– ದೀಪಾ ರಾವ್
ರೈಲು ಬರಲು ಇನ್ನೂ 15 ನಿಮಿಷ ಉಳಿದಿತ್ತು. ಫ್ಲಾಟ್ ಫಾರ್ಮ್ ನಲ್ಲಿ ಬೆಂಚೊಂದರ ಮೇಲೆ ಕುಳಿತಿದ್ದ ರಮ್ಯಾ ಮತ್ತೆ ಮತ್ತೆ ಬಾಗಿಲಿನತ್ತ ತಿರುಗಿ ನೋಡುತ್ತಿದ್ದಳು. `ರಾಘವ್ ಇನ್ನೂ ಬರಲಿಲ್ಲವಲ್ಲ….. ಈ ಟ್ರೇನ್ ತಪ್ಪಿ ಹೋದರೆ, ಬಸ್ ಸ್ಟಾಪ್‌ವರೆಗೂ ನಡೆದು ಹೋಗಿ ಬಸ್ ಬದಲಾಯಿಸಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬೀಳಬೇಕಾಗುತ್ತದೆ ಅಷ್ಟೇ,’ ಎಂದು ರಮ್ಯಾ ಯೋಚಿಸುತ್ತಿದ್ದಳು.
ಆಗಿನ್ನೂ ಬೆಳಗ್ಗೆ 7 ಗಂಟೆ. ಸಿಟಿಗೆ ಹೋಗುವ ಮತ್ತು ಅಲ್ಲಿಂದ ಬರುವ ರೈಲುಗಳು ಹತ್ತಿಪ್ಪತ್ತು ನಿಮಿಷದ ಹಿಂದೆಯಷ್ಟೇ ನಿರ್ಗಮಿಸಿದ್ದರಿಂದ ಫ್ಲಾಟ್ ಫಾರ್ಮ್ ಮೇಲೆ ಹೆಚ್ಚು ಜನರಿರಲಿಲ್ಲ. ಒಂದು ಪಕ್ಕದಲ್ಲಿ 3-4 ಕಾಲೇಜು ಹುಡುಗರು, ಇಳಿವಯಸ್ಸಿನ ಒಂದು ಜೋಡಿ ಇದ್ದರು. ಒಂದಷ್ಟು ದೂರದಲ್ಲಿ ಲಂಪಟರಂತೆ ಕಾಣುತ್ತಿದ್ದ 4-5 ಯುವಕರು ಹರಟುತ್ತಾ ನಿಂತಿದ್ದರು.
ರಾಘವ್ ಒಳ ಬರುವುದನ್ನು ಕಂಡು ರಮ್ಯಾ ಮುಗುಳ್ನಕ್ಕು ಕೈ ಆಡಿಸಿದಳು. ಅವನೂ ಮುಗುಳ್ನಗೆಯ ಮಾರುತ್ತರವಿತ್ತ. ರಮ್ಯಾ ಬೆಂಚಿನಿಂದ ಎದ್ದು ನಿಲ್ಲುತ್ತಿರಲು ಅವಳ ಮೊಬೈಲ್ ರಿಂಗಣಿಸಿತು. ಅವಳು ಅದನ್ನು ಆನ್ ಮಾಡುತ್ತಿರುವಂತೆ ಯಾರೋ ಹಿಂದಿನಿಂದ ಅವಳ ಬೆನ್ನಿಗೆ ಚೂರಿ ಚುಚ್ಚಿದರು.
“ಹ್ಞಾಂ…..” ಎಂದು ಕಿರಿಚಿದ ರಮ್ಯಾ ಆಘಾತದಿಂದ ತತ್ತರಿಸಿ ಕೆಳಗೆ ಬಿದ್ದಳು. ಅವಳ ತಲೆಗೆ ಪೆಟ್ಟಾಗಿ ಪ್ರಜ್ಞಾಹೀನಳಾದಳು.
ಮಿಂಚಿನಂತೆ ಎರಡೇ ಕ್ಷಣಗಳಲ್ಲಿ ನಡೆದುಹೋದ ಹಲ್ಲೆಯನ್ನು ರಾಘವ್ ದೂರದಿಂದಲೇ ಕಂಡು ಅವಳೆಡೆಗೆ ಧಾವಿಸಿ ಬಂದು ಏನಾಯಿತೆಂದು ನೋಡುವಷ್ಟರಲ್ಲಿ ಹಲ್ಲೆಕಾರರು ಮರೆಯಾಗಿದ್ದರು. ಸುತ್ತಲಿದ್ದವರು “ಹೋ….” ಎಂದು ಮುತ್ತಿದರು. ರೈಲ್ವೆ ಪೊಲೀಸರು ಜನರನ್ನು ದೂರ ಸರಿಸಿ ಅವಳನ್ನು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಿದರು.
ರಮ್ಯಾಳನ್ನು ಕೂಡಲೇ ಐಸಿಯುಗೆ ಕೊಂಡೊಯ್ದರು. ಪೊಲೀಸರು ರಮ್ಯಾಳ ಫೋನ್‌ನಿಂದ ಅವಳ ಮನೆಗೆ ಸುದ್ದಿ ಮುಟ್ಟಿಸಿದರು. ಸ್ವಲ್ಪ ಹೊತ್ತಿನಲ್ಲಿ ಅವಳ ತಂದೆ ತಾಯಿ ಹಾಗೂ ಅಕ್ಕ ಭಾವ ಬಂದರು. ಡಾಕ್ಟರು 24 ಗಂಟೆಗಳ ಅಲ್ಟಿಮೇಟಂ ನೀಡುತ್ತಾ, ಈ ಅವಧಿಯಲ್ಲಿ ಅವಳ ಪರಿಸ್ಥಿತಿ ಉತ್ತಮಗೊಂಡರೆ ಬದುಕುಳಿಯುವಳು ಎಂದು ಆಶ್ವಾಸನೆಯಿತ್ತರು.
ರಮ್ಯಾಳ ತಾಯಿ ಮತ್ತು ಅಕ್ಕ ಬಿಕ್ಕಳಿಸುತ್ತಾ ಕಣ್ಣೀರು ಕರೆಯುತ್ತಿದ್ದರು. ಅವಳ ತಂದೆ ಗರ ಬಡಿದವರಂತೆ ಒಂದೆಡೆ ಕುಳಿತುಬಿಟ್ಟಿದ್ದರು. ಭಾವ ಐಸಿಯು ಮತ್ತು ಮೆಡಿಕಲ್ ಸ್ಟೋರ್ಸ್ ಮಧ್ಯೆ ಓಡಾಡುತ್ತಿದ್ದರು.
