನ್ನ ಒಬ್ಬಳೇ ಮಗಳು. ದಾಸರಹಳ್ಳಿ ಕಡೆ ಇರೋ 20 ಮನೆಗಳನ್ನು ನಿನಗೆ ವಹಿಸಿಕೊಡ್ತೀನಿ.
ಭವಾನಿ : ಆಯ್ತಪ್ಪ, ನಿನ್ನ ಮಾತಿನಂತೆ ನಡೆದುಕೊಳ್ತೀನಿ.
ಗಂಗಪ್ಪ : ನೋಡೇ ರತ್ನಾ…. ನಿನಗೆ ಏನೂ ಕೊಡ್ಲಿಲ್ಲ ಅಂದ್ಕೊಬೇಡ. ನನ್ನ ಹೆಂಡತಿಯಾದ ನಿನಗೆ ವಯಸ್ಸಾಗಿರೋದ್ರಿಂದ ನಮ್ಮ ಮನೆಯ ಹತ್ತಿರವೇ ಇರುವ 15 ಮನೆ ಕೊಡ್ತಿದ್ದೀನಿ. ಆಯ್ತು ತಾನೇ?
ರತ್ನಮ್ಮ : ಸರಿ ಬಿಡಿ.
ಗಂಗಪ್ಪನನ್ನು 6 ತಿಂಗಳಿನಿಂದ ಸುಧಾರಿಸುತ್ತಿದ್ದ ನರ್ಸ್ ನಳಿನಿ ಇವರೆಲ್ಲರ ಮಾತು ಕೇಳಿ, ಈ ಶ್ರೀಮಂತ ಗಂಗಪ್ಪ ತನಗೂ ಏನಾದರೂ ಕೊಡಬಹುದೆಂದು ಓಡಿಬಂದು ಅವನ ಮುಂದೆ ನಿಂತು ನಾಡಿಬಡಿತ ನೋಡುವವಳಂತೆ, ಆಸೆಯಿಂದ ಕಾದಳು.
ರತ್ನಮ್ಮ : ಏನವ್ವ ನೋಡ್ತಿದ್ದಿ…. ಸಾಯೋ ಕಾಲಕ್ಕೆ ನನ್ನ ಗಂಡ ಎಲ್ಲರಿಗೂ ಮನೆ ಕೊಟ್ಟ, ನಿನಗೇನೂ ಕೊಡಲಿಲ್ಲ ಅಂತಾನಾ? ನಾವು ಹಾಲು ಮಾರುವವರು. ಇಷ್ಟೆಲ್ಲ ಹಾಲಿನ ವರ್ತನೆ ಮನೆಗಳ ಜವಾಬ್ದಾರಿ ನಮಗೆ ಹಂಚಿದ್ದಷ್ಟೆ…. ನೀನು ನಿನ್ನ ಪಾಡಿಗೆ ಇಂಜೆಕ್ಷನ್ ಕೊಡವ್ವ….
ನರ್ಸ್ ನಳಿನಿ ಬಿಪಿ ಕಡಿಮೆ ಆಗಲು ಡಾಕ್ಟರ್ ಓಡಿ ಬಂದರು.
ಸ್ಟೈಲಾಗಿ ಸಿಂಗರಿಸಿಕೊಂಡು ಬಂದ ಮಾಡರ್ನ್ ಮಾಲಾ ಆಟೋಗಾಗಿ ಕಾಯತೊಡಗಿದಳು.
ಮಾಲಾ : ಏನ್ರಿ…. ರೈಲ್ವೆ ಸ್ಟೇಷನ್‌ಗೆ ಹೋಗಬೇಕು ಬಾಡಿಗೆ ಎಷ್ಟಾಗುತ್ತೆ?
ಡ್ರೈವರ್ : ಜಸ್ಟ್ 50/ ರೂ. ಅಷ್ಟೆ.
ಮಾಲಾ : ಏನ್ರಿ ಇದು… ಇಷ್ಟು ಹತ್ತಿರದಲ್ಲಿರೋ ಸ್ಟೇಷನ್‌ಗೆ ಹೋಗಲು 50/ ರೂ ಕೊಡ್ಬೇಕಾ…?
ಡ್ರೈವರ್ : ಹೌದು ಮೇಡಂ. ಸ್ಟೇಷನ್ ಹತ್ತಿರ ಎಲ್ಲಿ ಬಂತು… ಇಲ್ಲಿಂದ 2 ಕಿ.ಮೀ. ಆಗುತ್ತೆ!
