ಕಥೆ – ಕೆ.ವಿ. ರಾಜಲಕ್ಷ್ಮಿ 

 ಅದನ್ನು ಬೇರೊಂದು ರೂಪದಲ್ಲಿ ಮುಂದೆ ಕಿರಿಮಗಳಿಗೆ ಕೊಟ್ಟಾಗ, ಅಕ್ಕ, ತಂಗಿಯ ಮೇಲೆ ಮುನಿಸಿಕೊಂಡು, ಮಾತು ಬಿಟ್ಟುಬಿಡುವುದೇ….? ಮುಂದೆ ಈ ಲೆಕ್ಕಾಚಾರ ಸರಿಹೋಗಿದ್ದು ಹೇಗೆ…..?

ಅಕ್ಕನ ಮಗನಿಗೆ ಮದುವೆ ನಿಶ್ಚಯವಾಗಿದೆ ಎಂದು ಮೂರನೆಯವರಿಂದ ಸುದ್ದಿ ತಿಳಿಯಿತು. ಒಂದೇ ಊರಲ್ಲಿ ಇದ್ದುಕೊಂಡು ನಾನು ಅಪರಿಚಿತಳಾಗಿಬಿಟ್ಟೆನೇ? ನಿಕ್ಕಿಯಾಗಿರುವ ಹುಡುಗಿಯ ತಂದೆ, ನನ್ನ ಸಹೋದ್ಯೋಗಿ, ಆಪ್ತ ಗೆಳತಿ ಶಾಲಿನಿಯ ಸೋದರ ಸಂಬಂಧಿ. ಹೀಗಾಗಿ ಅವಳ ಮೂಲಕ ವಿಷಯ ತಿಳಿದದ್ದು. ಮನಸ್ಸು ಇನ್ನಷ್ಟು ಕುಗ್ಗಿಹೋಗಿತ್ತು.

“ಹೋಗ್ಲಿ ಬಿಡು. ಈ ನೆಪದಲ್ಲಾದರೂ ನೀವಿಬ್ಬರು ಸರಿಹೋಗಬಹುದು,” ಶಾಲಿನಿ ಸಂತೈಸಿದಾಗ, `ಏನು ಸರಿಹೋಗುವುದೋ ಏನೋ? ಎಲ್ಲ ಅವಳ ಮೂಗಿನ ನೇರಕ್ಕೆ ನಡೀಬೇಕು ಅನ್ನೋ ಹಠ, ಸಮಯ ಒಂದೇ ತರಹ ಇರುತ್ತಾ? ನಮಗೂ ಕಷ್ಟನಷ್ಟಗಳು ಇರೋಲ್ವಾ? ನಾನೇ ಅಡ್ಜಸ್ಟ್ ಮಾಡಬೇಕು ಯಾವಾಗ್ಲೂ…..’ ಗೊಣಗಿಕೊಂಡಿದ್ದೆ.

ಎಂದಿನ ಹಾಗೆ ನಾನೇ ಸೋತಿದ್ದರೆ ಈ ವೈಮನಸ್ಯಕ್ಕೆ ಆಸ್ಪದವೇ ಇರುತ್ತಿರಲಿಲ್ಲವೇನೋ….ಅಮ್ಮನಿಗೆ ಫೋನ್‌ ಮಾಡಿದೆ ನನ್ನ ದುಃಖ ತೋಡಿಕೊಳ್ಳಲು.

“ಅಮೋಘನಿಗೆ ಮದುವೆ ಗೊತ್ತಾಗಿದೆಯಂತೆ….”

“ಹ್ಞೂಂ… ಇದುವರೆಗೂ ನಿನಗೆ ತಿಳಿಸಲಿಲ್ವಾ?”

“ಇಲ್ಲಮ್ಮ….. ಶಶಿ ನನ್ನೊಂದಿಗೆ ಮಾತಾಡಿ ಆರು ತಿಂಗಳುಗಳೇ ಕಳೆದಿವೆ….”

