ಅರ್ಧಕ್ಕಿಂತ ಹೆಚ್ಚು ವಯಸ್ಸು ಕಳೆದು ಹೋದ ಬಳಿಕ ಜೀವನದಲ್ಲಿ ಹೊಸ ಸಂಗಾತಿಯ ರೂಪದಲ್ಲಿ ಯಾರಾದರೂ ಸ್ತ್ರೀ ಅಥವಾ ಪುರುಷ ಪ್ರವೇಶವಾದಾಗ ಒಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ಈ ಹೊಸ ಅಧ್ಯಾಯ ಓದುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟಕರ ಕೆಲಸ. ಈ ಹೊಸ ಸಂಬಂಧದಲ್ಲಿ ಅದರಲ್ಲೂ ವಿಶೇಷವಾಗಿ ಇಳಿ ವಯಸ್ಸಿನಲ್ಲಿ ಎದುರಿಸಿದ ಪ್ರೀತಿ ಅದರ ಸಾಧಕ ಬಾಧಕಗಳು ಮತ್ತು ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ. ಏಕೆಂದರೆ ಈ ಹಂತದಲ್ಲಿ ಹೊಸ ಸಂಗಾತಿಯೊಂದಿಗೆ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದಲ್ಲಿ, ಅದರ ಜೊತೆಗಿರುವ ಅಪಾಯಗಳನ್ನು ಗಮನಿಸಬೇಕು. ಹಠ ಮತ್ತು ಮಾನಸಿಕ ಅಸಮತೋಲನದ ಸಂದರ್ಭದಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬಾರದು. ವಾಸ್ತವಿಕದ ನೆಲೆಗಟ್ಟಿನಲ್ಲಿ ತಿಳಿವಳಿಕೆಯಿಂದ ಕಾರ್ಯಪ್ರವೃತ್ತರಾಗಬೇಕು.

ಸ್ತ್ರೀ ಪುರುಷರ ಸ್ನೇಹಕ್ಕೆ ಸಂಬಂಧಪಟ್ಟ ಕೆಲವು ಸಂಗತಿಗಳು :

ಸ್ತ್ರೀ ಪುರುಷರ ಸಂಬಂಧದಲ್ಲಿ ಕೇವಲ ಸ್ನೇಹ ಸಂಬಂಧವೆನ್ನುವುದು ಬಹಳ ಕಷ್ಟಕರ. ಅದು ಪ್ರೀತಿಗೆ ತಿರುಗುವ ಸಾಧ್ಯತೆಗಳೂ ಇರುತ್ತವೆ.

ಸ್ತ್ರೀ ಪುರುಷರ ಸ್ನೇಹ, ಕೇವಲ ಸಾಮಾನ್ಯ ಸ್ನೇಹದ ರೂಪದಲ್ಲಿ ಬಹಳ ದಿನಗಳ ಕಾಲ ಮುಂದುವರಿಯಬಹುದು. ಆದರೆ ಆ ಸ್ನೇಹದಲ್ಲಿ ರೊಮಾನ್ಸ್ ಇಣುಕಿದಾಗ ಸ್ನೇಹದ ವಯಸ್ಸು ಕಡಿಮೆಯಾಗುತ್ತದೆ. ಈ ಮಧ್ಯೆ ಸಂಬಂಧ ಮುರಿದುಬೀಳುವ ಆತಂಕ ಇರುತ್ತದೆ.

ಇಳಿಯಸ್ಸಿನಲ್ಲಿ ತದ್ವಿರುದ್ಧ ಲಿಂಗದವರ ಜೊತೆ ಸ್ನೇಹ ಯಾವಾಗ ಹಾಗೂ ಯಾವ ಸ್ಥಿತಿಯಲ್ಲಿ ಆಗಬಹುದು ಎಂಬುದಕ್ಕೆ ಬಹಳಷ್ಟು ಸಂಶೋಧನಗೆಳು ನಡೆದಿವೆ.