ರಾಘವ್ ಒಂದು ಮೂಲೆಯ ಬೆಂಚಿನ ಮೇಲೆ ತಲೆಗೆ ಕೈ ಹೊತ್ತು ಕುಳಿತಿದ್ದ. ದೂರದಿಂದಲೇ ಅವರನ್ನೆಲ್ಲ ನೋಡುತ್ತಿದ್ದ. ಆದರೆ ಏನು ಹೇಳಬೇಕು, ಹೇಗೆ ಹೇಳಬೇಕು ಎಂದು ಅವನಿಗೆ ಗೊತ್ತಾಗಲಿಲ್ಲ. ತನ್ನ ಮನೆಯವರೆಲ್ಲ ಹಳ್ಳಿಯಲ್ಲಿ ವಾಸಿಸುವವರು, ಅವರಿಗೆ ಕನ್ನಡ ಹೊರತು ಬೇರೆ ಭಾಷೆ ತಿಳಿದಿಲ್ಲ ಎಂದು ರಮ್ಯಾ ಹೇಳಿದ್ದಳು. ಅವಳು ಪ್ರಾರಂಭದಿಂದಲೂ ಓದಿನಲ್ಲಿ ಚುರುಕಾಗಿದ್ದಳು. ಹೀಗಾಗಿ ನಗರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದು ಮುಂದುವರಿಸಿ ಎಂಜಿನಿಯರಿಂಗ್ ಡಿಗ್ರಿ ಪಡೆದಳು. ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಆದರೆ ಅವಳ ಅಕ್ಕ 12ನೇ ತರಗತಿಗೆ ಬರುವಷ್ಟರಲ್ಲಿ ಸಮೀಪದ ಹಳ್ಳಿಯ ಸಂಪನ್ನ ಪರಿವಾರದೊಡನೆ ಸಂಬಂಧ ಕುದುರಿ ಮದುವೆಯಾಗಿತ್ತು.
ಐಸಿಯು ಒಳಗೆ ಹೋಗಲು ಯಾರಿಗೂ ಅನುಮತಿ ಇರಲಿಲ್ಲ. ರಾಘವ್‌ನೂ ಮಧ್ಯಾಹ್ನವಾದರೂ ಅಲ್ಲೇ ಕುಳಿತಿದ್ದ. ಫೋನ್ ಮಾಡಿ ಆಫೀಸಿಗೆ ವಿಷಯ ತಿಳಿಸಿದ. ಸಹೋದ್ಯೋಗಿಗಳು ಸಾಯಂಕಾಲ ಆಸ್ಪತ್ರೆಗೆ ಬರುವುದಾಗಿ ಹೇಳಿದ್ದರಿಂದ ಅವರಿಗಾಗಿ ಕಾಯುತ್ತಿದ್ದ. ಅವರೆಲ್ಲ ಬಂದ ಮೇಲೆಯೇ ಅವಳು ರಮ್ಯಾಳ ಕುಟುಂಬದವರಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿತ್ತು.
ಕಳೆದ 2 ವರ್ಷಗಳಿಂದ ರಮ್ಯಾ ಮತ್ತು ರಾಘವ್ ಒಂದೇ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಮ್ಯಾ ಆಚಾರವಂತ ಬ್ರಾಹ್ಮಣ ಕುಟುಂಬಕ್ಕೆ ಸೇರಿದಳು. ರಾಘವ್‌ನಾದರೋ ಉತ್ತರ ಪ್ರದೇಶದ ಹಿಂದುಳಿದ ವರ್ಗದಿಂದ ಬಂದವನು. ಅವರಿಬ್ಬರ ಕುಟುಂಬಗಳಲ್ಲಿ ಸಮಾನತೆಯ ಯಾವ ಅಂಶವೂ ಇರಲಿಲ್ಲ. ಆದರೂ ಯಾವುದೋ ಅದೃಶ್ಯ ಸೂಕ್ತದಿಂದ ಅವರಿಬ್ಬರೂ ಸೆಳೆಯಲ್ಪಟ್ಟಿದ್ದರು.
ರಾಘವ್ ಮೊಟ್ಟ ಮೊದಲು ರಮ್ಯಾಳನ್ನು ನೋಡಿದ್ದು ಇದೇ ಯಲಹಂಕ ರೈಲ್ವೆ ಸ್ಟೇಷನ್‌ನಲ್ಲಿಯೇ. ಇಲ್ಲಿಂದ ಆಫೀಸ್ ತಲುಪಲು ಸಿಟಿ ಸ್ಟೇಷನ್‌ಗೆ ರೈಲು ಹಿಡಿಯಬಹುದೆಂದು ಯಾರೋ ಹೇಳಿದ್ದರಿಂದ ಸ್ಟೇಷನ್‌ಗೆಲ್ಲಾ ಬಂದಿದ್ದನು. ಅಲ್ಲಿ ತನ್ನದೇ ಕಂಪನಿಯ ಐಡಿ ಕಾರ್ಡ್ ರಮ್ಯಾಳ ಕುತ್ತಿಗೆಯಲ್ಲಿ ನೇತಾಡುತ್ತಿರುವುದನ್ನು ಕಂಡು ಧೈರ್ಯ ಮಾಡಿ ಅವಳನ್ನು ಸಮೀಪಿಸಿದ. ರಾಘವ್ ಹಿಂದಿನ ದಿನವಷ್ಟೇ ಬೆಂಗಳೂರಿಗೆ ಬಂದನು ಮತ್ತು ಕಂಪನಿಯ ಆಫೀಸಿನ ಹಾದಿ ಅವನಿಗೆ ತಿಳಿದಿಲ್ಲವೆಂದು ಗೊತ್ತಾದಾಗ ರಮ್ಯಾ ಅವನಿಗೆ ಎಲ್ಲ ವಿವರಗಳನ್ನೂ ನೀಡಿದಳು.
ರಮ್ಯಾ ಪ್ರತಿದಿನ ತನ್ನ ಹಳ್ಳಿಯಿಂದ ಯಲಹಂಕ ಸ್ಟೇಷನ್‌ಗೆ ಬಂದು ರೈಲಿನಲ್ಲಿ ಸಿಟಿ ಸ್ಟೇಷನ್ ತಲುಪಿ, ಅಲ್ಲಿಂದ ಒಂದು ಬಸ್‌ಹಿಡಿದು ಆಫೀಸಿಗೆ ಹೋಗುತ್ತಿದ್ದಳು. ಸಿಟಿಗೆ ಹೋಗುವ ರೈಲಿನ ವೇಳೆ, ಅಲ್ಲಿಂದ ಹೋಗಬೇಕಾದ ಬಸ್ ನಂಬರ್‌ಗಳನ್ನು ವಿವರಿಸುತ್ತಿರುವಾಗಲೇ ರೈಲು ಬಂದಿತ್ತು. ರೈಲು ಹತ್ತಿದ ರಮ್ಯಾ ಹಿಂದಿರುಗಿ ನೋಡಿದಾಗ ರಾಘವ್ ಇನ್ನೂ ಫ್ಲಾಟ್ ಫಾರ್ಮ್ ಮೇಲಿರುವುದು ಕಾಣಿಸಿತು. ಕೂಡಲೇ ಅವಳು ಜಾಗ ಬಿಡಿಸಿಕೊಂಡು ಕೆಳಗೆ ಧುಮುಕಿದಳು. ಅದೇ ವೇಳೆಗೆ ರೈಲು ಧಡ್‌ಧಡ್‌ಎಂದು ಮುಂದಡಿಯಿಟ್ಟಿತ್ತು.
