ಕಥೆ – ವಸುಧಾ ಸುರೇಶ್
ಪ್ರಕೃತಿಯ ಮಡಿಲಿನಲ್ಲಿ, ಪರ್ವತದ ತಪ್ಪಲಿನಲ್ಲಿ ಬಳಸಿ ಹೋಗುವ ಹಾದಿಯಲ್ಲಿ ಸಾಗುತ್ತಾ ಮಾನವನು ಪ್ರಕೃತಿಯ ವರದಾನವನ್ನು ಆನಂದದಿಂದ ಅನುಭವಿಸುತ್ತಾ ಪ್ರಯಾಣಿಸಬಹುದು.
ಆದರೆ ಜೀವನ ಇಂತಹ ಸುಖಮಯ ಪಯಣದಂತಲ್ಲ. ಯಾವುದೋ ತಿರುವಿನಲ್ಲಿ ಭೂತಕಾಲದ ಕಹಿಯೊಂದು ಧುತ್ತೆಂದು ಎದುರಿನಲ್ಲಿ ನಿಲ್ಲುತ್ತದೆ. ಅದು ವ್ಯಕ್ತಿಯನ್ನು ಚಿಂತೆ, ದ್ವಂದ್ವದಲ್ಲಿ ಮುಳುಗಿಸಿ ಹೃದಯದ ವೇಗವನ್ನು ಹೆಚ್ಚಿಸುತ್ತದೆ. ಹಳೆಯ ಕಟು ಘಟನೆಗಳನ್ನು ನೆನೆಪಿಸಿಕೊಡುತ್ತದೆ.
ಶ್ರಾವ್ಯಾ ಸಹ ಇಂದು ಇಂತಹದೇ ಒಂದು ತಿರುವಿನಲ್ಲಿ ನಿಂತಿದ್ದಾಳೆ. ಅಲ್ಲಿ ಯಾರೋ ಅವಳನ್ನು ಗತಿಸಿದ ಘಟನೆಗಳ ಜಾಲಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅವಳ ಈಗಿನ ಸುಖ ಸಂಸಾರವನ್ನು ಒಡೆಯುವುದೇ ಅವರ ಉದ್ದೇಶವಾಗಿದೆ.
ಶ್ರಾವ್ಯಾ ಒಬ್ಬ ಸುಂದರ ನವವಿವಾಹಿತ ತರುಣಿ. ಸಂದೇಶನೊಡನೆ ವಿವಾಹವಾದ ಸಮಯದಲ್ಲಿ ಅವಳು ತನ್ನ ಬಾಳಿನಲ್ಲಿ ನಡೆದ ದುಃಖಕರ ಘಟನೆಗಳನ್ನು ಮನಸ್ಸಿನಿಂದ ಅಳಿಸಿ ಹಾಕಿದ್ದಾಳೆ. 6 ತಿಂಗಳ ಹಿಂದೆ ಅವರ ವಿವಾಹವಾಗಿದ್ದು, ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾ, ಗೌರವಿಸುತ್ತಾ ಬಾಳುತ್ತಿದ್ದಾರೆ. ಶ್ರಾವ್ಯಾ ತನ್ನ ಅತ್ತೆ ಮಾವಂದಿರನ್ನು ತನ್ನವರೆಂದು ಭಾವಿಸಿ ಆದರಿಸುತ್ತಿದ್ದಾಳೆ.
ಬಾಳ ಪಯಣದ ಸುಖಮಯ ಹಾದಿಯಲ್ಲಿ ಬಂಡೆಗಲ್ಲೊಂದು ಉರುಳಿ ಬಂದು ನಿಂತಂತೆ, ಒಂದು ಭಾನುವಾರ ಸಾಯಂಕಾಲ ಆನಂದ್ ಮನೆಗೆ ಬಂದುದನ್ನು ಕಂಡು ಶ್ರಾವ್ಯಾಳ ಹೃದಯದಲ್ಲಿ ಸಂದೇಹದ ಚೇಳು ಕುಟುಕುತ್ತದೆ.