ಇಳಿವಯಸ್ಸಿನ ಮಹಿಳೆಯ ಜೊತೆ ಯುವಕನ ಸ್ನೇಹ ಆದಾಗ : ಎಷ್ಟೋ ಯುವಕರಿಗೆ ಮಾನಸಿಕ ಸ್ಥಿತಿ ಪರಿಪಕ್ವವಾಗಿರುತ್ತದೆ. ಅವರು ತಮ್ಮ ಹಾಗೆಯೇ ಮಾನಸಿಕವಾಗಿ ಪರಿಪಕ್ವವಾಗಿರುವ ಮಹಿಳೆಯ ಜೊತೆ ಸ್ನೇಹ ಬಯಸುತ್ತಾರೆ. ಇಂತಹದರಲ್ಲಿ ತನಗೆ ಹೆಚ್ಚಿನ ವಯಸ್ಸಿನ ಮಹಿಳೆಯ ಜೊತೆ ಸ್ನೇಹ ಉಂಟಾದಾಗ ಆಸಕ್ತಿ, ವರ್ತನೆ, ಯೋಚನೆ, ತಿಳಿವಳಿಕೆ ಮತ್ತು ದೃಷ್ಟಿಕೋನ ಇವುಗಳಲ್ಲಿ ಸಮಾನತೆ ಇರಲಿ. ಆಗಲೇ ಸ್ನೇಹ ಗಟ್ಟಿಯಾಗುತ್ತದೆ. ಆ ಬಳಿಕ ಈ ಸಂಬಂಧದಲ್ಲಿ ರೊಮಾನ್ಸ್ ಅಥವಾ ಮದುವೆಯ ರಂಗು ತುಂಬಿಕೊಂಡರೆ ಆಶ್ಚರ್ಯಪಡಬೇಕಿಲ್ಲ.

ಯುವತಿಯ ಸ್ನೇಹ ಇಳಿಯಸ್ಸಿನ ಪುರುಷನ ಜೊತೆ ಆದಾಗ : ಎಷ್ಟೋ ಯುವತಿಯರು ತಮಗಿಂತ ದುಪ್ಪಟ್ಟು ವಯಸ್ಸಿನ, ತಂದೆ ವಯಸ್ಸಿಗೆ ಸಮಾನ ಪುರುಷರ ಜೊತೆ ದೈಹಿಕವಾಗಿ, ಮಾನಸಿಕವಾಗಿ ಒಂದಾಗಲು ಯೋಚಿಸುತ್ತಾರೆ. ಮಾನಸಿಕವಾಗಿ ನೋಡಬೇಕೆಂದರೆ, ಇಂತಹ ಪುರುಷರು ವಯಸ್ಸಿನ ಪರಿಪಕ್ವತೆಯ ಜೊತೆ ಜೊತೆಗೆ ಸೆಕ್ಸ್ ಅಪೀಲ್‌ನಿಂದಲೂ ಭರ್ತಿಯಾಗಿರುತ್ತಾರೆ. ಅವರು ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳಲು ಚೆನ್ನಾಗಿ ಅರಿತಿರುತ್ತಾರೆ. ಆತ ತನ್ನ ವಯಸ್ಸಿನಿಂದಲ್ಲ, ತನ್ನ ವ್ಯಕ್ತಿತ್ವದಿಂದ ಗೆಲ್ಲುತ್ತಾನೆ.

