ದುಬೈನ ವಿಮಾನ ನಿಲ್ದಾಣ ಮಾಯಾ ನಗರಿಯಂತೆ. ಮರುಭೂಮಿ ಎನ್ನುವ ವಿಷಯ ಮರೆಸುವಷ್ಟು ಅನುಕೂಲಗಳು, ನಿಗಿನಿಗಿ ಹೊಳೆಯುವ ದೀಪದ ಸಾಲುಗಳನ್ನು ಹೊತ್ತ ಅಂಗಡಿಗಳು, ಮಿಂಚುವ ಚಿನ್ನದ ಬಣ್ಣದ ಎತ್ತರದ ಖರ್ಜೂರದ ಮರಗಳು, ಎತ್ತರದ ಬೆಳ್ಳಿಯ ರಂಗಿನ ವಿಶಾಲವಾದ ಕಂಬಗಳಿಗೆ ಬಣ್ಣ ಬಣ್ಣದ ಹೊಳೆಯುವ ದೀಪಗಳು, ವಿಶಾಲವಾದ ವಿಮಾನ ನಿಲ್ದಾಣ. ನೂರಕ್ಕೂ ಹೆಚ್ಚು ಟರ್ಮಿನಲ್‌ಗಳು, ಸುಲಭವಾಗಿ ದಾರಿ ಸವೆಸಲು ನಡೆದಂತೆ ಸಾಗುವ ಎಸ್ಕಲೇಟರ್‌ಗಳು, ಪೂರ್ಣವಾಗಿ ಗಾಜಿನಿಂದ ನಿರ್ಮಿಸಲ್ಪಟ್ಟ ಲಿಫ್ಟ್ ಗಳು, ಒಂದೆಡೆ ಸಾಲಾಗಿ ರೂಪಿಸಲ್ಪಟ್ಟ ಹಸಿರು ಖರ್ಜೂರದ ಮರಗಳು, ನಿಜಕ್ಕೂ ಎಲ್ಲ ಕಣ್ಣು ಕೋರೈಸುವಷ್ಟು ಚಂದವೆನಿಸಿತು.
ಇಷ್ಟೊಂದು ಶ್ರೀಮಂತವಾದ, ವಿಶಾಲವಾದ ವಿಮಾನ ನಿಲ್ದಾಣದಲ್ಲೂ ಕಿಕ್ಕಿರಿದಂತೆ ಜನಸಮೂಹ. ಕೆಲಸಕ್ಕಾಗಿ ವಲಸೆ ಬಂದಿರುವ ಜನರ ಸಾಲುಗಳು, ಶ್ರೀಮಂತ ವಿದೇಶಿಯರೇ ಅಲ್ಲದೆ, ಅತಿ ಸಾಮಾನ್ಯ ಉಡುಪಿನ ಜನಸಾಮಾನ್ಯರು, ಬಾಂಗ್ಲಾ ದೇಶದವರು, ಪಾಕಿಸ್ತಾನಿಗಳು, ಇನ್ನು ನಮ್ಮ ಕೇರಳದವರು ಢಾಳಾಗಿ ಕಾಣುತ್ತಿದ್ದರು. ಅಷ್ಟೊಂದು ಜನರಿರುವ ವಿಮಾನ ನಿಲ್ದಾಣವನ್ನು ಯಾವಾಗಲೂ ಶುಚಿ ಮಾಡುತ್ತಲೇ ಇದ್ದರು. ಆ ಕೆಲಸಗಾರರಲ್ಲಿ ಹೆಚ್ಚಾಗಿ ಕೇರಳದ ಮಲೆಯಾಳಿಗಳೇ ಕಾಣುತ್ತಿದ್ದರು. ನೋಡಲು ಚಂದದ ಹರೆಯದ ಹುಡುಗರು ಮಾಪ್ ಹಿಡಿದು ಗುಡಿಸುವುದು, ಒರೆಸುವುದನ್ನು ಕಂಡಾಗ ಪಾಪವೆನಿಸಿತು. ಅಲ್ಲದೆ ಅವಶ್ಯಕತೆ ಇದ್ದಾಗ ಮನುಷ್ಯ ಅನಿವಾರ್ಯವಾಗಿ ಯಾವ ಕೆಲಸವನ್ನಾದರೂ ಮಾಡಬೇಕಾಗುತ್ತದೆ. ಮನೆಯಲ್ಲಿ ಅಕ್ಕ ತಂಗಿಯರು, ಅಮ್ಮನ ಹತ್ತಿರ ಮುದ್ದುಗರೆಸಿಕೊಂಡು ಗಂಡು ಮಗನೆಂದು ಜಂಭ ಮಾಡುವ ಮಕ್ಕಳ ನೆನಪಾಯಿತು. ಆದರೆ ಜೀವನಾಧಾರಕ್ಕೆ ದೇಶವನ್ನು ತೊರೆಯಬೇಕು, ಎಲ್ಲ ಕೆಲಸವನ್ನೂ ಮಾಡಬೇಕು. ಅಲ್ಲದೆ, ನಮ್ಮ ದೇಶದಲ್ಲಿದ್ದು ಅಷ್ಟು ಹಣವನ್ನು, ಅವರು ಪಡೆದಿರುವ ವಿದ್ಯಾಭ್ಯಾಸಕ್ಕೆ ಎಲ್ಲಿ ಪಡೆಯಲು ಸಾಧ್ಯ? ನಮ್ಮ ಭಾರತದಲ್ಲಿ ನಾವು ಹೆಚ್ಚಿನ ಮಕ್ಕಳನ್ನು ಹೆತ್ತು ಕೂಲಿಗಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದೇವೇನೋ ಎನ್ನುವ ಹತಾಶ ಭಾವ, ಭಾರತದವರನ್ನು ಅದರಲ್ಲೂ ದಕ್ಷಿಣ ಭಾರತದವರನ್ನು ಕಂಡರೆ ನಗುನಗುತ್ತಾ ಮಾತನಾಡಿಸುವ ಆ ಮಕ್ಕಳನ್ನು ನೋಡಿದರೆ ಸಂಕಟವಾಯಿತು. ಪ್ರಯಾಣಿಕರ ಸಂಖ್ಯೆ ಎಷ್ಟು ಹೆಚ್ಚಿತ್ತೆಂದರೆ ಅಷ್ಟೊಂದು ಹೊತ್ತು ಕೂರಲಾರದೆ ನಮ್ಮ ರೈಲ್ವೆ ಸ್ಟೇಷನ್‌ನಲ್ಲಿ ಮಲಗುವಂತೆ ಸಾಲಾಗಿ ಮಲಗಿದ ಮಾಮೂಲಿ ಎಕನಾಮಿಕ್ ಕ್ಲಾಸ್‌ನ ಪ್ರಯಾಣಿಕರು, ಫಸ್ಟ್ ಕ್ಲಾಸ್ ಮತ್ತು ಬಿಸ್‌ನೆಸ್ ಕ್ಲಾಸ್‌ನ ಪ್ರಯಾಣಿಕರಿಗೆ ರಾಜೋಪಚಾರ. ಮಿಕ್ಕವರಿಗೂ ಅವರ ಕ್ಲಾಸ್‌ಗೆ ತಕ್ಕನಾದ ಉಪಚಾರ. ಎಲ್ಲಿ ಹೋದರೂ ಅಷ್ಟೇ ಅಲ್ಲವೇ? ಕಾಸಿಗೆ ತಕ್ಕನಾಗಿ ಮಣೆ ಹಾಕುವುದಲ್ಲವೇ? ಕೆಲಸಗಾರರ ರಹದಾರಿ ಪತ್ರ ಅರ್ಥಾತ್ ಪಾಸ್‌ಪೋರ್ಟ್‌ಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಹೋಗುವ ದಲ್ಲಾಳಿಗಳು. ಅವರ ಹಿಂದೆ ಅಲೆದಾಡುವ ಪ್ರಯಾಣಿಕರು. ಅವರ ಬಟ್ಟೆಬರೆ ರೀತಿ ನೀತಿಗಳನ್ನು ನೋಡಿದರೆ ಕೂಲಿ ಕೆಲಸ ಮಾಡುವ ಜನರಂತೆ ಕಾಣುತ್ತಿದ್ದರು.
