ಸಮೀಕ್ಷಾಳ ಮದುವೆಯಾಗಿ ಕೇವಲ 4 ತಿಂಗಳಷ್ಟೇ ಆಗಿರುತ್ತದೆ. ಅವಳು ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಮುಂಚೆ ಅವಳು ಒಟ್ಟು ಕುಟುಂಬದಲ್ಲಿ ವಾಸಿಸುತ್ತಿದ್ದುದರಿಂದ ಅವಳಿಗೆ ಕೆಲಸದ ಹೊರೆ ಇರಲಿಲ್ಲ. ಆದರೆ ಮದುವೆಯಾದ 2 ತಿಂಗಳಿನಲ್ಲಿಯೇ ಗಂಡನಿಗೆ ಬೇರೊಂದು ನಗರಕ್ಕೆ ಟ್ರಾನ್ಸ್ ಫರ್ ಆಯಿತು. ಸಮೀಕ್ಷಾ ಕೂಡ ತನ್ನ ಗಂಡನ ಜೊತೆ ಹೋಗಬೇಕಾಯಿತು. ಅವಳು ಯಾವ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳೊ, ಆ ಬ್ಯಾಂಕ್ ಶಾಖೆ ಆ ನಗರದಲ್ಲಿ ಇತ್ತು. ಹೀಗಾಗಿ ಆಕೆ ಆ ನಗರಕ್ಕೆ ಟ್ರಾನ್ಸ್ ಫರ್ ತೆಗೆದುಕೊಂಡು ಹೊರಟಳು.
ಎರಡೂ ಕುಟುಂಬಗಳಿಂದ ದೂರ ಅಪರಿಚಿತ ನಗರದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವಳಿಗೆ ಆಫೀಸ್ ಹಾಗೂ ಕುಟುಂಬ ಎರಡರ ಜವಾಬ್ದಾರಿ ನಿಭಾಯಿಸಬೇಕಿತ್ತು. ಅವಳು ಬಾಲ್ಯದಿಂದಲೇ ಅಮ್ಮಅಪ್ಪ, ಅಜ್ಜಿ ತಾತನ ಜೊತೆ ಬೆಳೆದವಳು. ಹೀಗಾಗಿ ಅವಳು ಏಕಾಂಗಿಯಾಗಿ ಇಷ್ಟೊಂದು ಕೆಲಸಗಳ ಜವಾಬ್ದಾರಿಯನ್ನು ಎಂದೂ ನಿಭಾಯಿಸಿದ ಅಭ್ಯಾಸ ಇರಲಿಲ್ಲ. ಅವಳ ಟೈಮ್ ಮ್ಯಾನೇಜ್‌ಮೆಂಟ್ ಅಸ್ತವ್ಯಸ್ತವಾಗತೊಡಗಿತು. ಮನೆ ಹಾಗೂ ಆಫೀಸಿನ ಕೆಲಸ ಕಾರ್ಯಗಳ ನಡುವೆ ಸೂಕ್ತ ಸಮತೋಲನ ಸಾಧಿಸುವುದು ಸಾಧ್ಯವಾಗುತ್ತಿರಲಿಲ್ಲ. ಇದರ ಪ್ರಭಾವ ಕ್ರಮೇಣ ಅವಳ ಆರೋಗ್ಯದ ಮೇಲೂ ಕಂಡುಬರತೊಡಗಿತು.
ಅದೊಂದು ದಿನ ಸಮೀಕ್ಷಾ ಆಫೀಸ್‌ನಲ್ಲಿ ಪ್ರಜ್ಞೆ ತಪ್ಪಿದಳು. ಅವಳನ್ನು ಆಸ್ಪತ್ರೆಗೆ ಸಾಗಿಸಬೇಕಾದ ಪ್ರಸಂಗ ಬಂತು. ಅವಳನ್ನು ಪರೀಕ್ಷಿಸಿದ ವೈದ್ಯರು ಅತ್ಯಧಿಕ ಒತ್ತಡದಿಂದ ಅವಳ ಆರೋಗ್ಯ ಏರುಪೇರಾಯಿತು ಎಂದು ವಿವರಿಸಿದರು.
