“ನಿಮ್ಮ ಮಗಳು ಓದಿನಲ್ಲಿ ಬಹಳ ದುರ್ಬಲ ಆಗಿದ್ದಾಳೆ. ಕ್ಲಾಸಿನಲ್ಲಿ ಹೇಳಿದ ಪಾಠ ಅವಳ ನೆನಪಲ್ಲಿ ಉಳಿಯುವುದೇ ಇಲ್ಲ,” ಎಂದು ರೀಮಾ ಟೀಚರ್, ಮಗಳ ಬಗ್ಗೆ ಹೇಳಿದಾಗ ಜಮುನಾಳಿಗೆ ನಂಬಲು ಆಗಲೇ ಇಲ್ಲ. 3 ವರ್ಷದ ಚಿನ್ಮಯಿ ನೋಡಲು ಆರೋಗ್ಯವಂತಳಾಗಿದ್ದಳು. ಅವಳ ವಯಸ್ಸಿಗೆ ತಕ್ಕಂತೆಯೇ ತೂಕ ಕೂಡ ಸಮರ್ಪಕವಾಗಿತ್ತು. ಆದರೆ ಓದಲು, ನೆನಪಿಟ್ಟುಕೊಳ್ಳಲು ಏನು ತೊಂದರೆ ಆಗಲು ಸಾಧ್ಯವಿತ್ತು? ಇದೇ ಯೋಚನೆಯಿಂದ ಜಮುನಾ ಚಿಂತೆಗೀಡಾಗಿದ್ದಳು.
ಜಮುನಾ ಮನೆಗೆ ಬಂದು ಚಿನ್ಮಯಿಯ ವರ್ತನೆಯ ಬಗ್ಗೆ ಗಮನಹರಿಸತೊಡಗಿದಳು. ಚಿನ್ಮಯಿ ಏಕಾಗ್ರತೆಯಿಂದ ಓದುತ್ತಿರಲಿಲ್ಲ ಹಾಗೂ ಆಡುತ್ತಲೂ ಇರಲಿಲ್ಲ. ತಾನು ಅವಳ ಈ ಸಂಗತಿಗಳ ಬಗ್ಗೆ ಗಮನ ಕೊಡದೇ ಇರುವುದರ ಬಗ್ಗೆ ಅವಳಿಗೆ ಅಚ್ಚರಿಯಾಯಿತು. ಅವಳ ಗಮನ ಯಾವಾಗಲೂ ಅವಳ ಎತ್ತರ ಹಾಗೂ ಮೈಕಟ್ಟಿನ ಮೇಲೆಯೇ ಇರುತ್ತಿತ್ತು. ಇದು ಕೇವಲ ಜಮುನಾಳದ್ದೊಂದೇ ಕಥೆಯಲ್ಲ. ಜಮುನಾಳಂತಹ ಅದೆಷ್ಟು ತಾಯಿಯರಿದ್ದಾರೆ, ಅವರು ಕೇವಲ ತಮ್ಮ ಮಕ್ಕಳ ದೈಹಿಕ ಬೆಳವಣಿಗೆಗಳ ಬಗೆಗಷ್ಟೇ ಗಮನ ಕೊಡುತ್ತಾರೆಯೇ ಹೊರತು, ಅವರೆಂದೂ ಅವರ ಮಾನಸಿಕ ಬೆಳವಣಿಗೆಗಳ ಬಗೆಗೆ ಗಮನ ಕೊಡುವುದಿಲ್ಲ.
ಯಾವುದೇ ಒಂದು ಮಗುವಿನ ಮೊದಲ 1000 ದಿನಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಅತ್ಯಂತ ಮುಖ್ಯವಾಗಿರುತ್ತದೆ. ಅದಕ್ಕಾಗಿ ಮಗುವಿಗೆ ಪೋಷಕಾಂಶಯುಕ್ತ ಆಹಾರದ ಬಗ್ಗೆ ಹೆಚ್ಚು ಗಮನಕೊಡಬೇಕು. ಆದರೆ ಬಹಳಷ್ಟು ಪೋಷಕರು ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ಗಮನ ಕೊಡುವುದೇ ಇಲ್ಲ.