ಒಟ್ಟಿನಲ್ಲಿ ಶ್ರೀಮಂತ ದೇಶದವರು ಬಡ ದೇಶದ ಬಡವರನ್ನು ಯಾವ ರೀತಿ ಬಳಸಿಕೊಳ್ಳಬಹುದೆನ್ನುವ ಚಿತ್ರಣವನ್ನು ಪ್ರತ್ಯಕ್ಷಕವಾಗಿ ನೋಡಿದಂತೆ ಆಯಿತು. ವಿಭಿನ್ನ ರೀತಿಯ ಜನರ ಒಂದು ಸಂತೆಯಂತೆ ಇತ್ತು. ಬೆಳಗಿನ ಆರೂವರೆ ಗಂಟೆ ಅಂದರೆ ಭಾರತದಲ್ಲಿ ಎಂಟೂವರೆ ವಿಮಾನದ ಮೆಟ್ಟಲನ್ನು ಇಳಿದು ಬಂದ ಮೇಲೆ ಹವಾ ನಿಯಂತ್ರಿತ ಬಸ್ಸಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗಲಾಯಿತು.
ಅಲ್ಲಿಯ ವಿಮಾನ ನಿಲ್ದಾಣದಲ್ಲಿ ಮೂರನೆಯ ಟರ್ಮಿನಸ್‌ನ ಕಾಮಗಾರಿ ನಡೆಯುತ್ತಿದ್ದ ಕಾರಣ ಈ ವಿಶೇಷ ಸೌಲಭ್ಯ. ಬೆಳಗಿನ ಹೊತ್ತಾದುದರಿಂದ 35 ಡಿಗ್ರಿ ತಾಪಮಾನವಿದ್ದರೂ ಅಷ್ಟಾಗಿ ಬಿಸಿ ತಟ್ಟಲಿಲ್ಲ. ಬೆಳಗಿನ 6.25ಕ್ಕೆ ಇಳಿದ ನಾವು ಸಂಜೆ 6 ಗಂಟೆಯ ವಿಮಾನಕ್ಕೆ ಹತ್ತಬೇಕಿತ್ತು. ಅಲ್ಲಿಯವರೆಗೂ ವಿಮಾನ ನಿಲ್ದಾಣವನ್ನು ಕೂಲಂಕಶವಾಗಿ ನೋಡಿದ್ದಾಯಿತು. ಅಲ್ಲದೆ, ಏರ್‌ಲೈನ್ಸ್ ಕಡೆಯವರಿಂದಲೇ ತಿಂಡಿ ಮತ್ತು ಊಟೋಪಾಚರವನ್ನು ಕಲ್ಪಿಸಲಾಗಿತ್ತು. ಪ್ರಾರ್ಥನೆ ಮಾಡುವವರಿಗೆ ಪ್ರತ್ಯೇಕ ಸ್ಥಾನವನ್ನು ಕಲ್ಪಿಸಲಾಗಿತ್ತು.
ಅಂತೆಯೇ ಧೂಮಪಾನ ಮಾಡುವವರಿಗೂ ಪ್ರತ್ಯೇಕವಾಗಿ ಸ್ಥಳ ಮೀಸಲಾಗಿತ್ತು. ಮಾಯಾನಗರಿ ದುಬೈನ ವಿಮಾನ ನಿಲ್ದಾಣದಲ್ಲಿ ಬರಿಯ ಶ್ರೀಮಂತರಷ್ಟೇ ಅಲ್ಲ, ಅಲ್ಲಿಗೆ ಕೆಲಸ ಮಾಡಲು ಬಂದವರೇ ಹೆಚ್ಚಾಗಿ ಕಾಣುತ್ತಿದ್ದರು. ಅಲ್ಲದೆ ರಿಯಾಧ್ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುವವರೆಲ್ಲಾ ದುಬೈನಿಂದಲೇ ಹಾದುಹೋಗಬೇಕು. ಆದ್ದರಿಂದ ಎಲ್ಲೆಡೆಗೆ ಹೋಗುವವರನ್ನೆಲ್ಲಾ ಇಲ್ಲಿ ನೋಡಲು ಸಾಧ್ಯ.
