ರಾಮಣ್ಣನಿಗೆ ಮದುವೆಯಾಗಿ 20 ವರ್ಷ ಕಳೆದಿತ್ತು. ಆಸಾಮಿ ಒಂದು ದಿನವಾದರೂ ಹೆಂಡತಿಯ ಕೈ ಅಡುಗೆ ರುಚಿಯನ್ನು ಹೊಗಳಿದವನೇ ಅಲ್ಲ. ಈ ಪ್ರಾಣಿಗೇನೂ ಗೊತ್ತಾಗೋಲ್ಲ ಎಂದುಕೊಂಡು ಸರೋಜಾ ಸುಮ್ಮನಾಗಿದ್ದಳು.

ಒಂದು ಸಲ ಆಫೀಸಿನಲ್ಲಿ ಕೌಟುಂಬಿಕ ಚರ್ಚೆ ಆಗುತ್ತಿದ್ದಾಗ, ರಾಮಣ್ಣನ ಈ ದರ್ಬುದ್ಧಿ ಬಗ್ಗೆ ಎಲ್ಲರೂ ಮಾತನಾಡಿಕೊಂಡರು. ಏನೇ ಆಗಲಿ, ಹೀಗೆ ಮಾಡಬಾರದು. ಆದದ್ದು ಆಯಿತು, ಇವತ್ತು ರಾತ್ರಿ ಊಟ ಮಾಡುವಾಗ ಬಾಯಿ ತುಂಬಾ ಹೆಂಡತಿಯ ಕೈ ರುಚಿ ಹೊಗಳಲೇಬೇಕು ಎಂದು ತಾಕೀತು ಮಾಡಿ ಕಳುಹಿಸಿದರು.

ಅಂತೂ ರಾಮಣ್ಣ ರಾತ್ರಿ ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದಾಗ, ಎಂದಿನಂತೆ ಸರೋಜಾ ಬಿಸಿಬೇಳೆ ಭಾತ್‌, ಆಲೂ ಚಿಪ್ಸ್ ಹಾಕಿ ತಟ್ಟೆಯನ್ನು ಗಂಡನ ಕೈಗೆ ಕೊಟ್ಟಳು. 4 ತುತ್ತು ತಿಂದು ಮುಗಿಸಿದ ರಾಮಣ್ಣ ಸಹೋದ್ಯೋಗಿಗಳ ಮಾತು ನೆನಪಾಗಿ, ಬಾಯಿ ತುಂಬಾ ಹೆಂಡತಿಯ ಕೈ ರುಚಿಯನ್ನು ಹೊಗಳಿದ್ದೇ ಹೊಗಳಿದ್ದು!

“ಅಯ್ಯೋ ಬಡ್ಕೊಂಡ್ರು ನಿಮ್ಮ ಬುದ್ಧೀಗೆ… 20 ವರ್ಷಗಳಿಂದ ನಾನು ಹೊತ್ತೊತ್ತಿಗೆ ಅಡುಗೆ ಮಾಡಿ ಬಡೀತಿದ್ದೀನಿ. ಒಂದು ದಿನ ನನ್ನ ಕೈ ಅಡುಗೆ ಚೆನ್ನಾಗಿದೆ ಅಂದಿಲ್ಲ. ಇವತ್ತು ಅಪರೂಪಕ್ಕೆ ಪಕ್ಕದ್ಮನೆ ಪಂಕಜಾ ಬಿಸಿಬೇಳೆ ಭಾತ್‌ ಕೊಟ್ಟರೆ ಈ ಪಾಟಿ ಹೊಗಳುವುದೇ….?”

ರಾಮಣ್ಣನ ಗಂಟಲಲ್ಲಿ ಅನ್ನ ಸಿಲುಕಲು ಜೋರಾಗಿ ಕೆಮ್ಮತೊಡಗಿದ.

