ನೀಲಾ ಹಾಗೂ ಶ್ರೀಕಾಂತ್‌ರ ಮದುವೆ ಅದ್ಧೂರಿಯಾಗಿ ಮುಗಿಯಿತು. ಮನೆಯಲ್ಲಿ ನಗುವಿನ ವಾತಾವರಣ ಚಿಮ್ಮುತ್ತಿತ್ತು. ಶ್ರೀಕಾಂತನ ಅಮ್ಮ ಸುಮಿತ್ರಾ ಹಾಗೂ ಹೆಂಡತಿ ನೀಲಾ, ಅತ್ತೆ ಸೊಸೆಯಂತೆ ಅಲ್ಲ, ತಾಯಿ ಮಗಳಂತೆಯೇ ಕಂಡುಬರುತ್ತಿದ್ದರು. ಅತಿಥಿಗಳೆಲ್ಲ ಹೊರಟು ಹೋದರು. ಆ ಬಳಿಕ ಸುಮಿತ್ರಾ, “ನೀಲಾ ಈಗ ನೀನು ಫ್ರೀ ಆಗಿದಿಯಾ… ಬಾ ಲೆಕ್ಕ ಮಾಡೋಣ,” ಎಂದು ಹೇಳಿದರು. ನೀಲಾಗೆ ಅತ್ತೆ ಏನು ಹೇಳುತ್ತಿದ್ದಾರೆಂದು ಅರ್ಥ ಆಗಲಿಲ್ಲ, “ಎಂತಹ ಲೆಕ್ಕ? ನನಗೇನೂ ಅರ್ಥ ಆಗಲಿಲ್ಲ!”

“ಅದೇ ನಿನ್ನ ಕೈಗೆ ಬಂದು ಹೋದವರೆಲ್ಲ ಕೊಟ್ಟು ಹೋದರಲ್ಲ ಉಡುಗೊರೆಯ ಕವರ್‌ಗಳು….”

ನೀಲಾ ಕಕ್ಕಾಬಿಕ್ಕಿಯಾದಳಾದರೂ ಅದನ್ನು ತೋರಿಸಿಕೊಡದೆ ತನ್ನ ಬ್ಯಾಗಿಂದ ಎಲ್ಲ ಕವರ್‌ಗಳನ್ನು ತೆಗೆದುಕೊಟ್ಟಳು.

`ಯಾರು ಯಾರು ಎಷ್ಟು ಕೊಟ್ಟಿರಬಹುದು ಎಂದು ನೋಡಲು ಕೇಳ್ತಿರಬಹುದು, ನಂತರ ತನಗೇ ವಾಪಸ್‌ ಕೊಡಬಹುದು,’ ಎಂದುಕೊಂಡಿದ್ದಳು ನೀಲಾ. ಆದರೆ ಆದದ್ದೇ ಬೇರೆ . ಆ ಕವರ್‌ನಲ್ಲಿದ್ದ ನೋಟುಗಳನ್ನೆಲ್ಲಾ ಎಣಿಸಿಕೊಂಡು ಅವರು ತಮ್ಮ ಪರ್ಸ್‌ಗೆ ಹಾಕಿಕೊಂಡರು.

“ಅತ್ತೆ, ಆ ಹಣವನ್ನೆಲ್ಲಾ ನೀವು ಇಟ್ಟುಕೊಳ್ತೀರಾ…?”

“ಹೌದು. ಆ ಹಣವನ್ನು ನಾನೇ ಇಟ್ಟುಕೊಳ್ತೀನಿ. ಅನೇಕ ವರ್ಷಗಳಿಂದ ನಾನೇ ಎಲ್ಲರಿಗೂ ಕೊಡುತ್ತಾ ಬಂದಿದ್ದೇನೆ. ನಾನು ಕೊಟ್ಟಿದ್ದು ಈಗ ನನಗೆ ವಾಪಸ್‌ ಬರ್ತಿದೆ,” ಎಂದಳು ಅತ್ತೆ.

“ಆದರೆ ಆ ಹಣ ಸೊಸೆಯದ್ದು ಅಲ್ವಾ…?”

“ಇಲ್ಲ ನೀಲಾ, ಅದರ ಮೇಲೆ ಅತ್ತೆಯದೇ ಹಕ್ಕು ಇರುತ್ತದೆ. ಏಕೆಂದರೆ ನಾನೇ ಹಲವು ವರ್ಷಗಳಿಂದ ಉಡುಗೊರೆ ಕೊಡುತ್ತಾ ಬಂದಿದ್ದೆ. ನಾನೇ ಕೊಡದಿದ್ದರೆ ಇವರೆಲ್ಲ ನಿನಗೆ ಹೇಗೆ ಕೊಟ್ಟಿರುತ್ತಿದ್ದರು…?”

