ಎಚ್ಚರ! ಯಾರಾದರೂ ನೋಡುತ್ತಿರಬಹುದು

ದೆಹಲಿ ಸರ್ಕಾರ ಈಗ ದೆಹಲಿ ಮಹಾನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಿ.ಸಿ. ಟಿವಿಗಳನ್ನು ಅಳವಡಿಸುತ್ತಿದೆ. ಇದಕ್ಕೆ ಕಾರಣ ನಾಗರಿಕರಿಗೆ ಸುರಕ್ಷತೆಯ ಅನುಭವ ಸಿಗಲಿ, ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬುದು ಅಪರಾಧಿಗಳಿಗೆ ಮನವರಿಕೆ ಆಗಲಿ ಎಂಬುದಾಗಿದೆ.

ಸಿಸಿ ಟಿವಿ ಈಗ ಎಂತಹ ಒಂದು ಆಧುನಿಕ ತಂತ್ರಜ್ಞಾನವೆಂದರೆ, ಯಾರನ್ನೇ ಆಗಲಿ, ಹೇಗೇ ಆಗಲಿ ಸುಲಭವಾಗಿ ಗುರುತಿಸಬಹುದಾಗಿದೆ. ಈಗ ಎಂತಹ ಕಂಪ್ಯೂಟರ್‌ ಪ್ರೋಗ್ರಾಮ್ ಗಳು ಬಂದಿವೆಯೆಂದರೆ, ಯಾರದೇ ಮುಖವನ್ನು ಅವರ ಆಧಾರ್‌ ಕಾರ್ಡ್‌, ರೇಶನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್ ಇವೆಲ್ಲವುಗಳಿಂದ ಹೆಕ್ಕಿ ತೆಗೆದು ಪತ್ತೆ ಹಚ್ಚುತ್ತದೆ.

ಚೀನಾ ದೇಶದ  ಒಂದು ನಗರದಲ್ಲಿ  ಅಮೆರಿಕಾದ ಪತ್ರಕರ್ತನೊಬ್ಬನಿಗೆ, ನೀವು ನಗರದಲ್ಲಿ ಎಲ್ಲಿಯೇ ಕಳೆದುಹೋದರೂ 5 ನಿಮಿಷದಲ್ಲಿ ನಿಮ್ಮನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಲಾಯಿತು. ಪತ್ರಕರ್ತ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ. ಆದರೆ ಪೊಲೀಸರು ಸಿಸಿ ಟಿವಿ ಮತ್ತು ಫೇಸ್‌ ರೆಕಾಗ್ನೇಶನ್‌ ತಂತ್ರಜ್ಞಾನದಿಂದ 5 ನಿಮಿಷದಲ್ಲಿ ಪತ್ತೆ ಹಚ್ಚಿದರು.

ಅರವಿಂದ ಕೇಜ್ರಿವಾಲ್‌ರವರ ಸಿಸಿ ಟಿವಿಗಳು ಇಷ್ಟೊಂದು ಕೆಲಸ ಮಾಡಲಿವೆಯೇ ಎಂದು ಹೇಳಲಾಗದು. ಆದರೆ ಜನರಿಗೆ ಸುರಕ್ಷತೆಯ ಅನುಭವವಂತೂ ದೊರೆಯಲಿದೆ. ಜನಸಂಚಾರವೇ ಇಲ್ಲದ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವೆನಿಸುತ್ತಿತ್ತು. ಇನ್ನು ಮುಂದೆ ಆ ಭಯ ಇರದು.

ಸಿಸಿ ಟಿವಿ ಕ್ಯಾಮೆರಾಗಳಿಂದ ಒಬ್ಬೊಬ್ಬರೇ ವಯಸ್ಸಾದವರು ಇರುವ ಮನೆಗಳಿಗೆ ಸಾಕಷ್ಟು ನೆಮ್ಮದಿ ನಿರಾಳತೆ ದೊರೆಯಲಿದೆ. ಅವರು ತಮ್ಮ ಸಂದೇಶವನ್ನು ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರಬಹುದಾಗಿದೆ. ಏಕಾಂಗಿ ಮಹಿಳೆಯರಿಗೂ ಸುರಕ್ಷತೆಯ ಅನುಭವ ಉಂಟಾಗಬಹುದು. ತಮ್ಮ ಮನೆಯೊಳಗೆ ಯಾರಾದರೂ ನುಗ್ಗಲು ಪ್ರಯತ್ನಿಸಿದರೆ ಅವರು ಸಿಕ್ಕಿಬೀಳುತ್ತಾರೆ. ಇದರಿಂದ ಅನಧಿಕೃತ ಕಟ್ಟಡ ನಿರ್ಮಾಣದ ಮೇಲೂ ನಿರ್ಬಂಧ ಹೇರಲು ಸಾಧ್ಯವಾಗುತ್ತದೆ.