ಎಮರೈಟ್ಸ್ ನವರ ಜಾಣತನ
ಪ್ರಪಂಚದ ಎಲ್ಲೆಡೆ ಹೋಗುವವರು ದುಬೈನಲ್ಲಿ ಇಳಿದು ಹೋಗುವಂತೆ ವ್ಯವಸ್ಥೆ ಮಾಡಿರುವ ಎಮರೈಟ್ಸ್ ಏರ್‌ಲೈನ್ಸ್ ಕಂಪನಿಯವರು ಬಹಳ ಬುದ್ಧಿವಂತರು ಹಾಗೂ ವ್ಯಾಪಾರಿ ಮನೋಭಾವ, ಬಂದವರೆಲ್ಲಾ ದುಬೈನಲ್ಲಿ ಇಳಿದು ದುಬೈಯನ್ನು ನೋಡಿಕೊಂಡು ಹೋಗುವಂತೆ. ಅದಕ್ಕಾಗಿ ಸುಲಭವಾಗಿ ವಿಮಾನ ನಿಲ್ದಾಣದಲ್ಲೇ ದೊರಕುವ ವೀಸಾ, ಒಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರವಾಸೋದ್ಯಮ ದುಬೈನ ಬಂಡವಾಳ. ಅಲ್ಲದೆ ದುಬೈ ಮಧ್ಯಪ್ರಾಚ್ಯ ದೇಶಗಳಲ್ಲೇ ಅತ್ಯಂತ ಮುಕ್ತ ವಾತಾವರಣದ ದೇಶ. ಯು.ಎ.ಇ.ಯಲ್ಲಿರುವವರೆಲ್ಲಾ ದುಬೈಗೆ ಬಂದು ತಮ್ಮ ಆಸೆಗಳನ್ನು ತೀರಿಸಿಕೊಳ್ಳುತ್ತಾರೆ. ದುಬೈನ ಎಂತಹ ಸಣ್ಣ ಹೋಟೆಲ್‌ನಲ್ಲೂ ಕನಿಷ್ಠ ಮೂರಾದರೂ ಡ್ಯಾನ್ಸ್ ಬಾರ್‌ಗಳಿರುತ್ತವೆ.
ದುಬೈನಲ್ಲಿ ನಾವಿಳಿದುಕೊಂಡ ಹೋಟೆಲ್‌ನಲ್ಲಿ ಭಾರತ, ಪಾಕಿಸ್ತಾನಿ ಮತ್ತು ಇರಾನಿ ಡ್ಯಾನ್ಸ್ ಬಾರ್‌ಗಳಿದ್ದವು. ಆ ಡ್ಯಾನ್ಸ್ ಬಾರ್ ಪ್ರವೇಶ ದರ ನೋಡಿ ಹೀಗಿದೆ. ಭಾರತದ್ದಕ್ಕೆ 25 ದೀರಮ್ಸ್ (25/ ರೂ.ಗಳು) ಪಾಕಿಸ್ತಾನಕ್ಕೆ 50 ದೀರಮ್ ಗಳು ಮತ್ತು ಇರಾನಿನದಕ್ಕೆ 100 ದೀರಮ್ ಗಳು. ಎಲ್ಲಿ ಹೋದರೂ ನಮಗೆ ಬೆಲೆ ಕಡಿಮೆ ಎಂದುಕೊಂಡೆ. ನಾವು ಬೆಳಗಿನ 6.25ಕ್ಕೆ ದುಬೈನ ವಿಮಾನ ನಿಲ್ದಾಣದಲ್ಲಿ ಇಳಿದವರು ಸಂಜೆ ಐದರ ತನಕ ಅಲ್ಲೆಲ್ಲಾ ಓಡಾಟ ಮಾಡಿ ಇರುವ ಸಮಯವನ್ನು ಸಮರ್ಥವಾಗಿ ಉಪಯೋಗಿಸುವ ಆಸೆ. ಹಿಂದಿರುಗಿ ಬರುವಾಗ ಇಷ್ಟೊಂದು ಸಮಯ ಸಿಗದೆ ಇರಬಹುದು ಎನ್ನುವ ಭಾವನೆ.