ಮಾಲಾ : ಎದುರುಗಡೆ ಕಾಣ್ತಿದೆ… ಯಾಕ್ರಿ ಸುಳ್ಳು ಹೇಳ್ತೀರಿ…?
ಡ್ರೈವರ್ : ರೀ ಮೇಡಂ….. ಕೈ ಸ್ವಲ್ಪ ಹಿಂದಕ್ಕೆ ಎಳ್ಕೊಳ್ಳಿ… ಇಲ್ಲದಿದ್ದರೆ ರೈಲ್ವೆ ಬೋಗಿಗೇ ತಗುಲೀತು!
ಪತ್ನಿ : ನೋಡ್ರಿ, ಇವತ್ತು ರಾತ್ರಿ ಅಡುಗೆ ಮಾಡಕ್ಕಾಗಲ್ಲ. ಹೊರಗಡೆ ಡಿನ್ನರ್‌ಗೆ ಕರೆದುಕೊಂಡು ಹೋಗಿ.
ಪತಿ : ಸರಿ, ನಡಿ…. ನಾವು ಉಡುಪಿ ರೆಸ್ಟೋರೆಂಟ್‌ಗೆ ಹೋಗೋಣ.
ಪತ್ನಿ : ಸಾಧಾರಣ ಹೋಟೆಲ್‌ಗಳು ಇದ್ದದ್ದೇ…. ಇವತ್ತು ಲೀಲಾ ಪ್ಯಾಲೆಸ್‌ಗೆ ಕರೆದುಕೊಂಡು ಹೋಗಿ.
ಪತಿ : (ಉಗುಳು ನುಂಗುತ್ತಾ ಸುದೀರ್ಘ ಆಲೋಚನೆ ನಂತರ) ಹ್ಞೂಂ ಸರಿ, 7 ಗಂಟೆಗೆ ರೆಡಿ ಆಗಿರು.
ಅಂತೂ ಸಂಜೆ 7 ಗಂಟೆಗೆ ರೆಡಿಯಾಗಿ ದಂಪತಿಗಳು ಹಳೆ ಏರ್‌ಪೋರ್ಟ್ ರಸ್ತೆ ಹಾದಿಯಾಗಿ ಹೊರಟರು. ಪತಿಯ ಬಿಗುಮಾನ ಇನ್ನೂ ಕಡಿಮೆ ಆಗಿರಲಿಲ್ಲ.
ಪತಿ : ನಿನಗೊಂದು ವಿಷಯ ಗೊತ್ತೇ? ಒಂದು ಸಲ ಪಾನಿಪೂರಿ ತಿನ್ನುವ ಸ್ಪರ್ಧೆಯಲ್ಲಿ ನಾನು ನನ್ನ ತಂಗಿಯನ್ನು ಸೋಲಿಸಿಬಿಟ್ಟಿದ್ದೆ!
ಪತ್ನಿ : ಏ…. ಅದೇನೂ ಅಂಥ ಕಷ್ಟ ಅಲ್ಲ ಬಿಡಿ.
ಪತಿ : ಮತ್ತೆ….. ಏನಂದುಕೊಂಡೆ ನೀನು… ನನ್ನನ್ನು ಯಾರೂ ಅದರಲ್ಲಿ ಸೋಲಿಸೋಕ್ಕೆ ಆಗಲ್ಲ ಬಿಡು!
ಪತ್ನಿ : ಹಾಗಿದ್ದರೆ ಬೆಟ್ ಕಟ್ಟಿ… ನಾನು…. ನಿಮ್ಮನ್ನು ಸೋಲಿಸಿ ನಿಮಗಿಂತ ಜಾಸ್ತಿ ತಿಂದು ತೋರಿಸ್ತೀನಿ.
ಪತಿ : ಸರಿ, ಸೋತವರು ಗೆದ್ದವರಿಗೆ 100/ ರೂ. ಕೊಡಬೇಕು. ಪಾನಿಪೂರಿಗಂತೂ ನಾನೇ ಕೊಡ್ತೀನಿ.
ಪತ್ನಿ : ಹಾಗೆ ಬನ್ನಿ ದಾರಿಗೆ, ಇವತ್ತೇ ಬೇಕಾದ್ರೆ ಒಂದು ಕೈ ನೋಡಿಬಿಡೋಣ.
