ಮದುವೆ ಎನ್ನುವುದು ಗಂಡು ಮತ್ತು ಹೆಣ್ಣು ಹೊಸದೊಂದು ಪ್ರಪಂಚಕ್ಕೆ ಕಾಲಿಡುವ ಘಟ್ಟ. ಯೋಚಿಸಿ ನಿರ್ಧಾರ ಮಾಡಿ ಮದುವೆಯಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗದು. ಆದರೆ ಬಹುಬೇಗ ಅಂದರೆ ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಮದುವೆಯ ಕಾರಣದಿಂದ ನಮ್ಮ ಜೀವನವೇ ಬದಲಾಗಿ ಬಿಡುತ್ತದೆ. ಹಾಗಾಗಿ ಅದರ ನಿರ್ಣಯ ಕೈಗೊಳ್ಳುವ ಮುಂಚೆ ಆತುರ ತೋರಿಸುವುದು ಸರಿಯಲ್ಲ. ಎಳೆಯ ವಯಸ್ಸು ಅಂದರೆ ಕಡಿಮೆ ತಿಳಿವಳಿಕೆ ಹಾಗೂ ಕಡಿಮೆ ಅನುಭವ. ಅದು ನಮ್ಮ ಮುಂದಿರುವ ಜೀವನದಲ್ಲಿ ಅದೆಂಥ ಘೋರ ವಿಷವನ್ನು ಬೆರೆಸುತ್ತದೆಂದರೆ, ವೈವಾಹಿಕ ಜೀವನ ಸಿಹಿಯಿಂದ ಕೂಡಿರದೆ ಕಹಿ ಅನುಭವಗಳನ್ನು ನೀಡುತ್ತದೆ. ಮದುವೆ ಕೇವಲ ಪ್ರೀತಿಸುವ ಎರಡು ಹೃದಯಗಳ ಬಂಧನವಲ್ಲ. ಅದು ಎಂತಹ ಎರಡು ವ್ಯಕ್ತಿಗಳನ್ನು ವೈವಾಹಿಕ ಬಂಧನದಲ್ಲಿ ಬಂಧಿಸುತ್ತದೆಂದರೆ, ಅವರ ಪಾಲನೆ ಪೋಷಣೆ, ವ್ಯಕ್ತಿತ್ವ, ಭಾವನೆಗಳು ಶಿಕ್ಷಣ ಹಾಗೂ ಒಮ್ಮೊಮ್ಮೆ ಮದುವೆ ಎರಡು ವಿಭಿನ್ನ ಸಂಸ್ಕೃತಿಗಳನ್ನು ಒಗ್ಗೂಡಿಸುತ್ತದೆ.
ಇಂತಹ ಬಂಧನಕ್ಕೆ ಬಂಧಿತಳಾಗುವ ಮುನ್ನ ಪರಸ್ಪರರ ಆಸಕ್ತಿ ಅನಾಸಕ್ತಿ, ಜೀವನದ ಗುರಿಗಳು, ಪರಸ್ಪರರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ನಿಮ್ಮನ್ನು ವರಿಸಲಿರುವ ವರನ ಬಗ್ಗೆ ತಿಳಿದುಕೊಳ್ಳುವುದರಲ್ಲಿಯೇ ನಿಮ್ಮ ಜಾಣತನ ಅಡಗಿದೆ. ಮದುವೆಯ ಬಂಧನಕ್ಕೆ ಸಿಲುಕುವ ಮುಂಚೆ ಸಂಗಾತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಸಂಗತಿಗಳನ್ನು ಚೆನ್ನಾಗಿ ಆಲೋಚಿಸಿ ನೋಡಬೇಕು.