ರಿಯಾಧ್‌ನ ವಿಮಾನ ಏರುವಾಗ
ಅಷ್ಟರಲ್ಲಿ ನಾವು ರಿಯಾಧ್‌ನ ವಿಮಾನವನ್ನು ಏರುವ ಸಮಯ ಬಂದೇಬಿಟ್ಟಿತು. ಅದು ಬಹಳಷ್ಟು ದೊಡ್ಡ ವಿಮಾನವೇ! ವಿಮಾನದ ಒಳಗಡೆ ಬಿಡುವ ಸಮಯ ಅಂದರೆ ಬೋರ್ಡಿಂಗ್ ಪ್ರಾರಂಭವಾದೊಡನೆ ಎಲ್ಲರೂ ಸಾಲಾಗಿ ನಿಂತರು. ಅದರಲ್ಲಿ ಬಹಳಷ್ಟು ಜನ ಹದಿಹರೆಯದ ಹೆಣ್ಣುಮಕ್ಕಳು, ಹೆಚ್ಚಿನವರು ಮಲೆಯಾಳಿ ಮುಸ್ಲಿಮರಂತೆ ಕಾಣುತ್ತಿದ್ದರು. ತಲೆ ಕೂದಲನ್ನು ಸ್ಕಾರ್ಫ್‌ನಂತಹ ವಸ್ತ್ರದಿಂದ ಮುಚ್ಚಿಕೊಂಡಿದ್ದರು. ಮುಖ ಮಾತ್ರ ಮುದ್ದಾಗಿ ಕಾಣುತ್ತಿತ್ತು. ಹರೆಯದ ವಯಸ್ಸೇ ಅಷ್ಟು, ಎಲ್ಲರೂ ಸುಂದರವಾಗಿಯೇ ಕಾಣುತ್ತಾರೆ. ಇಷ್ಟೊಂದು ಜನರು ಯಾವ ಕೆಲಸಗಳಿಗಾಗಿ ಹೋಗುತ್ತಾರೆ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿ ಬಂದಿತು. ನನ್ನ ಪಕ್ಕದಲ್ಲಿದ್ದ ವಿದೇಶೀ ಮಹಿಳೆ, ಮನೆ ಕೆಲಸಗಳಿಗೂ ಹೋಗುತ್ತಾರೆ ಎಂದು ಪಿಸುಗುಟ್ಟಿದಳು. ಎಲ್ಲರೂ ಸಾಲಾಗಿ ನಿಂತಿದ್ದರೂ ಹೆಣ್ಣುಮಕ್ಕಳಿಗೆ ಮೊದಲ ಆದ್ಯತೆ. ನಾನೂ ಅವರೊಡನೆ ನಿಂತುಕೊಂಡೆ. ನಮ್ಮವರು ಹಿರಿಯರಾದ್ದರಿಂದಲೋ ಏನೋ ಅವರನ್ನೂ ನನ್ನ ಜೊತೆಯಲ್ಲೇ ಬಿಟ್ಟರು. ಅದೇ ಮತ್ತೊಬ್ಬ ಯುವಕ ನಿಂತಾಗ ಅವನನ್ನು ಹಿಂದೆಯಿಂದ ಬರಲು ಹೇಳಿದರು. ಅಲ್ಲಿಂದ ಪಾಸ್‌ಪೋರ್ಟ್ ಮತ್ತು ಬೋರ್ಡಿಂಗ್ ಪಾಸ್ ನೋಡಿದ ನಂತರ ಮತ್ತೊಂದೆಡೆ ಬಂದು ಕುಳಿತೆವು. ಆ ಇಟಲಿಯ ಮಹಿಳೆ ನನ್ನ ಪಕ್ಕದಲ್ಲಿ ಬಂದು ಕುಳಿತಳು. ಅವಳು ರಿಯಾಧ್‌ನ ಆಸ್ಪತ್ರೆಯಲ್ಲಿ ನರ್ಸ್ ಕೆಲಸಕ್ಕಾಗಿ ಬಂದಿದ್ದಳು. ನೋಡಲು ಅಂದವಾಗಿಯೇ ಇದ್ದಳು. ನೀನೇಕೆ ರಿಯಾಧ್‌ನನ್ನು ಆರಿಸಿಕೊಂಡೆ ಎಂದು ಕೇಳಿದಾಗ ಅಲ್ಲಿ ಖರ್ಚೂ ಕಡಿಮೆ, ಎಲ್ಲಕ್ಕಿಂತ ಹಣ ಮುಖ್ಯವಲ್ಲವೇ ಎಂದಳು.
