ಕಥೆ – ವಿಮಲಾ ಮೂರ್ತಿ

ಏನು ವಿಷಯ ಮೋಹನ?”

“ಈ ಎರಡೂ ಕಾಪಿಗಳನ್ನು ನೋಡಿ ಮಿಸ್‌.”

“ಏನು ನೋಡಬೇಕು?”

“ಅಂಬುಜಾ ಏನು ಬರೆದಿದ್ದಾಳೋ ನಾನೂ ಅದೇ ರೀತಿ ಬರೆದಿದ್ದೇನೆ. ಒಂದು ಪದ ಕಡಿಮೆಯೂ ಇಲ್ಲ, ಒಂದು ಪದ ಜಾಸ್ತಿಯೂ ಇಲ್ಲ.”

“ಅದಕ್ಕೆ….”

“ಹಾಗಾದರೆ ಅವಳಿಗೆ 50 ನಂಬರು, ನನಗೆ 49 ನಂಬರು ಯಾಕೆ? ಅವಳಿಗೆ 1 ನಂಬರ್‌ ಕಡಿಮೆ ಮಾಡಿ ಅಥವಾ ನನಗೆ 1 ನಂಬರ್‌ ಜಾಸ್ತಿ ಮಾಡಿ!” ಕೋಪದಿಂದ ಅವನ ಮುಖ ಕೆಂಪಾಗಿತ್ತು.

“ಏನು ವಿಷಯ ಮೋಹನ್‌, ಒಂದು ನಂಬರಿಗಾಗಿ ನಿನಗೆ ಇಷ್ಟು ಹಗರಣ ಮಾಡಬೇಕು ಅನ್ನಿಸುತ್ತಿದೆಯಾ?”

“ನೋ ಮಿಸ್‌!”

“ಹಾಗಾದರೆ ಸುಮ್ಮನೆ ಹೋಗಿ ನಿನ್ನ ಜಾಗದಲ್ಲಿ ಕುಳಿತುಕೋ. ಹಾಗೆ ಅಂಬುಜಾಳ ಪುಸ್ತಕ ಅವಳಿಗೆ ಕೊಡು,” ಗೀತಾ ಟೀಚರ್

ಹೇಳಿದರು.

ಮೋಹನ್‌ ಅಂಬುಜಾಳ ಜಾಗದ ಬಳಿ ಬಂದ. ಅಂಬುಜಾ ತನ್ನ ಗುಂಗುರು ಕೂದಲಿಗೆ ಹಾಕಿಕೊಂಡಿದ್ದ ಕ್ಲಿಪ್ಪನ್ನು ತೆಗೆದಳು. ಆಲಸ್ಯದಿಂದ ತಲೆ ಕೊಡವಿದಳು. ಸ್ವಲ್ಪ ಹೊತ್ತು ಕೂದಲನ್ನು ಹಾರಾಡಲು ಬಿಟ್ಟಳು. ನಂತರ ಗೆದ್ದ ಹುಂಜದಂತೆ ವ್ಯಂಗ್ಯಭರಿತ ನಗೆ ಬೀರಿ ಕೂದಲಿಗೆ ಕ್ಲಿಪ್‌ ಹಾಕಿಕೊಂಡಳು. ಇದರಿಂದ ಮೋಹನನ ಅಹಂಗೆ ಇನ್ನೂ  ಪೆಟ್ಟಾಯಿತು.

ಮೋಹನ ಮತ್ತು ಅಂಬುಜಾರ ನಡುವಿನ ಪೈಪೋಟಿ ಕೇವಲ ಓದಿಗಷ್ಟೇ ಸೀಮಿತವಾಗಿದ್ದಿದ್ದರೆ… ಇಬ್ಬರ ಬೆಂಬಲಿಗರು ಓದುವುದರಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಬ್ಬರನ್ನೂ ಪರಸ್ಪರ ಪೈಪೋಟಿಗಿಳಿಸಲು ನೋಡುತ್ತಿದ್ದರು. ಹೀಗೆ ತಿಳಿಯದೆ ಇಬ್ಬರು ಬುದ್ಧಿವಂತ ವಿದ್ಯಾರ್ಥಿಗಳು ಸ್ಪರ್ಧೆಯ ಹೆಸರಲ್ಲಿ ಪರಸ್ಪರ ವೈರಿಗಳಾಗುತ್ತಾ ಬೆಳೆದರು. ಪರಸ್ಪರರನ್ನು ಕೀಳಾಗಿ ತೋರಿಸುವುದೇ ಅವರ ಉದ್ದೇಶವಾದಂತಾಯಿತು.

“3ನೇ ಕ್ಲಾಸಲ್ಲೇ ಈ ಸ್ಥಿತಿಯಾದರೆ ಮುಂದೆ ಏನಾಗಬಹುದು?” ಮೂರ್ತಿಗೆ ಚಿಂತೆಯಾಗಿತ್ತು.

“ಮೊದಲಿನಿಂದಲೂ ಮೋಹನ ಪಕ್ಷಪಾತದ ವಿರೋಧಿ ಅನ್ನೋದು ನಿಮಗೆ ಗೊತ್ತೇ ಇದೆ. ಈ ಹುಡುಗಿ ಅಂಬುಜಾ ಈ ತರಹದ ಸ್ಪರ್ಧೆಯಿಂದ ತನ್ನ ಗೌರವ ಹೆಚ್ಚುತ್ತೆ ಅಂತ ಯಾಕೆ ತಿಳಿದುಕೊಂಡಿದ್ದಾಳೋ? 3 ವರ್ಷಗಳಿಂದ ಇದೇ ನಡೀತಿದೆ. ಒಂದು ನಂಬರಿನ ಅಂತರ ಒಂದು ಸಲ ಮೋಹನ ಮೊದಲನೆಯವನಾಗಿ ಬರುವಂತೆ ಮಾಡಿದರೆ ಇನ್ನೊಂದು ಸಲ ಅಂಬುಜಾ ಮೊದಲನೆಯವಳಾಗಿ ಬರುವಂತೆ ಮಾಡಿದೆ. ಯಾರಾದರೂ ಹುಡುಗಿಯಿಂದ ಸೋಲುವುದೆಂದರೆ ಮೋಹನನಿಗೆ ಆಗುವುದಿಲ್ಲ. ನೀವು ಪ್ರಿನ್ಸಿಪಾಲರಿಗೆ ಹೇಳಿ ಮೋಹನನ ಸೆಕ್ಷನ್‌ ಏಕೆ ಬದಲಾಯಿಸುವುದಿಲ್ಲ?” ದೀಪಾ ಸಲಹೆ ನೀಡಿದಳು.