ಸೋಮು ಬಹಳ ಬೇಸರದಿಂದ ಖಿನ್ನನಾಗಿ ಕುಳಿತಿದ್ದ. ಆಗ ಅವನ ಚಡ್ಡಿ ದೋಸ್ತ್ ಕಿಟ್ಟಿ ಅಲ್ಲಿಗೆ ಬಂದ. ಸೋಮುವಿನ ದುಃಖ ಕಂಡು ಕಿಟ್ಟಿ ಗಾಬರಿಯಾದ.

ಕಿಟ್ಟಿ : ಏನಾಯ್ತು ಸೋಮು…. ಏನು ನಿನ್ನ ಕಥೆ?

ಸೋಮು : ಕಳೆದು ಹೋಗಿರುವ ನನ್ನ ಸುಖ, ಶಾಂತಿ, ನೆಮ್ಮದಿಗಳನ್ನು ಪಡೆಯಬೇಕೆಂದಿರುವೆ. ಅದಕ್ಕೆ ದಾರಿ ಇದೆಯೇ?

ಕಿಟ್ಟಿ : ಇದಕ್ಕೆ ಇರುವುದು ಒಂದೇ ದಾರಿ…. ನೀನು ಕೂಡಲೇ ಡೈವೋರ್ಸ್‌ ತಗೋ!

ವಿಶಾಲಮ್ಮ ಎಲ್ಲಾ ಬಗೆಯ ವ್ಯಾಯಾಮ, ಡಯೆಟಿಂಗ್‌ ಮಾಡಿ ಮುಗಿಸಿದರೂ ಒಂದಿಷ್ಟು ಸಣ್ಣ ಆಗಲಿಲ್ಲ. ಅವರಿಗೂ ಬಹಳ ರೋಸಿಹೋಗಿತ್ತು. ಸರಿ, ಗಂಡ ಬಂದ ಮೇಲೆ ಮಾತನಾಡೋಣ ಎಂದು ಸುಮ್ಮನಾದರು.

ವಿಶಾಲಮ್ಮ : ನಿಮಗೆ ತೆಳ್ಳಗಿರುವ ಆದರೆ ಸದಾ ಸಿಡುಕುವ ಹೆಂಡತಿ ಬೇಕೋ, ಅಥವಾ ದಪ್ಪಗಿದ್ದರೂ ಸದಾ ನಸುನಗುತ್ತಾ ಗಂಡನ ಆದರಿಸುವ ಹೆಂಡತಿ ಬೇಕೋ?

ವಿಶ್ವನಾಥ್‌: ಅದೆಲ್ಲ ಇರಲಿ, ನೀನು ಸದಾ ನಗುನಗುತ್ತಾ ಗುಡ್‌ ಮೂಡ್‌ನಲ್ಲಿರಲು ಇನ್ನೂ ಅದೆಷ್ಟು ದಪ್ಪ ಆಗಬೇಕು ಮಾರಾಯ್ತಿ…..?

ಗುಂಡನ ಹೆಂಡತಿ ಆಷಾಡಕ್ಕೆಂದು ತವರಿಗೆ ಹೋದವಳು ಶ್ರಾವಣವಾದರೂ ಬರಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಗುಂಡ ಒಂದು ಸಲ ಮಾವನ ಮನೆಗೆ ಹೊರಟೇಬಿಟ್ಟ. 11 ಗಂಟೆ ರಾತ್ರಿ ಮಾವನ ಮನೆ ತಲುಪಿದ ಗುಂಡ, ಹೆಂಡತಿಯ ದರ್ಶನವಾಗದೆ, ಉಳಿದಿದ್ದ ಚೂರುಪಾರು ಉಂಡು, ಮಾವನ ಪಕ್ಕದಲ್ಲೇ ಮಲಗಬೇಕಾಯಿತು. ಮಾವನ ಗೊರಕೆ ತಡೆಯಲಾಗದೆ. ಗುಂಡನಿಗೆ ನಿದ್ದೆ ದೂರವಾಯಿತು.