ಈ ರೀತಿಯ ಕಣ್ಗಾವಲು ಒಂದು ರೀತಿಯಲ್ಲಿ  ಒಳ್ಳೆಯದು. ಆದರೆ ಇದರ ಬೀಗದ ಕೈ ಯಾರ ಬಳಿ ಇರಲಿದೆ? ಹಾಗೊಂದು ವೇಳೆ ಯಾವುದೊ ಒಂದು ಕ್ಯಾಮೆರಾ ಯಾವುದೊ ಒಂದು ಬೆಡ್‌ರೂಮಿನೊಳಗೆ ಇಣುಕಿದರೂ ಆಶ್ಚರ್ಯ ಪಡಬೇಕಿಲ್ಲ. ಇಂದಿನ ಆಧುನಿಕ ಕ್ಯಾಮೆರಾಗಳನ್ನು 360 ಡಿಗ್ರಿಯಲ್ಲಿ ಸುತ್ತಾಡಿಸಬಹುದು, ಅದು ಕೂಡ ರಿಮೋಟ್‌ನಿಂದ. ರಸ್ತೆ ನೋಡು ನೋಡುತ್ತಿದ್ದಂತೆ ಯಾವ ಜೋಡಿಯ ರೀಲ್‌ ಆಗುತ್ತೋ ಹೇಳಲಾಗದು.

ಅರವಿಂದ್‌ ಕೇಜ್ರಿವಾಲ್‌‌ರವರು ಈ ಟಿವಿ ಫುಟೇಜಸ್‌ನ್ನು ರೆಸಿಡೆಂಟ್‌ ವೆಲ್‌‌ಫೇರ್‌ ಅಸೋಸಿಯೇಶನ್‌ ಜೊತೆ ಹಂಚಿಕೊಳ್ಳಲು ಕೂಡ ಯೋಜನೆ ಹಾಕಿಕೊಂಡಿದ್ದಾರೆ. ಇದೊಂದು ಅಪಾಯಕಾರಿ ಹೆಜ್ಜೆ.  ಇದು ಜನರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ದಾಳಿ ಎಂದು ಹೇಳಬಹುದು. ಪೊಲೀಸರು ಸಿಸಿ ಟಿವಿಯನ್ನು ಪರಿಶೀಲಿಸುವುದು ಯಾವುದಾದರೂ ಅಪರಾಧದ ಘಟನೆ ನಡೆದಾಗ ಮಾತ್ರ. ಆದರೆ ರೆಸಿಡೆಂಟ್‌ ವೆಲ್‌‌ಫೇರ್‌ ಸೊಸೈಟಿಯಲ್ಲಿ ಯಾವುದೇ ಮನೆಯ ಮೇಲೆ ವಿಶೇಷ ದೃಷ್ಟಿ ಇಡಬಹುದು. ಯಾವುದಾದರೂ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಅವರು ಮನೆಯಿಂದ ಹೊರಗೆ ಬರುವುದು ಹಾಗೂ ಅವರ ಬಾಯ್‌ಫ್ರೆಂಡ್‌ಗಳ ಇತಿಹಾಸವನ್ನು ಕೂಡ ಜಾಲಾಡಬಹುದು.

