ಮುಂಜಾನೆ 8ರ ಸಮಯ. ಶಾಲಾ ಬಸ್ ಯಾವುದೇ ಕ್ಷಣದಲ್ಲಿ ಬರಬಹುದಾಗಿದೆ. ಮನೆಯ ವಾತಾವರಣ ಒಂದು ರೀತಿಯಲ್ಲಿ ಒತ್ತಡಮಯವಾಗಿದೆ. ಅಷ್ಟರಲ್ಲಿ ಮಗ ಒಳಗೆ ಬಂದು “ಅಪ್ಪ, ನನ್ನ ಸ್ಕೂಲ್ ಸಾಕ್ಸ್ ಸಿಗುತ್ತಿಲ್ಲ ಬೇಗ ಹುಡುಕಿ ಕೊಡಿ,” ಎನ್ನುತ್ತಾನೆ. ಅಪ್ಪ ಮಗಳಿಗೆ ತಿಂಡಿ ತಿನ್ನಿಸುತ್ತ ಮಗ ಹೇಳಿದ್ದನ್ನು ಕೇಳಿಸಿಕೊಳ್ಳತೊಡಗಿದ. ಆ ಬಳಿಕ ಅಪ್ಪ ಮಗನಿಗಾಗಿ ಲಂಚ್ ಬಾಕ್ಸ್ ರೆಡಿ ಮಾಡಿ, ಅವನನ್ನು ಶಾಲೆಗೆ ಕಳಿಸುತ್ತಾನೆ. ಅದಾದನಂತರ ಮಗಳಿಗೆ ಸ್ನಾನ ಮಾಡಿಸಿ ಮನೆ ಸ್ವಚ್ಛಗೊಳಿಸುವುದು ಅವನ ಕೆಲಸ.
ಇದು ಎಂತಹ ಮನೆಯೊಂದರ ಕಥೆಯೆಂದರೆ ಹೆಂಡತಿ ಉದ್ಯೋಗಸ್ಥೆ. ಗಂಡ ಮನೆಯನ್ನು ಸಂಭಾಳಿಸುತ್ತಿದ್ದಾನೆ!
ಹಳೆಯ ಕಂದಾಚಾರದ, ಹಿಂದುಳಿದ ಮಾನಸಿಕತೆಯುಳ್ಳ ಸಮಾಜದಲ್ಲಿ ಇಂತಹ ಆಧುನಿಕ ಮನೋಭಾವದ ಗಂಡಂದಿರು ಕೂಡ ಕಂಡುಬರುತ್ತಿದ್ದಾರೆ! ಅವರು ಅಡುಗೆ ಮಾಡುತ್ತಾರೆ, ಮಕ್ಕಳನ್ನು ಸಂಭಾಳಿಸುತ್ತಾರೆ, ಮನೆಯ ಸಕಲ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.
ಅವರು ಸಾಮಾನ್ಯ ಭಾರತೀಯ ಪುರುಷರ ಹಾಗೆ ಯೋಚಿಸುವುದಿಲ್ಲ. ಅವರು ಯಾವುದೇ ಹಿಂಜರಿಕೆ ಇಲ್ಲದೆ ಮಕ್ಕಳ ನ್ಯಾಪಿ ಬದಲಿಸುತ್ತಾರೆ, ಬೆಡ್ ರೂಮ್ ಸನ್ನದ್ದುಗೊಳಿಸುತ್ತಾರೆ. ಸಮಾಜದ ಈ ಪುರುಷ ವರ್ಗ ಹೆಂಡತಿಗೆ ಸಮಾನ ದರ್ಜೆ ನೀಡುತ್ತದೆ. ಅವಶ್ಯಕತೆ ಬಿದ್ದಾಗ ಮಕ್ಕಳ ಹಾಗೂ ಮನೆಯ ಯಾವುದೇ ಬಗೆಯ ಜವಾಬ್ದಾರಿ ನಿಭಾಯಿಸಲು ಟೊಂಕಕಟ್ಟಿ ನಿಲ್ಲುತ್ತಾರೆ.
