ಇಂದು ಸಂಗೀತಾಳ ಮನಸ್ಸು ಬಹಳ ಉದಾಸವಾಗಿತ್ತು. ಅವಳು ಸದಾ ಖುಷಿಯಿಂದಿರಲು ಪ್ರಯತ್ನಿಸುತ್ತಿದ್ದಳು. ಆದರೆ 30 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯ ಸರಿಯಾಗಿರಲಿಲ್ಲ ಎಂದು ಎಷ್ಟೋ ಸಲ ಅನಿಸುತ್ತಿತ್ತು. ಅಮ್ಮ ಬಾಲ್ಯದಲ್ಲೇ ತೀರಿಹೋಗಿದ್ದಳು. ಅಪ್ಪ ಶಿವಮೊಗ್ಗದ ಕಾಂಟ್ರ್ಯಾಕ್ಟರ್‌ವರನ ಜೊತೆ ಅತ್ಯಂತ ಅದ್ಧೂರಿಯಾಗಿ ಮದುವೆ ಮಾಡಿದ್ದರು.

ತವರಿನಿಂದ ಗಂಡನ ಮನೆಗೆ ಕಾಲಿಡುತ್ತಲೇ ಆಕೆಗೆ ಅಲ್ಲಿ ಮನಸ್ಸೇ ನಿಲ್ಲಲಿಲ್ಲ. ತವರಿನಲ್ಲಿದ್ದ ಸ್ವಾತಂತ್ರ್ಯ ತನ್ನ ಮನಸ್ಸಿಗೆ  ಬಂದಂತೆ ಇರುತ್ತಿದ್ದ ಸಂಗೀತಾಳಿಗೆ ಗಂಡನ ಮನೆಯ ಜವಾಬ್ದಾರಿಯಿಂದ ಕೂಡಿದ ಜೀವನ ಒಗ್ಗಲಿಲ್ಲ. ಅವಳು ಮೇಲಿಂದ ಮೇಲೆ ಬ್ಯಾಗ್‌ ಹಿಡಿದುಕೊಂಡು ಗಂಡನ ಮನೆಯಿಂದ ತವರಿಗೆ ಬರುತ್ತಿದ್ದಳು. ಅಣ್ಣ ಅತ್ತಿಗೆ ಇಬ್ಬರೂ ನೌಕರಿ ಮಾಡುತ್ತಿದ್ದರು. ಅವರು ಕೂಡ ಹೆಚ್ಚಿಗೇನೂ ಕೇಳದೆ ಸುಮ್ಮನಿದ್ದು ಬಿಡುತ್ತಿದ್ದರು. ಅವರ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಸಂಗೀತಾ ತವರಿಗೆ ಬಂದದ್ದು ಅನುಕೂಲ ಅವರಿಗೆ ಆಗಿತ್ತು.