“ಇದು ಸಮಸ್ಯೆಗೆ ಪರಿಹಾರವಲ್ಲ. ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಹುಡುಗ ಹುಡುಗಿಯೊಂದಿಗೆ ಸಮಾನ ಅಧಿಕಾರ ಮತ್ತು ಅವಕಾಶ ಕೊಡಲಾಗುತ್ತಿದೆ. ತನ್ನ ಬುದ್ಧಿಶಕ್ತಿಯಿಂದ ಹುಡುಗಿ ಹುಡುಗನಿಗಿಂತ  ಮುಂದೆ ಹೋಗಬಹುದು. ನಾಳೆ ಇವನ ಬಾಸ್ ಅಥವಾ ಸೀನಿಯರ್‌ ಯಾರಾದರೂ ಹುಡುಗಿಯಾದರೆ ಇವನು ಅವಳ ಕೈ ಕೆಳಗೆ ಕೆಲಸ ಮಾಡಲು ನಿರಾಕರಿಸುತ್ತಾನಾ ಅಥವಾ ಹುಡುಗಿಯರನ್ನು ಕೆಲಸಕ್ಕೆ ತೆಗೆದುಕೊಳ್ಳದ ಸಂಸ್ಥೆಯನ್ನು ಹುಡುಕುತ್ತಾನೇನು?”

“ಇನ್ನೂ ಹುಡುಗ… ಮುಂದೆ ತಾನೇ ತಿಳ್ಕೋತಾನೆ. ಸಾಧ್ಯವಾದರೆ ನೀವು ಅವನು ಈಗಲೇ ದೊಡ್ಡವನಾಗಿದ್ದಾನೆ ಅಂತಾ ಉಪದೇಶಾಮೃತ ಕುಡಿಸಲು ಶುರು ಮಾಡಿಬಿಡುತ್ತೀರಿ,” ದೀಪಾ ಅರ್ಥ ಮಾಡಿಸಲು ಹೋದಳು.

“ಈಗಿನಿಂದಲೇ ಅಭ್ಯಾಸ ಮಾಡಿಕೋ ದೀಪಾ, ಇಲ್ಲಾಂದರೆ ಅಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ,” ಮೂರ್ತಿ ಬ್ರೀಫ್‌ಕೇಸ್ ಎತ್ತಿಕೊಂಡು ಅಫೀಸಿಗೆ ಹೊರಟ. ದೀಪಾ ಮನೆಗೆಲಸದಲ್ಲಿ ಮುಳುಗಿಹೋದಳು. ಮೋಹನನ ಬಗ್ಗೆ ಅವಳ ಚಿಂತೆ ಆಧಾರರಹಿತವಾಗಿರಲಿಲ್ಲ. ಓದಿನಲ್ಲಿ ಅವನು ಬಹಳ ಚುರುಕಾಗಿದ್ದ. ಆದರೆ ಯಾರಾದರೂ ಹುಡುಗಿಯಿಂದ ಸೋತರೆ ಅದನ್ನು ಅವನು ಸಹಜವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಹುಡುಗರಿಗೆ ಸರಿಸಮ ಎಂದು ವಾದಿಸುವ ಹುಡುಗಿಯರಿಗೆ ಹುಡುಗರಿಗಿಂತ ಜಾಸ್ತಿ ಯಾವುದೇ ರೀತಿಯ ರಿಯಾಯಿತಿ ಅಥವಾ ಸೌಲಭ್ಯ ಸಿಕ್ಕಿದರೆ ಅವನು ಸಹಿಸುವುದಿಲ್ಲ.

“ತರಗತಿಯ ಎಲ್ಲ ಹುಡುಗರು ತಮ್ಮ ಜೊತೆ ಓದುವ ಹುಡುಗಿಯರಿಂದ ರಾಖಿ ಕಟ್ಟಿಸಿಕೊಳ್ಳುತ್ತಿದ್ದಾರೆ. ನಿನಗೆ ಏನು ಆಕ್ಷೇಪ ಮೋಹನ? ಈ ಪದ್ಧತಿ ವರ್ಷಾನುಗಟ್ಟಲೆಯಿಂದ ಬಂದಿದೆ. ನಿನಗಂತೂ ಯಾವುದೋ ಒಂದು ವಿಷಯ ತಗೊಂಡು ಅಡ್ಡಿ ಮಾಡಲು ನೆವ ಬೇಕು ಅಷ್ಟೆ.”

“ನಾನು ಆಡಂಬರದಲ್ಲಿ ನಂಬಿಕೆ ಇಡುವುದಿಲ್ಲ. ಅವರು ರಾಖಿ ಕಟ್ಟಿಬಿಟ್ಟರೆ ನಾನೇನು ಅವರ ಅಣ್ಣ ತಮ್ಮ ಆಗಲು ಸಾಧ್ಯವಿಲ್ಲ. ರಾಖಿ ಕಟ್ಟದೆ ಇರುವವರಲ್ಲಿ ಯಾರಿಗಾದರೂ ಕಷ್ಟಬಂದರೆ ನಾವು ಅವರನ್ನು ರಕ್ಷಿಸುವುದಿಲ್ಲವೇ? ನಮ್ಮ ನೈತಿಕ ಜವಾಬ್ದಾರಿಗಳನ್ನು ನಿಭಾಯಿಸಲು ನನ್ನದೇನೂ ಅಡ್ಡಿಯಿಲ್ಲ.”

