ಕಾಲದ ಓಟದ ಜೊತೆಗೆ ಪರಿವರ್ತನೆ ಕೂಡ ಅಗತ್ಯ. ಇಂದಿನ ಯುಗದಲ್ಲಿ ದಂಪತಿಗಳು ಅದರಲ್ಲೂ ವಿಶೇಷವಾಗಿ ನವವಿವಾಹಿತ ಜೋಡಿಗಳು ತಮ್ಮ ವಿಚಾರಗಳು, ಭಾವನೆಗಳು ಮತ್ತು ದೃಷ್ಟಿಕೋನವನ್ನು ಅಷ್ಟಿಷ್ಟು ಬದಲಿಸಿಕೊಳ್ಳಬೇಕು. ಮೊದಲು ಮದುವೆ ಎಂದರೆ ಪ್ರೀತಿ ಮತ್ತು ಸಮರ್ಪಣೆಯಾಗಿತ್ತು. ಅದರಲ್ಲಿ ಹೆಂಡತಿಯರೆ ತಮ್ಮ ಪತಿ ಮತ್ತು ಅವರ ಕುಟುಂಬದವರಿಗಾಗಿ ಸಮರ್ಪಿತರಾಗಿರುವುದನ್ನು ತಮ್ಮ ಜೀವನದ ಸಾರ್ಥಕತೆ ಎಂದು ಭಾವಿಸುತ್ತಿದ್ದರು. ಅಲ್ಲದೆ, ತ್ಯಾಗ ಮತ್ತು ಕರ್ತವ್ಯದ ಮೂರ್ತಿಗಳಾಗಿ ಜೀವನವಿಡೀ ಖುಷಿಯಿಂದ ಕಳೆಯುತ್ತಿದ್ದರು. ಕುಟುಂಬದಲ್ಲಿ ಅವರಿಗೆ ಇದರಿಂದ ಗೌರವ ಆದರಗಳು ದೊರೆಯುತ್ತಿದ್ದವು. ಪುರುಷರು ಕೂಡ ಇಂತಹ ಪತ್ನಿಯನ್ನು ಪಡೆದು ಖುಷಿಗೊಳ್ಳುತ್ತಿದ್ದರು. ಹೆಂಡತಿಯರಿಗಾಗಿ ಅವರ ಯೋಚನೆ ಕೂಡ ಇಷ್ಟೇ ಆಗಿರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಗಂಡಹೆಂಡತಿ ಈ ಸಂಗತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇಂದು ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ, ಮುಂದೆ ಸಾಗುತ್ತಿದ್ದಾರೆ. ಪ್ರೀತಿ ಮತ್ತು ಸಮರ್ಪಣೆಯ ಸ್ಥಾನವನ್ನು ಈಗ ಪ್ರೀತಿ ಮತ್ತು ಹೊಂದಾಣಿಕೆ ಪಡೆದುಕೊಂಡಿವೆ.
ವಧುವರರು ಮದುವೆಯ ಸಂದರ್ಭದಲ್ಲಿ ಸಪ್ತಪದಿ ತುಳಿಯುತ್ತಾರೆ. ಅವು ಸಪ್ತ ವಚನಗಳೇ ಆಗಿಬಿಟ್ಟಿವೆ. ಆದರೆ ವಧುವರರು ಆ ವಚನಗಳನ್ನು ಬಹುಬೇಗ ಮರೆತುಬಿಡುತ್ತಾರೆ. ಆದರೆ ದಂಪತಿಗಳನ್ನು ಸಮೀಕ್ಷೆಗೊಳಪಡಿಸಿದಾಗ ಬಹಳಷ್ಟು ಒಳ್ಳೆಯ ಸಂಗತಿಗಳು ಬೆಳಕಿಗೆ ಬಂದವು. ಮದುವೆಯ ನಂತರ ಆ ವಚನಗಳನ್ನು ಪಾಲಿಸಬೇಕು. ವಿವಾಹ ಬಂಧನ ಪ್ರೀತಿವಿಶ್ವಾಸ ಮತ್ತು ಪಾಲುದಾರಿಕೆಯಿಂದ ಕೂಡಿದೆ. ಇಬ್ಬರೂ ಮನೆ ಹಾಗೂ ಹೊರಗೆ ಎರಡೂ ಕಡೆ ಕೆಲಸ ಮಾಡುತ್ತಾರೆ. ಹಾಗಾದರೆ ಇಬ್ಬರೂ ಪರಸ್ಪರರ ಕೆಲಸದಲ್ಲಿ ಸಹಕಾರ ಮತ್ತು ಹೊಂದಾಣಿಕೆ ಮನೋ ಭಾವದ ಮೂಲಕ ಸಾಗಬೇಕಾದುದು ಅಗತ್ಯ. ಎಲ್ಲರ ವಿಚಾರ ಮಂಥನದಿಂದ ಹೊರಹೊಮ್ಮಿದ ಈ 9 ವಚನಗಳು ಬಹೂಪಯೋಗಿಯಾಗಿವೆ :
