ಕಥೆ – ವಿದ್ಯಾ ಶೇಖರ್‌

ಕಬ್ಬನ್‌ಪಾರ್ಕಿಗೆ ತನ್ನ ಮನೆಯವರ ಜೊತೆ ಬಂದಿದ್ದ ಸತೀಶ್‌ಗೆ ನೀತಾಳನ್ನು ಪುಟ್ಟ ರಾಹುಲ್‌ ಪರಿಚಯ ಮಾಡಿಸಿದ. ರಾಹುಲ್‌ನ ಜೊತೆ ಫುಟ್‌ಬಾಲ್ ಆಡುತ್ತಾ ಇಬ್ಬರೂ ಗೆಳೆಯರಾಗಿದ್ದರು. ಸ್ವಲ್ಪ ಹೊತ್ತಿನ ನಂತರ ಸತೀಶನ ಇಬ್ಬರು ಮಕ್ಕಳು ಸುರಭಿ ಮತ್ತು ಶಿಲ್ಪಾ ಕೂಡಾ ಆಟದಲ್ಲಿ ಸೇರಿಕೊಂಡರು.

ರಾಹುಲ್ ಅವರನ್ನು ತನ್ನ ತಾಯಿ ನೀತಾ ಮತ್ತು ಅಜ್ಜಿ ಸುಮಿತ್ರಾರಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋದ. ಶಿಲ್ಪಾ ತನ್ನ ತಾಯಿ ಮೀನಾಳನ್ನು ತಮ್ಮ ಬಳಿ ಬರುವಂತೆ ಕರೆದಳು. ಮೂವರು ಮಕ್ಕಳು ಹಣ್ಣು ತಿಂದು ಮತ್ತೆ ಆಟವಾಡಲು ಓಡಿದರು. ದೊಡ್ಡವರು ತಿಂಡಿ ತಿನ್ನುತ್ತಾ ತಮ್ಮ ಪರಿಚಯವನ್ನು ಹೆಚ್ಚಿಸಿಕೊಳ್ಳುತ್ತಾ ಮಾತಿನಲ್ಲಿ ಮಗ್ನರಾದರು.

ಆ ದಿನದ ಈ ಪ್ರಥಮ ಭೇಟಿಯು 30 ವರ್ಷದ ವಿಧವೆ ನೀತಾ ಮತ್ತು 38 ವರ್ಷದ ಸತೀಶನ ನಡುವೆ ಭದ್ರವಾದ ಪ್ರೇಮ ಸಂಬಂಧಕ್ಕೆ ಕಾರಣವಾಗುತ್ತದೆಂದು ಯಾರಿಗೂ ತಿಳಿದಿರಲಿಲ್ಲ.

ಇದು ಮೊದಲ ನೋಟದಲ್ಲಿ ಪ್ರೇಮ ಉಂಟಾಗುವ ವಿಷಯವಾಗಿರಲಿಲ್ಲ. ಪರಸ್ಪರ ಇಷ್ಟವಾಗಲು ಸ್ನೇಹದಲ್ಲಿ ಬದಲಾಗಲು ಬಹಳ ಸಮಯ ತೆಗೆದುಕೊಂಡಿತು.

ರಾಹುಲ್‌ನಿಗೆ ಧೂಳಿನ ಅಲರ್ಜಿ ಆಗಾಗ ಕಾಡುತ್ತಿತ್ತು. ಅವನಿಗೆ ತನ್ನ ಬಾಲ್ಯದ ಗೆಳೆಯ ಡಾ. ಅರುಣನ ಬಳಿ ಚಿಕಿತ್ಸೆ ಕೊಡಿಸುವ ಜವಾಬ್ಧಾರಿಯನ್ನು ಸತೀಶ ಅಂದೇ ವಹಿಸಿಕೊಂಡಿದ್ದ. ನೀತಾ ಮತ್ತು ಸತೀಶ್‌ ಭೇಟಿಯಾಗುವುದು ಈ ರೀತಿ ಆರಂಭವಾಯಿತು.

ಮೂರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಪತಿ ಸಾವಿಗೀಡಾದ ನಂತರ ನೀತಾ ಮರುಮದುವೆಯಾಗುವುದಿಲ್ಲವೆಂದು ನಿರ್ಧರಿಸಿದ್ದಳು. ಆದರೆ ಒಳ್ಳೆ ಮನಸ್ಸಿನ ನಂಬಿಕೆಗೆ ಅರ್ಹನಾದ ಪುರುಷ ಮಿತ್ರನ ಅಗತ್ಯವನ್ನು ಅವಳ ಮನಸ್ಸು ಕಂಡುಕೊಂಡಿತ್ತು. ಈಗ ಸತೀಶನ ಸ್ನೇಹವಾದ ಮೇಲೆ ಪ್ರತಿ ಭೇಟಿಯಲ್ಲೂ, ಅವಳು ಮನಸ್ಸು ಬಿಚ್ಚಿ ಮಾತನಾಡತೊಡಗಿದಳು.

ಸತೀಶ ಕುಟುಂಬದ ಜವಾಬ್ದಾರಿಗಳನ್ನು ಹೊರುತ್ತಾ ಯಾಂತ್ರಿಕ ಜೀವನ ನಡೆಸುತ್ತಿದ್ದ. ಆಫೀಸಿನಲ್ಲೂ ಒಂದಲ್ಲ ಒಂದು ಸಮಸ್ಯೆ ಬಾಯ್ದೆರೆದುಕೊಂಡು ನಿಲ್ಲುತ್ತಿತ್ತು. ಸಹಾನುಭೂತಿ ತೋರುವವರೂ ಇರಲಿಲ್ಲ. ಧನ್ಯವಾದಗಳನ್ನು ಹೇಳುವವರೂ ಇರಲಿಲ್ಲ. ಎಲ್ಲಾ ಆಸೆಗಳು ಮನದಾಳದಲ್ಲಿ ಹೂತು ಹೋಗಿದ್ದವು. ಎಷ್ಟೊ ಸಲ ಮೀನಾ ಪಕ್ಕದಲ್ಲಿದ್ದರೂ ತಾನು ಒಂಟಿ ಎಂಬ ಭಾವನೆಯಿಂದ ಅವನು ಉದಾಸನಾಗುತ್ತಿದ್ದ.

ನೀತಾ ಮತ್ತು ಸತೀಶ್‌ ಭೇಟಿಯಾಗುತ್ತಿದ್ದಂತೆ ಉತ್ಸಾಹ, ಉಲ್ಲಾಸದಿಂದ ನಗುತ್ತಾ ಮಾತನಾಡತೊಡಗುತ್ತಿದ್ದರು.“ನೀನು ಬಹಳ ತಿಳಿವಳಿಕೆಯುಳ್ಳ ಧೈರ್ಯವಂತ ಮಹಿಳೆ,” ಸತೀಶ್‌ ಆಗಾಗ ನೀತಾಳನ್ನು ಹೊಗಳುತ್ತಿದ್ದ.