ಮದುವೆಯಾಗಲು ಸೂಕ್ತ ಕಾರಣಗಳು
ಮದುವೆಗೆ ಒಪ್ಪಿಗೆ ಕೊಡುವ ಮುನ್ನ ನಾನೇಕೆ ಒಪ್ಪಿಗೆ ಕೊಡುತ್ತಿದ್ದೇನೆ ಎಂಬುದರ ಬಗ್ಗೆ ಒಮ್ಮೆ ಯೋಚಿಸಿ. ಮನೆಯವರು ಒತ್ತಾಯ ಮಾಡುತ್ತಿದ್ದಾರೆಂದು ನೀವು ಒಪ್ಪಿಗೆ ಕೊಡುತ್ತಿದ್ದೀರಾ? ಮದುವೆ ವಯಸ್ಸು ಮೀರಿ ಹೋಗಬಾರದು ಎಂಬ ಕಾರಣಕ್ಕೆ ಹ್ಞಾಂ ಎಂದು ಹೇಳ್ತಿದೀರಾ? ನಿಮ್ಮ ಗೆಳತಿಯರೆಲ್ಲ ಮದುವೆಯಾಗಿ ಬಿಟ್ಟರು ಎಂಬ ಕಾರಣಕ್ಕೆ ಒಪ್ಪಿಗೆ ಸೂಚಿಸಿದಿರಾ ಎಂಬ ಸಂಗತಿ ನಿಮ್ಮ ಗಮನದಲ್ಲಿರಲಿ. ಈ ಹೊಸ ಸಂಬಂಧವನ್ನು ನಿಭಾಯಿಸುವವರು ನೀವೇ ಹೊರತು ಬೇರಾರೂ ಅಲ್ಲ, ಹೀಗಾಗಿ ಯೋಚಿಸಿ ನಿರ್ಧಾರಕ್ಕೆ ಬರುವುದು ಒಳ್ಳೆಯದು.
ಶರ್ಮಿಳಾ ಈಗಲೂ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಾಳೆ. ಕಾಲೇಜಿನಲ್ಲಿ ಬಳೆಗಳನ್ನು ಧರಿಸಿ ಹೋಗಬೇಕೆಂಬ ಆತುರ ಅವಳನ್ನು ಒಂದು ರೀತಿಯ ಶಿಕ್ಷೆಗೆ ಗುರಿ ಮಾಡಿತು. ಬಳೆಯನ್ನೇನೋ ಧರಿಸಿದ್ದಳು. ಆದರೆ ಅರ್ಹನಲ್ಲದ ವ್ಯಕ್ತಿಯ ಜೊತೆ ಮದುವೆ ಮಾಡಿಕೊಂಡು ಒಂದು ರೀತಿಯಲ್ಲಿ ಪಶ್ಚಾತ್ತಾಪ ಪಡುವಂತೆ ಮಾಡಿತು. ಆ ವಯಸ್ಸಿನಲ್ಲಿ ಅವಳು ತನ್ನ ಶಿಕ್ಷಣದ ಬಗ್ಗೆ ಗಮನ ಕೊಡಬೇಕಿತ್ತು. ಆ ವಯಸ್ಸಿನಲ್ಲಿ ತೆಗೆದಕೊಂಡು ತಪ್ಪು ನಿರ್ಧಾರದ ಕಾರಣದಿಂದ ಅವಳು ಸ್ವಾವಲಂಬಿಯಾಗಲು ಸಾಧ್ಯವಾಗಲಿಲ್ಲ. ಈಗ ಕಟ್ಟಿಕೊಂಡ ಗಂಡನ ಜೊತೆ ಅವನು ಹೇಳಿದಂತೆ ಕೇಳಿಕೊಂಡು ಇರಬೇಕಾದ ಅನಿವಾರ್ಯ ಸ್ಥಿತಿ.
ಆರ್ಥಿಕ ಪರಿಸ್ಥಿತಿ ಗಮನಿಸಿ : 18 ತುಂಬುತ್ತಲೇ ರಚನಾ ತನ್ನದೇ ಆದ ಸಂಗೀತದ ಗುರುವಿನ ಜೊತೆ ಓಡಿ ಹೋಗಿ ಮದುವೆಯನ್ನೇನೋ ಮಾಡಿಕೊಂಡಳು. ಆದರೆ ಆ ಪ್ರೇಮಿಗಳ ರೋಮಾನ್ಸ್ ಅಲ್ಪಾಯುಷಿ ಎಂದು ಸಾಬೀತಾಯಿತು. ಏನು ಕಾರಣ? ಆ ಸಂಗೀತ ಶಿಕ್ಷಕ ಇವಳಿಗೊಬ್ಬಳಿಗೆ ಸಂಗೀತ ಹೇಳಿಕೊಡುತ್ತಿದ್ದ. ಹಣದ ಮುಗ್ಗಟ್ಟಿನಿಂದ ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಸಂಗೀತವೇ ಅವರ ಮಧ್ಯದಿಂದ ಮರೆಯಾಯಿತು. ಗೃಹಸ್ಥ ಜೀವನದ ಹೊರೆ ಬಿದ್ದು ಇಬ್ಬರೂ ತಮ್ಮ ನಿರ್ಣಯದ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡರು.
