ಹಾನಿಕಾರಕ ಪದಾರ್ಥಗಳನ್ನು ದೇಹದಿಂದ ಹೊರತೆಗೆಯಲು (ಡೀಟಾಕ್ಸ್) ಬೇಸಿಗೆ ಸಕಾಲವೆನಿಸಿದೆ. ಏಕೆಂದರೆ ಈ ಸೀಸನ್‌ನಲ್ಲಿ ತಾಜಾ ಸಾವಯವ ಹಣ್ಣು ಮತ್ತು ತರಕಾರಿ ಧಾರಾಳವಾಗಿ ದೊರಕುತ್ತದೆ. ಇದರ ಹೆಚ್ಚಿನ ಸೇವನೆಯಿಂದ ಇಂಥ ಹಾನಿಕಾರಕ ಪದಾರ್ಥಗಳು ಹೊರ ಹೋಗಲು ಸುಲಭ, ಅಗತ್ಯ ಕೂಡ. ಕೆಲವು ಹಣ್ಣುಗಳ ಸಹಾಯದಿಂದ ನಿಮ್ಮ ದೇಹವನ್ನು ಶುಚಿಗೊಳಿಸಲು ಸಹಾಯ ಸಿಗುತ್ತದೆ. ಇದು ನಿಮ್ಮ ದೇಹವನ್ನು ಬಲು ತಾಜಾ ಆಗಿಡುತ್ತದೆ.
ಬೇಸಿಗೆಯಲ್ಲಿ ಡೀಟಾಕ್ಸ್ ಗೊಳಿಸಲು ಕಲ್ಲಂಗಡಿ ಹಣ್ಣು ಅತ್ಯುತ್ತಮ ಆಯ್ಕೆ. ಇದರಿಂದ ದೇಹದಲ್ಲಿ ಹಲವಾರು ಕ್ಷಾರಯುಕ್ತ ಅಂಶಗಳು ಕೂಡುತ್ತವೆ. ಅದರಲ್ಲಿ ಹೆಚ್ಚು ಅಂಶ ಸೈಟ್ರೊನ್ ಇರುತ್ತದೆ. ಇದರಿಂದ ಅರ್ಜಿನಿನ್ ಎಂಬ ಎನ್‌ಝೈಮ್ ತಯಾರಾಗಿ ದೇಹದ ಲಿವೋನಿಯಾ ಹಾಗೂ ಇನ್ನಿತರ ವಿಷಮಯ ಅಂಶಗಳು ಹೊರಹೋಗುತ್ತವೆ. ಇದರ ಜೊತೆಗೆ ಕಲ್ಲಂಗಡಿ ಹಣ್ಣು ಪೊಟ್ಯಾಶಿಯಂನ ಭಂಡಾರವಾಗಿದೆ. ಇದು ನಮ್ಮ ಆಹಾರದಲ್ಲಿನ ಸೋಡಿಯಂ ಲವಣಾಂಶವನ್ನು ಬ್ಯಾಲೆನ್ಸ್ ಗೊಳಿಸುವಲ್ಲಿ ಹಾಗೂ ಶುಚಿಗೊಳಿಸಲು ನಮ್ಮ ಕಿಡ್ನಿಗಳಿಗೂ ಸಪೋರ್ಟ್ ಮಾಡುತ್ತದೆ.
ನಿಂಬೆ ಲಿವರ್‌ಗೆ ಬಲು ಉಪಕಾರಿ. ಇದು ಯೂರಿಕ್ ಆ್ಯಸಿಡ್ ಹಾಗೂ ಇತರ ರಾಸಾಯನಿಕಗಳನ್ನು ತೊಲಗಿಸುತ್ತದೆ. ದೇಹವನ್ನು ಕ್ಷಾರೀಯಗೊಳಿಸಿ ದೇಹದ ಅಂಶ ಕಾಪಿಡುವಲ್ಲಿಯೂ ಇದು ಪೂರಕ.
ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರ ದಬ್ಬುವಲ್ಲಿ ಸೌತೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಧಾರಾಳ ನೀರಿನಂಶ ಇರುವುದರಿಂದ, ಮೂತ್ರವಿಸರ್ಜನೆಯಲ್ಲಿ ಏನಾದರೂ ಅಡ್ಡಿಗಳಿದ್ದರೆ ಅವು ನಿವಾರಣೆಯಾಗುತ್ತವೆ. ಅರ್ಧ ಕಪ್ ಹೆಚ್ಚಿದ ಸೌತೆ ಹೋಳಿನಲ್ಲಿ ಕೇವಲ 8 ಕ್ಯಾಲೋರಿ ಮಾತ್ರ ಇರುತ್ತದೆ.
ಅಮೀನೋ ಆ್ಯಸಿಡ್ ಪ್ರೋಟೀನ್ ಯುಕ್ತ ಪದಾರ್ಥಗಳಲ್ಲಿ ಕಂಡುಬರುತ್ತದೆ. ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರತೆಗೆಯುವಲ್ಲಿ ಇದು ಅವಶ್ಯಕ.