ಪೋಷಕಾಂಶಗಳು ಅಗತ್ಯ
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಿಶು ತಜ್ಞರಾಗಿರುವ ಡಾ. ಸತೀಶ್ ಹೀಗೆ ಹೇಳುತ್ತಾರೆ, “ಭಾರತದಲ್ಲಿನ ಬಹಳ ಕಡಿಮೆ ಪೋಷಕರು ಶಿಶು ತಜ್ಞರ ಜೊತೆ ತಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳ ತೂಕ ಮತ್ತು ಡಯೆಟ್ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತಾರೆ ಮತ್ತು ಆ ಕುರಿತ ಆಹಾರದ ಬಗೆಗಷ್ಟೇ ಪ್ರಶ್ನಿಸುತ್ತಾರೆ. “ಸಾಮಾನ್ಯವಾಗಿ ತಮ್ಮ ಕುಟುಂಬದ ಆಹಾರ ಪದ್ಧತಿಗೆ ಅನುಗುಣವಾಗಿಯೇ ಮಗುವಿನ ಆಹಾರದ ಬಗ್ಗೆ ನಿರ್ಧರಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಅದೆಷ್ಟೋ ಮಕ್ಕಳು ಕಬ್ಬಿಣಾಂಶ, ಝಿಂಕ್ ಮತ್ತು ಕ್ಯಾಲ್ಶಿಯಂ ಕೊರತೆಯ ರೋಗಗಳಿಗೆ ತುತ್ತಾಗುತ್ತಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮಾನಸಿಕ ವಿಕಾಸಕ್ಕೆ ಸಂಬಂಧಿಸಿದ ಪೋಷಕಾಂಶಗಳ ಬಗ್ಗೆ ತಜ್ಞರಿಂದ ಕೇಳಿ ತಿಳಿದುಕೊಳ್ಳಬೇಕು.”
ಗಮನಿಸಬೇಕಾದ ಒಂದು ಸಂಗತಿಯೆಂದರೆ, ಭಾರತೀಯ ಪೋಷಕರು ತಮ್ಮ ಶಿಶುಗಳ ಮ್ಯಾಕ್ರೊ ನ್ಯೂಟ್ರಿಯೆಂಟ್ಸ್ ಅಂದರೆ ಪ್ರೋಟೀನ್ ಕಾರ್ಬೊಹೈಡ್ರೇಟ್ ಮತ್ತು ಫ್ಯಾಟ್ ಬಗ್ಗೆ ಗಮನಕೊಡುತ್ತಾರೆ. ಅದರಿಂದ ಅವರ ದೈಹಿಕ ವಿಕಾಸವೇನೊ ಗೊತ್ತಾಗುತ್ತದೆ. ಆದರೆ ಮೈಕ್ರೋ ನ್ಯೂಟ್ರಿಯೆಂಟ್ಸ್ ಅಂದರೆ ಝಿಂಕ್, ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್ಸ್ ಬಗ್ಗೆ ಕಡಿಮೆ ಗಮನ ಕೊಡುತ್ತಾರೆ.
ಇವುಗಳ ಕೊರತೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಗುವಿನ ಮಾನಸಿಕ ಬೆಳವಣಿಗೆ ಸಕಾಲದಲ್ಲಿ ಆಗದೇ ಇದ್ದಾಗ ಭವಿಷ್ಯದಲ್ಲಿ ಅದನ್ನು ಭರ್ತಿ ಮಾಡುವುದು ಕಷ್ಟ. ಭಾರತದಲ್ಲಿ 6 ತಿಂಗಳ ಮಗುವಿನಿಂದ ಹಿಡಿದು 2-3 ವರ್ಷಗಳ ಮಗುವಿನ ತನಕ ಅತಿ ಹೆಚ್ಚು ಅಂದರೆ 49.5% ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಕಂಡುಬರುತ್ತದೆ.
ಪರಿಪೂರ್ಣ ಬೆಳವಣಿಗೆ
ಗಮನಿಸಬೇಕಾದ ಸಂಗತಿಯೆಂದರೆ, ಆರಂಭದ 6 ತಿಂಗಳ ತನಕ ಮಗುವಿಗೆ ಸ್ತನ್ಯಪಾನ ಮಾಡಿಸಲಾಗುತ್ತದೆ. ಆ ಬಳಿಕ ಎದೆಹಾಲಿನ ಜೊತೆಗೆ ಗಟ್ಟಿ ಆಹಾರ ಕೊಡಲು ಶುರು ಮಾಡುತ್ತಾರೆ. ಇನ್ನೊಂದು ಸಂಗತಿ ಎಂದರೆ ಆರಂಭದಲ್ಲಿ ಮಗು ಪಚನ ಮಾಡಿಕೊಳ್ಳದೇ ಇದ್ದರೆ, ಆ ಆಹಾರವನ್ನು ಒಂದಿಷ್ಟು ದ್ರವರೂಪದಲ್ಲಿ ಪರಿವರ್ತಿಸಿ ಕೊಡಬೇಕು. ಅದು ದ್ರವರೂಪ ಆಗಿರುವುದರ ಜೊತೆಗೆ ಪೋಷಕಾಂಶಗಳಿಂದಲೂ ಕೂಡಿರಬೇಕು.