“ಅವಳ ಮುನಿಸು ಇದ್ರೆ ಇರಲಿ. ಮುಂದಿನ ಭಾನುವಾರ ಲಗ್ನಪತ್ರಿಕೆ ಹುಡುಗಿ ಮನೇಲಿ. ನನಗೆ ಶಶಿ ಫೋನ್‌ ಮಾಡಿ ಹೇಳಿದ್ಲು. ನಾನೂ ಬುದ್ಧಿ ಹೇಳಿದ್ದೀನಿ. ಇರೋದು ಒಬ್ಬಳೇ ತಂಗಿ. ನಿನಗೆ ಅವಳು, ಅವಳಿಗೆ ನೀನು. ಹೀಗೆ ದೂರ ಮಾಡೋದು ಸರಿಯಲ್ಲ ಅಂತ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನ ತಂಗೀನ ಕರೀದಿದ್ರೆ ನಾನೂ ಬರೋಲ್ಲ ಅಂತ ಎಚ್ಚರಿಸಿದ್ದೀನಿ. ಶಶಿ ಏನು ಚಿಕ್ಕವಳಲ್ಲ. ನಿನಗೂ ಹೇಳ್ತಾಳೆ ಬಿಡು,” ಅಮ್ಮ ಸಮಾಧಾನದ ಮಾತುಗಳನ್ನು ಹೇಳಿದರು.

ಇದಕ್ಕೆಲ್ಲ ಕಾರಣ ಆ ಬಂಗಾರದ ಬಳೆಗಳಲ್ಲವೇ? ಅಮ್ಮ ಮಾಡಿದ್ದೂ ಸರಿಯೇ? ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಒಂದಲ್ಲ ಹತ್ತು ಬಾರಿ ತುಲನೆ ಮಾಡಿರ್ತಾರೆ. ಅದರಲ್ಲಿ ಸಂಶಯವೇ ಬೇಡ.

ತಿಂಗಳ ಮೇಲಾಗಿತ್ತು ಅಮ್ಮನನ್ನು ನೋಡಿ. ಅದೇ ಬಡಾವಣೆಯಲ್ಲಿದ್ದ ಗೆಳತಿಯ ಮನೆ ಸಮಾರಂಭಕ್ಕೆ ಹಾಜರಾತಿ ಕೊಟ್ಟು ಅಮ್ಮನನ್ನು ನೋಡಲು ಹೋಗಿದ್ದೆ.

“ಬಾರೇ ಶಮೀ, ನಿನ್ನನ್ನೇ ನೆನೆಸಿಕೊಳ್ತಿದ್ದೆ…. ಊಟಕ್ಕೇಳು,” ದೊಡ್ಡಮ್ಮ ಉಪಚರಿಸಿದರು.

“ಈಗಷ್ಟೇ ಆಯ್ತು ದೊಡ್ಡಮ್ಮ, ಗೆಳತಿಯ ಮನೆಯಲ್ಲಿ ಭೂರಿ ಭೋಜನ. ಅಮ್ಮ ಎಲ್ಲಿ?” ಎಂದೆ ಮನೆಯೆಲ್ಲ ಕಣ್ಣಾಡಿಸುತ್ತ.

“ಬರ್ತಾಳೆ ಇರು. ಟೆರೇಸ್‌ಗೆ ಹೋಗಿದ್ದಾಳೆ ಬಟ್ಟೆ ಒಣಹಾಕೋಕ್ಕೆ, ನಿಮ್ಮ ಅತ್ತೆ ಮಾವ ಚೆನ್ನಾಗಿದ್ದಾರಾ?”

“ಹ್ಞೂಂ ದೊಡ್ಡಮ್ಮ ಚೆನ್ನಾಗಿದ್ದಾರೆ, ಔಷಧಿ ಮಾತ್ರೆಗಳ ದೆಸೆಯಿಂದ…..”

“ಏನ್ಮಾಡೋಕಾಗುತ್ತೆ? ಎಲ್ಲರ ಕಥೆಯೂ ಹಾಗೆ ಆಗಿಹೋಗಿದೆ…. ಊಟ ಬಿಡಬಹುದು ಮಾತ್ರೆ ಬಿಡಲಾಗದು….” ಎಂದರು ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ ದೊಡ್ಡಮ್ಮ.