ಅಂತೂ ಕಣ್ಣೆಳೆಯುವಷ್ಟರಲ್ಲಿ ಯಾರೋ ಹತ್ತಿರದಿಂದ ಜೋರಾಗಿ ಬಳೆ ಸದ್ದು ಮಾಡಿದಂತಾಯ್ತು. ರೋಮಾಂಚಿತನಾದ ಗುಂಡ ಹೆಂಡತಿಯೇ ಕರೆಯುತ್ತಿದ್ದಾಳೆ ಎಂದು ಎದ್ದು ಕುಳಿತು ಬೇರೆ ಕೋಣೆಗಳತ್ತ ಕಣ್ಣು ಹಾಯಿಸಿದ. ಆದರೆ ಯಾರೂ ಕಾಣಲಿಲ್ಲ.

ಅದಾಗಿ 1 ತಾಸು ಕಳೆಯಿತು. ಮತ್ತೆ ಅಂಥದೇ ಶಬ್ದ ಕೇಳಿಸಬೇಕೇ? ಈ ಬಾರಿ ಗುಂಡ ಎದ್ದು ಎದುರಿನ ಕೋಣೆಗೆ ಹೋಗೇಬಿಡೋಣ ಎಂದುಕೊಳ್ಳುವಷ್ಟರಲ್ಲಿ ಅವನ ಮಾವ ಮಲಗಿದ್ದಲ್ಲಿಂದಲೇ ಒಂದು ಕಣ್ಣು ಬಿಡುತ್ತಾ, “ಅದು ಹಸುವಿನ ಗಂಟೆ ಸದ್ದು, ಸುಮ್ಮನೆ ಮಲಗು ಹುಚ್ಚಪ್ಪ… ನಿನ್ನ ಹೆಂಡತಿ ಒಳಗಿಲ್ಲ!” ಎಂದಾಗ ಬೆಪ್ಪು ಮೋರೆಯ ಗುಂಡ ಬಂದು ತೆಪ್ಪಗೆ ಮಲಗಿದ.

ಗಿರಿಜಮ್ಮ : ನಾವು ಮನೆಯಲ್ಲಿ ನಮ್ಮ ಕೈಯಾರೆ ಅಡುಗೆ ಮಾಡಿದರೆ ಎಷ್ಟೋ ಉಳಿತಾಯ ಆಗುತ್ತದೆ ಗೊತ್ತಾ ನಿಮಗೆ?

ಸುಭದ್ರಮ್ಮ : ಅದು ನಿಜ…ಇಷ್ಟು ವರ್ಷ ನನ್ನ ಗಂಡ ಅಡುಗೆ ಮಾಡ್ತಿದ್ದರು. ಈಗ ಕಳೆದ ತಿಂಗಳಿನಿಂದ ನಾನು ಶುರು ಮಾಡಿದ್ದೀನಿ, ಅವರ ಊಟ ಅರ್ಧಕ್ಕರ್ಧ ಕಡಿಮೆ ಆಗಿದೆ ಅಂತೀನಿ!

ಅವಳು ತನ್ನ ಗಂಡನ ಮೊಬೈಲ್ ಚೆಕ್‌ ಮಾಡಿದಾಗ ಹುಡುಗಿಯರ ಹೆಸರು ಈ ರೀತಿ ಸೇವ್ ‌ಆಗಿತ್ತು :

ನೆರೆಮನೆ ಹಕ್ಕಿ ಎದುರುಮನೆ ಹಕ್ಕಿ ಹೊಸ ಹಕ್ಕಿ ಕಾಲೇಜ್‌ ಹಕ್ಕಿ ಬಸ್ಸಿನ ಹಕ್ಕಿ ಆಸ್ಪತ್ರೆ ಹಕ್ಕಿ ಅಂಗಡಿ ಹಕ್ಕಿ ಕೊನೆಗೆ ಹೆಂಡತಿ ಕುತೂಹಲ ತಡೆಯಾರದೆ ತನ್ನ ನಂಬರ್‌ ಟೈಪ್‌ ಮಾಡಿ ಮೆನುಗೆ ಹೋಗಿ ನೋಡಿದಾಗ…. `ಕುಟುಕುವ ಹದ್ದು’ ಅಂತಿರಬೇಕೇ?