ನಿಮ್ಮನ್ನು ವರಿಸುವ ವ್ಯಕ್ತಿ ಕೌಟುಂಬಿಕ ಜವಾಬ್ದಾರಿ ಹೊರಲು ಅಸಮರ್ಥನಾಗಿದ್ದರೆ ಮದುವೆ ಬಂಧನ ಮುರಿದು ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸ್ವಭಾವ ಕಂಡುಕೊಳ್ಳುವುದು ಅವಶ್ಯ : ಸಾಮಾನ್ಯವಾಗಿ ಹುಡುಗಿಯರು ಮದುವೆಯ ಕನಸು ಕಾಣುತ್ತಾ ತನ್ನ ಪ್ರೇಮಿ ಅಥವಾ ಮದುವೆಯಾಗಲಿರುವ ಹುಡುಗನ ಸ್ವಭಾವದ ಬಗ್ಗೆ ತಿಳಿದುಕೊಳ್ಳುವುದನ್ನು ಮರೆತುಬಿಡುತ್ತಾರೆ. ಮದುವೆ ಬಂಧನ ಇನ್ನೂ ಗಟ್ಟಿಯಾಗದೇ ಇರುವಾಗ ಹೀಗೆ ಹೇಳಿದರೆ ಹೇಗೆ ಎಂದವರು ಪ್ರಶ್ನಿಸುತ್ತಾರೆ. ಮದುವೆಯ ಬಳಿಕ ತಾವು ಗಂಡನ ಸ್ವಭಾವ ಬದಲಿಸುವುದಾಗಿಯೂ ಹೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಹಾನಿಯಾಗುವುದು ಹುಡುಗಿಗೇ. ಮದುವೆಯ ಬಳಿಕ ಒಬ್ಬರು ಇನ್ನೊಬ್ಬರ ಸ್ವಭಾವ ಬದಲಿಸಲು ಆಗುವುದಿಲ್ಲ. ಆತ ಹೇಗಿರುತ್ತಾನೋ, ಹಾಗೆಯೇ ಅವನನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಒಂದು ವೇಳೆ ಮದುವೆಯಾಗಲಿರುವ ಹುಡುಗ ಮಹಾ ಕೋಪಿಷ್ಟನಾಗಿದ್ದರೆ, ಮದುವೆ ಬಳಿಕ ಅವನ ಕೋಪಕ್ಕೆ ತುತ್ತಾಗುವವರು ಬೇರಾರೂ ಅಲ್ಲ, ನವವಿವಾಹಿತೆ. ಯಾವ ವ್ಯಕ್ತಿಗೆ ತನ್ನ ಕೋಪದ ಮೇಲೆ ನಿಯಂತ್ರಣ ಇರುವುದಿಲ್ಲವೋ ಅಂತಹ ವ್ಯಕ್ತಿಯ ಜೊತೆ ಮದುವೆಯಾಗುವ ನಿರ್ಧಾರ ಮಾಡಲೇ ಬೇಡಿ.
ಪರಸ್ಪರರ ಪ್ರೀತಿಯ ಅವಲೋಕನ : ನೀವು ಯಾವಾಗಲಾದರೂ ಸಂಭಾಷಣೆ ನಡೆಸುವಾಗ ಅಥವಾ ಮುಖತಃ ಭೇಟಿಯಾದಾಗ, ನಿಮ್ಮನ್ನು ಮದುವೆಯಾಗಲಿರುವ ಹುಡುಗನಿಗೆ ನಿಜವಾಗಿಯೂ ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆ? ಅದು ನಿಜಕ್ಕೂ ಸತ್ಯಕ್ಕೆ ಹತ್ತಿರವೇ? ಅವನು ನಿಮ್ಮ ಭಾವನೆಗಳನ್ನು ಗೌರವಿಸುತ್ತಾನೆಯೇ? ಅವನು ನಿಮ್ಮ ಮನದ ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾನೆಯೇ? ನೀವು ಅವನಿಗೆ ಹೇಳಿದ ಮಾತನ್ನು ಅವನು ಗೌಪ್ಯವಾಗಿಡುತ್ತಾನೆಯೇ?