“ನಿಮ್ಮ ಮನಸ್ಸಲ್ಲಿ ನನ್ನ ಬಗ್ಗೆ ಎಷ್ಟು ಆತ್ಮೀಯತೆ ಇದೆ! ನೀವು ನಮ್ಮ ಜೊತೆ ನಿಂತಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು,” ನೀತಾಳ ಇಂತಹ ಮಾತುಗಳು ಅವನಲ್ಲಿ ಆತ್ಮವಿಶ್ವಾಸ ಹುಟ್ಟಿಸುತಿದ್ದವು. ಭೇಟಿಯಾದ 6 ತಿಂಗಳಲ್ಲಿ ಇಬ್ಬರೂ ಸ್ನೇಹದ ಎಲ್ಲೆ ದಾಟಿ ಪ್ರೇಮಿಗಳಾದರು. ಅಂದು ರಾಹುಲ್‌ನನ್ನು ಕರೆದುಕೊಂಡು ಅವನ ಅಜ್ಜಿ ಸುಮಿತ್ರಾ ತನ್ನ ಗೆಳತಿಯ ಮನೆಗೆ ಹೋಗಿದ್ದಳು. ಅವರಿಬ್ಬರೂ ಇಲ್ಲದಿದ್ದುದರಿಂದ ಮೊದಲ ಸಲ ನೀತಾ ಮತ್ತು ಸತೀಶ್‌ ವಿಚಿತ್ರ ಅಶಾಂತಿಯ ಭಾವ ಅನುಭವಿಸಿದರು.

ಸಂಬಂಧದಲ್ಲಿ ಹೊಸ ತಿರುವು ಮೂಡಲು ಮೊದಲು ಕಾರಣನಾದವನು ಸತೀಶ್‌. ಹತ್ತಿರದಲ್ಲಿ ಕುಳಿತಿದ್ದ ನೀತಾಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಭಾವುಕನಾಗಿ, “ನೀತಾ, ನಾನೀಗ ನಿನಗೆ ಏನು ಹೇಳಲು ಹೊರಟಿದ್ದೀನೋ ಅದು ತಪ್ಪು ಅಂತ ನನ್ನ ಮನಸ್ಸಿನ ಒಂದು ಭಾಗ ಹೇಳುತ್ತಿದೆ. ಅದರೆ ನನ್ನ ಮನದ ಮಾತನ್ನು ಹೇಳಬೇಕು. ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ..”

“ನಿನ್ನ ಈ ಪ್ರೀತಿಯನ್ನು ಬಹಳ ಮೊದಲೇ ನಿನ್ನ ಕಣ್ಣುಗಳಲ್ಲಿ ಓದುತ್ತಾ ಬಂದಿರುವೆ,” ನೀತಾ ಅವನ ಕಣ್ಣುಗಳಲ್ಲಿ ತನ್ನ ಕಣ್ಣುಗಳನ್ನು ನೆಟ್ಟು ಯಾವ ಸಂಕೋಚ ಇಲ್ಲದೆ ಹೇಳಿದಳು.

“ ನನ್ನ ಈ ಪ್ರೀತಿಗೆ ನಿನ್ನ ಅಕ್ಷೇಪವೇನೂ ಇಲ್ಲವೇ?” ಎಂದ ಸತೀಶ್‌. ನೀತಾ ಈ ಮಾತಿಗೆ ಉತ್ತರಿಸಲಿಲ್ಲ. ಅವನ ಕೈಯನ್ನು ಚುಂಬಿಸಿದಳು. ಅದೇ ದಿನ ನೀತಾ ಸತೀಶನಿಗೆ ತನ್ನ ತನುಮನಗಳನ್ನು ಅರ್ಪಿಸಿದಳು. ಈ ಹೆಜ್ಜೆ ಇಟ್ಟಿದ್ದರಿಂದ ಇಬ್ಬರಲ್ಲಿ ಯಾರಿಗೂ ಯಾವುದೇ ರೀತಿಯ ಅಪರಾಧಿ ಭಾವ ಹುಟ್ಟಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಪ್ರೇಮದ ಭಾವನೆಯನ್ನು ತನ್ನ ದೇಹದ ಕಣದಣದಲ್ಲೂ ಅನುಭವಿಸುತ್ತಿದ್ದ ನೀತಾ ಹೇಳಿದಳು, “ನಾನು ನಿನ್ನನ್ನು ಒಂದು ವಸ್ತು ಬಿಟ್ಟು ಬೇರೇನೂ ಕೇಳುವುದಿಲ್ಲ. ನಿನ್ನ ಹೆಸರು ಬೇಡ, ಹಣ ಬೇಡ, ನಿನ್ನ ಸಮಯ ಬೇಡ.”

“ಹಾಗಾದರೆ ನನ್ನಿಂದ ನಿನಗೇನು ಬೇಕು?” ಅವಳ ನುಣುಪಾದ ಕೂದಲನ್ನು ಹರಡುತ್ತಾ ಉತ್ಸುಕತೆಯಿಂದ ಕೇಳಿದ.

“ಒಬ್ಬ ಒಳ್ಳೆಯ ಸಂಗಾತಿಯ ಕೊರತೆಯನ್ನು ಜೀವನದಲ್ಲಿ ನನಗೆಂದೂ ಅನುಭವಕ್ಕೆ ಬರದಂತೆ ಮಾಡುತ್ತೇನೆಂಬ ಭರವಸೆ.”

“ ನೀನು ನನ್ನ ಹೃದಯದಲ್ಲಿ ನೆಲೆಸಿದ್ದೀಯ. ಅದು ಈಗ ನಿನ್ನದೇ ಆಗಿರುತ್ತದೆ.”

“ಮಾತು ಕೊಡುತ್ತಿದ್ದೀಯಾ?”

“ಖಂಡಿತಾ.”

ನೀತಾಳ ಕಣ್ಣುಗಳಲ್ಲಿ ನೀರು ತುಂಬಿತು. ಸತೀಶನ ಕಣ್ಣುಗಳಲ್ಲಿ ಅವಳು ಕಾಣಲು ಬಯಸಿದ್ದ ಭರವಸೆಯನ್ನು ಪಡೆದು ಮಧುರ ಭಾವನೆಗಳಲ್ಲಿ ಮೈಮರೆತಳು.