ಶ್ರಾವ್ಯಾಳ ಬಾಲ್ಯ ಸ್ನೇಹಿತನೆಂದು ಪರಿಚಯಿಸಿಕೊಂಡ ಆನಂದನಿಗೆ ಮನೆಯಲ್ಲಿ ಆದರದ ಸ್ವಾಗತ ದೊರೆಯಿತು. ಅವಳ ಅತ್ತೆ ಮಾವಂದಿರು ಅವನನ್ನು ಕುಳ್ಳಿರಿಸಿ, ಯೋಗಕ್ಷೇಮ ವಿಚಾರಿಸಿ, ನಂತರ ಶ್ರಾವ್ಯಾಳಿಗೆ ಕಾಫಿ ತರಲು ಹೇಳಿದರು.
ನಡುಗುವ ಹೃದಯ ಹೊತ್ತು ನಿಂತಿದ್ದ ಶ್ರಾವ್ಯಾ ಕೂಡಲೇ ಅಡುಗೆಮನೆಯತ್ತ ನಡೆದಳು. ಆನಂದ ಹಿಂದೆ ಅವಳ ಸ್ನೇಹಿತನಾಗಿದ್ದುದು ನಿಜವಾದರೂ, ಈಗ ಅವನನ್ನು ದ್ವೇಷಿಸುತ್ತಿದ್ದಳು. ಸಾಧ್ಯವಿದ್ದಿದ್ದರೆ ಅವನು ಮನೆಯೊಳಗೆ ಬರದಂತೆ ತಡೆದಿರುತ್ತಿದ್ದಳು. ಆದರೆ ಸದ್ಯದಲ್ಲಿ ಅವಳೇನೂ ಮಾಡುವಂತಿರಲಿಲ್ಲ. ಕಾಫಿ ಮಾಡಲು ತೊಡಗಿದಾಗ ಅವಳ ಮನಸ್ಸು ಗತಕಾಲಕ್ಕೆ ಓಡಿತು.
ಅವರಿಬ್ಬರ ಪರಿಚಯ ವರ್ಷಗಳಷ್ಟು ಹಳೆಯದು. ಅವರು ಸಹಪಾಠಿಗಳಾಗಿದ್ದರು, ಸ್ನೇಹಿತರಾಗಿದ್ದರು. ಆದರೆ ಈ ಸ್ನೇಹ ಆನಂದನ ಮನಸ್ಸಿನಲ್ಲಿ ಪ್ರೀತಿಯವಾಗಿ ಬದಲಾದದ್ದು ಶ್ರಾವ್ಯಾಳ ಅರಿವಿಗೆ ಬಂದಿರಲಿಲ್ಲ.
ಹಾಗೆ ನೋಡಿದರೆ ಹುಡುಗರ ಸ್ನೇಹ, ವ್ಯವಹಾರ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಹುಡುಗಿಯರು ಕೂಡಲೇ ಕಂಡುಕೊಳ್ಳುತ್ತಾರೆ. ಆದರೆ ಶ್ರಾವ್ಯಾ ಈ ಬಗ್ಗೆ ಯೋಚಿಸಲೂ ಇಲ್ಲ. ಏಕೆಂದರೆ ಅವಳು ಬೇರೊಬ್ಬನ ಜೀವನ ಸಂಗಾತಿಯಾಗಲು ವಚನ ನೀಡಿದ್ದಳು. ಅವನ ಕೈ ಹಿಡಿಯುವ ಕನಸು ಕಾಣುತ್ತಿದ್ದಳು.
ಹರೀಶ್ ಮತ್ತು ಶ್ರಾವ್ಯಾ ಕಳೆದ 4 ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಒಂದಾಗಿದ್ದರು. ವಿವಾಹವಾಗಲು ನಿಶ್ಚಯಿಸಿಕೊಂಡಿದ್ದರು. ಬೇರೆ ಬೇರೆ ಜಾತಿಯ ಕಾರಣಕ್ಕಾಗಿ ಮನೆಯವರು ಈ ಮದುವೆಯನ್ನು ವಿರೋಧಿಸಿದ್ದರು. ಮನೆಯವರ ಮನವೊಲಿಸಲು ಇಬ್ಬರೂ ಸಾಕಷ್ಟು ಪ್ರಯಾಸಪಟ್ಟಿದ್ದರು.