ಪಾಪ, ಗಂಡನ ಮೊಬೈಲ್ 3 ದಿನಗಳಿಂದ ಕೆಲಸ ಮಾಡುತ್ತಿಲ್ಲವಂತೆ!

ಅವಿವಾಹಿತ : ಹೆಂಡತಿಗೆ ಯಾಕೆ ಎಲ್ಲರೂ ಅಷ್ಟು ಹೆದರುತ್ತಾರೆ? ಅವಳಿಗೆ ಅಷ್ಟೊಂದು ಶಕ್ತಿ ಇದೆಯೇ?

ವಿವಾಹಿತ : ಹೌದು ಮತ್ತೆ…. ಅವಳು ಒಂದು ಸಾಧಾರಣ ಸೋರೆಕಾಯಿ ಗೊಜ್ಜನ್ನು ಕೆಕ್ಕರಿಸಿ ನೋಡಿದರೆ ಅದು ಪನೀರ್‌ ಮಸಾಲ ಗ್ರೇವಿ ಆಗಿಹೋಗುತ್ತದೆ.

ಪತಿಪತ್ನಿ ಬೆಳದಿಂಗಳ ರಾತ್ರಿಯಲ್ಲಿ ಮಹಡಿ ಮೇಲೆ ಕುಳಿತಿದ್ದರು. ಆಗ ಪತ್ನಿ ಸಿಹಿ ಜಾಮೂನು ಸವಿಯುತ್ತಿದ್ದಳು.

ಪತಿ : ನನಗೂ ಟೇಸ್ಟ್ ಗೆ 1 ಕೊಡಬಾರದೇ?

ಪತ್ನಿ : ಹೋಗಲಿ…. ಇದನ್ನು ತಗೊಳ್ಳಿ.

ಪತಿ : ಅಯ್ಯೋ! ಇದೇನು ಒಂದೇ ಒಂದು ಕೊಟ್ಟೆ?

ಪತ್ನಿ : ನೀವು ಟೇಸ್ಟಿಗೆ ತಾನೇ ಕೇಳಿದ್ರಿ? ಎಲ್ಲದರ ಟೇಸ್ಟೂ ಹೀಗೇ ಇರುತ್ತೆ ಬಿಡಿ.

ಪತ್ನಿ : ರೀ… ಮೊದಲು ನಮ್ಮ ಕಿಟಕಿಗಳಿಗೆ ಪರದೆ ಹಾಕಿಸಿ. ಪಕ್ಕದ ಮನೆಯವನು ಆಗಾಗ ನನ್ನತ್ತ ಇಣುಕಿಣುಕಿ ನೋಡುತ್ತಿರುತ್ತಾನೆ.

ಪತಿ : ಎಲ್ಲೋ ಕಣ್ಣು ಐಬಿರಬೇಕು…. 1-2 ಸಲ ಸರಿಯಾಗಿ ನೋಡಿದ ಮೇಲೆ ತಾನೇ ತನ್ನ ಮನೆ ಕಿಟಕಿಗಳಿಗೆ ಪರದೆ  ಹಾಕ್ಕೊಂತಾನೆ ಬಿಡು!

ರೇವತಿ : ಡಾಕ್ಟರ್‌…. ದಯವಿಟ್ಟು ಇವರಿಗೆ ಬೇಗ ಚಿಕಿತ್ಸೆ ಕೊಡಿ. ರಾತ್ರಿ ಪೂರ್ತಿ ಇವರು ನನ್ನ ಹೆಸರನ್ನೇ ಕನವರಿಸುತ್ತಾ ಇರುತ್ತಾರೆ.