ಅಂದಹಾಗೆ ಹಳೆಯ ವಿಚಾರಧಾರೆಯ ಭಾರತೀಯ ಸಮಾಜ ಈಗಲೂ ಇಂತಹ `ಹೌಸ್ ಹಸ್ಬೆಂಡ್’ಗಳನ್ನು `ಸೋತು ಹೋದ ಪುರುಷರು’ ಎಂದೇ ಹೇಳುತ್ತದೆ. ಮನೆಗೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸಂಪೂರ್ಣವಾಗಿ ಮಹಿಳೆಯರದ್ದೇ ಆಗಿರುತ್ತದೆ. ಪುರುಷರ ಕೆಲಸ ಏನಿದ್ದರೂ ಹೊರಗಿನ ಕೆಲಸ ಕಾರ್ಯಗಳು, ಹಣಕಾಸಿನ ಜವಾಬ್ದಾರಿ ನೋಡಿಕೊಳ್ಳುವುದಾಗಿರುತ್ತದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯ `ಕಾ ಅಂಡ್ ಕೀ’ (ಅವಳು ಮತ್ತು ಅವನು) ಎಂಬ ಸಿನಿಮಾ ಬಂದಿತ್ತು. ಈ ಚಿತ್ರದ ವಿಷಯ ಲಿಂಗ ಆಧಾರಿತ ಅಸಮಾನತೆಯ ಮೇಲೆ ಪ್ರಹಾರ ಮಾಡುವುದು ಹಾಗೂ ಗಂಡ ಹೆಂಡತಿಯ ಕೆಲಸ ಕಾರ್ಯ ಅದಲು ಬದಲು ಮಾಡಿಕೊಳ್ಳುವುದು. ಅದೇ ತರಹ ಕಾಶೀನಾಥ್ ನಾಯಕತ್ವದ `ನಾರಿ ಮುನಿದರೆ ಗಂಡು ಪರಾರಿ’ ಚಿತ್ರದಲ್ಲಿ ಗಂಡಸರೆಲ್ಲ ಹೆಂಗಸರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಶಿವಣ್ಣ `ಅಮ್ಮಾವ್ರ ಗಂಡ’ ಚಿತ್ರದಲ್ಲಿ ತಾಳಿ ಕಟ್ಟಿಕೊಂಡು ಗೃಹಿಣಿಯಂತೆ ಇರುತ್ತಾರೆ.
ಲಿಂಗ ಸಮಾನತೆಯ ಯುಗ
ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯುತ್ತಿದೆ. ಹುಡುಗರಿಗೆ ಸರಿಸಮಾನವೆಂಬಂತೆ ಹುಡುಗಿಯರು ಹೆಚ್ಚೆಚ್ಚು ಓದಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರಿಗೆ ತಮ್ಮದೇ ಆದ ಕನಸುಗಳಿವೆ, ಸಾಮರ್ಥ್ಯವಿದೆ. ತಮ್ಮ ಸಾಮರ್ಥ್ಯದ ಬಲದಿಂದ ಅವರು ಕೈತುಂಬ ಸಂಬಳ ಪಡೆಯುತ್ತಿದ್ದಾರೆ. ಇಂತಹದರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮಗುವಾದರೆ, ಮುಂಬರುವ ದಿನಗಳ ಸಾಧ್ಯಾಸಾಧ್ಯತೆಗಳು ಹಾಗೂ ತೊಂದರೆಗಳನ್ನು ಗಮನಿಸಿ ಯಾರ ನೌಕರಿ ಮಹತ್ವದ್ದು ಎಂಬುದನ್ನು ಕಂಡುಕೊಂಡು ಪರಸ್ಪರ ಒಪ್ಪಿಗೆಯ ಮೇರೆಗೆ ಅವರು ಹಣಕಾಸು ಹಾಗೂ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಇಬ್ಬರಲ್ಲಿ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಯಾರು ನಿಭಾಯಿಸಬೇಕು. ಹೊರಗಿನ ಜವಾಬ್ದಾರಿಗಳನ್ನು ಯಾರು ನಿಭಾಯಿಸಬೇಕು ಎಂಬುದನ್ನು ಗಂಡ ಹೆಂಡತಿ ಇಬ್ಬರೂ ಸೇರಿ ನಿರ್ಧರಿಸಬೇಕಾಗುತ್ತದೆ.