“ಕ್ಷಮಿಸು ಮಹಾರಾಯ, ನಿನ್ನ ಹತ್ತಿರ ಯಾರು ವಾದ ಮಾಡ್ತಾರೆ? ಸರಿ ಬಿಡು, ನೀನು ರಾಖಿ ಕಟ್ಟಿಸಿಕೊಳ್ಳಬೇಡ. ನಾವು ಕಟ್ಟಿಸಿಕೊಂಡರೆ ಮಹಾರಾಜರಿಗೆ ಯಾವ ತೊಂದರೆಯೂ ಇಲ್ಲ ತಾನೇ?”

“ನಾನು ಎಲ್ಲರೂ ಮೂರ್ಖರಾಗುವುದನ್ನು ತಪ್ಪಿಸುವ ಯಾವ ಕಾಂಟ್ರಾಕ್ಟನ್ನು ಹಿಡಿದಿಲ್ಲ. ನಿನಗೆ ಬೇಕೂ ಅಂದರೆ, ಪ್ರಿನ್ಸಿಪಾಲ್‌, ಕ್ಲಾಸ್‌ ಟೀಚರ್ಸ್ ಮತ್ತು ಬೇರೆ ಟೀಚರ್‌ಗಳು ಮತ್ತು ಆಯಾಗಳು ಎಲ್ಲರಿಂದಲೂ ರಾಖಿ ಕಟ್ಟಿಸಿಕೊಳ್ಳಬಹುದು.”

ಇದನ್ನು ಕೇಳುತ್ತಲೇ ವಿವೇಕನಿಗೆ ನಗುಬಂತು. ತನ್ನ ಸ್ನೇಹಿತನ ಹಟಮಾರಿತನದ ಬಗ್ಗೆ ಸಂತೋಷಪಡುವುದು ಅವನಿಗೆ ಮಾತ್ರ ತಿಳಿದಿತ್ತು.

“ಪೂರಾ 5 ವರ್ಷ ಕಳೆಯಿತು. ಆದರೆ ನೀನು ಮಾತ್ರ ಬದಲಾಗಿಲ್ಲ. ಅಂಬುಜಾ ಜೊತೆ ಜಗಳದಲ್ಲಿ ಸ್ವಲ್ಪವೂ ಕಡಿಮೆ ಮಾಡಿಲ್ಲ. ರಾಖಿ ಕಟ್ಟುವ ವಿಷಯದಲ್ಲಿ ನೀನು ಗಲಾಟೆ ಮಾಡಿದೆಯಂತೆ. ನನ್ನ ಸ್ನೇಹಿತೆಯರ ಸೋದರ ಸೋದರಿಯರು ನಿನ್ನ ಜೊತೆ ಓದುತ್ತಿದ್ದಾರೆ. ಎಲ್ಲರೂ ನಿನ್ನ ಬಗ್ಗೆ ಮಾತನಾಡಿದ್ದು ಕೇಳಿ ನನಗೆ ತುಂಬಾ ನಾಚಿಕೆಯಾಯಿತು.”

“ಅಕ್ಕಾ, ನಿಮ್ಮ ಸ್ನೇಹಿತೆಯರಿಗೆ ನಮ್ಮ ಕ್ಲಾಸಿನಲ್ಲಿ ನಡೆಯುವ ಪ್ರತಿಯೊಂದು ವಿಷಯದ ರನ್ನಿಂಗ್‌ ಕಾಮೆಂಟ್ರಿ ಕೇಳುವ ಅಭ್ಯಾಸ ಆಗಿಬಿಟ್ಟಿದೆಯ? ಇದಕ್ಕೆ ನನ್ನ ಬಳಿ ಯಾವ ಚಿಕಿತ್ಸೆಯೂ ಇಲ್ಲ.”

“ಬೇರೆಯವರ ಬಗ್ಗೆ ಮಾತಾಡ್ತಿಲ್ಲ. ಆದರೆ ಅಂಬುಜಾಳ ಕೈಯಿಂದ ರಾಖಿ ಕಟ್ಟಿಸಿಕೊಂಡು ನೀನು ಅವಳ ಬಗ್ಗೆ ಇರುವ ದ್ವೇಷಭಾವನೆಯನ್ನು ಹೋಗಾಡಿಸಬಹುದಲ್ಲ. ಪಾಪ ಅವಳು ಒಬ್ಬಳೇ ಮಗಳು. ರಾಖಿ ಕಟ್ಟಿಸಿಕೊಂಡು ನೀನು ಅಣ್ಣ ತಮ್ಮ ಇಲ್ಲದ ಕೊರತೆ ನೀಗಬಹುದಿತ್ತು.”

ಅಕ್ಕನ ಮಾತು ಮೋಹನನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಇತ್ತ 10ನೇ ತರಗತಿಯ ಪರೀಕ್ಷೆಯಲ್ಲಿ ಮೋಹನ ಇಡೀ ರಾಜ್ಯಕ್ಕೆ ಮೊದಲಿಗನಾಗಿ ಬಂದ. ತನ್ನ ಈ ಸಾಧನೆ ಬಗ್ಗೆ ಅವನಿಗೆ ಸಂತೋಷವಾಗಲಿಲ್ಲ. ಮೊದಲನೆ ಸಲ ಜನರ ಹೊಗಳಿಕೆ ಅವನಿಗೆ ಕಹಿಯೆನಿಸಿತು. ಅವನ ಕಣ್ಮುಂದೆ  ಅಂಬುಜಾಳ ಅಣಕಿಸುವ ಮುಖ ಬರುತ್ತಿತ್ತು. ಪೈಪೋಟಿ ನಡೆಸುತ್ತಿದ್ದ ಅಂಬುಜಾ, ಯಾರನ್ನು ಕೀಳಾಗಿ ತೋರಿಸಬೇಕೆನ್ನುವ ಹುಚ್ಚು ಆಸೆ ತನ್ನ ತಲೆಗೇರಿತ್ತೋ ಆ ಅಂಬುಜಾ ಈಗ ತನ್ನ ಸಹಪಾಠಿಯಾಗಿಲ್ಲ.