ನಾವು ಭಾರತೀಯರು ಎಲ್ಲಾದರೂ ಹೊಂದಿಕೊಳ್ಳುತ್ತೇವೆ. ಆದರೆ ಮುಕ್ತ ವಾತಾವರಣದಲ್ಲಿ ಬೆಳೆದ ಇವರೂ ರಿಯಾಧ್‌ಗೆ ಏಕೆ ಎನ್ನುವುದೇ ನನ್ನ ಪ್ರಶ್ನೆಯಾಗಿದ್ದಿತು. ಆ ನಿಯಮಗಳನ್ನು ಮರೆಯುವಷ್ಟು ಹೆಚ್ಚು ಹಣ ಅವಳಿಗೆ ದೊರಕುತ್ತದೆಯೇನೋ ಎಂದುಕೊಂಡೆ. ವಿಮಾನ ಹೊರಡಲು ಇನ್ನೂ 45 ನಿಮಿಷಗಳಿರುವಾಗಲೇ ಆ ಗೇಟನ್ನು ಬಂದ್ ಮಾಡಲಾಯಿತು.
ನಂತರ ವಿಮಾನದ ಒಳಗೆ ಪ್ರವೇಶ. ಅಲ್ಲಿಯ ಕ್ಯೂನಲ್ಲೂ ಹೆಂಗಸರು ಮಕ್ಕಳಿಗೆ ಮೊದಲ ಪ್ರವೇಶ. ಇನ್ನೇನು ವಿಮಾನದಲ್ಲಿ ಊಟ ನೀಡುವ ಸಮಯ. ಮೊದಲೇ ವೆಜ್ ಎಂದು ಹೇಳಿದ್ದರೂ. ಟಿಕೆಟ್ ಬುಕ್ ಮಾಡುವಾಗಲೇ ಅದರಲ್ಲೂ ತಿಳಿಸಿದ್ದರೂ ನಾನ್‌ವೆಜ್ ಊಟ ತಂದಿಟ್ಟಳು. ಅವಳಿಗೆ ಇದು ಬೇಡ ಎಂದಾಗ ತರುತ್ತೇನೆ ಎಂದವಳು ಬರಲೇ ಇಲ್ಲ. ನಾನು ಅವರು ನೀಡಿದ್ದ ಸಲಾಡ್, ಬನ್ನು ತಿಂದೆ. ಅದೇ ನನಗೆ ಸಾಕಾಯಿತು. ಕೊಟ್ಟದ್ದನ್ನು ತಿಂದು ಮುಗಿಸಿ ಅವರು ಅದನ್ನು ತೆಗೆಯುವ ಹೊತ್ತಿಗೆ ರಿಯಾಧ್‌ಬಂದೇಬಿಟ್ಟಿತು.
ಇಳಿದ ತಕ್ಷಣ ಮತ್ತೆ ಪಾಸ್‌ಪೋರ್ಟ್ ಮತ್ತು ಭರ್ತಿ ಮಾಡಲಾಗಿದ್ದ ಇಮಿಗ್ರೇಷನ್ ಅರ್ಜಿಯ ತಪಾಸಣೆ, ಎಲ್ಲ ಯಥಾ ಪ್ರಕಾರ ನಡೆದರೂ ಮೊದಲಿನಿಂದ ಮನದೊಳಗಿರುವ ಭಾವನೆಯೋ ಏನೋ ಒಂದು ರೀತಿಯ ಆತಂಕ. ಅಲ್ಲಿಯವರ ದನಿಯೇ ದೊಡ್ಡದು. ಅವರು ಸುಮ್ಮನೆ ಮಾತನಾಡಿದರೂ ಗದರುತ್ತಿದ್ದಾರೇನೋ ಎನ್ನುವಂತಿತ್ತು. ಅಲ್ಲಿನ ಕಥೆಗಳನ್ನು ಕೇಳಿದ್ದ ನಾನೂ ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡೇ ಇದ್ದೆ. ಅವರು ನನ್ನ ಹತ್ತಿರ ಬಂದು ಮಾತನಾಡಿದರೆ ಭಯವೇ ಆಯಿತು. ಅವರು ನಮ್ಮನ್ನೂ ಮತ್ತೊಂದು ಕ್ಯೂನಲ್ಲಿ ಮುಂದೆ ಹೋಗಲು ಹೇಳಿದ್ದು, ಅವರ ಭಾಷೆ ನಮಗೆ ತಾನೇ ಹೇಗೆ ಅರ್ಥವಾಗಬೇಕು? ಒಟ್ಟಾರೆ ಎಲ್ಲ ಮುಗಿದ ಮೇಲೆ ನಮ್ಮ ಲಗೇಜನ್ನು ಪಡೆದೆವು. ಯಾವುದೇ ತೊಂದರೆ ಮಾಡದೆ ನಮ್ಮನ್ನಂತೂ ಸುಮ್ಮನೆ ಕಳುಹಿಸಿದರು.