ಅವರ ಈ ಪ್ರೇಮ ಸಂಬಂಧ ಮೀನಾ ಮತ್ತು ಮಕ್ಕಳಿಗೆ ಗೊತ್ತಾಯಿತು. ಮೀನಾ ಗಂಡನ ಜೊತೆ ಜೋರಾಗಿ ಜಗಳವಾಡಿದಳು. “ಆ ವಿಧವೆಯ ಸಂಬಂಧ ಬೆಳೆಸಿ ನನ್ನನ್ನು ಸಮಾಜದ ದೃಷ್ಟಿಯಲ್ಲಿ ಅಪಮಾನಿತಳಾಗಿ ಮಾಡಲು ನಿಮಗೇನು ಹಕ್ಕಿದೆ? ನೀವು ಅವಳಿಂದ ದೂರಾಗದಿದ್ದರೆ ನಾನು ವಿಷ ಕುಡಿಯುತ್ತೇನೆ.”

ಮೀನಾಳ ಬೆದರಿಕೆಗಳು ಮತ್ತು ಪ್ರಶ್ನೆಗಳಿಗೆ ಸತೀಶ ಉತ್ತರಿಸಲಿಲ್ಲ. `ನೀತಾ ಮತ್ತು ನನ್ನ ಬಗ್ಗೆ ನಿನಗೆ ತಪ್ಪು ಅಭಿಪ್ರಾಯವಾಗಿದೆ,’ ಎಂದು ಅವನು ಹೇಳಿದ ಸುಳ್ಳನ್ನು ಮೀನಾ ಎಂದೂ ಒಪ್ಪಿಕೊಳ್ಳಲಿಲ್ಲ. ಇಬ್ಬರ ನಡುವಿನ ಅಂತರ ಹೆಚ್ಚುತ್ತಾ ಹೋಯಿತು.

ಮಕ್ಕಳು ತಂದೆತಾಯಿಗಳ ನಡುವೆ ಹೆಚ್ಚಾಗುತ್ತಿದ್ದ ವೈಮನಸ್ಸನ್ನು ಕಂಡು ಹೆದರಿಕೊಂಡೇ ಇರುತ್ತಿದ್ದರು. ಅವರ ಪೂರ್ವ ಸಹಾನುಭೂತಿ ತಾಯಿಯ ಕಡೆ ಇತ್ತು. ಮೀನಾ ಆಗಾಗ ನೀತಾಳ ಮನೆಗೆ ಹೋಗುತ್ತಿದ್ದಳು. ಈಗ ಅದನ್ನು ಪೂರ್ಣವಾಗಿ ನಿಲ್ಲಿಸಿದ್ದಳು. ಅವಳು ಮತ್ತವಳ ಮಕ್ಕಳ ದೃಷ್ಟಿಯಲ್ಲಿ ಇದೆಲ್ಲಾ ಹಗರಣಕ್ಕೆ ಕಾರಣ ನೀತಾ. ಅವಳ ಬಗ್ಗೆ ಮೂವರಲ್ಲೂ ಬಹಳ ದ್ವೇಷವೇ ತುಂಬಿತ್ತು.

ಸತೀಶ ನೀತಾಳನ್ನು ಭೇಟಿಯಾಗುವುದನ್ನು ತಪ್ಪಿಸಲಿಲ್ಲ. ಅವನು ತನ್ನ ಮನೆಯಲ್ಲಿ ಎಲ್ಲರಿಂದ ದೂರವಿರತೊಡಗಿದ. ಪ್ರೀತಿ, ಆತ್ಮೀಯತೆಯ ಭಾವನೆಗಳು ಕಳೆದುಹೋಗುತ್ತಾ ಬಂದವು. ನೀತಾ ಸತೀಶನ ಮನೆಯವರ ಜೊತೆ ಸಂಬಂಧ ಮುಂದುವರಿಸಲು ಎಂದೂ ಯಾವುದೇ ಆಸಕ್ತಿ ತೋರಿಸಲಿಲ್ಲ. ಅವಳು ಸತೀಶನ ಎದುರು ಆ ಮೂವರ ಬಗ್ಗೆ ಎಂದೂ ತಾನಾಗಿ ಮಾತನಾಡುತ್ತಿರಲಿಲ್ಲ. ಸತೀಶ ಅವಳೊಂದಿಗೆ ತನ್ನ ತೊಂದರೆಗಳು, ಚಿಂತೆಗಳನ್ನು ಹೇಳಿಕೊಳ್ಳುತ್ತಿದ್ದ. ಅವಳು ಅವನ ಮಾತುಗಳನ್ನು ಶಾಂತಳಾಗಿ ಕೇಳುತ್ತಿದ್ದಳು.

“ಮನೇಲಿ ನೀನು ನಮ್ಮ ಜೊತೆ ಇರುವಾಗ ಸಂತೋಷ ಮತ್ತು ಶಾಂತಿಯಿಂದ ಇರು. ನಿನ್ನ ನಗು ಮುಖ ನೋಡಲು ನನ್ನ ಮನಸ್ಸು ಎಷ್ಟು ಹಂಬಲಿಸುತ್ತದೆ ನಿನಗೆ ಗೊತ್ತಾ? ನಿನ್ನ ಜೊತೆ ಆಡಲು ರಾಹುಲ್‌ ಎಷ್ಟು ಕಾಯುತ್ತಿರುತ್ತಾನೆ ಗೊತ್ತಾ? ಅಮ್ಮ ನಿನ್ನ ಜೊತೆ ಸುಖದುಃಖಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ,” ನೀತಾಳ ಮಾತುಗಳಿಂದ ಸತೀಶ್‌ ತಾನು ಈ ಮೂವರಿಗೆ ಬಹಳ ಹತ್ತಿರವಾಗುತ್ತಿರುವಂತೆ ಅನುಭವಪಟ್ಟ.