ರಮ್ಯಾ ಫ್ಲಾಟ್ ಫಾರ್ಮ್ ಮೇಲೆ ಸಾವರಿಸಿಕೊಂಡು ನಿಂತಳು. ರಾಘವ್ ಗಾಬರಿಯಿಂದ ಅವಳನ್ನೇ ನೋಡುತ್ತಾ ನಿಂತುಬಿಟ್ಟ. ನಂತರ ಸಂಕೋಚದಿಂದ ಮೆಲ್ಲನೆ, “ನೀವು ಈ ರೀತಿ ಧುಮುಕಬಾರದಿತ್ತು,” ಎಂದ.
“ನಿಮಗೆ ನಾನು ರೈಲು ಬಸ್ಸಿನ ಬಗ್ಗೆ ಪೂರ್ತಿ ಹೇಳಿರಲಿಲ್ಲ. ನೀವು ಇಲ್ಲಿಗೆ ಹೊಸಬರು. ಸಿಟಿ ಸ್ಟೇಷನ್‌ನಿಂದ ಆಫೀಸ್ ತಲುಪುವುದು ನಿಮಗೆ ಕಷ್ಟವಾಗುತ್ತದೆ ಎಂದುಕೊಂಡು ನಾನು ಇಳಿದುಬಿಟ್ಟೆ,” ರಮ್ಯಾ ನಸುನಗುತ್ತಾ ಹೇಳಿದಳು.
ಗಾಳಿಗೆ ಹಾರಾಡುತ್ತಿದ್ದ ಗುಂಗುರು ಕೂದಲು ರಮ್ಯಾಳ ಮುಖಕ್ಕೆ ಒಂದು ಬಗೆಯ ಶೋಭೆ ನೀಡಿತ್ತು. ಅಗಲವಾದ ಹಣೆ ಮೇಲೆ ಬೆವರು ಹನಿಗಳ ನಡುವೆ ಪುಟ್ಟದಾದ ಕುಂಕುಮದ ಬೊಟ್ಟು, ಚೂಪಾದ ಮೂಗು, ತೆಳುವಾದ ತುಟಿಗಳ ಮೇಲೆ ಮಂದಹಾಸವಿತ್ತು. ರಾಘವ್ ಚಿಕ್ಕವನಿದ್ದಾಗ ಅವನ ತಂದೆ ತಾವು ಮಾಡಿದ ಮಣ್ಣಿನ ಮೂರ್ತಿಗೆ ಬಣ್ಣ ಹಚ್ಚಲು ಅವನಿಗೆ ಕೊಡುತ್ತಿದ್ದರು. ಈಗ ರಮ್ಯಾಳ ಮುಖವನ್ನು ನೋಡಿ ರಾಘವ್‌ನಿಗೆ ಆ ಸುಂದರವಾದ ಮೂರ್ತಿಯದೇ ನೆನಪಾಯಿತು.
“ಏನು ಯೋಚಿಸುತ್ತಿದ್ದೀರಿ?” ರಮ್ಯಾ ಕೇಳಿದಳು.
“ನಿಮಗೇನೇದರೂ ಆಗಿದ್ದಿದ್ದರೆ ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗುತ್ತಿರಲಿಲ್ಲ……. ನೀವು ಹೀಗೆ ಮಾಡಬಾರದಿತ್ತು.” ಅವನು ಹೀಗೆ ಯೋಚಿಸುತ್ತಿರುವಾಗಲೇ……
“ಬ್ಲಡ್…. ಬ್ಲಡ್….. ” ವೈದ್ಯರು ರಮ್ಯಾಳ ಕುಟುಂಬದವರೊಂದಿಗೆ ಕನ್ನಡದಲ್ಲಿ ಆಡುತ್ತಿದ್ದ ಮಾತಿನಲ್ಲಿ ರಾಘವ್‌ಗೆ ಅರ್ಥವಾದದ್ದು ಇದೊಂದೇ.
ಕೂಡಲೇ ಅವನು ಡಾಕ್ಟರ್ ಬಳಿಗೆ ಓಡಿ, “ಸರ್, ಮೈ ಬ್ಲಡ್ ಗ್ರೂಪ್ ಈಸ್ ಓ ಪಾಸಿಟಿವ್….” ಎಂದು ಹೇಳಿದ.
“ಕಮ್ ವಿತ್ ಮಿ…..” ಎಂದು ಹೇಳಿ ಡಾಕ್ಟರ್ ಅವನನ್ನು ಒಳಗೆ ಕರೆದೊಯ್ದರು. 5-6 ಯೂನಿಟ್ ರಕ್ತದ ಅವಶ್ಯಕತೆ ಇದೆಯೆಂದು ಅವನಿಗೆ ವೈದ್ಯರಿಂದ ತಿಳಿದುಬಂತು. ಸಾಯಂಕಾಲದ ವೇಳೆಗೆ ತನ್ನ ಇತರೆ ಸಹೋದ್ಯೋಗಿಗಳು ಬರುವುದರಿಂದ ರಕ್ತದ ಕೊರತೆಯಾಗದು ಎಂದು ಅವನು ಡಾಕ್ಟರ್‌ಗೆ ಭರವಸೆ ನೀಡಿದ.
ರಕ್ತದಾನದ ನಂತರ ರಾಘವ್ ಆಸ್ಪತ್ರೆಯ ಕ್ಯಾಂಟೀನ್ ಕಡೆಗೆ ನಡೆದ. ಆಸ್ಪತ್ರೆಗೆ ಬಂದಾಗಿನಿಂದ ಅವನು ಏನನ್ನೂ ತಿಂದಿರಲಿಲ್ಲ. ಒಂದು ಪ್ಯಾಕೆಟ್ ಬಿಸ್ಕೆಟ್ ತೆಗೆದುಕೊಂಡು ಕಾಫಿಯಲ್ಲಿ ಅದ್ದಿ ತಿನ್ನತೊಡಗಿದ.
ಅದೇ ಕ್ಯಾಂಟೀನ್‌ನಲ್ಲಿ ರಮ್ಯಾಳ ತಂದೆಯೂ ಇದ್ದರು. ಅವರೂ ಕಾಫಿ ಕುಡಿಯಲೆಂದು ಅಲ್ಲಿಗೆ ಬಂದಿದ್ದರು. ರಾಘವ್‌ಗೆ ಅವರನ್ನು ಮಾತನಾಡಿಸಬೇಕೆಂಬ ಮನಸ್ಸು. ಆದರೆ ಮಾತನಾಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಕನ್ನಡದ ಒಂದು ಶಬ್ದವೂ ಅವನಿಗೆ ತಿಳಿಯದು.
