ಮುಂಜಾನೆ 8ರ ಸಮಯ. ಶಾಲಾ ಬಸ್ ಯಾವುದೇ ಕ್ಷಣದಲ್ಲಿ ಬರಬಹುದಾಗಿದೆ. ಮನೆಯ ವಾತಾವರಣ ಒಂದು ರೀತಿಯಲ್ಲಿ ಒತ್ತಡಮಯವಾಗಿದೆ. ಅಷ್ಟರಲ್ಲಿ ಮಗ ಒಳಗೆ ಬಂದು ``ಅಪ್ಪ, ನನ್ನ ಸ್ಕೂಲ್ ಸಾಕ್ಸ್ ಸಿಗುತ್ತಿಲ್ಲ ಬೇಗ ಹುಡುಕಿ ಕೊಡಿ,'' ಎನ್ನುತ್ತಾನೆ. ಅಪ್ಪ ಮಗಳಿಗೆ ತಿಂಡಿ ತಿನ್ನಿಸುತ್ತ ಮಗ ಹೇಳಿದ್ದನ್ನು ಕೇಳಿಸಿಕೊಳ್ಳತೊಡಗಿದ. ಆ ಬಳಿಕ ಅಪ್ಪ ಮಗನಿಗಾಗಿ ಲಂಚ್ ಬಾಕ್ಸ್ ರೆಡಿ ಮಾಡಿ, ಅವನನ್ನು ಶಾಲೆಗೆ ಕಳಿಸುತ್ತಾನೆ. ಅದಾದನಂತರ ಮಗಳಿಗೆ ಸ್ನಾನ ಮಾಡಿಸಿ ಮನೆ ಸ್ವಚ್ಛಗೊಳಿಸುವುದು ಅವನ ಕೆಲಸ.
ಇದು ಎಂತಹ ಮನೆಯೊಂದರ ಕಥೆಯೆಂದರೆ ಹೆಂಡತಿ ಉದ್ಯೋಗಸ್ಥೆ. ಗಂಡ ಮನೆಯನ್ನು ಸಂಭಾಳಿಸುತ್ತಿದ್ದಾನೆ!
ಹಳೆಯ ಕಂದಾಚಾರದ, ಹಿಂದುಳಿದ ಮಾನಸಿಕತೆಯುಳ್ಳ ಸಮಾಜದಲ್ಲಿ ಇಂತಹ ಆಧುನಿಕ ಮನೋಭಾವದ ಗಂಡಂದಿರು ಕೂಡ ಕಂಡುಬರುತ್ತಿದ್ದಾರೆ! ಅವರು ಅಡುಗೆ ಮಾಡುತ್ತಾರೆ, ಮಕ್ಕಳನ್ನು ಸಂಭಾಳಿಸುತ್ತಾರೆ, ಮನೆಯ ಸಕಲ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.
ಅವರು ಸಾಮಾನ್ಯ ಭಾರತೀಯ ಪುರುಷರ ಹಾಗೆ ಯೋಚಿಸುವುದಿಲ್ಲ. ಅವರು ಯಾವುದೇ ಹಿಂಜರಿಕೆ ಇಲ್ಲದೆ ಮಕ್ಕಳ ನ್ಯಾಪಿ ಬದಲಿಸುತ್ತಾರೆ, ಬೆಡ್ ರೂಮ್ ಸನ್ನದ್ದುಗೊಳಿಸುತ್ತಾರೆ. ಸಮಾಜದ ಈ ಪುರುಷ ವರ್ಗ ಹೆಂಡತಿಗೆ ಸಮಾನ ದರ್ಜೆ ನೀಡುತ್ತದೆ. ಅವಶ್ಯಕತೆ ಬಿದ್ದಾಗ ಮಕ್ಕಳ ಹಾಗೂ ಮನೆಯ ಯಾವುದೇ ಬಗೆಯ ಜವಾಬ್ದಾರಿ ನಿಭಾಯಿಸಲು ಟೊಂಕಕಟ್ಟಿ ನಿಲ್ಲುತ್ತಾರೆ.