“ಪ್ರಪಂಚ ಏನೇ ಹೇಳಲಿ, ನಾನು ನಿನ್ನ ಮತ್ತು ನನ್ನ ಸಂಬಂಧವನ್ನು ತಪ್ಪು ಎಂದು ಹೇಳುವುದಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಸಂತೋಷ ಮತ್ತು ಸುಖದಿಂದಿರುವ ಹಕ್ಕಿದೆ. ಈ ಮನೇಲಿ ನನಗೆ ಆತ್ಮೀಯತೆಯ 10ರಷ್ಟು ಭಾಗ ಕೂಡ ನನ್ನ ಮನೆಯಲ್ಲಿ ಸಿಗಲಿಲ್ಲ ಎಂದು ಹೇಳಲು ನನಗೆ ವ್ಯಥೆಯಾಗುತ್ತದೆ. ಇಲ್ಲಿ ನಾನೊಬ್ಬ ಎಚ್ಚೆತ್ತ ಜೀವವುಳ್ಳ ಮನುಷ್ಯನಾಗಿರುತ್ತೇನೆ. ಅದೇ ಅಲ್ಲಿ ನಾನು ಅವರ ಅಗತ್ಯಗಳನ್ನು ಪೂರೈಸುವ ಒಂದು ಯಂತ್ರ,” ತನ್ನ ಮನದ ನೋವನ್ನು ವ್ಯಕ್ತಪಡಿಸುತ್ತಾ ಎಷ್ಟೋ ಸಲ ಸತೀಶನ ಮುಖ ಸಿಟ್ಟಿನಿಂದ ಕೆಂಪಾಗುತ್ತಿತ್ತು.

ತನ್ನ ಮನೆಯವರ ಉಪೇಕ್ಷೆಗೆ ಪ್ರತಿಕ್ರಿಯೆ ಎಂಬಂತೆ, ಸತೀಶನ ಧೈರ್ಯ ಹೆಚ್ಚಿತು. ಅವನು ಹೆಚ್ಚು ಕಡಿಮೆ ಪ್ರತಿದಿನ ನೀತಾಳನ್ನು ಭೇಟಿಯಾಗಲು ಬರುತ್ತಿದ್ದ. ಪ್ರತಿ ವಾರ ಮನೆಯಿಂದ ಹೊರಗೆ ಎಲ್ಲಾದರೂ ಸುತ್ತಾಡಲೂ ಹೋಗುವುದು ನಡೆಯುತ್ತಲೇ ಇತ್ತು. ಸಂಬಂಧಿಗಳು ಮತ್ತು ಪರಿಚಿತರ ಮೂಲಕ ಅವನ ಓಡಾಟದ ಸುದ್ದಿ ಮೀನಾಗೆ ತಲುಪುತ್ತಿತ್ತು. ಅವಳಿಗೆ ಎಲ್ಲರ ಸಹಾನುಭೂತಿಯೂ ಸಿಗುತ್ತಿತ್ತು, ಸತೀಶ ಖಳನಾಯಕನಾಗಿಬಿಟ್ಟಿದ್ದ. ಜನರು ಆಡಿಕೊಳ್ಳುತ್ತಿದ್ದರು. ಪತಿ ಪತ್ನಿ ಪರಸ್ಪರರಿಂದ ದೂರವಾಗತೊಡಗಿದರು.

“ನಾನು ನಿಮ್ಮನ್ನು ಎಂದೂ ಕ್ಷಮಿಸೋಲ್ಲ,” ಗಂಡನ ನೆನಪಾಗುತ್ತಲೇ ಮೀನಾಳ ಮನಸ್ಸು ಸಿಟ್ಟು ಮತ್ತು ದ್ವೇಷದಿಂದ ತುಂಬಿಕೊಳ್ಳುತ್ತಿತ್ತು.

`ಈ ಹೆಂಗಸು ನನ್ನ ಭಾವನೆಗಳನ್ನು ಎಂದೂ ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಹೆಜ್ಜೆಗೆ ಹೆಜ್ಜೆ ಹಾಕಿ ನಡೆಯುವ ಪ್ರಯತ್ನವನ್ನೂ ಮಾಡಲಿಲ್ಲ,’  ಹೀಗೆ ವಿಚಾರ ಮಾಡುತ್ತಿದ್ದ ಸತೀಶನಿಗೆ ತಾನು ಪತ್ನಿಗೆ ಅನ್ಯಾಯ ಮಾಡುತ್ತಿದ್ದೇನೆಂಬ ಭಾವನೆಯಾಗಲಿ, ತಾನು ತಪ್ಪಿತಸ್ಥ ಎಂದಾಗಲೀ ಅನಿಸುತ್ತಲೇ ಇರಲಿಲ್ಲ.

ತನ್ನ ಪರಿಸ್ಥಿತಿಯಿಂದ ಬೇಸರಗೊಂಡಿದ್ದ ಮೀನಾ ತನ್ನ ಹೆಣ್ಣು ಮಕ್ಕಳು ದೊಡ್ಡವರಾಗುವುದನ್ನೇ ಕಾಯುತ್ತಿದ್ದಳು. ಅವರಿಗೆ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತಳಾಗಿ ಪತಿಯನ್ನು ಅವಲಂಬಿಸುವ ತೊಂದರೆಯಿಂದ ಮುಕ್ತಳಾಗುವೆ ಎಂದು ಅವಳು ಕಾಯುತ್ತಿದ್ದಳು.

ಸಮಯ ಕಳೆಯುತ್ತಿತ್ತು. ಜೊತೆಗೆ ಪರಿಸ್ಥಿತಿಯಲ್ಲಿ ಬದಲಾವಣೆಯೂ ಆಗುತ್ತಿತ್ತು. ಸತೀಶ ಮತ್ತು ನೀತಾ ಅವರ ಕುಟುಂಬ ಸಮಯದ ಪ್ರಭಾವದಿಂದ ಹೊರಗಾಗಲು ಸಾಧ್ಯವೇ? ರಾಹುಲ್‌ ಹೈಸ್ಕೂಲ್‌ ಮುಗಿಸುವ ಹೊತ್ತಿಗೆ ಸತೀಶನ ಮಗಳು ಶಿಲ್ಪಾ ಎಂ.ಬಿ.ಎ ಮುಗಿಸಿ ಬಹಳ ಒಳ್ಳೆಯ ನೌಕರಿ ಪಡೆದುಕೊಂಡಿದ್ದಳು. ಅವಳ ತಂಗಿ ಸುರಭಿ ಎಂ.ಬಿ.ಬಿ.ಎಸ್‌ ಮಾಡುತ್ತಿದ್ದಳು.

ನೀತಾಳ ತಾಯಿಗೆ ಹೃದಯಾಘಾತಾಯಿತು. ಹೆಚ್ಚು ಕಡಿಮೆ ಪ್ರತಿ ವಾರ ಅವರನ್ನು ವೈದ್ಯರಿಗೆ ತೋರಿಸಲು ಸತೀಶನೇ ಕರೆದುಕೊಂಡು ಹೋಗುತ್ತಿದ್ದ.