ಇದನ್ನು ಹೇಳುವುದರ ಅರ್ಥ ಇಷ್ಟೇ, ಇಂತಹ ಪುರುಷನಿಗೆ ತಮ್ಮ ಹೆಚ್ಚಿನ ವಯಸ್ಸಿನ ಅನಿವಾರ್ಯತೆ ಅಥವಾ ಅಸೌಕರ್ಯಗಳಿಗಿಂತ ಹೆಚ್ಚಾಗಿ ತಮ್ಮ ವ್ಯಕ್ತಿತ್ವದ ಗುಣಗಳನ್ನು ಬಿಂಬಿಸುವ ಮತ್ತು ಅದನ್ನು ಪ್ರಸ್ತುತಪಡಿಸುವ ಬಗ್ಗೆ ಗಮನ ನೀಡುತ್ತಾನೆ. ಇಂತಹದರಲ್ಲಿ ಆ ವ್ಯಕ್ತಿಯ ಜೊತೆ ಭೇಟಿಯಾಗುವ, ಮಾತನಾಡುವ ಮಹಿಳೆ ಕೂಡ ಸ್ವತಃ ಆ ವ್ಯಕ್ತಿಯ ಬಗ್ಗೆ ಗಮನಕೊಡುತ್ತಾಳೆ. ಅವರ ಕುರಿತಾಗಿ ಕನಸು ಕಾಣುತ್ತಾಳೆ. ಇಂತಹ ಪುರುಷರ ವಂಶವಾಹಿ ಪ್ರಭಾವ ಕೂಡ ಸಾಕಷ್ಟು ಒಳ್ಳೆಯದಾಗಿರುತ್ತದೆ. ಅವರು ತಮ್ಮ ಕರ್ತವ್ಯ ವಿಚಾರ ಮತ್ತು ಸಾಮರ್ಥ್ಯದಲ್ಲಿ ಶಕ್ತಿಶಾಲಿ, ತನ್ನ ಇಡೀ ಕುಟುಂಬವನ್ನು ನಿರ್ವಹಣೆ ಮಾಡುವ ಹಾಗೂ ತನ್ನ ಉನ್ನತ ಹುದ್ದೆ ಮತ್ತು ಕರ್ಮಠ ಜೀವನವನ್ನು ಚೆನ್ನಾಗಿ ನಿರ್ವಹಣೆ ಮಾಡುವವರಾಗಿರುತ್ತಾರೆ. ಇಂತಹದರಲ್ಲಿ ಅವರಿಗಿಂತ ಕಡಿಮೆ ವಯಸ್ಸಿನ ಮಹಿಳೆಯರು ಅವರ ಬಗ್ಗೆ ಸಮರ್ಪಿತರಾಗಿ ತೃಪ್ತರಾಗುತ್ತಾರೆ.

ಎಷ್ಟೋ ಪ್ರಕರಣಗಳಲ್ಲಿ ಪತಿಯಿಂದಾದ ಅವಹೇಳನ ಕೂಡ ಸ್ತ್ರೀಯರಿಗೆ ಈ ಕರ್ಮಠ ಮತ್ತು ರೊಮ್ಯಾಂಟಿಕ್‌ ಪುರುಷರ ಬಗ್ಗೆ ಆಕರ್ಷಣೆಗೆ ಕಾರಣವಾಗುತ್ತದೆ. ಅವರ ಸಾಮೀಪ್ಯದಲ್ಲಿ ಅತೃಪ್ತ ಸ್ತ್ರೀಯರು ಆತ್ಮವಿಶ್ವಾಸ ವಾಪಸ್‌ ಪಡೆಯುತ್ತಾರೆ. ಆ ಪುರುಷರ ಮುಖಾಂತರ ದೊರೆತ ಪ್ರಶಂಸೆ, ನೆರವು ಅವರಿಗೆ ಜೀವನದ ದಾರಿಯಾಗಿ ಕಂಡುಬರಹುದು.