ಅದೇ ರೀತಿ ನಿಮ್ಮ ಭಾವನೆಗಳನ್ನು ಕೂಡ ಗುರುತಿಸಬೇಕು. ನೀವು ನಿಜವಾಗಿಯೂ ಅವನನ್ನು ಪ್ರೀತಿಸುತ್ತೀರಾ? ಒಂದು ವೇಳೆ ಆ ವ್ಯಕ್ತಿಯ ಬಗ್ಗೆ ನಿಮ್ಮ ಬಳಿ ಪ್ರೀತಿ ಇಲ್ಲವೆಂದರೆ ಮದುವೆಗಾಗಿ ಮುಂದುವರಿಯುವುದು ಸೂಕ್ತವಲ್ಲ. ಗೃಹಸ್ಥ ಜೀವನವೆಂಬ ಸಾಗರದಲ್ಲಿ ಬಹಳಷ್ಟು ಚಿಕ್ಕ ದೊಡ್ಡ ಅಲೆಗಳು ಬರುತ್ತವೆ. ಇಂತಹ ಸಮಯದಲ್ಲಿ ಪರಸ್ಪರರ ಬಗೆಗಿನ ಪ್ರೀತಿಯೇ ಕುಟುಂಬದ ನಾವೆಯನ್ನು ಮುಳುಗುವುದರಿಂದ ರಕ್ಷಿಸುತ್ತದೆ.
ನಾಲಿಗೆಯ ಮೇಲೆ ಹಿಡಿತವಿರಲಿ
ಮೊದಲ ಸಂದರ್ಭ
ಹೆಂಡತಿ : ನನ್ನ ಆಫೀಸ್‌ನಲ್ಲಿ ಈಚೆಗೆ ಸ್ವಲ್ಪ ಜಾಸ್ತಿನೇ ಟೆನ್ಶನ್ ಇದೆ. ಬಹುಶಃ ಕೆಲವರನ್ನು ತೆಗೆದು ಹಾಕಬಹುದು.
ಗಂಡ (ವ್ಯಂಗ್ಯ ಮಾಡುತ್ತ) : ಹಾಗಾದರೆ ನಿನ್ನ ನಂಬರ್ ಕೂಡ ಬರಬಹುದು!
ಎರಡನೇ ಪ್ರಸಂಗ :
ಹೆಂಡತಿ : ನನ್ನ ಆಫೀಸ್‌ನಲ್ಲಿ ಈಚೆಗೆ ಸ್ವಲ್ಪ ಜಾಸ್ತಿನೇ ಟೆನ್ಶನ್ ಇದೆ. ಬಹುಶಃ ಕೆಲವರನ್ನು ತೆಗೆದು ಹಾಕಬಹುದು ಅನಿಸುತ್ತೆ.
ಗಂಡ : ಹೌದಾ? ನೀನು ಯಾವುದೇ ವಿಷಯದ ಬಗ್ಗೆ ಚಿಂತೆ ಮಾಡಬೇಡ. ನಾವಿಬ್ಬರೂ ಸೇರಿಕೊಂಡು ಈ ಕುಟುಂಬವೆಂಬ ನಾವೆಯನ್ನು ಸಮರ್ಪಕವಾಗಿ ಸಾಗಿಸಲು ಪ್ರಯತ್ನಿಸೋಣ. ನಾನು ನಿನಗೆ ಕೆಲವು ಒಳ್ಳೆಯ ಕೆರಿಯರ್ ಕನ್ಸಲ್ಟೆಂಟ್‌ಗಳ ನಂಬರ್‌ಕೊಡ್ತೀನಿ. ನೀನು ಅವರೊಂದಿಗೆ ಮಾತನಾಡು. ಒಂದು ವೇಳೆ ನಿನ್ನ ನೌಕರಿ ಹೋದರೂ ಅವರು ನಿನಗೆ ಹೊಸ ನೌಕರಿ ಹುಡುಕಿಕೊಡುವಲ್ಲಿ ನೆರವಾಗುವರು.