ತರಕಾರಿಯನ್ನು ಕುಕ್ಕರ್‌ನಲ್ಲಿ ಬೇಯಿಸುವುದು ಅಥವಾ ಬಾಣಲೆಯಲ್ಲಿ ಬಾಡಿಸುವುದು ಉತ್ತಮ, ಇದರಿಂದ ಪೋಷಕಾಂಶಗಳು ಹೆಚ್ಚು ನಷ್ಟ ಆಗುವುದಿಲ್ಲ.
ಹಾನಿಕಾರಕ ಅಂಶಗಳನ್ನು ದೇಹದಿಂದ ಹೊರಹಾಕಲು ಕೆಲವು ಲಘು ವ್ಯಾಯಾಮ ಮಾಡಿ. ಡೀಟಾಕ್ಸಿಂಗ್ ಮೂಲಕ ನೀವು ಆಲ್ಕೋಹಾಲ್, ಕೆಫೀನ್‌ನಿಂದ ದೂರ ಇರಬೇಕಾದುದು ಅಗತ್ಯ.
ಪುದೀನಾ, ಕೊ.ಸೊಪ್ಪು, ಕರಿಬೇವು ಇತ್ಯಾದಿ ಬೇಸಿಗೆಯಲ್ಲಿ ಹೆಚ್ಚು ತಂಪು ಎನಿಸುತ್ತದೆ. ನಮ್ಮ ಆಹಾರ ಚೆನ್ನಾಗಿ ಜೀರ್ಣಾಗಲು ಇವು ನೆರವಾಗುತ್ತವೆ. ಲಿವರ್, ಪ್ಯಾಂಕ್ರಿಯಾಸ್, ಸಣ್ಣ ಕರುಳು ಇತ್ಯಾದಿಗಳಲ್ಲಿ ಪಿತ್ತದ ಪ್ರಕೋಪ ತಗ್ಗಿಸುತ್ತವೆ. ಆಹಾರದಿಂದ ಕೊಬ್ಬಿನಾಂಶ ಬೇರ್ಪಡಿಸುತ್ತವೆ.
ಪಾಲಿಫೆನಾಲ್ಸ್ ಯುಕ್ತ ಗ್ರೀನ್ ಟೀಯನ್ನು ಹೆಚ್ಚಾಗಿ ಸೇವಿಸಿ, ಏಕೆಂದರೆ ಇದು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುತ್ತದೆ.
ಆದಷ್ಟೂ ಕೆಫೀನ್ (ಕಾಫಿ) ಟ್ಯಾನಿನ್ (ಟೀ) ನಿಂದ ದೂರವಿರಿ. ದೇಹ ಪೋಷಕಾಂಶಗಳನ್ನು ಇವು ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಮಧುಪಾನ ಸಂಪೂರ್ಣ ತ್ಯಜಿಸಿರಿ. ಏಕೆಂದರೆ ಇದು ರಕ್ತ ಸಂಚಾರದಲ್ಲಿ ಬಲು ಸುಲಭವಾಗಿ ವಿಲೀನಗೊಂಡು ನೇರ ಹಾನಿ ಉಂಟು ಮಾಡುತ್ತದೆ. ಇದರಿಂದ ದೇಹದ ಪ್ರತಿ ಭಾಗ ಹಾನಿಗೆ ಒಳಗಾಗುತ್ತದೆ.
ಬೇಸಿಗೆಯಲ್ಲಿ ಎಂದಿಗಿಂತ ಹೆಚ್ಚು ನೀರು ಸೇವಿಸಬೇಕು. ಗಂಡಸರು ಕನಿಷ್ಠ 3ಲೀ, ಹೆಂಗಸರು 2.2 ಲೀ. ನೀರನ್ನು ಕುಡಿಯಲೇಬೇಕು. ಎಲ್ಲಾ ಮಹತ್ತರ ಅಂಗಗಳಿಂದಲೂ ನೀರು ಹಾನಿಕಾರಕ ಅಂಶಗಳನ್ನು ಹೊರತೆಗೆಯುವಲ್ಲಿ ಹಾಗೂ ಪೋಷಕಾಂಶಗಳನ್ನು ಎಲ್ಲಾ ಜೀವಕೋಶಗಳಿಗೆ ತಲುಪಿಸುವಲ್ಲಿ ಪೂರಕ.
ನಿಮ್ಮ ಆಹಾರದಲ್ಲಿ ಫೈಬರ್‌ಯುಕ್ತ ಪದಾರ್ಥಗಳು ಹೆಚ್ಚಾಗಿರಲಿ. ಇದು ಪ್ರತಿರೋಧಕ ಪ್ರಕ್ರಿಯೆ ಸರಾಗವಾಗಿ ಮುಂದುವರಿಯಲು ಪ್ರಧಾನ ಪಾತ್ರ ವಹಿಸುತ್ತದೆ. ಇದರ ನೆರವಿನಿಂದ ಕಾರ್ಡಿಯೋ ವ್ಯಾಸ್ಕ್ಯುಲರ್ ರೋಗ, ಮಧುಮೇಹ, ಕ್ಯಾನ್ಸರ್, ಸ್ಥೂಲಕಾಯದ ಸಮಸ್ಯೆಗಳು ದೂರಾಗುತ್ತವೆ.