ಪತಿ : ನಿನ್ನ ಕೈಲಿ ಆಗೋಲ್ಲ ಬಿಡು…. ಸುಮ್ಮನೆ ಯಾಕೆ ವ್ಯರ್ಥ ಪ್ರಯತ್ನ?
ಪತ್ನಿ : ಅದೆಲ್ಲ ಗೊತ್ತಿಲ್ಲ. ಬೆಟ್ ಅಂದ್ಮಲೇ ಮುಗೀತು!
ಪತಿ : ನೀನಾಗಿ ನನ್ನ ಮುಂದೆ ಸೋತು ಆಮೇಲೆ ಬೇಜಾರು ಮಾಡಿಕೊಳ್ತೀಯ.
ಪತ್ನಿ : ನಡೀರಿ, ನೋಡೇಬಿಡೋಣ.
ದಾರಿ ಮಧ್ಯೆ ಒಂದು ಪಾನಿಪೂರಿ ಅಂಗಡಿ ಬಳಿ ನಿಲ್ಲಿಸಿ ಇಬ್ಬರೂ ನಿಧಾನಲಗಿ ಚಾಟ್ ಸವಿದರು. 5ನೇ ಪ್ಲೇಟ್ ಮುಗಿಸುವ ಹೊತ್ತಿಗೆ ಇಬ್ಬರಿಗೂ ಸುಸ್ತಾಯಿತು. ಪತಿ ಆಗಲ್ಲ ಎಂದು ಸುಮ್ಮನಾದ. ಪತ್ನಿಗೂ ಕಷ್ಟವಯ್ತು. ಬೆಟ್ ಗೆಲ್ಲಲೇಬೇಕು ಎಂದು ಬಲವಂತವಾಗಿ ಇನ್ನೊಂದು ಪ್ಲೇಟ್ ಕೊಂಡು ಅರ್ಧ ಮುಗಿಸಿ ಗೆದ್ದೆ ಎಂದಳು.
ಚಾಟ್ ಅಂಗಡಿಯವನಿಗೆ ಹಣ ತೆತ್ತು, ಪತ್ನಿಗೆ ಗರಿಗರಿ 100/ ರೂ. ನೀಡಿದ ಪತಿ ಸೋಲು ಒಪ್ಪಿಕೊಂಡ. ಮನೆಗೆ ಹೋಗುವಾಗ ಇಬ್ಬರಿಗೂ ಖುಷಿಯೋ ಖುಷಿ! ಬೆಟ್ ಗೆದ್ದ ಖುಷಿ ಪತ್ನಿಗಾದರೆ, 400/ರೂ. ಒಳಗೆ ಡಿನ್ನರ್ ಮುಗಿಸಿ, 2000/ ರೂ. ಉಳಿಸಿದ ಖುಷಿ ಪತಿಗಾಗಿತ್ತು.
ಪತ್ನಿ : ಇಲ್ಲಿ ಕೇಳಿ ಸ್ವಲ್ಪ… ಮೊನ್ನೆ ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಡೀಟೇಲ್ ಆಗಿ ಚೆಕ್‌ಅಪ್ ಮಾಡ್ಸಿದ್ದೀನಿ. ನನ್ನ ಆರೋಗ್ಯ ಸುಧಾರಿಸಬೇಕು ಅಂದ್ರೆ ಹವಾ ಬದಲಾವಣೆ ಅತ್ಯಗತ್ಯವಂತೆ. ನಮ್ಮ ದೇಶದ ಹವಾ ಬಿಲ್‌ಕುಲ್ ಒಪ್ಪಲ್ಲವಂತೆ. ನಾವು 2 ತಿಂಗಳ ಕಾಲ ಪ್ಯಾರಿಸ್, ಲಂಡನ್, ಅಮೆರಿಕಾ…. ಎಲ್ಲಿಗೆ ಹೋಗೋಣ ಅಂತೀರಾ….?
ಪತಿ : ತಕ್ಷಣ ಬೇರೆ ಡಾಕ್ಟರ್ ಬಳಿ ಹೋಗೋಣ.
ಪತಿ : ಕೆಲವು ದಿನಗಳಿಂದ ಯಾಕೋ ಬಹಳ ಡಲ್ ಆಗಿದ್ದೀಯಾ. ಒಮ್ಮೆ ಲೇಡಿ ಡಾಕ್ಟರ್ ಬಳಿ ಹೋಗಿ ತೋರಿಸಿಕೊಳ್ಳಬಾರದೇ….?
ಪತ್ನಿ : ಹೋಗಿ ಬಂದಿದ್ದೆ.