“ನಿಮ್ಮ ವಯಸ್ಸಿಗೆ ನಮ್ಮ ಕಥೆ ಏನೋ…. ನಮಗೆ ಈಗಲೇ ಬಿ.ಪಿ., ಶುಗರ್‌, ಸ್ಟ್ರೆಸ್ಸು ಅಂತ ನೂರೆಂಟು ಕಾಯಿಲೆ ದಾಳಿ ಮಾಡ್ತಿವೆ….” ಎಂದು ಮಾತು ಪೂರ್ತಿ ಮುಗಿಸುವ ಮೊದಲೇ ಅಮ್ಮ ಬಂದಿದ್ದರು.

“ಅದೇನು ಮಾತು ಅಂತ ಆಡ್ತಿ ಶಮೀ. ಸದ್ಯ ನೀವುಗಳು ಆರೋಗ್ಯವಾಗಿದ್ದರೆ ಅದೇ ನಮಗೆ ನೆಮ್ಮದಿ…. ಸರಿ ಊಟಕ್ಕೇಳು,” ಎಂದರು.

“ಇಲ್ಲಮ್ಮ ಆಯ್ತು. ನೀಲಾಳ ಮನೇಲಿ ನಾಮಕರಣಕ್ಕೆ ಹೋಗಿ ಬರ್ತಿರೋದು…. ನೀವು ಊಟ ಮಾಡಿ,” ಎಂದು ಉಡುಗೊರೆಯ ಜೊತೆಗೆ ಕೊಟ್ಟಿದ್ದ ಲಾಡು ಪ್ಯಾಕೆಟ್‌ನ್ನು ಕೊಟ್ಟೆ. ಅಮ್ಮ ಖುಷಿಯಿಂದಲೇ ತೆಗೆದುಕೊಂಡರು.

“ಒಂದು ಐದು ನಿಮಿಷ, ಊಟದ ಶಾಸ್ತ್ರ ಮಾಡಿ ಬಂದೆ,” ಎಂದು ಅವಸರಿಸಿದರು ಅಮ್ಮ.

“ನಿಧಾನವಾಗಿ ಬನ್ನಿ, ನಾನು ಸಂಜೆ ತನಕ ಇರ್ತೀನಿ,” ಎಂದಾಗ ಅಮ್ಮನ ಮುಖ ಅರಳಿತು.

ನಾನು ಅಮ್ಮನ ರೂಮಿಗೆ ಬಂದು ಅವಳ ಮಂಚದ ಮೇಲೆ ಮಲಗಿದೆ. ಏನೋ ಹಿತ ಅಮ್ಮನ ಮಡಿಲಲ್ಲಿ ಮಲಗಿದ ಸುರಕ್ಷಿತ ಭಾವ.

ಅಮ್ಮ ನನಗೊಂದು ದಡ ಕಾಣಿಸಲು ಎಷ್ಟು ಕಷ್ಟಪಟ್ಟಿದ್ದಳು? ಅಕ್ಕನ ಮದುವೆಯ ಸಾಲ ತೀರುವ ಮೊದಲೇ ಅಪ್ಪ ತೀರಿಕೊಂಡಿದ್ದರು. ನನ್ನ ದುಡಿಮೆಯಲ್ಲಿ ಉಳಿದ ಸಾಲ, ಮನೆಯ ನಿರ್ವಹಣೆ ಎರಡೂ ಸಾಗಿತ್ತು. ಇದರ ಮಧ್ಯೆ ಅಕ್ಕನ ಬಾಣಂತನ, ಅಮ್ಮ ಹೈರಾಣಾಗಿದ್ದಳು. ತನಗೆ ಬೇಕೆಂಬುದನ್ನು ಪಡೆದೇ ತೀರುವ ಅಕ್ಕನ ಹಠಮಾರಿತನ ಸಾಕುಸಾಕಾಗಿಸಿತ್ತು.