ಗಂಡನಿಗೆ ಸಮಯಕ್ಕೆ ತಕ್ಕಂತೆ ಕೆಲಸ ಮಾಡುವುದು, ಸಂಬಂಧಿಕರು ಬರುವುದು, ಹೋಗುವುದು, ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದು ಆಕೆಗೆ ಕಷ್ಟಕರವಾಗಿ ಪರಿಣಮಿಸುತ್ತಿತ್ತು. ಇಲ್ಲಿ ಅಣ್ಣ ಅತ್ತಿಗೆ ಇಬ್ಬರೂ ಮುಂಜಾನೆಯೇ ಬ್ಯಾಂಕಿಗೆ ಹೊರಟು ಹೋಗುತ್ತಿದ್ದರು. ಇಡೀ ಮನೆಗೆ ಆಕೆಯೊಬ್ಬಳದೇ ರಾಜ್ಯಭಾರ. ಅದೇ ರೀತಿ 23 ವರ್ಷ ಕಳೆಯಿತು. ಅದೊಂದು ದಿನ ಆಕೆ ಗಂಡನೊಂದಿಗೆ ಮುನಿಸಿಕೊಂಡು ಅಣ್ಣನ ಮನೆಗೆ ಖಾಯಂ ಆಗಿ ವಾಪಸ್ಸಾದಳು. ಅಷ್ಟೊತ್ತಿಗೆ ಅಪ್ಪ ತೀರಿಕೊಂಡಿದ್ದರು. ಅಪ್ಪನ ಹಾಗೆ ಅಣ್ಣ ಕೂಡ ಆಕೆಗೆ ಏನೂ ಕೇಳುತ್ತಿರಲಿಲ್ಲ. ಅಂದಿನಿಂದ ಈವರೆಗೆ ಅಂದರೆ ತನ್ನ 53ನೇ ವಯಸ್ಸಿನ ತನಕ ಆಕೆಗೆ ತವರುಮನೆಯೇ ಎಲ್ಲ ಆಗಿದೆ. ಅವರಂತೆಯೇ ನಡೆಯುವುದು ಆಕೆ ಜೀವನವಾಗಿಬಿಟ್ಟಿದೆ. ಆದರೆ ಒಮ್ಮೊಮ್ಮೆ ಕೆಲವು ಮಾತುಗಳು ಆಕೆಗೆ ಒಳಗೊಳಗೆ ನೋವು ತರಿಸುತ್ತದೆ.

ಹೇಳಿಕೊಳ್ಳಲು ನಮ್ಮವರು….

ಸೀಮಾ ಕೂಡ ಗಂಡನ ಮನೆ ಬಿಟ್ಟು ತವರಿಗೆ ಬಂದು 25 ವರ್ಷವಾಗಿದೆ. ಆಕೆ ತವರಿಗೆ ಬಂದಾಗ ಅಪ್ಪ ಅಮ್ಮ ಜೀವಿತರಾಗಿದ್ದರು. ಗಂಡನ ಮನೆಯಿಂದ ಬಂದ ಆಕೆಯನ್ನು ಮನಃಪೂರ್ಕವಾಗಿ ಸ್ವಾಗತಿಸಿದ್ದರು. ಅಪ್ಪ ಅಮ್ಮ ತೀರಿಹೋದ ನಂತರ ಅಣ್ಣ ಅತ್ತಿಗೆಯ ಸಹಾಯ ಸಹಕಾರದಿಂದ ತಾನು ಹಾಗೂ ಇಬ್ಬರು ಮಕ್ಕಳ ಜೀವನ ನಡೆಸುವಂತಾಗಿದೆ. ಆಕೆಗೆ ಬ್ಯಾಂಕ್‌ನೌಕರಿ ಇರುವ ಕಾರಣದಿಂದ ಆರ್ಥಿಕವಾಗಿ ಏನೂ ತೊಂದರೆಯಾಗಿಲ್ಲ. ಆದರೆ ಸಮಾಜ, ಸಂಬಂಧಿಕರು ಮತ್ತು ಅತ್ತಿಗೆಯ ಚುಚ್ಚು ಮಾತುಗಳು ಆಕೆಯ ಅಂತರಂಗವನ್ನು ನೋಯಿಸುತ್ತವೆ. ಆದರೆ ಇದು ತನ್ನ ವಾಸ್ತವ, ಇದನ್ನು ಬದಲಿಸಲು ಆಗುವುದಿಲ್ಲ ಎಂದು ಆಕೆ ಸುಮ್ಮನಿದ್ದಾಳೆ.

