ದಾಲ್ ಫರಾ
ಸಾಮಗ್ರಿ : ಅರ್ಧ ಕಪ್ ನೆನೆಸಿದ ಕಡಲೆಬೇಳೆ, 1 ಕಪ್ ಗೋದಿಹಿಟ್ಟು, ಅರ್ಧ ಕಪ್ ಅಕ್ಕಿಹಿಟ್ಟು, ಒಂದಿಷ್ಟು ಸಣ್ಣಗೆ ಹೆಚ್ಚಿದ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ಅರಿಶಿನ, ಸೋಡ, ಕರಿಯಲು ಎಣ್ಣೆ.
ವಿಧಾನ : ನೆನೆಸಿದ ಕಡಲೆಬೇಳೆ ಬಸಿದು, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ (ಕಡಿಮೆ ನೀರಿರಲಿ). ಆಮೇಲೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ತುಸು ರೀಫೈಂಡ್ ಎಣ್ಣೆ ಬೆರೆಸಿ ಮೃದು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಇದರಿಂದ ಸಣ್ಣ ಉಂಡೆ ಮಾಡಿ ತೆಳು ಚಪಾತಿಗಳನ್ನು ಲಟ್ಟಿಸಿ. ಒಂದರ ಮೇಲೆ ಬೇಳೆ ಮಿಶ್ರಣ ಹರಡಿ, ಅದನ್ನು ಸುರುಳಿ ಸುತ್ತಬೇಕು. ಅಂಚು ಬಿಡದಂತೆ ಒದ್ದೆ ಕೈಯಿಂದ ಒತ್ತಿಬಿಡಿ. ಈ ರೀತಿ ಎಲ್ಲಾ ಚಪಾತಿಗಳಿಂದ ಸುರುಳಿ ಮಾಡಿ, ಬಿಸಿ ನೀರಿಗೆ ಹಾಕಿ 10 ನಿಮಿಷ ಕುದಿಸಿರಿ. ನಂತರ ನೀರು ಬಸಿದು, ಈ ಸುರುಳಿಗಳನ್ನು ಚೆನ್ನಾಗಿ ಆರಲು ಬಿಡಿ. ಆಮೇಲೆ ಹರಿತ ಚಾಕುವಿನಿಂದ ಬಿಲ್ಲೆಗಳಾಗಿ ಕತ್ತರಿಸಿ. ಅವು ಚೆನ್ನಾಗಿ ಒಣಗಿದ ಮೇಲೆ ಕಾದ ಎಣ್ಣೆಗೆ ಹಾಕಿ ಕರಿಯಿರಿ. ನಂತರ ಇದನ್ನು ಪ್ಲೇಟುಗಳಲ್ಲಿ ಜೋಡಿಸಿ, ಮೇಲೆ ಚಾಟ್ ಮಸಾಲ ಉದುರಿಸಿ ಸವಿಯಲು ಕೊಡಿ.
ಬೇಸನ್ ಪನೀರ್ ಫ್ರೀಟರ್ಸ್
ಸಾಮಗ್ರಿ : 1 ಕಪ್ ಕಡಲೆಹಿಟ್ಟು (ಬೇಸನ್), ಅರ್ಧ ಕಪ್‌ಅಕ್ಕಿಹಿಟ್ಟು, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಡ, ಅರಿಶಿನ, ಪುದೀನಾ ಚಟ್ನಿ, ಹುಳಿಸಿಹಿ ಚಟ್ನಿ, ಕರಿಯಲು ಎಣ್ಣೆ, 250 ಗ್ರಾಂ ಪನೀರ್.
ವಿಧಾನ : ಕಡಲೆಹಿಟ್ಟಿಗೆ ಅಕ್ಕಿಹಿಟ್ಟು, ಹುಳಿ ಮೊಸರು, ಉಪ್ಪು, ಖಾರ ಬೆರೆಸಿ ಮಿಶ್ರಣವನ್ನು 2-3 ತಾಸು ನೆನೆಯಲು ಬಿಡಿ. ನಂತರ ಪನೀರ್‌ನ್ನು 1 ಇಂಚು ಗಾತ್ರದ ತುಂಡುಗಳಾಗಿಸಿ. ಪ್ರತಿ ತುಂಡಿನ ನಡುವೆ ತುಸು ಸೀಳಿಕೊಂಡು ಎರಡೂ ಬಗೆಯ ಚಟ್ನಿ ತುಂಬಿಸಿ. ಈಗ ಕಡಲೆಹಿಟ್ಟಿನ ಮಿಶ್ರಣಕ್ಕೆ ಉಪ್ಪು, ಖಾರ ಹಾಗೂ ಉಳಿದ ಸಾಮಗ್ರಿ ಬೆರೆಸಿ. ಅದರಲ್ಲಿ ಪನೀರ್ ತುಂಡುಗಳನ್ನು ಚೆನ್ನಾಗಿ ಹೊರಳಿಸಿ, ದಪ್ಪ ಪದರವಾಗಿ ಮೆತ್ತಿಕೊಳ್ಳುವಂತೆ ಮಾಡಿ. ಇದನ್ನು ಕಾದ ಎಣ್ಣೆಯಲ್ಲಿ (ಮಂದ ಉರಿ ಇರಲಿ) ಕರಿದು, ಉಳಿದ ಚಟ್ನಿಗಳ ಜೊತೆ ಸವಿಯಲು ಕೊಡಿ.