60+ ವಯಸ್ಸಿನರ ಜೊತೆ ಮಹಿಳೆಯರ ಒಲವು : ಇಂತಹ ಸ್ಥಿತಿ ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿದೆ. ಕೆಲಸ ಹಾಗೂ ವಹಿವಾಟಿನ ನಿಮಿತ್ತ ಇಳಿವಯಸ್ಸಿನ ಪುರುಷರ ಜೊತೆ ಅವರಿಗಿಂತ ಕಡಿಮೆ ವಯಸ್ಸಿನ ಮಹಿಳೆಯರ ನಿಕಟತೆ ನಿರಂತರವಾಗಿ ಮುಂದುವರಿದಲ್ಲಿ, ಪುರುಷರು ಅಂತಹ ಮಹಿಳೆಯರ ಜೊತೆ ಆತ್ಮೀಯತೆ ರೊಮಾನ್ಸ್ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ಪುರುಷರ ವ್ಯಕ್ತಿತ್ವದ ವಿಶೇಷ ಪ್ರಭಾವ ಉಂಟಾಗುತ್ತದೆ. ಅದೇ ಅವರು ಆ ಮಹಿಳೆಯರ ಜೊತೆ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ಇದು ಅವಲಂಬಿಸುತ್ತದೆ. ಎರಡನೆಯದು, ಪುರುಷನ ಪ್ರಭಾವ ಮತ್ತು ಆ ವ್ಯಕ್ತಿಯ ಜೊತೆ ಪುರುಷನ  ಅಪೇಕ್ಷೆಗಳು ನಿರ್ಧಾರವಾಗುತ್ತವೆ.

ಇಳಿವಯಸ್ಸಿನ ವ್ಯಕ್ತಿಯ ಚಪಲ ಹಾಗೂ ಸ್ತ್ರೀಯ ಬಗೆಗೆ ಅಪೇಕ್ಷೆಗಳು : ಇಂತಹ ಪುರುಷರು ಚಪಲ ಚೆನ್ನಿಗರಾಯ ಆಗಿರುತ್ತಾರೆ. ಅಂಥವರು ತಮ್ಮ ಅಪೇಕ್ಷೆ ಈಡೇರಿಸಿಕೊಳ್ಳಲು ಅತೃಪ್ತರಾಗಿರುವುದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಮಹಿಳೆಯನ್ನು ಭೋಗಿಸುವ ನೆಪ ಹುಡುಕಿಕೊಂಡು ಬಿಡುತ್ತಾರೆ. ಇದರಿಂದ ಅವರಿಗೆ ಸಮಾಜ ವ್ಯವಸ್ಥೆ ಅಥವಾ ನ್ಯಾಯ ವ್ಯವಸ್ಥೆಯನ್ನು ಒಪ್ಪದೇ ಇರುವ ದೋಷದಿಂದ ಹೊರಬರುವ ಅವಕಾಶ ದೊರೆಯುತ್ತದೆ. ಈ ರೀತಿಯಾಗಿ ಅಪರಾಧ ಪ್ರಜ್ಞೆಯಿಂದ ಬಚಾವಾಗಿ ಕೇವಲ ತಮ್ಮ  ಸ್ವಾರ್ಥಕ್ಕಷ್ಟೇ ಪ್ರಾಧಾನ್ಯತೆ ಕೊಡುತ್ತಾರೆ.

ಭೋಗಿ ಪುರುಷರನ್ನು ಗುರುತಿಸುವುದು ಹಾಗೂ ಸ್ತ್ರೀಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು : ಇದೊಂದು ಮಹತ್ವದ ಸಂಗತಿ. ನೌಕರಿ ಆಗಿರಬಹುದು ಅಥವಾ ವ್ಯಾಪಾರ ವಹಿವಾಟು, ಕೆರಿಯರ್‌ನ ಯಾವುದೇ ಹಂತದಲ್ಲಿ 20-40 ವಯಸ್ಸಿನ ಮಹಿಳೆಯರು ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರೊಂದಿಗೆ ಕೆಲಸ ಮಾಡಬೇಕಾಗಿ ಬರುತ್ತದೆ.