`ಸರಳವಾಗಿ ಮದುವೆ ಮಾಡಿಕೊಟ್ಟರೂ ಸಾಕು,’ ಎಂದಿದ್ದರು ಭಾವನ ಮನೆಯವರು. ಆದರೆ ತನ್ನ ಮದುವೆ ತಾನೆಣಿಸಿದಂತೆಯೇ ನಡೆಯಬೇಕೆಂದು ಹಠ ಹಿಡಿದು ನಡೆಸಿಕೊಂಡಳು. ಒಂದಷ್ಟು ಸಾಲದ ಹೊರೆ ತವರಿಗೆ ಬಿಟ್ಟು ಹೋಗಿದ್ದಳು. ಅಪ್ಪ ಹೋದ ಮೇಲೆ ನಾವಿಬ್ಬರೆ. ದುಡಿಮೆ ಪೋಲು ಮಾಡದೆ ಸಾಲ ತೀರಿಸಿದ ನಂತರವೇ ನನ್ನ ಮದುವೆ ಎಂದಿದ್ದೆ.

`ಶಮೀ, ಜೋಯಿಸರು ಒಂದು ಸಂಬಂಧ ತಂದಿದ್ದಾರೆ, ಸ್ಥಿತಿವಂತರು. ಆದರೆ ಹುಡುಗನಿಗೆ ಸ್ವಲ್ಪ ವಯಸ್ಸಾಗಿದೆ…. ಹೆಚ್ಚೆಂದರೆ ಹತ್ತು ವರ್ಷ ವ್ಯತ್ಯಾಸ. ನೌಕರಿ, ಸಂಪಾದನೆ ಯಾವುದಕ್ಕೂ ಕಡಿಮೆ ಇಲ್ಲ. ಹುಡುಗನ ಒಬ್ಬಳೇ ಅಕ್ಕ ಅಮೆರಿಕಾದಲ್ಲಿ ಇರೋದಂತೆ. ಮದುವೆಯಾದ ಮೇಲೆ ಕೆಲಸಕ್ಕೆ ಹೋಗಲೇಬೇಕು ಅನ್ನೋ ನಿರ್ಬಂಧ ಇಲ್ಲವಂತೆ….’ ಅಮ್ಮನಿಗೆ ನನ್ನ ಮದುವೆಯಾದರೆ ಸಾಕೆನಿಸಿತ್ತೇನೋ? ಹೆತ್ತ ತಾಯಿಯಲ್ಲವೇ? ನಮ್ಮ ಸ್ಥಿತಿಗೆ ಸರಿ ಅನ್ನಿಸಿ ಜೋಯಿಸರು ಹೇಳಿದ್ದಿರಬೇಕು.

`ಆಯ್ತಮ್ಮಾ, ಅವರಿಗೆ ಬರಹೇಳು,’ ಎಂದೆ. ಮುಂದಿನ ಭಾನುವಾರ ಗಂಡಿನ ಮನೆಯವರು ಬಂದದ್ದೂ ನನ್ನನ್ನು ಒಪ್ಪಿದ್ದೂ ಕಣ್ಣೆವೆ ಮುಚ್ಚುವಷ್ಟರಲ್ಲಿ ನಡೆದಿತ್ತು.

`ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ಎರಡೂ ಖರ್ಚು ನಾವೇ ಹಾಕಿಕೊಂಡು ಮನೆ ತುಂಬಿಸ್ಕೊಳ್ತೀವಿ. ನೀವು ನಿಶ್ಚಿಂತರಾಗಿರಿ,’ ಸ್ವತಃ ಅತ್ತೆಯವರೇ ಈ ಮಾತುಗಳನ್ನಾಡಿದಾಗ ಹೃದಯ ತುಂಬಿತ್ತು.