ಮಕ್ಕಳ ಹಟಕ್ಕೆ ಮಣಿದು ಹಿರಿಯರು ಒಲ್ಲದ ಮನಸ್ಸಿನಿಂದ ಮದುವೆಗೆ ಸಮ್ಮತಿಸಿದ್ದರು. ಎರಡೂ ಮನೆಗಳಲ್ಲಿನ ಬಿರುಗಾಳಿ ಶಾಂತವಾಗ ತೊಡಗಿದಾಗ ಬಂದೆರಗಿದ ಅನಿರೀಕ್ಷೀತ ಆಘಾತದಿಂದಾಗಿ ಶ್ರಾವ್ಯಾಳ ಕನಸು ನುಚ್ಚು ನೂರಾಯಿತು.
ರಸ್ತೆಯ ಅಪಘಾತ ಒಂದರಲ್ಲಿ ಹರೀಶ್ ಅಸುನೀಗಿದ್ದ. ಶ್ರಾವ್ಯಾಳ ಜೀವನ ನೌಕೆ ಕಾಲನ ಕರಾಳ ಮಡುವಿನಲ್ಲಿ ಮುಳುಗಿಹೋಯಿತು. ಅವಳು ತನ್ನ ಭಾವೀ ಮನೆಗೆ ಕಾಲಿಡುವ ಮುನ್ನವೇ ದೈವ ಅದರ ತಳಪಾಯವನ್ನೇ ಕಿತ್ತೆಸೆಯಿತು.ಈ ಆಘಾತದಿಂದ ಶ್ರಾವ್ಯಾ ತತ್ತರಿಸಿಹೋದಳು. `ಸಮಯವೇ ಸರಿಪಡಿಸುವ ವೈದ್ಯ’ ಎಂಬಂತೆ ಸಮಯ ಕಳೆದಂತೆ ತಾಯಿ ತಂದೆಯರ ಪ್ರೀತಿಪೂರ್ವಕ ಸಹಕಾರದೊಂದಿಗೆ ಅವಳು ಕ್ರಮೇಣ ತನ್ನ ದಿನಚರಿಗೆ ಹೊಂದಿಕೊಳ್ಳತೊಡಗಿದಳು. ವರ್ಷ ತುಂಬುವಷ್ಟರಲ್ಲಿ ಸಂದೇಶನ ಕುಟುಂಬದವರ ಕಡೆಯಿಂದ ಶ್ರಾವ್ಯಾಳಿಗೆ ಕೋರಿಕೆ ಬರತೊಡಗಿತು. ತಾಯಿ ತಂದೆಯರ ಮನಸ್ಸನ್ನು ನೋಯಿಸಲಾರದೆ, ಅವರನ್ನು ಜವಾಬ್ದಾರಿ ಮುಕ್ತರನ್ನಾಗಿಸುವ ಉದ್ದೇಶದಿಂದ ಶ್ರಾವ್ಯಾ ಉತ್ಸಾಹರಹಿತಳಾಗಿ ಮದುವೆಗೆ ಒಪ್ಪಿದಳು. ಸಮಯದ ಪ್ರವಾಹವನ್ನು ತಡೆಯುವುದು ಸಾಧ್ಯವಿಲ್ಲದಾದಾಗ ಅದರೊಂದಿಗೇ ಹರಿದು ಮುಂದೆ ಹೋಗುವುದೇ ಉಚಿತವೆಂದು ಶ್ರಾವ್ಯಾ ಭಾವಿಸಿದಳು.