ರಬಡೀ ರೋಲ್ಸ್
ಸಾಮಗ್ರಿ : 7-8 ಪೀಸ್ ಫ್ರೆಶ್ ಬ್ರೆಡ್, ಅರ್ಧ ಲೀ. ಗಟ್ಟಿ ಹಾಲು, 1 ಕಪ್ ಹಾಲಿನ ಪುಡಿ, 1 ಚಮಚ ಕಾರ್ನ್‌ಫ್ಲೋರ್, ಒಂದಿಷ್ಟು ಹೆಚ್ಚಿದ ಪಿಸ್ತಾ, ಬಾದಾಮಿ, ದ್ರಾಕ್ಷಿ, 8-10 ಎಸಳು ಹಾಲಲ್ಲಿ ನೆನೆಸಿದ ಕೇಸರಿ, 1 ಕಪ್ ಸಕ್ಕರೆ.
ವಿಧಾನ : ಹಾಲನ್ನು ಕಾಯಿಸಿ, ಮಂದ ಉರಿಯಲ್ಲಿ ಚೆನ್ನಾಗಿ ಕುದಿಸುತ್ತಾ ಅರ್ಧದಷ್ಟು ಹಿಂಗುವವರೆಗೂ ಕೈಯಾಡಿಸುತ್ತಿರಿ. ನಂತರ ಇದಕ್ಕೆ ಹಾಲಿನ ಪುಡಿ, ಕಾರ್ನ್‌ಫ್ಲೋರ್ ಸೇರಿಸಿ ಹಾಲು ಖೀರಿನಂತೆ (ರಬಡೀ) ಗಟ್ಟಿಗೊಳಿಸಿ. ಇದಕ್ಕೆ ಅರ್ಧದಷ್ಟು ಸಕ್ಕರೆ, ಡ್ರೈಫ್ರೂಟ್ಸ್ ಸೇರಿಸಿ ಮತ್ತೆ 10 ನಿಮಿಷ ಕುದಿಸಿ ಕೆಳಗಿಸಿ, ಆರಲು ಬಿಡಿ. ಈಗ ಬ್ರೆಡ್ ಸ್ಲೈಸ್‌ನ ಅಂಚು ಕತ್ತರಿಸಿ, ಅದನ್ನು ಇನ್ನಷ್ಟು ತೆಳು ಆಗುವಂತೆ ಲಟ್ಟಣಿಗೆಯಿಂದ ಒತ್ತಿ ಲಟ್ಟಿಸಿ. ಈಗ ದೊಡ್ಡ ಚಮಚದಿಂದ ಇದರ ಮೇಲೆ ರಬಡೀ ಹರಡಿ, ನಿಧಾನವಾಗಿ ರೋಲ್ ಮಾಡಿ. ಈ ರೀತಿ ಎಲ್ಲಾ ಬ್ರೆಡ್ ಸ್ಲೈಸ್‌ಗಳಿಗೂ ಮಾಡಿ. ಈ ರೋಲ್ಸ್ ನ್ನು ಉಳಿದ ರಬಡಿಯಲ್ಲಿ ಹೊರಳಿಸಿ, ಮೇಲೆ ಇನ್ನೊಂದಷ್ಟು ಪಿಸ್ತಾ ಬಾದಾಮಿ ಉದುರಿಸಿ, ಸವಿಯಲು ಕೊಡಿ.
ರವೆ ಡ್ರೈ ಫ್ರೂಟ್ಸ್ ಮೊಸರು ವಡೆ
ಸಾಮಗ್ರಿ : ಅರ್ಧ ಕಪ್ ಸಾದಾ ರವೆ, 1 ಕಪ್ ಹಾಲು, ಅರ್ಧರ್ಧ ಚಮಚ (ಹುರಿದು ಪುಡಿ ಮಾಡಿದ) ಜೀರಿಗೆ ಸೋಂಪು, ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್), 1 ಕಪ್ ಗಟ್ಟಿ ಮೊಸರು, ಹುಣಿಸೆ ಕಿವುಚಿದ ರಸ, ಬೆಲ್ಲ, ಪುದೀನಾ ಚಟ್ನಿ, ರುಚಿಗೆ ತಕ್ಕಷ್ಟು ಉಪ್ಪು ಖಾರ, ಕರಿಯಲು ಎಣ್ಣೆ.