ಅಮೆರಿಕಾದಿಂದ ಮಗಳು ಬರುವ ಸಮಯಕ್ಕೆ ಲಗ್ನ ನಿಗದಿಯಾಗಿತ್ತು. ಕಿವಿಯೋಲೇ ಹೊರತು ಬೇರೆ ಯಾವ ಆಭರಣಗಳೂ ಅಮ್ಮನದಲ್ಲ. ಆ ಕೊರಗು ಅಮ್ಮನನ್ನು ಕಾಡಿದರೂ ಹೇಗೋ ದಡ ಸೇರಿಸಿದೆ ಎಂಬ ಧನ್ಯತಾ ಭಾವ. ನಾಲ್ಕೈದು ತಿಂಗಳು ಒಬ್ಬಳೇ ನಾವಿದ್ದ ಮನೆಯಲ್ಲೇ ಇದ್ದ ಅಮ್ಮನನ್ನು ದೊಡ್ಡಮ್ಮನ ಮಕ್ಕಳ ಜೊತೆ ನಾನೂ ಶಶಿ ಸೇರಿಸಿ ಒಪ್ಪಿಸಿ ದೊಡ್ಡಮ್ಮನ ಮನೆಗೆ ಸ್ಥಳಾಂತರಿಸಿದ್ದೆವು. ಇದು ಎಲ್ಲರಿಗೂ ನೆಮ್ಮದಿ ತರಿಸಿತ್ತು.

ದೊಡ್ಡಮ್ಮನ ಇಬ್ಬರು ಮಕ್ಕಳೂ ವಿದೇಶದಲ್ಲಿ ನೆಲೆಸಿದ್ದರಿಂದ ಚಿಕ್ಕಮ್ಮನ ಆಗಮನ ಅವರಿಗೂ ಸಹ್ಯವೇ ಆಗಿತ್ತು. ಹೆಣ್ಣು ಮಕ್ಕಳ ಮನೆಗೆ ಬರಲೊಪ್ಪದ ಅಮ್ಮನಿಗೂ ಅಕ್ಕನೊಂದಿಗೆ ಇರುವುದು ಲೇಸೆನಿಸಿತ್ತು. ಅಕ್ಕನೂ ಒಂಟಿಯಾಗಿದ್ದರಿಂದ ಸಂಕೋಚ ಇರಲಿಲ್ಲ. ಯಾವುದೇ ವರಮಾನ ಇಲ್ಲದ ಅಮ್ಮ, ದೊಡ್ಡಮ್ಮನ ಯೋಗಕ್ಷೇಮ ನೋಡಿಕೊಂಡು ಋಣ ತೀರಿಸಿಕೊಳ್ಳುತ್ತಿದ್ದರು.

ತಿಂಗಳಿಗೊಮ್ಮೆ ನಾನು ಹೋಗಿಬರುತ್ತಿದ್ದೆ. ಅಕ್ಕ ಶಶಿಯೂ ವಿಚಾರಿಸಿಕೊಳ್ಳುತ್ತಿದ್ದಳು. ನನ್ನ ಹೊಂದಾಣಿಕೆ ಸ್ವಭಾವ ಅತ್ತೆಮನೆಯಲ್ಲಿ ಎಲ್ಲರ ಪ್ರೀತಿ ಗೆದ್ದಿತ್ತು. ಅಮೆರಿಕಾದಿಂದ ಅನು ಅತ್ತಿಗೆ ಮಾತನಾಡುವಾಗೆಲ್ಲ `ನಾವೆಷ್ಟು ಪುಣ್ಯ ಮಾಡಿದ್ವಿ ನಿಮ್ಮನ್ನು ಪಡೆಯಲು,’ ಎಂದು ಹೇಳದೆ ಇರುತ್ತಿರಲಿಲ್ಲ.

“ಮಲಗಿಬಿಟ್ಯಾ ಶಮೀ….” ಅಮ್ಮನ ದನಿ ಕೇಳುತ್ತಲೇ…

“ಇಲ್ಲಮ್ಮಾ,” ಎಂದು ಎದ್ದು ಕುಳಿತೆ. ಅಳಿಯ, ಮೊಮ್ಮಕ್ಕಳ ಬಗೆಗೆ ಎಲ್ಲ ವಿಚಾರಿಸಿಕೊಂಡು ನಿರಾಳವಾದಳು.