ಮದುವೆಗೆ ಕೇವಲ 5 ದಿನಗಳು ಉಳಿದಿದ್ದಾಗ ಇದ್ದಕ್ಕಿದ್ದಂತೆ ಆನಂದ್ ಮನೆಗೆ ಬಂದ. ಶ್ರಾವ್ಯಾಳನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ. ಅವನ ಕುರಿತಾಗಿ ಈಗ ಯಾವುದೇ ಭಾವನೆಯನ್ನು ಬೆಳೆಸಿಕೊಂಡಿಲ್ಲದ ಶ್ರಾವ್ಯಾ ಹಾಗೂ ಅವಳ ತಂದೆ ಅವನ ಇಚ್ಛೆಯನ್ನು ನಿರಾಕರಿಸಿ ಅವನಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಪ್ರಯತ್ನಿಸಿದಾಗ ಅವನ ಹಿಂಸಾರೂಪವನ್ನು ಕಂಡು ಬೆಚ್ಚಿಬಿದ್ದರು.
ಆನಂದನ ಏಕಮುಖ ಪ್ರೀತಿಯು ಅವನು ಆಲೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕಸಿದುಕೊಂಡಿತ್ತು. ಸಾಕಷ್ಟು ಗದ್ದಲವೆಬ್ಬಿಸಿದ ಅವನು ಶ್ರಾವ್ಯಾಳ ಭಾವೀ ಜೀವನವನ್ನು ಹಾಳು ಮಾಡುವೆನೆಂದು ಕೂಗಾಡಿದನು. ಶ್ರಾವ್ಯಾಳ ತಂದೆ ಸಂಬಂಧಿಕರ ನೆರವಿನಿಂದ ಹೇಗೋ ಮಾಡಿ ಅವನನ್ನು ಸಾಗಹಾಕಿದರು.
ಮಂಗಳ ಕಾರ್ಯ ಮುಗಿಯುವವರೆಗೆ ಎಲ್ಲರ ಮನಸ್ಸಿನಲ್ಲಿ ಭಯ ಕಾಡುತ್ತಿತ್ತು. ಆದರೆ ಎಲ್ಲ ಶಾಂತವಾಗಿ ಮುಗಿಯಲು ತಾಯಿ ತಂದೆಯರು ನಿರಾಳವಾಗಿ ಶ್ರಾವ್ಯಾಳನ್ನು ಪತಿಗೃಹಕ್ಕೆ ಕಳುಹಿಸಿಕೊಟ್ಟರು. ನಂತರ ಯಾವುದೇ ತೊಂದರೆ ತಲೆದೋರದೆ ಶ್ರಾವ್ಯಾ ಅತ್ತೆಯ ಮನೆಯ ವಾತಾರಣಕ್ಕೆ ಹೊಂದಿಕೊಂಡು ಸಂಸಾರ ನಡೆಸತೊಡಗಿದಳು.
ಲಿವಿಂಗ್ ರೂಮ್ ಕಡೆಯಿಂದ ಜೋರು ಧ್ವನಿಯಲ್ಲಿ ಮಾತುಗಳು ಕೇಳಿ ಬರಲು ಹಳೆಯ ನೆನಪಿನಲ್ಲಿ ಮುಳುಗಿದ್ದ ಶ್ರಾವ್ಯಾ ಅಡುಗೆಮನೆಯಿಂದ ಹೊರಗೆ ಓಡಿದಳು. ಲಿವಿಂಗ್ ರೂಮಿನ ವಾತಾವರಣ ಗಂಭೀರವಾಗಿತ್ತು. ಸಂದೇಶ್ ಮತ್ತು ಅವನ ತಾಯಿ ತಂದೆಯ ಮುಖ ಕೋಪದಿಂದ ಕೂಡಿತ್ತು. ಶ್ರಾವ್ಯಾ ಬಾಗಿಲಲ್ಲೇ ನಿಂತು ಅವರ ಮಾತನ್ನು ಕೇಳಿಸಿಕೊಂಡಳು.
“ಆಂಟಿ…. ನಾನು ಹೇಳಿದ್ದೆಲ್ಲ ನಿಜ. ಶ್ರಾವ್ಯಾ ಮತ್ತು ನನ್ನದು ಹಳೆಯ ಗೆಳೆತನ. ಒಂದು ಕಾಲದಲ್ಲಿ ನಾವು ಒಟ್ಟಿಗೆ ಬಾಳಬೇಕು ಅಂತ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಹರೀಶನೊಡನೆ ಸೇರಿ ಅವಳ ನಡತೆ ಕೆಟ್ಟಿದೆ ಅಂತ ತಿಳಿದ ಮೇಲೆ ನಾನು ಅವಳಿಂದ ದೂರಾದೆ.”