ಇದರಲ್ಲಿ ಮತ್ತೊಂದು ಅಪಾಯ ಇದೆ. ಈಗ ಹಳೆಯ ಸಲ್ವಾರ್‌ ಸೂಟ್‌ ಧರಿಸಿ ಹೋಗುವುದೂ ಅಪಾಯಕರವೇ! ಕ್ಯಾಮೆರಾ ಸದಾ ಫೋಟೊ ತೆಗೆಯುತ್ತಿರುತ್ತದೆ. ಹೀಗಾಗಿ ಒಳ್ಳೆಯ ಡ್ರೆಸ್‌ ಧರಿಸಿಯೇ ಹೋಗಿ. ಲಿಪ್‌ಸ್ಟಿಕ್‌ ಹಚ್ಚಿಕೊಳ್ಳಲು ಮರೆಯದಿರಿ. ಬ್ಯೂಟಿಪಾರ್ಲರಿಗೆ ದಿನ ಹೋಗಲು ಆಗದಿದ್ದರೆ ವಾರಕ್ಕೆರಡು ಸಲವಾದರೂ ಹೋಗಲೇಬೇಕು ಇದೆಲ್ಲ ಅರವಿಂದ್‌ ಕೇಜ್ರಿವಾಲ್‌ ಅವರ ಕೃಪಾ ಕಟಾಕ್ಷದಿಂದ.

ಘೋಷಣೆ ಹೆಚ್ಚು ಕೆಲಸ ಕಡಿಮೆ

ಸ್ವಚ್ಛ ಭಾರತದ ಕಲ್ಪನೆ ಮಾಡಿಕೊಳ್ಳುವುದು ಸುಲಭ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಚಂದ್ರಲೋಕಕ್ಕೆ ಮಾನವನನ್ನು ಕಳಿಸುವಷ್ಟೇ ಕಠಿಣವಾಗಿದೆ. ಮಾನವನನ್ನು ಚಂದ್ರಲೋಕಕ್ಕೆ ಕಳಿಸಲು ನೂರಾರು ಉತ್ಸಾಹಿ ಎಂಜಿನಿಯರ್‌ಗಳ ಅವಶ್ಯಕತೆ ಬೀಳುತ್ತದೆ. ಅವರು ಒಂದು ಕಡೆ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಳಿಕ ಅಷ್ಟೇ ಸುಲಭವಾಗಿ ನಿಯಂತ್ರಣ ಮಾಡುತ್ತಾರೆ. ಕಸವನ್ನು ಎತ್ತಲು ಕೋಟ್ಯಂತರ ರೂ.ಗಳ ಅವಶ್ಯಕತೆ ಇರುತ್ತದೆ. ಆದರೆ ಪರಸ್ಪರರ ಮೇಲೆ ಕಣ್ಗಾವಲು ಇಡಲು ಸಾಧ್ಯವಾಗುವುದಿಲ್ಲ.

ಲಖ್ನೌನ ಒಂದು ಕಾಲೋನಿಯಲ್ಲಿ ಆತುರಾತುರದಲ್ಲಿ ಒಂದು ಖಾಸಗಿ ಕಂಪನಿಗೆ ಕಸ ಎತ್ತುವ ಗುತ್ತಿಗೆ ನೀಡಲಾಯಿತು. ಕೆಲವೇ ದಿನಗಳಲ್ಲಿ ಮನೆ ಮನೆಗೆ ಕಸ ಎತ್ತಿದ ಬಗ್ಗೆ ಬಿಲ್‌ಗಳೇನೊ ಬಂದವು. ಆದರೆ ಕಸದ ಗುಡ್ಡೆಗಳನ್ನು ಸರ್ಕಾರಿ ನೀತಿ ನಿಯಮದಂತೆ ಎತ್ತಲಾಯಿತು. ದೇಶದ ಮೂಲೆ ಮೂಲೆಯಲ್ಲೂ ಹೀಗೆಯೇ ಆಗುತ್ತಿವೆ. ಖಾಸಗೀಕರಣವೇನೊ ಆಗುತ್ತಿದೆ, ಆದರೆ ಕಸ ವಿವೇವಾರಿಯ ಮಹತ್ವ ಗೊತ್ತಿರದ ಕಾರಣ ಅದನ್ನು ನಿರ್ಹಿಸುವುದು ಕಷ್ಟವಾಗುತ್ತಿದೆ.