ರಶ್ಮಿ ಮದುವೆಯಾಗಿ ಗಂಡನಮನೆಗೆ ಹೋದಾಗ ಅಲ್ಲಿನ ವಾತಾವರಣ ತವರಿಗಿಂತ ಭಿನ್ನವಾಗಿರುವುದು ಆಕೆಯ ಗಮನಕ್ಕೆ ಬಂತು. ತವರಿನಲ್ಲಿ ಎಲ್ಲರೂ ಸ್ವತಂತ್ರ ಮನೋಭಾವದವರಾಗಿದ್ದರು. ಆದರೆ ಇಲ್ಲಿ ಪರತಂತ್ರದ ವಾತಾರಣವಿತ್ತು. ಸದಾ ಸೆರಗು ಹೊದ್ದುಕೊಂಡು ಇರಬೇಕಾಗುತ್ತಿತ್ತು. ದೊಡ್ಡವರ ಎದುರು ಮಾತನಾಡುವ ಸ್ವಾತಂತ್ರ್ಯ ಇರಲಿಲ್ಲ. ಇಂತಹ ವಾತಾವರಣದಲ್ಲಿ ಆಕೆಗೆ ಉಸಿರುಗಟ್ಟಿದಂತಾಗುತ್ತಿತ್ತು. ಇಂತಹದರಲ್ಲಿ ಆಕೆಗೆ ಗಂಡನಿಂದ ಅಂತಹ ಇಂತಹ ಮಾತುಗಳನ್ನು ಕೇಳಬೇಕಾಗಿ ಬರುತ್ತಿತ್ತು. ಇದೆಲ್ಲದರಿಂದ ರೋಸಿಹೋದ ಆಕೆ ಒಂದು ದಿನ ತನ್ನ ಸೂಟ್‌ಕೇಸ್‌ ಎತ್ತಿಕೊಂಡು ತವರಿಗೆ ಬಂದೇಬಿಟ್ಟಳು. ಅಮ್ಮ ಆಕೆಗೆ ಸಾಕಷ್ಟು ತಿಳಿಸಿ ಹೇಳಿದಳು. ಯೌವನದ ಉತ್ಸಾಹ ಮತ್ತು ಪರಿಜನರ ಬೆಂಬಲ ಆಕೆಗೆ ತನ್ನ ಬಗೆಗೆ ಯೋಚಿಸಲು ಅವಕಾಶವೇ ಸಿಗಲಿಲ್ಲ. ಈಗ ಆಕೆಗೆ 45 ವರ್ಷ. ಆದರೆ ತನ್ನ ನೋವನ್ನು ಈಗ ಯಾರ ಮುಂದೆ ಹೇಳಿಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಅಣ್ಣ ತಮ್ಮಂದಿರು, ಅತ್ತಿಗೆಯರು, ಅವರ ಮಕ್ಕಳು ತಮ್ಮದೇ ಆದ ಲೋಕದಲ್ಲಿ ವ್ಯಸ್ತರಾಗಿದ್ದಾರೆ.

ತಿಳಿವಳಿಕೆ ಇಲ್ಲದಾಗ ಇಟ್ಟ ಹೆಜ್ಜೆ

ಮದುವೆಯ ಬಳಿಕ ಅತ್ತೆ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಇರುವ ಕಾರಣದಿಂದ ಗಂಡನ ಜೊತೆಗೆ ಮನಸ್ತಾಪ ಅಥವಾ ತವರಿನ ಮೋಹ ಬಿಟ್ಟುಕೊಡದೇ ಇರುವ ಕಾರಣದಿಂದ ಆವೇಶದಲ್ಲಿ ಗಂಡನ ಮನೆ ತೊರೆದು ತವರಿಗೆ ಮರಳುವುದು ಈಚೆಗೆ ಸಾಮಾನ್ಯ ಎಂಬಂತಾಗಿದೆ. ಮೊದಲು ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಹಾಗೊಮ್ಮೆ ಹುಡುಗಿಯೊಬ್ಬಳು ತಿಳಿವಳಿಕೆಯಿಲ್ಲದೆ ಈ ರೀತಿ ಮಾಡಿದ್ದರೆ ತಂದೆ ತಾಯಿ ಅಥವಾ ಸಂಬಂಧಿಕರು ಇಬ್ಬರಲ್ಲಿ ಹೊಂದಾಣಿಕೆ ಮೂಡಿಸುವುದರ ಮೂಲಕ ಒಡೆಯುತ್ತಿರುವ ಮನೆಯನ್ನು ಒಂದೂಗೂಡಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗ ಹುಡುಗಿಯ ತಂದೆ ತಾಯಿಯರು ಹೇಳುವುದು, ನಿನ್ನ ಗಂಡನ ಮನೆಯವರು ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ ಎಂದು ಹೇಳುವುದರ ಮೂಲಕ ಮಗಳಿಗೆ ಸಾಥ್‌ಕೊಡುತ್ತಾರೆ. ಅದರಿಂದಾಗಿ ಸಮಸ್ಯೆ ಮತ್ತಷ್ಟು ಉಗ್ರರೂಪ ಪಡೆದುಕೊಳ್ಳುತ್ತದೆ. ಸಾಮಾನ್ಯ ಜನರ ಹೊರತಾಗಿ ಸಿನಿಮಾದವರು ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ. ಹೆಸರಾಂತ ನಟಿ ಬಬಿತಾ ಗಂಡ ರಣಧೀರ ಕಪೂರ್‌ ಜೊತೆಗಿನ  ಮನಸ್ತಾಪದಿಂದಾಗಿ ತನ್ನ ತವರಿಗೆ ಮರಳಿದ್ದಳು. ಆಗ ಆಕೆಯ ಜೊತೆ ಕರಿಷ್ಮಾ ಹಾಗೂ ಕರೀನಾ ಕೂಡ ಇದ್ದರು. ನೌಕರಿ ಮಾಡಿ ತನ್ನ ಪುತ್ರಿಯರನ್ನು ಸಮರ್ಥರನ್ನಾಗಿ ಬೆಳೆಸಿದ್ದಳು.

