ಭಾರತೀಯ ಅಡುಗೆಮನೆಯಲ್ಲಿ ಒಗ್ಗರಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗತ್ತದೆ. ಅದರ ಹೊರತಾಗಿ ಕರಿಯುವುದು, ಗ್ರಿಲ್ ಮಾಡುವುದು, ಬೇಯಿಸುವುದು, ಅಡುಗೆಗಳಲ್ಲಿ ಮಸಾಲೆಗಳನ್ನು ಬಳಸುವುದು ಇದ್ದೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಸೂಕ್ತ ಚಿಮಣಿ ಮಾತ್ರ ಅಡುಗೆಮನೆಯನ್ನು ಹೊಗೆ ಹಾಗೂ ತೀಕ್ಷ್ಣ ವಾಸನೆಯಿಂದ ಮುಕ್ತಿಗೊಳಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಚಿಮಣಿಗಳು ಮಾರಾಟವಾಗುತ್ತಿವೆ. ಅವುಗಳಲ್ಲಿ ನಿಮಗೆ ಸೂಕ್ತ ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಈ ಕುರಿತಂತೆ ಚಿಮಣಿ ವಹಿವಾಟಿನಲ್ಲಿ ಒಂದು ದಶಕ ಕಾಲ ಮಾರುಕಟ್ಟೆಯಲ್ಲಿರುವ ಚಿಮಣಿ ಡೀಲರ್‌ ಲಕ್ಷ್ಮಣ್‌ ಪುರೋಹಿತ್‌ ಹೀಗೆ ಹೇಳುತ್ತಾರೆ, “ಚಿಮಣಿಯ ಮಾದರಿಗಳಲ್ಲಿ ಮೊದಲಿಗಿಂತ ಸಾಕಷ್ಟು ಬದಲಾಗಿದೆ. ಇದರ ಹೊರತಾಗಿ 2 ಪರ್ಯಾಯ ಆಯ್ಕೆಗಳ ವಿಶೇಷಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಆ ಪರ್ಯಾಯಗಳ ವಿಶೇಷತೆಗಳು ಈ ರೀತಿ ಇವೆ :

ಮೊದಲನೇ ಪರ್ಯಾಯ ಉಪಾಯದಲ್ಲಿ ಹೊಗೆಯನ್ನು ಹೊರಗೆ ಹಾಕಲು ಪೈಪ್‌ನ ಬಳಕೆ ಮಾಡಲಾಗುತ್ತದೆ.

ಎರಡನೇ ಪರ್ಯಾಯದಲ್ಲಿ ಚಿಮಣಿಯನ್ನು ಡಕ್‌ ಜೊತೆಗೆ ಜೋಡಿಸುವ ಅಗತ್ಯ ಉಂಟಾಗುವುದಿಲ್ಲ. ಅವುಗಳ ಒಳಗೆ ಅಳವಡಿಸಲಾಗಿರುವ ಕಾರ್ಬನ್‌ ಫಿಲ್ಟರ್‌ ಹೊಗೆ, ಎಣ್ಣೆ ವಾಸನೆ ಮತ್ತು ಇತರೆ ಪದಾರ್ಥಗಳ ವಾಸನೆಯನ್ನು ಹೀರಿಕೊಳ್ಳುತ್ತದೆ ಮತ್ತು ಶುದ್ಧ ಗಾಳಿಯನ್ನು ವಾಪಸ್‌ ಅಡುಗೆಮನೆಗೆ ಬಿಡುತ್ತದೆ. ಇದರಲ್ಲಿರುವ ಸಮಸ್ಯೆ ಎಂದರೆ ಕಾರ್ಬನ್‌ನಲ್ಲಿ ತೈಲ ಬಹುಬೇಗ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಬೇಕಾಗುತ್ತದೆ.

ಎರಡೂ ಪ್ರಕಾರದ ಚಿಮಣಿಗಳನ್ನು ಬಳಸಬಹುದು. ಆದರೆ ಡಕ್ಟ್ ಹೊಂದಿರುವ ಚಿಮಣಿ ಹೆಚ್ಚು ಸೂಕ್ತವಾಗಿರುತ್ತದೆ. ಇದರಲ್ಲಿ ಡಕ್ಟ್ ನ ಪೈಪ್‌ ಹೆಚ್ಚು ವಾಲಿದ್ದರೆ ಅಥವಾ ಉದ್ದವಾಗಿದ್ದರೆ ಚಿಮಣಿಯಿಂದ ಗಾಳಿ ಹೊರಗೆ ಹೋಗಲು ಹೆಚ್ಚು ಸಮಯ ತಗುಲುತ್ತದೆ. ಡಕ್ಟ್ ಗಾಗಿ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಹೀಗಾಗಿ ನಿಮ್ಮ ಅಡುಗೆಮನೆಯಲ್ಲಿ ಜಾಗದ ಕೊರತೆ ಇರದಿದ್ದರೆ ಡಕ್ಟ್ ಇರುವ ಚಿಮಣಿ ಅಳವಡಿಸಿ. ಜಾಗದ ಕೊರತೆ ಇದ್ದರೆ ಕಾರ್ಬನ್‌ ಫಿಲ್ಟರ್‌ ಇರುವ ಚಿಮಣಿ ಸೂಕ್ತ ಆಗುತ್ತದೆ.