ಪರೀಕ್ಷೆ ಆರಂಭವಾಗುವ 2 ದಿನ ಮುಂಚೆ ಅವಳ ತಂದೆತಾಯಿ ಬಸ್‌ ದುರ್ಘಟನೆಯಲ್ಲಿ ತೀರಿಹೋದರು. ಪ್ರಿನ್ಸಿಪಾಲರು ಬುದ್ಧಿ ಮಾತು ಹೇಳಿ 1 ವರ್ಷ ಹಾಳು ಮಾಡಿಕೊಳ್ಳಬೇಡವೆಂದು ಅರ್ಥ ಮಾಡಿಸಿ ಪರೀಕ್ಷೆ ಬರೆಯುವಂತೆ ಮಾಡಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಅವಳು ತನ್ನ ಮಾವನ ಊರಿಗೆ ಹೊರಟುಹೋದಳು.

ಈ ಸಲ ಮಾರ್ಕ್‌ಶೀಟ್‌ ತೆಗೆದುಕೊಂಡು ಮನೆಗೆ ಬಂದಾಗ ಮೋಹನನ ಮುಖದ ಮೇಲೆ ಸಂತೋಷವಿರಲಿಲ್ಲ. ಮೂರ್ತಿ ಮತ್ತು ದೀಪಾ ಏನಾದರೂ ಕೇಳುವ ಮೊದಲೇ ಅವನು ಮಂಚದ ಮೇಲೆ ಬಿದ್ದುಕೊಂಡು ಜೋರಾಗಿ ಅಳತೊಡಗಿದ. ಅವನ ಅಕ್ಕ ಮೀರಾ ಸಮಾಧಾನದಪಡಿಸಲು ಬಹಳ ಪ್ರಯತ್ನಿಸಿದಳು. ಆದರೆ ಅವನ ಅಳು ನಿಲ್ಲಲಿಲ್ಲ.

ಹೀಗೆ ಹಲವು ವರ್ಷ ಕಳೆದವು. ಟ್ರಾಲಿ ಹಿಡಿದ ಹುಡುಗಿ ಮುಖ ತಿರುಗಿಸಿ ನೋಡಿದಾಗ ಅವನು ಸ್ವಲ್ಪ ಬೆಚ್ಚಿದ. ಮುಖ ಸ್ವಲ್ಪ ಪರಿಚಯದ್ದೆನಿಸಿತು. ಅದೇ ಗುಂಗುರು ಕೂದಲು, ದುಂಡುಮುಖ. ಆದರೆ ವ್ಯಥೆ ತುಂಬಿದ ಕಣ್ಣುಗಳು. ಸರಿಯಾಗಿ ನಿರ್ಧಾರ ಮಾಡಲಾಗಲಿಲ್ಲ. ಅಷ್ಟರಲ್ಲಿ ಹುಡುಗಿ ಸಂತೋಷದಿಂದ ಕಿರಿಚಿದಳು.

“ಮೋಹನ್‌!”

“ಅಂಬುಜಾ!” ಅವನು ಬಡಬಡಿಸಿದ.

“ನಾನು ಈ ಬಿಗ್‌ ಬಜಾರ್‌ನಲ್ಲಿ ನಿನ್ನ ಭೇಟಿಯಾಗುತ್ತೇನಂತ ಕನಸಿನಲ್ಲೂ ಯೋಚಿಸಿರಲಿಲ್ಲ. ಆಶ್ಚರ್ಯ ಅಲ್ಲವಾ?”

“ಸಹನೆ… ಸಹನೆ… ಇಲ್ಲಿ ಇಡೀ ದಿನ ಇಂತಹ ಆಶ್ಚರ್ಯಗಳು ಆಗ್ತಾ ಇರುತ್ತದೆ. ನಮ್ಮ ಎಷ್ಟೋ ಜನ ಸಹಪಾಠಿಗಳು ಅಮೆರಿಕಾದಲ್ಲಿ ಎಲ್ಲೋ ಒಂದು ಕಡೆ ಕೆಲಸ ಮಾಡ್ತಿದಾರೆ. ಎಲ್ಲಾದರೂ ಯಾರಾದರೂ ಭೇಟಿಯಾಗುವ ಸಾಧ್ಯತೆ ಇರುತ್ತೆ. ಬೇಕಾದರೆ ಎಲ್ಲರ ಫೋನ್‌ ನಂಬರ್‌ ಮತ್ತು ಇಮೇಲ್‌ ಕೊಡ್ಲಾ?”

“ಬೇಡ ಮೋಹನ, ಅದರ ಅಗತ್ಯ ಬೀಳಲ್ಲ.”

“ಏನು ವಿಷಯ ಅಂಬುಜಾ, ಏನೋ ವ್ಯಥೆ ಪಡ್ತಿರೋ ಹಾಗಿದೆ. ಏನಾಯಿತು?”

“ಏನೂ ಇಲ್ಲಪ್ಪ.”

“ನೀನು ಇಷ್ಟಪಟ್ಟರೆ ನಮ್ಮ ಮನೆಗೆ ಹೋಗಿ ಆರಾಮಾಗಿ ಮಾತಾಡಬಹುದು. ಅರೆ ಏನು ಯೋಚಿಸ್ತೀಯಾ? ಈಗ ನಮ್ಮಿಬ್ಬರ ನಡುವೆ ಒಂದು ನಂಬರಿನ ಜಗಳ ಆಗಲ್ಲ ಅಲ್ವಾ?” ಅಂಬುಜಾಗೆ ಜೋರಾಗಿ ನಗು ಬಂತು.