ಕಸವನ್ನು ಅಂತಿಮ ಹಂತದತನಕ ಸಾಗಿಸುವುದು ನಿಜಕ್ಕೂ ಕಬ್ಬಿಣದ ಕಡಲೆಯಂತಾಗಿದೆ. ಕಸವನ್ನು ಮನೆಗಳಿಂದ ಒಂದು ಹಂತದ ತನಕ ಒಯ್ಯುವ ಕೆಲಸವನ್ನೇನೊ ಕಂಪನಿಗಳು ಮಾಡುತ್ತಿವೆ. ಆದರೆ ಅದರ ನಂತರದ ಕೆಲಸಗಳು ನೆರವೇರುತ್ತಿಲ್ಲ. ನಗರದ ಬೀದಿಗಳಿಂದ ಕಸ ಸಂಗ್ರಹಿಸುವುದು ಹಾಗೂ ಅದನ್ನು ಸಂಗ್ರಹಾಗಾರದ ತನಕ ಅಥವಾ ಸ್ಯಾನಿಟರಿ ಲ್ಯಾಂಡ್‌ ಫಿ‌ಲ್‌‌ಗೆ ಒಯ್ದುಹಾಕುವ ಕೆಲಸವನ್ನು ಕಾಲೋನಿಯ ಕಂಪನಿಗಳು ಮಾಡುವುದಿಲ್ಲ. ಒಂದು ವೇಳೆ ಯಾವುದೋ ಒಂದು ಕಂಪನಿಗೆ ಕೊನೆಯ ಹಂತದ ತನಕ ಕೆಲಸ ಒಪ್ಪಿಸಿದರೆ, ಅದನ್ನು ನಿರ್ವಹಿಸುವುದು ದೊಡ್ಡ ದೊಡ್ಡ ಕಂಪನಿಗಳಿಗೂ ಸಾಧ್ಯವಿಲ್ಲ. ಇದರಲ್ಲಿ ಮಧ್ಯಮ ಸ್ತರದ ನಗರಗಳಿಗಾಗಿಯೇ ನೂರಾರು ವಾಹನಗಳು, ಆಟೋಮ್ಯಾಟಿಕ್‌ ಲೋಡರ್‌ ಡಂಪರ್‌ ಕಂಪ್ರೆಶನ್‌ ಮಶೀನುಗಳು ಹಾಗೂ ಲ್ಯಾಂಡ್‌ ಫಿಲ್ ‌ಮ್ಯಾನೇಜ್‌ಮೆಂಟ್‌ಗಳು ಅತ್ಯಶ್ಯಕ ಇದರ ಪರಿಣಾಮವೆಂಬಂತೆ ಅಷ್ಟಿಷ್ಟು ಪರಿವರ್ತನೆಯಂತೂ ಆಗಿದೆ. ಆದರೆ ಹೆಚ್ಚುತ್ತಿರುವ ಕಸದ ದುರ್ಗಂಧವನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ರಸ್ತೆ ಸಂಪರ್ಕ ಜಾಲ ಹೆಚ್ಚುತ್ತಾ ಹೊರಟಂತೆ, ಕಸದ ಗುಡ್ಡೆಗಳ ಸಂಖ್ಯೆಯೂ ಹೆಚ್ಚುತ್ತ ಹೊರಟಿದೆ. ದೇಶದಲ್ಲಿ ಘೋಷಣೆ ಕೂಗುವುದು ಹೆಚ್ಚಾಗುತ್ತಿದೆ, ಆದರೆ ಆಗುತ್ತಿರುವ ಕೆಲಸ ಮಾತ್ರ ಕಡಿಮೆ.

ಕೆಂಪು ಕೋಟೆಯಿಂದ `ಸ್ವಚ್ಛ ಭಾರತ’ ಘೋಷಣೆ ಹಾಕುವುದು ಸುಲಭ. ಆದರೆ ಪ್ರತಿನಗರಗಳಲ್ಲಿ ಕಸದ ಸಂಗ್ರಹಣೆ ವಿಲೇವಾರಿ ನಿರ್ವಹಣೆ ಕಷ್ಟದ ಕೆಲಸ ಅದು ಭಾಷಣದಿಂದ ಆಗದ ಮಾತು. ನಗರ ಪಾಲಿಕೆಗಳಲ್ಲಿ ಹೊಸದಾಗಿ ಬರುವ ಮುಖಂಡರು ಅಲ್ಲಿ ತಮ್ಮ ಕೆರಿಯರ್‌ ರೂಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಕಸದ ವಿಲೇವಾರಿ ಸಮಸ್ಯೆ  ಬಗೆಹರಿಸುವ ಕಾಳಜಿ ಮೊದಲ ದಿನದಿಂದಲೇ ಇರುವುದಿಲ್ಲ.