ಪತಿ : ಮತ್ತೆ…..? ಏನಂದ್ರು ಡಾಕ್ಟರ್?
ಪತ್ನಿ : ರಕ್ತದಲ್ಲಿ ಶಾಪಿಂಗ್‌ನ ಕೊರತೆ ಇದೆ ಅಂದ್ರು. ದಿನಕ್ಕೆ 2 ಸಲ ಮಾಲ್‌ಗೆ ಹೋಗಿ ಬರ್ತಿದ್ರೆ ಎಲ್ಲ ಸರಿಹೋಗುತ್ತೆ ಅಂತಾರೆ.
ಸೇಲ್ಸ್ ಮ್ಯಾನ್ : ಮೇಡಂ, ಹೊಸದಾಗಿ ಪೌಡರ್ ಬಂದಿದೆ. ತಗೊಂತೀರಾ?
ಮಹಿಳೆ : ಖಂಡಿತಾ ಬೇಡ! ಆ ಹಾಳು ಮೂಳು ಇವತ್ತು ಪೌಡರ್ ತಗೊಳ್ಳಿ ಅಂದವರು ನಾಳೆ ಬಂದು ಪರ್ಫ್ಯೂಮ್ ತಗೊಳ್ಳಿ ಅಂತೀರಾ!
ಸೋಮಣ್ಣ : ಯಾಕಪ್ಪ…. ಇತ್ತೀಚೆಗೆ ಕವಿತೆ ಬರೆಯೋದನ್ನೇ ಬಿಟ್ಟುಬಿಟ್ಟಿದ್ದೀಯಾ?
ರಾಮಣ್ಣ : ಇಲ್ಲಪ್ಪ…. ಯಾರಿಗಾಗಿ ಬರೆಯುತ್ತಿದ್ದೆನೋ ಅವಳಿಗೆ ಮದುವೆ ಆಗಿಹೋಯ್ತು.
ಸೋಮಣ್ಣ : ಹಾಗಿದ್ದರೆ ಇನ್ನೂ ಒಳ್ಳೆಯದೇ ಆಯ್ತು. ನಿನ್ನ ವಿರಹ ಹೆಚ್ಚಿದಂತೆ ವಿಷಾದ ಕವನಗಳು ಹೆಚ್ಚಾಗಿ ಮೂಡಿಬರಬೇಕಲ್ಲ….?
ರಾಮಣ್ಣ : ಬಡ್ಕೊಂಡ್ರು…! ಅವಳು ಮದುವೆ ಆಗಿದ್ದೇ ನನ್ನನ್ನು!
ಪತಿ : ಡಾರ್ಲಿಂಗ್, ನಿನ್ನ ಹೆಸರನ್ನು ಕೈ ಮೇಲೆ ಬರೆಯಲೋ ಹೃದಯದ ಮೇಲೋ….?
ಪತ್ನಿ : ಅಲ್ಲಿ ಇಲ್ಲಿ ಯಾಕೆ ಬರೆಯಬೇಕು? ನಿಜವಾಗಿಯೂ ನೀವು ನನ್ನ ಪ್ರೀತಿಸುವವರೇ ಆದರೆ, ನಿಮ್ಮ ಎಲ್ಲಾ ಆಸ್ತಿಗೂ ನಾನೇ ಹೊಣೆ ಎಂದು ಈಗಲೇ ವಿಲ್ ಬರೆಸಿಬಿಡಿ.
ನೀತಿ : ಹೆಂಡತಿ ಮುಂದೆ ಅತಿ ಸ್ಟೈಲ್ ಹೊಡೆಯಬಾರದು.
ವಾಸ್ತುಶಾಸ್ತ್ರಜ್ಞರು ಹೇಳಿದರು ಅಂತ ನಾನು ನಮ್ಮ ಹಾಲ್‌ಗೆ ಮೀನುಗಳಿರುವ ಹೊಸ ಅಕ್ವೇರಿಯಂ ತಂದಿಟ್ಟೆ.
ಓಹೋ…. ಅನಂತರ ಅದೃಷ್ಟ ಖುಲಾಯಿಸಿತೇ? ಎಲ್ಲಿ ಬಂತು? ಪಕ್ಕದ ಮನೆ ಬೆಕ್ಕುಗಳು ಬಂದು ನಮ್ಮ ಹಾಲ್‌ನಲ್ಲಿ ಹೊಂಚು ಹಾಕುತ್ತಿವೆ!