ಪ್ರತಿದಿನದ ಮುಂಜಾನೆಯ ಹಾಗೆ ಇವತ್ತು ಕೂಡ ಸುಮೇಧಾಗೆ ಸಾಕಷ್ಟು ಗಡಿಬಿಡಿಯಿಂದ ಕೂಡಿತ್ತು. ಗಂಡ, ಇಬ್ಬರು ಮಕ್ಕಳು, ಅತ್ತೆ ಮಾವ ಮತ್ತು ಸ್ವತಃ ತನಗಾಗಿ ಉಪಾಹಾರ ಸಿದ್ಧಪಡಿಸಿಕೊಳ್ಳಬೇಕಿತ್ತು. ಈ ಕಾರಣದಿಂದ ಅಡುಗೆಮನೆಯಿಂದ ಡೈನಿಂಗ್‌ಟೇಬಲ್ ತನಕ ಮುಂಜಾನೆಯಿಂದ ಈವರೆಗೆ ಏನಿಲ್ಲವೆಂದರೂ 15-20 ಸಲ ಸುತ್ತಾಡಿದ್ದಳು. ಗಡಿಬಿಡಿಯಾಗಿ ಅದೆಷ್ಟೋ ಸಲ ಆಕೆಯ ಕಾಲುಗಳು ಜಾರುವ ಸ್ಥಿತಿಯಲ್ಲಿದ್ದವು. ಆದರೂ ಆಕೆ ಸಂಭಾಳಿಸಿಕೊಂಡು ಓಡಾಡುತ್ತಿದ್ದಳು.

ಮನೆಯ ಕೆಲಸದ ಜೊತೆಗೆ ಆಫೀಸಿಗೆ ಹೋಗಬೇಕೆಂಬ ಧಾವಂತ ಆಕೆಗೆ ಅಡುಗೆ ಮನೆಗೆಲಸಗಳನ್ನು ಬೇಗ ಬೇಗನೇ ಮುಗಿಸಲೇಬೇಕೆಂಬ ಒತ್ತಡಕ್ಕೆ ಸಿಲುಕಿಸಿದ್ದವು. ಗಡಿಬಿಡಿಯಲ್ಲಿ ಆಕೆಯ ಕೈಗಳು ಯಾವಾಗ ಒಲೆಯ ಮೇಲೆ ಇಟ್ಟಿದ್ದ ಪಾತ್ರೆಯನ್ನು ಮುಟ್ಟಿದ್ದೇ ಗೊತ್ತಾಗಲಿಲ್ಲ. ಕೈಯಲ್ಲೆಲ್ಲ ಗುಳ್ಳೆಗಳು ಎದ್ದವು. ಆಫೀಸಿಗೆ ಹೋಗುವುದಿರಲಿ, ಆಕೆಗೆ 4-5 ದಿನಗಳ ಕಾಲ ಮನೆಗೆಲಸಗಳನ್ನು ಮಾಡುವುದೂ ಕಷ್ಟಕರವಾಯಿತು.

ಸುಮೇಧಾಳಂತೆ ಅದೆಷ್ಟೋ ಮಹಿಳೆಯರು, ಅಡುಗೆಮನೆಯಲ್ಲಿ ಸಂಭವಿಸುವ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಮನೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಸಂಬಂಧಪಟ್ಟಂತೆ ನಡೆಸಿದ ಒಂದು ಅಧ್ಯಯನ ಕೂಡ ಇದೇ ಸಂಗತಿಯನ್ನು ಬಿಂಬಿಸುತ್ತದೆ.

ಅಧ್ಯಯನದ ಪ್ರಕಾರ, ಶೇ.46ರಷ್ಟು ಮನೆಗಳಲ್ಲಿ ಸಂಭವಿಸುವ ಅಪಘಾತಗಳು ಮುಂಜಾನೆ ಹೊತ್ತಿನಲ್ಲಿಯೇ ಸಂಭವಿಸುತ್ತವೆ. ಅದರಲ್ಲಿ ಶೇ.66ರಷ್ಟು ಮಹಿಳೆಯರೇ ಗಾಯಗೊಳ್ಳುತ್ತಾರೆ. ಅಧ್ಯಯನದಲ್ಲಿ ಉಲ್ಲೇಖಿಸಲಾದ ಒಂದು ಗಮನಾರ್ಹ ಸಂಗತಿಯೇನೆಂದರೆ ಹೆಚ್ಚಿನ ಅಪಘಾತಗಳು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಘಟಿಸುತ್ತವೆ. ಅಂದಹಾಗೆ ಅಡುಗೆಮನೆಯ ಕೆಲಸಗಳನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಈ ಕಾರಣದಿಂದ ಅಡುಗೆಮನೆಗೆ ಸಂಬಂಧಪಟ್ಟ ದುರ್ಘಟನೆಗಳಲ್ಲಿ ಮಹಿಳೆಯರ ಪಾಲೇ ಅಧಿಕ ಸಂಖ್ಯೆಯಲ್ಲಿರುತ್ತದೆ.