“ನಾಳೆ ಶುಕ್ರವಾರ ನಿನ್ನ ಹುಟ್ಟಿದ ಹಬ್ಬ ಅಲ್ವೇನೇ….”

“ಹೌದಮ್ಮ ನಲವತ್ತೈದು ಆಗುತ್ತೆ….” ನಕ್ಕೆ

“ಒಂದ್ನಿಮಿಷ ತಡಿ ಬಂದೆ….” ಎಂದವರೇ ಕಪಾಟಿನಿಂದ ಒಂದು ಪುಟ್ಟ ಡಬ್ಬ ತೆಗೆದು ನನ್ನ ಕೈಗಿತ್ತರು.

“ಏನಮ್ಮ ಇದು,” ಎನ್ನುತ್ತಲೇ ತೆಗೆದು ನೋಡಿದರೆ ಬಂಗಾರದ ಜೋಡಿ ಬಳೆ….. ಕೈಗೇರಿಸಿ

“ನನ್ನ ಸೈಜ್‌ಗೆ…. ಚೆನ್ನಾಗಿದೆಯಲ್ವಮ್ಮಾ…..” ಎಂದೇ ಸಹಜವಾಗಿ.

“ನಿನಗೇ ಕಣ್‌ ತಾಯಿ, ಬೇಡ ಅನ್ನದೆ ತೊಗೋ….” ನನಗೆ ಆನಂದಾಶ್ಚರ್ಯಗಳು ಒಮ್ಮೆಲೇ ಆಗಿದ್ದವು.

“ಅಮ್ಮಾ, ಶಶಿಗೆ ಗೊತ್ತಾದರೆ ಕೋಪಿಸಿಕೊಂಡು ನಿನ್ನ ಹತ್ತಿರ ಜಗಳಕ್ಕೆ ಬರ್ತಾಳೆ….” ಅಂದೆ,

“ಇದು ನನ್ನ ಸಂಪಾದನೆ. ನೀನು ಕೊಡ್ತಿರೋ ದುಡ್ಡು, ಊರಿಂದ ಬಂದಾಗ ನನ್ನ ಅಕ್ಕನ ಮಕ್ಕಳು ಕೊಟ್ಟ ದುಡ್ಡು ಎಲ್ಲ ಸೇರಿಸಿ ಕಷ್ಟಪಟ್ಟು ಮಾಡಿಸಿರೋ ಬಳೆಗಳು. ಯಾರೂ ಕೇಳೋ ಹಾಗಿಲ್ಲ. ನಿನ್ನ ಮದುವೇಲಿ ಓಲೆ ಬಿಟ್ಟರೆ ಏನೂ ಹಾಕಿಲ್ಲ, ಅವಳಿಗೆ ಸರ, ಬಳೆ ಅಂತ ಎಲ್ಲ ಕೊಟ್ಟು ಮಾಡಿದೆನಲ್ಲ? ನಿನ್ನ ಮದುವೆಗೆ ಹೇಳಿಕೊಳ್ಳುವಂಥ ಯಾವ ಉಡುಗೊರೆನೂ ಕಾಣೆ…? ನಿನ್ನ ಸಮಕ್ಕೆ ಅವಳೂ ಸೀರೆ ತೊಗೊಂಡಳು. ನಮ್ಮ ಕಷ್ಟವನ್ನು ಅವಳು ಗ್ರಹಿಸುವುದೇ ಇಲ್ಲ….. ನೀನು ಅವಳಿಗಿಂತ ಒಳ್ಳೆಯ ಸ್ಥಿತಿಯಲ್ಲಿದ್ದೀಯ ಅಂತ ಅವಳಿಗೆ ಅಸೂಯೆ… ನೀನು ಹೇಳದಿದ್ದರೆ ನನಗೆ ತಿಳಿಯದು ಅಂದ್ಕೋಬೇಡ…..” ಅಮ್ಮ ಕಣ್ಣೊರೆಸಿಕೊಂಡಾಗ,

“ಆಯ್ತು ಬಿಡಮ್ಮ. ನಾನು ಬೇಡ ಅನ್ನೋಲ್ಲ….” ಎಂದು ಸಮಾಧಾನಿಸಿದ್ದೆ.