“ನಿನಗೆ ಒಟ್ಟಿಗೆ ಇಷ್ಟೆಲ್ಲಾ ಕಷ್ಟಗಳು ಬರುತ್ತವೆ ಅಂತ ಯಾರು ಯೋಚಿಸಿದ್ದರು? ಪರೀಕ್ಷೆಗೆ 2 ದಿನ ಮೊದಲು ದುರ್ಘಟನೇಲಿ ನಿಮ್ಮ ತಾಯಿ ತಂದೆ ತೀರಿಹೊದರು ಮತ್ತು ವಿದ್ಯಾಭ್ಯಾಸಕ್ಕೆ ನೀನು ನಿನ್ನ ಮಾವನ ಊರಿಗೆ ಹೋದೆ ಅನ್ನುವ ವಿಷಯ ಗೊತ್ತಾಗಿತ್ತು. ವರ್ಲ್ಡ್ ಟ್ರೇಡ್‌ ಸೆಂಟರ್‌ನ ಅಗ್ನಿ ದುರಂತದಲ್ಲಿ ನಿನ್ನ ಗಂಡನೂ ಹೊರಟುಹೋದ ಎಂದು ಗೊತ್ತಾಯಿತು,” ಮೋಹನ ಮತ್ತು ಅವನ ಪತ್ನಿ ಮಧುವಿನ ದನಿಯಲ್ಲಿ ನೋವಿತ್ತು.

“ಅದು ಅಲ್ಲಿಗೆ ಮುಗಿಯಲಿಲ್ಲ ಮೋಹನ್‌, ಮುಂದಿನ ವಾರ ಜಾನ್‌ ಆಸ್ಪತ್ರೇಲಿ ನನ್ನ ಮಗುವಿನ ಆಪರೇಷನ್‌ ಇದೆ. ತನ್ನಪ್ಪ ಈ ಪ್ರಪಂಚದಲ್ಲೇ ಇಲ್ಲ ಅನ್ನುವುದು ಪಾಪ ಅದಕ್ಕೆ ಗೊತ್ತಿಲ್ಲ.”

“ಜಾನ್‌ ಆಸ್ಪತ್ರೇಲಿ….” ಮಧು ಏನೋ ಹೇಳಲು ಹೊರಟಾಗ ಮೋಹನ ಕಣ್ಣು ಸನ್ನೆ ಮಾಡಿ ಮಾತನಾಡದಿರುವಂತೆ ಸೂಚಿಸಿದ.

“ಏನು ತೊಂದರೆ, ಜಾನ್‌ ಮಕ್ಕಳ ಆಸ್ಪತ್ರೇಲಿ ವಿಶೇಷವಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡುತ್ತಾರೆ. ಯಾರು ಅಪರೇಷನ್‌ ಮಾಡ್ತಾರೆ ಅಂತ ಗೊತ್ತಾ? ಅವರನ್ನು ಭೇಟಿ ಆಗಿದ್ದೀಯ?”

“ಬ್ರೇನ್‌ ಟ್ಯೂಮರ್‌, ಜ್ಯೂನಿಯರ್‌ ಡಾಕ್ಟರ್‌ಗಳ ಪ್ರಕಾರ ಸ್ಥಿತಿ ತುಂಬಾ ಬಿಗಡಾಯಿಸಿದೆ. ಆದರೆ ಅಲ್ಲಿ ಕೆಲಸ ಮಾಡುವ ಹೆಚ್ಚಿನ ಭಾರತೀಯ ನರ್ಸ್‌ಗಳು ಈ ಕಾಯಿಲೆಯ ಚಿಕಿತ್ಸೆಯಲ್ಲಿ ಪ್ರಸಿದ್ಧ ತಜ್ಞ ವೈದ್ಯ ಯಮನಾಯಕ್‌ರ ಕೈಗುಣ ಬಹಳ ಚೆನ್ನಾಗಿದೆ ಅಂತ ಧೈರ್ಯ ಹೇಳಿದ್ದಾರೆ. ಅವರು ಮಾಡಿರುವ ಆಪರೇಷನ್‌ಗಳು ನೂರಕ್ಕೆ ನೂರು ಯಶಸ್ವಿಯಾಗಿದೆಯಂತೆ. ನಾನಿನ್ನೂ ಅವರನ್ನು ಭೇಟಿಯಾಗಿಲ್ಲ. ತುರ್ತು ಪರಿಸ್ಥಿತೀಲಿ ಅವರನ್ನು ಕರೆಸಿಕೊಳ್ಳಲಾಗುತ್ತದೆ ಅಥವಾ ಆಪರೇಷನ್‌ ದಿನ ಅವರು ಬಂದು ಬಿಡುತ್ತಾರೆ ಎಂದು ಹೇಳುತ್ತಾರೆ. ನೀನೂ ಡಾಕ್ಟರ್‌ ತಾನೆ? ಅವರು ನಿನಗೆ ಗೊತ್ತಿರಬೇಕು?”

“ನನಗೆ ಅವರ ಪರಿಚಯವಿಲ್ಲ. ಹೆಸರು ಕೇಳಿದ್ದೇನೆ. ಅವರು ವಿಸಿಟಿಂಗ್‌ ಸರ್ಜನ್‌ ಇರಬಹುದು. ನಾನು ವಿಷಯ ತಿಳ್ಕೋತೀನಿ. ಮಗುವಿನ ಹೆಸರೇನು?”

“ರಜನಿ ಪಾಟೀಲ್‌.”

“ನಿನ್ನದು ಪ್ರೇಮ ವಿವಾಹವೇನು?”

“ಹೌದು, ಅದರ ಪರಿಣಾಮವನ್ನು ನಾವು ತಾಯಿ ಮಗಳು ಈಗ ಅನುಭವಿಸುತ್ತಿದ್ದೇವೆ. ನಮ್ಮ ಮದುವೆಗೆ ಇಬ್ಬರ ಕಡೆಯಿಂದಲೂ ಒಪ್ಪಿಗೆ ಇರಲಿಲ್ಲ. ಈಗ ನಮ್ಮನ್ನು ಕರೆಸಿಕೊಳ್ಳಲು ಯಾರೂ ತಯಾರಿಲ್ಲ.”

“ನಿಮ್ಮ ನೆರವಿಗೆ ನಾವಿದ್ದೇವೆ. ಹೆದರಬೇಡಿ,” ಮಧು ಧೈರ್ಯ ತುಂಬಿದಳು.

“ನಿನ್ನ ಸ್ವಾಭಿಮಾನಕ್ಕೆ ಅಡ್ಡಿ ಬರೋದಿಲ್ಲ ಅಂದರೆ ನೀನು ನಿಸ್ಸಂಕೋಚವಾಗಿ ನನ್ನನ್ನು ಹಣದ ಸಹಾಯ ಕೇಳಬಹುದು.”