ರಾಘವ್ ಐಸಿಯು ಬಳಿ ಬಂದಾಗ ರಮ್ಯಾಳ ಮನೆಯವರೊಡನೆ ಪೊಲೀಸರು ಮಾತನಾಡುತ್ತಿದ್ದುದನ್ನು ಕಂಡನು. ಅವರು ರಾಘವ್‌ನಿಂದಲೂ ಸ್ಟೇಟ್‌ಮೆಂಟ್ ಪಡೆದುಕೊಂಡರು. ಅವನು ಊರಿನಿಂದ ಹೊರಗೆ ಹೋಗಬೇಕಾದರೆ ಸ್ಟೇಷನ್‌ಗೆ ಬಂದು ಅನುಮತಿ ಪಡೆಯಬೇಕೆಂದು ಆದೇಶ ನೀಡಿದರು. ಜೊತೆಗೆ ಪೊಲೀಸರಿಗೆ ಪೂರ್ಣ ಸಹಕಾರ ನೀಡಬೇಕೆಂದೂ ಎಚ್ಚರಿಸಿದರು.
ಸಾಯಂಕಾಲ 6 ಗಂಟೆಯಾಯಿತು. ಆಫೀಸಿನ ಸಹೋದ್ಯೋಗಿಗಳೆಲ್ಲ ಬಂದುದನ್ನು ಕಂಡು ರಾಘವ್‌ಗೆ ಜೀವ ಬಂದಂತಾಯಿತು. ಅವರೆಲ್ಲ ವೈದ್ಯರನ್ನು ಭೇಟಿ ಮಾಡಿ, ಅಗತ್ಯವಿದ್ದಷ್ಟು ರಕ್ತದಾನ ಮಾಡಿದರು. ನಂತರ ರಮ್ಯಾಳ ಕುಟುಂಬದವರನ್ನು ಭೇಟಿ ಮಾಡಿದರು ಮತ್ತು ರಾಘವ್‌ನನ್ನೂ ಅವರಿಗೆ ಪರಿಚಯಿಸಿದರು.
ಆಗ ರಮ್ಯಾಳ ತಾಯಿ, “ಓಹೋ…. ನಾನು ಬೆಳಗ್ಗೆಯಿಂದ ಇವರು ಇಲ್ಲೇ ಕುಳಿತಿದ್ದನ್ನು ನೋಡಿದೆ. ಆದರೆ ಅವಳ ಸಹೋದ್ಯೋಗಿ ಎಂದು ನನಗೆ ತಿಳಿಯಲೇ ಇಲ್ಲ,” ಎಂದು ಹೇಳಿ ರಾಘವ್‌ನ ಕೈ ಹಿಡಿದು ಅಳತೊಡಗಿದರು.
ಅವರಿಗೆ ಹೇಗೆ ಸಮಾಧಾನ ಹೇಳಬೇಕೆಂದು ತಿಳಿಯದೆ ರಾಘವ್ ಕಕ್ಕಾಬಿಕ್ಕಿಯಾದ.
ಅವರೆಲ್ಲ ಹೊರಟಾಗ ರಾಘವ್‌ನೂ ತನ್ನ ರೂಮಿಗೆ ಹಿಂದಿರುಗಿದ. ಅವನು ಪ್ರತಿ ದಿನ ಸಾಯಂಕಾಲ 7 ಗಂಟೆಗೆ ಆಸ್ಪತ್ರೆಗೆ ಬರುತ್ತಿದ್ದ, 9 ಗಂಟೆವರೆಗಿದ್ದು ಹಿಂದಿರುಗುತ್ತಿದ್ದ. 15 ದಿನಗಳ ಕಾಲ ಐಸಿಯುನಲ್ಲಿದ್ದ ನಂತರ ರಮ್ಯಾಳನ್ನು ಪ್ರೈವೇಟ್ ವಾರ್ಡ್‌ಗೆ ಬದಲಾಯಿಸಿದರು. ರಾಘವ್‌ಗೆ ಆಗ ರಮ್ಯಾಳನ್ನು ನೋಡಲು ಅವಕಾಶ ದೊರೆಯಿತು. ಅವಳ ಬೆನ್ನಿನ ಗಾಯ ಕೊಂಚ ವಾಸಿಯಾಗಿತ್ತು. ಆದರೆ ಶರೀರದೊಳಗೆ ಆಳವಾದ ಗಾಯವಾಗಿದ್ದುದರಿಂದ ಹೆಚ್ಚು ಅಲುಗಾಡಬಾರದೆಂದು ಡಾಕ್ಟರು ಆದೇಶಿಸಿದ್ದರು. ಶರೀರದ ಬಲಭಾಗಕ್ಕೆ ಲಕ್ವಾ ಹೊಡೆದಂತಾಗಿ ಅವಳಿಗೆ ಶರೀರದ ಆ ಭಾಗವನ್ನು ಅಲುಗಿಸಲು ಸಾಧ್ಯವೇ ಇರಲಿಲ್ಲ. ಚಲನೆಯಿಲ್ಲದ ದೇಹದಂತೆ ಅವಳು ಹಾಸಿಗೆಯ ಮೇಲೆ ಬಿದ್ದಿರುತ್ತಿದ್ದಳು. ತನ್ನ ಅಸಹಾಯಕ ಸ್ಥಿತಿಗಾಗಿ ಕಣ್ಣೀರು ಮಿಡಿಯುತ್ತಿದ್ದಳು. ಆಸ್ಪತ್ರೆಯ ಓಡಾಟಕ್ಕೆ ಅನುಕೂಲವಾಗಲೆಂದು ರಮ್ಯಾಳ ತಂದೆ ಸಮೀಪದಲ್ಲೇ ಒಂದು ಮನೆಯನ್ನು ಬಾಡಿಗೆಗೆ ಪಡೆದರು. 1 ತಿಂಗಳ ನಂತರ ವೈದ್ಯರು ಅವಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಆದರೆ ಆ ನಿಶ್ಚೇಷ್ಟ ಸ್ಥಿತಿಯಲ್ಲಿದ್ದ ಮಗಳನ್ನು ಹಳ್ಳಿಯ ಮನೆಗೆ ಹೇಗೆ ಕರೆದೊಯ್ದಾರು? ಅಲ್ಲಿಗೆ ಫಿಸಿಯೊಥೆರಪಿಸ್ಟ್ ಹೇಗೆ ಬಂದಾರು? ಇಂತಹ ಸಮಸ್ಯೆಗಳಿಂದಾಗಿ ರಮ್ಯಾ ಆ ಬಾಡಿಗೆ ಮನೆಯಲ್ಲೇ ಇನ್ನೂ ಕೆಲವಾರು ತಿಂಗಳುಗಳನ್ನು ಕಳೆಯುವಂತಾಯಿತು.