ಹೊಸ ಸೊಸೆ ನೀಲಾ ಮೌನ ವಹಿಸಿದಳು. ಆದರೆ ಅವಳಿಗೆ ಅತ್ತೆಯ ಬಗ್ಗೆ ವಿಪರೀತ ಕೋಪ ಬಂತು. ಅವಳು ತನ್ನ ಪರಿಚಿತರು, ಸಂಬಂಧಿಕರಿಗೆ ಈ ವಿಷಯದ ಬಗ್ಗೆ ಹೇಳಿದಳು. ಅತ್ತೆಯ ಕಿವಿಗೆ ಸೊಸೆ ತನ್ನ ಬಗ್ಗೆ ಏನೇನು ಹೇಳುತ್ತಿದ್ದಾಳೆ ಎಂಬ ವಿಷಯ ತಿಳಿದು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಳು.

ಸಂಬಂಧದಲ್ಲಿ ಬಿರುಕು

ಅಮ್ಮ ಮಗಳಿನಂತಿದ್ದ ಅವರ ಪ್ರೀತಿ ಕ್ಷಣಾರ್ಧದಲ್ಲಿಯೇ ಹುಸಿ ಎನ್ನುವುದು ಅರಿವಾಯಿತು. ಆರಂಭದ ದಿನಗಳಲ್ಲಿಯೇ ಸಂಬಂಧಗಳಲ್ಲಿ ಎಷ್ಟೊಂದು ಕಹಿ ತುಂಬಿಕೊಂಡಿತೆಂದರೆ, ಅದರಲ್ಲಿ ಮುಂದೆಂದೂ ಮಾಧುರ್ಯತೆ ಬೆರೆಯಲೇ ಇಲ್ಲ.

ಅತ್ತೆ ಎಲ್ಲರ ಮುಂದೆ ಹೇಳುವುದೇನೆಂದರೆ, ನೀಲಾ ಈ ಹಣದ ಮೇಲೆ ಅತ್ತೆಯದೇ ಹಕ್ಕು ಎಂದು ಹೇಳಿ ಕೊಟ್ಟುಬಿಡಬೇಕಾಗಿತ್ತು. ಇತ್ತ ನೀಲಾ ಆ ಹಣ ತನಗೆ ಕೊಟ್ಟದ್ದು  ತನಗೆ ಸೇರಬೇಕಾದದ್ದು ಎಂದು ಪಟ್ಟುಹಿಡಿದಳು.

ಒಂದು ಶಾಸ್ತ್ರ ಅತ್ತೆ ಸೊಸೆಯ ಮಧುರ ಸಂಬಂಧದಲ್ಲಿ ಹುಳಿ ಹಿಂಡಿತು. ಅತ್ತೆ ಸೊಸೆಯ ಮಧ್ಯೆ ಯಾವ ಪ್ರೀತಿ ವಿಶ್ವಾಸಗಳು ಕಂಡುಬರುತ್ತಿದ್ದವೋ, ನಾಲ್ಕೇ ದಿನದಲ್ಲಿ ಸಂಬಂಧದಲ್ಲಿ ಬಿರುಕು ಮೂಡಿತು. ಇದೆಲ್ಲ ಆದದ್ದು ಹಣದಿಂದ. ಅತ್ತೆ ಸೊಸೆ ತಮ್ಮ ಸಂಬಂಧವನ್ನು ಬಲಪಡಿಸಲು ಏನೆಲ್ಲ ಪ್ರಯತ್ನ ನಡೆಸಿದ್ದರು. ಆದರೆ 3 ವರ್ಷಗಳ ಬಳಿಕ ಸಂಬಂಧದಲ್ಲಿ ಬಿದ್ದ ಆ ಬಿರುಕು ಮಾತ್ರ ಮುಚ್ಚಲಿಲ್ಲ. ಯಾವುದೇ ಮದುವೆಯ ಸಂದರ್ಭದಲ್ಲಿ ಅವರಿಗೆ ಹಳೆಯದು ನೆನಪಾದರೆ ವಾದವಿವಾದ ಮರುಕಳಿಸುತ್ತದೆ.