ಉಡುಗೊರೆಯಾಗಿ ಪಡೆದಿದ್ದ ಆ ಬಳೆಗಳ ವಿಷಯ ಅಕ್ಕನಿಗೆ ತಿಳಿದು ಮುನಿಸು ತೋರಿ ಮಾತು ನಿಲ್ಲಿಸಿದ್ದಳು. ಕರೆಗಂಟೆ ಬಾರಿಸಿದಾಗ ನಾನೇ ಬಾಗಿಲು ತೆಗೆದೆ, “ಶಶೀ..” ಹೆಚ್ಚು ಕಡಿಮೆ ಚೀರಿದ್ದೆ ಸಂತಸದಿಂದ.

“ಅಮೋಘನ ಲಗ್ನಪತ್ರಿಕೆ ಭಾನುವಾರ, ಖಂಡಿತಾ ಎಲ್ಲರೂ ಬರಬೇಕು. ಹತ್ತು ಗಂಟೆಗೆ ನಮ್ಮ ಮನೆಗೆ ಬಂದುಬಿಡಿ. ಅಲ್ಲಿಂದ ಎಲ್ಲರೂ ಒಟ್ಟಿಗೆ ಹೋಗೋಣ,” ನಮ್ಮ ಮನೆಯವರನ್ನು ಉದ್ದೇಶಿಸಿ ಹೇಳಿದಾಗ ತಲೆಯಾಡಿಸಿದೆ.

“ಶಮೀ ಅವತ್ತು ಯಾವ ಸೀರೆ ಉಡಲಿ ಅಂತ ಗೊಂದಲ…..” ಹೊರಡುವ ಮುನ್ನ ಪಿಸುಗುಟ್ಟಿದಳು.

“ಅದಕ್ಕೇನಂತೆ ಬಾ….” ಎಂದು ನನ್ನ ಬೀರುವಿನಿಂದ ಹೊಸತಾಗಿ ಖರೀದಿಸಿ ಅಣಿಮಾಡಿದ್ದ ಹಸಿರು ಒಡಲಿಗೆ ಕೆಂಪು ಅಂಚಿದ್ದ ಮೈಸೂರ್‌ ಸಿಲ್ಕ್ ಸೀರೆ ತೋರಿಸಿ, “ಇದನ್ನು ಉಡು. ನಿನಗೆ ಒಪ್ಪುತ್ತೆ…..” ಎಂದೆ.

“ತುಂಬಾ ಚೆನ್ನಾಗಿದೆ ಕಣೇ ನಾನೇ ಇಟ್ಟುಕೊಳ್ಳಲಾ…” ಎಂದು ಆಸೆಯಿಂದ ಕಣ್ಣರಳಿಸಿದಾಗ, “ಅದಕ್ಕೇನಂತೆ ಧಾರಾಳವಾಗಿ ಇಟ್ಕೋ” ಎಂದೆ.

ಮರುಕ್ಷಣ, “ಸಾರೀ ಶಮೀ, ನಾನು ಸಣ್ಣತನ ತೋರಿಬಿಟ್ಟೆ ನಿನ್ನನ್ನೂ, ಅಮ್ಮನನ್ನೂ ನೋಯಿಸಿಬಿಟ್ಟೆ….” ತಲೆ ತಗ್ಗಿಸಿದಳು.

“ಹೋಗ್ಲಿಬಿಡು ಶಶೀ, ಭಾನುವಾರ ಎಲ್ಲ ಸೇರೋಣ,” ಎನ್ನುತ್ತಾ ಸೀರೆಯನ್ನು ಕವರ್‌ನಲ್ಲಿಟ್ಟು ಅಂದಿಸಿದೆ.

ಕೂಡುಕಳೆಗಳ ಲೆಕ್ಕಾಚಾರ ತನ್ನ ಕೆಲಸವನ್ನು ನಿಭಾಯಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