ವಿಧಾನ : ನಾನ್‌ಸ್ಟಿಕ್ ಬಾಣಲೆಯಲ್ಲಿ ರವೆಯನ್ನು ಜಿಡ್ಡಿಲ್ಲದೆ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ, ಹಾಲು, ನೀರು ಬೆರೆಸಿ ಕಾಯಿಸಿ. ಅದು ಕುದ್ದಂತೆ, ನಿಧಾನವಾಗಿ ರವೆ ಸೇರಿಸಿ ಕೆದಕಬೇಕು. 5 ನಿಮಿಷ ಬಿಟ್ಟು ಕೆಳಗಿಳಿಸಿ ಆರಲು ಬಿಡಿ. ಇದನ್ನು ಬೇರೆ ಪಾತ್ರೆಗೆ ರವಾನಿಸಿ, ಅದೇ ಬಾಣಲೆಯಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿ. ಈ ರವೆ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಉಂಡೆ ತರಹ ಮಾಡಿ, ಮಧ್ಯೆ ಮಧ್ಯೆ ಡ್ರೈಫ್ರೂಟ್ಸ್ ತುಂಬಿಸಿ, ವಡೆಯ ಆಕಾರ ನೀಡಿ. ಇದನ್ನು ಎಣ್ಣೆಗೆ ಹಾಕಿ ಮಂದ ಉರಿಯಲ್ಲಿ ಕರಿಯಿರಿ. ಟಿಶ್ಶು ಪೇಪರ್ ಮೇಲೆ ಹರಡಿ, ನಂತರ ನೀರಿಗೆ ಹಾಕಿ ಲಘುವಾಗಿ ಹಿಂಡಿಕೊಳ್ಳಿ. ಪ್ರತಿಯೊಂದು ವಡೆಯನ್ನೂ ಮೊಸರಿನಲ್ಲಿ ಅದ್ದಿಕೊಂಡು ತಟ್ಟೆಯಲ್ಲಿ ಜೋಡಿಸಿ. ಇದರ ಮೇಲೆ ಉಳಿದ ಮೊಸರು ಸುರಿದು, ಉಳಿದೆಲ್ಲ ಮಸಾಲೆ ಉದುರಿಸಿ, 15 ನಿಮಿಷ ಬಿಟ್ಟು ಸವಿಯಲು ಕೊಡಿ.
ಅವಲಕ್ಕಿ ಬರ್ಫಿ
ಸಾಮಗ್ರಿ : 1 ಕಪ್ ಪೇಪರ್ ಅವಲಕ್ಕಿ, ಅರ್ಧ ಕಪ್ ಸಣ್ಣ ರವೆ, 1-1 ಕಪ್ ಸಕ್ಕರೆ, ಹಾಲು, 1-2 ಎಸಳು ಹಾಲಲ್ಲಿ ನೆನೆದ ಕೇಸರಿ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು, ಅರ್ಧ ಕಪ್‌ತುಪ್ಪ, 2 ಚಿಟಕಿ ಏಲಕ್ಕಿಪುಡಿ, 3-4 ಚಮಚ ಬಣ್ಣದ ಟೂಟಿಫ್ರೂಟಿ.
ವಿಧಾನ : ಮೊದಲು ಅವಲಕ್ಕಿ ಹುರಿದು, ಕೆಳಗಿಳಿಸಿ ಆರಲು ಬಿಡಿ. ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ದ್ರಾಕ್ಷಿ ಹುರಿದು ತೆಗೆಯಿರಿ. ಅದರಲ್ಲಿ ರವೆ ಹಾಕಿ ಹುರಿಯಿರಿ. ನಂತರ ಅವಲಕ್ಕಿ ಪುಡಿ ಹಾಕಿ. ಇದಕ್ಕೆ ಹಾಲು, ನೀರು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಿರಿ. ಗಂಟಾಗದಂತೆ ಎಚ್ಚರಿಕೆ ವಹಿಸಿ. 5 ನಿಮಿಷ ಬಿಟ್ಟು ಸಕ್ಕರೆ ಹಾಕಿ, ಜೊತೆಗೆ ಕೇಸರಿ ಸಹ. ಬೇಗ ಕೆದಕುತ್ತಾ ಏಲಕ್ಕಿ, ಗೋಡಂಬಿ, ದ್ರಾಕ್ಷಿಗಳನ್ನೂ ಸೇರಿಸಿ. ಇದು ಮೈಸೂರುಪಾಕ್ ಹದಕ್ಕೆ ಬಂದಾಗ ಟೂಟಿಫ್ರೂಟಿ ಸೇರಿಸಿ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿಕೊಳ್ಳಿ. ತುಸು ಆರಿದ ನಂತರ ಬರ್ಫಿಗಳಾಗಿ ಕತ್ತರಿಸಿ, ಡಬ್ಬಕ್ಕೆ ತುಂಬಿಸಿಡಿ. ಮಕ್ಕಳು ಬಯಸಿದಾಗ ಸವಿಯಲು ಕೊಡಿ.