“ಬೇಡ ಮೋಹನ್‌, ಸದ್ಯಕ್ಕೆ ಬಹುಶಃ ಅದರ ಅವಶ್ಯಕತೆ ಬರೋದಿಲ್ಲ ಅನ್ನಿಸುತ್ತದೆ. ಚಿಕಿತ್ಸೆಯ ಖರ್ಚಿಗೆ ವಿಮಾ ಪಾಲಿಸಿಯಿಂದ ತಗೋಬಹುದು. ನಿಜವಾದ ತೊಂದರೆ ವೀಸಾದ್ದು. ವೀಸಾದ ಅವಧಿ ಮುಂದುವರಿಸುವುದರಲ್ಲಿ ತೊಂದರೆ ಬರಬಹುದು. ದುರ್ಘಟನೆ ನಂತರ ನನ್ನ ಪತಿಯ ಕಂಪನಿ ಮತ್ತು ಇಲ್ಲಿನ ಸರ್ಕಾರದಿಂದ ಪರಿಹಾರ ಧನದ ವಿಷಯ ಸರಿಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ತಿಂಗಳೊಳಗೆ ಆಗದಿದ್ದರೆ ಇಲ್ಲಿಂದ ಬರಿಗೈಲಿ ಹೋಗಬೇಕಾಗುತ್ತದೆ.”

“ಬರಿಗೈಯಲ್ಲಿ ಹೋಗಬೇಕಾದ ಸಂದರ್ಭ ಬರುವುದಿಲ್ಲ. ಆದರೆ ಭಾರತಕ್ಕೆ ಹೋಗಿ ಏನು ಮಾಡ್ತೀಯಾ? ಯಾರ ಆಸರೆ ಇದೆ?”

“ಇವರ ಅನೇಕ ಸ್ನೇಹಿತರು ಇದ್ದಾರೆ. ಅವರು 1 ರೂಮಿನ ಫ್ಲ್ಯಾಟನ್ನು ಗೊತ್ತು ಮಾಡಿದ್ದಾರೆ. ಸ್ವಲ್ಪ ಪ್ರಯತ್ನ ಪಟ್ಟರೆ ಕೆಲಸ ಸಿಗುತ್ತೆ ಅಂತ ಭರವಸೆ ಇದೆ. ಆಯ್ತು ನಾನಿನ್ನು ಹೊರಡಲಾ? ಆಸ್ಪತ್ರೇಲಿ ಮಗಳು ಒಬ್ಬಳೇ ಇದ್ದಾಳೆ. ನಿನ್ನ ಹತ್ತಿರ ತುಂಬಾ ಮಾತನಾಡುವುದು ಇದೆ. ನಿನ್ನ ಮಾತು ಕೇಳಬೇಕು. ನಾನೂ ಮಾತಾಡಬೇಕು. ಆದರೆ ಹೋಗಲೇಬೇಕು.”

“ಹೌದು, ಅನೇಕ ವರ್ಷಗಳ ಚರಿತ್ರೆ ಕೆಲವು ಗಂಟೆಗಳಲ್ಲಿ ಹೇಗೆ ಮುಗಿಯುತ್ತೆ? ಆಪರೇಷನ್‌ ಆಗಿಬಿಡಲಿ. ವರ್ಷಗಳ ಲೆಕ್ಕ ಮಾಡಲು ಆರಾಮವಾಗಿ ಕುಳಿತುಕೊಳ್ಳೋಣ. ನೀನು ಈಗ ಒಬ್ಬಳೇ ಹೋಗಬೇಕಾಗಿಲ್ಲ. ಮಧು ನಿನ್ನನ್ನು  ಆಸ್ಪತ್ರೆಗೆ ಕಾರಿನಲ್ಲಿ ಬಿಟ್ಟುಬರುತ್ತಾಳೆ, ನನಗೆ ಸ್ವಲ್ಪ ಕೆಲಸ ಇದೆ. ಇಲ್ಲದಿದ್ದರೆ ನಾನೇ ಬರುತ್ತಿದ್ದೆ.”

ಆಪರೇಷನ್‌ ದಿನ ಬೆಳಗ್ಗಿನಿಂದಲೇ ಅಂಬುಜಾಳ ಹೃದಯ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಮೋಹನನ ಪತ್ತೆಯೇ ಇರಲಿಲ್ಲ. ಆದರೆ ಮಧು ಬೆಳಗ್ಗೆಯೇ ಬಂದುಬಿಟ್ಟಿದ್ದಳು. ಜ್ಞಾನ ತಪ್ಪಿಸುವ ಇಂಜೆಕ್ಷನ್‌ ಕೊಟ್ಟು ಮಗುವನ್ನು ಆಪರೇಷನ್‌ ಥೀಯೇಟರ್‌ ಒಳಗೆ ಕರೆದುಕೊಂಡು ಹೋಗಲು ಸಿದ್ಧತೆ ನಡೆದಿತ್ತು. ಅಂಬುಜಾ ನರ್ಸ್‌ ಬಳಿ ಇನ್ನೂ ಸ್ವಲ್ಪ ಹೊತ್ತು ತಡೆ ಎಂದು ಹಠ ಮಾಡುತ್ತಿದ್ದಳು. ಆದರೆ ನರ್ಸ್‌ ಆಸ್ಪತ್ರೆ ನಿಯಮಗಳನ್ನು ಅನುಸರಿಸುವುದು ಅನಿವಾರ್ಯವಾಗಿತ್ತು.

“ಅವನ ಸೆಲ್‌ಗೆ ಟ್ರೈ ಮಾಡಿ ನೋಡಿ,” ಅಂಬುಜಾ ಅಧೀರಳಾಗುತ್ತಿದ್ದಳು.