ಹೆಜ್ಜೆ ಹೆಜ್ಜೆಗೂ ಸಂಘರ್ಷ

ಕರಿಷ್ಮಾ ಕಪೂರ್‌ಳ ಮದುವೆ ಸಂಜಯ್‌ ಕಪೂರ್‌ಜೊತೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತ್ತು. ಕೆಲವು ವರ್ಷಗಳವರೆಗೆ ಜೊತೆ ಜೊತೆಗೆ ಇದ್ದು ತನ್ನ 2 ಮಕ್ಕಳೊಂದಿಗೆ ತವರಿಗೆ ಮರಳಿದ್ದಳು. ಆ ಕಾಲದ ಹೆಸರಾಂತ ನಟಿ ಪೂನಂ ದಿಲ್ಲೋನ್‌ಮನಸ್ತಾಪದಿಂದಾಗಿ ಗಂಡ ಅಶೋಕ್‌ ಟಕೇರಿಯಾ ಮನೆ ತೊರೆದು ತನ್ನ ಸೋದರಿಯ ಮನೆಗೆ ಬಂದಳು. ಬಳಿಕ ಹಾಂಕಾಂಗ್‌ನ ಉದ್ಯಮಿಯ ಜೊತೆಗೆ ಮದುವೆ ಮಾಡಿಕೊಂಡು ಹೊರಟುಹೋದಳು.

ಮದುವೆಯ ಬಳಿಕ ಮಹಿಳೆಗೂ ಪುರುಷನಿಗೂ ಹೊಸದೊಂದು ಜೀವನ ಶುರುವಾಗುತ್ತದೆ. ಜೀವನದ ಈ ಹಂತ ಅವರಿಗೆ ಜವಾಬ್ದಾರಿ, ಹೊಸ ಸಂಬಂಧಗಳು ಮತ್ತು ಹೊಸ ಸವಾಲುಗಳೊಂದಿಗೆ ಪರಿಚಿತರನ್ನಾಗಿ ಮಾಡುತ್ತದೆ. ಇದಕ್ಕೆ ಕಾರಣವೇನೆಂದರೆ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಹಿನ್ನಲೆಯಿಂದ ಬಂದು ಅಲ್ಲಿ ಜೊತೆಯಾಗುತ್ತಾರೆ.