ಪರಸ್ಪರರ ಬಗ್ಗೆ ಆಕರ್ಷಿತರಾಗಿರುವ ಎರಡು ಹೃದಯಗಳನ್ನು ಮದುವೆ ಬಂಧನ ಜೋಡಿಸುತ್ತದೆ. ಅವರು ಯಾವ ರೀತಿಯಲ್ಲಿ ಮಾತನಾಡುತ್ತಾರೆ ಎನ್ನುವುದರ ಮೇಲೆ ಅವರ ಮದುವೆ ಜೀವನ ನಿಂತಿದೆ. ಅವರು ಒಂದೊಮ್ಮೆ ಮಾತು ಮಾತಿನಲ್ಲಿ ಕೊಂಕು ತೆಗೆಯಬಹುದು. ಪ್ರತಿಯೊಂದರ ಬಗೆಗೂ ದೂರು ಹೇಳಬಹುದು ಇಲ್ಲವೆ, ಪರಸ್ಪರರ ಬಗೆಗೆ ಪ್ರೀತಿಯಿಂದ ಪ್ರೋತ್ಸಾಹ ಕೊಡಬಹುದು. ಹೌದು, ನಮ್ಮ ಮಾತಿನಿಂದ ನಾವು ಸಂಗಾತಿಗೆ ನೋವನ್ನುಂಟು ಮಾಡಬಹುದು. ಇಲ್ಲವೆ ಅವರ ನೋವಿಗೆ ಮುಲಾಮು ಸವರಬಹುದು. ನಮ್ಮ ನಾಲಿಗೆಯ ಮೇಲೆ ಲಗಾಮು ಹಾಕದೇ ಇದ್ದರೆ ವೈವಾಹಿಕ ಜೀವನದಲ್ಲಿ ಬಹುದೊಡ್ಡ ಬಿರುಗಾಳಿಯೇ ಏಳಬಹುದು.
ತಂದೆ ತಾಯಿ ಆಗುವ ಮುಂಚೆ : ಮದುವೆಯ ಬಳಿಕ ಅಪೇಕ್ಷೆ ಇರುವುದು ಮಗುವಿನ ಮೇಲೆ. ಒಂದು ಮಗುವಿನ ಆಗಮನ ಗಂಡಹೆಂಡತಿಯ ಸಂಬಂಧವನ್ನು ಪರಿಪೂರ್ಣವಾಗಿ ಬದಲಿಸುತ್ತದೆ. ಒಂದೆಡೆ ಹೆಂಡತಿ ತನ್ನ ಪೂರ್ತಿ ಗಮನವನ್ನು ಮಗುವಿನ ಮೇಲೆ ಇಡಲು ಪ್ರಯತ್ನಿಸಿದರೆ, ಅತ್ತ ಗಂಡ ತನ್ನ ಹೆಂಡತಿಯಲ್ಲಿ ಬಂದ ಬದಲಾಣೆಯಲ್ಲಿ ತನ್ನ ಮೊದಲಿನ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುತ್ತಾನೆ.
ತಂದೆ ತಾಯಿ ಆಗುವ ಮುನ್ನ ಗಂಡ ಹೆಂಡತಿಯ ಸಂಬಂಧ ಬಲಗೊಳ್ಳಬೇಕಾದುದು ಅತ್ಯವಶ್ಯ. ಹೊಸ ಪಾತ್ರವೊಂದನ್ನು ನಿಭಾಯಿಸಬೇಕಾಗಿ ಬಂದಾಗ ಪರಸ್ಪರರ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಉಂಟಾಗಬಾರದು.
ಒಂದು ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಸ್ಮಿತಾ ಗೋಪಾಲ್ ಹೀಗೆ ಹೇಳುತ್ತಾರೆ, “ನನ್ನ ಮಗಳು ತನಗೆ ಇಷ್ಟವಾದ ಹುಡುಗನ ಜೊತೆ ಮದುವೆಯಾಗುವ ಬಗ್ಗೆ ನನ್ನ ಮುಂದೆ ಪ್ರಸ್ತಾಪಿಸಿದಳು. ತನ್ನ ಬಾಯ್‌ಫ್ರೆಂಡ್ ಕುರಿತೂ ನನ್ನ ಮುಂದೆ ಹೇಳಿದಳು. ನಾನು ಅವಳಿಗೆ ನಿನ್ನ ಬಾಯ್‌ಫ್ರೆಂಡ್‌ನಲ್ಲಿ 10 ಅವಶ್ಯಕ ಗುಣಗಳ ಬಗ್ಗೆ ಯೋಚಿಸು, ಅವನ್ನು ನೀನು ಸಂಗಾತಿಯಲ್ಲಿ ಕಾಣಲು ಬಯಸುವೆ.
“ಒಂದು ವೇಳೆ ನಿನ್ನ ಬಾಯ್‌ಫ್ರೆಂಡ್‌ನಲ್ಲಿ 7 ಗುಣಗಳು ಕಂಡುಬಂದರೂ, ಉಳಿದ 3 ಕೊರತೆಗಳನ್ನು ನೀನು ಪ್ರತಿದಿನ ಸಹಿಸಿಕೊಳ್ಳುತ್ತಾ ಇರುತ್ತೀಯಾ. ನಿನ್ನ ಮನಸ್ಸಿನಲ್ಲಿ ಒಂದಿಷ್ಟು ಸಂದೇಹವಿದ್ದರೂ ಮುಂದಿನ ಹೆಜ್ಜೆ ಇಡುವ ಮುನ್ನ ಯೋಚಿಸು,” ಎಂದು ಹೇಳಿದೆ.
ವಾಸ್ತವ ಸಂಗತಿಯೆಂದರೆ, ನೀವು ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆ ಮಾಡುವ ಹಾಗಿಲ್ಲ. ನೀವು ಮದುವೆ ಮಾಡಿಕೊಳ್ಳಲು ಇಚ್ಛಿಸಿದ್ದಲ್ಲಿ, ಯಾವುದೇ ಕೊರತೆ ಇರದ ವರ ಸಿಗುವುದು ಕಷ್ಟಕರ. `ಬೇಗ ಮದುವೆಯಾಗು ನಂತರ ತಾಳ್ಮೆಯಿಂದ ಯೋಚಿಸು’ ಎಂಬ ವ್ಯಂಗ್ಯ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಪೂರ್ವಾಪರ ತಿಳಿದುಕೊಳ್ಳದೆ ಹೆಜ್ಜೆ ಹಾಕುವುದು ಸೂಕ್ತವಲ್ಲ.
-ಪ್ರಭಾಮಣಿ
ಕಂಪ್ಯಾಟಿಬಿಲಿಟಿ ಕ್ವಿಜ್
ಕಂಪ್ಯಾಟಿಬಿಲಿಟಿಯಲ್ಲಿ 3 ವಿಶೇಷ ಸಂಗತಿ ಗಳಿರುತ್ತವೆ. ಪರಸ್ಪರ ಸಂಬಂಧ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯ. ಪರಸ್ಪರರ ಬಗ್ಗೆ ಸಹಾನುಭೂತಿ ಮತ್ತು ಪರಸ್ಪರರ ಅವಶ್ಯಕತೆಗಳನ್ನು ಪೂರ್ತಿಗೊಳಿಸುವ ಇಚ್ಛಾಶಕ್ತಿ. ಈ ಕ್ವಿಜ್‌ನ್ನು ಬಿಡಿಸಿ ಹಾಗೂ ನೀವಿಬ್ಬರೂ ಮದುವೆಗೆ ಎಷ್ಟರ ಮಟ್ಟಿಗೆ ಸಿದ್ಧರಾಗಿರುವಿರಿ ಎಂಬುದು ಅರಿವಾಗುತ್ತದೆ.
- ಮದುವೆಯ ಕುರಿತಂತೆ ನೀವು ಪರಸ್ಪರ ವಿಚಾರ ವಿಮರ್ಶೆ ನಡೆಸುತ್ತೀರಾ?