ಆನಂದ್ ಅವಳ ಶೀಲದ ಮೇಲೆ ಕೆಸರೆರಚುವ ಮಾತುಗಳನ್ನು ಆಡುತ್ತಿದ್ದ. ಅದನ್ನು ಕೇಳಿ ಶ್ರಾವ್ಯಾಳ ಕಿವಿಗಳಿಗೆ ಕಾದ ಸೀಸವನ್ನು ಸುರಿದಂತಾಯಿತು.
ಹರೀಶ್ ಮತ್ತು ಶ್ರಾವ್ಯಾಳ ಪವಿತ್ರ ಸಂಬಂಧಕ್ಕೆ ಒಂದು ಕೆಟ್ಟ ರೂಪವನ್ನು ಕೊಟ್ಟ ಆನಂದ್, ಅವರಿಬ್ಬರೂ ಮನೆಯಿಂದ ಓಡಿ ಹೋಗಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದರು ಎಂದು ಹೇಳಿದ. ಅಷ್ಟೇ ಅಲ್ಲದೆ ಅವಳು ಬೇರೆ ಪುರುಷರೊಂದಿಗೂ ಸಂಬಂಧ ಹೊಂದಿದ್ದಳೆಂಬ ಅವಮಾನಕರ ಹಣೆಪಟ್ಟಿಯನ್ನು ಕಟ್ಟಿದ್ದನು. ತನ್ನ ವಾದವನ್ನು ಪುಷ್ಟೀಕರಿಸಲು ಅವನು ಇದೇ ರೀತಿ ಮಾತುಗಳನ್ನು ಹೇಳತೊಡಗಿದ.
ಅವನ ಮಾತುಗಳನ್ನು ಕೇಳುತ್ತಾ ಶ್ರಾವ್ಯಾಳಿಗೆ ಕಣ್ಣು ಕತ್ತಲಾದಂತಾಯಿತು. ಕೋಪ, ಭಯ, ಹತಾಶೆಗಳ ಭಾವ ತುಂಬಿ ಅವಳ ಹೃದಯ ಬಡಿತ ನಿಂತು ಹೋಗುವುದೇನೋ ಎನಿಸಿತು. `ಅವನ ಈ ಸುಳ್ಳು ಮಾತುಗಳು ತನ್ನ ಜೀವನವನ್ನು ಭಸ್ಮ ಮಾಡುವುದು ಖಂಡಿತ. ನಮ್ಮ ಸಮಾಜದಲ್ಲಿ ಹೆಣ್ಣಿನ ಶೀಲಕ್ಕೆ ಒಮ್ಮೆ ಕಳಂಕ ತಟ್ಟಿದರೆ ಆಯಿತು. ಇನ್ನೆಂದೂ ಅವಳು ತಲೆಯೆತ್ತಿ ನಿಲ್ಲದಂತೆ ಆಗಿಬಿಡುತ್ತದೆ,’ ಎಂದು ಶ್ರಾವ್ಯಾ ಯೋಚಿಸಿದಳು.
“ಅಯ್ಯೋ, ನಾನು ಈಗೇನು ಮಾಡಲಿ?” ಎಂದು ಅವಳು ನಿಂತಲ್ಲೇ ಹಲ್ಲು ಕಡಿದು ಕೈ ಹೊಸಕಿಕೊಂಡಳು.
ಆ ಸಮಯದಲ್ಲಿ ಅವಳ ಕೈಗೆ ಚೂರಿಯೊಂದು ಸಿಕ್ಕಿದ್ದರೆ ನಿಶ್ಚಯವಾಗಿ ಅವಳು ಆನಂದನ ತಲೆಯನ್ನು ಕಡಿದುಬಿಟ್ಟಿರುತ್ತಿದ್ದಳೇನೋ. ಆದರೆ ಈಗ ಅವನ ಹತ್ಯೆಯಿಂದ ಆಗುವ ಪ್ರಯೋಜನವೇನು? ಅವನು ಯಾವ ಉದ್ದೇಶದಿಂದ ಇಲ್ಲಿಗೆ ಬಂದಿದ್ದನೋ ಆ ಕೆಲಸ ಮುಗಿಸಿಯಾಗಿತ್ತು.