ಅಲ್ಲಿಗೆ ಬರುವ ಹೊತ್ತಿಗೆ ಅವರ ವಿಚಾರಗಳನ್ನು ಆಸಕ್ತಿ ಅನಾಸಕ್ತಿ, ಆದ್ಯತೆಗಳಲ್ಲಿ ವ್ಯತ್ಯಾಸ ಇರುವುದು ಸ್ವಾಭಾವಿಕ. ಹಾಗಾಗಿ ಆರಂಭದಿಂದಲೇ ಹೊಂದಾಣಿಕೆ ಮಾಡಿಕೊಳ್ಳುವುದು, ಪರಸ್ಪರ ಅರ್ಥ ಮಾಡಿಕೊಳ್ಳುವುದು ಅತ್ಯವಶ್ಯ. ಅಷ್ಟೇ ಅಲ್ಲ, ಕುಟುಂಬದ ಇತರ ಸದಸ್ಯರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಮಹಿಳೆ ಕುಟುಂಬದ ಕೇಂದ್ರಬಿಂದು. ಅವಳ ಮೇಲೆ ಹೊಣೆಗಾರಿಕೆಯ ಭಾರ ಅಧಿಕವಾಗಿರುತ್ತದೆ. ಆದರೆ ಒಂದಿಷ್ಟು ತಿಳಿವಳಿಕೆ ಮತ್ತು ಧೈರ್ಯದಿಂದ ಕಾರ್ಯಪ್ರವೃತ್ತರಾದರೆ ಪರಿಸ್ಥಿತಿಗಳು ನಮಗೆ ತಕ್ಕಂತೆ ಅನುಕೂಲಕರವಾಗಿ ಪರಿಣಮಿಸುತ್ತವೆ.

ಅಸಹನೀಯ ಜೀವನ

ಎಷ್ಟೋ ಸಲ ಭಾವಾವೇಶದಲ್ಲಿ ಮಹಿಳೆಯರು ಗಂಡನ ಮನೆ ಬಿಟ್ಟು ಬರುತ್ತಾರೆ. ತವರುಮನೆಯರು ಅಷ್ಟೇ ಸಕಾರಾತ್ಮಕ ಮನಸ್ಸಿನಿಂದ ಆಕೆಯನ್ನು ಬರ ಮಾಡಿಕೊಳ್ಳುತ್ತಾರೆ. ಆದರೆ ಕಾಲ ಕ್ರಮೇಣ ತವರುಮನೆಯರ ವರ್ತನೆ ಬದಲಾಗುತ್ತದೆ. ಒಂದು ವೇಳೆ ತವರಿಗೆ ಬಂದ ಮಗಳು ಸ್ವಾವಲಂಬಿ ಆಗಿರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಏಕೆಂದರೆ ಆಕೆ ಇಂತಹ ಸ್ಥಿತಿಯಲ್ಲಿ ತನ್ನ ಹಾಗೂ ತನ್ನ ಮಕ್ಕಳ ದೈನಂದಿನ ಜೀವನ ನಿರ್ವಹಣೆಗಾಗಿ ತನ್ನ ತಂದೆತಾಯಿ ಅಥವಾ ಅಣ್ಣಂದಿರ ಕಡೆ ನೋಡುತ್ತಿರಬೇಕಾಗುತ್ತದೆ. ಎಷ್ಟೋ ಸಲ ಅಣ್ಣ ಅತ್ತಿಗೆ ಮತ್ತು ತಂಗಿಯರು ಮಕ್ಕಳು ಮಕ್ಕಳಲ್ಲಿಯೇ ಭೇದಭಾವ ಮಾಡಲು ಶುರು ಮಾಡುತ್ತಾರೆ. ಅದು ಯಾವುದೇ ಒಬ್ಬ ಮಹಿಳೆಗೆ ಅಸಹನೀಯ ನೋವನ್ನುಂಟು ಮಾಡುತ್ತದೆ. ಅಂತಹ ಜೀವನ ಆಕೆಗೆ ಕಬ್ಬಿಣದ ಕಡಲೆ ಎಂಬಂತೆ ಭಾಸವಾಗುತ್ತದೆ.