ಯಾವುದು ನನ್ನದು ಅದು ನಿನ್ನದೂ ಕೂಡ : ಹಾಸನದ ಆರ್ಕಿಟೆಕ್ಟ್ ಸುಹಾಸ್ ಮತ್ತು ಅವರ ಪತ್ನಿ ಸೀಮಾ ನಡುವೆ ಆರಂಭದಲ್ಲಿ ಚಿಕ್ಕಪುಟ್ಟ ಮಾತುಗಳಿಗೂ ಮನಸ್ತಾಪ ಉಂಟಾಗುತ್ತಿತ್ತು. ಈ ಕುರಿತಂತೆ ಸೀಮಾ ಹೀಗೆ ಹೇಳುತ್ತಾರೆ, “ತವರುಮನೆಯಿಂದ ಉಡುಗೊರೆಯಾಗಿ ಬಂದ ಬೆಡ್ ಕವರ್, ಕ್ರಾಕರಿ ಮುಂತಾದವುಗಳನ್ನು ಸುಹಾಸ್ ತಮ್ಮ ಸ್ನೇಹಿತರಿಗಾಗಿ ಬಳಸಿಕೊಳ್ಳುತ್ತಿದ್ದರೆ, ನನಗೆ ಬಹಳ ಕೋಪ ಬರುತಿತ್ತು. ಅದೇ ರೀತಿ ಅವರ ಮ್ಯೂಸಿಕ್ ಸಿಸ್ಟಮ್, ಬೇರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನನ್ನ ಸಂಬಂಧಿಕರು ಬಳಸಿದರೆ ಅವರಿಗೆ ಕೋಪ ಬರುತ್ತಿತ್ತು. ಅದೊಂದು ದಿನ ನಾವು ನಿರ್ಧಾರ ಮಾಡಿದೆವು, ನಾವಿಬ್ಬರೂ ಒಂದೇ ಆಗಿರುವಾಗ ನಾವು ಬಳಸುವ ವಸ್ತುಗಳು ನಮ್ಮವೇ ಅಲ್ಲವೇ? ಎಂದು ಚರ್ಚಿಸಿದೆವು. ಆಗಿನಿಂದ ನಮ್ಮ ನಡುವಿನ ಮನಸ್ತಾಪ ದೂರವಾಯಿತು.”
ಪರಸ್ಪರರ ಸಂಬಂಧಿಕರ ಬಗ್ಗೆ ಗೌರವ : ಧಾರವಾಡದ ಡಾ. ರಾಜೇಶ್ ಮತ್ತು ಅವರ ಹೋಮ್ ಮೇಕರ್ ಹೆಂಡತಿ ನೀಲಾ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಾರೆ, ಗಂಡಹೆಂಡತಿಯಾದವರು ಇಬ್ಬರೂ ಕುಟುಂಬದವರು, ಸಂಬಂಧಿಕರ ಮನೆಯವರಿಗೆ ಗೌರವ ಕೊಡುವುದು ಅತ್ಯವಶ್ಯ. ರಾಜೇಶ್ ತನ್ನ ತಂದೆತಾಯಿಗಳಿಗಾದ ಅಪಮಾನದ ಘಟನೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇದರಿಂದ ಅವನ ತಂಗಿ ರಮಾ ತನ್ನ ಗಂಡನ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಇದರಿಂದಾಗಿ ಅವರ ಪರಸ್ಪರ ಸಂಬಂಧಗಳು ಎಂದೂ ಮಧುರವಾಗಲೇ ಇಲ್ಲ.