ಇಲ್ಲಿ ವ್ಯಾವಹಾರಿಕ ಯೋಚನೆ ಮಹತ್ವದ್ದಾಗಿದೆ. ಒಂದು ವೇಳೆ ಹೆಂಡತಿಯ ಆದಾಯ ಜಾಸ್ತಿ ಇದ್ದರೆ, ಕೆರಿಯರ್ ಕುರಿತಂತೆ ಅವಳ ಕನಸುಗಳು ಹೆಚ್ಚು ಪ್ರಬಲವಾಗಿದ್ದರೆ, ಇಂತಹ ಸ್ಥಿತಿಯಲ್ಲಿ ಹೆಂಡತಿ `ಬ್ರೆಡ್ ಅರ್ನರ್’ ಪಾತ್ರ ನಿಭಾಯಿಸಬೇಕು ಗಂಡ ಪಾರ್ಟ್‌ಟೈಮ್ ಅಥವಾ ಮನೆಯಿಂದಲೇ ಕೆಲಸ ನಿಭಾಯಿಸುತ್ತ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಗುವನ್ನು ಏಕಾಂಗಿಯಾಗಿ ಡೇ ಕೇರ್ ಸೆಂಟರ್‌ನಲ್ಲಿ ಬಿಡುವ ಬಗ್ಗೆ ಒತ್ತಡ ಉಂಟಾಗದು. ಅಷ್ಟೇ ಅಲ್ಲ, ಆ ಮೊತ್ತ ಕೂಡ ಉಳಿತಾಯವಾಗುತ್ತದೆ.
ಹೌಸ್ ಹಸ್ಬೆಂಡ್‌ನ ಪಾತ್ರ
`ಹೌಸ್ ಹಸ್ಬೆಂಡ್’ನ ಅರ್ಥ ಗಂಡನಾದವನು ಪರಿಪೂರ್ಣವಾಗಿ ಹೆಂಡತಿಯ ಆದಾಯದ ಮೇಲೆ ಅವಲಂಬಿತನಾಗಿರಬೇಕು ಎಂದೇನಲ್ಲ ಅಥವಾ ಹೆಂಡತಿಯ ಗುಲಾಮ ಆಗಿರಬೇಕು ಎಂದೂ ಕೂಡ ಅಲ್ಲ. ಮನೆಮಕ್ಕಳ ಜವಾಬ್ದಾರಿ ನಿಭಾಯಿಸುತ್ತ, ಪಾರ್ಟ್‌ಟೈಮ್ ಉದ್ಯೋಗ ಕೂಡ ಮಾಡಬಹುದು. ಈಗ ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳಿಗೇನೂ ಕೊರತೆಯಿಲ್ಲ. ಕಲಾವಿದರು, ಲೇಖಕರು, ಡಿಸೈನರ್ಸ್ ಇವರೆಲ್ಲ ಮನೆಯಿಂದಲೇ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಬಹುದು. ಪಾರ್ಟ್ ಟೈಮ್ ಕೆಲಸ ಕೂಡ ಅಸಾಧ್ಯವೇನಲ್ಲ.
ಸಕಾರಾತ್ಮಕ ಪರಿವರ್ತನೆ
ದೀರ್ಘ ಅವಧಿಯತನಕ ಮಹಿಳೆಯರನ್ನು ಗೃಹಿಣಿಯರನ್ನಾಗಿಸಿ ಅನ್ಯಾಯ ಎಸಗಲಾಗಿದೆ. ಅವರ ಕನಸುಗಳನ್ನು ಹೊಸಕಿ ಹಾಕಲಾಗಿದೆ. ಈಗ ಕಾಲ ಬದಲಾಗುವ ಹಂತ. ಒಬ್ಬ ಪುರುಷ ತನ್ನ ಕೆರಿಯರ್‌ನ್ನು ತ್ಯಾಗ ಮಾಡಿ ಹೆಂಡತಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಅವಕಾಶ ಕೊಡುವುದರ ಮೂಲಕ ಸಮಾಜದಲ್ಲಿ ಹೆಚ್ಚುತ್ತಿರುವ ಸಮಾನತೆ ಮತ್ತು ಸಕಾರಾತ್ಮಕ ಬದಲಾವಣೆಯ ಸಂಕೇತವಾಗಿದೆ.