ಆ ಕಾಲದಲ್ಲಿ ಮನೆಯಲ್ಲಿ ಇನ್ನೂ ಕೆಲವು ಸಮಸ್ಯೆಗಳಿದ್ದವು. ಮನೆಯವರಿಗೆ ಪ್ರತಿಯೊಬ್ಬರ ಮೇಲೂ ಅನುಮಾನ. ರಾಘವ್, ರಮ್ಯಾಳ ಮಾವ, ಹಳ್ಳಿಯ ಮನೆಯ ನೆರೆಹೊರೆಯವರು….. ತಾಯಿಗೆ ಪ್ರಾರಂಭದಲ್ಲಿ ರಾಘವ್‌ನ ಮೇಲೇ ಅನುಮಾನವಿತ್ತು. ಇವನು ಪ್ರತಿದಿನ ಏಕೆ ಇಲ್ಲಿಗೆ ಬರುತ್ತಾನೆ? ಅವನೇ ಹಲ್ಲೇ ಮಾಡಿಸಿ ಈಗ ಹೀರೋನಂತೆ ಸೇವೆ…. ಏಕೋ ಸಂಶಯ….. ಏಕೆಂದರೆ ಮದುವೆಯ ಪ್ರಸ್ತಾಪವನ್ನು ರಮ್ಯಾ ತಿರಸ್ಕರಿಸಿದ್ದಳು. ಆತ ನಿರುದ್ಯೋಗಿ ಮತ್ತು ಕೆಟ್ಟ ಸಹವಾಸಕ್ಕೆ ಬಿದ್ದವನು. ರಮ್ಯಾಳ ಮೇಲಿನ ಕೋಪದಿಂದ ಅವಳ ಮಾಮನೇ ಹಲ್ಲೆ ಮಾಡಿಸಿರಬಹುದೆಂಬುದು ತಂದೆಯ ಅನುಮಾನ.
ರಮ್ಯಾ ತನ್ನ ಮಾವನಿಂದ ಮದುವೆಯ ಪ್ರಪೋಸ್ ಇದ್ದುದನ್ನು ರಾಘವ್‌ಗೆ ತಿಳಿಸಿದಾಗ ಅವನು ಅವಾಕ್ಕಾದನು. ಅವರ ಕಡೆ ಮಾಮ ಮತ್ತು ಸೋದರ ಸೊಸೆಯ ಸಂಬಂಧ ಬಹಳ ಪವಿತ್ರವಾದದ್ದೆಂದು ಭಾವಿಸಲ್ಪಟ್ಟಿದೆ. ಅಕಸ್ಮಾತ್ ಗೊತ್ತಿಲ್ಲದೆ ಕಾಲು ತಗುಲಿದರೆ, ಸೊಸೆಯ ಕಾಲು ಮುಟ್ಟಿ ಕ್ಷಮೆ ಕೇಳುವ ಸಂಪ್ರದಾಯ ಅವರದ್ದು. ಆದರೆ ಈ ಭಾಗದಲ್ಲಿ ಇಂತಹ ಮದುವೆ ಸಾಮಾನ್ಯವಾಗಿ ನಡೆಯುತ್ತದೆ. ಮಾಮನ ವಯಸ್ಸು ಹೆಚ್ಚಾಗಿದ್ದರೆ ಅವರ ಮಗನೊಂದಿಗೂ ಮದುವೆ ಮಾಡಬಹುದು ಎಂದು ಕೇಳಿ ಆಶ್ಚರ್ಯಗೊಂಡನು.
ರಮ್ಯಾಳ ಮೇಲಿನ ಕೋಪದಿಂದ ಅವಳ ಮಾಮ ಹೋಗಿ ಬರುವುದನ್ನು ಕಡಿಮೆ ಮಾಡಿದಾಗ ಅವಳ ತಂದೆಯ ಅನುಮಾನ ಮತ್ತೂ ಹೆಚ್ಚಿತು. ಆದರೆ 2 ತಿಂಗಳಿನಲ್ಲೇ ಪೊಲೀಸರು ಹಲ್ಲೇ ಮಾಡಿದವರನ್ನು ಹಿಡಿದಾಗ ಎಲ್ಲರಿಗೂ ನಿರಾಳವಾಯಿತು. ಪಕ್ಕದ ಮನೆಯ ಹುಡುಗನೆ ಈ ಕೆಲಸ ಮಾಡಿದವನು ಎಂದು ತಿಳಿದಾಗ ಎಲ್ಲರೂ ಚಕಿತರಾದರು.
ರಮ್ಯಾ ಆಸ್ಪತ್ರೆಯಲ್ಲಿದ್ದಾಗ ರಾಘವ್ ಪ್ರತಿದಿನ ಸಾಯಂಕಾಲ ಅವಳನ್ನು ನೋಡಲು ಹೋಗುತ್ತಿದ್ದನು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ದಿನ ಮನೆಗೆ ಹೋಗುವುದು ಸರಿಯಲ್ಲ ಎನ್ನಿಸಿತು ಅವನಿಗೆ.
“ಶನಿವಾರ, ಭಾನುವಾರದ ದಿನ ನಿಮ್ಮನ್ನು ನೋಡಲು ಮನೆಗೆ ಬಂದರೆ ನಿಮ್ಮ ತಂದೆ ತಾಯಿಗೆ ಅಸಮಾಧಾನವಾಗುವುದೇ?” ರಾಘವ್ ಕೇಳಿದ.
ಅದಕ್ಕೆ ರಮ್ಯಾಳ ತಂದೆ ತಾಯಿ ಸಂತೋಷದಿಂದಲೇ ಸಮ್ಮತಿಸಿದರು. ದಿನವಿಡೀ ಮುದುರಿ ಮಲಗಿರುತ್ತಿದ್ದ ಮಗಳು ಸಾಯಂಕಾಲ ರಾಘವ್ ಬಂದನೆಂದರೆ ಹೇಗೆ ನಳನಳಿಸುತ್ತಾಳೆಂದು ಅವರು ಗಮನಿಸಿದ್ದರು. ಅವರಿಬ್ಬರ ಇಂಗ್ಲಿಷ್ ಮಾತುಕತೆ ತಾಯಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಮಗಳ ಮುಖದ ಕಾಂತಿಯನ್ನು ಅವರು ಅರ್ಥಮಾಡಿಕೊಂಡಿದ್ದರು.
ತನ್ನ ಕುಟುಂಬದ ಬಗ್ಗೆ ತಿಳಿಸುತ್ತಾ ರಾಘವ್, “ನಾನು ಕುಂಬಾರರ ಜಾತಿಗೆ ಸೇರಿದವನು. ತಂದೆ ಮಾಡುತ್ತಿದ್ದ ಮಣ್ಣಿನ ಮೂರ್ತಿಗಳಿಗೆ ಬಣ್ಣ ತುಂಬುತ್ತಲೇ ಬೆಳೆದೆ.”
“ಹಾಗಾದರೆ ಒಂದು ಮೂರ್ತಿ ಮಾಡಿ ತೋರಿಸಿ,” ರಮ್ಯಾ ಕೇಳಿದಳು.
ಅವಳಿಗಾಗಿ ಬಣ್ಣದ ಕ್ಲೇ ತಂದು ಒಂದು ಸುಂದರವಾದ ಮೂರ್ತಿಯನ್ನು ಮಾಡಿಕೊಟ್ಟ. ರಮ್ಯಾ ಅದನ್ನು ಜೋಪಾನವಾಗಿ ಇರಿಸಿಕೊಂಡಳು.
`ರಮ್ಯಾ ಸಹ ಒಂದು ನಿರ್ಜೀವ ಮೂರ್ತಿಗೆ ಜೀವ ತುಂಬಿದಂತೆ ತೋರುತ್ತಾಳೆ,’ ರಾಘವ್ ಯೋಚಿಸಿದ. ಅವನು ಪ್ರತಿ ಶನಿವಾರ, ಭಾನುವಾರ ಭೇಟಿ ಮಾಡಲು ಹೋದಾಗ ರಮ್ಯಾಳ ಸ್ವರೂಪದಲ್ಲಿ ಅವನಿಗೆ ತನ್ನ ತಂದೆ ದೀಪಾವಳಿಯಲ್ಲಿ ಮಾಡುತ್ತಿದ್ದ ಲಕ್ಷ್ಮಿಯ ಮೂರ್ತಿಯ ನೆನಪು ಬಂದಿತು. ಮಣ್ಣಿನಲ್ಲಿ ಮಾಡಿದ ಸೌಮ್ಯ ಮೂರ್ತಿ, ತಾನು ಬ್ರಶ್‌ನ್ನು ಬಣ್ಣದಲ್ಲಿ ಅದ್ದಿ ಕೆಂಪು, ಗುಲಾಬಿ, ಹಳದಿ ಮತ್ತು ಹೊಳೆಯುವ ಬಣ್ಣಗಳನ್ನು ತುಂಬುತ್ತಿದ್ದುದು ಮತ್ತೆ ಆ ಮೂರ್ತಿಯೊಂದಿಗೆ ಮಾತನಾಡುತ್ತಿದ್ದುದು…. ಎಲ್ಲ ರಾಘವ್‌ನ ಸ್ಮೃತಿ ಪಟಲದಲ್ಲಿ ಹಾದು ಹೋಯಿತು.
ರಮ್ಯಾ ಆಸ್ಪತ್ರೆಯಿಂದ ಬಂದ ಮೇಲೆಯೂ ಅಂಥಹದೇ ನಿರ್ಜೀವ ಸ್ಥಿತಿಯಲ್ಲಿದ್ದಳು. ಅಂತಹ ಸ್ಥಿತಿಯಲ್ಲಿದ್ದವಳೊಡನೆ ರಾಘವ್ ಮಾತನಾಡುತ್ತಿದ್ದ. ಪ್ರಾರಂಭದಲ್ಲಿ ಅವಳಿಗೆ ಮಾತನಾಡಲು ಶಕ್ತಿ ಇರಲಿಲ್ಲ. ಕೇವಲ ತುಟಿ ಅಲುಗಿಸುತ್ತಿದ್ದಳು ಅಥವಾ ಕಣ್ಣ ರೆಪ್ಪೆ ಬಡಿದು ಪ್ರತಿಕ್ರಿಯಿಸುತ್ತಿದ್ದಳು. ಕೆಲವು ವಾರಗಳು ಕಳೆದ ನಂತರ ಅವಳು ಮಾತನಾಡತೊಡಗಿದಳು. ಬಾಳಿನ ಬಣ್ಣ ರಂಗೇರತೊಡಗಿತು. ಯಾರ ಬಾಳಿನಲ್ಲಿ ರಂಗು ತುಂಬುತ್ತಿದೆ ಎಂದು ರಾಘವ್‌ಗೆ ತಿಳಿಯಲಿಲ್ಲ. ಅದು ರಮ್ಯಾಳ ಬಾಳಿನಲ್ಲೋ ಅಥವಾ ತನ್ನ ಬಾಳಿನಲ್ಲೋ? ರಂಗು ತುಂಬುತ್ತಿರುವವರಾದರೂ ಯಾರು?
ರಮ್ಯಾಳ ಜೀವನ ಚಿತ್ರದಲ್ಲಿ ಪೂರ್ಣವಾಗಿ ಬಣ್ಣ ತುಂಬಿ ಬಂದಿತು. ಅವಳು ಸಂಪೂರ್ಣ ಗುಣಮುಖಳಾಗಿ ತಂದೆ ತಾಯಿಯರೊಂದಿಗೆ ತನ್ನ ಹಳ್ಳಿಗೆ ಹಿಂದಿರುಗಿದಳು. ರಾಘವ್‌ನ ದೃಷ್ಟಿಯಿಂದ ದೂರಾದಳು. `ಇನ್ನು ರಮ್ಯಾಳಿಗೆ ಯಾರದೇ ಸೇವೆಯ ಅವಶ್ಯಕತೆ ಇಲ್ಲ. ಅವಳನ್ನು ಸಂಪರ್ಕಿಸಲು ಫೋನ್ ಅಥವಾ ಫೇಸ್‌ಬುಕ್ ಮೂಲಕ ಮಾತ್ರ ಸಾಧ್ಯ. ಪೆಂಡಾಲ್‌ನಲ್ಲಿ ಇರಿಸಿರುವ ಮೂರ್ತಿಯನ್ನು ಮನಸ್ಸಿನ ಮೂಲಕ ಮಾತ್ರ ಸಂಪರ್ಕಿಸಬಹುದು,’ ಎಂದು ರಾಘವ್‌ನ ಯೋಚನಾ ಲಹರಿ ಹರಿದಿತ್ತು.
ದುರ್ಘಟನೆ ನಡೆದ 6 ತಿಂಗಳ ನಂತರ ಸಂಪೂರ್ಣವಾಗಿ ಗುಣಹೊಂದಿದ ರಮ್ಯಾ ತನ್ನ ಕೆಲಸಕ್ಕೆ ಹೋಗಲು ಸಿದ್ಧಳಾದಳು. ಅವಳು ಆ ದಿನವೇ ಬರಬೇಕೆಂದು ಕೆಲವು ಸಹೋದ್ಯೋಗಿಗಳು ಅವಳಿಗೆ ಫೋನ್ ಮಾಡಿ ಹೇಳಿದ್ದರು. ಅವಳೂ ಉತ್ಸುಕಳಾಗಿ ಹೊರಟು ನಿಂತಳು.
ರಾಘವ್‌ಗೆ ಕಂಪನಿಯ ಚಂಡೀಗಢದ ಶಾಖೆಗೆ ವರ್ಗವಾಗಿತ್ತು. ಅದು ಅವನ ಇಲ್ಲಿಯ ಕೆಲಸದ ಕಡೆಯ ದಿನ ಎಂಬುದು ರಮ್ಯಾಗೆ ತಿಳಿದಿರಲಿಲ್ಲ.
ಮಗಳನ್ನು ಆಫೀಸಿಗೆ ಬಿಡಲು ಅವಳ ತಂದೆ ಬಂದಿದ್ದರು. ಅವರು ಒಳಗೆ ಬರಲು ಅನುಮತಿ ಇಲ್ಲವಾದ್ದರಿಂದ ಗೇಟ್‌ವರೆಗೆ ಬಂದು ಹಿಂದಿರುಗಿ ಹೋದರು. ರಮ್ಯಾಳ ಕೆಲವು ಸ್ನೇಹಿತರು ಅವಳಿಗಾಗಿ ಗೇಟ್ ಬಳಿಯೇ ಕಾದಿದ್ದರು. ರಾಘವ್ ಹೂಗುಚ್ಛದೊಂದಿಗೆ ಎಲ್ಲರಿಗಿಂತ ಹಿಂದೆ ನಿಂತಿದ್ದನು.