ಇಂತಹ ಸ್ತ್ರೀಯರು ತಮ್ಮ ಮಾತುಕಥೆ, ವಿಚಾರಗಳು ಹಾಗೂ ಗುಣ ಸ್ವಭಾವದ ಕಾರಣದಿಂದ ಸಾಮಾನ್ಯವಾಗಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗುತ್ತಾರೆ. ಅದೇ ಕಾರಣದಿಂದ ಇಳಿವಯಸ್ಸಿನ ಪುರುಷರು ಅಂತಹ ಮಹಿಳೆಯರ ಸಾಮೀಪ್ಯ ಬಯಸುತ್ತಾರೇನೊ? ಆದರೆ ಗಂಡಸರು ಸ್ನೇಹದ ಹೆಸರಿನಲ್ಲಿ ಅವರನ್ನು ಆಕರ್ಷಿಸಿ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ನೋಡುತ್ತಾರೆ. ಯಾವ ಸ್ತ್ರೀಯರು ಉದ್ದೇಶಪೂರ್ವಕವಾಗಿ ತಮ್ಮದೇ ಆದ ರಿಸ್ಕ್ ನಿಂದ ಇಂತಹ ಸಂಬಂಧಗಳಲ್ಲಿ ತಮ್ಮನ್ನು ತಾವು ಬೀಳಿಸಿಕೊಂಡಿರುತ್ತಾರೋ, ಅವರಿಗೆ ಈ ಚರ್ಚೆ ಅಷ್ಟೇನೂ ಫಲಪ್ರದ ಅನಿಸಲಿಕ್ಕಿಲ್ಲ. ಆದರೆ ಅವರು ಅಷ್ಟೇ ಎಚ್ಚರದಿಂದಿರುವುದು ಅಗತ್ಯ. ಏಕೆಂದರೆ ಗೊತ್ತಿಲ್ಲದೆ ಅಥವಾ ತಿಳಿದುಕೊಳ್ಳಲು ಪ್ರಯತ್ನಿಸದೆ ಅಂತಹ ಪುರುಷರ ಜೊತೆ ಸ್ನೇಹ ಬೆಳೆಸುತ್ತಾರೊ, ಅವರು ಆ ಕಪಿಮುಷ್ಟಿಯಿಂದ ಹಿಂದೆ ಬರಲು ಆಗದೆ, ಮುಂದೆ ಹೋಗಲು ಆಗದೆ ತೊಳಲಾಡುತ್ತಾರೆ. ಅಂತಹ ಕಾಮುಕ ಪುರುಷರ ಮಾನಸಿಕತೆಯ ಕೆಲವು ಝಲಕ್‌ಗಳು ಇಲ್ಲಿವೆ. ಅವನ್ನು ತಿಳಿದುಕೊಳ್ಳುವುದರಿಂದ ಅಂತಹ ಪುರುಷರನ್ನು ಗುರುತಿಸಲಾಗದು.

ಇಂತಹ ಪುರುಷರು ಮೊದ ಮೊದಲು ಭಾವನಾತ್ಮಕ ಹೆಜ್ಜೆ ಇಟ್ಟಿರುವುದು ಗೊತ್ತಾಗುತ್ತದೆ.

ತನ್ನೊಂದಿಗೆ ನಿಕಟತೆ ಬೆಳೆಸಿಕೊಳ್ಳುವ ಮಹಿಳೆಯ ಪ್ರತಿಯೊಂದು ಅಗತ್ಯಗಳ ಬಗ್ಗೆ ಅವರು ಕಾಳಜಿ ತೋರಿಸುತ್ತಾರೆ.

ಮಹಿಳೆಯ ಕುಟುಂಬದಲ್ಲಿ ಪತಿ ಅಥವಾ ಇತರೆ ಸಂಬಂಧಿಕರ ದೌರ್ಬಲ್ಯಗಳನ್ನು ಕಂಡುಹಿಡಿದು, ತಾನೇ ಒಳ್ಳೆಯವನು ಎಂಬಂತೆ ತೋರಿಸಿಕೊಂಡು ಮಹಿಳೆಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಾನೆ.

ಆಫೀಸಿನಲ್ಲಿ ಹೆಚ್ಚು ಸೌಲಭ್ಯ ಒದಗಿಸುತ್ತಾರೆ.