ಈ ತೆರನಾದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ಸಲಹೆಗಳು :

ಸ್ವಚ್ಛತೆ ದುರ್ಘಟನೆಗಳಿಗೆ ಕಡಿವಾಣ

ಅಡುಗೆಮನೆ ಸ್ವಚ್ಛತೆಯಿಂದ ಕೂಡಿದ್ದರೆ, ಅನೇಕ ಅಪಘಾತಗಳನ್ನು ತಡೆಯಬಹುದು. ಉದಾಹರಣೆಗೆ ಚಿಮಣಿಯ ಸ್ವಚ್ಛತೆಯನ್ನೇ ತೆಗೆದುಕೊಳ್ಳಿ. ಅದರಲ್ಲಿ ಬಹುಬೇಗ ಸ್ನಿಗ್ಧ ಪದಾರ್ಥ ಜಮೆಗೊಳ್ಳುತ್ತದೆ. ಅದನ್ನು ಮೇಲಿನಿಂದ ಮೇಲೆ ಸ್ವಚ್ಛಗೊಳಿಸದೇ ಇದ್ದರೆ, ಅದೇ ಸ್ನಿಗ್ಧತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿ ದೊಡ್ಡ ದುರ್ಘಟನೆಯೇ ಸಂಭವಿಸಬಹುದು.

ಅದರ ಹೊರತಾಗಿ ಅಡುಗೆಮನೆಯ ನೆಲ ಸ್ವಚ್ಛವಾಗಿರುವುದು ಅತ್ಯವಶ್ಯ. ಅದರಿಂದ ಹಲವು ಅಪಘಾತಗಳನ್ನು ತಡೆಗಟ್ಟಬಹುದು. ಈ ಕುರಿತಂತೆ ರಿಯಾಲಿಟಿ ಶೋ `ಮಾಸ್ಟರ್‌ ಶೆಫ್ಸ್’ನ ಟಾಪ್‌ ಫೈನಲಿಸ್ಟ್ ವಿಜಯಲಕ್ಷ್ಮಿ ಹೀಗೆ ಹೇಳುತ್ತಾರೆ, “ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ನೆಲದ ಮೇಲೆ ನೀವೇನಾದರೂ ಬಿದ್ದರೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ನೀರನ್ನು ಒರೆಸುವ ಕೆಲಸ ಮಾಡಬೇಕು. ಏಕೆಂದರೆ ನೀರು ಬಿದ್ದ ಜಾಗದ ಮೇಲೆ ಕಾಲಿಟ್ಟರೆ, ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೈಯಲ್ಲಿ ಬಿಸಿ ಪಾತ್ರೆ ಅಥವಾ ಭಾರವಾದ ವಸ್ತು ಏನಾದರೂ ಇದ್ದರೆ ಹೆಚ್ಚು ಪೆಟ್ಟು ತಗುಲುವ ಸಾಧ್ಯತೆ ಇರುತ್ತದೆ.”

ಒದ್ದೆ ನೆಲದ ಮೇಲೆ ಜಾರುವುದರ ಹೊರತಾಗಿ ಅಡುಗೆಮನೆಯಲ್ಲಿ ಜಾರಿ ಬೀಳಲು ಇನ್ನೂ ಅನೇಕ ಕಾರಣಗಳಿರಬಹುದು. ಅವೆಂದರೆ ಅಡುಗೆಮನೆಯಲ್ಲಿ ಎತ್ತರದ ಜಾಗದಲ್ಲಿ ಇಟ್ಟ ಸಾಮಾನುಗಳನ್ನು ಕೆಳಗಿಳಿಸಲು ಯಾವಾಗಲೂ ಏಣಿಯನ್ನು ಬಳಸಿ. ಕುರ್ಚಿ ಅಥವಾ ಮೇಜಿನ ಮೇಲೆ ಖಂಡಿತ ನಂಬಿಕೆ ಇಡಬೇಡಿ.