ಸ್ವಚ್ಛ ಭಾರತ ಎಂದಾದರೂ ಕಂಡುಬಂದೀತೆ ಎಂದೂ ನೋಡಬೇಕಿದೆ. ಘೋಷಣೆ ಹಾಗೂ ಭರವಸೆಗಳ ಹಾಸಿಗೆಯನ್ನು ಕಸದ ಗುಡ್ಡೆಯ ಮೇಲೆ ಹಾಸಿ ಅದನ್ನು ಮುಚ್ಚಿಬಿಡಿ.

ಕ್ಯಾನ್ಸರ್‌ನ್ನು ಹೀಗೆ ಸೋಲಿಸಿ

ಕ್ಯಾನ್ಸರ್‌ ಈಗ ಬಹಳಷ್ಟು ಜನರನ್ನು ಬಂಧಿಸುತ್ತಿದೆ. ಪ್ರತಿಯೊಂದು ಆಸ್ಪತ್ರೆಯಲ್ಲೂ ಕ್ಯಾನ್ಸರ್‌ ವಿಭಾಗಗಳಿಗೆ ಹೆಚ್ಚೆಚ್ಚು ಸ್ಥಳಾವಕಾಶ ನೀಡಲಾಗುತ್ತಿದೆ. ಮೊದಲು ಈ ಕಾಯಿಲೆ ಗುಪ್ತಗಾಮಿನಿಯ ಹಾಗೆ ಇರುತ್ತಿತ್ತು. ಆದರೆ ಆಧುನಿಕ ತಂತ್ರಜ್ಞಾನದ ಕಾರಣದಿಂದ ಕ್ಯಾನ್ಸರ್‌ ರೋಗ ದೇಹದ ಯಾವ ಭಾಗದಲ್ಲಿ ಯಾವ ಅಂಗದಲ್ಲಿ ವ್ಯಾಪಿಸುತ್ತ ಹೊರಟಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕ್ಯಾನ್ಸರ್‌ ರೋಗವನ್ನು ದೇಹದಲ್ಲಿಟ್ಟುಕೊಂಡೇ ಅನೇಕ ವರ್ಷಗಳ ಕಾಲ ಜೀವನ ನಡೆಸಬಹುದು. ಕೆಲವರಂತೂ ಅದನ್ನು ಬಹಳ ಸಹಜ ಎಂಬಂತೆ ಭಾವಿಸುತ್ತಾರೆ, ಲವಲವಿಕೆಯಿಂದ ಜೀವಿಸುತ್ತಾರೆ.

ನಟಿ ಸೋನಾಲಿ ಬೇಂದ್ರೆ ಕೂಡ ಹಾಗೆಯೇ ಮಾಡಿದ್ದಾರೆ. ತಮಗೆ ಕ್ಯಾನ್ಸರ್‌ ಆಗಿದೆ ಎನ್ನುವುದು ಅವರಿಗೆ ಗೊತ್ತಾಯಿತು. ಹಾಗೆಂದು ಅವರು ಆ ವಿಷಯ ಗೌಪ್ಯವಾಗಿಡಲಿಲ್ಲ. ಕ್ಯಾನ್ಸರ್‌ ವಿಷಯ ಬಹಿರಂಗಗೊಳಿಸಿದರು. ಸಹೋದ್ಯೋಗಿಗಳು, ಸಂಬಂಧಿಕರು ಹಾಗೂ ಅಭಿಮಾನಿಗಳು ತಮಗೆ ಉತ್ಸಾಹ ತುಂಬಬೇಕೆಂದು ಅವರು ಬಯಸುತ್ತಾರೆ. ಅವರು ಕ್ಯಾನ್ಸರ್‌ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿ ಮೆಟಾಸ್ಟೆಸಿಸ್‌ ಸ್ಟೇಜ್‌ನಲ್ಲಿ ಹೈಗ್ರೇಡ್‌ನಲ್ಲಿ ಇದೆಯೆಂದು ಹೇಳಿದರು.