ಹೆಂಡತಿಯಾದವಳು ಕೇವಲ ಗಂಡನ ಮನೆಯವರು ಹಾಗೂ ಅವರ ಸಂಬಂಧಿಕರನ್ನಷ್ಟೇ ಚೆನ್ನಾಗಿ ನೋಡಿಕೊಂಡರೆ ಸಾಲದು, ಗಂಡನ ಮನೆಯವರು ಹೆಂಡತಿಗೆ ಸಂಬಂಧಪಟ್ಟ ಯಾರೇ ಆಗಲಿ ಬಂದರೆ, ಅವರಿಗೆ ಅಷ್ಟೇ ಗೌರವ ಕೊಡಬೇಕು. ಹಾಗೆ ಮಾಡದಿದ್ದರೆ, ಸಂಬಂಧಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಹೆಂಡತಿ ಅರ್ಧಾಂಗಿನಿ, ಅವರು ನಿಮ್ಮ ಮನೆಯವಳು. ಅವಳ ಮನೆಯವರಿಗೂ ಗೌರವ ಕೊಡಬೇಕಾದುದು ಗಂಡನ ಕರ್ತವ್ಯ.
ನನ್ನ ಅಗತ್ಯ ನಿನ್ನ ಅಗತ್ಯ : ಸುಜಾತಾ ಒಂದು ಕಾರ್ಪೊರೇಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಾಳೆ. ಸಾಮಾನ್ಯವಾಗಿ ಆಕೆಗೆ ಮನೆಗೆ ಬರಲು ತಡವಾಗುತ್ತದೆ. ಒಮ್ಮೊಮ್ಮೆ ಆಕೆ ಆಫೀಸಿನ ಕೆಲಸವನ್ನು ಮನೆಗೂ ತರಬೇಕಾದ ಸ್ಥಿತಿ ಉಂಟಾಗುತ್ತದೆ. ಈ ಬಗ್ಗೆ ಆಕೆಯ ಪತಿ ವಿಶಾಲ್ ಸಿಡಿಮಿಡಿಗೊಳ್ಳುತ್ತಿದ್ದ. ಆಕೆ ಒಂದು ದಿನ ಕುಳಿತುಕೊಂಡು ಗಂಡನಿಗೆ ಎಲ್ಲ ವಿಷಯವನ್ನು ಮನದಟ್ಟು ಮಾಡಿಕೊಟ್ಟಳು. “ನಾನು ನಿಮಗೆ ಮದುವೆಗೂ ಮೊದಲೇ ಈ ವಿಷಯ ತಿಳಿಸಿದ್ದೆ. ಆಗ ನನ್ನ ಒಳ್ಳೆಯ ಪ್ಯಾಕೇಜ್ ನೋಡಿ ನಿಮಗೆ ಎಲ್ಲ ಒಪ್ಪಿಗೆಯಾಗಿತ್ತು. ಮತ್ತೊಂದು ವಿಷಯ, ನೀವು ಬಿಸ್‌ನೆಸ್ ಮೀಟಿಂಗ್ ಅದೂ ಇದು ಅಂತ ಮನೆಗೆ ತಡವಾಗಿ ಬರ್ತಿದ್ರಿ. ಆಗ ನಾನೇನಾದರೂ ಕೇಳ್ತಿದ್ನಾ? ಈಗ ನಿಮ್ಮ ಈ ಧೋರಣೆ ಸರಿ ಕಾಣ್ತಿಲ್ಲ. ನಾನು ನೌಕರಿ ಬಿಡಲು ಸಿದ್ಧಳಿಲ್ಲ. ಅಮ್ಮನಿಗೆ ಪ್ರತಿ ತಿಂಗಳು ಬ್ಲಡ್ ಟ್ರಾನ್ಸ್ ಪ್ಯೂಷನ್ ಮಾಡಿಸಬೇಕು. ನಿಮಗೆ ಇಷ್ಟವಿಲ್ಲದಿದ್ದರೆ ನೀವು ನನ್ನನ್ನು ತೊರೆಯಬಹುದು. ನಾನು