ಆಧುನಿಕ ಚಿಮಣಿ

ಮೊದಲು ಚಿಮಣಿಯ ಆಕಾರ ವಿಭಿನ್ನವಾಗಿರುತ್ತಿತ್ತು. ಆಗ ಹೆಚ್ಚಿನ ಚಿಮಣಿಗಳು ಪುಶ್‌ ಬಟನ್‌ ಮತ್ತು ಡೈರೆಕ್ಟ್ ಬಟನ್‌ಮುಖಾಂತರ ಚಲಾಯಿಸಲ್ಪಡುತ್ತಿದ್ದವು. ಆದರೆ ಈಚೆಗೆ ಮಾರುಕಟ್ಟೆಯಲ್ಲಿ ಡಿಜಿಟಲ್ ಗ್ಯಾಸ್‌ ಸೆನ್ಸರ್‌ ಇರುವ ಚಿಮಣಿಗಳು ಕೂಡ ಬಂದಿವೆ. ಯಾವುದೋ ಕಾರಣದಿಂದ ಗ್ಯಾಸ್‌ ಲೀಕ್‌ ಆದಾಗ ಇದು ಸ್ವಯಂಚಾಲಿತವಾಗಿ ಆನ್‌ ಆಗಿ ಗ್ಯಾಸ್‌ನ್ನು ಹೊರಹಾಕುತ್ತದೆ. ಗ್ಯಾಸ್‌ ಹೊರಟು ಹೋದ ಬಳಿಕ ಪುನಃ ಆಫ್‌ ಆಗುತ್ತದೆ. ಈ ರೀತಿಯ ಚಿಮಣಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಬಳಸಲಾಗುತ್ತಿದೆ.

ಇದರ ಹೊರತಾಗಿ ಚಿಮಣಿಯ ಸಕ್ಶನ್‌ ಪವರ್‌ ಬಗೆಗೂ ಗಮನಹರಿಸಿ. ಏಕೆಂದರೆ ಅದು ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಇರುತ್ತೋ, ಅದು ಅಡುಗೆಮನೆಯನ್ನು ಹೊಗೆ ಮತ್ತು ವಾಸನೆ ರಹಿತ ಮಾಡುತ್ತದೆ. ಈ ಸಾಮರ್ಥ್ಯ ಚಿಮಣಿಯಲ್ಲಿ 500 ಮೀ. ಕ್ಯೂಬಿಕ್‌ ಪ್ರತಿ ಗಂಟೆಯಿಂದ ಹಿಡಿದು 1200 ಮೀ. ಕ್ಯೂಬಿಕ್‌ ಪ್ರತಿ ಗಂಟೆಗೆ ಇರುತ್ತದೆ. ಇದರಲ್ಲಿ 900 ಮೀ. ಕ್ಯೂಬಿಕ್‌ ಪ್ರತಿ ಗಂಟೆಗೆ ಸಕ್ಶನ್‌ ಪವರ್‌ ಇರುವ ಚಿಮಣಿಗಳಿವೆ.

ಚಿಮಣಿ ಅಳವಡಿಸುವ ಪ್ರಕ್ರಿಯೆಯಲ್ಲಿ ಅಡುಗೆಮನೆಯ ಗಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಅಡುಗೆಮನೆ ಹೆಚ್ಚು ವಿಶಾಲವಾಗಿದ್ದರೆ ಹೆಚ್ಚು ಸಕ್ಶನ್‌ ಪವರ್‌ ಇರುವ ಚಿಮಣಿ ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ, ಅಡುಗೆಮನೆಯ ಚಿಮಣಿಗೆ 1 ಗಂಟೆಯಲ್ಲಿ 10 ಪಟ್ಟು ಶುದ್ಧ ಗಾಳಿಯನ್ನು ಭರ್ತಿ ಮಾಡುವ ಅಗತ್ಯವಿರುತ್ತದೆ. ಹಾಗಾಗಿ ಚಿಮಣಿಯನ್ನು ಆಯ್ಕೆ ಮಾಡುವ ಮೊದಲು ಕಿಚನ್‌ನ ವಾಲ್ಯೂಮ್ ನ್ನು 10 ಪಟ್ಟು ಹೆಚ್ಚು ಮಾಡಿದ ಬಳಿಕ ಯಾವ ಕ್ಷೇತ್ರಫಲ ಬರುತ್ತದೋ, ಅಷ್ಟೇ ಸಕ್ಶನ್‌ಪವರ್‌ನ ಚಿಮಣಿಯನ್ನು ಅಡುಗೆಮನೆಯಲ್ಲಿ ಅಳಡಿಸುವುದು ಸೂಕ್ತವಾಗಿರುತ್ತದೆ. ಅದನ್ನು ಗ್ಯಾಸ್‌ ಒಲೆಯ ಮೇಲೆ ಎರಡೂವರೆ ಅಡಿ ಮೇಲ್ಭಾಗದಲ್ಲಿ ಅಳವಡಿಸಬೇಕು.