ಡಾಕ್ಟರ್‌ : ಒಳ್ಳೆಯದೇ ಆಯ್ತಲ್ಲಮ್ಮ…. ಇದರಿಂದ ಅವರು ನಿನ್ನನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದು ಗೊತ್ತಾಗುತ್ತೆ.

ರೇವತಿ : ಅದು ನನಗೂ ಗೊತ್ತು ಡಾಕ್ಟ್ರೇ…. ಆದರೆ ನಾಳೆ ಇವರ ಹೆಂಡತಿ ತವರಿನಿಂದ ವಾಪಸ್ಸು ಬರ್ತಿದ್ದಾರೆ….!

 ಮೋಹನ್‌ : ನನಗೂ ನನ್ನ ಹೆಂಡತಿಗೂ ದಿನಾ ಜಗಳ ತಪ್ಪಿದ್ದಲ್ಲ. ಇದಕ್ಕೆ ಏನಾದರೂ ಪರಿಹಾರ ಇದ್ದರೆ ಹೇಳು.

ಕಿಶೋರ್‌ : ನನ್ನ ಸಲಹೆ ಎಂದರೆ… ನೀನು ವಾದ ಮಾಡಿ ಗೆಲ್ಲುವ ಬದಲು ಅವಳನ್ನು ನಿನ್ನ ನಗುವಿನಿಂದ ಕಟ್ಟಿ ಹಾಕು.

ಹೀಗೆ 2 ದಿನ ಕಳೆಯಿತು.

ಕಿಶೋರ್‌ : ಈಗ ಹೇಳು, ನನ್ನ ಸಲಹೆ ಕೆಲಸ ಮಾಡಿತೇ?

ಮೋಹನ್‌ : ನಾನು ಪ್ರಯಾಸಪಟ್ಟಿದ್ದಂತೂ ಆಯ್ತು. ಆದರೆ ನನ್ನ ಹೆಂಡತಿ ಏನು ಮಾಡಿದ್ಲು ಗೊತ್ತಾ?

ಕಿಶೋರ್‌ : ಏನು ಮಾಡಿದ್ಲು?

ಮೋಹನ್‌ : ಏನು ಬರ್ತಾ ಬರ್ತಾ ಎಲ್ಲದಕ್ಕೂ ಹಲ್ಲು ಕಿಸೀತಿದ್ದೀರಿ… ನಡೀರಿ, ಒಂದು ಯಂತ್ರ ಕಟ್ಟಿಸಿಕೊಂಡು ಬರೋಣ ಅಂತ ಅಂದುಬಿಡುವುದೇ?

ಗುಂಡ ತನಗೆ ಅನಾರೋಗ್ಯವೆಂದು ಡಾಕ್ಟರ್‌ ಬಳಿ ಬಂದು ಚಿಕಿತ್ಸೆ ನೀಡುವಂತೆ ಕೇಳಿದ.

ಅವನನ್ನು ಆಮೂಲಾಗ್ರ ಪರೀಕ್ಷಿಸಿದ ವೈದ್ಯರು, “ನಿಮ್ಮನ್ನು ಬಹಳ ಕಾಲದಿಂದ ಯಾವುದೋ ಕಾಯಿಲೆ ಕಾಡುತ್ತಿದೆ…. ಅದು ನಿಮ್ಮನ್ನು ಸ್ವಲ್ಪ ಸ್ವಲ್ಪವಾಗಿ ಅಣುಅಣುವಾಗಿ ಕೊಲ್ಲುತ್ತಿದೆ…..”

ಅದಕ್ಕೆ ಗುಂಡ ಹೇಳಿದ, “ಅಯ್ಯೋ…. ಮೆಲ್ಲಗೆ ಹೇಳಿ ಡಾಕ್ಟರ್‌, ನನ್ನ ಹೆಂಡತಿ ಇಲ್ಲೇ ಕುಳಿತಿದ್ದಾಳೆ….”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