ವಯಸ್ಸಾಗುವುದರ ಜೊತೆಗೆ ಸಮಾಜದ ಉಪೇಕ್ಷೆಗಳು ಸತೀಶನ ಮೇಲೆ ನಿಧಾನವಾಗಿ ಪ್ರಭಾವ ಬೀರತೊಡಗಿದ್ದವು. ನೀತಾಳ ಬಗ್ಗೆ ಅವನಿಗೆ ಪ್ರೀತಿ  ಕಡಿಮೆಯಾಗತೊಡಗಿತು ಅಂತಲ್ಲ. ತನ್ನ ಬೆಳೆಯುತ್ತಿರುವ ಹೆಣ್ಣುಮಕ್ಕಳ ಜೊತೆ ಸೇರಿಕೊಂಡು ಜೀವನದ ಹಾದಿಯಲ್ಲಿ ಸಾಗುವುದು ಅವನಿಗೆ ಹೆಚ್ಚು ಖುಷಿ ಕೊಡುತ್ತಿತ್ತು ಎನ್ನಬಹುದು.

ಒಳ್ಳೆಯ ಸಂಬಳ ಬರುತ್ತಿದ್ದುದರಿಂದ ಶಿಲ್ಪಾ ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ತೆಗೆದುಕೊಂಡಳು. ಅದರಿಂದ ಸತೀಶ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಮನೆ ಕಟ್ಟಲು ಆರಂಭಿಸಿದ.

“ನಿಮ್ಮಿಬ್ಬರಿಗೂ ಒಂದೊಂದು ಮನೆ ಆಗುತ್ತೆ. ನಿಮ್ಮ ನಿಮ್ಮ ಸಂಸಾರದ ಜೊತೆ ಇಲ್ಲಿ ಸಂತೋಷದಿಂದ ಇರಿ. ಬೇರೆ ಕಡೆ ಮನೆ  ತಗೋಬೇಕು ಅನಿಸಿದರೆ ಇದನ್ನು ಮಾರಿ. ಅದರಿಂದ ಚೆನ್ನಾಗೇ ಹಣ ಬರುತ್ತೆ. ಹೊಸ ಮನೆ ತೆಗೆದುಕೊಳ್ಳುವುದು ಸುಲಭವಾಗುತ್ತೆ,” ಮಕ್ಕಳ ಸುಖಕರ ಭವಿಷ್ಯದ ಬಗ್ಗೆ ಮಾತನಾಡುವುದು ಅವನಿಗೆ ಇಷ್ಟವಾಗುತ್ತಿತ್ತು.

ಕಾಲ ಮೀನಾಳ ಮನದಲ್ಲಿ ಪತಿಯ ಬಗೆಗಿದ್ದ ದ್ವೇಷವನ್ನು ಕಡಿಮೆ ಮಾಡಿತ್ತು. ಹೆಣ್ಣು ಮಕ್ಕಳಿಂದ ಉಂಟಾದ ಉತ್ತಮ ಆರ್ಥಿಕ ಪರಿಸ್ಥಿತಿ ಮತ್ತು ಸಮಾಜದಲ್ಲಿ ಸಿಗುತ್ತಿದ್ದ ಮರ್ಯಾದೆ ಅವಳನ್ನು ಸಂತೋಷಚಿತ್ತಳು ಹಾಗೂ ದಯಾಮಯಿಯಾಗಿ ಮಾಡಿತ್ತು. ಪತಿಯು ಅವಳ ಹೃದಯಕ್ಕೆ ಉಂಟುಮಾಡಿದ್ದ ಗಾಯ ವಾಸಿಯಾಗಿರಲಿಲ್ಲ. ಆದರೆ ಅವಳು ಅವನ ಜೊತೆ ಸಹಜವಾಗಿಯೇ ಮಾತನಾಡುತ್ತಿದ್ದಳು.

ದೊಡ್ಡ ಮಗಳು ಶಿಲ್ಪಾಳಿಗೆ ಬರುತ್ತಿದ್ದ ದೊಡ್ಡ ಮೊತ್ತದ ಸಂಬಳ ಅವಳಲ್ಲಿ ಅಹಂಕಾರ ಉಂಟುಮಾಡಿತ್ತು. ತಂದೆಯ ಯಾವುದೇ ಮಾತಿಗೂ ತಡೆಹಾಕುವ ಸಾಹಸ ಅವಳಲ್ಲಿ ಬಂದಿತ್ತು. ಈಗ ಸತೀಶ ನೀತಾಳ ಮನೆಯಿಂದ ತಡವಾಗಿ ಬಂದರೆ ಅವನು ಹಿರಿಮಗಳ ಸಿಟ್ಟಿನ ದೃಷ್ಟಿ ಎದುರಿಸಬೇಕಾಗಿತ್ತು.

ಇತ್ತ ನೀತಾಗೆ ಸತೀಶನ ಬಳಿ ತನ್ನ ಜೊತೆ ಕಳೆಯಲು ಸಮಯ ಕಡಿಮೆಯಾಗುತ್ತಾ ಹೋಗುತ್ತಿದ್ದುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

“ಸತೀಶ್‌, ನಿನ್ನನ್ನು ನಾನು, ರಾಹುಲ್‌ ಮತ್ತು ಅಮ್ಮ ಮೂವರೂ ಬಹಳ ನೆನಪು ಮಾಡಿಕೊಳ್ಳುತ್ತಿರುತ್ತೇವೆ. ಅಂದರೆ ನೀನು ಇಲ್ಲಿಗೆ ಬರುವುದು ತಡವಾಗಬಾರದು, ಬೇಗ ಬಾ. ದಯವಿಟ್ಟು.” ನೀತಾಳ ಇಂತಹ ಪ್ರಾರ್ಥನೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಹೋಯಿತು.

ಇಂತಹ ಸಮಯದಲ್ಲಿ ಸತೀಶನಿಗೆ ಬಹಳ ಬೇಸರವಾಗುತ್ತಿತ್ತು. ಅವನಿಗೆ ಈಗ ಮನೆಯಲ್ಲಿ ಹೆಚ್ಚು ನೆಮ್ಮದಿ ಮತ್ತು ಸುರಕ್ಷತೆಯ ಅನುಭವವಾಗುತ್ತಿತ್ತು.

ನೀತಾಳಿಗೆ ತನಗಾಗಿ ಇದು ಬೇಕು ಎಂದು ಬಾಯಿಬಿಟ್ಟು ಕೇಳುವ ಅಭ್ಯಾಸ ಇರಲಿಲ್ಲ. ದೂರುವುದಾಗಲೀ, ಜಗಳಾಡುವುದಾಗಲೀ ಅವಳ ಸ್ವಭಾವ ಅಲ್ಲ. ಸತೀಶನ ಜೊತೆ ತನ್ನ ಸಂಬಂಧದಲ್ಲಾಗುತ್ತಿರುವ ಬದಲಾವಣೆಯ ನೋವನ್ನು ಅವಳ ಕಣ್ಣುಗಳಲ್ಲಿ ಕಾಣಬಹುದಿತ್ತು. ಸತೀಶ ಬೇಕೆಂದೇ ಅವಳ ಕಣ್ಣುಗಳನ್ನು ತಪ್ಪಿಸುತ್ತಿದ್ದ.