`ನನ್ನ ನಡತೆಯ ಬಗ್ಗೆ ಆನಂದ್ ಸಂದೇಹದ ಬೀಜವನ್ನು ಬಿತ್ತಿಯಾಗಿದೆ. ಇಂತಹ ದೊಡ್ಡ ಕಳಂಕ, ಅವಮಾನವನ್ನು ಹೇಗೆ ಸಹಿಸಲಿ? ಈ ಭೂಮಿ ಬಾಯಿಬಿಟ್ಟು ನನ್ನನ್ನು ತನ್ನೊಳಗೆ ಸೇರಿಸಿಕೊಳ್ಳಬಾರದೆ,’ ಎಂದು ಶ್ರಾವ್ಯಾ ಶೋಕಿಸಿದಳು.
`ಆನಂದ ಹೇಳಿರುವುದೆಲ್ಲ ಸುಳ್ಳಿನ ಕಂತೆ. ಆದರೆ ಅದು ಸುಳ್ಳೆಂದು ಸಾಬೀತುಪಡಿಸುವುದು ಹೇಗೆ? ಸಮಾಜದಲ್ಲಿ ನನ್ನ ಮತ್ತು ನನ್ನ ತಾಯಿ ತಂದೆಯರ ಪ್ರತಿಷ್ಠೆ ಏನಾಗುವುದು? ಸಂದೇಶ್ ನನ್ನನ್ನು ಅಗ್ನಿಪರೀಕ್ಷೆಗೆ ಗುರಿ ಮಾಡಿದರೆ?’ ಶ್ರಾವ್ಯಾ ಹತಾಶೆಯಿಂದ ಹೈರಾಣಾದಳು.
`ಈ ಪಾಪಿಯ ಮಾತುಗಳಿಂದ ಸಂದೇಶನಿಗೆ ನನ್ನ ಮೇಲೆ ವಿಶ್ವಾಸ ಇಲ್ಲದಂತಾಗಿ ತನ್ನ ಜೀವನದಿಂದ ದೂರ ಮಾಡಿದರೆ, ನಾನು ಯಾರು ಯಾರಿಗೆ ನನ್ನ ಪಾವಿತ್ರ್ಯವನ್ನು ಸಿದ್ಧಪಡಿಸಿ ನಿರೂಪಿಸಲಿ? ಅದೂ ಹೇಗೆ ‘ಶ್ರಾವ್ಯಾಳ ವಿವಾಹವಾಗಿ ಇನ್ನೂ ಒಂದು ವರ್ಷ ಕಳೆದಿಲ್ಲ. ಅತ್ತೆ ಮನೆಯಲ್ಲಿ ಅವಳಿಗಿನ್ನೂ ಭದ್ರವಾದ ಸ್ಥಾನ ದೊರೆತಿಲ್ಲ. ಪ್ರೀತಿ ವಿಶ್ವಾಸಗಳ ಸೂತ್ರ ಬಿಗಿಗೊಳ್ಳಬೇಕಾದ ಸಮಯದಲ್ಲಿ ಈ ಹೊಡೆತವನ್ನು ಅವಳು ಸಹಿಸಿಕೊಳ್ಳುವುದೆಂತು?
ಬಿಳಿಯ ವಸ್ತ್ರದ ಮೇಲೆ ಕಲೆಯಾಗುವುದು ಸುಲಭ. ಆದರೆ ಅದನ್ನು ನಿವಾರಿಸುವುದು ಕಷ್ಟಕರ. ಯಾವುದೇ ಸ್ತ್ರೀ ತಾನು ಪವಿತ್ರಳು ತನಗೆ ಆರೋಪಿಸಲಾದ ಕಳಂಕ ಸುಳ್ಳು ಎಂದು ಹೇಗೆ ತಾನೇ ಸಾಬೀತುಪಡಿಸಬಲ್ಲಳು?