ಪರಸ್ಪರರಿಗೆ ಗೌರವ
ಗಂಡ ಹೆಂಡತಿ ತಮ್ಮ `ಬ್ರೆಡ್ ಅರ್ನರ್’ ಹಾಗೂ ಹೋಮ್ ಮೇಕರ್‌ನ ಪಾರಂಪರಿಕ ಪಾತ್ರಗಳನ್ನು ಪರಸ್ಪರ ಬದಲಾಯಿಸಿಕೊಂಡರೆ, ಅವರು ಪರಸ್ಪರರಿಗೆ ಹೆಚ್ಚು ಗೌರವ ಕೊಡುತ್ತಾರೆ. ಅವರು ಸಂಗಾತಿಯ ಜವಾಬ್ದಾರಿಗಳು ಮತ್ತು ಕೆಲಸದ ಒತ್ತಡವನ್ನು ಗಮನಿಸುತ್ತಾರೆ.
ಒಂದು ಸಲ ಪುರುಷ ಮನೆಗೆಲಸಗಳು ಮತ್ತು ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಲು ಆರಂಭಿಸಿದಾಗ, ಆತನಿಗೆ ಮಹಿಳೆಯರ ಬಗೆಗೆ ಗೌರವ ಹೆಚ್ಚುತ್ತದೆ. ಪತ್ನಿಯರ ಕನಸು ನನಸು ಮಾಡಲು ನೆರವಾಗುವ ಅಂತಹ ಪುರುಷರ ಬಗ್ಗೆ ಮಹಿಳೆಯರು ಕೂಡ ಗೌರವ ಕೊಡುತ್ತಾರೆ.
ಅಪಾಯಗಳು ಕೂಡ ಇವೆ
ಸಮಾಜದ ನಿಂದನೆ : ಹಳೆಯ ಹಾಗೂ ಕಂದಾಚಾರದ ವಿಚಾರಧಾರೆಯ ಜನರು ಪುರುಷ ಮನೆಯಲ್ಲಿ ಕೆಲಸ ಮಾಡುವುದು ಹಾಗೂ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುವುದನ್ನು ಸಹಿಸಲಾರರು. ಅಂಥವರು ಇವನನ್ನು `ಹೆಂಡತಿಯ ಗುಲಾಮ’ ಎಂದು ಹೇಳುತ್ತಾರೆ. ಹೆಸರಾಂತ ಲೇಖಕ ಚೇತನ್ ಭಗತ್ ಸ್ವತಃ ತಾವೇ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತೆಂದು ಹೇಳುತ್ತಾರೆ. ನಿಮ್ಮ ಹೆಂಡತಿ ಕೆಲಸ ಮಾಡುತ್ತಾರೆಯೇ? ನಿಮಗೆ ಮನೆಗೆಲಸ ಮಾಡಲು ಹೇಗೆ ಅನಿಸುತ್ತದೆ? ಈ ರೀತಿಯ ಅನೇಕ ಪ್ರಶ್ನೆಗಳನ್ನು ಜನರು ಅವರಿಗೆ ಕೇಳುತ್ತಿದ್ದರು.
ಪುರುಷ ಅಹಂಗೆ ಪೆಟ್ಟು : ಎಷ್ಟೋ ಸಲ ಕೆಟ್ಟ ಪರಿಸ್ಥಿತಿ ಹಾಗೂ ಖಾಸಗಿ ಜೀವನದಲ್ಲಿ ವೈಫಲ್ಯದಂತಹ ಸಂದರ್ಭದಲ್ಲಿ ಪುರುಷ `ಹೌಸ್ ಹಸ್ಬೆಂಡ್’ ಆಗಬೇಕಾಗಿ ಬಂದಾಗ ಅವನು ತನ್ನನ್ನು ತಾನು ದುರ್ಬಲ, ನಿಸ್ಸಹಾಯಕ ಎಂದು ಭಾವಿಸುತ್ತಾನೆ. ತಾನು ಕರ್ತವ್ಯ ನಿಭಾಯಿಸುವಲ್ಲಿ ವಿಫಲನಾಗಿದ್ದೇನೆ. ಪುರುಷಸೂಕ್ತ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಂದುಕೊಳ್ಳುತ್ತಾನೆ.