ಮಕ್ಕಳ ಮೇಲೆ ದುಷ್ಪರಿಣಾಮ

ಒಬ್ಬ ಮಹಿಳೆ ಮಕ್ಕಳೊಂದಿಗೆ ತವರಿಗೆ ಬಂದಾಗ ತನ್ನ ಜೀವನದ ಜೊತೆ ಜೊತೆಗೆ ಮಕ್ಕಳ ಜೀವನದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಎಷ್ಟೋ ಸಲ ಮಕ್ಕಳು ತನ್ನ ಸೋದರ ಮಾವನ, ಚಿಕ್ಕಮ್ಮ, ದೊಡ್ಡಮ್ಮರ ಮಕ್ಕಳನ್ನು ತಮ್ಮ ತಂದೆ ತಾಯಿಯರೊಂದಿಗೆ ಖುಷಿಯಿಂದಿರುವುದನ್ನು ನೋಡಿ ತಾನೇಕೆ ಅಪ್ಪನ ಜೊತೆ ಇಲ್ಲ ಎಂದು ಒಳಗೊಳಗೆ ದುಃಖಿಸುತ್ತದೆ. ಕೆಲವೊಮ್ಮೆ ಖಿನ್ನತೆಗೂ ಜಾರುತ್ತಾರೆ. ಯಾವುದೇ ಮಗುವಿನ ಸಂಪೂರ್ಣ ಬೆಳವಣಿಗೆಗೆ ಅಮ್ಮನ ಜೊತೆಜೊತೆಗೆ ಅಪ್ಪನ ನಿಕಟತೆಯ ಅವಶ್ಯಕತೆ ಇರುತ್ತದೆ.

ಸಾಮಾಜಿಕ ಸ್ಥಿತಿ

ಭಾರತೀಯ ಸಮಾಜ ಪುರುಷ ಪ್ರಧಾನವಾಗಿದೆ. ಇಂದು ನಗರ ಪ್ರದೇಶದಲ್ಲಿ ಅನೇಕ ಮಹಿಳೆಯರು ಏಕಾಂಗಿಯಾಗಿ ವಾಸಿಸುತ್ತಾರೆ. ಆದರೆ ಮದುವೆಯ ಬಳಿಕ ತವರಿನಲ್ಲಿಯೇ ವಾಸಿಸುವ ಮಹಿಳೆಯರನ್ನು ಸಂದೇಹದ ದೃಷ್ಟಿಯಿಂದ ನೋಡಲಾಗುತ್ತದೆ. ಎಷ್ಟೋ ಸಲ ಅಕ್ಕಪಕ್ಕದ ಮಹಿಳೆಯರು ಇಂತಹ ಮಹಿಳೆಯರನ್ನು ತಮ್ಮಿಂದ ದೂರ ಇಡುತ್ತಾರೆ. ಏಕೆಂದರೆ ಆಕೆ ತನ್ನ ಪತಿಯ ಮೇಲೆ ಕಣ್ಣು ಹಾಕದಿರಲಿ ಎಂದು. ಇದರ ಹೊರತಾಗಿ ಪುರುಷರ ಕಾಮುಕ ದೃಷ್ಟಿಗೂ ಅವರು ಸಿಲುಕುತ್ತಾರೆ. ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಅವರು ಅನಾಥರು ಎಂಬಂತೆ ನೋಡಿ ಪುರುಷರು ಕರುಣೆ ತೋರಿಸುತ್ತಾರೆ.