ನಿಯಮಿತ ರೂಪದಲ್ಲಿ ವಯಸ್ಸಿಗೆ ತಕ್ಕಂತೆ, ಇಂತಿಷ್ಟು ಪ್ರಮಾಣದ ಹಾಲನ್ನು ಸೇವಿಸುತ್ತಾ ಹೋಗಬೇಕು. ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಸದೃಢ ಮೂಳೆಗಳಿಗಾಗಿ ಇದು ಅತ್ಯವಶ್ಯಕ. ಇದು ನಮ್ಮ ದೇಹದ ಅಶುದ್ಧ ಪದಾರ್ಥ ಹೊರಹಾಕಲು ಹೆಚ್ಚು ನೆರವಾಗುತ್ತದೆ.
ಪ್ರತಿದಿನ ಬೆಳಗ್ಗೆ ಬಿಸಿ ನೀರಿಗೆ ನಿಂಬೆರಸ, ಜೇನು ಬೆರೆಸಿ ಕುಡಿಯಿರಿ. ಇದು ಜೀರ್ಣಕ್ರಿಯೆ ಚುರುಕುಗೊಳಿಸುತ್ತದೆ, ಮಲಬದ್ಧತೆ ಓಡಿಸುವಲ್ಲಿ ಸಹಾಯಕ.
ವಿಟಮಿನ್ಸ್ ಮಹತ್ವಪೂರ್ಣ ಪೋಷಕಾಂಶಗಳು. ಇವನ್ನು ನಮ್ಮ ದೇಹ ತಯಾರಿಸಲಾಗದು. ಹೀಗಾಗಿ ನಮ್ಮ ಆಹಾರದಲ್ಲಿ ವಿಟಮಿನ್ಸ್ ಹೆಚ್ಚಾಗಿರುವಂತೆ (ಹಣ್ಣು ಹಂಪಲ ಸೇವನೆ) ಮಾಡಿ.
ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರತೆಗೆಯುವಲ್ಲಿ ನಿದ್ದೆಗೆ ಸಹ ಪ್ರಮುಖ ಪಾತ್ರವಿದೆ. ನಾವು ಒಂದು ಸಣ್ಣ ಮಗುವಿನಂತೆ ನಿದ್ರಿಸಿದರೆ, ಎಲ್ಲಾ ಜೀವಕೋಶಗಳಿಗೂ ಅಗತ್ಯದ ಆಕ್ಸಿಜನ್ ಪೂರೈಕೆ ಆಗುತ್ತದೆ. ಇದು ಎಲ್ಲಾ ಅಂಗಾಂಶಗಳಿಗೂ ಅಗತ್ಯ ತಲುಪಬೇಕು, ಆಗ ನಾವು ಸಕ್ರಿಯರಾಗಿ ಕೆಲಸ ಮಾಡಲು ಸಾಧ್ಯ. ಇದು ಚರ್ಮಕ್ಕೆ ಮೃದು ನೀಡಿ, ಕಂಗಳಿಗೆ ಕಾಂತಿ ತುಂಬಿಸುತ್ತದೆ.
– ಎನ್. ಸುಮತಿ
ಬೇಸಿಗೆಗೆ ಇದು ಹಿತಕರ
ಒಂದು ಪೀಸ್ ವಾಟರ್ ಮೆಲನ್ ತೆಗೆದುಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಶುಂಠಿ, ಪುದೀನಾ, ಐಸ್‌ಕ್ಯೂಬ್ಸ್ ಬೆರೆಸಿ 2-3 ಗಂಟೆಗೊಮ್ಮೆ ಸೇವಿಸಿ.
ಕಲ್ಲಂಗಡಿ ಹೋಳು, ಪುದೀನಾ ಮಿಕ್ಸಿಯಲ್ಲಿ ಅರೆದು, ನೀರು ಮಜ್ಜಿಗೆ ಬೆರೆಸಿ ಸೇವಿಸುತ್ತಿರಿ.
ಸೌತೆಗೆ ನಿಂಬೆರಸ ಬೆರೆಸಿ ಮಿಕ್ಸಿಯಲ್ಲಿ ಬ್ಲೆಂಡ್‌ಮಾಡಿ.
ಸ್ಟ್ರಾಬೆರಿ, ಸೌತೆ, ನಿಂಬೆ, ಪುದೀನಾ ಬ್ಲೆಂಡ್ ಮಾಡಿ ಸೇವಿಸಿ.
ಡೀಟಾಕ್ಸ್ ಐಸ್ಡ್ ಗ್ರೀನ್ ಟೀ ಸೇವಿಸಿ.