ಸಮಯ ಸಿಕ್ಕಾಗೆಲ್ಲ ಅವಳ ದೇಹ ಸ್ಪರ್ಶಿಸುತ್ತಾರೆ. ಅದು ಕಾಳಜಿಯ ಪ್ರತೀಕ ಎಂದು ಹೇಳಿಕೊಳ್ಳುತ್ತಾರೆ.

ಸುಳ್ಳು ಹೇಳುವುದರಲ್ಲಿ ಮತ್ತು ಅಭಿನಯದಲ್ಲಿ ನಿಪುಣರಾಗಿರುತ್ತಾರೆ.

ಬೇಟೆಯಾಡಲು ಸಾಕಷ್ಟು ಸಮಯ ಕೊಡುತ್ತಾರೆ, ಆತುರ ತೋರಿಸುವುದಿಲ್ಲ.

ಇಳಿ ವಯಸ್ಸಿನವರೊಂದಿಗೆ ಕಡಿಮೆ ವಯಸ್ಸಿನ ಮಹಿಳೆಯರ ಜೊತೆಗಿನ ಭಾವನಾತ್ಮಕ ಸಂಬಂಧ : ವಯಸ್ಸಾದ ಕೆಲವು ಪುರುಷರು ಕಡಿಮೆ ವಯಸ್ಸಿನ ತಿಳಿವಳಿಕೆಯುಳ್ಳ ಮಹಿಳೆಯರ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಾರೆ. ವಿಚಾರ, ಸ್ವಭಾವ ಮತ್ತು ಅನುಭವದಲ್ಲಿ ತನ್ನದನ್ನೇ ಹೋಲುವಂತಹ ಮಹಿಳೆಯೊಂದಿಗೆ ಸ್ನೇಹ ಹೊಂದುತ್ತಾರೆ.

ಒಂದು ವೇಳೆ ಇಂತಹ ಸಂಬಂಧ ಸಹಜವಾಗಿದ್ದರೆ, ವಿಚಾರಗಳ ವಿನಿಮಯದಿಂದ ಹಿಡಿದು ಆರೋಗ್ಯಕರ ಮಾನಸಿಕತೆಯೊಂದಿಗೆ ಸಾಗಿದ್ದರೆ, ಎರಡೂ ಕುಟುಂಬಗಳಿಗೆ ಯಾವುದೇ ಹಾನಿ ಉಂಟು ಮಾಡದೇ ಇದ್ದರೆ ಆ ಸಂಬಂಧ ಸರಿದಾರಿಯಲ್ಲಿದೆ ಎಂದರ್ಥ.

ಭಾವನಾತ್ಮಕ ಆಸರೆ ಕಂಡುಕೊಳ್ಳುವ ಪುರುಷರ ಕೌಟುಂಬಿಕ ಸ್ಥಿತಿ : ಮನೆಯಲ್ಲಿ ಇರುವ ಪತ್ನಿಗೆ ಮಹತ್ವ ಕೊಡುವುದಿಲ್ಲ. ಪತ್ನಿಯ ದೃಷ್ಟಿಯಲ್ಲೂ ಕೆಟ್ಟವರಾಗಿರುತ್ತಾರೆ. ಇಂತಹ ವ್ಯಕ್ತಿಗಳು ಕೌಟುಂಬಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತಾರೆ. ಬಹುಶಃ ಅವರ ಪತ್ನಿಗೆ ಅವರಿಗೆ ಆಸರೆಯಾಗುವ ಅರ್ಹತೆಗಳು ಇರಲಿಕ್ಕಿಲ್ಲವೇನೋ? ಮನೆಯಲ್ಲಿ ಹಲವು ಬಗೆಯ ಜಗಳಗಳಿರಬಹುದು ಅಥವಾ ಪುರುಷನ ಕೆಲಸ ಕಾರ್ಯಗಳ ತೊಂದರೆ ತಾಪತ್ರಯಗಳನ್ನು ಅವನ ಹೆಂಡತಿ ತಿಳಿದುಕೊಳ್ಳುವುದಿಲ್ಲವೇನೊ ಅಥವಾ ಅವನ ಅಪೇಕ್ಷೆಗಳಿಗೆ ಅವಳು ಸ್ಪಂದಿಸಲು ಆಗುವುದಿಲ್ಲವೇನೊ…..ಕಾರಣ ಯಾವುದೇ ಇರಲಿ, ಒಂದು ವೇಳೆ ಸ್ತ್ರೀಪುರುಷರಲ್ಲಿ ಬಾಹ್ಯ ಸಂಬಂಧ ಏರ್ಪಟ್ಟರೆ, ಲವ್ ಇನ್‌ ಸಿಕ್ಟ್ಸೀಸ್‌ಗಾಗಿ ಕೆಲವು ಮುಖ್ಯ ಸಂಗತಿಗಳು ಇಬ್ಬರಿಗೂ ಅನ್ವಯಿಸುತ್ತವೆ.