ಶಿಶುವಿನ ಆಹಾರ ತಯಾರಿಸುವಾಗ ಹಲವು ಸಂಗತಿಗಳ ಬಗ್ಗೆ ಗಮನ ಕೊಡಬೇಕು. ಮಗುವಿನ ಆಹಾರದಲ್ಲಿ ಮೊದಲ ವರ್ಷ ಉಪ್ಪು ಹಾಕಲೇಬೇಡಿ. ಏಕೆಂದರೆ ಮೊದಲ ವರ್ಷ ಅದಕ್ಕೆ ಉಪ್ಪನ್ನು ಪಚನ ಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ. ಉಪ್ಪಿನ ಹೊರತಾಗಿ ಸಕ್ಕರೆಯ ಬಳಕೆಯ ಬಗ್ಗೆಯೂ ಜಾಗೃತೆಯಿಂದಿರಬೇಕು. ಅದು ಶಿಶುವಿನ ಮುಂದೆ ಬರಲಿರುವ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ. ಅದೇ ಭವಿಷ್ಯದಲ್ಲಿ ಮಗುವಿಗೆ ಬೊಜ್ಜು ಬರಲು ಕಾರಣವಾಗುತ್ತದೆ. ಹುಳಿ ಹಣ್ಣುಗಳನ್ನು ಸ್ವಲ್ಪ ಸಿಹಿಗೊಳಿಸಲು ಒಂದಿಷ್ಟು ಸಕ್ಕರೆ ಬಳಸಬಹುದು. ಮಕ್ಕಳಿಗೆ ಸಿಹಿ ಬಿಸ್ಕತ್ತು ಮತ್ತು ಸಾಲ್ಟ್ ಬಿಸ್ಕತ್ತು ಕೊಡುವುದನ್ನು ರೂಢಿ ಮಾಡಿಸಬೇಡಿ.
ಪ್ರೋಟೀನ್, ಕಾರ್ಬೊಹೈಡ್ರೇಟ್ಮತ್ತು ಫ್ಯಾಟ್ನಂತಹ ಪೋಷಕಾಂಶಗಳ ಜೊತೆಗೆ ಕಬ್ಬಿಣಾಂಶ, ಝಿಂಕ್, ಕ್ಯಾಲ್ಶಿಯಂನಿಂದ ಕೂಡಿದ ಪೋಷಕಾಂಶಯುಕ್ತ ಆಹಾರವನ್ನು ನೀಡುವುದೇ ಉತ್ತಮ. ಇಲ್ಲದಿದ್ದರೆ ಅವರ ಸಂಪೂರ್ಣ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಅವರ ಮಾನಸಿಕ ಬೆಳವಣಿಗೆಗಾಗಿ ಕಬ್ಬಿಣಾಂಶಯುಕ್ತ ಆಹಾರ ಕೊಡಬೇಕು. ಅದರಲ್ಲಿ ಹಸಿರು ಸೊಪ್ಪುಗಳು, ಬಟಾಣಿ, ಸಿಹಿಗೆಣಸು, ಮೀನು ಮುಂತಾದವು ಸೇರುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಲು ಅದೇ ರೀತಿ ಝಿಂಕ್ ಶಿಶುಗಳ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ಅದು ಮೊಸರು, ಕಾಳುಗಳು, ಬೀಜಗಳು ಹಾಗೂ ರೆಡ್ ಮೀಟ್ನಲ್ಲಿ ಲಭಿಸುತ್ತದೆ. ಕಾಳುಗಳ ಹೊಟ್ಟಿನಲ್ಲಿ ಝಿಂಕ್ನ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಹಿಟ್ಟು ಬೀಸುವಾಗ ಇದರ ಪ್ರಮಾಣ ಹೆಚ್ಚು ಕಡಿಮೆ ಕೊನೆಗೊಳ್ಳುತ್ತದೆ. ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ಕಬ್ಬಿಣಾಂಶ, ಝಿಂಕ್ ಮತ್ತು ಕ್ಯಾಲ್ಶಿಯಂನಂತಹ ಮೈಕ್ರೊ ನ್ಯೂಟ್ರಿಯೆಂಟ್ಸ್ ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಅದು ಮಗುವಿನ ಮಾನಸಿಕ ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕಾಯ್ದುಕೊಂಡು ಹೋಗಲು ನೆರವಾಗುತ್ತದೆ.