ಸಮೀಕ್ಷಾ 1 ವಾರ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕಾಯಿತು. ಹಲವು ಜನ ಸಂಬಂಧಿಕರು ಹಾಗೂ ಸ್ನೇಹಿತರು ಅವಳನ್ನು ಭೇಟಿಯಾಗಲು ಬಂದರು. ಅದೊಂದು ದಿನ ಅವಳ ಆಪ್ತ ಗೆಳತಿ ನಿರುಪಮಾ ಅವಳನ್ನು ಭೇಟಿಯಾಗಲು ಬಂದಳು. ನಿರುಪಮಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದಾಳೆ. ಅವಳು, “ನಿನ್ನ ಒತ್ತಡ ಮತ್ತು ಅನಾರೋಗ್ಯಕ್ಕೆ ನೀನು ಸರಿಯಾದ ಟೈಮ್ ಮ್ಯಾನೇಜ್‌ಮೆಂಟ್ ಮಾಡದೇ ಇರುವುದೇ ಕಾರಣ. ಉದ್ಯೋಗಸ್ಥ ಮಹಿಳೆ ತನ್ನ ಸಮಯವನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕೆಂದರೆ, ಅವಳಿಗೆ ಒತ್ತಡ ಹಾಗೂ ಖಿನ್ನತೆಯ ಸ್ಥಿತಿ ಬರಲೇಬಾರದು,” ಎಂದು ಹೇಳಿದಳು.
ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗಸ್ಥ ಮಹಿಳೆಯರು ಆಫೀಸು ಹಾಗೂ ಮನೆ ಈ ಇಬ್ಬಗೆಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿ ಬರುತ್ತದೆ. ಎಲ್ಲ ಕೆಲಸಗಳಲ್ಲೂ ತಮ್ಮನ್ನು ತಾವು ನಂಬರ್ ಒನ್ ಎಂದು ಸಾಬೀತುಪಡಿಸಲು ಪ್ರಯತ್ನಶೀಲರಾಗಿದ್ದಾರೆ. ಈ ಕಾರಣದಿಂದ ಅವರು ಖಿನ್ನತೆಗೆ ತುತ್ತಾಗುತ್ತಾರೆ. ಗಂಡ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಸಾಮಾಜಿಕ ಜೀವನದಿಂದ ಕೂಡ ದೂರ ಉಳಿಯುತ್ತಾರೆ. ಆಫೀಸ್‌ನಲ್ಲಿ ಮನೆಯ ತೊಂದರೆಗಳು ಹಾಗೂ ಮನೆಯಲ್ಲಿ ಆಫೀಸಿನ ತೊಂದರೆಗಳೊಂದಿಗೆ ಕೆಲಸ ಮಾಡುವುದು ಇಂತಹ ಬಹಳಷ್ಟು ಕಾರಣಗಳು ಅವರ ಜೀವನದ ನೆಮ್ಮದಿಯ ಓಟಕ್ಕೆ ತಡೆಯೊಡ್ಡುತ್ತವೆ. ಅದು ಅವರ ಸೂಪರ್ ವುಮನ್ ವ್ಯಕ್ತಿತ್ವಕ್ಕೆ ಒಂದು ಪ್ರಶ್ನೆ ಚಿಹ್ನೆಯಾಗಿ ಉಳಿದುಬಿಡುತ್ತದೆ.
ಹೀಗಿರುವಾಗ ಜೀವನದಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದರೆ ಸೋಲಿಗೆ ಹೆದರುವ ಅಗತ್ಯವೇ ಬಾಧಿಸದು. ಅಂದಹಾಗೆ ಜೀವನದಲ್ಲಿ ಯಶಸ್ಸು ಮುಳ್ಳಿನ ದಾರಿಯಲ್ಲಿ ಸಾಗಿದ ಬಳಿಕವೇ ದೊರಕುತ್ತದೆ.
ಇಬ್ಬಗೆಯ ಜವಾಬ್ದಾರಿ ಹೀಗೆ ನಿಭಾಯಿಸಿ
ಉದ್ಯೋಗಸ್ಥ ಮಹಿಳೆ ಯಾವ ರೀತಿಯಲ್ಲಿ ಇಬ್ಬಗೆಯ ಜವಾಬ್ದಾರಿಗಳನ್ನು ಚಾಕಚಕ್ಯತೆಯಿಂದ ನಿಭಾಯಿಸುತ್ತ ಬೇರೆ ಮಹಿಳೆಗೆ ಮಾದರಿಯಾಗುತ್ತಾಳೆ ಎಂಬುದನ್ನು ತಿಳಿದುಕೊಳ್ಳಿ…..
ಇದು ಬ್ಯೂಟಿ ವಿತ್ ಬ್ರೇನ್‌ನ ಯುಗ. ಹೀಗಾಗಿ ಸೌಂದರ್ಯ ಇದ್ದರಷ್ಟೇ ಸಾಲದು, ಬುದ್ಧಿವಂತಿಕೆ ಕೂಡ ಅಗತ್ಯ. ನಕಾರಾತ್ಮಕ ಯೋಚನೆ ನಿಮ್ಮಲ್ಲಿ ಸುಳಿಯದಂತೆ ನೋಡಿಕೊಳ್ಳಿ. ಸದಾ ಸಕಾರಾತ್ಮಕವಾಗಿ ಯೋಚಿಸಿ.