ಅಡುಗೆಮನೆಯಲ್ಲಿ ನಿಮಗೆ ಎಷ್ಟು ಭಾರದ ವಸ್ತು ಎತ್ತಿಕೊಂಡು ಸುಲಭವಾಗಿ ನಡೆದಾಡಲು ಸಾಧ್ಯವೋ, ಅಷ್ಟೇ ಸಾಮಾನನ್ನು ಮಾತ್ರ ಎತ್ತಿಳಿಸಿ.

ಅಡುಗೆ ಮನೆಯ ಬಾಗಿಲಿನ ಹತ್ತಿರ ನಡೆದಾಡಲು ತೊಂದರೆಯಾಗುವಂತೆ ಯಾವುದೇ ಸಾಮಾನು ಅಥವಾ ಪೀಠೋಪಕರಣ ಇಡಬೇಡಿ. ಎಷ್ಟೋ ಸಲ ಅಂತಹ ಸಾಮಗ್ರಿಗೆ ಡಿಕ್ಕಿ ಹೊಡೆದು ಬೀಳುವ ಸಾಧ್ಯತೆ ಇರುತ್ತದೆ.

ಸೂಕ್ತ ಪೋಷಾಕು

ಅಡುಗೆಮನೆಯಲ್ಲಿದ್ದಾಗ ಸೂಕ್ತ ಬಟ್ಟೆಗಳ ಆಯ್ಕೆ ಎಲ್ಲಕ್ಕೂ ಮಹತ್ವದ್ದಾಗುತ್ತದೆ. ಈ ಕುರಿತಂತೆ ವಿಜಯಲಕ್ಷ್ಮಿ ಹೀಗೆ ಹೇಳುತ್ತಾರೆ, “ಮಹಿಳೆಯರು ಇಲ್ಲಿಯೇ ಬಹು ದೊಡ್ಡ ತಪ್ಪು ಮಾಡುತ್ತಾರೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಈ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಆಫೀಸಿಗೆ ಹೋಗುವ ತರಾತುರಿಯಲ್ಲಿ ನೈಲಾನ್‌, ಸಿಲ್ಕ್ ಅಥವಾ ಸಿಂಥೆಟಿಕ್‌ ಬಟ್ಟೆ ಧರಿಸಿಕೊಂಡೇ ಅಡುಗೆಮನೆ ಕೆಲಸವನ್ನು ಶುರು ಮಾಡುತ್ತಾರೆ. ಅಡುಗೆಮನೆ ಪ್ರವೇಶಿಸುವ ಎಲ್ಲಕ್ಕೂ ಮೊದಲ ನಿಯಮವೆಂದರೆ, ಕಾಟನ್‌ ಬಟ್ಟೆಗಳನ್ನು ಧರಿಸಿರಬೇಕು. ಕಾಟನ್‌ ಬಟ್ಟೆ ಹೊರತುಪಡಿಸಿ ಬೇರೆಲ್ಲ ಬಟ್ಟೆಗಳಿಗೆ ಬಹುಬೇಗ ಬೆಂಕಿ ಹೊತ್ತಿಕೊಳ್ಳುತ್ತದೆ.”

ಬಹಳಷ್ಟು ಮಹಿಳೆಯರಿಗೆ ಏಪ್ರನ್‌ ಧರಿಸಿ ಅಡುಗೆ ಮಾಡುವುದು ಒಂದು ಹೊರೆ ಎನಿಸುತ್ತದೆ. ವಿಜಯಲಕ್ಷ್ಮಿ ಹೇಳುತ್ತಾರೆ, `ಬೆಂಕಿಯ ಒಂದು ಸಣ್ಣ ಕಿಡಿ ಇಡೀ ಪೋಷಾಕಿಗೆ ಬೆಂಕಿ ಬೀಳವಂತೆ ಮಾಡಬಹುದು. ಆದರೆ ಅಂತಹ ಬೆಂಕಿ ಕಿಡಿ ಬಟ್ಟೆಗೆ ತಗುಲುವುದನ್ನು ಏಪ್ರನ್‌ ತಡೆಯುತ್ತದೆ. ಅದನ್ನು ಧರಿಸುವುದು ಏಕೆ ಅತ್ಯವಶ್ಯಕ ಎಂದರೆ, ಅದು ಬಟ್ಟೆಯನ್ನು ಗಟ್ಟಿಯಾಗಿ ಬಂಧಿಸಿಡುತ್ತದೆ. ಎಷ್ಟೋ ಸಲ ಬಟ್ಟೆ ಗಾಳಿಯಲ್ಲಿ ಹಾರಾಡಿ ಉರಿಯುತ್ತಿರುವ ಬರ್ನರ್‌ ತನಕ ತಲುಪುತ್ತದೆ. ಆದರೆ ಏಪ್ರನ್ ಹಾಗಾಗದಂತೆ ತಡೆಯುತ್ತದೆ.”