ಸ್ವಜೀವನದ ಮೇಲೂ ಪರಿಣಾಮ

ಮದುವೆಯ ಬಳಿಕ ಒಂದು ಹಂತದತನಕ ತವರಿನವರ ಬೆಂಬಲ ಸಿಕ್ಕೇ ಸಿಗುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲಿ ನಿಮ್ಮೊಂದಿಗೆ ಕೈ ಜೋಡಿಸುವಂತಹ ಸಂಗಾತಿ ದೊರೆತಾಗ ತವರಿನವರು ಕೂಡ ನಿಮಗೆ ಸಾಕಷ್ಟು ಸಹಾಯ ಮಾಡುತ್ತಾರೆ. ಆದರೆ ಜೀವನದಲ್ಲಿ ಎಂತಹ ಕೆಲವು ಸಂದಿಗ್ಧ ಸಂದರ್ಭಗಳು ಬರುತ್ತವೆಯೆಂದರೆ, ಮಕ್ಕಳೊಂದಿಗೆ ನೀವು ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ನೀವು ಏಕಾಂಗಿಯಾಗಿಯೇ ಎದುರಿಸಬೇಕಾಗುತ್ತದೆ. ಹೀಗಾಗಿ ತಮ್ಮ ಕುಟುಂಬದವರನ್ನು ಬಿಟ್ಟು ತವರಿನಲ್ಲಿ ಬಂದು ವಾಸಿಸುವ ಮಹಿಳೆಯರು ಮಾನಸಿಕವಾಗಿ ಕುಗ್ಗುವುದರ ಜೊತೆಗೆ ಖಿನ್ನತೆ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅನಿಶ್ಚಿತ ಭವಿಷ್ಯ

ಅದೊಂದು ಹಂತದಲ್ಲಿ ಮಕ್ಕಳಿಗೆ ತಮ್ಮದೇ ಆದ ಒಂದು ಜೀವನ ಆರಂಭವಾಗುತ್ತದೆ. ಅವರು ಅದರಲ್ಲಿ ತಲ್ಲೀನರಾಗಿಬಿಡುತ್ತಾರೆ. ನೀವು ಅತ್ತ ಅತ್ತೆ ಮನೆಯಲ್ಲೂ ಇಲ್ಲ, ಇತ್ತ ತವರಮನೆಯಲ್ಲೂ ಇಲ್ಲದಂತಹ ಸ್ಥಿತಿಯಲ್ಲಿ ಇದ್ದರೆ, ಮಕ್ಕಳ ಭವಿಷ್ಯ ಅಯೋಮಯವಾಗುತ್ತದೆ. ತವರುಮನೆಯವರು ಕೂಡ ನಿಮಗಾಗಿ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಗಂಡನ ಜೊತೆಗೆ ನೀವಿದ್ದರೆ ನಿಮ್ಮನ್ನು ನೀವು ಸುರಕ್ಷಿತ ಎಂದು ಭಾವಿಸುತ್ತೀರಿ. ಇಂದಿನ ಮಕ್ಕಳು ತಮ್ಮ ತಂದೆ ತಾಯಿಯ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಹೀಗಾಗಿ ಅವರ ಜೀವನದಲ್ಲಿ ನಿಮಗೆಲ್ಲಿ ಸ್ಥಾನ ಸಿಗಲು ಸಾಧ್ಯ? ಗಂಡನ ಮನೆಯೇ ನಿಮ್ಮ ನಿಜವಾದ ಮನೆ. ಅಲ್ಲಿ ಗಂಡ ಇಲ್ಲದಿದ್ದಾಗ್ಯೂ ನೀವು ನೆಮ್ಮದಿಯಿಂದ ಜೀವನ ಸಾಗಿಸಬಹುದು.

ಆರ್ಥಿಕ ಸಂಕಷ್ಟ

ವಿವಾಹಿತ ಮಹಿಳೊಬ್ಬಳು ಗಂಡನ ಮನೆ ತೊರೆದು ತವರಿಗೆ ಬಂದುಬಿಟ್ಟರೆ ಆಕೆಗೆ ಎದುರಾಗುವ ಮೊದಲ ಅಡೆತಡೆಯೆಂದರೆ ಆರ್ಥಿಕತೆಯಾಗಿರುತ್ತದೆ. ತನ್ನ ದೈನಂದಿನ ಜೀವನದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸದಾ ತವರುಮನೆಯರ ಮೇಲೆ ಅವಲಂಬಿಸಿರಬೇಕಾಗುತ್ತದೆ. ಅನಾರೋಗ್ಯದ ಸಂದರ್ಭದಲ್ಲೂ ಆಸ್ಪತ್ರೆಗೆ ಹೋಗಬೇಕೆಂದರೆ ಅವರ ಮರ್ಜಿಗಾಗಿ ಕಾಯಬೇಕಾಗುತ್ತದೆ.