ರಮ್ಯಾ ಬಂದೊಡನೆ ಎಲ್ಲರೂ ಶುಭ ಕೋರಿದರು. ಅವಳು ಹಾರ್ದಿಕವಾಗಿ ನಗುತ್ತಾ ಧನ್ಯವಾದವನ್ನು ಅರ್ಪಿಸಿದಳು. ಗುಂಪಿನಲ್ಲಿ ತೂರಿ ರಾಘವ್ ಬಳಿಗೆ ಬಂದು ತಾನಾಗಿ ಅವನ ಕೈಯಲ್ಲಿದ್ದ ಹೂಗುಚ್ಛವನ್ನು ತೆಗೆದುಕೊಳ್ಳುತ್ತಾ, “ನೀವು ಇದನ್ನು ನನಗಾಗಿಯೇ ತಂದಿದ್ದೀರಿ ಎಂದು ಭಾವಿಸುತ್ತೇನೆ,” ಎಂದು ನಸುನಕ್ಕಳು.
ಎಲ್ಲರೂ `ಹೋ’ ಎಂದು ಹುಯಿಲೆಬ್ಬಿಸಿದರು. “ನಿಮ್ಮ ಈ ಜೀವಂತಿಕೆಯ ನಗು, ಖುಷಿಯನ್ನು ಇಷ್ಟು ದಿನ ನಾವೆಲ್ಲ ಮಿಸ್‌ಮಾಡಿಕೊಂಡೆವು,” ಕಿಶೋರ್ ಹೇಳಿದ.
ಆಫೀಸ್‌ಗೆ ಬಂದ ಸ್ವಲ್ಪ ಸಮಯದ ನಂತರವೇ ಅಂದು ರಮ್ಯಾಳಿಗೆ ವೆಲ್‌ಕಮ್ ಪಾರ್ಟಿ ಮತ್ತು ರಾಘವ್‌ಗೆ ಸೆಂಡಾಫ್ ಪಾರ್ಟಿ ಎಂಬ ವಿಷಯ ಅವಳಿಗೆ ತಿಳಿಯಿತು. ಆಫೀಸಿಗೆ ಮತ್ತೆ ಬಂದಿದ್ದೇನೆ ಎಂಬ ಸಂತೋಷದ ಜೊತೆಗೆ ರಾಘವ್ ದೂರ ಹೋಗುತ್ತಾನೆ ಎಂದು ತಿಳಿದು ಮ್ಲಾನಳಾದಳು. ರಾಘವ್‌ನ ಆಲೋಚನೆಯೂ ಹೀಗೇ ಸಾಗಿತ್ತು. ರಮ್ಯಾ ಎಷ್ಟು ಬೇಗ ಆರೋಗ್ಯವಂತಳಾಗಿ ಕೆಲಸಕ್ಕೆ ಬರುವಳೋ ಎಂದು ಕಾಯುತ್ತಿದ್ದವನಿಗೆ, ಈಗ ಅದೇ ದಿನ ತಾನು ಅವಳಿಂದ ದೂರ ಹೋಗಬೇಕಾಗಿದೆಯಲ್ಲ ಎಂಬ ಪರಿತಾಪ ಕಾಡಿಸಿತು.
ಇಬ್ಬರೂ ಶೂನ್ಯವನ್ನು ನಿರುಕಿಸುತ್ತಾ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕುಳಿತಿದ್ದರು.
ಲಂಚ್ ಟೈಮ್ ಬಂದೊಡನೆ ರಾಮಮೂರ್ತಿ ಮೇಜನ್ನು ಗುದ್ದಿ, “ಈ ದಿನ ನಾವೆಲ್ಲರೂ ಒಟ್ಟಿಗೆ ಲಂಚ್ ಮಾಡುತ್ತಿದ್ದೇವೆ. ನೆನಪಿದೆ ತಾನೇ….?” ಎಂದು ಎಲ್ಲರನ್ನೂ ಎಚ್ಚರಿಸಿದ.
ಲಂಚ್‌ಗಾಗಿ ಎಲ್ಲರೂ ಒಟ್ಟಿಗೆ ಕುಳಿತಾಗ ರಮ್ಯಾ, “ರಕ್ತದಾನ ಮಾಡಿ ನೀವೆಲ್ಲರೂ ನನ್ನ ಪ್ರಾಣ ಉಳಿಸಿದುದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ.”
“ಎಕ್ಸ್ ಕ್ಯೂಸ್‌ಮಿ. ಎಲ್ಲರಿಗಿಂತ ಮೊದಲು ನೀವು ರಾಘವ್‌ಗೆ ಥ್ಯಾಂಕ್ಸ್ ಹೇಳಬೇಕು. ಅವನೇ ಪ್ರಪ್ರಥಮವಾಗಿ ರಕ್ತ ನೀಡಿ ಜೀವದಾನ ಮಾಡಿದನು,” ಮುರಳಿ ಮೋಹನ ಹೇಳಿದ.
“ಹಾಗೇ ಆಗಲಿ. ನಾನು ಅವರಿಗೆ ಪ್ರತ್ಯೇಕವಾಗಿ ಥ್ಯಾಂಕ್ಸ್ ಹೇಳುತ್ತೇನೆ,” ರಮ್ಯಾ ನಗುತ್ತಾ ನುಡಿದಳು.
“ರಮ್ಯಾ, ನಿನ್ನ ಒನ್ ಸೈಡೆಡ್ ಲವರ್ ಬಹಳ ಅಪಾಯಕಾರಿ ಮನುಷ್ಯ. ನಿನ್ನ ಆ ಪಕ್ಕದ ಮನೆ ಹುಡುಗನ ಮೇಲೆ ನಿನಗೆ ಅನುಮಾನ ಬಂದಿರಲಿಲ್ಲವೇ?” ಶುಭಾ ಕೇಳಿದಳು.
“ಅಯ್ಯೋ… ಅವನು ನನಗಿಂತ 2 ವರ್ಷ ಚಿಕ್ಕವನು. ಎಷ್ಟೋ ಸಲ ಲೆಕ್ಕ ಹೇಳಿಸಿಕೊಳ್ಳೋದಕ್ಕೆ ಅಂತ ಪುಸ್ತಕ ಹಿಡಿದುಕೊಂಡು ನಮ್ಮ ಮನೆಗೆ ಬರುತ್ತಿದ್ದ. ಆದರೆ ಅವನು ನನ್ನ ಬಗ್ಗೆ ಹೀಗೆ ಯೋಚಿಸಿದ್ದಾನೆ ಅಂತ ನನಗೆ ಗೊತ್ತಿರಲಿಲ್ಲ,” ರಮ್ಯಾ ತಲೆಯ ಮೇಲೆ ಕೈ ಹೊತ್ತು ಕುಳಿತಳು.
“ಏ ರಮ್ಯಾ… ನೀನು ಬೇರೆ ಯಾರನ್ನೋ ಇಷ್ಟಪಡುತ್ತಿದ್ದೀಯಾ ಅಂತ ಅವನಿಗೆ ಅಸೂಯೆಯಾಗಿಬಿಟ್ಟಿತ್ತು,” ಶ್ರುತಿ ಕಣ್ಣು ಮಿಟುಕಿಸಿ ಗೆಳತಿಯನ್ನು ತಿವಿದಳು.