ನಿಯಮ ಉಲ್ಲಂಘನೆ ಜೀವಕ್ಕೆ ಕುತ್ತು!

ಅಡುಗೆಮನೆಯಲ್ಲಿ ಕೆಲಸ ಮಾಡಲು ಕೆಲವು ನಿಯಮಗಳಿರುತ್ತವೆ. ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡುವುದರಿಂದ ಭಾರಿ ಬೆಲೆ ತೆರಬೇಕಾಗುತ್ತದೆ. ಗೃಹಿಣಿಯರಿಗೆ ಆ ಸಂಗತಿ ಗೊತ್ತಿದ್ದೇ ಇರುತ್ತದೆ. ಆದರೆ ಆಲಸ್ಯ ಪ್ರವೃತ್ತಿಯಿಂದಾಗಿ ಅವರು ಆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಉದಾಹರಣೆಗೆ ರಾತ್ರಿ ಹೊತ್ತು ಗ್ಯಾಸ್‌ ಸಿಲಿಂಡರ್‌ ಬಂದ್‌ ಮಾಡದೆಯೇ ಮಲಗಿಕೊಳ್ಳುತ್ತಾರೆ.

ಅಗ್ನಿ ಶಾಮಕದಳದ ಅಧಿಕಾರಿ ಈ ಬಗ್ಗೆ ಹೇಳುತ್ತಾರೆ, “ಮನೆಯಲ್ಲಿ ಬೆಂಕಿ ಅನಾಹುತದ ಹೆಚ್ಚಿನ ಪ್ರಕರಣಗಳಲ್ಲಿ ಅಡುಗೆಮನೆಯೇ ಕಾರಣವಾಗಿರುತ್ತದೆ. ಅಡುಗೆಮನೆಯ ಗ್ಯಾಸ್‌ ಸಿಲಿಂಡರ್‌ ಜೀವಕ್ಕೆ ಅತಿ ದೊಡ್ಡ ಕಂಟಕವಾಗಿ ಪರಿಣಮಿಸುತ್ತದೆ. ರಾತ್ರಿ ಮಲಗುವ ಮುನ್ನ ಗ್ಯಾಸ್‌ ಬಂದ್‌ ಮಾಡದೇ ಇದ್ದರೆ ಅದೇ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.”

ನಿರ್ಲಕ್ಷ್ಯದಿಂದ ದುರಂತ

ಅವರು ಒಂದು ಘಟನೆಯ ಬಗ್ಗೆ ಉಲ್ಲೇಖಿಸುತ್ತಾರೆ, “ಇತ್ತೀಚೆಗೆ ಬೆಂಗಳೂರಿನ ಒಂದು ಮನೆಯಲ್ಲಿ ಮುಂಜಾನೆ ಸಮಯದಲ್ಲಿಯೇ  ಬ್ಲಾಸ್ಟ್ ಆಗಿದ್ದರಿಂದ ಮನೆಯ ಎಲ್ಲರೂ ಗಾಯಗೊಂಡರು. ಅಷ್ಟೇ ಅಲ್ಲ, ಅಕ್ಕಪಕ್ಕದ ಮನೆಯವರೂ ಅದರಿಂದ ಹಾನಿ ಅನಭವಿಸಿದರು. ಇದಕ್ಕೆ ಕಾರಣ ಅಡುಗೆಮನೆಯಲ್ಲಿಟ್ಟ ಸಿಲಿಂಡರ್‌ ಮತ್ತು ಫ್ರಿಜ್‌. ಮುಂಜಾನೆ ಗ್ಯಾಸ್‌ ಆನ್‌ ಮಾಡುತ್ತಿದ್ದಂತೆ ಎರಡೂ ಏಕಕಾಲಕ್ಕೆ ಬ್ಲಾಸ್ಟ್ ಆಗಿದ್ದವು.

“ಅಂದಹಾಗೆ, ಫ್ರಿಜ್‌ವೊಂದನ್ನು ದಿನವೊಂದರಲ್ಲಿ ಹಲವು ಸಲ ತೆರೆಯುವುದು, ಹಾಕುವುದು ನಡೆದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಒಂದುವೇಳೆ ಸಿಲಿಂಡರ್‌ ಓಪನ್‌ ಇದ್ದರೆ ದುರ್ಘಟನೆಯನ್ನು ತಡೆಯಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಫ್ರಿಜ್‌ನ್ನು ಅಡುಗೆಮನೆಗೆ ಹತ್ತಿರ ಇಡಲೇಬಾರದು.”