ಸದಾ ಆತ್ಮವಿಶ್ವಾಸದಿಂದ ಇರುತ್ತಿದ್ದ ನೀತಾ, ಈಗಾದ ಬದಲಾವಣೆಯಿಂದ ಒಮ್ಮೊಮ್ಮೆ ಸಿಡುಕಿದರೆ, ಒಮ್ಮೊಮ್ಮೆ ಬೇಸರಪಟ್ಟುಕೊಳ್ಳುತ್ತಿದ್ದಳು, “ನೀತಾ, ಮನೆ ಕಟ್ಟುವುದು ಸುಲಭವಲ್ಲ. ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಈ ಕೆಲಸ ಬೇಗ ಮುಗಿಸಬೇಕು ಅಂತ ನಾನು ಆಫೀಸಿನಿಂದ ದೀರ್ಘ ರಜೆ ತಗೊಂಡಿದೀನಿ. ಈ ಕೆಲಸದಿಂದಾಗಿ ನನಗೆ ಇಲ್ಲಿಗೆ ಹೆಚ್ಚಿಗೆ ಬರೋಕಾಗಲ್ಲ.” ಸತೀಶನ ಈ ಮಾತುಗಳನ್ನು ನೀತಾ ಮೌನವಾಗಿ ಕೇಳಿಸಿಕೊಂಡಳು.

ಸ್ವಲ್ಪ ಹೊತ್ತು ತಾನೂ ಸುಮ್ಮನಿದ್ದ ಸತೀಶ್‌ ನಂತರ ಬೇಸರದಿಂದ ಹೇಳಿದ. “ಶಿಲ್ಪಾಳಿಗೆ ಅವಳ ಸೋದರತ್ತೆ ಬಹಳ ಒಳ್ಳೆ ಸಂಬಂಧ ನೋಡಿದ್ದಾರೆ. ಹುಡುಗ ಎಂಜಿನಿಯರ್‌, ಅವನಿಗೆ ಶಿಲ್ಪಾ ಇಷ್ಟವಾಗಿದ್ದಾಳೆ.”

“ಇದಂತೂ ಸಂತೋಷದ ವಿಷಯ,” ನೀತಾಳ ತುಟಿಗಳ ಮೇಲೆ ತೆಳುನಗೆ ತೇಲಿತು.

“ಶಿಲ್ಪಾಳ ಸುಖಕರ ಭವಿಷ್ಯಕ್ಕಾಗಿ ನಾನು ನಿನ್ನ ಸಂಬಂಧ ತೊರೆಯಬೇಕಂತೆ ಎಲ್ಲರೂ ಹೇಳುತ್ತಾರೆ. ಇಲ್ಲವಾದರೆ ಅವಳ ಭಾವಿ ಅತ್ತೆಮನೆಯವರಿಗೆ ಏನೇನೋ ಆಡಿಕೊಳ್ಳಲು ಅವಕಾಶ ಸಿಗಬಹುದು.”

“ಏನು ಹೇಳ್ತಿದೀಯ ನೀನು?” ನೀತಾಳ ಕಣ್ಣುಗಳಲ್ಲಿ ಭಯ ಇಣುಕಿತು.

“ನಿನ್ನ ಜೊತೆ ಜೀವನಪೂರ್ತಿ ಇರ್ತೀನಿ… ಹಾಗಂತ ನಾನು ನಿನಗೆ ಮಾತು ಕೊಟ್ಟಿದ್ದೇನೆ…. ಆದರೆ….”

“ಆದರೇನು?”

“ಶಿಲ್ಪಾಳ ಮದುವೆ ಆಗುವವರೆಗೆ ನಾನು ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಭೇಟಿಯಾಗುವುದು ಕಡಿಮೆ ಮಾಡೋಣ, ಫೋನಿನಲ್ಲಿ ಮಾತು…….?”

“ಸಾಕು! ಇನ್ನೇನೂ ಹೇಳಬೇಡ,” ನೀತಾ ಅವನ ಬಾಯಿಗೆ ಕೈ ಅಡ್ಡ ಇಟ್ಟಳು, “ಬುದ್ಧಿವಂತರಿಗೆ ಸನ್ನೆಯೇ ಸಾಕು ಸತೀಶ್‌, ನೀನು ನನ್ನನ್ನು ಭೇಟಿಯಾಗಲು ಬಾ ಅಂತ ನಿನ್ನ ಮೇಲೆ ಎಂದೂ ಒತ್ತಡ ಹಾಕಿಲ್ಲ. ಮುಂದೆಯೂ ಹಾಕಲ್ಲ.”

“ನೀನು ಹೀಗೆ ನೋವಿನ ದೃಷ್ಟಿಯಿಂದ ನನ್ನನ್ನು ನೋಡುತ್ತಿದ್ದರೆ ಇದು ಒತ್ತಡದ ಹಾಗೆಯೇ ಅಲ್ವಾ? ನಿನ್ನನ್ನು ಸಂತೋಷವಾಗಿಡಲು ನಾನು ನನ್ನ ಮಗಳ ಭವಿಷ್ಯದ ಜೊತೆ ಹೇಗೆ ಆಟವಾಡಲಿ? ಇಷ್ಟು ವಿಷಯ ಅರ್ಥಮಾಡಿಕೊಂಡು ಸರಿಯಾಗಿ ನಡೆದುಕೊಳ್ಳಲು ಆಗುವುದಿಲ್ಲವೇ ನಿನಗೆ?” ಒಂದೇ ಸಲಕ್ಕೆ ರೇಗಿದ ಸತೀಶ್‌.

“ಟೀ ಮಾಡಿಕೊಂಡು ಬರ್ತೀನಿ,” ಯಾವುದೇ ವಾದದಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟಪಡದ ನೀತಾ ಎದ್ದು ಅಡುಗೆಮನೆಗೆ ಹೋದಳು.

ಅಂದು ರಾತ್ರಿ ಅವಳು ದಿಂಬಿನಲ್ಲಿ ಮುಖ ಹುದುಗಿಸಿ ಜೋರಾಗಿ ಅತ್ತಳು. ತಾನು ಒಂಟಿ ಎಂಬ ಭಾವದಿಂದ ವ್ಯಥೆ ಪಡುತ್ತಾ ನಿದ್ರೆಯಿಲ್ಲದೆ ರಾತ್ರಿ ಕಳೆದಳು.