ನಿಮ್ಮ ದಿನಚರಿ ಹೇಗಿರಬೇಕೆಂದರೆ, ಅಲ್ಲಿ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫ್‌ಗೆ ಸಾಕಷ್ಟು ಸಮಯ ಕೊಡುವಂತಿರಬೇಕು.
ನಿಮ್ಮ ವ್ಯಕ್ತಿತ್ವದ ಬಗ್ಗೆ ಗಮನ ಕೊಡಿ. ನಿಮ್ಮ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಏಕೆಂದರೆ ಇದು ನಿಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಅಡ್ಡಿಯಾಗಿ ಪರಿಣಮಿಸುತ್ತದೆ ನಿಮ್ಮೊಳಗೆ ನೀವು ಅವಲೋಕಿಸುವ ಪ್ರವೃತ್ತಿಯನ್ನು ವಿಕಸಿತಗೊಳಿಸಿಕೊಳ್ಳಿ. ಇದರ ಹೊರತಾಗಿ ನಿಮ್ಮ ಸ್ನೇಹಿತರು, ಹಿತಚಿಂತಕರಿಂದಲೂ ನಿಮ್ಮಲ್ಲಿರುವ ದೌರ್ಬಲ್ಯಗಳ ಬಗ್ಗೆ ಅರಿಯಿರಿ.
ಉದ್ಯೋಗಸ್ಥ ಮಹಿಳೆಗೆ ಸಮಯ ನಿರ್ವಹಣೆ ಎನ್ನುವುದು ತುಂಬಾ ಅತ್ಯವಶ್ಯ. ಹೀಗಾಗಿ ಮನೆ ಹಾಗೂ ಆಫೀಸಿನಲ್ಲಿ ಕಾಲಹರಣ ಮಾಡುವ ಪ್ರವೃತ್ತಿಗೆ ಸಂಪೂರ್ಣ ಕಡಿವಾಣ ಹಾಕಿ. ಯಾವ ಕೆಲಸವನ್ನು ಎಷ್ಟು ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂಬುದನ್ನು ಮನಸ್ಸಿನಲ್ಲಿಯೇ ನಿರ್ಧರಿಸಿ ಇಲ್ಲವೇ ಲಿಖಿತವಾಗಿ ಸಿದ್ಧಪಡಿಸಿಕೊಳ್ಳಿ.
ಮನೆಯ ಕೆಲಸ ಕಾರ್ಯಗಳಲ್ಲಿ ಕುಟುಂಬದ ಇತರೆ ಸದಸ್ಯರು ಹಾಗೂ ಮಕ್ಕಳ ನೆರವು ಪಡೆದುಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ಕುಟುಂಬದ ಸದಸ್ಯರಿಗೆ ಪ್ರೀತಿಯಿಂದಲೇ ಸ್ಪಷ್ಟಪಡಿಸಿ.
ಒಮ್ಮೊಮ್ಮೆ ಆಫೀಸಿನಲ್ಲಿ ನೀವು ಅವರಿವರ ಟೀಕೆಗೆ ಗುರಿಯಾಗಬೇಕಾಗುತ್ತದೆ. ಅಂತಹ ಮಾತುಗಳನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಕಾರ್ಯ ಸಾಮರ್ಥ್ಯ, ಸಂಯಮದ ವರ್ತನೆ ಮತ್ತು ನಿಮ್ಮ ಆದರ್ಶ ಗುಣಗಳಿಂದ ನಿಮ್ಮನ್ನು ಟೀಕೆ ಮಾಡುವವರ ಬಾಯಿ ಮುಚ್ಚಿಸಬಹುದು.
ವಾರಾಂತ್ಯವನ್ನು ಗಂಡ ಮಕ್ಕಳಿಗೆ ಮೀಸಲಿಡಿ. ಆ ದಿನಗಳಂದು ಮೊಬೈಲ್‌ನ್ನು ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಇರಿಸಿ. ಪತಿ ಮಕ್ಕಳಿಗೆ ಇಷ್ಟವಾಗುವ ಆಹಾರ ತಯಾರಿಸಿಕೊಡಿ. ಸಂಜೆ ಹೊತ್ತು ಮೂಡ್ ಫ್ರೆಶ್ ಮಾಡಿಕೊಳ್ಳಲು ಸಮೀಪದ ಪಿಕ್ನಿಕ್ ಸ್ಪಾಟ್‌ಗೆ ಹೋಗಿ ಬನ್ನಿ. ಹೀಗೆ ಮಾಡುವುದರಿಂದ ಮುಂದಿನ 1 ವಾರ ಕೆಲಸ ಮಾಡಲು ನಿಮಗೆ ಸಾಕಷ್ಟು ಸ್ಛೂರ್ತಿ ದೊರಕುತ್ತದೆ.