ಇದನ್ನು ಗಮನದಲ್ಲಿಡಿ

1 ವರ್ಷದಿಂದ ಹಿಡಿದು 5 ವರ್ಷದ ಹೊರತಾಗಿ ಲೈಫ್‌ ಟೈಮ್ ಗ್ಯಾರಂಟಿ ಇರುವ ಚಿಮಣಿಗಳು ದೊರೆಯುತ್ತವೆ. ಚಿಮಣಿಗಳ ಬೆಲೆಗಳು ಕೂಡ ಅದರ ವಾರಂಟಿಯನ್ನು ಅವಲಂಬಿಸಿರುತ್ತದೆ. ಒಂದು ಚಿಮಣಿಯ ಬೆಲೆ ಹಲವು ಸಾವಿರಗಳಿಂದ ಹಿಡಿದು ಲಕ್ಷದ ತನಕ ಇರುತ್ತದೆ. ಗ್ರಾಹಕನೊಬ್ಬ ತನ್ನ ಬಜೆಟ್‌ಗೆ ಅನುಗುಣವಾಗಿ ಖರೀದಿಸುತ್ತಾನೆ. ಒಂದು ಒಳ್ಳೆಯ ಚಿಮಣಿ 10 ರಿಂದ 15 ವರ್ಷದವರೆಗೆ ಸಮರ್ಥವಾಗಿ ಕೆಲಸ ಮಾಡುತ್ತದೆ.

ಚಿಮಣಿಯ ನಿರ್ವಹಣೆ

ಅಂದಹಾಗೆ ಚಿಮಣಿಯ ಸ್ವಚ್ಛತೆ ಅದರ ಉಪಯೋಗವನ್ನು ಅವಲಂಬಿಸಿದೆ. ಒಂದು ವೇಳೆ ನೀವು ಸಾಧಾರಣ ಆಹಾರ ತಯಾರಿಸುವವರಾದರೆ 15 ದಿನಕ್ಕೊಮ್ಮೆ ಫಿಲ್ಟರ್‌ನ್ನು ಡಿಟರ್ಜೆಂಟ್‌ ಮಿಶ್ರಣ ಮಾಡಿದ ನೀರಿನಿಂದ ಸ್ವಚ್ಛಗೊಳಿಸಬೇಕು. ಬಳಿಕ ಚೆನ್ನಾಗಿ ಒರೆಸಿ ಒಣಗಿಸಬೇಕು. ಹೀಗೆ ಮಾಡುವುದರಿಂದ ಫಿಲ್ಟರ್‌ನ ಜಾಲರಿ ಸ್ವಚ್ಛವಾಗುತ್ತದೆ.

ಚಿಮಣಿ ಹೆಚ್ಚು ಜಿಗುಟಾಗಿದ್ದರೆ, ಡಿಟರ್ಜೆಂಟ್‌ ನೀರಿನಿಂದ ಸ್ವಚ್ಛವಾಗದೇ ಇದ್ದರೆ ಸೋಡಿಯಂ ಹೈಡ್ರಾಕ್ಸೈಡ್‌ ಅಥವಾ ಕಾಸ್ಟಿಕ್ ಸೋಡಾದಿಂದ ತೊಳೆಯಿರಿ.

ಕೆಲವು ಫಿಲ್ಟರ್‌ಗಳು ಹೇಗಿರುತ್ತವೆ ಎಂದರೆ, ಅವನ್ನು ತೊಳೆಯಲು ಆಗುವುದಿಲ್ಲ. 4-5 ತಿಂಗಳಿಗೊಮ್ಮೆ ಅವನ್ನು ಬದಲಿಸಬೇಕಾಗುತ್ತದೆ.

ಅತ್ಯಂತ ಗಡುಸಾದ ಡಿಟರ್ಜೆಂಟ್‌ನಿಂದ ಫಿಲ್ಟರ್‌ನ್ನು ಸ್ವಚ್ಛಗೊಳಿಸಬಾರದು.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