ಇಂತಹ ಸಂಬಂಧವನ್ನು ನಿಭಾಯಿಸುವ ಸಂದರ್ಭದಲ್ಲಿ ಎಲ್ಲಕ್ಕೂ ಮೊದಲು ಇದು ಯಾವ ಬಗೆಯ ಸಂಬಂಧ ಎನ್ನುವುದನ್ನು ಮೊದಲೇ ನಿರ್ಧರಿಸಿ. ಇಬ್ಬರೂ ಅದನ್ನು ಅನುಷ್ಠಾನದಲ್ಲಿ ತನ್ನಿ. ಇದು ಕೇವಲ ಸ್ನೇಹ ಸಂಬಂಧ ಆಗಿದ್ದರೆ, ಸ್ನೇಹ ಸಂಬಂಧವಾಗಿಯೇ ಉಳಿಯುತ್ತದೆ ಅಥವಾ ಸಂಬಂಧ ಯಾವುದೇ ತಿರುವು ಪಡೆದುಕೊಳ್ಳಲು ನೀವಿಬ್ಬರೂ ಸ್ವತಂತ್ರರಾಗಿರುವಿರಿ.

ಇಬ್ಬರೂ ತಮ್ಮ ಸ್ನೇಹ ಸಂಬಂಧವನ್ನು ಮನೆಯವರಿಂದ ಬಚ್ಚಿಡುತ್ತೀರೊ ಅಥವಾ ಬಹಿರಂಗಪಡಿಸುತ್ತೀರೊ ಅದನ್ನು ನೀವೇ ನಿರ್ಧರಿಸಿ.

ಇಬ್ಬರೂ ಪರಸ್ಪರರಿಗೆ ಚಿಕ್ಕಪುಟ್ಟ ಗಿಫ್ಟ್ ಕೊಡುವುದಕ್ಕಷ್ಟೇ ಸೀಮಿತವಾಗಿರಿ. ದೊಡ್ಡ ಗಿಫ್ಟ್ ಕೊಡಲು ಹೋಗಬೇಡಿ. ಅದರಿಂದ ಕುಟುಂಬದವರು ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲು ಶುರು ಮಾಡುತ್ತಾರೆ.

ಪರಸ್ಪರ ಸಂಬಂಧವನ್ನು ಪಾರದರ್ಶಕವಾಗಿಟ್ಟುಕೊಳ್ಳಿ ಹಾಗೂ ಸತ್ಯದ ಜೊತೆ ಬದ್ಧರಾಗಿರಿ. ಇದರಿಂದ ಸ್ನೇಹಿತನಿಗೆ ನಿಮ್ಮ ಬಗ್ಗೆ ಗೌರವ ಇರುತ್ತದೆ ಹಾಗೂ ಅವನ ಅಪೇಕ್ಷೆಗಳು ಕಡಿಮೆ ಇರುತ್ತವೆ.

– ದೀಪಾ ಬಿ. ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