ನಿಮಗೆ ವಿಚ್ಛೇದನ ಕೊಡಲು ಸಿದ್ಧ. ನಾಳೆಯೇ ಬೇರೆ ಕಡೆ ಎಲ್ಲಾದರೂ ಶಿಫ್ಟ್ ಆಗ್ತೀನಿ. ಒಂದು ನಿಮಿಷ ಯೋಚಿಸಿ, ನನ್ನ ತಾಯಿಯ ಸ್ಥಿತಿ ನಿಮ್ಮ ತಾಯಿಗೆ ಬಂದಿದ್ದರೆ ನೀವು ಆಗಲೂ ಹೀಗೆಯೇ ಯೋಚಿಸ್ತಿದ್ರಾ? ನಮ್ಮ ನಮ್ಮ ಕೆಲಸ, ಅಗತ್ಯ ಮತ್ತು ಹೊಣೆಗಾರಿಕೆ ನಿಭಾಯಿಸಲು ಪರಸ್ಪರರಿಗೆ ಸಹಕಾರ ನೀಡುವುದು ಅಗತ್ಯ. ಆಗಲೇ ಸಂಬಂಧದಲ್ಲಿ ಮಾಧುರ್ಯ ಇರುತ್ತೆ, ಸಂಬಂಧ ಹಾಗೆಯೇ ಮುಂದುವರಿದುಕೊಂಡು ಹೋಗಲು ಅನುಕೂಲವಾಗುತ್ತದೆ.
“ಆ ದಿನದಿಂದ ವಿಶಾಲ್ ಸಾಕಷ್ಟು ಬದಲಾದರು. ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳತೊಡಗಿದರು. ಹಸಿವು, ನಿದ್ರೆಯಂತಹ ಚಿಕ್ಕಪುಟ್ಟ ಅಗತ್ಯಗಳಿಗೂ ಪ್ರಾಧಾನ್ಯತೆ ಕೊಡತೊಡಗಿದರು. ನನ್ನ ನೋವು, ನನ್ನ ದಣಿವು ಈಗ ಅವರಿಗೆ ಅರ್ಥವಾಗುತ್ತದೆ. ಜೀವನ ಸಂಗಾತಿ ಗುಲಾಮಳಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.”
ನನ್ನ ಅಭ್ಯಾಸ– ಸಂಸ್ಕಾರಗಳಂತೆ ನಿನ್ನದೂ : ಗಂಡ ಹೆಂಡತಿ ಬೇರೆ ಬೇರೆ ಕುಟುಂಬಗಳಿಂದ, ಬೇರೆ ಬೇರೆ ರೀತಿ ಪಾಲನೆ ಪೋಷಣೆಯಿಂದ ಬಂದಿರುತ್ತಾರೆ. ನನ್ನ ಅಭ್ಯಾಸ, ಹವ್ಯಾಸಗಳು, ರೀತಿನೀತಿಗಳಂತೆಯೇ ನಿನ್ನದು ಕೂಡ ಇರಬೇಕು ಎಂದು ಅಪೇಕ್ಷಿಸುವುದು ತಪ್ಪು. ಸ್ಕೂಲ್ ಟೀಚರ್ ದೀಪ್ತಿ ತನ್ನ ಬ್ಯಾಂಕ್ ಮ್ಯಾನೇಜರ್ ಪತಿಯ ಒಂದು ಅಭ್ಯಾಸದ ಬಗ್ಗೆ ತುಂಬಾ ಬೇಸರಪಡುತ್ತಿದ್ದರು. ಪತಿ ನಾಗೇಶ್ ಬರಿಗಾಲಲ್ಲಿ ಮನೆಯಲ್ಲೆಲ್ಲ ಓಡಾಡಿ, ಅದೇ ಕಾಲುಗಳಿಂದ ಬೆಡ್ ರೂಮ್ ಪ್ರವೇಶಿಸುತ್ತಿದ್ದರು. ಇದು ಆಕೆಗೆ ಬಹಳ ಬೇಸರ ಮೂಡಿಸುತ್ತಿತ್ತು. ಅದೇ ರೀತಿ ದೀಪ್ತಿ ಕೂಡ ಎಲ್ಲಿಂದಾದರೂ ಬಂದರೆ ಬಟ್ಟೆ ಚೇಂಜ್ ಮಾಡಿ ಎಲ್ಲೆಂದರಲ್ಲಿ ಹಾಗೆಯೇ ಬಿಟ್ಟಿರುತ್ತಿದ್ದಳು. ಇಬ್ಬರೂ ಒಂದು ದಿನ ಕುಳಿತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ನಾಗೇಶ್ ಮರುದಿನವೇ ಮನೆಯಲ್ಲಿ ಕಾರ್ಪೆಟ್ ಹಾಕಿಸಿದರು. ಪತಿಯಲ್ಲುಂಟಾದ ಬದಲಾವಣೆಯಿಂದ ದೀಪ್ತಿ ಕೂಡ ಹೊರಗೆಲ್ಲಾದರೂ ಹೋದರೆ, ಬಂದ ತಕ್ಷಣವೇ ಬಟ್ಟೆ ಮಡಚಿ ಇಡಬೇಕಾದ ಜಾಗದಲ್ಲಿ ಇಡುತ್ತಾಳೆ. ಅವರಿಬ್ಬರ ಸಂಬಂದ ಮತ್ತೊಮ್ಮೆ ನಳನಳಿಸತೊಡಗಿತು.
ಇನ್ನೊಬ್ಬರ ಎದುರು ಅಪಹಾಸ್ಯ ಬೇಡ : ಬೆಂಗಳೂರಿನ ಅನುರಾಧಾ ಮದವೆಯ ಬಳಿಕ ಮೊದಲ ಬಾರಿಗೆ ವಿಮಾನ ಪ್ರವಾಸ ಮಾಡುತ್ತಿದ್ದಳು. ಚಾರ್ಟರ್ಡ್ ಅಕೌಂಟೆಂಟ್ ಆದ ಅವರ ಒಬ್ಬ ಗೆಳೆಯ ಕೂಡ ಪತ್ನಿ ಸಮೇತ ಅದೇ ವಿಮಾನದಲ್ಲಿದ್ದ. ಎಲ್ಲರೂ ತಮ್ಮ ಗೆಳೆಯನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ಹೊರಟಿದ್ದರು. ಬೆಲ್ಟ್ ಕಟ್ಟಿಕೊಳ್ಳಬೇಕೆಂದು ಘೋಷಣೆಯಾದಾಗ ಅನುರಾಧಾ ಪಕ್ಕದ ಸೀಟಿನ ಬೆಲ್ಟ್ ಎಳೆದುಕೊಂಡು ತನ್ನ ಸೀಟಿಗೆ ಕಟ್ಟಿಕೊಳ್ಳತೊಡಗಿದಳು. ಅದನ್ನು ನೋಡಿ ಉಮೇಶ್ ಗೊಳ್ಳನೇ ನಕ್ಕ. ನಿನ್ನ ಬುದ್ಧಿ ಎಲ್ಲಿಯಾದರೂ ಹುಲ್ಲು ಮೇಯಲು ಹೋಗಿತ್ತಾ? ನಿನಗೆ ಅಷ್ಟೂ ಮಾಡಲು ಬರುವುದಿಲ್ಲವೇ? ಅವನ ಗೆಳೆಯ ಹಾಗೂ ಅವನ ಹೆಂಡತಿ ಕೂಡ ಆ ದೃಶ್ಯ ಕಂಡು ನಕ್ಕುಬಿಟ್ಟರು. ಅದನ್ನು ಕಂಡು ಅನುರಾಧಾಳಿಗೆ ಬಹಳ ದುಃಖವಾಯಿತು. ಉಮೇಶ್‌ಗೆ ತನ್ನ ತಪ್ಪಿನ ಅರಿವಾಯಿತು. ತಾನು ಎಲ್ಲರೆದುರು ಹಾಗೆ ಹೇಳಬಾರದಿತ್ತೆಂದು ಅವನಿಗೆ ಅನ್ನಿಸಿತು.