ಸತೀಶ್‌ ಮತ್ತು ನೀತಾಳ ನಡುವೆ ಒಂದು ರೀತಿ ಬಿಗುವು ಕಾಣಿಸಿಕೊಂಡಿತು. ಮನದ ಮಾತು ಮೊದಲಿನಂತೆ ಸಹಜವಾಗಿ ತುಟಿಯ ಮೇಲೆ ಬರುತ್ತಿರಲಿಲ್ಲ. ಇಬ್ಬರ ನಡುವೆ ಬಿರುಕು ಹೆಚ್ಚುತ್ತಿರುವುದನ್ನು ಕಂಡು ಸುಮಿತ್ರಾಗೆ ಬಹಳ ಆತಂಕವಾಗುತ್ತಿತ್ತು. ಆಕೆ ಸತೀಶನ ಹತ್ತಿರ ವಿಶದವಾಗಿ ಮಾತನಾಡಲು ಇಷ್ಟಪಟ್ಟಳು, ಆದರೆ ನೀತಾ ತಡೆದಳು.

“ನೀನು ಮದುವೆಯಾದವನ ಜೊತೆ ಸ್ನೇಹ ಬೆಳೆಸಿ ಮೂರ್ಖಳಾದೆ ನೀತಾ…., ಜೀವನಪೂರ್ತಿ ನಿನ್ನ ಜೊತೆ ಇರುತ್ತೇನೆಂದು ಅವನು ಹೇಳಿದ ಮಾತನ್ನು ನೀನ್ಯಾಕೆ ನಂಬಿದೆ?” ಸುಮಿತ್ರಾಗೆ ಸತೀಶನ ಮೇಲೆ ಒಮ್ಮೊಮ್ಮೆ ಬಹಳ ಕೋಪ ಬರುತ್ತಿತ್ತು. ಆಗ ಅವನನ್ನು ಚೆನ್ನಾಗಿ ಬೈಯುತ್ತಿದ್ದರು.

ಸುಮಿತ್ರಾಗೆ ಎರಡನೇ ಸಲ ಹೃದಯಾಘಾತವಾದ ದಿನ ಶಿಲ್ಪಾಳ ನಿಶ್ಚಿತಾರ್ಥ ನಡೆಯುತ್ತಿತ್ತು. ನರ್ಸಿಂಗ್‌ ಹೋಂನಿಂದ ನೀತಾ ಸತೀಶ್‌ನಿಗೆ ಫೋನ್‌ ಮಾಡಿ ಮಾತನಾಡಿದಾಗ ಅವಳು ಬಹಳ ಹೆದರಿದ್ದಳು.

“ಸತೀಶ್‌, ಅಮ್ಮನ ಜೀವಕ್ಕೆ ಅಪಾಯವಿದೆ ಅಂತಾ ಡಾಕ್ಟರ್‌ ಹೇಳ್ತಾರೆ. ದಯವಿಟ್ಟು ನೀನು ಬಾ. ನನಗೆ ತುಂಬಾ ಹೆದರಿಕೆಯಾಗ್ತಿದೆ,” ಅವಳ ನಡುಗುತ್ತಿದ್ದ ದನಿ ಅವನ ಮನದಾಳವನ್ನು ತಟ್ಟಿತು.

“ನೀತಾ, ಇಲ್ಲಿ ಶಿಲ್ಪಾಳ ನಿಶ್ಚಿತಾರ್ಥದ ತಯಾರಿ…”

“ಸತೀಶ್‌, ದಯವಿಟ್ಟು ನನಗೀಗ ನಿನ್ನ ಆಸರೆಯ ಅಗತ್ಯವಿದೆ,” ನೀತಾ ಅತ್ತಳು.

“ನೀತಾ, ಅರ್ಥ ಮಾಡಿಕೋ. ನಾನೀಗ…”

“ಸತೀಶ್‌ ಪ್ಲೀಸ್‌……”

“ನಾನು ನನ್ನ ಗೆಳೆಯ ನೀರಜ್‌ನನ್ನು ನಿನ್ನ ಸಹಾಯಕ್ಕೆ….”

“ಇಲ್ಲ, ನೀನೇ ಬಾ…”

“ನಾನ್ಹೇಗೆ ಬರಲು ಸಾಧ್ಯ?” ಉತ್ತರವಾಗಿ ನೀತಾಳ ಅಳು ಶಬ್ದ ಕೇಳಿಸಿತು. ಫೋನ್‌ ಸಂಪರ್ಕ ಕಡಿಯಿತು. ಸತೀಶನ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ಅವನು ಕಣ್ಣೊರೆಸಿಕೊಂಡು ತಿರುಗಿದ. ಅವನೆದುರು ಚಿಕ್ಕ ಮಗಳು ಸುರಭಿ ನಿಂತಿದ್ದಳು. “ಅಪ್ಪಾ, ನಾನೆಲ್ಲಾ ಕೇಳಿಸಿಕೊಂಡೆ. ನೀವು ನನಗೆ ನೀತಾ ಆಂಟಿ ನಂಬರ್‌ ಕೊಡಿ. ನಿಮ್ಮ ಬದಲು ನಾನು ಅವರ ಬಳಿ ಹೋಗ್ತೀನಿ.”

“ಈ ಫಂಕ್ಶನ್‌ ಬಿಟ್ಟು ನೀನು ಹೇಗೆ ಹೋಗ್ತೀಯಾ? ಅಲ್ಲದೆ ನೀನು ಅಲ್ಲಿಗೆ ಹೋಗಲು ಯಾಕೆ ಇಷ್ಟಪಡ್ತೀಯಾ?” ಸತೀಶನಿಗೆ ಗೊಂದಲವಾಗಿತ್ತು.

“ನಿಮ್ಮ ಪ್ರತಿನಿಧಿಯಾಗಿ ಹೋಗ್ತೀನಿ ಅಪ್ಪ, ನಿಜವಾಗಲೂ ಈಗ ಅವರಿಗೆ ಸ್ವಂತದವರ ಅಗತ್ಯವಿದೆ.”

“ಆದರೆ…”

“ನನಗೆ ಅವರ ನಂಬರ್‌ ಕೊಡಿ, ನೀವು ಇಲ್ಲಿನ ಕೆಲಸ ನೋಡಿಕೊಳ್ಳಿ. ನಾನು ನಾಳೆ ಡಾಕ್ಟರಾಗುವವಳು. ಇಂತಹ ಫಂಕ್ಶನ್ ಬಿಟ್ಟು ಆಸ್ಪತ್ರೆಗೆ ಓಡುವ ಅನುಭವ ನನಗೆ ಈಗಲೇ ಆಗಲಿ.”