(ಅ) ಒಮ್ಮೊಮ್ಮೆ (ಆ) ಈಚೆಗೆ
(ಇ) ಎಂದೂ ಇಲ್ಲ (ಈ) ಯಾವಾಗಲೂ
ಸರಿಯಾದ ಉತ್ತರ : ಯಾವಾಗಲೂ….
ಒಂದು ವೇಳೆ ನೀವಿಬ್ಬರು ಮದುವೆ ಕುರಿತಂತೆ ಗಂಭೀರವಾಗಿದ್ದರೆ, ವಿಚಾರ ವಿಮರ್ಶೆ ನಿಮ್ಮ ಟೈಮ್ ಟೇಬಲ್‌ನಲ್ಲಿ ಇರಬೇಕು.
- ಸಂಗಾತಿ ನನ್ನನ್ನು ಬಿಟ್ಟು ಹೋಗುವ ಏಕೈಕ ವಿಚಾರ ನನಗೆ….
(ಅ) ಉದಾಸತನ ತುಂಬುತ್ತದೆ (ಆ) ನೆಮ್ಮದಿ ನೀಡುತ್ತದೆ
(ಇ) ನನಗೇನೂ ವ್ಯತ್ಯಾಸ ಉಂಟು ಮಾಡದು (ಈ) ನಾನು ಸಂಪೂರ್ಣ ಚೂರಾಗುತ್ತೇನೆ
ಸರಿಯಾದ ಉತ್ತರ : ಉದಾಸತನ ತುಂಬುತ್ತದೆ….
ನಿಮ್ಮ ಸಂಬಂಧ ಆರೋಗ್ಯ ಪೂರ್ಣಾಗಿದ್ದರೆ, ನಿಮ್ಮ ಸಂಪೂರ್ಣ ಗಮನ, ಗುರಿ ಯಾವಾಗಲೂ ಸಂಗಾತಿಯ ಕಡೆಗೇ ಇರುವುದಿಲ್ಲ. ನಿಮ್ಮ ಸಂಬಂಧದಲ್ಲಿ ಸಮತೋಲನವಿದೆ, ನೀವು ನಿಮ್ಮ ಸಂಗಾತಿಯನ್ನು ಅವಶ್ಯವಾಗಿ ಇಷ್ಟಪಡುವಿರಿ. ಆದರೆ ಇಷ್ಟಪಡುವುದು ಮತ್ತು ಅವಶ್ಯಕತೆಯಲ್ಲಿ ತುಂಬಾ ವ್ಯತ್ಯಾಸವಿದೆ.
- ಮದುವೆ ನನಗಾಗಿ
(ಅ) ಸಿನಿಮಾದ ಹಾಗೆ ರೋಚಕ (ಆ) ಅತ್ಯಂಕ ಕಠಿಣ ದಾರಿ
(ಇ) ಅಂತಹ ಕಠಿಣ ಏನಲ್ಲ (ಈ) ಪರಿಶ್ರಮ, ಮೋಜಿನ ಹೊಂದಾಣಿಕೆ
ಸರಿಯಾದ ಉತ್ತರ : ಪರಿಶ್ರಮ, ಮೋಜಿನ ಹೊಂದಾಣಿಕೆ.
ಮದುವೆಗೆ ಪರಿಶ್ರಮ ಪಡಬೇಕು. ಆದರೆ ಅದು ಅಷ್ಟು ಕಠಿಣವೇನಲ್ಲ. ಮದುವೆಯನ್ನು ಯಶಸ್ವಿಗೊಳಿಸಲು, ಅದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ.
- ಸಂಗಾತಿಯನ್ನು ಕಂಡು ನನಗೆ
(ಅ) ಉತ್ಸಾಹ, ಪ್ರಸನ್ನತೆ ಉಂಟಾಗುತ್ತದೆ (ಆ) ನನಗೇನೂ ವ್ಯತ್ಯಾಸ ಅನಿಸದು
(ಇ) ಗಾಬರಿ ಉಂಟಾಗುತ್ತದೆ (ಈ) ಅಷ್ಟಿಷ್ಟು ಖುಷಿ ಉಂಟಾಗುತ್ತದೆ
ಸರಿಯಾದ ಉತ್ತರ : ಉತ್ಸಾಹ, ಪ್ರಸನ್ನತೆ ಉಂಟಾಗುತ್ತದೆ.