ಎಲ್ಲರ ದೃಷ್ಟಿ ಬಾಗಿಲಲ್ಲಿ ನಿಂತಿದ್ದ ಶ್ರಾವ್ಯಾಳತ್ತ ಹರಿದಾಗ ಅವಳು ಕಂಪಿಸಿದಳು. ಅವರ ಕ್ರೋಧಭರಿತ ಕಣ್ಣುಗಳು ತನ್ನನ್ನು ಸುಟ್ಟು ಬಿಡುತ್ತಿರುವಂತೆ ಅವಳಿಗೆ ಭಾಸವಾಯಿತು. ಅಶ್ರುಭರಿತ ಕಣ್ಣುಗಳಿಂದ ಅವಳು ಪತಿಯತ್ತ ನೋಡಿದಳು. ಅವನ ಮುಖ ಕೋಪದಿಂದ ಕೆಂಪಾಗಿತ್ತು. ಈ ಮನೆಯಲ್ಲಿ ತನಗೆ ಇದೇ ಕಡೆಯ ದಿನ ಎಂದು ಅವಳು ಭಯಗೊಂಡಳು. ಆನಂದನೊಂದಿಗೆ ತನ್ನನ್ನೂ ಮನೆಯಿಂದ ಹೊರ ದಬ್ಬಬಹುದೇ ಎಂದು ಶಂಕಿಸಿದಳು.
ಪರಿಸ್ಥಿತಿ ಗಂಭೀರವಾಗಿತ್ತು. ನಾನು ಪವಿತ್ರಳು, ಸುಶೀಲೆ ಎಂದು ಕೂಗಿ ಕೂಗಿ ಹೇಳಬೇಕು ಎಂದು ಶ್ರಾವ್ಯಾಳಿಗೆ ಅನಿಸುತ್ತಿತ್ತು. ಆದರೆ ಅವಳಿಗೆ ನಿಂತ ನೆಲದಿಂದ ಕಾಲು ಕೀಳಲು ಸಾಧ್ಯವಾಗಲಿಲ್ಲ. ಗಂಟಲಿನಿಂದ ಒಂದು ಸಣ್ಣ ಧ್ವನಿಯೂ ಹೊರಬರಲಿಲ್ಲ. ಹರೀಶನ ಸಾವಿನ ಆಘಾತದಿಂದ ಹೊರಬಂದು, ಇದೀಗ ಸಂದೇಶನೊಡನೆ ಸಂಸಾರ ನಡೆಸುವ ಹುನ್ನಾರದಲ್ಲಿರುವಾಗ ಇದೇನಾಯಿತು? ಮುಂದೇನಾಗುತ್ತದೆ ಎಂದು ಭಯ ವಿಹ್ವಲಳಾದಳು. ಇದೆಲ್ಲ ಅವಳ ಕಲ್ಪನೆಗೆ ಮೀರಿದುದಾಗಿತ್ತು. ಶ್ರಾವ್ಯಾ ಗೊಂದಲದಲ್ಲಿ ತೊಳಲುತ್ತಿರುವಾಗ ಅವಳ ಮಾವ ಎದ್ದು ನಿಂತರು. ಕೋಪದಿಂದ ಮುಂದೆ ಬಂದು ಆನಂದನ ಕಾಲರ್ ಪಟ್ಟಿಯನ್ನು ಹಿಡಿದು ಹೇಳಿದರು, “ನನ್ನ ಮಗಳ ನಡತೆಯ ಬಗ್ಗೆ ಕೆಟ್ಟ ಮಾತನ್ನಾಡಿದರೆ ನೋಡಿಕೊ….. ನಿನ್ನಂತಹ ತಲೆ ಕೆಟ್ಟವನಿಂದ ನಮ್ಮ ಹುಡುಗಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬೇಕಾಗಿಲ್ಲ…… ಹೊರಡು ಇಲ್ಲಿಂದ……ಇನ್ನೊಂದು ಸಲ ನಮ್ಮ ಮನೆಯ ಬೀದಿಯಲ್ಲಿ ಏನಾದರೂ ಕಾಣಿಸಿಕೊಂಡರೆ ಜೈಲಿಗೆ ಹೋಗಬೇಕಾಗುತ್ತೆ!”