“ನೀನು ಹೇಳುವುದಕ್ಕೆ ಮುಂಚೆಯೇ ಎಷ್ಟೊಂದು ಸಲ ಪ್ರಯತ್ನ ಮಾಡಿದ್ದೀನಿ. ಸೆಲ್ ಆಫ್‌ಮಾಡಿದ್ದಾರೆ ಅನ್ನಿಸುತ್ತೆ. ಚಿಂತೆ ಮಾಡಬೇಡ. ನಾನಿದೀನಲ್ಲಾ…. ರಜನಿಗೆ ಜ್ಞಾನ ಮರುಕಳಿಸುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ನೀನು ಬೇಕಾದರೆ ಮನೆಗೆ ಹೋಗಿಬಿಟ್ಟು ಬಾ. ರಾತ್ರಿಯೆಲ್ಲಾ ನೀನು ನಿದ್ದೆ ಮಾಡಿರಲ್ಲ. ಅಂತ ನನಗೆ ಗೊತ್ತು.”

“ಇಲ್ಲ, ನೀವು ಒಬ್ಬರೇ ಇದೀರಿ. ರಜನೀನ ನೋಡದೆ ಇಲ್ಲಿಂದ ಹೋಗಲು ಮನಸ್ಸು ಬರಲ್ಲ.”

ಆಪರೇಷನ್‌ ಯಶಸ್ವಿಯಾಯಿತು ಎಂದು ಕೇಳಿ ಅಂಬುಜಾ ನೆಮ್ಮದಿಯ ಉಸಿರುಬಿಟ್ಟಳು. ವಾರ್ಡ್‌ನ ಸ್ಟಾಫ್‌ ಅದರಲ್ಲೂ ತನಗೆ ಧೈರ್ಯ ತುಂಬಿದ್ದ ನರ್ಸ್‌ಗಳಿಗೆ ಧನ್ಯವಾದ ಅರ್ಪಿಸಿದಳು. ಇದುವರೆಗೂ ಅಲ್ಲಿಗೆ ಬರದಿದ್ದ ಮೋಹನನ ಮೇಲೆ ಅವಳಿಗೆ ಇನ್ನೂ ಕೋಪವಿತ್ತು. ರಜನಿಯ ಆಪರೇಷನ್‌ ಮಾಡಿದ್ದಕ್ಕೆ ಧನ್ಯವಾದ ಹೇಳಲು ಅಂಬುಜಾ ಸರ್ಜನ್‌ರ ಕೋಣೆಗೆ ಹೋದಾಗ ಅಲ್ಲಿ ಸರ್ಜನ್‌ಕುರ್ಚಿಯಲ್ಲಿ ಮೋಹನ ಕುಳಿತಿದ್ದು ಕಂಡು ಸ್ತಬ್ಧಳಾದಳು.

“ಹಾಗಾದರೆ ನೀನೇನಾ ಯಮ ನಾಯಕ್‌?”

“ಯಮ ನಾಯಕ್‌ ಅಲ್ಲ ಪೆದ್ದಿ. ಎಂ. ನಾಯಕ್‌ ಅಂದರೆ ಮೋಹನ್‌ ನಾಯಕ್‌ ತಿಳೀತಾ?”

“ನೀನು ತುಂಬಾ ಸತಾಯಿಸಿದೆ. ಮೊದಲೇ ಹೇಳಬಾರದಿತ್ತಾ? ನಾನು ಎಷ್ಟು ಚಿಂತೆ ಮಾಡ್ತಿದ್ದೆ ಅನ್ನುವುದು ನನಗೆ ಮಾತ್ರ ಗೊತ್ತು. ಬಾಲ್ಯದಲ್ಲಿ ಮಾಡಿದ್ದ ಜಗಳದ ಸೇಡು ತೀರಿಸಿಕೊಳ್ತಿಲ್ಲ ತಾನೇ ಎಂದು ಅರೆಕ್ಷಣ ಅನ್ನಿಸಿತು.”

“ಯಾಕೆ ಸಿಟ್ಟಾಗ್ತಿಯಾ? ವರ್ಷಗಟ್ಟಲೆ 1 ನಂಬರಿಗಾಗಿ ನೀನು ಮುಖ ಕಿವುಚಿಕೊಂಡು ನನ್ನನ್ನು ಸತಾಯಿಸಿದ್ದೀಯ. ಒಂದು ಸಲ ಜೋರಾಗಿ ನಿನ್ನನ್ನು ಸತಾಯಿಸಿದ್ದರಿಂದ ಲೆಕ್ಕ ಚುಕ್ತಾ ಆಯ್ತು ಅಂದುಕೋ.”

“ನಿಜಾಗಲೂ ನೀನು ತುಂಬಾ ಕೆಟ್ಟವನು. ಹೆಣ್ಣಿನ ಹೊಟ್ಟೆಯಲ್ಲಿ ಯಾವುದೇ ಗುಟ್ಟು ಉಳಿಯಲ್ಲ ಅಂತಾರೆ. ಆದರೆ ಮಧು ಕೂಡ ಎಷ್ಟು ಚೆನ್ನಾಗಿ ಎಲ್ಲಾ ವಿಷಯ ಮುಚ್ಚಿಟ್ಟಳು. ವಾರ್ಡಿನ ಸ್ಟಾಫ್‌ ಅವರಿಗೆ ಗೌರಾವದರ ತೋರಿಸುತ್ತಿದ್ದಾಗಲೂ ನನಗೆ ಯಾವುದೇ ರೀತಿಯ ಅನುಮಾನ ಬರಲಿಲ್ಲ.”