ರಿಯಾಧ್‌ನ ವಿಮಾನ ನಿಲ್ದಾಣ ನಮ್ಮನ್ನು ಬಿಟ್ಟಿದ್ದೇ ಸಾಕೆಂದು ಲಗೇಜಿನ ಟ್ರಾಲಿಯನ್ನು ತಳ್ಳಿಕೊಂಡು ನಾವು ಹೊರಗೆ ಬಂದೆವು. ಹೊರ ಬಂದು ಮಗಳ ಮುಖಕ್ಕಾಗಿ ತಡಕಾಡಿದೆವು, ಕಾಣಲಿಲ್ಲ. ಫೋನ್ ಮಾಡೋಣವೆಂದು ತಡಕಾಡುತ್ತಿದ್ದಾಗ ಅಳಿಯ ಬಂದು ನಮ್ಮನ್ನು ಸ್ವಾಗತಿಸಿದರು. ರಿಯಾದ್‌ನ ವಿಮಾನ ನಿಲ್ದಾಣ ವಿಶಾಲವಾಗಿದೆ. ನಾವು ವಿಮಾನದಿಂದಲೇ ಹೊಳೆಯುವ ದೀಪದ ಸಾಲುಗಳ ಸಾಮ್ರಾಜ್ಯವನ್ನು ನೋಡಿದ್ದೆವು. ಮರುಭೂಮಿಲ್ಲಿಯೇ ವಿಶಾಲವಾಗಿದೆ ಎಂದು ನನ್ನ ಭಾವನೆ. ಮರುಕ್ಷಣವೇ ಎಷ್ಟು ದೊಡ್ಡ ಊರಿದು ಎನ್ನುವ ಉದ್ಗಾರ ಸಹ. ಮಗಳು ಆ ಊರಿನ ಬಗ್ಗೆ ಹೇಳಿದ್ದರೂ ನನ್ನದೇ ಆದ ಕೆಲವು ಕಲ್ಪನೆಗಳು, ಕೇಳಿದ್ದು ಓದಿದ್ದು ಹೇಳಿದ್ದು ಬರಿಯ ಭಯವೇ ಹೆಚ್ಚಿತ್ತು. ಮರುಭೂಮಿಯ ವಿಮಾನ ನಿಲ್ದಾಣ ಹೊಕ್ಕೊಡನೆ ನೀರಿನ ಕಾರಂಜಿ. ಸುತ್ತಲೂ ಹಸಿರು, ವಿಶಾಲವಾದ ಪ್ರಾಂಗಣ, ಹವಾ ನಿಯಂತ್ರಿತ ತಂಪಾದ ವಾತಾವರಣ, ಬುದ್ಧಿವಂತ ಮತ್ತು ಹಣದ ಶಕ್ತಿಯಿಂದ ಮರುಭೂಮಿಯನ್ನು ನಂದನವನವನ್ನಾಗಿ ಮಾಡುವ ಜಾಣ್ಮೆ ಮನುಜನದು. ಮಗಳ ಮತ್ತು ಮೊಮ್ಮಕ್ಕಳ ಮುಖ ನೋಡಿದ್ದೇ ನಮ್ಮ ಮುಖ ಅರಳಿದ್ದೇ ಅಲ್ಲದೇ ಮನಕ್ಕೂ ನಿರಾಳವಾಯಿತು.