ಅದೇ ರೀತಿಯ ಮತ್ತೊಂದು ಘಟನೆ. ಗೀತಾಳ ಅಣ್ಣ ಅತ್ತಿಗೆ ಆಕೆಯನ್ನು ಭೇಟಿ ಮಾಡಲೆಂದು ಬಂದಿದ್ದರು. ಆಕೆಯ ಪತಿ ದೀಪಕ್ ಬಾಟಲ್‌ನಿಂದ ನೀರು ಕುಡಿಯುತ್ತಿದ್ದ. ಅವನು ಅದೇ ಬಾಟಲ್‌ನ್ನು ಮನೆಗೆ ಬಂದ ಅತಿಥಿಗಳಿಗೆ ಕೊಡಲು ಹೋದ.
“ನಿಲ್ಲಿ. ನಾನು ಗ್ಲಾಸ್ ತಂದುಕೊಡ್ತೀನಿ. ನಮ್ಮಲ್ಲಿ ಯಾರೂ ಹೀಗೆ ಹಳ್ಳಿ ಹುಂಬರ ಹಾಗೆ ನೀರು ಕುಡಿಯುವುದಿಲ್ಲ,” ಗೀತಾ ಹೇಳಿದಳು.
ದೀಪಕ್‌ಗೆ ಆಕೆ ಆಡಿದ ಮಾತು ಚುಚ್ಚಿತು, “ನಮ್ಮಲ್ಲಿ ಯಾರೂ ಪತಿಗೆ ಹೀಗೆ ಮಾತಾಡುವುದಿಲ್ಲ.” ಅಣ್ಣ ಗೀತಾಳನ್ನು ತಡೆಯುತ್ತಾ ಪರಿಸ್ಥಿತಿಯನ್ನು ತಿಳಿಗೊಳಿಸಿದ. ಬಳಿಕ ಇಬ್ಬರೂ `ಸಾರಿ’ ಕೇಳಿದರಲ್ಲದೆ, ಬೇರೆಯವರ ಮುಂದೆ ಎಂದೂ ಪರಸ್ಪರರನ್ನು ಹೀಯಾಳಿಸುವುದಿಲ್ಲ ಎಂದು ಪ್ರಮಾಣ ಮಾಡಿದರು.
ನನ್ನ ಸಾಮಾಜಿಕ ಬಂಧನಗಳಂತೆಯೇ ನಿನ್ನದು ಕೂಡ : ದೀಪಕ್ ಪತ್ನಿ ಜಯಾ ಮದುವೆಗೆ ಮುನ್ನ ಸಾಕಷ್ಟು ಸೋಶಿಯಲ್ ಆಗಿದ್ದರು. ಎಲ್ಲರ ಸುಖದುಃಖಗಳಲ್ಲಿ, ಹಬ್ಬ ಉತ್ಸವಗಳಲ್ಲಿ ಸೇರ್ಪಡೆಗೊಳ್ಳುತ್ತಾ ಬಂದಿದ್ದಾರೆ. ಆಫೀಸ್‌ನವರೇ ಆಗಿರಲಿ, ಅಕ್ಕಪಕ್ಕದವರು, ಸಂಬಂಧಿಕರು ಆಗಿರಲಿ ಎಲ್ಲರ ಜೊತೆಯೂ ಬೆರೆಯುತ್ತಾ ಬಂದಿದ್ದಾರೆ. ದೀಪಕ್ ಕೂಡ ಆಕೆಗೆ ಸಹಕಾರ ಕೊಡುತ್ತಾರೆ. ಹೀಗಾಗಿ ಜಯಾ ಕೂಡ ಗಂಡನ ಸಾಮಾಜಿಕ ಸಂಬಂಧಗಳನ್ನು ಗೌರವಿಸುತ್ತಾ ಬಂದಿದ್ದಾರೆ.