ಕ್ಯಾನ್ಸರ್‌ನ್ನು ಸಮರ್ಥವಾಗಿ ಎದುರಿಸಬೇಕು, ಹೋರಾಡಬೇಕೇ ಹೊರತು ಅದು ಬಂದಿದೆಯೆಂದು ಮುಖ ಮುಚ್ಚಿಕೊಂಡು ಅಳುತ್ತಾ ಕುಳಿತುಕೊಳ್ಳಬಾರದು. ಔಷಧಿ, ಚಿಕಿತ್ಸೆಯಿಂದ ಕ್ಯಾನ್ಸರ್‌ನ್ನು ನಿಯಂತ್ರಿಸಬಹುದು. ಕೂದಲು ಉದುರುತ್ತದೆ, ಆಸ್ಪತ್ರೆಗೆ ಓಡಾಡಬೇಕಾಗುತ್ತದೆ ಎಂಬ ಕಾರಣದಿಂದ ಅದನ್ನು ಬಚ್ಚಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕ್ಯಾನ್ಸರ್‌ ಚಿಕಿತ್ಸೆಗೆ ಹಣದ ಜೊತೆ ಬೇಕಾಗುವ ಮತ್ತೊಂದು ಅಸ್ತ್ರವೆಂದರೆ ಅದು ಧೈರ್ಯ. ದೇಹ ಕ್ಯಾನ್ಸರ್‌ಮುಕ್ತ ಆಗುತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ಅವರಿಗೆ ಕ್ಯಾನ್ಸರ್‌ನೊಂದಿಗೆ ಹೋರಾಡುವ ಶಕ್ತಿಯಂತೂ ಬರುತ್ತದೆ.

ಈಗ ಕ್ಯಾನ್ಸರ್‌ಗೆ ಹೊಸ ಹೊಸ ಔಷಧಿಗಳು ಲಭಿಸುತ್ತಿವೆ. ತಮ್ಮ ಜೀವನ ಇನ್ನು ಕೆಲವೇ ತಿಂಗಳು ಮಾತ್ರ ಎಂದು ಬಹಳ ಜನ ಅಂದುಕೊಂಡಿರುತ್ತಾರೆ. ಆದರೆ ಈಗ ಹಲವು ವರ್ಷಗಳ ಕಾಲ ನಿರಾಳತೆಯಿಂದ ಜೀವಿಸುವುದೇ ನಾವು ಕ್ಯಾನ್ಸರ್‌ಗೆ ಹಾಕುವ ದೊಡ್ಡ ಸವಾಲಾಗಿದೆ.

ಕಾರು ಅಪಘಾತಗಳು ಭಾರಿ ಸಂಖ್ಯೆಯಲ್ಲಿ ಘಟಿಸುತ್ತವೆ. ಹೆದ್ದಾರಿಗೆ ವಾಹನ ತಲುಪುತ್ತಲೇ ನಾವಿಂದು ಮನೆಗೆ ಹೋಗುತ್ತೇವೋ ಇಲ್ಲವೋ ಎಂಬ ಭೀತಿ ಕಾಡುತ್ತದೆ. ಆದರೆ ಈ ಭಯದಿಂದ ಕಾರನ್ನು ರಸ್ತೆಗಿಳಿಸದಿರುವುದು ಮೂರ್ಖತನದ  ಸಂಗತಿ.

ಸೋನಾಲಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಕ್ಯಾನ್ಸರ್‌ನ ಅಸ್ತಿತ್ವ ಗೊತ್ತಾಗುತ್ತಿದ್ದಂತೆ ರೋಗಿ ತನ್ನ ಜೀವನಶೈಲಿಯನ್ನು ಬದಲಿಸಿಕೊಂಡು ಜೀವಿಸುವ ಅಭ್ಯಾಸ ಮಾಡಿಕೊಳ್ಳಬೇಕೇ  ಹೊರತು, ಹಾಸಿಗೆಯಲ್ಲಿ ಮಲಗಿಕೊಂಡು ಸಾವಿನ ನಿರೀಕ್ಷೆ ಮಾಡುತ್ತಿರಬಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