ಚಪ್ಪಲಿ ಧರಿಸದೆಯೇ ವಿದ್ಯುತ್‌ ಸಾಮಗ್ರಿಗಳನ್ನು ಮುಟ್ಟಿದರೆ ಶಾಕ್‌ ಹೊಡೆಯಬಹುದು. ಆದರೂ ಕೆಲವು ಮಹಿಳೆಯರು ಸಾಹಸ ತೋರಿಸಲು ಹೋಗಿ ಆಘಾತಕ್ಕೆ ತುತ್ತಾಗುತ್ತಾರೆ.

ವಿಜಯಲಕ್ಷ್ಮಿ ತಮ್ಮದೇ ಮನೆಯಲ್ಲಿ ನಡೆದ ಘಟನೆಯ ಬಗ್ಗೆ ಉಲ್ಲೇಖಿಸುತ್ತಾರೆ, “ನನ್ನ ಮನೆ ಕೆಲಸದವಳು ಚಪ್ಪಲಿ ಧರಿಸದೆಯೇ ಮೈಕ್ರೋವೇವ್ ‌ಮುಟ್ಟಿದ್ದಳು. ಶಾಕ್‌ ಹೊಡೆದಾಗ ತನ್ನನ್ನು ಮೈಕ್ರೋವೇವ್‌ನಿಂದ ಬಿಡಿಸಿಕೊಳ್ಳಲು ಆಗದೆ ಮೈಕ್ರೋವೇವೇ ‌ಸಹಿತ ನೆಲದ ಮೇಲೆ ಉರುಳಿದ್ದಳು. ಅವಳಿಗೆ ಸಾಕಷ್ಟು ಏಟಾಗಿತ್ತು. ಒಂದು ತಿಂಗಳ ಕಾಲ ಆಕೆ ಆಸ್ಪತ್ರೆಯಲ್ಲಿ ಉಳಿಯಬೇಕಾಗಿ ಬಂದಿತ್ತು.”

ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಚಪ್ಪಲಿ ಧರಿಸುವ ಅಭ್ಯಾಸ ಮಾಡಿಕೊಳ್ಳಿ ಹಾಗೂ ವಿದ್ಯುತ್‌ ಚಾಲಿತ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಸಿ.

ಆರೋಗ್ಯ ಸುಧಾರಣೆಗೆ ಕಾರಣವಾಗುವ ಅಡುಗೆಮನೆ ಒಮ್ಮೊಮ್ಮೆ ನಮ್ಮ ಬಾಬತ್ತಿನಲ್ಲಿ ಖಳನಾಯಕನಾಗಬಹುದು. ಹೀಗಾಗಿ ಅಡುಗೆಮನೆಯಲ್ಲಿ ಆತುರ ಮತ್ತು ನಿರ್ಲಕ್ಷ್ಯದಿಂದಾಗಿ ನಿಮ್ಮ ಮನೆಯವರನ್ನು ಅಪಾಯದಲ್ಲಿ ಕೆಡವಬೇಡಿ.

– ಅನುರಾಧಾ 

ಬೆಂಕಿಯಿಂದ ರಕ್ಷಿಸುವುದು ಹೇಗೆ?

ಕ್ಲಾಸ್‌ ಎ :ಕಟ್ಟಿಗೆ, ಕಾಗದ ಮತ್ತು ಬಟ್ಟೆಗೆ

ಕ್ಲಾಸ್‌ ಬಿ :ಗ್ರೀಸ್‌ ಮತ್ತು ಎಣ್ಣೆಗೆ

ಕ್ಲಾಸ್‌ ಸಿ : ಸ್ವಿಚ್‌, ಮೋಟರ್‌ ಮತ್ತು ವಿದ್ಯುತ್‌ ಉಪಕರಣಗಳಿಗೆ

ಒಂದು ಸಂಗತಿ ನೆನಪಿನಲ್ಲಿಡಿ, ಕ್ಲಾಸ್‌ ಎ ಫೈರ್‌ ಎಕ್ಸ್ಟಿಂಗ್ವಿಶರ್‌ನ್ನು ಗ್ರೀಸ್‌ ಅಥವಾ ವಿದ್ಯುತ್‌ನಿಂದ ಹತ್ತಿದ ಬೆಂಕಿ ನಂದಿಸಲು ಬಳಸಬೇಡಿ. ಹೀಗೆ ಮಾಡುವುದರಿಂದ ಬೆಂಕಿ ನಂದಿಸುವ ಬದಲು ಮತ್ತಷ್ಟು ಹಬ್ಬಲು ಕಾರಣವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