ಅಳಿಯನದು ಹೊಳೆಯುವ ದೊಡ್ಡ ಕಪ್ಪನೆಯ ಕಾರು, ಹೋಂಡಾ ಅಕಾರ್ಡ್. ವಿಮಾನದಿಂದಿಳಿದ ಮೇಲೆ ವಿಮಾನಕ್ಕಿಂತ ಸುಖಕರವಾದ ಪಯಣ. ಗಾಳಿಯಲ್ಲಿ ತೇಲಿದಂತಹ ಅನುಭವವಾಯಿತು. ಉದ್ದಕ್ಕೂ ದೀಪಗಳಿಂದ ಬೆಳಗುತ್ತಿದ್ದ ನಗರವನ್ನು ಕಂಡೆವು. ರಿಯಾಧ್‌ನ ರಸ್ತೆಗಳು ಅಗಲವಾಗಿದ್ದು ಆರು ಲೇನ್‌ಗಳನ್ನು ಒಳಗೊಂಡಿದ್ದವು. ರಸ್ತೆಯ ಇಕ್ಕೆಡೆಗಳಲ್ಲೂ ನಮ್ಮ ಬೆಂಗಳೂರಿನ ರಸ್ತೆಗಳನ್ನು ಮೀರಿಸುವಷ್ಟು ಹಸಿರು, ಉದ್ದನೆಯ ಪಾಮ್ ವೃಕ್ಷಗಳು, ಪಕ್ಕಕ್ಕೇ ಗುಂಡಾಗಿ ಹರಡಿಕೊಂಡ ಹಸಿರಿನ ಒತ್ತಾಗಿ ಎಲೆಗಳಿಂದ ತುಂಬಿದ ಗಿಡಗಳ ಎಲೆಗಳನ್ನು ಒಂದೇ ಸಮನೆ ಕತ್ತರಿಸಿ ಹಸಿರಿನ ಒಂದು ಕುಂಡವನ್ನಿರಿಸಿದಂತೆ ಕಾಣುವ ಸಾಲು ಗಿಡಗಳು.
ಎತ್ತರದ ಮಾರ್ಗಗಳನ್ನು ಒಳಗೊಂಡ ಉದ್ಯಾನವನಗಳು, ಜೂನ್ ತಿಂಗಳ ಮಟಮಟ ಮಧ್ನಾಹ್ನದಲ್ಲೂ ಮರಗಳ ನೆರಳಿನಲ್ಲಿ ಬೀಸುವ ತಂಗಾಳಿ. ಇದೇನು ಮರುಭೂಮಿಯೋ? ಮಲೆನಾಡೋ ಎನ್ನಿಸುವಷ್ಟು ಹಸಿರು ಎಲ್ಲೆಲ್ಲೂ. ಈ ಗಿಡಗಳಿಗೆ ನೀರನ್ನು ಎಲ್ಲಿಂದ ಉಣಿಸುತ್ತಾರೆ? ಪಕ್ಕದಲ್ಲಿ ಎಲ್ಲೂ ಸಮುದ್ರ ಇಲ್ಲ. ನಿಜಕ್ಕೂ ಸೋಜಿಗವೇ ಸರಿ. ನೋಡಲು ಆಕರ್ಷಕ, ಇದು ಮರುಭೂಮಿಯೇ ಎನ್ನುವಷ್ಟು ಅಚ್ಚರಿ! ವಿಶ್ವದ ಶ್ರೀಮಂತಿಕೆ ಎಲ್ಲಾ ಇಲ್ಲೇ ನೆಲೆಸಿದೆಯೇನೋ ಎನ್ನುವಷ್ಟು ಸುಂದರ. ಹೊರಗೆ ಬಿಸಿಯ ಗಾಳಿ ಇದ್ದರೂ ಕಾರಿನ ಒಳಗಡೆ ತಂಪು ನಗರವನ್ನೆಲ್ಲಾ ಪರಿಚಯ ಮಾಡಿಕೊಳ್ಳುತ್ತಾ ಮುಂದೆ ಸಾಗಿ ಮಗಳ ಮನೆಯಿದ್ದ ಅಕಾರಿಯಾ ಕಾಂಪೌಂಡ್ ತಲುಪಿದೆವು.
– ಮಂಜುಳಾ ರಾಜ್