“ರಜನೀಯ ಜಟಿಲವಾದ ಆಪರೇಷನ್‌ ಬಗ್ಗೆ ಚಿಂತಿಸಿ ನಾನು ಎಷ್ಟೋ ರಾತ್ರಿ ನಿದ್ರೆ ಮಾಡಿಲ್ಲ. ಆಪರೇಷನ್‌ ಯಶಸ್ವಿಯಾಗದಿದ್ದರೆ ನಿನಗೆ ಹೇಗೆ ಮುಖ ತೋರಿಸುವುದು ಅಂತ ನನಗೆ ಅನುಮಾನವಿತ್ತು. ವಾಸ್ತವದಲ್ಲಿ ಶಾಲೆಯ ಪರೀಕ್ಷೆಯಂತೆ  ಇದೂ ಒಂದು ತರಹ ಯುದ್ಧವೇ ಅಂಬುಜಾ, ವ್ಯತ್ಯಾಸ ಏನೆಂದರೆ ಇಲ್ಲಿ 1 ನಂಬರಿನ ವ್ಯತ್ಯಾಸಕ್ಕೆ ಯಾರೂ ಬೆಲೆ ಕೊಡೋದಿಲ್ಲ. ನೀನು ಸೋಲುತ್ತೀಯ ಅಥವಾ ಗೆಲ್ಲುತ್ತೀಯ ಅಷ್ಟೆ. ರೋಗಿಯ ಜೀವ ಉಳಿಸಲು ಆಪರೇಷನ್‌ ಮಾಡುವಾಗ ನಾನು 100 ನಂಬರನ್ನೇ ಪಡೆಯಬೇಕು. 1 ನಂಬರಿನ ಸೋಲು ಅಂದರೆ ನೀವು ರೋಗಿಯನ್ನು ಮೃತ್ಯುವಿನ ಬಾಯಿಗೆ ನೂಕಿದ್ದೀರಿ ಅಂತ. ಆದ್ದರಿಂದ ಗುರಿ ಕೇವಲ ಜಯಗಳಿಸುವುದು ಮಾತ್ರ ಆಗಿರುತ್ತದೆ. ಏನು ವಿಷಯ… ನಿನ್ನ ಮುಖ ಇನ್ನೂ ಕೋಪದಿಂದ ಕೆಂಪಾಗಿದೆ. ಈಗಲಾದರೂ ಕೋಪ ಬಿಡು.”

“ನನ್ನ ಮಗಳ ಜೀವ ಉಳಿಸಿದ್ದಕ್ಕೆ ಧನ್ಯವಾದಗಳು. ಅಭಿನಂದನೆಗಳು ಮತ್ತು ಇನ್ನೇನು ಹೇಳಬೇಕೋ ಗೊತ್ತಾಗ್ತಿಲ್ಲ.”

“ಇಷ್ಟು ದೊಡ್ಡ ಕೆಲಸ ಮಾಡಿದ್ದೇನೆ, ಬರೀ ಧನ್ಯವಾದಗಳಾ?”

“ಏನು ಬೇಕು ಹೇಳು. ಏನು ಬೇಕಾದರೂ ಕೇಳಬಹುದು. ಆದರೆ ನನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೇಳು.”

“ಅರೆ, ಕೊಡುವುದಕ್ಕೆ ಮೊದಲೇ `ನನ್ನ ಹತ್ತಿರ ಏನೂ ಇಲ್ಲ’ ಅಂದರೆ ಬೇಡಲು ಧೈರ್ಯ ಎಲ್ಲಿಂದ ಬರುತ್ತೆ? ಇರಲಿ, ಪರವಾಗಿಲ್ಲ. ಕಾಣಿಕೆ ಸಾಲವಾಗಿ ಇರಲಿ, ಆಮೇಲೆ ಕೇಳ್ತೀನಿ. ನೀನೀಗ ರಜನಿ ಹತ್ತಿರ ಹೋಗು. ಇಲ್ಲಿ ಅವಳನ್ನು ನೋಡಿಕೊಳ್ಳಲು ಎಲ್ಲಾ ಅನುಕೂಲ ಇದೆ. ಬೇಕಾದರೆ ಮಧು ಜೊತೆ ಮನೆಗೆ ಹೋಗಿ ವಿಶ್ರಾಂತಿ ತಗೊಂಡು ನಂತರ ಬಾ.”

ಆದಾದ ಮೇಲೆ ಅಂಬುಜಾ ಯಾವ ಕಾಣಿಕೆ ಕೊಡಬೇಕೆಂಬ ಪ್ರಸಕ್ತಿ ಬಂತು.

“ರಾಖಿ!…. ನನಗೆ ರಾಖಿ ಕಟ್ಟು” ಎಂದ ಮೋಹನ್‌.

“ಆದರೆ ಮೋಹನ್‌, ನೀನು ಎಲ್ಲರಿಗೂ ವಿರುದ್ಧವಾಗಿದ್ದವನು. ಈಗ ನನಗೆ ರಾಖಿ ಕಟ್ಟಲು ಹೇಳುತ್ತಿದ್ದೀಯಾ? ಇದೇ ನಿನಗೆ ಸಲ್ಲಬೇಕಾದ ಕಾಣಿಕೆ ಅಂತೀಯ ಬೇರೆ.”

“ಸರಿಯಾಗಿ ಹೇಳ್ತಿದೀಯ ಅಂಬುಜಾ, ಆದರೆ ಸಮಯ ನನ್ನನ್ನು ಬದಲಾಯಿಸಿಬಿಟ್ಟಿದೆ. ನನ್ನ ದೇಶದಿಂದ ದೂರ ಇದ್ದಾಗಲೇ ಈ ಎಲ್ಲಾ ವಿಷಯಗಳ ಮಹತ್ವ ಅರಿವಾಗುವುದು. ಈ ಎಲ್ಲಾ ವಿಷಯಗಳು ನನಗೆ ಬಹಳ ತಡವಾಗಿ ಅರ್ಥವಾಯ್ತಲ್ಲ ಅನ್ನುವುದೇ ಬಹಳ ದುಃಖ.”

“ಈಗ ನೀನು ಅನಾಥೆಯಲ್ಲ ಅಂಬುಜಾ, ಇಷ್ಟು ದೊಡ್ಡ ಸರ್ಜನ್ನರ ಸೋದರಿ,” ಎನ್ನುತ್ತಾ ಮಧು ಅಂಬುಜಾಳ ಕೈಯಲ್ಲಿ ಪ್ಯಾಕೆಟ್‌ಇಟ್ಟಳು.

ಅಂಬುಜಾಳ ಬಾಯಿಂದ ಮಾತು ಹೋರಡಲಿಲ್ಲ. ಕಣ್ಣುಗಳಿಂದ ಆನಂದಾಶ್ರುಗಳು ಉದುರುತ್ತಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