ಹೆಚ್ಚುತ್ತಿರುವ ಅಂತರ

ಅತ್ತೆ ತನ್ನ ಮನೆಗೆ ಹಿರಿಯ ಸೊಸೆ ಸುಶೀಲಾಳನ್ನು ಸಾಧಾರಣ ಮನೆತನದಿಂದ ತಂದಿದ್ದಳು. ಆಕೆ ವರದಕ್ಷಿಣೆ ರೂಪದಲ್ಲಿ ಹೆಚ್ಚಿಗೆ ಏನನ್ನೂ ತಂದಿರಲಿಲ್ಲ. ಕಿರಿಯ ಸೊಸೆ ಸ್ನೇಹಾ ಶ್ರೀಮಂತ ಮನೆತನದಿಂದ ಬಂದವಳಾಗಿದ್ದಳು. ಆಕೆ ವರದಕ್ಷಿಣೆ ರೂಪದಲ್ಲಿ ಸಾಕಷ್ಟು ತಂದಿದ್ದಳು. ಯಾವುದೊ ಒಂದು ಸಮಾರಂಭದಲ್ಲಿ ಅತ್ತೆ ಸೊಸೆಯರಿಬ್ಬರಿಗೂ ಉಡುಗೊರೆ ಕೊಡುವ ಶಾಸ್ತ್ರದಲ್ಲಿ, ಹಿರಿಯ ಸೊಸೆಗೆ ಆರತಿ ತಟ್ಟೆಯಲ್ಲಿ ಕೇವಲ 100 ರೂ. ಇಟ್ಟರೆ, ಕಿರಿಯ ಸೊಸೆಯ ಆರತಿ ತಟ್ಟಯಲ್ಲಿ ಚಿನ್ನದ ಸೆಟ್‌ನ್ನು ಇಟ್ಟಿದ್ದಳು. ಅದನ್ನು ನೋಡಿ ಹಿರಿಯ ಸೊಸೆಗೆ ಬಹಳ ದುಃಖವಾಯಿತು.

ಅವಳು ಬಾಯಿಬಿಟ್ಟು ಏನೂ ಹೇಳಲಿಲ್ಲ. ಆದರೆ ಅತ್ತೆಯ ಈ ಭೇದಭಾವ ಧೋರಣೆ ಅವಳ ಮನಸ್ಸಿನಲ್ಲಿ ಎಷ್ಟೊಂದು ಆಳವಾದ ಗಾಯ ಮಾಡಿತೆಂದರೆ, ಆಕೆ ಕ್ರಮೇಣ ಅತ್ತೆಯಿಂದ ದೂರವಾಗುತ್ತಾ ಹೋದಳು. ಹಿಂದೊಮ್ಮೆ ಕೂಡ ಹಿರಿಯ ಸೊಸೆ ಬಳಿ ಇದ್ದ ಉಡುಗೊರೆಯ ಮೊತ್ತವನ್ನು ಒಂದು ರೂ. ಕೂಡ ಬಿಡದೆ ಅತ್ತೆ ವಸೂಲಿ ಮಾಡಿದ್ದಳು. ಅದೇ ಕಿರಿಯ ಸೊಸೆ ಬಳಿಯಿದ್ದ ಹಣದಲ್ಲಿ ಒಂದು ರೂಪಾಯಿ ಕೂಡ ತೆಗೆದುಕೊಂಡಿರಲಿಲ್ಲ. ಅಮ್ಮನ ಈ ಭೇದಭಾವ ಸುಶೀಲಾಳ ಪತಿ ಸತೀಶ್‌ನ ಗಮನಕ್ಕೂ ಬಂದಿತ್ತು. ಹೀಗಾಗಿ ಮಗ ಸೊಸೆ ಅಮ್ಮನಿಂದ ದೂರವಾಗುತ್ತಾ ಹೋದರು.

ಇತರರ ಮನಸ್ಸನ್ನು ನೋಯಿಸುವ ಇಂತಹ ಪದ್ಧತಿಗಳು, ಸಂಪ್ರದಾಯಗಳಿಂದ ಯಾವ ಲಾಭ? ಮದುವೆ ಸಮಾರಂಭಗಳು ಮನೆಯಲ್ಲಿ ಜೀವನದಲ್ಲಿ ಖುಷಿಯನ್ನು ತರಬೇಕು. ಆದರೆ ಕೆಲವು ಪದ್ಧತಿಗಳು, ವಿಧಿವಿಧಾನಗಳು ಮನೆಯ ಆಂತರಿಕ ಸಂಬಂಧದಲ್ಲಿ ಬಹಳಷ್ಟು ಕಹಿ ತುಂಬುತ್ತವೆ.  ನಮ್ಮ ಸಮಾಜ ಆಡಂಬರಗಳ ರೀತಿ ರಿವಾಜಿನಿಂದ ತುಂಬಿ ಹೋಗಿದೆ. ಕೆಲವೇ ಕೆಲವು ಜನರು ಮಾಡುವ ಕೆಲವು ಪದ್ಧತಿಗಳಿಂದ ಸಂಬಂಧಗಳಲ್ಲಿ ಒಡಕು ಉಂಟಾಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಯಾವುದೇ ವಿಧಿ ವಿಧಾನ ಸಂಬಂಧಗಳಿಗಿಂತ ಮಿಗಿಲಾಗಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.

–  ಜಿ. ಪೂರ್ಣಿಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