ಒಂದು ವೇಳೆ ಅವಳು ಆರ್ಥಿಕವಾಗಿ ಸಬಲಳಾಗಿದ್ದರೆ, ತವರಿನವರ ಕೆಲವು ತುರ್ತು ಆರ್ಥಿಕ ಅಗತ್ಯತೆಗಳನ್ನು ಪೂರೈಸಬೇಕಾಗುತ್ತದೆ. ಕೆಲವೊಂದು ಮನೆಗಳಲ್ಲಿ ತನರಿಗೆ ಬಂದ ಮಗಳ ಸಂಬಳದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಸಿನಿಮಾದವರ ವಿಷಯವೇ ಬೇರೆ. ಅವರು ಎರಡನೇ ಮದುವೆಯನ್ನು ಸುಲಭವಾಗಿ ಮಾಡಿಕೊಳ್ಳುತ್ತಾರೆ. ಆದರೆ ಭಾರತೀಯ ಸಮಾಜದಲ್ಲಿ ಎರಡನೇ ಮದುವೆ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಆಕೆಗೆ ಚಿಕ್ಕ ಮಗುವೇನಾದರೂ ಇದ್ದರೆ, ಮಗುವನ್ನು ಮದುವೆಯಾಗುವ ವ್ಯಕ್ತಿ ಸ್ವೀಕರಿಸುತ್ತಾನೊ ಇಲ್ಲವೋ ಎಂಬ ಆತಂಕ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯನ್ನೇ ತಪ್ಪಿಸತ್ಥೆ ಎಂದು ಭಾವಿಸಲಾಗುತ್ತದೆ. ಆಕೆ ತನ್ನ ಮೊದಲನೇ ಪತಿ ಜೊತಿಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡಿರಲಿಕ್ಕಿಲ್ಲ ಎಂದೆಲ್ಲ ಮಾತನಾಡಿಕೊಳ್ಳುತ್ತಾರೆ. ಮಹಿಳೆಯರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವವರು ಪ್ರಮುಖವಾಗಿ ಮಹಿಳೆಯರೇ ಆಗಿರುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ. ಆದರೆ ಈ ಯಾವ ಕೊಂಕು ಮಾತುಗಳು ಪುರುಷರ ಬಗ್ಗೆ ಕೇಳಿ ಬರುವುದಿಲ್ಲ.

ಒಮ್ಮೊಮ್ಮೆ ಗಂಡನ ಮನೆಯ ಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗಿರುತ್ತದೆ ಎಂದರೆ ಆಕೆ ಗಂಡನ ಮನೆ ತೊರೆದು ತವರಿಗೆ ಬರುವುದು ಅನಿವಾರ್ಯವಾಗುತ್ತದೆ. ಚಿಕ್ಕಪುಟ್ಟ ಕಾರಣಗಳನ್ನು, ತಪ್ಪುಗಳನ್ನು ನಿರ್ಲಕ್ಷಿಸಿ ಗಂಡಹೆಂಡತಿ ಇಬ್ಬರೂ ವೈವಾಹಿಕ ಜೀವನದ ಆನಂದ ಪಡೆಯುವುದರಲ್ಲಿ ಜೀವನದ ಸುಖ ಅಡಗಿದೆ. ವೈವಾಹಿಕ ಜೀವನವನ್ನು ಉಳಿಸಿಕೊಂಡು ಹೋಗಲು ಚಿಕ್ಕಪುಟ್ಟ ಹೊಂದಾಣಿಕೆ ಮತ್ತು ಒಂದಿಷ್ಟು ತ್ಯಾಗ ಕೂಡ ಅತ್ಯಗತ್ಯ. ಅದರಲ್ಲಿಯೇ ನಿಮ್ಮ ವೈವಾಹಿಕ ಜೀವನದ ನೆಮ್ಮದಿ ಇದೆ.

– ಪ್ರತಿಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