ಮತಭೇದ : ಮಹಿಳೆಯೊಬ್ಬಳು ಹೊರಗೆ ಹೋಗಿ ಹಣ ಗಳಿಸುತ್ತಾಳೆ ಮತ್ತು ಪುರುಷ ಮನೆಯಲ್ಲಿದ್ದುಕೊಂಡು ಕೆಲಸ ಮಾಡುತ್ತಾನೆಂದರೆ ಬಹಳಷ್ಟು ಸಂಗತಿಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಗಳಿಸುವ ವ್ಯಕ್ತಿಯ ವಿಚಾರಗಳ ಬಗ್ಗೆ ಮಹತ್ವ ಕೊಡಲಾಗುತ್ತದೆ. ಅದೇ ವ್ಯಕ್ತಿಯ ಮಾತು ಮನೆಯಲ್ಲಿ ನಡೆಯುತ್ತದೆ. ಮಹಿಳೆ ಯಾವ ವಿಷಯಗಳ ಬಗ್ಗೆ ನಿಯಂತ್ರಣ ಹೇರಲು ಪ್ರಯತ್ನಿಸುತ್ತಾಳೊ, ಪುರುಷ ಅದಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಸಶಕ್ತ ಮತ್ತು ತನ್ನ ಪುರುಷತ್ವದ ಮೇಲೆ ನಂಬಿಕೆ ಇಡುವ ಪುರುಷ ಮಾತ್ರ ಜನ ತನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಕ್ತಿ ಹೊಂದಿರುತ್ತಾನೆ. ಅಂತಹ ಪುರುಷರು ತಮ್ಮ ಮನಸ್ಸಿನ ಮಾತು ಕೇಳುತ್ತಾರೆ ಮತ್ತು ಸಮಾಜ ಆಡಿಕೊಳ್ಳುವುದನ್ನು ಕೇಳಿಸಿಕೊಳ್ಳುವುದಿಲ್ಲ.
ಸ್ತ್ರೀ ಪುರುಷರು ಸಂಸಾರದ ಎರಡು ಚಕ್ರಗಳಿದ್ದಂತೆ. ಆರ್ಥಿಕತೆ ಮತ್ತು ಮನೆಯ ಜವಾಬ್ದಾರಿಗಳು ಈ ಎರಡರಲ್ಲಿ ಯಾವುದನ್ನು ಯಾರು ನಿಭಾಯಿಸಬೇಕು ಎಂಬ ಬಗ್ಗೆ ಸ್ವತಃ ದಂಪತಿಗಳೇ ನಿರ್ಧರಿಸಬೇಕು. ಸಮಾಜದ ಹಸ್ತಕ್ಷೇಪ ಸರಿಯಲ್ಲ.
– ಗೌರಿ ಶೇಖರ್
ಹೆಸರಾಂತ ಹೌಸ್ ಹಸ್ಪೆಂಡ್’ಗಳು
ಭಾರತೀಯ ಲೇಖಕ ಚೇತನ ಭಗತ್‌ರವರ ಕಾದಂಬರಿ ಆಧರಿಸಿ `ಥ್ರೀ ಈಡಿಯೆಟ್ಸ್,’ `2 ಸ್ಟೇಟ್ಸ್’ `ಹಾಫ್ ಗರ್ಲ್ ಫ್ರೆಂಡ್’ನಂತಹ ಸಿನಿಮಾಗಳು ನಿರ್ಮಾಣವಾಗಿವೆ. ಅವರು ತಮ್ಮ ಅವಳಿ ಮಕ್ಕಳ ಯೋಗ ಕ್ಷೇಮಕ್ಕಾಗಿ `ಹೌಸ್ ಹಸ್ಪೆಂಡ್’ ಆಗಲು ನಿರ್ಧರಿಸಿದರು.
ಅವರು ಎಂತಹ ಒಬ್ಬ ಅಪರೂಪದ ತಂದೆಯೆಂದರೆ, ಅವರು ಐಐಟಿ, ಐಐಎಂನಿಂದ ಹೊರ ಬಂದ ನಂತರ ಮಕ್ಕಳನ್ನು ಚೆನ್ನಾಗಿ ಬೆಳೆಸಿದರು. ಅವರು ತಮ್ಮ ಕೆರಿಯರ್‌ನಲ್ಲಿ ಯಶಸ್ಸು ಕಾಣದೇ ಇರುವ ಸಂದರ್ಭದಲ್ಲಿ `ಹೌಸ್ ಹಸ್ಬೆಂಡ್’ ಆಗಲು ನಿರ್ಧರಿಸಿದರು. ಆಗ ಅವರ ಪತ್ನಿ ಯುಬಿಎಸ್ ಬ್ಯಾಂಕ್‌ನಲ್ಲಿ ಸಿಇಓ ಆಗಿದ್ದರು. ಚೇತನ್ ಭಗತ್‌ರವರು ಭಾರತಕ್ಕೆ ಬರಲು ನಿರ್ಧರಿಸಿದರು ಮತ್ತು ಖುಷಿ ಖುಷಿಯಿಂದ ಮನೆ ಮತ್ತು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳತೊಡಗಿದರು. ಇದರ ಜೊತೆ ಜೊತೆಗೆ ತಮ್ಮ ಲೇಖನ ವೃತ್ತಿಯನ್ನು ಮುಂದುವರಿಸಿದರು. ಇಂದು ಅದೇ ಲೇಖಕರಿಗಾಗಿ ಜನ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ.