ಒಂದು ವೇಳೆ ಮದುವೆಗೆ ಮುಂಚೆ ಸಂಗಾತಿಯನ್ನು ಕಂಡು ಖುಷಿ ಆಗದಿದ್ದರೆ, ಮದುವೆ ಬಳಿಕ ಹೇಗಾಗಬಹುದು? ಮದುವೆಗೆ ಕಡಿಮೆ ಸಮಯ ಉಳಿದಾಗ ಅದಕ್ಕಾಗಿ ಹೆಚ್ಚು ಓಡಾಟ, ಶ್ರಮ ಪಡಬೇಕಾಗುತ್ತದೆ ಎಂಬುದು ನಿಜ. ಹೀಗಾಗಿ ಆರಂಭದ ಉತ್ಸಾಹ ಹಾಗೂ ಖುಷಿ ಕಾಯ್ದುಕೊಂಡು ಹೋಗಬೇಕು.
- ವಿಶೇಷ ಪರಿಸ್ಥಿತಿಯಲ್ಲಿ ನಾವಿಬ್ಬರೂ…..
(ಅ) ನಾವಿಬ್ಬರೂ ಚರ್ಚೆ ಮಾಡುವುದಿಲ್ಲ (ಆ) ಎಂದಾದರೊಮ್ಮೆ ಚರ್ಚೆ ಮಾಡುತ್ತೇವೆ
(ಇ) ಪ್ರತಿದಿನ ಚರ್ಚಿಸುತ್ತೇವೆ (ಈ) ಪರಿಸ್ಥಿತಿ ಕೈಮೀರುವಾಗಲೇ ನಾವು ಚರ್ಚೆ ಮಾಡುತ್ತೇವೆ
ಸರಿಯಾದ ಉತ್ತರ : ಎಂದಾದರೊಮ್ಮೆ ಚರ್ಚೆ ಮಾಡುತ್ತೇವೆ
ಜೀವನದಲ್ಲಿ ಎಷ್ಟೆಲ್ಲ ಘಟಿಸಿದರೂ ನೀವು ಚರ್ಚೆ ಮಾಡದೇ ಇದ್ದರೆ ನೀವಿನ್ನೂ ಮದುವೆಗೆ ಸಿದ್ಧರಿಲ್ಲ ಎನ್ನುವುದನ್ನು ತೋರಿಸುತ್ತದೆ. ದಿನ ಚರ್ಚೆ ಮಾಡುತ್ತಿದ್ದರೆ ನಿಮ್ಮ ಸಂಬಂಧದಲ್ಲಿ ಒತ್ತಡ ಹೆಚ್ಚಿಗೆ ಇದೆ ಎಂದರ್ಥ.
- ಪ್ರೀತಿ ನನ್ನ ದೃಷ್ಟಿಯಲ್ಲಿ
(ಅ) ಕೊಡು ತೆಗೆದುಕೊಳ್ಳು ಅಭಿವ್ಯಕ್ತಿ (ಆ) ನನ್ನ ಬಗ್ಗೆ ಕಾಳಜಿ ತೋರಿಸಲು ಸಂಗಾತಿಗೆ ಉತ್ಸಾಹವಿದೆ
(ಇ) ಸಂಗಾತಿಯ ಬಗ್ಗೆ ಗಮನ ಕೊಡುವುದು (ಈ) ಬೇರೆಯರ ಹಾಗೆ ಆಗುವುದು
ಸರಿಯಾದ ಉತ್ತರ : ಕೊಡು ತೆಗೆದುಕೊಳ್ಳು ಅಭಿವ್ಯಕ್ತಿ
ಪ್ರೀತಿಯಲ್ಲಿ ಒಬ್ಬರು ಮಾತ್ರ ಸಂಗಾತಿಯ ಬಗ್ಗೆ ಗಮನಕೊಡುವುದು ಸಾಧ್ಯವಿಲ್ಲ. ಪ್ರೀತಿ ಹೊಂದಾಣಿಕೆಯ ಮತ್ತೊಂದು ಹೆಸರು. ಅದರಲ್ಲಿ ಕೊಡು ತೆಗೆದುಕೊಳ್ಳುವುದು ಇರಲೇಬೇಕು.