ಸುರಭಿಗೆ ನೀತಾಳ ಫೋನ್‌ ನಂಬರ್‌ ಕೊಟ್ಟು ಸತೀಶ್‌ ಭಾರವಾದ ಮನದಿಂದ ಕೆಲಸದಲ್ಲಿ ತೊಡಗಿದ. ಸ್ವಲ್ಪ ಹೊತ್ತಿಗೆ ಅವನಿಗೆ ನೀತಾ ಮತ್ತು ಸುಮಿತ್ರಾರ ನೆನಪು ಉಳಿಯಲಿಲ್ಲ. ನಿಜವಾಗಲೂ ಕಾಲವೆಂಬುದು ಅವರಿಬ್ಬರ ಸಂಬಂಧದಲ್ಲಿ ಬಲವಾದ ಬದಲಾವಣೆಯನ್ನು ಉಂಟುಮಾಡಿತ್ತು.

ಅಂದು ರಾತ್ರಿ ಬಹಳ ಹೊತ್ತು ಸುರಭಿ ನೀತಾಳ ಜೊತೆ ಇದ್ದಳು. ಡಾಕ್ಟರ್‌ ಸುಮಿತ್ರಾಳಿಗೆ ಚಿಕಿತ್ಸೆ ಮಾಡಿ ಆಕೆಯ ಸ್ಥಿತಿ ಸುಧಾರಿಸುವವರೆಗೂ ಆಸ್ಪತ್ರೆಯಲ್ಲೇ ಇದ್ದಳು.

ನೀತಾಳಿಗೆ ಸುರಭಿಯಿಂದ ಬಹಳ ಸಹಾಯವಾಯಿತು. ಕೆಲವು ಗಂಟೆಗಳ ಜೊತೆ ಅವಳ ಮನದಲ್ಲಿ ಸುರಭಿಯ ಬಗ್ಗೆ ಪ್ರೀತಿ ಮತ್ತು ಗೌರವದ ಭಾವನೆಗಳನ್ನು ಉಂಟುಮಾಡಿದವು.

“ನೀತಾ ಆಂಟಿ, ನನ್ನನ್ನು ಇಲ್ಲಿ ನೋಡಿ ನೀವು ಬೆರಗಾಗಬೇಡಿ. ನಿಮ್ಮ ಸಾಲ ನಮ್ಮ ಮೇಲೆ ಇದೆ. ನಾನು ಅದನ್ನು ತೀರಿಸಲು ಬಂದಿರುವೆ. ನನಗೆ ಮೆಡಿಕಲ್ ಕಾಲೇಜ್‌ ಸೇರಲು ಮತ್ತು ಅಕ್ಕ ಎಂ.ಬಿ.ಎ ಮಾಡಲು ನೀವು 5 ಲಕ್ಷ ರೂ.ಗಳನ್ನು ಹಿಂಜರಿಯದೇ ಕೊಟ್ಟಿದ್ದೀರಿ ಎಂದು ಈಚೆಗಷ್ಟೇ ಅಪ್ಪ ಹೇಳಿದರು. ನಮ್ಮ ಕೆರಿಯರ್‌ ಉತ್ತಮವಾಗಲು ನಿಮ್ಮ ಪಾತ್ರ ಬಹಳ ಮಹತ್ವದ್ದು ಎಂದು ಅಪ್ಪ ಹೇಳಿದರು. ನೀವು ಸಾಲ ಅಂತ ಅಂದುಕೊಳ್ಳದೇ ಇರಬಹುದು. ಆದರೆ ನಾನು ಅದನ್ನು ಸಾಲ ಅಂದುಕೋತೀನಿ ಮತ್ತು ತೀರಿಸ್ತೀನಿ.

“ನಿಮ್ಮ ಜೊತೆ ಮಾತನಾಡಿದ ಮೇಲೆ ಅಪ್ಪನ ಕಣ್ಣುಗಳಲ್ಲಿ ನೀರು ತುಂಬಿದ್ದನ್ನು ನಾನು ನೋಡಿದೆ. ಅವರ ಅಸಹಾಯಕತೆ, ದುಃಖ, ಪಶ್ಚಾತ್ತಾಪ ಅಥವಾ ತಮ್ಮ ಹೇಡಿತನದ ಅರಿವಾಗಿ ಕಣ್ಣೀರು ಬಂದಿರಬೇಕು, ಏನೋ ಗೊತ್ತಿಲ್ಲ…. ನಾನು ನಿಮಗೆ ಆಸರೆಯಾಗ್ತೀನಿ.

“ತಂದೆಯ ಸಾಲವನ್ನು ಮಕ್ಕಳು ಹಿಂದಿರುಗಿಸಲೇಬೇಕು ಆಂಟಿ. ನೀವು ನಿಮ್ಮನ್ನು ಆಶ್ರಯಹೀನರು ಎಂದುಕೊಳ್ಳಬೇಡಿ. ರಾಹುಲ್‌ಗೆ ಒಳ್ಳೆಯ ಕೆರಿಯರ್‌ ಆಗಬೇಕು. ಅದನ್ನು ನಾನೇ ಸ್ವತಃ ನೋಡಿಕೊಳ್ತೀನಿ. ಯಾರು ನಿಮಗೆ ಜೊತೆ ಕೊಡಲಿ, ಕೊಡದಿರಲಿ ನಾನು ಪ್ರತಿ ಹೆಜ್ಜೆಗೂ ನಿಮ್ಮ ಜೊತೆ ಇದ್ದೀನಿ ಮತ್ತು ಇರುತ್ತೀನಿ,” ಸುರಭಿ ಮನಮುಟ್ಟುವ ರೀತಿಯಲ್ಲಿ ಹೇಳಿದಳು.

ಉತ್ತರವಾಗಿ ನೀತಾ ಅವಳನ್ನು ಅಪ್ಪಿಕೊಂಡು ಅತ್ತಳು. ಬಹಳ ದಿನಗಳಿಂದ ಸತೀಶನಲ್ಲಿ ಆಗುತ್ತಿದ್ದ ಬದಲಾವಣೆಗಾಗಿ ಅವಳ ಹೃದಯದ ಮೇಲೆ ಭಾರ ಹೇರಿದಂತಾಗುತ್ತಿತ್ತು. ಮನಸ್ಸಿಗೆ ಆಸರೆ ನೀಡುವಂಥ ಸುರಭಿಯ ಮಾತುಗಳನ್ನು ಕೇಳಿ ಆ ಭಾರ ಕಣ್ಣೀರಿನ ಜೊತೆ ಹೊರಗೆ ಹರಿದುಹೋಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