ಇದೇ ರೀತಿಯ ಕಥೆ ಹೆಸರಾಂತ ಫುಟ್ಬಾಲ್ ಪಟು ಡೇವಿಡ್ ಬ್ಯಾಕ್ ಹ್ಯಾಮ್ ಅವರದ್ದು ಕೂಡ. ಅವರು ಪ್ರೊಫೆಶನಲ್ ಫುಟ್ಬಾಲ್ ವಿಶ್ವಕ್ಕೆ ಗುಡ್‌ಬೈ ಹೇಳಿ ಹೌಸ್ ಹಸ್ಬೆಂಡ್ ಆಗಲು ನಿರ್ಧರಿಸಿದರು. ಅವರು ಟಿ.ವಿ. ಶೋ ಒಂದರಲ್ಲಿ ತಾವು ತಮ್ಮ 4 ಮಕ್ಕಳ ಜೊತೆ ಸಮಯ ಕಳೆಯುತ್ತ ಖುಷಿಯಿಂದ ಇರುವುದಾಗಿ ಒಪ್ಪಿಕೊಂಡರು. ಮಕ್ಕಳನ್ನು ಶಾಲೆಗೆ ಅಣಿಗೊಳಿಸುವುದು, ಶಾಲೆಗೆ ಕಳಿಸಿ, ಕರೆದುಕೊಂಡು ಬರುವುದು, ಅಡುಗೆ ಮಾಡುವುದು, ಮಕ್ಕಳನ್ನು ಲಾಲಿ ಹಾಡಿ ಮಲಗಿಸುವುದು ಮುಂತಾದ ಕೆಲಸಗಳನ್ನು ಅತ್ಯಂತ ಸಹಜವಾಗಿ ಮಾಡುವುದಾಗಿ ಹೇಳುತ್ತಾರೆ.
ನ್ಯೂಟನ್ ಇನ್‌ವೆಸ್ಟ್ ಮೆಂಟ್ ಮ್ಯಾನೇಜ್‌ಮೆಂಟ್‌ನ ಸಿಇಓ ಹೆಲೆನ್ ಮೋರಿಸ್‌ರವರು 50 ಮಿಲಿಯನ್ ಡಾಲರ್‌ನ ಒಂದು ಕಂಪನಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. 400ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ತಮ್ಮ ಅಂಕುಶ ಹೊಂದಿದ್ದಾರೆ. ಅವರು 9 ಮಕ್ಕಳ ತಾಯಿ ಕೂಡ. ಹೆಲೆನ್ ವಾಣಿಜ್ಯ ಜಗತ್ತಿನಲ್ಲಿ ತಮ್ಮ ವರ್ಚಸ್ಸು ತೋರಿಸತೊಡಗಿದಾಗ ಅವರ ಪತಿ ರಿಚರ್ಡ್ ಮನೆಯಲ್ಲೇ ಇದ್ದುಕೊಂಡು ಮಕ್ಕಳ ಜವಾಬ್ದಾರಿ ನೋಡಿಕೊಂಡರು.
ಅವರದ್ದೇ ಕಥೆಯನ್ನು ಹೋಲುವಂತಹ ಕಥೆ ಪೆಪ್ಸಿಕೋಲಾದ ಸಿಇಓ ಹಾಗೂ ಚೇರ್‌ಮನ್ ಇಂದಿರಾ ನೂಯಿಯವರದ್ದು. ಅವರ ಪತಿ ಫುಲ್ ಟೈಮ್ ಜಾಬ್ ಬಿಟ್ಟು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಕನ್ಸಲ್ಟೆನ್ಸಿ ತೆರೆದರು.