ನನಗೆ ಸ್ಪೇಸ್ ಬೇಕಾಗಿರುವಂತೆ ನಿನಗೂ ಕೂಡ : ನಿಖಿತಾ ಹೇಳುತ್ತಾರೆ ತಾನು ದಿನವಿಡೀ ಪತಿಯ ಸುತ್ತಮುತ್ತ ಇರಲು ಪ್ರಯತ್ನಿಸುವುದಿಲ್ಲ. ಸ್ವಲ್ಪ ಹೊತ್ತು ಅವರನ್ನು ಏಕಾಂತದಲ್ಲಿ ಬಿಡುತ್ತೇನೆ. ಏಕೆಂದರೆ ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಲಿ. ಪತಿ ಕೂಡ ನನಗೂ ಸ್ಪೇಸ್ ದೊರೆಯಲಿ ಎಂದು ಪ್ರಯತ್ನಿಸುತ್ತಾರೆ. ಹೀಗಾಗಿ ಅವರ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪ ಉಂಟಾಗುವುದಿಲ್ಲ. ಇಬ್ಬರೂ ಸೇರಿಯೇ ಮರುದಿನದ ಸಿದ್ಧತೆ ಮಾಡಿಕೊಳ್ಳುತ್ತೇವೆ.
ನನ್ನ ಕೆಲವು ರಹಸ್ಯಗಳನ್ನು ಹೇಳುವುದಿಲ್ಲ ನಿನ್ನದು ಕೂಡ ಕೇಳುವುದಿಲ್ಲ : ಮದುವೆಗೆ ಮೊದಲು ಹೆಂಡತಿಯ ಜೊತೆಗೆ, ಗಂಡನ ಜೊತೆ ಅವರ ಮನೆಯಲ್ಲಿ ಏನೇನಾಯಿತು ಎಂದು ಯಾರೂ ಹೇಳಲು ಇಚ್ಛಿಸುವುದಿಲ್ಲ ಎನ್ನುವುದಾದರೆ ಸರಿ, ಆದರೆ ಆ ಬಗ್ಗೆ ಕೆದಕಿ ಕೇಳುವುದು ಎಷ್ಟರಮಟ್ಟಿಗೆ ಸರಿ? ಸಂದೇಹಪಡುವುದು ವ್ಯರ್ಥ. ಇದು ಇಂಗ್ಲಿಷ್ ಪ್ರಾಧ್ಯಾಪಕ ಡಾ. ರಾಜೇಂದ್ರ ಮತ್ತು ಸುಜಾತಾ ಅವರ ಅಭಿಪ್ರಾಯ. ಸಂಬಂಧದಲ್ಲಿ ಗಾಢತೆ ಬರಲು ಇದು ಅತ್ಯವಶ್ಯಕ. ವರ್ತಮಾನವನ್ನು ಗಮನಿಸಿ ಪರಸ್ಪರರ ಆತ್ಮಗೌರವ ಕಾಪಾಡಲು ಪ್ರಯತ್ನಿಸಿ.
ಪಾಕೆಟ್ ಮನಿಗೆ ಇಲ್ಲ ನಿರ್ಬಂಧ : ನಮ್ಮಿಬ್ಬರ ಮುಕ್ತ ಜೀವನಕ್ಕೆ ಇದುವೇ ಮಂತ್ರ. ಮನೆ ಖರ್ಚಿನಲ್ಲಿ ನಾವಿಬ್ಬರೂ ಸಮಾನವಾಗಿ ಪರಸ್ಪರ ಹಂಚಿಕೊಳ್ಳುತ್ತೇವೆ. ಪಾಕೆಟ್ ಮನಿಯ ಮೇಲೆ ನಿರ್ಬಂಧ ಇಲ್ಲ, ಇದು ಬ್ಯಾಂಕ್ ಉದ್ಯೋಗಿ ಶ್ರೇಯಾ ಮತ್ತು ಮ್ಯಾನೇಜರ್ ಹುದ್ದೆಯಲ್ಲಿರುವ ರವಿರಾಜ್ ಅವರ ಮಾತುಗಳು. ನೀವು ಮದುವೆ ಸಮಯದಲ್ಲಿ ಕೇವಲ 7 ವಚನ ಮಾತ್ರ ಸ್ವಿಕರಿಸಿದ್ದೀರಿ. ಮದುವೆಯ ಬಳಿಕ ಈ ಕಿವಿ ಮಾತುಗಳನ್ನು ಪಾಲಿಸಿ ಹಾಗೂ ಜೀವನದ ರಥ ಹೇಗೆ ಸಾಗುತ್ತದೆ ನೋಡಿ.
– ಡಾ. ನೀಲಾ