ತಾಯಿಯ ಹಾಲೇ ಅತ್ಯುತ್ತಮ
ಆರಂಭದ 2 ವರ್ಷಗಳಲ್ಲಿ ಮಗುವಿನ ಆಹಾರದ ಬಗ್ಗೆ ಹೆಚ್ಚು ಗಮನ ಕೊಡುವುದು ಅತ್ಯವಶ್ಯ. ಏಕೆಂದರೆ ಪೋಷಕಾಂಶಗಳ ಕೊರತೆಯಿಂದ ಮಗು ಹಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಗಟ್ಟಿ ಆಹಾರದ ಜೊತೆಗೆ ಸ್ತನ್ಯಪಾನದ ಬಗೆಗೂ ಗಮನಕೊಡಿ. ತಾಯಿಯ ಹಾಲು ಕಂದನ ಪೋಷಣೆಗೆ ಅತ್ಯಂತ ಉಪಯುಕ್ತ. ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಆಹಾರದ ಜೊತೆ ಜೊತೆಗೆ ಕಾಲ ಕಾಲಕ್ಕೆ ಚುಚ್ಚುಮದ್ದು ಹಾಕಿಸಬೇಕು. ಚುಚ್ಚುಮದ್ದು ಹಾಕಿಸಲು ಹೋದಾಗ ಅವರ ಬೆಳವಣಿಗೆ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಿ. ಈ ರೀತಿಯಾಗಿ ಚಿಕ್ಕಪುಟ್ಟ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ದೈಹಿಕ ಮಾನಸಿಕ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
– ಪ್ರತಿನಿಧಿ
ಮಹತ್ವದ ಸಂಗತಿಗಳು
ಅಂದಹಾಗೆ ಅಮ್ಮನ ಹಾಲು ಶಿಶುವಿನ ಬೆಳವಣಿಗೆಗೆ ಪರಿಪೂರ್ಣ ಆಹಾರವಾಗಿರುತ್ತದೆ. ಆದರೆ ಅದರಲ್ಲೂ ಕಬ್ಬಿಣಾಂಶ ಮತ್ತು ವಿಟಮಿನ್`ಸಿ’ ಯಂತಹ ಮುಖ್ಯ ಪೋಷಕಾಂಶಗಳು ಇರುವುದಿಲ್ಲ. ನಿಮ್ಮ ಮಗು 6 ತಿಂಗಳಿಗೂ ಹೆಚ್ಚಿನ ವಯೋಮಿತಿ ಹೊಂದಿದ್ದಲ್ಲಿ, ಹಾಲಿನ ಹೊರತಾಗಿ ಪೋಷಕಾಂಶಯುಕ್ತ ಆಹಾರ ದೊರೆಯದೇ ಇದ್ದಲ್ಲಿ ಅದು ರಕ್ತಹೀನತೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಬೇರೆ ಬೇರೆ ಅಧ್ಯಯನಗಳಿಂದ ತಿಳಿದುಬಂದ ಪ್ರಕಾರ, ಮೆದುಳು 2 ವರ್ಷ ಆಗುವತನಕ ಶೇ.80ರಷ್ಟು ಬೆಳವಣಿಗೆ ಹೊಂದಿರುತ್ತದೆ. ಒಂದು ವೇಳೆ ಈ ವಯೋಮಿತಿಯಲ್ಲಿ ಪೋಷಕಾಂಶಗಳ ಕೊರತೆ ಉಂಟಾದಲ್ಲಿ ಅದನ್ನು ಪೂರ್ತಿಗೊಳಿಸುವುದು ಅಸಾಧ್ಯದ ಮಾತಾಗುತ್ತದೆ.
ತಿಳಿದುಕೊಳ್ಳಬೇಕಾದ ವಿಚಾರ
ಮಗುವನ್ನು ಕೂರಿಸಿ ಚಮಚದಿಂದ ನಿಧಾನವಾಗಿ ಕುಡಿಸಬೇಕು. ಒಮ್ಮೆ ತಿನ್ನಿಸಿದ ಆಹಾರವನ್ನು ಇನ್ನೊಂದು ಸಲ ತಿನ್ನಿಸುವಾಗ ಉಪಯೋಗಿಸಬಾರದು.
ಮೊದಲ ಸಲ ಆಹಾರ ತಿನ್ನಿಸುವಾಗ ಸ್ವಲ್ಪ ಪ್ರಮಾಣದಲ್ಲಿ ತಿನ್ನಿಸಿ. ಏಕೆಂದರೆ ಅದು ಸುಲಭವಾಗಿ ಪಚನವಾಗಬೇಕು. ಅದಕ್ಕೆ ಆಹಾರದ ರುಚಿ ಅನುಭೂತಿಗೆ ತರಬೇಕು.
ಮೈಕ್ರೊ ನ್ಯೂಟ್ರಿಯೆಂಟ್ಸನ್ನು ಪೂರ್ತಿಗೊಳಿಸಲು ಪೋಷಕಾಂಶಗಳಿಂದ ಕೂಡಿದ ಪೋರ್ಟಿಫೈಡ್ ಆಹಾರವನ್ನು ಸಹ ಕೊಡಬಹುದು.