ಎಲ್ಲರೂ ಬೇಗ ಬೇಗನೆ ಊಟ ಮುಗಿಸಿ ಎದ್ದು ಹೊರ ನಡೆದರು. ರಾಘವ್ ಕೈಲಿದ್ದ ನೀರಿನ ಲೋಟದಲ್ಲಿ ತಮ್ಮ ಭವಿಷ್ಯವನ್ನು ಗುರುತಿಸುವವನಂತೆ ಅದನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿದ್ದ.
“ಆ ಹುಡುಗನ ಬಗ್ಗೆ ನಿಮಗೆ ಏನನ್ನಿಸುತ್ತದೆ?” ರಮ್ಯಾ ರಾಘವ್‌ನ ಪಕ್ಕದ ಕುರ್ಚಿಯಲ್ಲಿ ಕೂರುತ್ತ ಕೇಳಿದಳು.
“ನನ್ನ ಅಭಿಪ್ರಾಯದಲ್ಲಿ ಪ್ರೀತಿ ಎನ್ನುವುದು ಪಡೆಯುವುದಕ್ಕಾಗಿ ಅಲ್ಲ. ಸಂತೋಷವನ್ನು ಕೊಡುವುದಕ್ಕಾಗಿ ಇರುವುದು. ನಾವು ಅದರಿಂದ ಪ್ರತಿಫಲ ಬಯಸುವುದಾದರೆ ಅದು ಪ್ರೀತಿಯಲ್ಲ ಸ್ವಾರ್ಥ. ಪ್ರೀತಿ ಎನ್ನುವುದು ಸ್ವಾರ್ಥಕ್ಕಿಂತ ಉನ್ನತವಾದ ಒಂದು ಭಾವನೆ.”
“ಸರಿ, ಇನ್ನೇನಾದರೂ ಹೇಳುವುದಿದೆಯೇ?”
“ಹೌದು, ನೀವು ಇದೇ ತರಹ ನಗುನಗುತ್ತಾ ಇರಬೇಕು ಮತ್ತು ನಿಮ್ಮ ಫ್ರೆಂಡ್‌ಲಿಸ್ಟ್ ನಲ್ಲಿ ನನ್ನನ್ನೂ ಸೇರಿಸಿಕೊಳ್ಳಬೇಕು. ನಾವು ಪರಸ್ಪರ ಕಾಂಟ್ಯಾಕ್ಟ್ ನಲ್ಲಿರಲು ಅದೇ ನಮಗಿರುವ ಮಾಧ್ಯಮ.”
“ಓ.ಕೆ. ಈಗ ನನ್ನ ಮನಸ್ಸಿನ ಮಾತನ್ನು ಹೇಳುತ್ತೇನೆ ರಾಘವ್, ಮುಂದಿನ ತಿಂಗಳು…..”
“ಏನು…? ಮುಂದಿನ ತಿಂಗಳು…..?” ರಾಘವ್ ಎದೆಯಲ್ಲಿ ಹೊಯ್ದಾಟ ಪ್ರಾರಂಭವಾಯಿತು. ಅವನ ಧ್ವನಿ ಕ್ಷೀಣವಾಗಿತ್ತು.
“ಮುಂದಿನ ತಿಂಗಳು ನಮ್ಮ ತಂದೆ ನಿಮ್ಮ ಊರಿಗೆ ಬರುತ್ತಾರೆ….”
“ಏನು….. ? ಏಕೆ….?” ರಾಘವ್ ಗಲಿಬಿಲಿಗೊಂಡು ಪ್ರಶ್ನಿಸಿದನು.
“ನಮ್ಮ ಮದುವೆಯ ಪ್ರಸ್ತಾಪ ತೆಗೆದುಕೊಂಡು ನಿಮ್ಮ ಮನೆಗೆ ಬರುತ್ತಿದ್ದಾರೆ……”
“ಅವರಿಗೆ ನನ್ನ ಜಾತಿಯ ಬಗ್ಗೆ ತಿಳಿದಿದೆಯೇ?” ಅವರ ಆಚಾರ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದ ರಾಘವ್ ಅಪನಂಬಿಕೆಯಿಂದ ಕೇಳಿದ.
“ಎಲ್ಲ ತಿಳಿದಿದೆ. ಇಲ್ಲಿ ನೋಡಿ ಈಗ ನನ್ನ ಮೈಯಲ್ಲಿ ನಿಮ್ಮ ರಕ್ತವೇ ಹರಿಯುತ್ತಿದೆ. ಬದುಕಿನ ಅನುಭವದಿಂದ ಪಾಠ ಕಲಿಯದಿದ್ದವರು ಮನುಷ್ಯರೇ ಅಲ್ಲ. ನನ್ನ ತಂದೆ ಜೀವನದ ಪಾಠವನ್ನು ಓದಿದ್ದಾರೆ. ಅವರಿಗೆ ಈಗ ಯಾವುದೇ ಬಾಹ್ಯ ಆಡಂಬರದ ಅವಶ್ಯಕತೆ ಇಲ್ಲ…..”
ರಮ್ಯಾ ತನ್ನ ಕೈಯನ್ನು ರಾಘವ್‌ನ ಕೈಯಲ್ಲಿರಿಸುತ್ತಾ, “ಈಗ ಯಾರೇ ಆದರೂ ನಮ್ಮಿಬ್ಬರ ರಕ್ತವನ್ನು ಬೇರ್ಪಡಿಸಲು ಸಾಧ್ಯವಿಲ್ಲ….” ಎಂದಳು.
“ಈ ದಿನ ನಿಮ್ಮ ಮುಖ ನಿಮ್ಮ ಕುಂಕುಮದಷ್ಟೇ ಕೆಂಪಾಗಿದೆ….” ರಾಘವ್ ತನ್ನ ಮನಸ್ಸಿನ ಮಾತನ್ನು ಅದುಮಿಡಲು ಅಸಮರ್ಥನಾದ.
“ನೀವು ನನಗೆ ಕೊಟ್ಟಿರುವ ರಕ್ತದ ಕೆಂಪು ನನ್ನ ಮುಖದಲ್ಲಿ ಪ್ರತಿಫಲಿಸುತ್ತಿದೆ ಅಷ್ಟೇ. ನೀವು ನನಗಾಗಿ ಮಾಡಿಕೊಟ್ಟ ಮೂರ್ತಿಯೂ ಹೀಗೆಯೇ ಇದೆಯಲ್ಲವೇ?’
‘ಇಬ್ಬರೂ ಪರಸ್ಪರ ಕೈಹಿಡಿದು ಮೃದುವಾಗಿ ಅದುಮುತ್ತಾ ಜೀವನದ ಕ್ಯಾನ್‌ವಾಸ್‌ಗೆ ಹೊಸ ರಂಗು ತುಂಬಿಸಲು ಹೊರಟರು.