ಅಂದಹಾಗೆ ಹಳೆಯ ವಿಚಾರಧಾರೆಯ ಭಾರತೀಯ ಸಮಾಜ ಈಗಲೂ ಇಂತಹ `ಹೌಸ್ ಹಸ್ಬೆಂಡ್'ಗಳನ್ನು `ಸೋತು ಹೋದ ಪುರುಷರು' ಎಂದೇ ಹೇಳುತ್ತದೆ. ಮನೆಗೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸಂಪೂರ್ಣವಾಗಿ ಮಹಿಳೆಯರದ್ದೇ ಆಗಿರುತ್ತದೆ. ಪುರುಷರ ಕೆಲಸ ಏನಿದ್ದರೂ ಹೊರಗಿನ ಕೆಲಸ ಕಾರ್ಯಗಳು, ಹಣಕಾಸಿನ ಜವಾಬ್ದಾರಿ ನೋಡಿಕೊಳ್ಳುವುದಾಗಿರುತ್ತದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯ `ಕಾ ಅಂಡ್ ಕೀ' (ಅವಳು ಮತ್ತು ಅವನು) ಎಂಬ ಸಿನಿಮಾ ಬಂದಿತ್ತು. ಈ ಚಿತ್ರದ ವಿಷಯ ಲಿಂಗ ಆಧಾರಿತ ಅಸಮಾನತೆಯ ಮೇಲೆ ಪ್ರಹಾರ ಮಾಡುವುದು ಹಾಗೂ ಗಂಡ ಹೆಂಡತಿಯ ಕೆಲಸ ಕಾರ್ಯ ಅದಲು ಬದಲು ಮಾಡಿಕೊಳ್ಳುವುದು. ಅದೇ ತರಹ ಕಾಶೀನಾಥ್ ನಾಯಕತ್ವದ `ನಾರಿ ಮುನಿದರೆ ಗಂಡು ಪರಾರಿ' ಚಿತ್ರದಲ್ಲಿ ಗಂಡಸರೆಲ್ಲ ಹೆಂಗಸರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಶಿವಣ್ಣ `ಅಮ್ಮಾವ್ರ ಗಂಡ' ಚಿತ್ರದಲ್ಲಿ ತಾಳಿ ಕಟ್ಟಿಕೊಂಡು ಗೃಹಿಣಿಯಂತೆ ಇರುತ್ತಾರೆ.
ಲಿಂಗ ಸಮಾನತೆಯ ಯುಗ
ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯುತ್ತಿದೆ. ಹುಡುಗರಿಗೆ ಸರಿಸಮಾನವೆಂಬಂತೆ ಹುಡುಗಿಯರು ಹೆಚ್ಚೆಚ್ಚು ಓದಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರಿಗೆ ತಮ್ಮದೇ ಆದ ಕನಸುಗಳಿವೆ, ಸಾಮರ್ಥ್ಯವಿದೆ. ತಮ್ಮ ಸಾಮರ್ಥ್ಯದ ಬಲದಿಂದ ಅವರು ಕೈತುಂಬ ಸಂಬಳ ಪಡೆಯುತ್ತಿದ್ದಾರೆ. ಇಂತಹದರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮಗುವಾದರೆ, ಮುಂಬರುವ ದಿನಗಳ ಸಾಧ್ಯಾಸಾಧ್ಯತೆಗಳು ಹಾಗೂ ತೊಂದರೆಗಳನ್ನು ಗಮನಿಸಿ ಯಾರ ನೌಕರಿ ಮಹತ್ವದ್ದು ಎಂಬುದನ್ನು ಕಂಡುಕೊಂಡು ಪರಸ್ಪರ ಒಪ್ಪಿಗೆಯ ಮೇರೆಗೆ ಅವರು ಹಣಕಾಸು ಹಾಗೂ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಇಬ್ಬರಲ್ಲಿ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಯಾರು ನಿಭಾಯಿಸಬೇಕು. ಹೊರಗಿನ ಜವಾಬ್ದಾರಿಗಳನ್ನು ಯಾರು ನಿಭಾಯಿಸಬೇಕು ಎಂಬುದನ್ನು ಗಂಡ ಹೆಂಡತಿ ಇಬ್ಬರೂ ಸೇರಿ ನಿರ್ಧರಿಸಬೇಕಾಗುತ್ತದೆ.