ಸಂದೇಶ್ ಎದ್ದು ಬಂದು ಆನಂದನನ್ನು ಮನೆಯಿಂದ ಆಚೆಗೆ ನೂಕಿದನು. ಶ್ರಾವ್ಯಾಳ ಮಾವ ಅವಳ ಹತ್ತಿರ ಬಂದು ತಲೆ ಸವರಿ ಹೇಳಿದರು, “ಹೆದರಬೇಡಮ್ಮ…. ನಮಗೆ ನಿನ್ನ ಮೇಲೆ ವಿಶ್ವಾಸವಿದೆ. ಈ ಹುಚ್ಚ ಏನಾದರೂ ನಿನ್ನನ್ನು ಭೇಟಿ ಮಾಡೋದಕ್ಕೆ ಅಥವಾ ಫೋನ್ ಮಾಡೋದಕ್ಕೆ ಪ್ರಯತ್ನಪಟ್ಟರೆ ಸಂಕೋಚ ಮಾಡಿಕೊಳ್ಳದೆ ನಮಗೆ ತಿಳಿಸು.”
ಅಳುತ್ತಿದ್ದ ಶ್ರಾವ್ಯಾಳನ್ನು ಅವಳ ಅತ್ತೆ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಕಣ್ಣು ಒರೆಸಿದರು. ಎಲ್ಲರೂ ಶ್ರಾವ್ಯಾಳನ್ನು ಸಮಾಧಾನ ಮಾಡಿದರೇ ಹೊರತು ಯಾರೂ ಅವಳಿಂದ ಯಾವುದೇ ವಿವರಣೆ ಬಯಸಲಿಲ್ಲ. ಹೆದರಿ ಕಂಪಿಸುತ್ತಿದ್ದ ಶ್ರಾವ್ಯಾ ಪತಿಯತ್ತ ನೋಡಿದಳು. ಸಂದೇಶನ ಮುಖದಲ್ಲಿ ಬೆಂಬಲವಾಗಿ ನಿಂತಿರುವ ಭಾವವಿತ್ತು. ಅವನ ಕಣ್ಣುಗಳು ಹೀಗೆ ಹೇಳುವಂತಿದ್ದವು, “ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ. ನಿನ್ನನ್ನು ಅರ್ಧಾಂಗಿನಿಯಾಗಿ ಸ್ವೀಕರಿಸಿ. ಯಾರದೋ ಮಾತಿನಿಂದಾಗಿ ವನವಾಸಕ್ಕೆ ಕಳುಹಿಸುವವನಲ್ಲ ನಾನು. ನಿನಗೆ ಅಗ್ನಿ ಪರೀಕ್ಷೆಯ ಅವಶ್ಯಕತೆ ಇಲ್ಲ. ನಮ್ಮದು ಪ್ರೀತಿಯ ಸಂಬಂಧ.”
ಸಂದೇಶನಂಥ ಉತ್ತಮ ಗುಣದ ವ್ಯಕ್ತಿಯನ್ನು ಪತಿಯಾಗಿಯೂ, ಉಚ್ಚ ವಿಚಾರಗಳಿಂದ ಕೂಡಿದ ಅತ್ತೆ ಮಾವಂದಿರನ್ನು ಪಡೆದ ಶ್ರಾವ್ಯಾ ತಾನೇ ಧನ್ಯಳೆಂದು ಭಾವಿಸಿದಳು. ಅಂದು ರಾತ್ರಿ ನಿಶ್ಚಿಂತಳಾಗಿ ಪತಿಯ ತೋಳತೆಕ್ಕೆಯಲ್ಲಿ ಮಲಗಿದ ಶ್ರಾವ್ಯಾಳಿಗೆ `ಇಂದೇ ನನ್ನ ನಿಜವಾದ ಮೊದಲ ರಾತ್ರಿ,’ ಎಂದು ಅನ್ನಿಸಿತು.