ಆಫೀಸ್‌ನಲ್ಲಿ ನಿಮ್ಮ ಕೆಲಸವನ್ನು ಪರಿಪೂರ್ಣ ನಿಷ್ಠೆಯಿಂದ ಮಾಡಿ. ಫೋನ್ ಸಂಭಾಷಣೆ ಮಿತವಾಗಿರಲಿ. ಅನಾವಶ್ಯಕ ಮಾತುಕತೆಗೆ ಕಡಿವಾಣ ಹಾಕಿ.
ನಿಮ್ಮ ಸಹೋದ್ಯೋಗಿಗಳ ಜೊತೆಗಿನ ಸಂಬಂಧ ರೈಲ್ವೆ ಟ್ರ್ಯಾಕ್‌ನಂತಿರಬೇಕು. ಯಾರನ್ನೂ ಅತಿಯಾಗಿ ನಿಕಟವಾಗಿಸಿಕೊಳ್ಳಬಾರದು. ಯಾರಿಂದಲೂ ಅತಿಯಾಗಿ ದೂರವಾಗಿರುವುದೂ ಬೇಡ. ಯಾರ ಜೊತೆಗೂ ಅನಾವಶ್ಯಕ ವಾದವಿವಾದ ಬೇಡ. ಏಕೆಂದರೆ ಹೆಚ್ಚು ಹೊತ್ತು ನೀವು ಅವರ ಜೊತೆಗೇ ಕೆಲಸ ಮಾಡಬೇಕಾಗುತ್ತದೆ.
ಆಫೀಸಿನ ಸಮಸ್ಯೆಗಳನ್ನು ಮನೆಗೆ ತರಬೇಡಿ. ಮನೆಯಲ್ಲಿ ಹೆಚ್ಚು ಹೊತ್ತು ಟಿ.ವಿ. ಮುಂದೆ ಕುಳಿತು ಅಥವಾ ಫೋನ್‌ನಲ್ಲಿ ಮಾತನಾಡುತ್ತಾ ಸಮಯ ಹಾಳು ಮಾಡಬೇಡಿ.
ಮನೆಗೆ ಹೋದ ಬಳಿಕ ಅಡುಗೆ ಮಾಡಿ. ಹೋಟೆಲ್‌ನಿಂದ ಊಟ ತರಿಸಿಕೊಂಡು ತಿನ್ನುವುದು ಆರ್ಥಿಕ ಹಾನಿ, ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಲ್ಲ.
ನೀವು ಇಬ್ಬಗೆಯ ಪಾತ್ರ ನಿಭಾಯಿಸಲು ಕುಟುಂಬದ ಸದಸ್ಯರ ನೆರವು ಪಡೆದುಕೊಳ್ಳುವುದು ಅತ್ಯವಶ್ಯ. ಹೀಗಾಗಿ ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿ ಪರಸ್ಪರರನ್ನು ಗೌರವಿಸುವುದು ಅತ್ಯಗತ್ಯ. ಪರಸ್ಪರರ ತೊಂದರೆ ನಿವಾರಿಸಲು ಇಬ್ಬರೂ ಸಹಕರಿಸಬೇಕು.
ನೀವು ನಿಮಗಾಗಿಯೂ ಒಂದಿಷ್ಟು ಸಮಯ ಉಳಿಸಿಕೊಳ್ಳುವುದು ಅಗತ್ಯ. ನಿಮಗಾಗಿ ಬೇಕಾಗುವ ಸಲಕರಣೆ ಖರೀದಿ ಮಾಡಿ ನಿಮ್ಮ ಮೂಡ್ ಫ್ರೆಶ್ ಮಾಡಿಕೊಳ್ಳಬಹುದು. ದಿನ ಮನೆ ಆಫೀಸಿನ ನಡುವಿನ ಧಾವಂತದಿಂದ ನಿಮ್ಮ ಸೌಂದರ್ಯಕ್ಕೂ ಅಷ್ಟಿಷ್ಟು ಮಂಕು ಕವಿದಿರುತ್ತದೆ. ಹಾಗಾಗಿ ಪಾರ್ಲರ್‌ಗೆ ಹೋಗಿ ನಿಮ್ಮ ಸೌಂದರ್ಯಕ್ಕೆ ಒಂದಿಷ್ಟು ಮೆರುಗು ಕೊಡಿ. ಮಕ್ಕಳ ಜವಾಬ್ದಾರಿಯನ್ನು ಪತಿಗೆ ವಹಿಸಿ, ನೀವು ಗೆಳತಿಯರ ಜೊತೆ ಯಾವುದಾದರೂ ಸಿನಿಮಾ ನೋಡಿಕೊಂಡು ಬರಬಹುದು.
– ಕೆ. ಮಂಜುಳಾ